Monday, May 20, 2024
Homeಸುದ್ದಿಉಪ್ಪಿನಂಗಡಿಯಲ್ಲಿ ಕುಂಬಳೆ ಸುಂದರ ರಾಯರಿಗೆ ನುಡಿ ನಮನ

ಉಪ್ಪಿನಂಗಡಿಯಲ್ಲಿ ಕುಂಬಳೆ ಸುಂದರ ರಾಯರಿಗೆ ನುಡಿ ನಮನ

ಮಲಯಾಳ ಮಾತೃಭಾಷೆಯಾಗಿದ್ದರೂ ಕನ್ನಡದಲ್ಲಿ ಅಪೂರ್ವ ವಾಗ್ಮಿಯಾಗಿ ಮಿಂಚಿದ ಕುಂಬಳೆ ಸುಂದರ ರಾಯರು ಆಟ ಮತ್ತು ತಾಳಮದ್ದಳೆಯಲ್ಲಿ ತನ್ನದೇ ಶೈಲಿಯ ಕಲಾವಿದನಾಗಿ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಿದ್ದಾರೆಂದು ಮಾಣಿ ಬಾಲವಿಕಾಸ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ರವೀಂದ್ರ ದರ್ಬೆ ತಿಳಿಸಿದರು. 

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿದ ಕುಂಬಳೆ ಸುಂದರ ರಾಯರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. 

ನಿವೃತ್ತ ಶಿಕ್ಷಕ ಕಲಾವಿದ ಗೋಪಾಲ್ ಶೆಟ್ಟಿ ಕಳೆಂಜ ನುಡಿ ನಮನ ಸಲ್ಲಿಸಿ, ಕುಂಬ್ಳೆ ಅವರು ತನ್ನ ಅಲ್ಪ ಶಾಲಾ ಶಿಕ್ಷಣದ ಹಿನ್ನೆಲೆಯಲ್ಲಿ ಯಕ್ಷಗಾನದ ಆಸಕ್ತಿಯಿಂದ ಅಧ್ಯಯನಶೀಲರಾಗಿ ದೈವದತ್ತವಾದ ಮಾತುಗಾರಿಕೆಯ ಶಕ್ತಿಯಿಂದ ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆಂದು  ತಿಳಿಸಿದರು. 

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಮಾತನಾಡಿ ತೆಂಕು ಮತ್ತು ಬಡಗಿನ ಸುಮಾರು 600 ಕ್ಕೂ ಹೆಚ್ಚು ಕಲಾವಿದರ ಮಾಹಿತಿಗಳನ್ನು ಒಳಗೊಂಡ ಯಕ್ಷೋಪಾಸಕರು ಎಂಬ ಎರಡು ಸಂಪುಟದ ಪ್ರಕಟಣೆ, ವಿದ್ಯಾರ್ಥಿ ಯಕ್ಷಗಾನ ಸಂಭ್ರಮ, ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಸಂಘಗಳಿಗೆ ನೆರವು ನೀಡುವ ಮೂಲಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಕಿಶೋರ್ ಮೂಡಾಯಿರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಪಾತಾಳ ಅಂಬಾ ಪ್ರಸಾದ್, ಸತೀಶ ಶಿರ್ಲಾಲು ,ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್  ಉಪ್ಪಿನಂಗಡಿ ಸ್ವಾಗತಿಸಿ ಉಪನ್ಯಾಸಕ ಗುಡ್ಡಪ್ಪ ಬಲ್ಯ ವಂದಿಸಿದರು. ಸಂಜೀವ ಪಾರೆಂಕಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments