Saturday, May 18, 2024
HomeUncategorizedಚೆಂಡೆ ಕೋಲುಗಳ ತಯಾರಕ ಶ್ರೀ ಶಿಮ್ಲಡ್ಕ ಗೋಪಾಲಕೃಷ್ಣ ಭಟ್ಟರು

ಚೆಂಡೆ ಕೋಲುಗಳ ತಯಾರಕ ಶ್ರೀ ಶಿಮ್ಲಡ್ಕ ಗೋಪಾಲಕೃಷ್ಣ ಭಟ್ಟರು

ಮಾನವ ಉದ್ಯೋಗ ನಿಮಿತ್ತನಾಗಿದ್ದರೆ ಆತನ ಕರ್ತವ್ಯದಲ್ಲಿ ನಿರತನಾಗಿದ್ದು ಇತರ ಯಾವುದೇ ಕೆಲಸಗಳಿಗೆ ಸಮಯವಿಲ್ಲ ಎನ್ನುವವರೇ ಹೆಚ್ಚು. ಇಂದಿನ ಒತ್ತಡದ ಜೀವನದ ನಡುವೆ ಹವ್ಯಾಸಕ್ಕಾಗಿ ಯಾವುದಾದರೂ ಕಲೆಯನ್ನು ಅಸ್ವಾದಿಸುವುದರಲ್ಲಿ ಅಥವಾ ಕಲಾವಿದನಾಗುವುದರಲ್ಲಿ ತಲ್ಲೀನರಾಗುತ್ತಿರುವವರ ಸಂಖ್ಯೆ ಬಹಳ ವಿರಳ. ಸಂಗೀತ, ಯಕ್ಷಗಾನ, ಹರಿಕಥೆಗಳಂತಹ ಕಲೆಗಳಲ್ಲಿ ತೊಡಗಿಕೊಳ್ಳುವವರು ಹಾಗೂ ಸಹೃದಯ ಕಲಾಸಕ್ತರೂ ಕಡಿಮೆಯಾಗುವುದನ್ನು ಕಾರ್ಯಕ್ರಮಗಳಲ್ಲಿ ಕಾಣುತ್ತಿದ್ದೇವೆ. ಇಂದಿನ ಎಲೆಕ್ಟ್ರಾನಿಕ್ ಯುಗದ ಆಧುನಿಕ ಜಗತ್ತಿನಲ್ಲಿ ಮನಸೆಳೆಯುವ ಅನೇಕ ಇತರೆ ಮಾಧ್ಯಮಗಳಾದ ಟಿ.ವಿ., ಮೊಬೈಲು, ವಾಟ್ಸಾಪ್, ಇಂಟರ್‍ನೆಟ್‍ಗಳ ಪರಿಣಾಮ ಇತರ ಹವ್ಯಾಸಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗಲು ಕಾರಣವಿರಲೂಬಹುದು. ಆದರೆ ಇದಕ್ಕಿಂತ ಭಿನ್ನವಾಗಿ ಇಲ್ಲೊಬ್ಬರು ಒಂದು ವಿಶೇಷ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ ಶ್ರೀಯುತ ಶಿಮ್ಲಡ್ಕ ಗೋಪಾಲಕೃಷ್ಣ ಭಟ್ಟರು.


ಮೂಲತಃ ಕೃಷಿಕರಾಗಿದ್ದ ಇವರು ಡಾಬರ್‍ಮನ್, ಬಾಕ್ಸರ್, ಆಲ್ಸೇಶಿಯನ್ ತಳಿಯ ನಾಯಿಗಳ ಸಾಕುವಿಕೆ ಹಾಗೂ ಅವುಗಳನ್ನು ತರಬೇತುಗೊಳಿಸುವುದರಲ್ಲೂ ತೊಡಗಿಸಿ ಕೊಂಡಿದ್ದವರು. ಅನೇಕ ಪ್ರದರ್ಶನಗಳಲ್ಲಿ ಇವರು ಸಾಕಿದ ನಾಯಿಗಳು ಬಹುಮಾನಗಳನ್ನೂ ಪಡೆದಿವೆ.

ಅಷ್ಟು ಮಾತ್ರವಲ್ಲದೆ ಯಕ್ಷಗಾನ ಕಲಾವಿದರೂ ಆಗಿರುವ ಇವರು ಹಲವು ತಾಳಮದ್ದಲೆ ಕೂಟಗಳಲ್ಲಿ ಅರ್ಥಗಾರಿಕೆಯನ್ನು ಮಾಡಿದ ಅನುಭವವನ್ನೂ ಹೊಂದಿದ್ದಾರೆ. ಇವರ ತಂದೆ ದಿ. ಶಿಮ್ಲಡ್ಕ ಶಂಭಟ್ಟರು ಖ್ಯಾತ ಅರ್ಥಧಾರಿ ಗಳಾಗಿದ್ದು, 50-60ರ ದಶಕದಲ್ಲಿ ರಾಕ್ಷಸ ಹಾಗೂ ಗಂಭೀರ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದವರು.


ಪ್ರಸ್ತುತ ಶ್ರೀ ಗೋಪಾಲಕೃಷ್ಣ ಭಟ್ಟರು ತಮ್ಮ 77ರ ಇಳಿವಯಸ್ಸಿನಲ್ಲಿ ಒಂದು ಉತ್ತಮ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದುವೇ ಚೆಂಡೆ ವಾದನದ ಕೋಲುಗಳ ತಯಾರಿಕೆ. ಇದು ಯಕ್ಷಲೋಕಕ್ಕೆ ಇವರ ಕೊಡುಗೆ ಎಂದರೂ ತಪ್ಪಾಗಲಾರದು. ಇದರೊಂದಿಗೆ ಜಾಗಟೆ ಕೋಲುಗಳನ್ನೂ ಇವರು ತಯಾರಿಸುತ್ತಿದ್ದಾರೆ. ಇಷ್ಟೇ ಆದರೆ ಇದರಲ್ಲೇನು ವಿಶೇಷ ಎಂಬ ಭಾವ ಮೂಡಲೂಬಹುದು. ಆದರೆ ಇವರು ಈ ಕೋಲುಗಳನ್ನು ತಯಾರಿಸುತ್ತಿರುವುದು ಯಂತ್ರಗಳ ಸಹಾಯವಿಲ್ಲದೆ ಕೈಯಿಂದಲೇ ಎನ್ನುವುದು ಇವರ ವಿಶೇಷತೆ; ಅಂದರೆ ಕತ್ತಿ, ಚೂರಿ ಹಾಗೂ ಪಾಲಿಷ್ ಪೇಪರ್‍ಗಳನ್ನು ಬಳಸಿ ಈ ಕೋಲುಗಳನ್ನು ತಯಾರಿಸುತ್ತಿರುವ ಇವರು ತಮ್ಮ ಬಿಡುವಿನ ಸಮಯದಲ್ಲಿ ಅತ್ಯಂತ ತಾಳ್ಮೆ ಹಾಗೂ ಶ್ರದ್ಧೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.


ಕೋಲುಗಳನ್ನು ತಯಾರಿಸಲು ದಾಸವಾಳ, ಪೇರಳೆ, ರೆಂಜೆ, ಅಕೇಶಿಯಾ, ಮಂದಾರ, ಹಲಸು ಮುಂತಾದವುಗಳ ರೆಂಬೆಗಳನ್ನು ಆಯ್ದು ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸುತ್ತಾರೆ. ನಂತರ ಅದನ್ನು ನಯ ಹಾಗೂ ನುಣುಪಾಗಿಸಲು ಇವರಿಗೆ ಕನಿಷ್ಠ 7-8 ತಾಸುಗಳೇ ಬೇಕಾಗುತ್ತವೆ.


ಅಳಿಯ ಚೆಂಡೆ ತರಗತಿಗೆ ಹೋಗಲು ಪ್ರಾರಂಭಿಸಿದಾಗ ಇಟ್ಟ ಬೇಡಿಕೆಯಂತೆ ಚೆಂಡೆ ವಾದನದ ಕೋಲುಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಕಲಾವಿದರ ಬೇಡಿಕೆಗೆ ಅನುಗುಣವಾಗಿ ಅದರಲ್ಲೂ ಚೆಂಡೆಯನ್ನು ಕಲಿಯುವವರಿಗಾಗಿ 9 ಇಂಚು, 12 ಇಂಚು ಉದ್ದದ ಕೋಲುಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಹಿಂದೊಮ್ಮೆ ಖ್ಯಾತ ಯಕ್ಷಗಾನ ಚೆಂಡೆವಾದಕರಲ್ಲೊಬ್ಬರಾದ ದಿ. ಕುದ್ರೆಕೂಡ್ಲು ರಾಮಭಟ್ಟರು ದಾಸವಾಳದ ರೆಂಬೆಯ ಕೋಲುಗಳಿಂದ ತಯಾರಿಸಲಾದ ಕೋಲುಗಳು ಹಗುರವಾಗಿದ್ದು ಚೆಂಡೆ ಬಾರಿಸಲು, ಉರುಳಿಕೆಗಳ ಮೂಲಕ ತಾಳ ಲಯಗಳನ್ನು ಕಂಡುಕೊಳ್ಳಲು ಸೂಕ್ತವಾಗಿವೆ ಎಂದು ಹೇಳಿದ ಮಾತುಗಳನ್ನು ಆಧರಿಸಿ ತಯಾರಿಕೆಯ ಕಾಯಕದಲ್ಲಿ ತೊಡಗಿಸಿಕೊಂಡ ಇವರು ಇಂದು ಸುಮಾರು 40-50 ಜೊತೆ ಕೋಲುಗಳನ್ನು ತಯಾರುಮಾಡಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಈ ಕೋಲುಗಳಿಗೆ 300ರಿಂದ 400 ರೂಪಾಯಿ ಕ್ರಯ ಹೇಳುವ ಇವರಿಗೆ ಈ ಕೋಲುಗಳ ಮೂಲಕ ಸಂಪಾದನೆ ಬಹಳವಿಲ್ಲ. ಈ ಮೌಲ್ಯ ತನ್ನ ಸಂತೋಷಕ್ಕಾಗಿ ಈ ಕಾಯಕದಲ್ಲಿ ತೊಡಗಿಕೊಂಡಿರುವ ಇವರ ತಯಾರಿಕೆಗೆ ಸಲ್ಲುವ ಗೌರವಧನವೇ ಹೊರತು ಶ್ರಮಕ್ಕೆ ತಕ್ಕ ಮೌಲ್ಯವಲ್ಲ.

ಪ್ರಸ್ತುತ ವಿಟ್ಲದ ಬಸವಗುಡಿಯ ಸಮೀಪ ನೆಲೆಸಿರುವ ಶ್ರೀಯುತರದು ಪತ್ನಿ ಶ್ರೀಮತಿ ಸುಶೀಲ, ಮಗಳು ಮೈತ್ರಿ ಭಟ್ಟ, ಅಳಿಯ ಶ್ರೀ ರವಿಶಂಕರ ಕುಳಮರ್ವ ಹಾಗೂ ಮೊಮ್ಮಕ್ಕಳಾದ ಮಹಿಮಾ ಮತ್ತು ಮನಸ್ವಿಯವರೊಂದಿಗೆ ಸಂತೃಪ್ತ ಜೀವನ.
ಕಲಾವಿದರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವ ಇವರು ಲಭ್ಯವಿದ್ದರೆ ನೀಲಗಿರಿ ಮರದ ಕೋಲನ್ನೂ ತಯಾರಿಸಬಹುದು ಎನ್ನುತ್ತಿದ್ದು, ಈಗಲೂ ಕೆಲವೊಮ್ಮೆ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದಾರೆ. ಕೃಷಿಕರಾಗಿದ್ದಾಗ ಬೆಳ್ತಂಗಡಿ, ಗುರುವಾಯನಕೆರೆ, ನಾಳ ಸುತ್ತಮುತ್ತ ಬಿಡುವಿಲ್ಲದ ಅರ್ಥಧಾರಿಯಾಗಿದ್ದ ಇವರು ಪ್ರಸ್ತುತ ಚೆಂಡೆಕೋಲು ತಯಾರಿಕೆಯ ಮೂಲಕ ಯಕ್ಷಮಾತೆಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂತಹ ಅಪರೂಪದ ಕಾಯಕದಲ್ಲಿ ತೊಡಗಿ ಕೊಂಡಿರುವ ಶ್ರೀಯುತರ ಈ ಸೇವೆ ಯಕ್ಷಮಾತೆಯ ಮಕುಟಮಣಿಯಾಗಲಿ ಎಂದು ಹಾರೈಸೋಣ…. (ಸಂಪರ್ಕಕ್ಕಾಗಿ : 9483286958)

ಲೇಖಕ: ಸದಭಿರುಚಿ ವಿಟ್ಲ (ಶಂಕರ ಕುಳಮರ್ವ)
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments