Saturday, May 4, 2024
Homeಯಕ್ಷಗಾನಪುಣೆ ಯಕ್ಷವೃಕ್ಷದ ತಾಯಿಬೇರು - ಶ್ರೀ ಆನಂದ ಭಟ್ ಮದಂಗಲ್ಲು

ಪುಣೆ ಯಕ್ಷವೃಕ್ಷದ ತಾಯಿಬೇರು – ಶ್ರೀ ಆನಂದ ಭಟ್ ಮದಂಗಲ್ಲು

ಮೇಲ್ನೋಟಕ್ಕೆ ಯಕ್ಷಗಾನವು ಎಲ್ಲಾ ಕಲೆಗಳಂತೆ ಒಂದು ಕಲೆ. ಆದರೆ ಯಕ್ಷಗಾನ ಕಲಾವಿದನಿಗೆ ಮತ್ತು ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುವ ಒಬ್ಬ ಕಲಾಭಿಮಾನಿಗೆ ಅದು ಕೇವಲ ಕಲೆಯಾಗಿರುವುದಿಲ್ಲ. ಬದಲಾಗಿ ತಮ್ಮ ಸರ್ವಸ್ವವೂ ಯಕ್ಷಗಾನವೇ ಆಗಿರುತ್ತದೆ. ಯಕ್ಷಗಾನವಿಲ್ಲದೆ ತಾನಿಲ್ಲ ಎಂಬಷ್ಟು ಮಟ್ಟಕ್ಕೆ ಅದರ ಸೆಳೆತಕ್ಕೆ ಒಳಗಾದವರು ಅನೇಕರಿದ್ದಾರೆ. ಗ್ರಾಮ್ಯ ಭಾಷೆಯಲ್ಲಿ ‘ಆಟದ ಚಟ’ ಎಂದು ಹೇಳುವುದೂ ಇದೆ. ಅನೇಕ ವರ್ಷಗಳ ಕಾಲ ಮೇಳ ತಿರುಗಾಟ ಮಾಡಿ, ಕೊನೆಗೆ ಅನಾರೋಗ್ಯದಿಂದ ಹಾಸಿಗೆ ಹಿಡಿದು, ಇನ್ನು ಮುಂದೆ ವೇಷ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ವಿಷಯವನ್ನು ಅರಿತುಕೊಂಡು, ದುಃಖದಿಂದ ಕೊರಗಿ, ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆಯೂ ನಾವು ಕೇಳಿದ್ದೇವೆ. ಆರ್ಥಿಕವಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕಾಗಿ ಹೆಚ್ಚೇನೂ ಸಂಗ್ರಹಿಸದೆ ಇದ್ದರೂ, ಯಕ್ಷಗಾನ ಕಲಾಸೇವೆಯಲ್ಲಿ ಅದೇನೋ ರೀತಿಯ ಆತ್ಮಾನಂದವನ್ನು ಹೊಂದುವವರು ಬಹಳಷ್ಟು ಮಂದಿ ಇದ್ದಾರೆ.


ಇನ್ನು ಉದ್ಯೋಗದಿಂದಾಗಿ ಪರವೂರಿನಲ್ಲಿ ನೆಲೆಸಿರುವ ಯಕ್ಷಗಾನ ಕಲಾವಿದನೋ ಅಥವಾ ಕಲಾಸಕ್ತನೋ, ಆ ಊರಿನಲ್ಲಿಯೂ ಯಕ್ಷಗಾನ ಪ್ರದರ್ಶನಗಳು ಏರ್ಪಟ್ಟರೆ, ಎಂಥಹ ಬಿಡುವಿಲ್ಲದ ಸಂದರ್ಭದಲ್ಲಿಯೂ ಕಲಾಪ್ರದರ್ಶನದಲ್ಲಿ ಭಾಗಿಯಾಗುತ್ತಾನೆ. ಹಾಗೆಂದು ತಾವು ನೆಲೆಸಿರುವ ಯಾವುದೋ ರಾಜ್ಯದ ಅಥವಾ ಯಾವುದೋ ದೇಶದ ಒಂದು ಊರಿನಲ್ಲಿ ಯಕ್ಷಗಾನವನ್ನು ಬಿತ್ತಿ ಬೆಳೆಸುವವರು ಬಹಳ ಕಡಿಮೆ. ಯಾಕೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಆ ಊರಿನಲ್ಲಿ ಯಕ್ಷಗಾನದ ಕುರಿತಾದಂತಹ ಸಮಾನಮನಸ್ಕರನ್ನು ಒಟ್ಟುಗೂಡಿಸುವುದಕ್ಕೆ ಬಹಳ ಶ್ರಮವಹಿಸ ಬೇಕಾದ ಅಗತ್ಯವಿದೆ. ಅಂತಹ ಒಂದು ಸಾಧನೆಯನ್ನು ಮಾಡಿದವರಲ್ಲಿ ಒಬ್ಬರು ಶ್ರೀಯುತ ಮದಂಗಲ್ಲು ಆನಂದ ಭಟ್ಟರು.

ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮದಂಗಲ್ಲಿನವರಾದ ಶ್ರೀಯುತರು ಕಳೆದ ಮೂವತ್ತು ವರ್ಷಗಳಿಂದ ಉದ್ಯೋಗನಿಮಿತ್ತ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ನೆಲೆಸಿರುತ್ತಾರೆ. ತಂದೆ ಮದಂಗಲ್ಲು ದಿ| ಕೃಷ್ಣ ಭಟ್, ತಾಯಿ ದಿ| ಸಾವಿತ್ರಮ್ಮ. 1949ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೀಯಪದವಿನಲ್ಲಿ ನಂತರ ಪದವಿ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರೈಸಿದರು. ಖ್ಯಾತ ಯಕ್ಷಗಾನ ಕಲಾವಿದ ದಿ| ಕುರಿಯ ವಿಠಲ ಶಾಸ್ತ್ರಿಯವರು ಆನಂದ ಭಟ್ಟರಿಗೆ ಸೋದರಮಾವ. ಹೀಗಾಗಿ ಎಳವೆ ಯಿಂದಲೇ ಯಕ್ಷಗಾನದ ಆಸಕ್ತಿ ಭಟ್ಟರಲ್ಲಿ ಬೆಳೆದಿತ್ತು.

ಪುಂಡುವೇಷ, ರಾಜವೇಷ, ಬಣ್ಣದ ವೇಷ ಮುಂತಾದವುಗಳನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಉತ್ತಮ ಅರ್ಥಧಾರಿ ಯಾಗಿಯೂ ಪ್ರಸಿದ್ಧಿಯನ್ನು ಪಡೆದರು. ಅನೇಕರಿಗೆ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಉತ್ತಮ ಗುರುವಾಗಿಯೂ ಗುರುತಿಸಿಕೊಂಡವರು. 1980ರಲ್ಲಿ ತನ್ನ ಅಣ್ಣ ಸದಾಶಿವ ಭಟ್ಟರ ಸಲಹೆಯಂತೆ ಉದ್ಯೋಗ ನಿಮಿತ್ತ ಪುಣೆಗೆ ಆಗಮಿಸಿ, ಪುಣೆಯಲ್ಲಿಯೂ ಉದ್ಯೋಗದ ಜೊತೆಗೆ ಯಕ್ಷಗಾನವನ್ನೂ ಪಸರಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡರು. ಹೋಟೆಲು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಯಕ್ಷಗಾನ ಆಸಕ್ತರನ್ನು ಒಟ್ಟು ಸೇರಿಸಿ, ಅವರಿಗೆ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಪುಣೆಯಲ್ಲಿಯೂ ಉತ್ತಮ ಕಲಾವಿದ ಮತ್ತು ಗುರುವಾಗಿ ಅನೇಕ ಅಭಿಮಾನಿ ಹಾಗೂ ಶಿಷ್ಯವರ್ಗವನ್ನು ಸಂಪಾದಿಸಿದರು.


ಯಕ್ಷಗಾನಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳೇ ಇಲ್ಲದ ಪುಣೆಯಲ್ಲಿ ಮೊದಲಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ. ಆ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಗಳು ಸ್ಥಾಪನೆಗೊಂಡಿರುವುದು ಆನಂದ ಭಟ್ಟರ ಪರಿಶ್ರಮದ ಫಲ ಹಾಗೂ ಅವರ ಮೇಲೆ ಪುಣೆಯ ಯಕ್ಷಾಭಿಮಾನಿಗಳು ಇಟ್ಟಿರುವ ಅಭಿಮಾನದ ದ್ಯೋತಕ. ಕೇವಲ ಊರಿನ ಕಲಾವಿದರನ್ನು ಕರೆಸಿ ಯಕ್ಷಗಾನ ಪ್ರದರ್ಶನ ನಡೆಸುವುದಕ್ಕಿಂತ ಪುಣೆಯಲ್ಲಿಯೇ ಅನೇಕ ಕಲಾವಿದರನ್ನು ತಯಾರುಗೊಳಿಸಬೇಕೆಂಬ ಸದುದ್ದೇಶವನ್ನು ಹೊಂದಿ, ಈ ಕುರಿತಾಗಿ ಬಹಳ ಶ್ರಮವಹಿಸುತ್ತಿದ್ದಾರೆ. ಪುಣೆಯಲ್ಲಿ ಕೇವಲ ತುಳು-ಕನ್ನಡಿಗರಿಗೆ ಮಾತ್ರವಲ್ಲದೆ, ಅನ್ಯ ರಾಜ್ಯದ ಮಕ್ಕಳಿಗೆ ಹಾಗೂ ಮಹಿಳೆಯರಿಗೂ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಅವರಿಂದಲೂ ಗೌರವವನ್ನು ಪಡೆಯುತ್ತಿದ್ದಾರೆ. ಪುಣೆಯ ಅನೇಕ ಯಕ್ಷಗಾನಾಸಕ್ತ ದಾನಿಗಳ ಸಹಕಾರದಿಂದ ಯಕ್ಷಗಾನಕ್ಕೆ ಬೇಕಾದ ವೇಷಭೂಷಣವನ್ನು ತರಿಸಿ ಸ್ವತಃ ತಮ್ಮ ಮನೆಯ ಒಂದು ಮಹಡಿಯಲ್ಲಿ ಅದನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿ, ಪುಣೆಯಲ್ಲಿ ಯಕ್ಷಗಾನದ ಆರಾಧಕನೆನಿಸಿಕೊಂಡಿದ್ದಾರೆ.

ಶ್ರೀಯುತರ ಈ ಅನನ್ಯ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಗೌರವ ಸನ್ಮಾನಗಳನ್ನು ನೀಡಿವೆ. 70ರ ಇಳಿವಯಸ್ಸಿನಲ್ಲಿಯೂ ಯಕ್ಷಗಾನದ ಬಗ್ಗೆ ಇವರಲ್ಲಿರುವ ಅತೀವವಾದಂತಹ ತುಡಿತವನ್ನು ಕಂಡು, ಪುಣೆಯ ಖ್ಯಾತ ಕವಿ, ಸಾಹಿತಿಗಳಲ್ಲಿ ಓರ್ವರಾದ ಶ್ರೀ ಮಹೇಶ್ ಹೆಗ್ಡೆ ಪೊಳಲಿ ಇವರು ಆನಂದ ಭಟ್ಟರ ಕುರಿತಾಗಿ ‘ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್’ ಎಂಬ ಪುಸ್ತಕವನ್ನು ಬರೆದು ‘ಸಾಹಿತ್ಯ ಬಳಗ ಮುಂಬಯಿ’ ಇದರ ಪ್ರಧಾನ ಸಂಪಾದಕರಾದ ಎಚ್. ಬಿ. ಎಲ್. ರಾವ್ ಅವರ ಮೂಲಕ ಬಿಡುಗಡೆ ಮಾಡಿರುತ್ತಾರೆ. ಪುಣೆಯ ಯಕ್ಷಾಭಿಮಾನಿಗಳಿಗೆಲ್ಲರಿಗೂ ಇದು ಬಹಳ ಸಂತೋಷ ಹಾಗೂ ಹೆಮ್ಮೆಯ ವಿಚಾರ. ಬನ್ನಿ ಅವರ ಜೀವನಾನುಭವವನ್ನು ಅವರ ಮಾತುಗಳಲ್ಲೇ ಕೇಳೋಣ

  • ತಾವು ಯಕ್ಷಗಾನದ ಕುರಿತಾಗಿ ಆಸಕ್ತಿ ಹೊಂದುವುದಕ್ಕೆ ಕುರಿಯ ಮನೆತನದಲ್ಲಿ ಹುಟ್ಟಿದ್ದೇ ಕಾರಣವಾಯಿತೇ?
  • ಹೌದು ಖಂಡಿತ. ನಾವು ಎಳವೆಯಿಂದಲೇ ಯಕ್ಷಗಾನವನ್ನು ನೋಡಿ ಬೆಳೆದವರು. ನಮ್ಮ ಮನೆ, ಕುಟುಂಬ, ಊರು ಎಲ್ಲಾ ಕಡೆಗಳಲ್ಲಿ ಯಕ್ಷಗಾನದ ವಾತಾವರಣವಿತ್ತು. ಹಾಗೆಂದು ಮಾವ, ಕುರಿಯ ವಿಠಲ ಶಾಸ್ತ್ರಿಯವರು ನಮ್ಮನ್ನು ಕುಣಿಯುವುದಕ್ಕೆ ಬಿಡುತ್ತಿರಲಿಲ್ಲ. “ನಾನೊಬ್ಬ ಯಕ್ಷಗಾನದಲ್ಲಿ ಇದ್ದರೆ ಸಾಕು, ಇನ್ನು ನೀವೆಲ್ಲ ಅದರಲ್ಲಿ ನರಕ ಬರುವುದು ಬೇಡ’’ ಎಂದು ಗದರಿಸುತ್ತಿದ್ದರು. ಹಾಗಾಗಿ ನಾವು ಅವರಿಗೆ ತಿಳಿಯದ ಹಾಗೆ, ಅವರು ಬೇರೆಯವರಿಗೆ ಹೇಳಿಕೊಡುವುದನ್ನು ಕದ್ದುಮುಚ್ಚಿ ನೋಡಿ ನಮ್ಮಷ್ಟಕ್ಕೆ ಅಭ್ಯಾಸ ಮಾಡುತ್ತಿದ್ದೆವು. ನಾವು ಮಕ್ಕಳೇ ಎಲ್ಲಾ ಸೇರಿ ಪ್ರದರ್ಶನವೂ ಕೊಡುತ್ತಿದ್ದೆವು. ಹಾಗೆಂದು ನಾನು ಆಗ ಅಷ್ಟು ಚುರುಕು ಇರಲಿಲ್ಲ. ದೊಂದಿ, ಪರದೆ ಹಿಡಿಯುವ ಕೆಲಸ ಮಾಡುತ್ತಿದ್ದೆ. ಸೇರಾಜೆ ಸೀತಾರಾಂ ಭಟ್, ಕುರಿಯ ಗಣಪ, ನಾರಾಯಣ, ಬಾಯಾರು ಪ್ರಕಾಶ್ಚಂದ್ರ ಇವರೆಲ್ಲ ಸೇರಿ ನಮ್ಮದೊಂದು ತಂಡ ಇತ್ತು.
  • ಆಗಿನ ಕಾಲದ ಯಕ್ಷಗಾನ ಶಿಕ್ಷಣ, ಮೇಳ ತಿರುಗಾಟ ಮತ್ತು ಸ್ಥಿತಿಗತಿ ಹೇಗಿತ್ತು?
  • ನಾನು ಒಂದೆರಡು ವರ್ಷವಷ್ಟೆ ಬೇರೆ ಬೇರೆ ಮೇಳಗಳಲ್ಲಿ ತಿರುಗಾಟ ಮಾಡಿದ್ದೇನೆ. ಈಗಿನ ಹಾಗೆ ಮೇಳಕ್ಕೆ ಸ್ವಂತ ವಾಹನಗಳು ಇರಲಿಲ್ಲ. ಹತ್ತು-ಹದಿನೈದು ರೂಪಾಯಿ ಸಂಭಾವನೆ ದೊರೆಯುತ್ತಿತ್ತು. ಆಟ ನಡೆಯುವ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಸ್ಸಿಗೆ ಕಾದು ಅಥವಾ ಸಿಕ್ಕಿದ ವಾಹನಗಳಲ್ಲಿ ಹೋಗುತ್ತಿದ್ದೆವು. ಎಲ್ಲಾ ಕಡೆ ಸರಿಯಾದ ರಂಗಸ್ಥಳ ಅಥವಾ ಚೌಕಿ ಸಿಗುತ್ತಿರಲಿಲ್ಲ. ಹೆಚ್ಚಾಗಿ ಮರದ ನೆರಳಿನಲ್ಲಿ ಹಗಲು ಹೊತ್ತು ನಮ್ಮ ನಿದ್ರೆ. ರಜಾದಿನಗಳಲ್ಲಿ ಶಾಲೆಯ ಜಗಲಿ ಹತ್ತಿರ ಇದ್ದರೆ ಹುಡುಕಿಕೊಂಡು ಹೋಗುತ್ತಿದ್ದೆವು. ಮತ್ತೆ ಆ ಕಾಲದಲ್ಲಿ ಜನರಿಗೇನೂ ಯಕ್ಷಗಾನ ಕಲಾವಿದರ ಬಗ್ಗೆ ಅಷ್ಟೇನೂ ಗೌರವ ಇರಲಿಲ್ಲ. `ಏಸದಾಯೆ’ ಎಂದು ಕರೆಯುತ್ತಿದ್ದರು. ನಾನು ಒಂದು ರಾತ್ರಿಯ ಆಟದಲ್ಲಿ ಕನಿಷ್ಟ ಎರಡರಿಂದ-ಮೂರು ವೇಷ ಮಾಡುತ್ತಿದ್ದೆ. ಅಗರಿ ಭಾಗವತರು ಒಂದಿಷ್ಟೂ ಅಹಂ ಇಲ್ಲದೆ ಬೆಳೆಯುವ ಯುವ ಕಲಾವಿದರಿಗೆ ಚೆನ್ನಾಗಿ ಪ್ರೋತ್ಸಾಹಿಸುತ್ತಿದ್ದರು. ಹೀಗೆ ಆ ಕಾಲದ ತಿರುಗಾಟದಲ್ಲಿ ಅದೇನೋ ಆನಂದವಿತ್ತು.
  • ಪುಣೆಯಲ್ಲಿ ಯಕ್ಷಗಾನವನ್ನು ಬೆಳೆಸುವುದಕ್ಕೆ ನಿಮ್ಮ ವೃತ್ತಿಯ ಜೊತೆ ಹೇಗೆ ಸಾಧ್ಯವಾಯಿತು ಮತ್ತು ಆರಂಭದ ವಾತಾವರಣ ಹೇಗಿತ್ತು?
  • ಉದ್ಯೋಗ ನಿಮಿತ್ತ ನಾನು ಪುಣೆಗೆ ಬಂದಾಗ ನನಗಿಲ್ಲಿ ಯಾವುದೇ ಕಲಾವಿದರ ಪರಿಚಯವಿರಲಿಲ್ಲ. ಕನ್ನಡ ಸಂಘ ಪುಣೆಯವರು ಇಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಯಾವಾಗಾದರೂ ಒಮ್ಮೊಮ್ಮೆ ಊರಿನಿಂದ ಬಂದ ಕಲಾವಿದರ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಪ್ರೇಕ್ಷಕನಾಗಿ ಭಾಗವಹಿಸುತ್ತಿದ್ದೆ. ಆ ಸಂದರ್ಭದಲ್ಲಿ ಶ್ರೀಯುತ ಗುಂಡು ಶೆಟ್ಟಿ, ರಾಮಣ್ಣ ರೈ ಪುತ್ತೂರು ಮೊದಲಾದ ಹವ್ಯಾಸಿ ಯಕ್ಷಗಾನ ಕಲಾವಿದರ ಹಾಗೂ ಕಲಾಸಕ್ತರ ಪರಿಚಯವಾಯಿತು. ಪುಣೆಯ ಶ್ಯಾಮ ರಾವ್ ಕಲ್ಮಾಡಿಯವರು ಸಹ ಒಳ್ಳೆಯ ಪ್ರೋತ್ಸಾಹವನ್ನು ನೀಡಿದರು. ಆ ಬಳಿಕ ಪುಣೆಯ ವಿವಿಧ ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಊರಿನ ಹವ್ಯಾಸಿ ಕಲಾವಿದರ ಪರಿಚಯವಾಗಿ, ಅವರನ್ನೆಲ್ಲ ಒಟ್ಟು ಸೇರಿಸಿ, ನನ್ನ ನಿರ್ದೇಶನದಲ್ಲಿ ಕೆಲವು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದ್ದೆವು. ಅವರೆಲ್ಲ ಬಹಳ ಆಸಕ್ತಿಯಿಂದ ರಾತ್ರಿ 11 ಗಂಟೆಯ ನಂತರ ತಮ್ಮ ಕೆಲಸ ಮುಗಿಸಿ ನಾಟ್ಯ ತರಬೇತಿಗಾಗಿ ಒಟ್ಟಾಗುತ್ತಿದ್ದರು. ನಾನು ಕೂಡ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದುಕೊಂಡು ರಾತ್ರಿ ಹೊತ್ತು ಅವರಿಗಾಗಿ ಬಹಳ ದೂರ ಸೈಕಲ್ ತುಳಿಯುತ್ತಾ ತರಬೇತಿ ಕೊಡುವುದಕ್ಕಾಗಿ ಹೋಗುತ್ತಿದ್ದೆ. ಆಗ ನಡೆಯುತ್ತಿದ್ದ ಪ್ರತಿಯೊಂದು ಪ್ರದರ್ಶನಗಳು ಕೂಡ ಅತ್ಯಂತ ಯಶಸ್ವಿಯಾಗಿ ಜನಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಹೀಗಾಗಿ ಅನೇಕ ಕನ್ನಡ ಮತ್ತೆ ಮರಾಠಿ ಮಹಿಳೆಯರೂ ಕೂಡ ನಾಟ್ಯಾಭ್ಯಾಸಕ್ಕಾಗಿ ನನ್ನಲ್ಲಿಗೆ ಬರುತ್ತಿದ್ದರು. ಅದರಲ್ಲಿ ಹೆಚ್ಚಿನವರು ಉನ್ನತ ಹುದ್ದೆಯಲ್ಲಿದ್ದವರಾಗಿದ್ದರು. ಕನ್ನಡ ಬರದಿದ್ದರೂ, ಆಂಗ್ಲ ಭಾಷೆಯಲ್ಲಿ ಬರೆದು ಬಾಯಿಪಾಠ ಮಾಡಿ ಸಂಭಾಷಣೆಯನ್ನು ಮಾಡುತ್ತಿದ್ದರು. ಹೀಗಾಗಿ ಎಲ್ಲರಿಂದಲೂ ಉತ್ತಮ ಗೌರವವನ್ನು ಸಂಪಾದಿಸಿದ್ದೇನೆ ಎಂಬ ಹೆಮ್ಮೆ ಇದೆ. ಕನ್ನಡ ಸಂಘ ಪುಣೆ ಹಾಗೂ ಗುರುದೇವ ಬಳಗ, ಅದೇ ರೀತಿ ಪುಣೆಯ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ಇವರೂ ಕೂಡ ಯಕ್ಷಗಾನಕ್ಕಾಗಿ ಬಹಳ ಸಹಕಾರವನ್ನು ಕೊಟ್ಟಿದ್ದಾರೆ. ಆ ಬಳಿಕ ಹವ್ಯಾಸಿ ಕಲಾವಿದರಾದ ವಾಸು ಕುಲಾಲ್ ವಿಟ್ಲ, ಸುಖೇಶ್ ಶೆಟ್ಟಿ ಎಣ್ಣೆಹೊಳೆ ಮುಂತಾದವರು ನನ್ನೊಂದಿಗೆ ಸೇರಿ ಯಕ್ಷಗಾನ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವನ್ನು ಕೊಡುತ್ತಿದ್ದರು, ಈಗಲೂ ಕೊಡುತ್ತಿದ್ದಾರೆ. ಈ ನಡುವೆ ಅನೇಕ ಕಹಿ ಘಟನೆ, ನೋವು ಇತ್ಯಾದಿಗಳನ್ನು ಕೂಡ ಅನುಭವಿಸಿದ್ದೇನೆ.
  • ಈಗ ಪುಣೆಯಲ್ಲಿ ಯಕ್ಷಗಾನದ ಸ್ಥಿತಿಗತಿ ಹೇಗಿದೆ?
  • ಇಲ್ಲಿನ ಎಲ್ಲಾ ಕಲಾವಿದರು ಕಲಾಸೇವೆಗಾಗಿ ಬಹಳ ಆಸಕ್ತಿವಹಿಸಿ, ಯಾವುದೇ ಆರ್ಥಿಕ ಅಪೇಕ್ಷೆ ಇಲ್ಲದೆ ಶ್ರಮವಹಿಸುತ್ತಾರೆ. ಹಾಗೆಂದು ಅವರಿಗೆ ಸರಿಯಾದ ಪ್ರೋತ್ಸಾಹ ಜೊತೆಗೆ ಆರ್ಥಿಕ ಬೆಂಬಲವನ್ನು ಕೊಟ್ಟದ್ದೇ ಆದಲ್ಲಿ ಯಕ್ಷಗಾನವು ಪುಣೆಯಲ್ಲಿ ಬೆಳೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರತಿ ಕಾರ್ಯಕ್ರಮಕ್ಕೂ ಪದೇ ಪದೇ ಒಬ್ಬ ವ್ಯಕ್ತಿಯ ಬಳಿ ಹೋಗಿ ಧನಸಹಾಯ ಕೇಳುವುದು ಅಷ್ಟು ಸರಿಯಲ್ಲ. ಆ ನಿಟ್ಟಿನಲ್ಲಿ ಇಲ್ಲಿನ ಉದ್ಯಮಿ ಶ್ರೀಯುತ ಜಗನ್ನಾಥ ಶೆಟ್ಟಿಯವರು ಉತ್ತಮ ರೀತಿಯ ಸಹಕಾರವನ್ನು ಕೊಡುತ್ತಿದ್ದಾರೆ. ಸರ್ಕಾರದ ಇಲಾಖೆಗಳನ್ನು ಸಂಪರ್ಕಿಸಿ, ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ.
  • ಯಕ್ಷಗಾನದ ನಿಮ್ಮ ಪ್ರವೃತ್ತಿಗೆ ನಿಮ್ಮ ಮನೆ ಯವರ ಸಹಕಾರ ಹೇಗಿದೆ?
  • ನನ್ನ ಶ್ರೀಮತಿ ಹೇಮಾ ನನಗೆ ನೆರಳಿನ ಹಾಗೆ ಇದ್ದಾಳೆ. ಯಕ್ಷಗಾನಕ್ಕೆ ಒಳ್ಳೆಯ ಪ್ರೋತ್ಸಾಹ ಹಾಗೂ ಸಹಕಾರವನ್ನು ಕೊಡುತ್ತಿದ್ದಾಳೆ. ಎಲ್ಲಿಯವರೆಗೆ ಅಂದರೆ ನನ್ನ ಮನೆಯಲ್ಲಿರುವ ಯಕ್ಷಗಾನದ ಎಲ್ಲಾ ವೇಷಭೂಷಣಗಳನ್ನು ಪ್ರತಿ ಕಾರ್ಯಕ್ರಮ ಮುಗಿದ ನಂತರ ಚೆನ್ನಾಗಿ ಒಣಗಿಸಿ, ಬೇಕಾದ ಹಾಗೆ ವ್ಯವಸ್ಥೆಗೊಳಿಸುವಲ್ಲೂ ಉತ್ತಮ ಮುತುವರ್ಜಿ ವಹಿಸುತ್ತಿದ್ದಾರೆ. ಬಿ.ಎಸ್ಸಿ. ಪದವೀಧರೆ, ಶ್ರೀಮಂತ ಮತೆನತನದಿಂದ ಬಂದವಳು, ಕವಯತ್ರಿಯೂ ಹೌದು. ನನ್ನೆಲ್ಲಾ ಆಗುಹೋಗುಗಳಿಗೆ ಅವಳೇ ಬೆನ್ನೆಲುಬು.
  • ಇದು ತನಕದ ಬದುಕು ಹಾಗೂ ಕಲಾಬದುಕು ನಿಮಗೆ ತೃಪ್ತಿ ತಂದಿದೆಯೇ?
  • ಬದುಕಿನಲ್ಲಿ ನನಗೆ ತುಂಬಾ ತೃಪ್ತಿ ಇದೆ. ಉದ್ಯೋಗಕ್ಕಾಗಿ ಪುಣೆಗೆ ಬಂದ ನಾನು ಆರ್ಥಿಕವಾಗಿ ಹೆಚ್ಚೇನೂ ಅಲ್ಲದಿದ್ದರೂ, ತಕ್ಕಮಟ್ಟಿಗೆ ಸಂಪಾದಿಸಿ, ಯಾರದ್ದೇ ಹಂಗಿಲ್ಲದೆ ತೃಪ್ತಿ ಹಾಗೂ ಸುಖಕರವಾದ ಜೀವನವನ್ನು ಅನುಭವಿಸುತ್ತಿದ್ದೇನೆ. ಪ್ರವೃತ್ತಿಯ ಮೂಲಕ ಅನೇಕ ಮಂದಿಗಳ ಪ್ರೀತಿ, ಸ್ನೇಹ, ಗೌರವವನ್ನು ಸಂಪಾದಿಸಿದ್ದೇನೆ. ಹುಟ್ಟೂರು, ಪುಣೆ ಹೀಗೆ ಎಲ್ಲಾ ಕಡೆಗಳಲ್ಲಿ ನನ್ನನ್ನು ಯಕ್ಷಗಾನ ಕಲಾವಿದನೆಂದೇ ಗುರುತಿಸುವಾಗ ಸಂತೋಷವಾಗುತ್ತದೆ. ನನ್ನ ಮೇಲೆ ಅಭಿಮಾನವಿಟ್ಟೇ ಮುಂಬೈಯ ಎಚ್.ಬಿ.ಎಲ್. ರಾವ್ ಅವರು ಪೊಳಲಿ ಮಹೇಶ್ ಹೆಗಡೆಯವರ ಮೂಲಕ ನನ್ನ ಕುರಿತಾದ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದಾರೆ.

  • ಯಕ್ಷಗಾನದ ಮುಂದಿನ ಪೀಳಿಗೆಗೆ ನಿಮ್ಮ ಮಾತು…?
  • ಯಕ್ಷಗಾನ ಉಳಿಯಬೇಕು, ಬೆಳೆಯಬೇಕು, ಪರವೂರಿನಲ್ಲಿಯೂ ಬೆಳೆಯಬೇಕು. ಕಲಾವಿದರೂ ಬೆಳೆಯಬೇಕು. ನಿಮ್ಮಂಥ ಯುವ ಕಲಾವಿದರು ಈ ಕುರಿತಾಗಿ ಶ್ರಮಿಸಬೇಕು. ಯಕ್ಷಗಾನದ ಮೂಲ ಸೊಗಡಿಗೆ ತೊಂದರೆ ಬರದ ರೀತಿಯಲ್ಲಿ ಬೆಳೆಸಬೇಕು. ಕಲಾವಿದರು ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಇದ್ದು, ಒಬ್ಬರಿಗೊಬ್ಬರು ಸಹಕರಿಸಬೇಕು. ರಂಗಸ್ಥಳದಲ್ಲಿ ಹಿತಮಿತವಾಗಿ ಪಾತ್ರಾಪಾತ್ರದ ವಿವೇಚನೆಯನ್ನು ಅರಿತು ಶಿಸ್ತಿನಿಂದ ಕೆಲಸ ಮಾಡಬೇಕು.
ಲೇಖಕ: ವಿಕೇಶ್ ರೈ ಶೇಣಿ, ಪುಣೆ



RELATED ARTICLES

1 COMMENT

  1. ಮದಂಗಲ್ಲು‌ ಆನಂದ ಭಟ್ಟ ರು ನನ್ನ ಹೈಸ್ಕೂಲು ಸಹಪಾಠಿ.‌ನಾನು ಪೂಣೆಗೆ ‌‌‌ಹೋದಿಗ ದೂರ ವಾಣಿ ಯಲ್ಲಿ ಅವರೊಡನೆ ಮಾತನಾಡಿದ್ದೆ.
    ಅವರು ಮಗನ ಮದುವೆ ಯಲ್ಲಿ‌ ಮಾತನಾಡಿ ದ್ದೆ
    ಒಳ್ಳೆಯ ಮನುಷ್ಯ.
    ಯಕ್ಷಗಾನ ಕಲಾವಿದ, ‌‌‌‌‌‌ಪ್ರೇಮಿಯೂ.
    ಗೋಪಾಲ ಶಾಸ್ತ್ರಿ ಬಾಳ್ತಿಲ ಗ್ರಾಮ
    ಬಂಟ್ವಾಳ ತಾಲೂಕು

LEAVE A REPLY

Please enter your comment!
Please enter your name here

Most Popular

Recent Comments