Saturday, May 4, 2024
Homeಪುಸ್ತಕ ಮಳಿಗೆಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ - ಡಾ. ಪಟ್ಟಾಜೆ ಗಣೇಶ ಭಟ್ 

ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ – ಡಾ. ಪಟ್ಟಾಜೆ ಗಣೇಶ ಭಟ್ 

ಶ್ರೀ ಡಾ. ಪಟ್ಟಾಜೆ ಗಣೇಶ ಭಟ್ಟರು ವೃತ್ತಿಯಿಂದ ವೈದ್ಯರು ಮತ್ತು ಕೃಷಿಕರು. ಎಳವೆಯಿಂದಲೇ ಎಲ್ಲಾ ಮೇಳಗಳ ಪ್ರದರ್ಶನಗಳನ್ನು ನೋಡಿಯೇ ಆಸಕ್ತರಾಗಿದ್ದರು. ಬಳಿಕ ಹವ್ಯಾಸಿ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಹಾಗೆ ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡು ಪ್ರಸಂಗ ರಚನಾ ಕಾಯಕದಲ್ಲಿಯೂ ತೊಡಗಿದ್ದರು. ಪ್ರಸಂಗ ಮತ್ತು ಪದ್ಯ ರಚನೆ ಮಾಡುವುದೂ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸದು.  ಡಾ. ಪಟ್ಟಾಜೆ ಗಣೇಶ ಭಟ್ಟರು ಈ ಕಲೆಯನ್ನು ಕರಗತ ಮಾಡಿಕೊಂಡು ಒಟ್ಟು ಹನ್ನೆರಡು ಪ್ರಸಂಗಗಳನ್ನು ರಚಿಸಿದ್ದರು. ಈ ಹನ್ನೆರಡು ಪ್ರಸಂಗಗಳನ್ನು ಒಳಗೊಂಡ ಸಂಪುಟವೇ ‘ ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ’ ಎಂಬ ಪುಸ್ತಕ. ಇದು ಒಟ್ಟು ಮುನ್ನೂರ ಎಪ್ಪತ್ತೆರಡು ಪುಟಗಳ ಪುಸ್ತಕ. ಪುತ್ತೂರು ತಾಲೂಕಿನ ಕಾವು ಸಮೀಪದ ಬರೆಕೆರೆ ನಾರಾಯಣೀಯಂನ ಕಲಾರಾಧನ ಪ್ರತಿಷ್ಠಾನವು ಈ ಪುಸ್ತಕವನ್ನು ಪ್ರಕಾಶಿಸಿ ಪ್ರಕಟಿಸಿದೆ. ೨೦೧೯ ನೇ ಇಸವಿಯ ಜನವರಿ ತಿಂಗಳಿನಲ್ಲಿ ಈ ಪುಸ್ತಕವು ಓದುಗರ ಕೈ ಸೇರಿತ್ತು. ಡಾ. ಪಟ್ಟಾಜೆ ಗಣೇಶ ಭಟ್ಟರ ಮನೆಯಲ್ಲಿ ಸೇವಾ ರೂಪವಾದ ಕಟೀಲು ಮೇಳದ ಪ್ರದರ್ಶನದ ಸಂದರ್ಭ ಈ ಪ್ರಸಂಗ ಮಾಲಿಕೆಯು ಬಿಡುಗಡೆಗೊಂಡಿತ್ತು. ಮುನ್ನುಡಿಯನ್ನು ಬರೆದವರು ಜನಪ್ರಿಯ ವೈದ್ಯ, ಲೇಖಕ, ತಾಳಮದ್ದಳೆ ಅರ್ಥಧಾರಿಗಳಾದ ಡಾ. ರಮಾನಂದ ಬನಾರಿಯವರು . ಲೇಖಕನ ನೆಲೆಯಲ್ಲಿ ವೈದ್ಯ ಪಟ್ಟಾಜೆ ಗಣೇಶ ಭಟ್ಟರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದು ಈ ಪ್ರಸಂಗ ಮಾಲಿಕಾ ಪುಸ್ತಕವನ್ನು ದಿ। ಕೆರೆಕ್ಕೋಡಿ ಗಣಪತಿ ಭಟ್ಟರಿಗೆ ಗೌರವಪೂರ್ವಕ ಅರ್ಪಿಸಿದ್ದಾರೆ.

ಈ ಪುಸ್ತಕದಲ್ಲಿ ಗಂಧರ್ವ ಕನ್ಯೆ, ಪಾಂಚಜನ್ಯ, ನೈಮಿಷಾರಣ್ಯ, ಜರಾಸಂಧ ಗರ್ವಭಂಗ,ಶತ್ರುದಮನ, ಪಾರ್ವತೀ ಪ್ರತಿಜ್ಞೆ, ಕಾವು ಕ್ಷೇತ್ರ ಮಹಾತ್ಮೆ, ನಾಗಮಣಿ ಮಾಣಿಕ್ಯ, ಹಂಸಡಿಬಿಕೋಪಾಖ್ಯಾನ, ಉದಯ ಚಂದ್ರಿಕೆ, ವರಸಿದ್ಧಿ, ಶಲ್ಯಾಗಮನ ಎಂಬ ಪ್ರಸಂಗಗಳಿವೆ. ಪ್ರದರ್ಶನ ಯೋಗ್ಯವಾದ ಪ್ರಸಂಗಗಳು. ಗಂಧರ್ವಕನ್ಯೆ, ಪಾಂಚಜನ್ಯ ಮತ್ತು ಶತ್ರುದಮನ ಎಂಬ ಪ್ರಸಂಗಗಳು ಶ್ರೀ ಕಟೀಲು ಮೇಳದಲ್ಲಿ ಪ್ರದರ್ಶನಗೊಂಡಿವೆ. ಕಾವು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಶ್ರೀ ಕುಂಟಾರು ಮೇಳದವರು ಪ್ರದರ್ಶಿಸಿದ್ದರು. ಗಂಧರ್ವ ಕನ್ಯೆ ಮತ್ತು ಪಾಂಚಜನ್ಯ ಪ್ರಸಂಗಗಳನ್ನು ಖ್ಯಾತ ಭಾಗವತರಾಗಿದ್ದ ದಾಸರಬೈಲು ಚನಿಯ ನಾಯ್ಕರು ಮೊತ್ತ ಮೊದಲು ಯಶಸ್ವಿಯಾಗಿ ಆಡಿಸಿದ್ದರು. ಈ ಪುಸ್ತಕದಲ್ಲಿರುವ ಎಲ್ಲಾ ಪ್ರಸಂಗಗಳೂ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಆಶಿಸುತ್ತೇನೆ. 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments