Saturday, May 4, 2024
HomeUncategorizedಹಿರಿಯ ಅನುಭವೀ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್

ಹಿರಿಯ ಅನುಭವೀ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್

ಖ್ಯಾತ ಕಲಾವಿದ, ತಾಳಮದ್ದಳೆ ಅರ್ಥಧಾರಿ ಮಲ್ಪೆ ದಿ। ವಾಸುದೇವ ಸಾಮಗರು ಆಡಿದ ಮಾತುಗಳು ನೆನಪಾಗುತ್ತದೆ- “ಯಕ್ಷಗಾನದಲ್ಲಿ ಕಲಾವಿದರು ಕೌಟುಂಬಿಕ ನ್ಯಾಯೇಣ ತಂಡವಾಗಿ ಶ್ರಮಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ.’’ ಹಿಂದಿನ ಕಾಲದಿಂದ ನಡೆದು ಬಂದ ರೀತಿಯನ್ನೇ ಅವರು ಉಲ್ಲೇಖಿಸಿದ್ದರು. ಹಿರಿಯ ಕಿರಿಯ ಕಲಾವಿದರೆಲ್ಲಾ ಒಂದೇ ಮನೆಯ ಸದಸ್ಯರಂತೆ ಹೊಂದಾಣಿಕೆಯಿಂದ ಬೆರೆತು ರಂಗದಲ್ಲಿ ಅಭಿನಯಿಸಿದಾಗ ಪರಿಣಾಮವನ್ನು ಪ್ರೇಕ್ಷಕರು ಅನುಭವಿಸುತ್ತಾರೆ. ನಿಜವಾದ ಯಕ್ಷಗಾನ ವೈಭವವನ್ನು ಅವರು ನೋಡಿ ಸಂತೋಷಪಡುತ್ತಾರೆ.

ಕಿರಿಯ ಅಭ್ಯಾಸಿಗಳಿಗೆ ಹಿರಿಯ ಅನುಭವೀ ಕಲಾವಿದರ ಮಾರ್ಗದರ್ಶನ ಅತ್ಯಗತ್ಯ. ಕಿರಿಯರು ಅವರನ್ನು ಗೌರವಿಸಿ ಅವರ ಅನುಭವಗಳನ್ನು ಪಡೆದುಕೊಳ್ಳಬೇಕು. ಹಿರಿಯರು ಕಿರಿಯರನ್ನು ವಂಚಿಸದೆ ತಾವು ಆರ್ಜಿಸಿದ ವಿದ್ಯೆಯನ್ನು ಅವರಿಗೆ ಧಾರೆಯೆರೆಯಬೇಕು. ಈ ಕ್ರಿಯೆಯು ನಿರಂತರವಾಗಿದ್ದಾಗ ಗೆಲ್ಲುವುದು ಯಕ್ಷಗಾನವೆಂಬ ಶ್ರೇಷ್ಠ ಕಲೆ. ಹಿಂದೆ ಹಿರಿಯ ಕಲಾವಿದರನೇಕರು ಇದೇ ತೆರನಾಗಿ ವ್ಯವಹರಿಸಿದ್ದಾರೆ. ಪ್ರಸಂಗಜ್ಞಾನ, ಪುರಾಣಜ್ಞಾನ, ರಂಗನಡೆ, ಪಾತ್ರದ ಸ್ವಭಾವ, ಸಂಭಾಷಣಾ ಕುಶಲತೆಗಳನ್ನು ತಿಳಿದು, ಸಂಪನ್ಮೂಲ ವ್ಯಕ್ತಿಗಳಾಗಿ ಕಿರಿಯರಿಗೆ ಮಾರ್ಗದರ್ಶನ ನೀಡಬಲ್ಲ ಅನುಭವಿಗಳು  ಅನೇಕರು ನಮ್ಮ ಜತೆಗಿದ್ದಾರೆ. ಹಿರಿಯ ಅನುಭವೀ ಕಲಾವಿದರಾದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಈ ಸಾಲಿಗೆ ಸೇರುತ್ತಾರೆ. ಪ್ರಸ್ತುತ ನಾಲ್ಕೈದು ವರ್ಷಗಳಿಂದ ಮೇಳದ ತಿರುಗಾಟದಿಂದ ನಿವೃತ್ತರಾದರೂ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.


ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಾಡೂರು ಗ್ರಾಮದ ಪೂಕಳ ಎಂಬಲ್ಲಿ ಶ್ರೀ ಕೃಷ್ಣ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರು ಪದವೀಧರರು. 7ನೇ ತರಗತಿ ವರೇಗೆ ಧರ್ಮತ್ತಡ್ಕ ಶಾಲೆಯಲ್ಲೂ, ಎಸ್.ಎಸ್.ಎಲ್.ಸಿ. ವರೇಗೆ ಮಂಗಲ್ಪಾಡಿ ಸರಕಾರೀ ಶಾಲೆಯಲ್ಲೂ, ಪಿ.ಯು.ಸಿ. ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಓದಿದ್ದರು. ಮಂಗಳೂರು ಸರಕಾರೀ ಕಾಲೇಜಿನಲ್ಲಿ ಪದವಿ (ಬಿ.ಕಾಂ.) ಶಿಕ್ಷಣವನ್ನು ಪೂರೈಸಿದ್ದರು.

ಇವರಿಗೆ ಯಕ್ಷಗಾನವು ಹಿರಿಯರಿಂದ ಬಂದ ಬಳುವಳಿ. ಅಜ್ಜ ಪೂಕಳ ವೆಂಕಟರಮಣ ಭಟ್ಟರು ಒಳ್ಳೆಯ ಅರ್ಥಧಾರಿಯಾಗಿದ್ದರು. ದೊಡ್ಡಪ್ಪ ವೆಂಕಟ್ರಮಣ ಭಟ್ಟರೂ (ಪೂಕಳ ಮಗು ಭಟ್ರು) ಕಲಾವಿದರಾಗಿದ್ದರು. ತಂದೆ ಪೂಕಳ ಕೃಷ್ಣ ಭಟ್ಟರು ಕಲಾವಿದರಲ್ಲದಿದ್ದರೂ, ಕಲಾಭಿಮಾನಿಯಾಗಿ ಅತ್ಯುತ್ತಮ ವಿಮರ್ಶಕರಾಗಿದ್ದರು. ದೊಡ್ಡಪ್ಪ ಪೂಕಳ ಮಗು ಭಟ್ಟರಿಗೆ 30 ಪ್ರಸಂಗಗಳ ಪದ್ಯಗಳು ಕಂಠಸ್ಥವಾಗಿತ್ತಂತೆ. ಇದಕ್ಕೆ ಕಾರಣವನ್ನೂ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಹೇಳುತ್ತಾರೆ- “ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಪ್ರಸಂಗಗಳ ಪದ್ಯಗಳು ಕಂಠಸ್ಥವಾಗಲು ಹಿಂದಿನ ಕಾಲದ ಭಾಗವತರುಗಳೇ ಕಾರಣರು. ಅವರ ಹಾಡಿನ ಶೈಲಿಯೇ ಕಾರಣ. ಆಲಾಪನೆ ದೀರ್ಘವಿಲ್ಲದೆ ಭಾವನಾತ್ಮಕವಾಗಿ ಹಾಡಿ ಫಕ್ಕನೆ ಮುಗಿಸುತ್ತಿದ್ದರು. ಹಾಗಾಗಿ ಹಾಡುಗಳನ್ನು ಪ್ರೇಕ್ಷಕರು ಮತ್ತು ಕಲಾವಿದರು ಬಹುಬೇಗನೇ ಗ್ರಹಿಸುತ್ತಿದ್ದರು. ಬಾಯಿಪಾಠ ಮಾಡಿಕೊಳ್ಳುತ್ತಿದ್ದರು.

ಅಗರಿ ಶ್ರೀನಿವಾಸ ಭಾಗವತರ ಪದ್ಯ ಕೇಳಿಯೇ ಹೊಸಹಿತ್ತಿಲು ಮಹಾಲಿಂಗ ಭಟ್ಟರಿಗೆ (ಲಿಂಗಣ್ಣ) 30 ಪ್ರಸಂಗಗಳ ಹಾಡುಗಳು ಕಂಠಸ್ಥವಾಗಿತ್ತು. ಪ್ರಸಂಗ ಪುಸ್ತಕಗಳನ್ನು ಓದಿ ಕಂಠಪಾಠ ಮಾಡಿದ್ದಲ್ಲ. ಯಾಕೆಂದರೆ ಅವರ ಪದ್ಯದ ಶೈಲಿಯೇ ಹಾಗಿತ್ತು. ಹೆಚ್ಚು ದೀರ್ಘ ಹೇಳದೆ, ಸ್ಪಷ್ಟವಾಗಿ, ಭಾವನಾತ್ಮಕವಾಗಿ ಹಾಡುವ ಹಳೆಯ ಭಾಗವತರುಗಳ ಹಾಡುಗಳನ್ನು ಕೇಳಿಯೇ ಕಲಾವಿದರೂ ಪ್ರೇಕ್ಷಕರೂ ಕಂಠಪಾಠ ಮಾಡಿಕೊಳ್ಳುತ್ತಿದ್ದರು.’’ ಇದು ಪೂಕಳ ಲಕ್ಷ್ಮೀನಾರಾಯಣ ಭಟ್ಟರ ಅನುಭವದ ಮಾತುಗಳು.


                      ಪೂಕಳದವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ಯಾಕೆಂದು ಕೇಳಿದರೆ ಅದು ‘By birth’ ಎನ್ನುವ ಉತ್ತರ. ಯಕ್ಷಗಾನ ಕಲೆಯು ರಕ್ತಗತವಾಗಿತ್ತು. ಅಲ್ಲದೆ ಹುಟ್ಟೂರಲ್ಲೂ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿತ್ತು. ನೋಡುವ ಅವಕಾಶಗಳೂ ಸಿಕ್ಕಿತ್ತು. ಧರ್ಮತ್ತಡ್ಕ ಎಡಕ್ಕಾನ, ಪೆರ್ಮುದೆ (ಪೂಕಳದ ಸಮೀಪದ ಊರುಗಳು) ಪರಿಸರದಲ್ಲಿ ತಾಳಮದ್ದಳೆಯ ತಂಡವೊಂದು ಕಾರ್ಯಾಚರಿಸುತ್ತಿದ್ದ ಕಾಲ. ಕವಿಭೂಷಣ ಶ್ರೀ ವೆಂಕಪ್ಪ ಶೆಟ್ರ ಸಮಕಾಲೀನರಾಗಿದ್ದ ಎಡಕ್ಕಾನ ಕೇಶವ ಭಟ್ಟರು ಒಳ್ಳೆಯ ಅರ್ಥಧಾರಿಗಳಾಗಿದ್ದರು. ಅವರಿಂದಲೇ ಅರ್ಥಗಾರಿಕೆಯನ್ನು ಪೂಕಳದವರು ಅಭ್ಯಸಿಸಿದರು.

ಅಲ್ಲದೆ ಇವರ ಬಂಧುಗಳಾದ ಕೆಳಗಿನ ಬಾಳಿಕೆ ನಾರಾಯಣ ಭಟ್ಟರ ಸಹಕಾರವೂ ಸಿಕ್ಕಿತ್ತು. ಮೈರಾವಣ ಮೊದಲಾದ ಬಣ್ಣದ ವೇಷಗಳಲ್ಲಿ ಇವರು ಹೆಸರು ಗಳಿಸಿದ್ದರು. ಹಾಗಾಗಿ ಇವರನ್ನು ಮೈರಾವಣ ನಾರಾಯಣ ಭಟ್ಟರೆಂದು ಎಲ್ಲರೂ ಕರೆಯುತ್ತಿದ್ದರಂತೆ (ಕೆಲವೊಂದು ಪಾತ್ರಗಳಲ್ಲಿ ಹೆಸರು ಗಳಿಸಿ ಆ ಪಾತ್ರದ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದ ಅನೇಕ ಹಿರಿಯ ಕಲಾವಿದರಿದ್ದರೆಂಬುದು ಹಿರಿಯ ಪ್ರೇಕ್ಷಕರು ಹೇಳುವುದನ್ನು ನಾವು ಗಮನಿಸ ಬಹುದು. ಉದಾ- ಹಂದಿ ತಿಮ್ಮಪ್ಪು, ಅತಿಕಾಯ ನಾರಾಯಣ ಭಟ್, ಬಣ್ಣದ ಮಹಾಲಿಂಗ, ಬಣ್ಣದ ಚಂದ್ರಗಿರಿ ಅಂಬು) ಹೀಗೆ ಊರಲ್ಲಿ ಆಗುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥ ಹೇಳಲು ಆರಂಭಿಸಿದ್ದರು. ಪೂಕಳ.
                       

ಪೂಕಳ ಲಕ್ಷ್ಮೀನಾರಾಯಣ ಭಟ್ಟರು ನಾಟ್ಯ ಕಲಿತದ್ದು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಕಲಾವಿದ ಉಪ್ಪಳ ಶ್ರೀಕೃಷ್ಣ ಮಾಸ್ತರ್ ಅವರಿಂದ. ಮಂಗಲ್ಪಾಡಿ ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕೆ ಅವರು ತಂಡವನ್ನು ಸಿದ್ಧಗೊಳಿಸಿದ್ದರು. ಮೇಳಕ್ಕೆ ಸೇರಿದ ಮೇಲೆ ನೋಡಿ ಕಲಿತುದೇ ಹೆಚ್ಚು. ಮಂಗಲ್ಪಾಡಿ ಶಾಲಾ ಪ್ರದರ್ಶನ, ಪಾಂಡವಾಶ್ವಮೇಧ ಪ್ರಸಂಗದ ತಾಮ್ರಧ್ವಜನಾಗಿ ರಂಗಪ್ರವೇಶ. ಊರ ಮತ್ತು ಶಾಲಾ ಪ್ರದರ್ಶನಗಳಲ್ಲಿ ವೇಷ ಮಾಡಲು ಇದುವೇ ವೇದಿಕೆಯಾಯಿತು. ಇದು ಕಾಲೇಜು ವಿದ್ಯಾರ್ಥಿಯಾಗಿರುವಾಗಲೂ ಮುಂದುವರಿಯಿತು. ಮಂಗಳೂರಿನಲ್ಲಿ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯ ಸಂದರ್ಭದಲ್ಲಿ ಭಾನುಕೋಪ ವಿಜಯ ಪ್ರಸಂಗದಲ್ಲಿ ಭಾನುಕೋಪನಾಗಿ ಅಭಿನಯಿಸಿ ದ್ವಿತೀಯ ಬಹುಮಾನವನ್ನು ಪಡೆದಿದ್ದರು.

ಪದವಿ ಶಿಕ್ಷಣವನ್ನು ಪೂರೈಸಿದ ನಂತರ ಮೂರು ವರ್ಷಗಳ ಕಾಲ ಮನೆಯಲ್ಲಿ ಕೃಷಿ ಚಟುವಟಿಕೆ. ಜತೆಗೆ  ಊರು ಪರವೂರುಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದರು. 1980ನೇ ಇಸವಿಯಲ್ಲಿ ಪುತ್ತೂರು ಮೇಳದಲ್ಲಿ ಮೊದಲ ತಿರುಗಾಟ. ಪುತ್ತೂರು ಶ್ರೀಧರ ಭಂಡಾರಿಯವರ ನೇತೃತ್ವ ನಿರಂತರ 7 ವರ್ಷಗಳ ತಿರುಗಾಟ. ಎಳವೆಯಲ್ಲಿ ಪುರಾಣಪುಸ್ತಕಗಳನ್ನೂ, ಪ್ರಸಂಗ ಪುಸ್ತಕಗಳನ್ನೂ ಓದಿದ್ದು, ಊರಲ್ಲಿ ಆಟಕೂಟಗಳಲ್ಲಿ ಭಾಗವಹಿಸಿದ್ದು ಮೇಳದ ತಿರುಗಾಟಕ್ಕೆ ಅನುಕೂಲವೇ ಆಗಿತ್ತು. ಮತ್ತೆ ಒಂದು ವರ್ಷ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು ಮೇಳದಿಂದ ನಿವೃತ್ತರಾದ ವರ್ಷ ಕಸ್ತೂರಿ ಪೈಗಳ ಸಂಚಾಲಕತ್ವದ ಸುರತ್ಕಲ್ ಮೇಳಕ್ಕೆ. ಶೇಣಿಯವರು ನಿರ್ವಹಿಸುತ್ತಿದ್ದ ಹೆಚ್ಚಿನ ಪಾತ್ರಗಳೂ ಪೂಕಳದವರೇ ನಿರ್ವಹಿಸಬೇಕಾಗಿತ್ತು.

ಸುರತ್ಕಲ್ ಮೇಳದಲ್ಲಿ ನಿರಂತರ 11 ವರ್ಷಗಳ ತಿರುಗಾಟ. ಬಪ್ಪಬ್ಯಾರಿ, ತುಘಲಕ್, ಯಯಾತಿ, ನಳ, ಹರಿಶ್ಚಂದ್ರ, ಕೋಟ ದೇವಪೂಂಜ, ಬಲಿಮೆದ ಭಟ್ರು, ತುಳುನಾಡ ಬಲಿಯೇಂದ್ರ ಪ್ರಸಂಗದ ಬಲಿಯೇಂದ್ರ ಮೊದಲಾದ ಪುರಾಣ, ತುಳು, ಸಾಮಾಜಿಕ ಪ್ರಸಂಗಗಳ ಪಾತ್ರಗಳು ಪೂಕಳದವರಿಗೆ ಹೆಸರನ್ನು ತಂದುಕೊಟ್ಟಿತು. ಪೌರಾಣಿಕ ಪ್ರಸಂಗಗಳಲ್ಲಿ ನಾಟಕೀಯ ಮತ್ತು ಎದುರು ವೇಷಗಳಿಗೆ ತನ್ನ ಪ್ರತಿಭಾ ವ್ಯಾಪಾರದಿಂದ ರೂಪ ಕೊಟ್ಟರು. ಸುರತ್ಕಲ್ ಮೇಳ ತಿರುಗಾಟ ನಿಲ್ಲಿಸಿದ ನಂತರ ಕಟೀಲು ಮೇಳದಲ್ಲಿ ವ್ಯವಸಾಯ.

ಕಟೀಲು 2ನೇ ಮೇಳ ಬಲಿಪ ಭಾಗವತರ ಜತೆ ತಿರುಗಾಟ. ತಿರುಗಾಟದುದ್ದಕ್ಕೂ ತಾನು ಆರ್ಜಿಸಿದ ವಿದ್ಯೆಯನ್ನು ಕಿರಿಯರಿಗೆ ಧಾರೆಯೆರೆಯುತ್ತಿದ್ದರು. ಪಾತ್ರದ ಸ್ವಭಾವ, ಪ್ರಸಂಗನಡೆ, ಮಾತುಗಾರಿಕೆಗಳ ಬಗ್ಗೆ ಮಾಹಿತಿಯನ್ನು ಕಿರಿಯ ಕಲಾವಿದರಿಗೆ ಪ್ರೀತಿಯಿಂದ ಹೇಳಿಕೊಡುತ್ತಿದ್ದರು. ಪೂಕಳ ಲಕ್ಷ್ಮೀನಾರಾಯಣ ಭಟ್ಟರಿದ್ದರೆ ಯಾವ ಪ್ರಸಂಗವನ್ನು ಬೇಕಾದರೂ ಮಾಡಬಹುದೆಂಬ ಧೈರ್ಯವು ಅವರಿದ್ದ ತಂಡಕ್ಕೆ ಇರುತ್ತಿತ್ತು. ಕಟೀಲು ಮೇಳದಲ್ಲಿ 7 ವರ್ಷಗಳ ಕಾಲ ತಿರುಗಾಟ. ನಂತರ ಎಡನೀರು ಮೇಳದಲ್ಲಿ ನಿರಂತರ 10 ವರ್ಷಗಳ ವ್ಯವಸಾಯ. ಜತೆಗೆ ಎಡನೀರು ಮಠದಲ್ಲಿ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಶ್ರೀಮದೆಡನೀರು ಮಠಾಧೀಶರ ನಿರ್ದೇಶನದಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲೂ ತಪ್ಪದೆ ಭಾಗವಹಿಸುತ್ತಿದ್ದರು.

ಪುರಾಣ ಪ್ರಸಂಗಗಳಲ್ಲಿ ಯಾವ ವೇಷವನ್ನಾದರೂ ಮಾಡಬಲ್ಲ ಸಾಮರ್ಥ್ಯ ಪೂಕಳದವರಿಗಿದೆ. ಹೀಗೆ ಎಂದು ಹೇಳುವ ಸಾಮರ್ಥ್ಯವೂ ಇದೆ. ಹಾಗಾಗಿ ಯಕ್ಷಗಾನಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕಾಣಿಸಿಕೊಳ್ಳಬಲ್ಲವರಲ್ಲಿ ಇವರೂ ಒಬ್ಬರು. ಭಾರತ ದೇಶದ ನಾನಾ ಭಾಗಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಮಳೆಗಾಲದಲ್ಲಿ ಖ್ಯಾತ ಹಾಸ್ಯಗಾರರಾಗಿದ್ದ ಶ್ರೀ ನಯನ ಕುಮಾರರು ಸಂಘಟಿಸಿದ ಟೂರ್, ಶ್ರೀ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ, ಧರ್ಮಸ್ಥಳ ಈ ತಂಡಗಳ ಪ್ರದರ್ಶನಗಳಲ್ಲಿ ಅನೇಕ ವರ್ಷಗಳ ಕಾಲ ಕಲಾವಿದರಾಗಿ ಭಾಗವಹಿಸಿರುತ್ತಾರೆ.

ಪೂಕಳದವರು ಆಟಕೂಟಗಳೆಂಬ ಎರಡು ವಿಭಾಗಗಳಲ್ಲೂ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು. ಮಲ್ಪೆ ವಾಸುದೇವ ಸಾಮಗರ ನೇತೃತ್ವದ ಸಂಚಾರೀ ಯಕ್ಷಗಾನ ಮಂಡಳಿಯ (ಸಂಯಮಂ) ಸದಸ್ಯರಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ವ್ಯವಸಾಯ ಮಾಡಿರುತ್ತಾರೆ. ವಾಸುದೇವ ಸಾಮಗರು ಮತ್ತು ಪೂಕಳದವರ ಸಂಭಾಷಣೆಗಳು ಸರಳವಾಗಿ ಪ್ರೇಕ್ಷಕರಿಗೆ ಮುಟ್ಟುವಂತಿರುತ್ತಿತ್ತು. ರಂಜನೀಯವೂ ಆಗಿರುತ್ತಿತ್ತು.
                                 ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಆಟಕೂಟಗಳಲ್ಲಿ ಸಮರ್ಥರು. ಕೆಲವೊಂದು ಪಾತ್ರಗಳ ಅರ್ಥಗಾರಿಕೆಯು ಅವರದೇ ಆದ ಕಲ್ಪನೆಯಿಂದ ಕೂಡಿರುತ್ತದೆ. ಪದ್ಯದ ಆಶಯಗಳನ್ನು ಬಿಡದೆ ಹೇಳಿ, ಜತೆಗೆ ತನ್ನ ಕಲ್ಪನೆಯಲ್ಲಿ ಹುಟ್ಟಿಕೊಂಡ ವಿಚಾರಗಳನ್ನೂ ಸೇರಿಸಿ ಪಾತ್ರಗಳನ್ನು ಕಟ್ಟಬಲ್ಲರು. ಅವರ ಅರ್ಥಗಾರಿಕೆಯನ್ನು ಕೇಳಿದ ಕಲಾಭಿಮಾನಿಗಳಿಗೆ ಈ ವಿಚಾರವು ಗೋಚರವಾಗದೇ ಇರದು. ಉದಾಹರಣೆಗಾಗಿ- ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಪ್ರಸಂಗ- ಚಕ್ರೇಶ್ವರ ಪರೀಕ್ಷಿತ. ಧರ್ಮಸ್ಥಳ ಮೇಳದಲ್ಲಿ ಈ ಪ್ರಸಂಗವು ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪೂಕಳದವರು ಶಮೀಕ ಋಷಿಯ ಪಾತ್ರವನ್ನು ನಿರ್ವಹಿಸುತ್ತಾ, ಅಭಿಮನ್ಯು ಪುತ್ರನಾದ ಪರೀಕ್ಷಿತನು ಬೇಟೆಯಾಡುತ್ತಾ ಬಳಲಿ ಆಶ್ರಮದ ಬಳಿ ಬರುತ್ತಾನೆ- ಧ್ಯಾನಾಸಕ್ತನಾದ ಮುನಿಯಲ್ಲಿ ನೀರು ಕೊಡು ಎಂದು ಕೇಳುತ್ತಾನೆ- (ಉದಕವ ಕೊಡು ಮುನಿಯೆ ಊರ್ವೀಶಗೆ ಉದಕವ ಕೊಡು ಮುನಿಯೇ ಎಂಬ ಪದ್ಯ ಇದೆ.) ನೀರು ಕೊಡಲು ಮುನಿಯು ಏಳದಿದ್ದಾಗ ಸತ್ತುಬಿದ್ದ ಹಾವೊಂದನ್ನು ಶಮೀಕ ಋಷಿಯ ಕೊರಳಿಗೆ ಹಾಕಿ ತೆರಳುತ್ತಾನೆ.

ಇದನ್ನರಿತ ಶಮೀಕ ಪುತ್ರ ಶೃಂಗಿಯು ಕೋಪಗೊಂಡು- ಇನ್ನೇಳು ದಿನಗಳಲ್ಲಿ ತಕ್ಷಕನು ಕಚ್ಚಿ ಪರೀಕ್ಷಿತನಿಗೆ ಮರಣವು ಬರಲಿ ಎಂದು ಶಪಿಸುತ್ತಾನೆ. ಧ್ಯಾನದಿಂದ ಮೇಲೆದ್ದ ಶಮೀಕನು ಈ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಶಾಪ ನೀಡಿದ ಮಗನನ್ನು ಆಕ್ಷೇಪಿಸುವ ಭಾವನಾತ್ಮಕ ಸನ್ನಿವೇಷದ ಪದ್ಯ- ನಂದಿಸಿದೆಯಾ ಭುವಿಯ ಬೆಳಕನೆ ಮತ್ತು ಹಸಿವು ಬಾಯಾರಿಕೆಯೊಳಾನೃಪ ಬಸವಳಿದು ತಾ ಗೈದ ಕೃತ್ಯಕೆ… ಎಂಬ ಎರಡು ಭಾವನಾತ್ಮಕ ಸನ್ನಿವೇಶದ ಪದ್ಯಗಳಿಗೆ ಹೀಗೆ ತಮ್ಮದೇ ಕಲ್ಪನೆಯ ಸಂಭಾಷಣೆಗಳನ್ನು ಹೇಳುತ್ತಾರೆ- “ಮಗೂ… ಹಸಿವು ಬಾಯಾರಿಕೆಗಳಿಂದ ತತ್ತರಿಸಿ ಬಂದ ಪರೀಕ್ಷಿತನಿಗೆ ಒಂದು ತುತ್ತು ಆಹಾರ, ಒಂದು ಗುಟುಕು ನೀರು ಆಶ್ರಮದಲ್ಲಿ ಸಿಗದೇ ಹೋಯಿತಲ್ಲ. ಬದಲಾಗಿ ಸಿಕ್ಕಿದ್ದು ಶಾಪ! ಇನ್ನು ಮುಂದೆ ನಮ್ಮ ಆಶ್ರಮಕ್ಕೆ ಯಾರಾದರೂ ಬಂದಾರೆ? ನೀನು ಶಾಪ ಏನೆಂದು ಕೊಟ್ಟದ್ದು? ತಕ್ಷಕನು ಕಚ್ಚಿ ಕೊಲ್ಲಲಿ ಎಂದು ಶಾಪ ಕೊಟ್ಟೆಯಾ? ತಕ್ಷಕ ಪರೀಕ್ಷಿತನಿಗೆ ಕಚ್ಚದೆ ಇರಲಾರ. ಆತನಿಗೆ ಪಾಂಡವರ ಮೇಲೆ ಮೊದಲೇ ಹಗೆ ಇದೆ. ಪುತ್ರ ಅಶ್ವಸೇನನನ್ನು ಕಳೆದುಕೊಂಡು ಪಾಂಡವರ ಮೇಲೆ ದ್ವೇಷಾಗ್ನಿಯನ್ನು ಕಾರುತ್ತಿದ್ದಾನೆ. ಆಗ ಪಾಂಡವರಿಗೆ ಶ್ರೀಕೃಷ್ಣನ ರಕ್ಷಣೆ ಇತ್ತು. ಈಗ ಶ್ರೀಕೃಷ್ಣನೂ ಇಲ್ಲ. ಹಾಗಾಗಿ ತಕ್ಷಕನು ಪರೀಕ್ಷಿತನಿಗೆ ಕಚ್ಚಿಯೇ ಕಚ್ಚುತ್ತಾನೆ.’’


ಇನ್ನೊಂದು ಕರ್ಣಾರ್ಜುನ ಪ್ರಸಂಗದಲ್ಲಿ (ಸರ್ಪಾಸ್ತ್ರ) ಅಶ್ವಸೇನನಾಗಿ- “ಕರ್ಣಾ… ನೀನು ನನ್ನನ್ನು ಮತ್ತೊಮ್ಮೆ ಪ್ರಯೋಗಿಸು. ಅರ್ಜುನನನ್ನು ನಾನು ಕೊಲ್ಲುತ್ತೇನೆ. ಅರ್ಜುನನನ್ನು ಕೊಂದುದಕ್ಕೆ ನಾನು ನಿನ್ನಲ್ಲಿ ಪ್ರತಿಫಲವೇನೂ ಕೇಳುವುದಿಲ್ಲ (ಸಂಬಳ). ನಿನ್ನ ಬತ್ತಳಿಕೆಯಲ್ಲಿ ಇಲ್ಲಿಯ ವರೇಗೆ ಕುಳಿತದ್ದಕ್ಕೆ ನೀನೂ ನನ್ನಿಂದ ಏನೂ ಕೇಳಬಾರದು (ಬಾಡಿಗೆ). ಲೆಕ್ಕಾಚಾರ ಸರಿಯಾಗಿ ಮುಗಿಸೋಣ’’-  ಇದು ಪೂಕಳದವರ ವಿಶಿಷ್ಠ ಕಲ್ಪನೆ- ಅನೇಕ ಪ್ರಸಂಗಗಳಲ್ಲಿ ಇಂತಹ ಹೊಳಹುಗಳನ್ನು ಅರ್ಥಗಾರಿಕೆಯಲ್ಲಿ ಪೂಕಳದವರು ನೀಡಿದ್ದಾರೆ.
                  ಶ್ರೀರಾಮ ನಿರ್ಯಾಣದ ಪ್ರಸಂಗದಲ್ಲಿ ಲಕ್ಷ್ಮಣನಿಗೆ ದೇಹಾಂತ್ಯ ಶಿಕ್ಷೆಯನ್ನು ಶ್ರೀರಾಮನು ನೀಡಿದ ನಂತರ ಲಕ್ಷ್ಮಣನಾಗಿ ಪೂಕಳದವರ ಮಾತುಗಳು…
                      “ಆತ್ಮೀಯರ ಅಗಲುವಿಕೆಯ ನೋವು ನನಗೆ ಈಗ ಅರ್ಥವಾಗುತ್ತಿದೆ. ಅಂದು ತೀರ್ಥರೂಪರ ಮನಸ್ಸಿನಲ್ಲಿ ಏನಿದ್ದಿರಬಹುದು? ರಾಮನಿಗಂತೂ ವನವಾಸ ಅನಿವಾರ್ಯ. ಲಕ್ಷ್ಮಣನಿಗೆ ಆ ನಿರ್ಬಂಧ ಇಲ್ಲ. ಹಣ್ಣು ಹಣ್ಣು ಮುದುಕ ತಂದೆಯ ಸೇವೆಗಿಂತಲೂ, ಯುವಕನಾಗಿರುವ ಅಣ್ಣನ ಸೇವೆಯೇ ಇವನಿಗೆ ಹೆಚ್ಚಾಯಿತು. ಇದು ಶಾಶ್ವತವಾಗಿ ಉಳಿದೀತೇ? ಎಂದು ಆಲೋಚಿಸಿದ್ದಾರೋ ಏನೊ? ಅದರ ಪರಿಣಾಮದಿಂದ ನನಗೆ ಈ ಸ್ಥಿತಿ ಉಂಟಾಗಿರಬೇಕು. ಈ ಸಂದರ್ಭದಲ್ಲಿ ಮಕ್ಕಳಿಗೊಂದು ನೀತಿಯ ಮಾತು. ಯಾವ ಕಾರಣಕ್ಕೂ ಜನ್ಮಕ್ಕೆ ಕಾರಣನಾದ ತಂದೆಯ ಮನಸ್ಸನ್ನು ನೋಯಿಸಬೇಡಿ. ನೋಯಿಸಿದರೆ ದುಷ್ಪರಿಣಾಮ ಉಂಟಾಗುತ್ತದೆ.’’ ಹೀಗೆ ಪೂಕಳದವರು ತಮ್ಮ ಅರ್ಥಗಾರಿಕೆಯಲ್ಲಿ ಉತ್ತಮ ಸಂದೇಶಗಳನ್ನೂ ನೀಡುತ್ತಾರೆ.


ಪೂಕಳದವರು ತ್ರಿಶಂಕು ಸ್ವರ್ಗ ಪ್ರಸಂಗದಲ್ಲಿ ದೇವೇಂದ್ರನಾಗಿ ಹೇಳುವ ಮಾತುಗಳು- “ತಂದೆಯ ಬದಲಿಗೆ ಮತ್ತೊಬ್ಬ ಸಾಕಿದರೆ ಸಾಕುತಂದೆ ಎನಿಸುತ್ತಾನೆ. ತಾಯಿಯಿಲ್ಲದೆ ತಬ್ಬಲಿಯಾದಾಗ ಮತ್ತೊಬ್ಬಳು ಸಾಕಿದರೆ ಸಾಕುತಾಯಿ ಎನಿಸುತ್ತಾಳೆ. ಆದರೆ `ಸಾಕುಗುರು’ ಎಂಬ ಪ್ರಯೋಗ ಇಲ್ಲ. ಯಾಕೆಂದರೆ ಗುರುಸ್ಥಾನಕ್ಕೆ ಯಾರೂ ಸಾಕಾಗುವುದಿಲ್ಲ. ಆ ಸ್ಥಾನಕ್ಕೆ ಗುರುವೇ ಆಗಬೇಕು. ಮತ್ತೊಬ್ಬರನ್ನು ನೇಮಿಸುವ ಹಾಗಿಲ್ಲ. (ಗುರುಶಾಪದಿಂದ ತ್ರಿಶಂಕುವು ಚಾಂಡಾಲತ್ವವನ್ನು ಧರಿಸಿದ ಸಂದರ್ಭದಲ್ಲಿ ಆಡುವ ಮಾತುಗಳು.)


                              ವಿನೋದಪ್ರಿಯರಾದ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಮೇಳದ ತಿರುಗಾಟ, ಮಳೆಗಾಲದ ಟೂರ್‍ಗಳಲ್ಲಿ ಕಲಾವಿದರ ಉತ್ತಮ ಒಡನಾಡಿಯಾಗಿದ್ದವರು. ಇವರಿದ್ದರೆ ಸಮಯ ಹೋದುದೇ ಕಲಾವಿದರಿಗೆ ಗೊತ್ತಾಗದು. ಬದುಕಿನುದ್ದಕ್ಕೂ ನಡೆದ ಘಟನೆಗಳನ್ನು, ಅನುಭವಗಳನ್ನು ರಸವತ್ತಾಗಿ ಹೇಳಬಲ್ಲರು. ಶ್ರೀಯುತರು ಹೇಳುವ ಜೋಕ್ಸ್‍ಗಳನ್ನು ಕೇಳಲು ಎಲ್ಲರೂ ಕಾತರಿಸುತ್ತಾರೆ. ಪ್ರಸ್ತುತ ಪುತ್ತೂರಿನ ಸಮೀಪ ಸಂಪ್ಯ ಎಂಬಲ್ಲಿ ಪತ್ನಿ ಶ್ರೀಮತಿ ಕುಸುಮಾ ಮತ್ತು ಪುತ್ರನೊಂದಿಗೆ ನೆಲೆಸಿದ್ದಾರೆ. ಪೂಕಳ ಲಕ್ಷ್ಮೀನಾರಾಯಣ ಭಟ್ ದಂಪತಿಗಳಿಗೆ ಮೂವರು ಮಕ್ಕಳು (2 ಹೆಣ್ಣು, 1 ಗಂಡು). ಹಿರಿಯ ಪುತ್ರಿ ಅನುರೂಪಾ ಮತ್ತು ಕಿರಿಯ ಪುತ್ರಿ ಶ್ರೀವಿದ್ಯಾ ವಿವಾಹಿತೆಯರು. ಪುತ್ರ ಹರಿಕೃಷ್ಣ ಕೊಣಾಜೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ. ವಿದ್ಯಾರ್ಥಿ.
                 

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

1 COMMENT

  1. ಪೂಕಳ ಲಕ್ಷ್ಮೀ ನಾರಾಯಣ ಭಟ್ ರೆ ಬಗ್ಗೆ ‌‌ಬರೆದ ಲೇಖನ ಚೆನ್ನಾಗಿ ಮೂಡಿ ಬಂದಿದೆ.
    ಧನ್ಯವಾದಗಳು.
    ಮಾಡಂಗಾಯಿ‌ ಕ್ಲಿಷ್ಟ ಭಟ್ ‌‌‌ರ ಬಗೆಗಿನ ಲೇಖನ ‌‌‌‌‌‌‌ವನ್ನ‌ ಎದುರು ನೋಡುತ್ತಿದ್ದೇನೆ.

LEAVE A REPLY

Please enter your comment!
Please enter your name here

Most Popular

Recent Comments