Sunday, May 5, 2024
Homeಯಕ್ಷಗಾನತಾಳಮದ್ದಳೆ ಕ್ಷೇತ್ರದ ಹಳೆಯ ವಿಶಿಷ್ಟ, ಖ್ಯಾತ ಅರ್ಥಧಾರಿ, ಅಧ್ಯಾಪಕ - ಶ್ರೀ ಕೆ.ವಿ.ಗಣಪಯ್ಯ ಆಲಜೆ 

ತಾಳಮದ್ದಳೆ ಕ್ಷೇತ್ರದ ಹಳೆಯ ವಿಶಿಷ್ಟ, ಖ್ಯಾತ ಅರ್ಥಧಾರಿ, ಅಧ್ಯಾಪಕ – ಶ್ರೀ ಕೆ.ವಿ.ಗಣಪಯ್ಯ ಆಲಜೆ 

ಕೆ.ವಿ. ಗಣಪಯ್ಯ ತಾಳಮದ್ದಳೆಯ ಅಭಿಮಾನಿಗಳಿಗೆಲ್ಲಾ ಪರಿಚಿತ ಹೆಸರು. ತನ್ನ ವಿಶಿಷ್ಟ ಹಾಗೂ ಭಿನ್ನವಾದ ಅರ್ಥಗಾರಿಕೆಯಿಂದ ತಾಳಮದ್ದಳೆ ಅರ್ಥಧಾರಿಯಾಗಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಅಧ್ಯಾಪಕ. ತಾಳಮದ್ದಳೆಯಲ್ಲಿ ಅರ್ಥ ಹೇಳುವುದನ್ನು ಒಂದು ಹವ್ಯಾಸ ಹಾಗೂ ಆಸಕ್ತಿಯ ವಿಷಯವನ್ನಾಗಿ ಪರಿವರ್ತಿಸಿಕೊಂಡವರು. 1933ನೆಯ ಇಸವಿಯಲ್ಲಿ ಹುಟ್ಟಿದ ಇವರಿಗೆ ತನ್ನ 11ನೆಯ ವಯಸ್ಸಿನಿಂದಲೇ ಯಕ್ಷಗಾನದ ಪರಿಚಯ ಮತ್ತು ಅದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು.  

ಈಗಲೂ ತಾಳಮದ್ದಳೆಯ ಹಳೆಯ ಪ್ರೇಕ್ಷಕರು ಸಿಕ್ಕಿದಾಗ ಯಕ್ಷಗಾನದ ಆಗುಹೋಗುಗಳನ್ನು ಮಾತನಾಡುತ್ತಿರುವಾಗ ಕೆ.ವಿ. ಗಣಪಯ್ಯನವರ ಹೆಸರನ್ನು ಉಲ್ಲೇಖಿಸುವುದನ್ನು ಮರೆಯುವುದಿಲ್ಲ. ಅಂತಹಾ ವಿಶಿಷ್ಟ ಅರ್ಥಗಾರಿಕೆಯಿಂದ ಜನಮಾನಸದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗಳಿಸಿಕೊಂಡ ಕಲಾವಿದರು ಆಲಜೆ ಶ್ರೀ ಕೆ.ವಿ. ಗಣಪಯ್ಯನವರು. ಇವರ ಕೌರವನೇ ಮೊದಲಾದ ಖಳ ಪಾತ್ರಗಳ ಅರ್ಥಗಾರಿಕೆ ಬಲು ಸೊಗಸು. ಶೇಣಿ ಗೋಪಾಲಕೃಷ್ಣ ಭಟ್ , ದೊಡ್ಡ ಸಾಮಗರು, ಸಣ್ಣ ಸಾಮಗರು, ಕೀರಿಕ್ಕಾಡು ವಿಷ್ಣು  ಮಾಸ್ತರರು, ಪುಟ್ಟಣ್ಣ ಗೌಡರು, ಪೆರ್ಲ ಕೃಷ್ಣ ಭಟ್ಟರು,  ದೇರಾಜೆ ಸೀತಾರಾಮಯ್ಯ, ಕಾಂತ ರೈಗಳು ,  ಮೂಡಂಬೈಲು, ಉಡುವೆಕೋಡಿ, ಪ್ರಭಾಕರ ಜೋಶಿ ಮೊದಲಾದವರ ಜೊತೆ ಅರ್ಥ ಹೇಳಿದ ಅನುಭವ ಗಣಪಯ್ಯನವರಿಗಿದೆ. 

ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಹಾಕಿದ್ದೂ ಇದೆ. ಯಕ್ಷಗಾನ ನಾಟಕಗಳಲ್ಲೂ ವೇಷ ಮಾಡಿದ್ದರು. ಆದರೆ ದೈಹಿಕ ನಿಶ್ಯಕ್ತಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಆಟಗಳಲ್ಲಿ ಭಾಗವಹಿಸುವುದನ್ನು ಎಷ್ಟೋ ವರ್ಷಗಳ ಮೊದಲೇ ಬಿಟ್ಟಿದ್ದರು. ನಾಟ್ಯದ ಅನುಭವ ಇಲ್ಲದೇ ಇದ್ದುದರಿಂದ ಆಟಗಳಲ್ಲಿ ಭಾಗವಹಿಸುವುದು  ಸರಿಯಲ್ಲ ಎಂದು ಅವರ ಅಭಿಪ್ರಾಯ. ಅವರ ಸಂಪೂರ್ಣ ಕಲಾಜೀವನ ಹಲಾವಾರು ಅಡೆತಡೆಗಳಿಂದ ಕೂಡಿತ್ತು. ಆದುದರಿಂದ ಕಲಾವಿದನಾಗಿ ಸಂಪೂರ್ಣ ವೇಗದ ಓಟವನ್ನು ಮಾಡುವುದಕ್ಕೆ ಆಗಲಿಲ್ಲ ಎಂದು ಅವರು ಒಪ್ಪುತ್ತಾರೆ.

ಆಗಾಗ ಕಾಡುತ್ತಿದ್ದ ಗಂಭೀರ ಕಾಯಿಲೆಗಳು ಹಲವಾರು ಬಾರಿ ಅವರನ್ನು ಯಕ್ಷಗಾನ ರಂಗದಿಂದ ದೂರ ಉಳಿಯುವಂತೆ ಮಾಡಿತ್ತು. ಆದರೆ ಮತ್ತೆ ಮತ್ತೆ ಚೇತರಿಸಿಕೊಂಡು ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. ಈಗ ವಯೋಸಹಜ ಖಾಯಿಲೆ ನಿಶ್ಶಕ್ತಿಗಳು ಆವರಿಸಿರುವುದರಿಂದ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನ ರಂಗದಿಂದ ದೂರ ಉಳಿದಿದ್ದಾರೆ. ಅವರಿಗೆ ಈಗ ವಯಸ್ಸು 88.  ಕೆ. ವಿ. ಗಣಪಯ್ಯನವರಲ್ಲಿ ಅವರ ಕಲಾ ಜೀವನದ ಅನುಭವಗಳನ್ನು ಕೇಳಿದಾಗ ಅವರು ಬಿಚ್ಚು ಮನಸ್ಸಿನಿಂದ  ಉತ್ತರಿಸುತ್ತಾರೆ. 

ಪ್ರಶ್ನೆ: ನಿಮ್ಮ ಆ ಕಾಲದ ಯಕ್ಷಗಾನದ ಕೆಲವು ಅನುಭವಗಳನ್ನು ತಿಳಿಸಬಹುದೇ?

ಉತ್ತರ: ನನಗೆ ವಯೋಸಹಜವಾಗಿ ಮರೆವು ಇರುವುದರಿಂದ ತೃಪ್ತಿಕರವಾಗಿ ಹೇಳಬಲ್ಲೆನೆಂಬ ಧೈರ್ಯವಿಲ್ಲ. ಆದರೂ ಮರೆಯದೆ ಉಳಿದ ಕೆಲವು ಸಂಗತಿಗಳನ್ನು ಹೇಳಬಹುದು.  ವಿದ್ಯಾರ್ಥಿ ದೆಸೆಯಲ್ಲಿಯೇ ನಾನು ತಾಳಮದ್ದಳೆಗಳಲ್ಲಿ ಅರ್ಥ ಹೇಳುತ್ತಿದ್ದೆ.  ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ‘ ಎಂದು ಕವಿರಾಜ ಮಾರ್ಗದಲ್ಲಿ ಹೇಳಿದ  ಕಂದ ಪದ್ಯದಂತೆ ರಾಮಾಯಣ, ಮಹಾಭಾರತ, ಭಾಗವತಗಳನ್ನು ಓದದ ಜನ ಅದರ ಕಥೆಯನ್ನು ಹಿರಿಯರಿಂದ ಕೇಳಿ, ಬಯಲಾಟಗಳನ್ನು ನೋಡಿ ತಿಳಿದಂತಹ ಜನ ಅದನ್ನು ತಮ್ಮಿಂದ ಕಿರಿಯರಿಗೆ ಹೇಳುತ್ತಿದ್ದರು. ಅದರಂತೆ ಪ್ರದರ್ಶನಗಳು ನಡೆಯುತ್ತಿದ್ದುವು. ಬಹಳ ಕಷ್ಟದ ದಿನಗಳು. ಕಲಾವಿದರಿಗೆ ಹೆಚ್ಚಿನ ಗೌರವ ಇರಲಿಲ್ಲ. ಏನೂ ಕೆಲಸ ಇಲ್ಲದವ ಆಟಕ್ಕೆ ಹೋಗತ್ತಾನೆ ಎನ್ನುವ ಮಾತು ಹಳ್ಳಿಗಳಲ್ಲಿ ಪ್ರಚಾರದಲ್ಲಿದ್ದಂತಹಾ ಕಾಲ.

ಅವರು ಕಲಾಭಿಮಾನದಿಂದ ಮಳೆಗಾಲದಲ್ಲಿ ಕೃಷಿಕರ್ಮಗಳನ್ನು ಮಾಡಿ ಮಳೆ ಹೋದ ಮೇಲೆ ವೇಷಗಳನ್ನು ಧರಿಸಿ ಪ್ರದರ್ಶನ ಮಾಡುತ್ತಿದ್ದರು.  ಅಂತಹಾ ವೇಷಗಳು ಕಲಾವಿದರ ಸಂಪೂರ್ಣ ತೊಡಗಿಸುವಿಕೆಯಿಂದ ಒಳ್ಳೆಯ ರೀತಿಯ ಪ್ರದರ್ಶನಗಳನ್ನು ಕಾಣುತ್ತಿದ್ದುವು. ಈಗಿನಂತೆ ರಂಗುರಂಗಿನ, ಝಗಝಗಿಸುವ ಪ್ರದರ್ಶನ ಅಲ್ಲ ಅದು.  ಕಲೆಯಲ್ಲಿ ಸಂಪೂರ್ಣ ತಾದಾತ್ಮ್ಯತೆಯನ್ನು ಹೊಂದಿದ ಕಲಾವಿದರು ಮನಃಪೂರ್ವಕವಾಗಿ ಮಾಡುತ್ತಿದ್ದ ಪ್ರದರ್ಶನಗಳವು. ಪೂರ್ಣ ರಾತ್ರಿ ಅಂದರೆ ಬೆಳಗಿನ ವರೆಗೆ ಇರುವಂತಹಾ ವೇಷ. ಇಂತಹಾ ಪ್ರದರ್ಶನ ಜನರಲ್ಲಿ ಭಕ್ತಿಯ ಭಾವವನ್ನೂ ತುಂಬುತ್ತಿತ್ತು. ಹಾಗೂ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ವಿಷಯಗಳ ತಿಳಿವಳಿಕೆಯನ್ನೂ ನೀಡುತ್ತಿತ್ತು. ವೇಷವನ್ನು ನೋಡಿ ಅದರ ಪರಿಣಾಮ, ಭಾಷೆ ಅರ್ಥ ಆಗುವವರಿಗೆ ವಿಷಯಗಳ ನಿರೂಪಣೆಯ ಪರಿಣಾಮವೂ ಆಗುತ್ತಿತ್ತು.

ನಾನು ನೋಡಿದ ಮೇಳಗಳ ಪ್ರದರ್ಶನಗಳ ಆಧಾರದ ಮೇಲೆ ನನ್ನ ಅನುಭವವನ್ನು ಹೇಳುವುದಾದರೆ ಬಯಲಾಟದ ಮೇಳಗಳಲ್ಲಿ ಕುಂಬಳೆ ತಿಮ್ಮಪ್ಪು, ಸಣ್ಣ ತಿಮ್ಮಪ್ಪು, ಬಣ್ಣದ ಮಾಲಿಂಗ, ಕೋಲುಳಿ  ಸುಬ್ಬ ಹೀಗೆ ಹಲವಾರು ಕಲಾವಿದರು ಪ್ರಸಿದ್ದರಾಗಿದ್ದರು.  ಅವರ ವೇಷಗಳನ್ನೆಲ್ಲಾ ನೋಡಿದ್ದೇನೆ. ಅದು ಬಹಳ ಸಹಜವಾಗಿ ಪ್ರದರ್ಶಿಸಲ್ಪಡುತ್ತಿತ್ತು. ಸಣ್ಣ ತಿಮ್ಮಪ್ಪು ಅವರು ಮಯಾಸುರ ವೇಷ ಮಾಡಿದ ನಂತರ ರಾಜಸೂಯಾಧ್ವರದ ಶಿಶುಪಾಲ ಮಾಡಿದುದನ್ನೂ ಕಂಡಿದ್ದೇನೆ. ಆಗ ಪುಂಡುವೇಷಗಳ ಸಾಮರ್ಥ್ಯವನ್ನು ಗುರುತಿಸುವುದು ಹೇಗೆ ಅಂದರೆ ಯಾರು ಹೆಚ್ಚು ದಿಗಿನ ಹಾರಿದ ಎಂಬ ಲೆಕ್ಕಾಚಾರದಲ್ಲಿ. ಪುಂಡುವೇಷಧಾರಿಯು ತನ್ನ ಪಾತ್ರದ ಅಭಿವ್ಯಕ್ತಿಗೆ ಬೇಕಾದಂತೆ ನಾಟ್ಯ ಮಾಡಿದರೂ ಜನರು ಮೆಚ್ಚುವುದು ಹಾರಾಟವನ್ನು. ಯಕ್ಷಗಾನ ಎಂದರೆ ನಾಟ್ಯಪ್ರಧಾನವಾದ ಮಾಧ್ಯಮ ಎಂಬ ಭಾವನೆ ತಿಳಿದೋ ತಿಳಿಯದೆಯೋ  ಜನಸಾಮಾನ್ಯರಲ್ಲಿತ್ತು. 

ಸಂಗೀತ ಮತ್ತು ಸಾಹಿತ್ಯ ಸರಸ್ವತಿ ಮಾತೆಯ ಸ್ತನದ್ವಯಗಳು ಎಂದು ಹೇಳುತ್ತಾರೆ. ಹಿತ ಮಿತವಾದ ಮಾತುಗಾರಿಕೆಯಿಂದ ಪಾತ್ರದ ಮನೋಭಾವವನ್ನು ವಿಚಾರಗಳನ್ನು ಪ್ರತಿಬಿಂಬಿಸುವಂತಹ ಪ್ರಯತ್ನ ಆಗ ಇತ್ತು. ದೀರ್ಘ ಭಾಷಣ ಇರಲಿಲ್ಲ. ಅದು ಈ ಕಾಲಕ್ಕೂ ಆ ಕಾಲಕ್ಕೂ ಇರುವಂತಹಾ ವ್ಯತ್ಯಾಸ. ಆದರೆ ಆಗಿನ ಭಾಗವತರುಗಳಲ್ಲಿ  ಕೆಲವರು ಮಳೆಗಾಲದ ಸಂದರ್ಭಗಳಲ್ಲಿ ಹರಿಕತೆಯನ್ನೂ ಮಾಡುತ್ತಿದ್ದರು. ಸೂರಿಕುಮೇರಿ ಗೋವಿಂದ ಭಟ್ಟರು ಅವರ ಯೌವನದಲ್ಲಿ ಮಾಡಿದ ಪಾತ್ರಗಳನ್ನೂ ನೋಡಿದ್ದೇನೆ. ದ್ರೌಪದಿ ವಸ್ತ್ರಾಪಹಾರದ ದುರ್ಯೋಧನ. ಆ ಯುವಕ ದುರ್ಯೋಧನ ಎಂತಹಾ ರೋಷವನ್ನು ದ್ರೌಪದಿಯ ಬಗ್ಗೆ ಹೊಂದಿದ್ದ ಎನ್ನುವುದನ್ನು ಬಿಂಬಿಸುವ ಕ್ರಮ ಈಗ ಯಾವ ಮೇಳಗಳಲ್ಲಿಯೂ ಕಾಣುವುದಿಲ್ಲ. ಅದೇ ಗೋವಿಂದ ಭಟ್ಟರು ಆ ನಂತರದ ಕೌರವನ ಪತ್ರಗಳನ್ನು ಬಗೆ ಬಗೆಯ ರೀತಿಯಲ್ಲಿ ಚಿತ್ರಿಸಿದ್ದಾರೆ. ಹೀಗೆ ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳನ್ನು ಚಿತ್ರಿಸುವ ಕೆಲಸವನ್ನು ಗೋವಿಂದ ಭಟ್ಟರು ಮಾಡಿದ್ದಾರೆ.

ಅದೇ ಕ್ರಮ ಹಿಂದೆ ಮಾಣಂಗಾಯಿ ಕೃಷ್ಣ ಭಟ್ಟರ ವೇಷಗಳಲ್ಲಿ ಇತ್ತು. ಇವರಂತೆ ಒಂದೇ ಪ್ರಸಂಗದ ವಿವಿಧ ಪಾತ್ರಗಳನ್ನು ನಿರ್ವಹಿಸುವ ಕೌಶಲ ಈಗಿನ ಕಲಾವಿದರಲ್ಲಿ ಯಾರಲ್ಲಿಯೂ ಇಲ್ಲ ಎಂದರೆ ಕಲಾವಿದರು ಕೋಪಿಸಿಕೊಳ್ಳಬಾರದು. ಪದ್ಯದ ಮಿತಿಯನ್ನು ಮೀರಿ ಪಾತ್ರಚಿತ್ರಣ ಆಗಬಾರದು ಎಂಬ ಎಚ್ಚರ ಆಗ ಇತ್ತು. ಕೆಲವೇ ವಾಕ್ಯಗಳಲ್ಲಿ ಆ ಪಾತ್ರದ ಸ್ವಭಾವದ ಚಿತ್ರಣವನ್ನು ನೀಡುವ ಕೌಶಲ ಆಗ ಇದ್ದಷ್ಟು ಈಗ ಇಲ್ಲ. ಆದರೆ ಈಗ ಯಕ್ಷಗಾನದಲ್ಲಿ ವಿದ್ವಾಂಸ ಕಲಾವಿದರು ತುಂಬಾ ಇದ್ದಾರೆ. ಆದರೆ ಆ ರೀತಿಯ ಕೌಶಲದ ಪಾತ್ರಧಾರಿಗಳು ಕಡಿಮೆ. ದೀರ್ಘ ಭಾಷಣ ಮಾಡಿದರೆ ಒಳ್ಳೆಯದು ಎಂಬ ಭಾವನೆ ಹೆಚ್ಚಿನ ಪ್ರೇಕ್ಷಕರು ಮತ್ತು ಕಲಾವಿದರಲ್ಲಿದ್ದರೆ ಅದು ಆರೋಗ್ಯಕರ ಲಕ್ಷಣ ಅಲ್ಲ. 

ಕೂಟಗಳ ಬಗ್ಗೆ ಹೇಳುವುದಾದರೆ ಆಗ ಎನ್.ಎಸ್. ಕಿಲ್ಲೆಯವರು ಕರ್ಣನ ಪಾತ್ರವನ್ನು ಬಹಳ ಮನೋಜ್ಞವಾಗಿ ಚಿತ್ರಿಸುತ್ತಿದ್ದರು. ಶೆಡ್ಡೆ ಕೃಷ್ಣ ಮಲ್ಯರು ಶಲ್ಯನ ಪಾತ್ರದಲ್ಲಿ ಚೆನ್ನಾಗಿ ಅರ್ಥ ಹೇಳುತ್ತಿದ್ದರು. ಕರ್ಣನ ಪತ್ರವನ್ನೂ ಹೇಳುತ್ತಿದ್ದರು. ಪೊಳಲಿ  ಶಾಸ್ತ್ರಿಗಳು, ಕವಿಭೂಷಣ ವೆಂಕಪ್ಪ ಶೆಟ್ಟಿ ಮೊದಲಾದವರು ಯಕ್ಷದಿಗ್ಗಜರು. ಇವರ ಪ್ರಭಾವಲಯದಿಂದ ಪ್ರಚೋದಿತರಾಗಿ ಅನೇಕ ಕಲಾವಿದರು ಬೆಳೆದು ಬಂದಿದ್ದಾರೆ” 

ಪ್ರಶ್ನೆ: ಅಧ್ಯಾಪಕ ವೃತ್ತಿ ಹಾಗೂ ತಾಳಮದ್ದಳೆ ಅರ್ಥಗಾರಿಕೆಯನ್ನು ಸರಿದೂಗಿಸಿಕೊಂಡು ಹೋದದ್ದು ಹೇಗೆ?ಉತ್ತರ:  ಯಾವುದಾದರೂ ಒಂದನ್ನೇ ಸರಿಯಾಗಿ ಮಾಡಬೇಕು ಎನ್ನುವ ವಿಷಯ ನಿಜ. “jack of all trades, master of none” ಎಂದು ಆಂಗ್ಲ ಭಾಷೆಯಲ್ಲಿ ನುಡಿಯೊಂದಿದೆ.  ಆದರೂ ನನ್ನಲ್ಲಿ ಬಹುಮುಖ ಪ್ರತಿಭೆಯಿತ್ತು. ನನಗೆ ಬಾಲ್ಯದಲ್ಲಿ ತಾಯಿ ಸರಸ್ವತಿ ಅಮ್ಮ ಪುರಾಣ ಪುಣ್ಯ ಕಥೆಗಳನ್ನು ಹೇಳುತ್ತಿದ್ದಳು. ನಾವು ಪ್ರತಿದಿನವೂ ರಾಮಾಯಣ ಅಥವಾ ಮಹಾಭಾರತ ಅಥವಾ ಭಾಗವತ, ಜೈಮಿನಿ ಭಾರತಗಳ ಒಂದೊಂದು ಸಂಧಿಯನ್ನು ಮನೆಯಲ್ಲಿ ಸಂಜೆಯ ವೇಳೆಗೆ ಓದಬೇಕಿತ್ತು. ಇದರಿಂದಾಗಿ ನಮ್ಮ ಅರಿವಿಲ್ಲದಂತೆ ಒಂದು ಸಂಸ್ಕಾರ, ಪುರಾಣಗಳ ಬಗ್ಗೆ ಒಂದು ಅಭಿಮಾನ ನಮ್ಮಲ್ಲಿ ಬೆಳೆಯತೊಡಗಿತು. ನನ್ನ ಹುಟ್ಟೂರು ಚೊಕ್ಕಾಡಿ. ಅಲ್ಲಿಯ ಯಕ್ಷಗಾನದ ವಾತಾವರಣ ಇತ್ತು. ನಿರಂತರವಾಗಿ ತಾಳಮದ್ದಳೆಗಳು ನಡೆಯುತ್ತಿತ್ತು. ಅವುಗಳಿಗೆ ನಾನು ಹೋಗುತ್ತಿದ್ದೆ. ಸಣ್ಣ ವಯಸ್ಸಿನಲ್ಲಿಯೇ ನನಗೂ ಅರ್ಥ ಹೇಳುವ ಅವಕಾಶಗಳನ್ನು ಕೊಟ್ಟಿದ್ದರು. ನಾನೊಬ್ಬ ಅರ್ಥಧಾರಿ ಅಂತ ಅಲ್ಲ. ಇವನೂ ಕಲಿಯಲಿ ಎಂಬ ಉದಾರತೆಯಿಂದ.

ಅಲ್ಲಿ ಪುಟ್ಟಣ್ಣ ಗೌಡರ ಅರ್ಥವನ್ನು ಕೇಳಿದ ಮೇಲೆ ನಾನು ತಾಳಮದ್ದಲೆಯಿಂದ ಪ್ರಭಾವಿತನಾದೆ. ಅವರ ಭಾಷೆಯೂ ಸೊಗಸು, ನಿರೂಪಣೆಯೂ ಸೊಗಸು.  ದೇರಾಜೆ ಸೀತಾರಾಮಯ್ಯನವರು ರಸ, ಭಾವಗಳಿಗೆ ಪುಷ್ಟಿ ಕೊಟ್ಟು ಮಾತನಾಡುತ್ತಿದ್ದರು. ಚುಟುಕು ಚುಟುಕಾಗಿ ಚಟಾಕಿಗಳನ್ನು ಹಾರಿಸಿ ಮಾತನಾಡುವುದರಲ್ಲಿ ಅವರು ನಿಸ್ಸೀಮರು. ಈ ಎಲ್ಲ ಕೇಳಿದ ಅನುಭವದಿಂದ ನಾನು ತಾಳಮದ್ದಳೆಯಲ್ಲಿ ಆಸಕ್ತಿ ಹೊಂದಿದೆ. ಶಾಲಾ ವಾರ್ಷಿಕೋತ್ಸವದ ದಿನ ನಡೆಯುತ್ತಿದ್ದ ತಾಳಮದ್ದಳೆಯಲ್ಲಿ ಭಾಗವಹಿಸುವ ಸಂದರ್ಭ ಬಂತು. ಆರನೆಯ ತರಗತಿಯಲ್ಲಿರುವಾಗ ಸೀತಾಪಹಾರದ ಪ್ರಸಂಗದಲ್ಲಿ ರಾವಣನ ಎದುರಾಗಿ ಜಟಾಯುವಾಗಿ ಅರ್ಥ ಹೇಳಿದೆ. ‘ಎಲ್ಲಿಗೆ ಒಯ್ಯುವೆ ಸೀತೆಯ’ ಪದ್ಯಕ್ಕೆ ನನ್ನ ಅರ್ಥದ ಓಘಕ್ಕೆ ನನ್ನ ಪ್ರತಿಪಾತ್ರಧಾರಿಯಾಗಿದ್ದ ಸಹಪಾಠಿ ಅರ್ಥ ಹೇಳಲಾಗದೆ ಹತಪ್ರಭನಾದ. ಮಾತು  ಬರಲಿಲ್ಲ. ಆಮೇಲೆ ಹೇಗೋ ಬೇರೆಯವರ ಸಹಾಯದಿಂದ ಮುಂದುವರಿಯಿತು.

ಅಂತೂ ನಾನೂ ಅರ್ಥ ಹೇಳಿಯೇನು ಎಂಬ ಧೈರ್ಯ ನನಗೆ ಬಂತು. ನಂತರದ ದಿನಗಳಲ್ಲಿ ನಾನು ಅರ್ಥ ಹೇಳಲೋಸುಗ ಪ್ರಸಂಗ ಪುಸ್ತಕಗಳನ್ನು ಓದುತ್ತಿದ್ದೆ. ಯಾವ ಪುಸ್ತಕ ಸಿಕ್ಕಿದರೂ ಓದುವಂತಹಾ ಒಂದು ಅಭ್ಯಾಸ ಇತ್ತು. ವಿರಾಮದ ಸಮಯದಲ್ಲಿ ಗ್ರಂಥಾಲಯಗಳಲ್ಲಿ ಕಾಲ ಕಳೆಯುತ್ತಿದ್ದೆ. ರಾಮಾಯಣ, ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ ಇವುಗಳೆಲ್ಲ ನನಗೆ ಪ್ರಿಯವಾದ ಗ್ರಂಥಗಳು. ಅವುಗಳನ್ನೆಲ್ಲಾ ಓದುತ್ತಾ ಹೋದಂತೆ ಹಲವಾರು ಪದ್ಯಗಳು ಕಂಠಪಾಠವಾಗುತ್ತಿದ್ದುವು. ಉದ್ಯೋಗ ಪರ್ವದ ಭಾಗ ನನಗೆ ಇಷ್ಟವಾದ ಭಾಗ. ಅದರಲ್ಲೂ ಕೌರವನ ಪಾತ್ರವನ್ನು ಹೇಳುವುದಕ್ಕೆ ತುಂಬಾ ಇಷ್ಟ. ಕೌರವನು ದುಷ್ಟನೂ ಹೌದು. ಬುದ್ಧಿವಂತನೂ ಹೌದು. ದೈವಕೃಪೆಯನ್ನು ಕಳೆದುಕೊಂಡವನೂ ಹೌದು. ಛಲವಾದಿಯೂ ಹೌದು. ಛಲದೊಳ್ ದುರ್ಯೋಧನಂ ಎಂದು ಪಂಪ ಕವಿಯೇ ಹೇಳಿದ್ದಾನೆ. ಇಂತಹಾ ಪಾತ್ರಗಳ ಬಗ್ಗೆ ಆಸಕ್ತಿಯಿದ್ದ ನಾನು ಅವುಗಳನ್ನು ನೋಡುತ್ತಿದ್ದೆ. ಕೇಳುತ್ತಿದ್ದೆ.

ಹೀಗೆ ಆಟಗಳನ್ನು ನೋಡುತ್ತಾ ಸಂಸ್ಕಾರ ಮತ್ತು ಕಲಾಸಕ್ತಿ ಬೆಳೆಯಿತು. ನಾನು ಉದ್ಯೋಗ ರಂಗಕ್ಕೆ ಸೇರಿ ಅಧ್ಯಾಪಕನಾಗಿ ವೃತ್ತಿಯನ್ನು ಕೈಗೊಂಡ ಮೇಲೆ ವಿರಾಮದ ಸಮಯದಲ್ಲಿ ಕೂಟಗಳಿಗೆ ಹೋಗುತ್ತಿದ್ದೆ. ನನ್ನ ಕಲಾಪ್ರತಿಭೆಯನ್ನು ಕಂಡಂತಹ ಕಲಾಭಿಮಾನಿಗಳು ಕೂಟಗಳನ್ನು ಏರ್ಪಡಿಸುತ್ತಿದ್ದರು. ದೂರದ ಊರುಗಳಿಂದಲೂ ಆಮಂತ್ರಣಗಳು ಬರುತ್ತಿದ್ದುವು. ಕೆಲವೊಮ್ಮೆ ಅನಿವಾರ್ಯವಾಗಿ ರಜೆ ಹಾಕಿ ಹೋದದ್ದೂ ಉಂಟು. ಆ ರೀತಿ ನಾನು ವ್ಯವಸ್ಥೆ ಮಾಡಿಕೊಂಡು ಕಲೆಯಲ್ಲಿ ತೊಡಗಿಸಿಕೊಂಡಿದ್ದುದೇ ಹೊರತು ನನ್ನ ಉದ್ಯೋಗಕ್ಕೆ ನಾನು ವಂಚನೆಯನ್ನು ಮಾಡಲಿಲ್ಲ. ನಾನು ಶಿಕ್ಷೆಯಿಂದ ಶಿಕ್ಷಣ ಎನ್ನುವ ತತ್ವದವನಲ್ಲ. ಶಿಕ್ಷೆ ಎಂದರೆ ತಿದ್ದುವುದು ಮಾತ್ರ ಎಂದು ತಿಳಿದವನು.”

ಪ್ರಶ್ನೆ: ಅರ್ಥಗಾರಿಕೆಗೆ ಪೂರ್ವ ತಯಾರಿ ಮಾಡುವುದು ಹೇಗೆ?

ಉತ್ತರ: ಅದಕ್ಕೆ ಬೇಕಾದ ಸಾಕಷ್ಟು ತಯಾರಿ ನಮ್ಮಲ್ಲಿ ಇರಬೇಕಾಗುತ್ತದೆ. ಅದು ಸಹಜವಾಗಿಯೇ ಎಲ್ಲ ಕ್ಷೇತ್ರಗಳಲ್ಲಿಯೂ ಬೇಕಾಗುತ್ತದೆ. ಹಾಲನ್ನು ಕೊಡಬೇಕಾದರೆ ಹಸುಗಳು ಸಾಕಷ್ಟು ಮೇವನ್ನು ಮೇಯಬೇಕಾಗುತ್ತದೆ. ಅದೇ ರೀತಿ ಕಲಾಪ್ರದರ್ಶನ ಮಾಡಬೇಕಾದರೆ ಕಲಾವಿದ ಸಂಗ್ರಹ ಮಾಡಲೇ ಬೇಕಾಗುತ್ತದೆ. ಕೆಲವನ್ನು ಗ್ರಂಥಗಳಿಂದ, ಕೆಲವನ್ನು ಅನುಭವಿಗಳಿಂದ ಕೆಲವನ್ನು ಸ್ವಾನುಭವದಿಂದ ಆಸಕ್ತಿಯಿಂದ ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯತ್ನಪಟ್ಟಾಗ ನನ್ನ ಭಾಷಾ ಪ್ರಭುತ್ವಕ್ಕೆ ಸಹಕಾರಿಯಾದ ಅಂಶಗಳು ಸಿಕ್ಕಿದುವು. ನಾನು ಕನ್ನಡ ಭಾಷಾ ವಿದ್ವಾನ್ ಆಗಬೇಕೆಂದು ಪರೀಕ್ಷೆಗೆ ಓದಿದವನು.  ಆ ರೀತಿ ಪುರಾಣ ಪುಣ್ಯ ಕಥೆಗಳನ್ನು ಓದಿದಾಗ ಸಿಕ್ಕಿದಂತಹಾ ಅನುಭವ ನನ್ನ ಪ್ರದರ್ಶನಗಳಲ್ಲಿ ಹೊಸ ರೂಪದಿಂದ ಪ್ರಕಟವಾಗುತ್ತಾ ಇತ್ತು. ಜನ ಅದನ್ನು ಮೆಚ್ಚಿದರು. 

ಪ್ರಶ್ನೆ: ನಿಮಗೆ ಆದರ್ಶ ಕಲಾವಿದರು ಯಾರು?

ಉತ್ತರ: ನನಗೆ ಇಂತಹವರೇ ಆದರ್ಶ ಎಂದು  ಯಾರೂ ಇಲ್ಲ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಅರ್ಥವನ್ನು ಕೇಳಿ ಅದರಿಂದ ಬಹಳಷ್ಟು ಪ್ರಭಾವಿತರಾದವನು. ಮಾತ್ರವಲ್ಲದೆ ಒಂದೆರಡು ಬಾರಿ ಅವರ ಜೊತೆ ತಾಳಮದ್ದಳೆ ವೇದಿಕೆಯನ್ನೂ ಹಂಚಿಕೊಂಡವನು. ಅವರೆಲ್ಲಾ ಕಿರಿಯ ಕಲಾವಿದರ ಬೆಳವಣಿಗೆಗೆ ಅವಕಾಶ ಕೊಡುತ್ತಿದ್ದವರು. ಆಮೇಲೆ ನಾನು ಪ್ರಭಾವಿತನಾದದ್ದು ಪುಟ್ಟಣ್ಣ ಗೌಡರ ಮತ್ತು ಶೇಣಿ ಗೋಪಾಲಕೃಷ್ಣ ಭಟ್ಟರ ಪಾತ್ರಚಿತ್ರಣಗಳಿಂದ ಮಾತ್ರ. ಶೇಣಿಯವರಿಗೆ ಕೂಡಾ ನಮ್ಮ ಈ ಕಡೆಯ ಕೂಟಗಳಲ್ಲಿ ಯಾರಾದರೂ ಆಮಂತ್ರಣ ಮಾಡಿದರೆ ಅವರು ‘ಗಣಪಯ್ಯನವರಿಗೆ ಹೇಳಿ’ ಹೇಳುವಂತಹ ಅಭ್ಯಾಸ ಇತ್ತು. ಯಾಕೆ ಎಂದು ಅವರು ವಿವರಿಸಿ ಹೇಳಿದರಂತೆ.

”ಪಾತ್ರಗಳ ಹೃದಯವನ್ನು ತಿಳಿದು ಅದಕ್ಕೆ ಸರಿಯಾಗಿ ಅರ್ಥ ಹೇಳುವವರು ಗಣಪಯ್ಯನವರು ಮತ್ತು ಪ್ರತಿ ಪಾತ್ರಧಾರಿ ಏನನ್ನು ಹೇಳುತ್ತಾನೆ ಎನ್ನುವುದನ್ನು ಗುರುತಿಸಿ ಅದಕ್ಕೆ ಪೂರಕವಾಗಿ ಮಾತನಾಡುವವರು. ವ್ಯರ್ಥ ವಾದವನ್ನು ಮಾಡುವವರಲ್ಲ. ಆ ರೀತಿ ಮಾದರಿ ಅರ್ಥವನ್ನು ಹೇಳುವುದರಿಂದ ಅವರನ್ನು ಬರಲಿಕ್ಕೆ ಹೇಳಬೇಕು. ಅವರ ಅನುಭವ ಪ್ರದರ್ಶನ, ಪ್ರತಿಭೆ ಪ್ರಯೋಜನಕ್ಕೆ ಸಿಗಬೇಕಾದರೆ ಕೂಟಗಳಲ್ಲಿ ಅದಕ್ಕೆ ವೇದಿಕೆ ಸಿಗಬೇಕು” ಎಂದು ಶೇಣಿಯವರು ಹೇಳಿದ್ದರಂತೆ. ಹಾಗೆಯೆ ಪ್ರಸಿದ್ಧ ಕೂಟಗಳಲ್ಲಿ ಭಾಗವಹಿಸಲು ಆಮಂತ್ರಣ ಬರುತ್ತಿತ್ತು. ನಾನು ಚಿಕ್ಕಪುಟ್ಟ ಪಾತ್ರಗಳಲ್ಲಿ ಅರ್ಥ ಹೇಳುವ ಬಯಕೆ ವ್ಯಕ್ತಪಡಿಸುತ್ತಿದ್ದೆ. ಕೆಲವರಿಗೆ ಪ್ರಮುಖ ಪಾತ್ರಗಳಲ್ಲಿ ಅರ್ಥ ಹೇಳಿದರೆ ಮಾತ್ರ ಅವನು ಅರ್ಥಧಾರಿ ಅಥವಾ ಕಲಾವಿದ ಏನು ಭಾವಿಸುವ ಕ್ರಮ ಉಂಟೋ ಏನೋ? ನನಗೆ ಅಂತಹಾ ಭಾವನೆಗಳಿಲ್ಲ. ಆದರೆ ಹಲವಾರು ಕೂಟಗಳಲ್ಲಿ ಪ್ರಮುಖ ಪಾತ್ರಗಳು ಸಿಗುತ್ತಿತ್ತು.

ಆದರೆ ನಾನು ಪೋಷಕ ಪಾತ್ರಗಳನ್ನೂ ಚೆನ್ನಾಗಿ ಹೇಳಲು ಹೇಗೆ ಸಾಧ್ಯ ಎಂದು ಯೋಚಿಸುವವನು. ಹಾಗೆಯೆ ಟಿಕೆಟ್ ತಾಳಮದ್ದಳೆ ಪ್ರದರ್ಶನಗಳಲ್ಲಿಯೂ ನಾನು ಪೋಷಕ ಪಾತ್ರಗಳನ್ನೇ ಬಯಸಿದೆ. ಅದಕ್ಕೆ ಶ್ರಮ ಸ್ವಲ್ಪ ಕಡಿಮೆಯೆಂದು ತೋರಿದರೂ ಚಿಂತನೆ ಅಧ್ಯಯನದ ಅಗತ್ಯ ಕಡಿಮೆಯೇನಲ್ಲ. ಅಧ್ಯನಶೀಲತೆ ಮೊದಲಿನಿಂದಲೂ ಇದ್ದುದರಿಂದ ಅದನ್ನು ಮಾಡಿದ್ದೇನೆ.  ಯಶಸ್ವಿಯೂ ಆಗಿದ್ದೇನೆ. ಇದು ಅಚ್ಚುಕಟ್ಟು ಎಂದು ಜನ ಒಪ್ಪಿದ್ದಾರೆ. ಹೀಗೂ ಉಂಟಲ್ಲ, ಈ ರೀತಿಯೂ ಹೇಳಬಹುದಲ್ಲಾ ಎಂದು ಆಶ್ಚರ್ಯಪಟ್ಟವರೂ ಇದ್ದರು. ಇದು ಹಾಳು ಎಂದು ಹೇಳುವುದನ್ನು ಕೇಳಿದವನಲ್ಲ. ಮುಖಸ್ತುತಿಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಇದ್ದ ಹಾಗೆ ವಿಮರ್ಶೆ ಮಾಡುವುದನ್ನು ಮೆಚ್ಚುವವನು ಕೂಡಾ. 

ಪ್ರಶ್ನೆ: ಅನಾರೋಗ್ಯ ಕಾಡುತ್ತಿರುವಾಗಲೂ ನೀವು ಅರ್ಥ ಹೇಳಿದ್ದೀರೆಂದು ಕೇಳಿದ್ದೇನೆ. ಅದನ್ನು ತಿಳಿಸಬಹುದೇ?ಉತ್ತರ: ಖಂಡಿತಾ. ಅಗರಿ ಶ್ರೀನಿವಾಸ ಭಾಗವತರ ಹಾಡುಗಾರಿಕೆಯಲ್ಲಿ ಒಂದು ತಾಳಮದ್ದಳೆ ನಡೆದಿತ್ತು. ನಾನು ಆ ದಿನ ಆಮಂತ್ರಿತನಾದರೂ ಅನಾರೋಗ್ಯದಿಂದ ಕಂಗಾಲಾಗಿದ್ದರಿಂದ ಭಾಗವಹಿಸಲು ಆಗುವುದಿಲ್ಲ ಎಂದು ತಿಳಿಸಿದ್ದೆ. ಆದರೆ ಸಂಘಟಕರು ಬರಲೇಬೇಕು ಎಂದು ಒತ್ತಾಯಪೂರ್ವಕ ಹೇಳಿದ್ದರಿಂದ  ವೈದ್ಯರ ಅನುಮತಿಯನ್ನು ಪಡೆದು ಸಂಘಟಕರ ಒತ್ತಾಯದಿಂದ ಭಾಗವಹಿಸಿದ್ದೆ. ಆ ದಿನ ಭೀಷ್ಮಾರ್ಜುನ ‘ ಪ್ರಸಂಗ. ಶೇಣಿಯವರು ಆ ದಿನ ಬಂದಿದ್ದರು. ಕೂತುಕೊಂಡು ಕೈಲಾದಷ್ಟು ಅಂದರೆ ಎರಡು ಮಾತನಾಡಿ ಆಮೇಲೆ ಹೋಗಬಹುದು ಎಂದು ಶೇಣಿಯವರು ನನಗೆ ಸೂಚಿಸಿದ್ದರು.

ಭೀಷ್ಮನಿಗೆ ಸೇನಾಧಿಪತ್ಯ ವಹಿಸಿದ್ದರಿಂದ ಅಸಹನೆಯಿಂದ ಕೂಡಿದ ಕರ್ಣನು ‘ಹೊಂತಕಾರಿಗಳು ಇರುವಾಗ ಇಂತಹವರನ್ನು ಯುದ್ಧದ ಸೇನಾಧಿಪತಿಯನ್ನಾಗಿ ಮಾಡುವುದು ನಮಗೆ ಅವಮಾನ ಎಂದು ಹೇಳುವ ಒಂದು ಸನ್ನಿವೇಶ. ಇವರನ್ನು ಯುದ್ಧಕ್ಕೆ ಕಳಿಸಿ ಪಾಂಡವರಿಂದ ಕೊಲ್ಲಿಸುವುದು ನಮಗೆ ಮರ್ಯಾದೆಯೇ?’ ಎಂದು ಬಹಿರಂಗವಾಗಿ ಕರ್ಣ ಹೇಳುವುದು. ಇಲ್ಲಿ ಕರ್ಣನಿಗೆ ಕೆಲವು ಪದಗಳಿದ್ದರೂ ನಾನು ಅನಾರೋಗ್ಯದ ಕಾರಣದಿಂದ ಒಂದೇ ಪದ್ಯ ಸಾಕೆಂದು ಭಾಗವತರಲ್ಲಿ ಮೊದಲೇ ಬಿನ್ನವಿಸಿದ್ದೆ. ಅವರು ಆಗೇನೂ ಹೇಳಿರಲಿಲ್ಲ. ನಾನು ಮೊದಲನೇ ಪದ್ಯಕ್ಕೆ ಎಲ್ಲಾ ಅರ್ಥವನ್ನು ಹೇಳಿ ಮುಗಿಸಿದ್ದೆ. ಆದರೆ ನನ್ನ ಅರ್ಥವನ್ನು ಕೇಳಿದ ಅಗರಿಯವರು ಕರ್ಣನ ಪಾತ್ರಧಾರಿಯಾಗಿದ್ದ ನನಗೆ ಮೇಲೆ ಮೇಲೆ ಏಳು ಪದ್ಯಗಳನ್ನು ಕೊಟ್ಟರು. ಕೆಲವು ಪದ್ಯಗಳನ್ನು ರಚನೆ ಮಾಡಿ ಹೇಳಿದ್ದೂ ಇರಬಹುದು.

ಹೀಗೆ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವ ಸಾಮರ್ಥ್ಯ ಅಗರಿ ಭಾಗವತರಲ್ಲಿ ಇತರರಿಗಿಂತ ತುಂಬಾ ಹೆಚ್ಚಾಗಿತ್ತು. ನಾನು ಅರ್ಥ ಹೇಳದೆ ವಿಧಿಯಿರಲಿಲ್ಲ. ಹೇಳಿದೆ. ಆಮೇಲೆ ನನ್ನ ಅರ್ಥ ಮುಗಿದ ಕೂಡಲೇ ನಾನು ಮಲಗಿ ನಿದ್ರಿಸಿದೆ. ಬೆಳಗಿನ ಹೊತ್ತು ತಾಳಮದ್ದಳೆ ಮುಗಿದಾಗ ನಾನು ಅಗರಿ ಶ್ರೀನಿವಾಸ ಭಾಗವತರಲ್ಲಿ ಕೈ ಮುಗಿದು ಸೌಹಾರ್ದತೆಯಿಂದ “ಇಷ್ಟು ಪದ ಯಾಕೆ ಕೊಟ್ಟಿರಿ” ಎಂದು ನಗುತ್ತಾ ಕೇಳಿದೆ. ಅದಕ್ಕೆ ಅಗರಿಯವರು “ನಿಮ್ಮಂತಹಾ ಪ್ರತಿಭೆ, ಯೋಗ್ಯತೆ ಇರುವ ಅರ್ಥಧಾರಿಗಳಿಗೆ ಸರಿಯಾದ ಅವಕಾಶ ಮತ್ತು ಪದ್ಯಗಳನ್ನು ಹೇಳದಿದ್ದರೆ  ನಾವು ಭಾಗವತರಾಗಿ ಏನು ಪ್ರಯೋಜನ?” ಎಂದು ನಗುತ್ತಾ ಹೇಳಿದರು. ಆಮೇಲೆ ಹಲವಾರು ಕಡೆಗಳಲ್ಲಿ ಅಗರಿ ಶ್ರೀನಿವಾಸ ಭಾಗವತರ ಪದ್ಯಕ್ಕೆ ಅರ್ಥ ಹೇಳಿದ್ದೇನೆ.  

ಪ್ರಶ್ನೆ: ನಿಮ್ಮದು ಕಲೆಯ ಆಸಕ್ತಿ ಇರುವ ಕುಟುಂಬವೇ? 

ಉತ್ತರ: ಒಂದು ದೃಷ್ಟಿಯಲ್ಲಿ ನೋಡಿದರೆ ನಿಜವೇ.  ನಾನು ಶೇಣಿ ವೆಂಕಪ್ಪ ಭಟ್ಟ ಮತ್ತು ಸರಸ್ವತಿ ಅಮ್ಮ ಅವರ ಮಗ, ನನ್ನ ಅಜ್ಜನ ಮನೆ ಆನೆಕಾರ (ತಾಯಿಯ ತವರುಮನೆ). ನನ್ನ ಅಣ್ಣ ಕೆ.ವಿ. ಸುಬ್ರಾಯರು ತೆಂಕುತಿಟ್ಟಿನ ಉತ್ತಮ ವೇಷಧಾರಿಯಾಗಿ ಜನಪ್ರಿಯರಾದವರು.  ಚಿಕ್ಕಂದಿನಲ್ಲಿ ಅಣ್ಣ ಮತ್ತು ನಾನು ಆಟ ನೋಡಿ ಬಂದು ಹಾಳೆಯ ಆಯುಧ ಮತ್ತು ಕಿರೀಟಗಳನ್ನು ಮಾಡಿ ಕುಣಿಯುತ್ತಿದ್ದೆವು.  ಕೆ.ವಿ. ಸುಬ್ರಾಯರು ಪ್ರಬುದ್ಧ ವಯಸ್ಸಿಗೆ ಬಂದ ಮೇಲೆ ಖ್ಯಾತ ವೇಷಧಾರಿ ಕದ್ರಿ ವಿಷ್ಣು ಅವರಿಂದ ಅನುಭವ ಪಡೆದು ಆಮೇಲೆ ನಾಟ್ಯ ಕಲಿತು ಯಕ್ಷಗಾನ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದಿದ್ದರು. ನನ್ನ ತಂಗಿ ನಳಿನಾಕ್ಷಿಯ ಗಂಡ ಅಂದರೆ ನನ್ನ ಭಾವ ವಳಕ್ಕುಂಜ ನರಸಿಂಹ ಭಟ್ಟರು ಯಕ್ಷಗಾನ ಕಲಾವಿದರು. ನರಸಿಂಹ ಭಟ್ಟರ ಅಣ್ಣ ವಳಕ್ಕುಂಜ ಸುಬ್ರಹ್ಮಣ್ಯ ಭಟ್ಟರು ಕೂಡಾ ಯಕ್ಷಗಾನ ಕಲಾವಿದರು. ನಾನು ಕಲಾವಿದರ ಬಳಗದಲ್ಲೇ ಕಲಾವಿದರಾಗಿ ಬೆಳೆದವನು.  ಕಲಾವಿದ, ಉಪನ್ಯಾಸಕ ಗಣರಾಜ ಕುಂಬಳೆ ನನ್ನ ಸೋದರಳಿಯ ಅಂದರೆ ತಂಗಿಯ ಮಗ. ಶಾರದಾ, ನಳಿನಾಕ್ಷಿ, ವೆಂಕಟಲಕ್ಷ್ಮಿ ಮತ್ತು ಸಾವಿತ್ರಿ ಇವರು ನಾಲ್ವರು ನನ್ನ ಸಹೋದರಿಯರು. ನನ್ನ ಪತ್ನಿ  ಶ್ರೀಮತಿ ಸರಸ್ವತಿ ಸಂಗೀತ ಕಲಾವಿದೆ. ಮೊದಲು ಕಚೇರಿಯನ್ನೂ ನಡೆಸಿದ್ದಳು. ಆಮೇಲೆ ಗೃಹಕೃತ್ಯದ ಒತ್ತಡ ಇತರ ಕೆಲಸಗಳಿಂದ ಅವಳಿಗೆ ಸಂಗೀತದಲ್ಲಿ ಮುಂದುವರಿಯಲಾಗಲಿಲ್ಲ. 


ವಯೋಸಹಜ ಅನಾರೋಗ್ಯವಿದ್ದರೂ ಈಗಲೂ ಉತ್ಸಾಹಗಿಂದ ಮಾತನಾಡುವ ಕೆ.ವಿ. ಗಣಪಯ್ಯನವರು,  “ಎಷ್ಟೋ ಪ್ರಯೋಗಳನ್ನೂ ಯಕ್ಷಗಾನ ಕಂಡಿದೆ. ಆದರೆ ಈ ಪ್ರಯೋಗಗಳ ಅಲೆಯಲ್ಲಿ ಕಲೆ ತೇಲಿಕೊಂಡು ಬೇರೆ ಯಾವುದಾದರೂ ಕಡೆಗೆ ಹೋಗಿಬಿಡಬಹುದೋ ಎಂಬ ಭಯ ನನ್ನಂತಹಾ ವಯಸ್ಸಾದವರನ್ನು  ಕಾಡುತ್ತಿರುವುದು ಸುಳ್ಳಲ್ಲ. ಆದರೆ ಕಲಾಮಾತೆ ತನ್ನ ಅಕ್ಷಯ ಭಂಡಾರದಿಂದ ಒಂದೊಂದೇ ಮುತ್ತುಗಳನ್ನು ಹೊರಚೆಲ್ಲುತ್ತಾ ಕಲಾಪ್ರಪಂಚಕ್ಕೆ ನೀಡುತ್ತಾಳೆ. ಆದ ಕಾರಣ ಯಕ್ಷಗಾನ ಎನ್ನುವುದು ನಿರಂತರವಾಗಿ ಇರುತ್ತದೆ. ಜನಗಳಿಗೆ ಹೊಸತನ್ನು ಕೊಡಬೇಕೆಂಬ ಅಭಿಲಾಷೆಯಿದ್ದರೆ ಅದರ ಮೂಲ ಉದ್ದೇಶ ಏನು ಎಂಬ ಪ್ರಜ್ಞೆಯೂ ನಮ್ಮಲ್ಲಿ ಜಾಗೃತವಾಗಿರಬೇಕಾಗುತ್ತದೆ. ಸಂಸ್ಕಾರವನ್ನು ಸಮಾಜದಲ್ಲಿ ಸ್ಥಾಪನೆ ಮಾಡುವುದೇ ಈ ಕಲಾಪ್ರಾಕಾರದ ಮೂಲ ಉದ್ದೇಶ ಎಂದು ನಾನು ತಿಳಿದುಕೊಂಡಿದ್ದೇನೆ. ಆ ದೃಷ್ಟಿಯಿಂದಲೇ ನಾನು ಪ್ರದರ್ಶನವನ್ನು ಕೊಟ್ಟಿದ್ದೇನೆ. ಜನ ಅದನ್ನು ಒಪ್ಪಿದ್ದಾರೆ. ಮೆಚ್ಚಿ ಸ್ವೀಕರಿಸಿದ್ದಾರೆ. ಚಪ್ಪಾಳೆಗಾಗಿ ಎಂದು ಅರ್ಥ ಹೇಳಲಿಲ್ಲ. ಚಪ್ಪಾಳೆ ಅವರು ತಾನಾಗಿ ತಟ್ಟಿದ್ದಾರೆ. ಹೊಸತನ್ನು ಕೊಡಬೇಕೆಂಬ ತುಡಿತ ಕಲಾವಿದರಲ್ಲಿ ಉಂಟು. ಕಲೆಯು ಸ್ವಲ್ಪ ಮಟ್ಟಿಗೆ ವ್ಯಾಪಾರೀಕರಣವೂ ಆಗಿರುವುದರಿಂದ ಜನರಲ್ಲಿ ಆಕರ್ಷಣೆಯನ್ನು ಉಂಟುಮಾಡಲು ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ಆದರೆ ಎಲ್ಲವೂ ಹಿತ ಮಿತ ಆಗಿರಬೇಕು. ಅದೇ ಮುಖ್ಯ ಆಗಬಾರದು. ಹಿಂದೆ ಕಲೆಗೆ ಪ್ರೋತ್ಸಾಹ ಇತ್ತು. ಈಗ ಕಲೆಗಿಂತಲೂ ವ್ಯಕ್ತಿ ಪ್ರತಿಷ್ಠೆ ಎದ್ದು ಕಾಣುತ್ತಿದೆ. ಕಲಾವಿದ, ಶ್ರೋತೃ, ಸಂಘಟಕರು. ಹೀಗೆ ಎಲ್ಲರಿಂದಲೂ ಕಲೆಯ ಬೆಳವಣಿಗೆ ಆಗಬೇಕೇ ಹೊರತು ಕೇವಲ ಒಬ್ಬರು ಪ್ರಯತ್ನಿಸಿದರೆ ಸಾಧ್ಯವಿಲ್ಲ. ನಾವು ಹೇಳುವ ಅರ್ಥ ಕೇಳುವವರಿಗೆ ಹಿತವಾಗಿರಬೇಕು” ಎಂದು ಹೇಳುತ್ತಾರೆ. 

ಗಣಪಯ್ಯನವರ ಕೃಷ್ಣ ಸಂಧಾನದ ಕೌರವ, ಸಂಧಾನದ ಕೃಷ್ಣ, ರಾಜಸೂಯದ ಕೃಷ್ಣ, ಅಶ್ವಮೇಧದ ಕೃಷ್ಣ, ತಾಮ್ರಧ್ವಜ ಮೊದಲಾದ ಪಾತ್ರಗಳು ಆಗ ಜನಪ್ರಿಯ. ಪ್ರಶಸ್ತಿಗಳಿಗಾಗಿ ತಾನೇ ಸ್ವತಃ ಅರ್ಜಿ ಸಲ್ಲಿಸುವ ವಿಧಾನವು ಸರಿಯಲ್ಲ ಎಂದು ಪ್ರತಿಪಾದಿಸುವ ಕೆ. ವಿ. ಗಣಪಯ್ಯನವರು ಯಕ್ಷಗಾನ ಕಲಾರಂಗ, ಯಕ್ಷದೇವ ಬೆಳುವಾಯಿ ಸೇರಿದಂತೆ ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಲೇಖನ: ಮನಮೋಹನ್ ವಿ.ಎಸ್ 

RELATED ARTICLES

2 COMMENTS

  1. Yakshadeepa patrikege hardika dhanyavadagalu.
    Nanna gurugalada K.V.Ganappayyarannu parichayisiddakke.
    Nanage Kadaba high schoolinalli Hindi bhasheyannu kalisida gurugalu.
    Uttama shikshakaru.
    Valakkunja R.S. ravarige Thanks.

LEAVE A REPLY

Please enter your comment!
Please enter your name here

Most Popular

Recent Comments