Saturday, May 4, 2024
Homeಪುಸ್ತಕ ಮಳಿಗೆಯಕ್ಷಗಾನ ರಂಗಭಾಷೆ - ಚಂದ್ರಶೇಖರ ದಾಮ್ಲೆ (Dr. Chandrashekhara Damle)

ಯಕ್ಷಗಾನ ರಂಗಭಾಷೆ – ಚಂದ್ರಶೇಖರ ದಾಮ್ಲೆ (Dr. Chandrashekhara Damle)

‘ಯಕ್ಷಗಾನ ರಂಗಭಾಷೆ’  ಎಂಬ ಈ ಪುಸ್ತಕವು 2013ರಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಪ್ರಕಾಶಕರು ಸ್ನೇಹ ಪ್ರಕಾಶನ, ಸುಳ್ಯ. ಈ ಕೃತಿಯ ಲೇಖಕರು ಚಂದ್ರಶೇಖರ ದಾಮ್ಲೆ ಅವರು. ಡಾ. ಚಂದ್ರಶೇಖರ ದಾಮ್ಲೆಯವರು ಪ್ರಾಧ್ಯಾಪಕರಾಗಿ, ಸಂಘಟಕರಾಗಿ, ಕಲಾವಿದರಾಗಿ, ಉತ್ತಮ ಬರಹಗಾರರಾಗಿ ಎಲ್ಲರಿಗೂ ಪರಿಚಿತರು. ಸುಳ್ಯ ಸ್ನೇಹ ಶಾಲೆಯ ಆರಂಭಕ್ಕೆ ಕಾರಣರೂ ಆಗಿದ್ದರು. ಶ್ರೀಯುತರಿಗಿರುವ ಯಕ್ಷಗಾನಾಸಕ್ತಿ, ಸಂಘಟನಾಸಕ್ತಿ, ಸಾಹಿತ್ಯಾಸಕ್ತಿ ಅಭಿನಂದನೀಯವಾದುದು. ಲೇಖಕರಾಗಿ ಡಾ. ಚಂದ್ರಶೇಖರ ದಾಮ್ಲೆಯವರು  ಸಾಂಧರ್ಭಿಕವಾಗಿ ಬರೆದಿರುವ ಲೇಖನಗಳನ್ನು ಪುಸ್ತಕ ರೂಪದಲ್ಲಿ ನೀಡಲಾಗಿದೆ. ಈ ಲೇಖನಗಳೆಲ್ಲಾ ದಿನಪತ್ರಿಕೆಗಳಲ್ಲೂ ಪ್ರಕಟವಾಗಿತ್ತೆಂಬುದನ್ನು ಡಾ. ದಾಮ್ಲೆಯವರು ತಿಳಿಸಿರುತ್ತಾರೆ. ಸುಳ್ಯದಲ್ಲಿ ಮಕ್ಕಳ ಮೇಳವನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಜತೆಗೆ ಕಲಾಸಕ್ತಿಯೂ ಬೆಳೆಯಲು ಕಾರಣರಾದರು. ಅಲ್ಲದೆ ಅನೇಕ ಪ್ರದರ್ಶನಗಳನ್ನೂ ಯಕ್ಷಗಾನ ಕಮ್ಮಟ, ವಿಚಾರಗೋಷ್ಠಿ, ಶಿಬಿರಗಳನ್ನೂ ನಡೆಸುತ್ತಾ ಬಂದಿರುತ್ತಾರೆ. ಇವರ ಯಕ್ಷ ಪ್ರಯೋಗಗಳ ಯಶಸ್ಸಿಗೆ ಮಕ್ಕಳಾದ ಶ್ರೀ ಸಮೀರ್ ದಾಮ್ಲೆ ಮತ್ತು ಅಕ್ಷರ ದಾಮ್ಲೆ ಅವರ ಸಹಕಾರವೂ ಇದೆ. ಉಭಯ ಮಕ್ಕಳೂ ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡೇ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರ.

ಯಕ್ಷಗಾನ ರಂಗಭಾಷೆ ಎಂಬ ಪುಸ್ತಕದಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರು ಬರೆದ ಯಕ್ಷಗಾನದ ರಂಗಭಾಷೆ, ಮಣ್ಣಿನ ಕಲೆ ಯಕ್ಷಗಾನ, ತುಳುನಾಡಿನ ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಯಕ್ಷಗಾನ, ಯಕ್ಷಗಾನಕ್ಕೊಂದು ಕಾಯಕಲ್ಪ, ತಾಳಮದ್ದಳೆ – ಚಿಂತನ ಕುಲುಮೆ, ಬದಲಾಗುತ್ತಿರುವ ಸಮಾಜದಲ್ಲಿ ಯಕ್ಷಗಾನ ಕಲೆ, ಯಕ್ಷಗಾನ ಪೋಷಣೆ: ಸಂರಕ್ಷಣೆ, ವಿದ್ಯಾರ್ಥಿಗಳಲ್ಲಿ ಕಲಾಪ್ರಜ್ಞೆ, ಆಡಲಾಗುತ್ತಿರುವ ಮೌಲ್ಯ, ಯಕ್ಷಗಾನದಲ್ಲಿ ಮೌಲ್ಯ ಪರಿವರ್ತನೆ, ಯಕ್ಷಗಾನಕ್ಕೆ ನಿರ್ದೇಶನ ಬೇಕೇ?, ಅರ್ಥಗಾರಿಕೆ ಶೇಣಿ ಚಿಂತನ ಎಂಬ ಹನ್ನೆರಡು ಲೇಖನಗಳಿವೆ. ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನಿಂದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಸುಳ್ಯ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯು ಶ್ರೀ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ಏರ್ಪಡಿಸಿದ ಮಹಾಭಾರತದ ಹದಿನೆಂಟು ಪ್ರಸಂಗಗಳ ಪ್ರದರ್ಶನದ ಸಂದರ್ಭದಲ್ಲಿ ಯಕ್ಷಗಾನ ರಂಗಭಾಷೆ ಎಂಬ ಈ ಪುಸ್ತಕವನ್ನು ಕಲಾಪ್ರೇಮಿಗಳಿಗೆ ಅರ್ಪಿಸಲಾಗಿತ್ತು. ಮುನ್ನುಡಿಯನ್ನು ಬರೆದವರು ವಿಶ್ರಾಂತ ಕುಲಪತಿಗಳಾದ ಪ್ರೊ| ಬಿ. ಎ. ವಿವೇಕ ರೈ ಅವರು. ಕೃತಿಕಾರನ ಅರಿಕೆ ಎಂಬ ಲೇಖನದಲ್ಲಿ ಶ್ರೀ ಚಂದ್ರಶೇಖರ ದಾಮ್ಲೆಯವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸೂಚಿಸಿದ್ದಾರೆ. ಪುಸ್ತಕದ ಹೊರ ಆವರಣದಲ್ಲಿ ಪ್ರೊ. ಬಿ. ಎ. ವಿವೇಕ ರೈ ಅವರ ಮುನ್ನುಡಿ ಲೇಖನದಲ್ಲಿರುವ ವಿಚಾರಗಳನ್ನು ನೀಡಲಾಗಿದೆ. 

ಕೃತಿ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

1 COMMENT

  1. ನನ್ನ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಹಾರ್ದಿಕ ಕೃತಜ್ಞತೆಗಳು. ರಂಗಭಾಷೆಯು ಕಲಾವಿದರ ಮತ್ತು ಪ್ರೇಕ್ಷಕರ ನಡುವೆ ನಡೆಯುವ ಕಲಾತ್ಮಕ ಸಂವಾದ. ಇದು ಚೆನ್ನಾಗಿ ನಡೆದಷ್ಟು ಪ್ರದರ್ಶನ ಹಿತವೆನ್ನಿಸುತ್ತದೆ.

LEAVE A REPLY

Please enter your comment!
Please enter your name here

Most Popular

Recent Comments