Saturday, May 4, 2024
Homeಯಕ್ಷಗಾನಆಟಕೂಟಗಳೆರಡರಲ್ಲೂ ಸಲ್ಲುವ ವಾಟೆಪಡ್ಪು ವಿಷ್ಣುಶರ್ಮ

ಆಟಕೂಟಗಳೆರಡರಲ್ಲೂ ಸಲ್ಲುವ ವಾಟೆಪಡ್ಪು ವಿಷ್ಣುಶರ್ಮ

ಶ್ರೀ ವಾಟೆಪಡ್ಪು ವಿಷ್ಣುಶರ್ಮರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ನಗುಮೊಗದ ಶರ್ಮರು ಉತ್ತಮ ವೇಷಧಾರಿಯೂ ಹೌದು. ತಾಳಮದ್ದಳೆ ಅರ್ಥಧಾರಿಯೂ ಹೌದು. ನಾಟ್ಯ ಮತ್ತು ಮಾತುಗಾರಿಕೆ ಈ ಎರಡೂ ವಿಭಾಗಗಳಲ್ಲಿ ವಿಷ್ಣುಶರ್ಮರು ಪರಿಣತರು. ಸಾತ್ವಿಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಇವರು ಸಂಭಾಷಣಾ ಚತುರರಾಗಿ ಕಲಾಭಿಮಾನಿಗಳ ಮನ ಗೆದ್ದವರು. ಪುಂಡುವೇಷಧಾರಿಯಾದ ಶರ್ಮರು ಕಿರೀಟ ವೇಷಗಳನ್ನೂ ಚೆನ್ನಾಗಿ ನಿರ್ವಹಿಸಬಲ್ಲರು. ಅಗತ್ಯ ಬಿದ್ದರೆ ಸ್ತ್ರೀವೇಷಕ್ಕೂ ಸೈ.

ವಿಷ್ಣುಶರ್ಮ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ವಾಟೆಪಡ್ಪು ಎಂಬಲ್ಲಿ 1967ನೇ ಇಸವಿ ಎಪ್ರಿಲ್ 6ರಂದು ತಲೆಂಗಳ ಸುಬ್ರಾಯ ಭಟ್ ಪರಮೇಶ್ವರೀ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಮೂರು ಮಂದಿ ಮಕ್ಕಳಲ್ಲಿ ಇವರೇ ಹಿರಿಯವರು. 7ನೇ ತರಗತಿಯ ವರೆಗೆ ಪೆರುವಾಯಿ ಶಾಲೆಯಲ್ಲಿ ಓದಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕಾಯರ್‍ಕಟ್ಟೆ ಸರಕಾರಿ ಶಾಲೆಯಲ್ಲಿ ಪೂರೈಸಿದರು. ನಂತರ 2 ವರ್ಷ ಮನೆಯಲ್ಲೇ ಇದ್ದು ತಂದೆಯವರ ಜತೆ ಕೃಷಿಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಅತೀವವಾಗಿತ್ತು ಇವರಿಗೆ.

ಶಾಲಾ ವಿದ್ಯಾರ್ಥಿಯಾಗಿರುವಾಗ ಆಟ, ತಾಳಮದ್ದಳೆಗಳಿಗೆ ಹೋಗುವ ಹವ್ಯಾಸ ಇದ್ದದ್ದರಿಂದ ತಾನೂ ಕಲಾವಿದನಾಗಬೇಕೆಂಬ ಆಸೆ ಸಹಜವಾಗಿ ಮೂಡಿತು. 17ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾಕೇಂದ್ರಕ್ಕೆ ಸೇರಿದ ವಿಷ್ಣುಶರ್ಮರು ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಸುಂಕದಕಟ್ಟೆ ಮೇಳವನ್ನು ಸೇರಿ ಕೋಡಂಗಿ, ಬಾಲಗೋಪಾಲರು (ಪೂರ್ವರಂಗ) ಮೊದಲಾದ ವೇಷಗಳನ್ನು ಮಾಡುತ್ತಾ ಹಂತಹಂತವಾಗಿ ಬೆಳೆದು ಕಲಾವಿದರಾಗಿ ಕಾಣಿಸಿಕೊಂಡರು.

ಆಗ ಸುಂಕದಕಟ್ಟೆ ಮೇಳದಲ್ಲಿ ಪುತ್ತಿಗೆ ತಿಮ್ಮಪ್ಪ ರೈಗಳು, ಪದ್ಯಾಣ ಶಂಕರನಾರಾಯಣ ಭಟ್, ಕಟೀಲು ಶ್ರೀನಿವಾಸ ರಾವ್ (ಕಟೀಲು ಶೀನಯ್ಯಣ್ಣ), ತ್ರಿವಿಕ್ರಮ ಶೆಣೈ, ಮಂಜೇಶ್ವರ ಜನಾರ್ದನ ಜೋಗಿ, ಬೇತ ಕುಂಞ ಕುಲಾಲ್ ಮೊದಲಾದ ಹೆಸರಾಂತ ಕಲಾವಿದರ ಒಡನಾಟ ಇವರಿಗೆ ಸಿಕ್ಕಿತು. ಪ್ರಸ್ತುತ ಕಟೀಲು ಮೇಳದ ಕಲಾವಿದರಾದ ಹಳುವಳ್ಳಿ ಗಣೇಶ ಭಟ್, ಉಮಾಮಹೇಶ್ವರ ಭಟ್ ಸುಂಕದಕಟ್ಟೆ ಮೇಳದಲ್ಲಿ ಇವರಿಗೆ ಸಹಕಲಾವಿದರಾಗಿದ್ದರು.

ಪ್ರಸಂಗ ಮಾಹಿತಿ, ರಂಗನಡೆಗಳನ್ನು ಖ್ಯಾತ ಮದ್ಲೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ಟರಿಂದ ಅಭ್ಯಸಿಸಿ ಸದ್ರಿ ಮೇಳದಲ್ಲಿ ಸ್ತ್ರೀವೇಷ ಮತ್ತು ಪುರುಷ ವೇಷಗಳನ್ನು ನಿರ್ವಹಿಸಿದರು. ಮನ್ಮಥ, ವಿಷ್ಣು, ಶ್ರೀರಾಮ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ದ್ರೌಪದಿ ಅಲ್ಲದೆ ಕಸೆ ಸ್ತ್ರೀವೇಷಗಳನ್ನೂ ನಿರ್ವಹಿಸಿದ ಅನುಭವ ಇವರಿಗಿದೆ. ನಿರಂತರ 6 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಯಕ್ಷಗಾನ ಜೀವನ ಸಾಗಿಸಲು ಕಷ್ಟ ಎಂಬ ತೀರ್ಮಾನಕ್ಕೆ ಬಂದು ಮೇಳದ ತಿರುಗಾಟವನ್ನು ನಿಲ್ಲಿಸಿದ ಶರ್ಮರು ನಂತರ 2 ವರ್ಷ ಮೊದಲಿನಂತೆ ಮನೆಯಲ್ಲಿ ಕೃಷಿಕಾರ್ಯದಲ್ಲಿ ನಿರತರಾದರು.


“ಕಟೀಲು ನಾಲ್ಕನೇ ಮೇಳ ಆರಂಭವಾದ ವರ್ಷ- ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಅಪೇಕ್ಷೆಯಂತೆ ಕಟೀಲು ಮೇಳದಲ್ಲಿ ತಿರುಗಾಟ ನಡೆಸುವ ನಿರ್ಣಯಕ್ಕೆ ಬರಬೇಕಾಯಿತು. ನಿನಗೊಳ್ಳೆಯ ಭವಿಷ್ಯವಿದೆ. ಕಳೆದುಕೊಳ್ಳಬೇಡ. ಸಾಧನೆ ಮಾಡು. ಉತ್ತಮ ಕಲಾವಿದನಾಗುವೆ. ಮೇಳಕ್ಕೆ ಸೇರು ಎಂಬ ಅವರ ಮಾತುಗಳು ಈಗಲೂ ನೆನಪಿದೆ. ಅವರ ಮೇಲಿನ ಗೌರವದಿಂದ ಕಟೀಲು ಮೇಳಕ್ಕೆ ಸೇರಿದೆ. ಅಂದು ಜೀವನ ಸಾಗಿಸಲು ಕಷ್ಟ ಎಂದು ನಿರ್ಧರಿಸಿ ಮೇಳ ಬಿಟ್ಟೆ. ಈಗ ಯಕ್ಷಗಾನವೇ ನನ್ನ ಜೀವನಕ್ಕೆ ಆಧಾರವಾಗಿದೆ” ಎಂದು ವಿಷ್ಣುಶರ್ಮರು ಸಂತೋಷದಿಂದ ಹೇಳುತ್ತಾರೆ.

ನಿರಂತರವಾಗಿ 27 ವರ್ಷಗಳಿಂದ ಶರ್ಮರು ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕುಬಣೂರು, ಪೂಂಜರು, ಮೋಹನ ಶೆಟ್ಟಿಗಾರ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಸಂಪಾಜೆ ಶೀನಪ್ಪ ರೈ, ಸಂಜೀವ ಚೌಟ, ಮಂಜೇಶ್ವರ ಜನಾರ್ದನ ಜೋಗಿ, ತೊಡಿಕಾನ ವಿಶ್ವನಾಥ ಗೌಡ, ಕಾವು ಗಿರೀಶ ಮೊದಲಾದವರ ಒಡನಾಟ, ಅನೇಕ ಕಿರಿಯ ಕಲಾವಿದರ ಪ್ರೀತಿಯನ್ನು ಗಳಿಸಿದ್ದೇನೆ ಎನ್ನುವ ಶರ್ಮರು ಹತ್ತು ವರುಷಗಳಿಂದ ತಾಳಮದ್ದಳೆಯಲ್ಲೂ ಬೇಡಿಕೆಯಿರುವ ಕಲಾವಿದ.

ಕಟೀಲು ಮೇಳದಲ್ಲಿ- ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು, ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮಾರ್ಗದರ್ಶನ ಮಾಡಿದವರು. ಅವರುಗಳಿಂದಾಗಿಯೇ ಕಲಾಭಿಮಾನಿಗಳು ನನ್ನನ್ನು ಗುರುತಿಸುವಂತಾಯಿತು. ಇಷ್ಟಾದರೂ ಬೆಳೆದೆ. ಇಷ್ಟು ವ್ಯವಸಾಯ ಮಾಡಿದರೂ ಕಲಿತದ್ದು ಸಾಲದು ಎನಿಸುತ್ತಿದೆ. 32 ವರ್ಷಗಳ ವ್ಯವಸಾಯ ಮಾಡಿದೆ ಎನ್ನುವುದಕ್ಕಿಂತಲೂ ಅಷ್ಟು ಸಮಯ ಕಳೆದು ಹೋಯಿತಲ್ಲಾ, ಇನ್ನಷ್ಟು ಕಲಿಯಬಹುದಿತ್ತು. ಯಕ್ಷಗಾನಕ್ಕೆ ಕಲಿತಷ್ಟು ಕಡಿಮೆಯೇ. ಕಲಿತದ್ದು ಸಾಲದು ಎಂಬ ಭಾವನೆಯೇ ಇದೆ. ಪರಿಶ್ರಮ ಪಟ್ಟರೆ ಇನ್ನಷ್ಟು ಎತ್ತರಕ್ಕೇರಬಹುದಿತ್ತೇನೋ ಎಂದೆನಿಸುತ್ತಿದೆ.

ಕಲಾವಿದನಾಗಿ ತಿರುಗಾಟ ನಡೆಸುವಲ್ಲಿ ತಂದೆ ತಾಯಿಯರ ಆಶೀರ್ವಾದವಿತ್ತು. ಸಹೋದರ ಗೋಪಾಲಕೃಷ್ಣ ಪ್ರಸಾದನ (ಜಿಂದಾಲ್ ಕಂಪೆನಿಯಲ್ಲಿ ಇಂಜಿನಿಯರ್) ಪ್ರೋತ್ಸಾಹ ಇತ್ತು. ಕಟೀಲು ದೇವಳದ ಆನುವಂಶಿಕ ಅರ್ಚಕರಾದ ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ಶ್ರೀ ವಿಠಲ ಶೆಟ್ಟರು ಮತ್ತು ಪ್ರಸ್ತುತ 6 ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಸಹಕಾರ, ಪ್ರೋತ್ಸಾಹದಿಂದ 27 ವರುಷಗಳ ತಿರುಗಾಟ ನಡೆಸುವಂತಾಯಿತು. ಇದು ವಿಷ್ಣುಶರ್ಮರ ಮನದ ಮಾತು. ಪ್ರಸ್ತುತ ಬೆಳ್ತಂಗಡಿ ತಾಲೂಕು ಕೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ವಾಸಿಸುತ್ತಿರುವ ವಿಷ್ಣುಶರ್ಮರ ಮನದ ಬಯಕೆಗಳನ್ನೆಲ್ಲಾ ಕಲಾಮಾತೆಯು ಅನುಗ್ರಹಿಸಲಿ ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ.

ಕುಟುಂಬ : ತಂದೆ- ಟಿ. ಸುಬ್ರಾಯ ಭಟ್; ತಾಯಿ- ದಿ| ಪರಮೇಶ್ವರಿ; ಪತ್ನಿ- ರೇಖಾ; ಪುತ್ರಿ – ಕು| ರಕ್ಷಾಕರೀ ಶರ್ಮ; ತಮ್ಮ- ಗೋಪಾಲಕೃಷ್ಣ ಪ್ರಸಾದ; ತಂಗಿ- ಶೋಭಾರತ್ನ (ವಿವಾಹಿತೆ)

ಲೇಖನ: ರವಿಶಂಕರ್ ವಳಕ್ಕುಂಜ 
RELATED ARTICLES

1 COMMENT

  1. ವಾಟೆಪಡ್ಪು ವಿಷ್ಣು ಶರ್ಮರು ಯಾವುದೇ ಪ್ರಸಂಗವಿರಲಿ , ಪ್ರಸಂಗದ ಚೌಕಟ್ಟಿನಲ್ಲಿ ಮಾತನಾಡಬಲ್ಲ #ಪ್ರತಿಭಾವಂತ_ಕಲಾವಿದರಲ್ಲೊಬ್ಬರು.ವಾದ ಪ್ರತಿವಾದ, ಮಂಡನೆ ಖಂಡನೆ ಎರಡನ್ನೂ ನಿಭಾಯಿಸಬಲ್ಲವರು.ಅಸ್ಖಲಿತ ಮಾತು , ನಿಖರವಾದ ಪುರಾಣ ಜ್ನಾನ, ಪಾತ್ರವರಿತು ಮಾತನಾಡುವ ಅತ್ಯುತ್ತಮ‌ ಸಂಭಾಷಣಾ ಕ್ರಮ ಇವರ ಹೆಚ್ಚುಗಾರಿಕೆ. ಆದರೆ ಇವರಿಗೆ #ಸಿಗಬೇಕಾದ_ಮಾನ್ಯತೆ_ಸಿಗದೇ_ಇರುವುದು_ತಾಳಮದ್ದಳೆ_ಕ್ಶೇತ್ರಕ್ಕಾಗುವ ನಷ್ಠ. ಇನ್ನಾದರೂ ಆಯೋಜಕರು ಗಮನ ಹರಿಸಿ ಇವರಂತಹ ಕಲಾವಿದರನ್ನು ಮುನ್ನೆಲೆಗೆ ತರಿಸಬೇಕಾಗಿದೆ.@ Ravishankar valakunja Ganesh N Bhat ಹರ್ಷ ವೇದೋಡಿ N Rajesh Bhat Bayar
    ಪ್ರತಿಕ್ರಿಯೆ: ಕುಮಾರ ಸುಬ್ರಹ್ಮಣ್ಯ. ಮುಳಿಯಾಲ

LEAVE A REPLY

Please enter your comment!
Please enter your name here

Most Popular

Recent Comments