Saturday, January 18, 2025
Homeಯಕ್ಷಗಾನಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನದ ಕಲ್ಪನಾ - ಕಾಡ ‘ಮಲ್ಲಿಗೆ’ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ...

ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನದ ಕಲ್ಪನಾ – ಕಾಡ ‘ಮಲ್ಲಿಗೆ’ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ನಿಧನ

ಯಕ್ಷಗಾನ ಕ್ಷೇತ್ರ ಕಂಡ ಹಿರಿಯ ವೇಷಧಾರಿ ಬೆಳ್ಳಾರೆ ವಿಶ್ವನಾಥ  ಇಂದು ಬೆಳಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸಾಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕವನ್ನು ತ್ಯಜಿಸಿದರು. ಬೆಳ್ಳಾರೆ ವಿಶ್ವನಾಥ ರೈಯವರು ತನ್ನ ಕಲಾಯಾನದಲ್ಲಿ ಸಾಗಿಬಂದ ಹಾದಿ ದುರ್ಗಮವಾದದ್ದು. ಅದನ್ನು ದಾಟಿ ಬಂದು ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಮೆರೆದುದು ಸಣ್ಣ ಸಾಧನೆಯೇನಲ್ಲ. ಅವರ ಕಲಾಜೀವನದ ಸಂಪೂರ್ಣ ಪರಿಚಯ ಇಲ್ಲಿದೆ. 

ಶ್ರೀ ಕೆ. ವಿಶ್ವನಾಥ ರೈಗಳು 28-02-1951 ರಂದು ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಕಾವಿನಮೂಲೆ ಎಂಬಲ್ಲಿ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ದಂಪತಿಗಳಿಗೆ ಮಗನಾಗಿ ಜನಿಸಿದರು. ಬೆಳ್ಳಾರೆ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದವರು. ತುಳುನಾಡಿನ ಜನರು ದೈವಭಕ್ತರು, ಭೂತಾರಾಧಕರೂ ಹೌದಷ್ಟೆ. ದೈವಗಳ ಕುಣಿತವನ್ನು ನೋಡಿ ಮನೆಗೆ ಬಂದು ವಿಶ್ವನಾಥ ರೈಗಳು ಹಾಗೇ ಕುಣಿಯುತ್ತಿದ್ದರಂತೆ. ಅದನ್ನು ನೋಡಿದ ಅವರ ತಾಯಿ ಹುಡುಗನಿಗೆ ಆಟದ ಹುಚ್ಚು ಜೋರಿದೆ ಎನ್ನುತ್ತಿದ್ದರಂತೆ.

ಶಾಲಾ ವಿದ್ಯಾರ್ಥಿಯಾಗಿರುವಾಗಲೇ ವಿಶ್ವನಾಥ ರೈಗಳು ಆ ಕಾಲದಲ್ಲಿ ಖ್ಯಾತ ಕಲಾವಿದರಾಗಿದ್ದ ಬೆಳ್ಳಾರೆ ಅಚ್ಯುತ ಮಣಿಯಾಣಿ (ಅಗಲ್ಪಾಡಿ)ಯವರಿಂದ ಯಕ್ಷಗಾನ ನಾಟ್ಯವನ್ನು ಕಲಿತರು. ತನ್ನ 9ನೇ ವರ್ಷದಲ್ಲಿ ರಂಗಪ್ರವೇಶ ಮಾಡಿ, ಕರ್ನಾಟಕ ಮೇಳದಲ್ಲಿ ಬಾಲಕಲಾವಿದನಾಗಿ ಕಲಾವ್ಯವಸಾಯವನ್ನು ಆರಂಭಿಸಿದರು. ಇವರಿಗೆ 10ನೇ ವರುಷ ಪೂರ್ತಿಯಾದಾಗ 4 ತಿಂಗಳ ಮೇಳದ ತಿರುಗಾಟವನ್ನೂ ಪೂರೈಸಿಯಾಗಿತ್ತು!

ಶ್ರೀ ಬೆಳ್ಳಾರೆ ವಿಶ್ವನಾಥ ರೈಗಳು ಕರ್ನಾಟಕ ಮೇಳದಲ್ಲಿ ಬಾಲಕಲಾವಿದನಾಗಿ ಕಳೆದ ದಿನಗಳನ್ನು ಈಗಲೂ ನೆನಪಿಸುತ್ತಾರೆ. ಶ್ರೀ ಕಲ್ಲಾಡಿ ವಿಠಲ ಶೆಟ್ಟರು ನನಗೆ ಅನ್ನದಾತರು. ಪ್ರಾಣದಾತರೂ ಹೌದು. ಚಿಕ್ಕ ಹುಡುಗನಾಗಿದ್ದಾಗ ಅನಾರೋಗ್ಯದಿಂದಾಗಿ ಕಂಕನಾಡಿ ಆಸ್ಪತ್ರೆಯಲ್ಲಿ 21 ದಿನ ಮಲಗಿದ್ದೆ. ಡಾ| ಮೋದಿಯವರಿಂದ ಚಿಕಿತ್ಸೆ ಕೊಡಿಸಿ, ವೇಷ ಮಾಡದಿದ್ದರೂ ಸಂಬಳವನ್ನು ನೀಡಿದರು. ನಾನು ಭರತನಾಟ್ಯವನ್ನು ಕಲಿಯಲೂ ಅವರೇ ಪ್ರೇರಕರು. ಯಾವತ್ತೂ ಮರೆಯಲಾರೆ ಎಂದು ರೈಗಳು ತನ್ನ ಯಜಮಾನರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಶ್ರೀ ಕೇಶವ ಮಾಸ್ತರರಿಂದಲೂ ಬೆಳ್ಳಾರೆಯವರು ನಾಟ್ಯ ಕಲಿತಿದ್ದರು.

ಕರ್ನಾಟಕ ಮೇಳದಲ್ಲಿ ಆಗ ಸೀನ್ ಸೀನರಿ ಪ್ರದರ್ಶನಗಳು ನಡೆಯುತ್ತಿತ್ತು. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವ. ಮೇಳವು ಕಿಕ್ಕಿರಿದ ಪ್ರೇಕ್ಷಕರಿಂದ ವಿಜೃಂಭಿಸುತ್ತಿದ್ದ ಕಾಲ. ಬೆಳ್ಳಾರೆಯವರು ಯಕ್ಷಗಾನ ಇತಿಹಾಸದಲ್ಲಿ ಮೊದಲ ಬಾರಿಗೆ ಕೌಪೀನಧಾರಿಯಾಗಿ ಹಲವು ಪಾತ್ರಗಳನ್ನು ನಿರ್ವಹಿಸಿದರು. ಸನತ್ಕುಮಾರರ ಪಾತ್ರಗಳಲ್ಲಿ (4 ಮಂದಿ) ಇವರೊಂದಿಗೆ ಕೌಪೀನಧಾರಿಯಾಗಿ ಕಾಣಿಸಿಕೊಂಡವರು ಪೆರುವಾಯಿ ನಾರಾಯಣ ಶೆಟ್ಟಿ, ಬಾಯಾರು ರಘುನಾಥ ಶೆಟ್ಟಿ ಮತ್ತು ಪದ್ಮನಾಭ ಶೆಟ್ಟಿ. ಬೆಳ್ಳಾರೆಯವರು ಕೌಪೀನಧಾರಿಯಾಗಿ ಅಭಿನಯಿಸಿದ ಪಾತ್ರಗಳು- ಕೋರ್ದಬ್ಬು ಬಾರಗ ಪ್ರಸಂಗದ ಬಬ್ಬು- ಕೋಳಿಗಳನ್ನು ಕಲ್ಲೆಸೆದು ಕೊಂದು ಮತ್ತೆ ಬದುಕಿಸುವ ಪಾತ್ರ. ಕಾಳಿಂಗ ಮರ್ಧನ ಪ್ರಸಂಗದ ಶ್ರೀಕೃಷ್ಣ. ತುಳುನಾಡ ಸಿರಿ ಪ್ರಸಂಗದ ಕುಮಾರ. ದುಷ್ಯಂತ ಚರಿತ್ರೆಯ ಸರ್ವದಮನ. ಆಗ ಅಳಿಕೆ ರಾಮಯ್ಯ ರೈಗಳು ದುಷ್ಯಂತನಾಗಿಯೂ, ಮಂಕುಡೆಯವರು ಶಕುಂತಳೆಯಾಗಿಯೂ ಅಭಿನಯಿಸುತ್ತಿದ್ದರು.

ನಾರಂಪಾಡಿ ಸುಬ್ಬಯ್ಯ ಶೆಟ್ರು ಪ್ರತಿ ವೇಷಕ್ಕೂ ಇವರಿಗೆ ಸಂಭಾಷಣೆಗಳನ್ನು ಬರೆದು ಕೊಡುತ್ತಿದ್ದರಂತೆ. ಬೋಳಾರ ನಾರಾಯಣ ಶೆಟ್ಟರು ಏ… ಬೆಳ್ಳಾರೆ ಇಲ್ಲಿ ಬಾ ಎಂದು ಕರೆದು ಕರೆದು ಕೆ. ವಿಶ್ವನಾಥ ರೈಗಳಿಗೆ ಬೆಳ್ಳಾರೆ ವಿಶ್ವನಾಥ ರೈ ಎಂಬ ಹೆಸರು ಖಾಯಂ ಆಯಿತು. ತುಳು ಪ್ರಸಂಗಗಳ ಜತೆ ಪುರಾಣ ಪ್ರಸಂಗಗಳ ಅನುಭವವನ್ನೂ ಕರ್ನಾಟಕ ಮೇಳದಲ್ಲಿ ರೈಗಳು ಪಡೆದು ಕೊಂಡರು. ಪ್ರಹ್ಲಾದ, ಲೋಹಿತಾಶ್ವ, ಶ್ರೀಕೃಷ್ಣ ಮೊದಲಾದ ಪಾತ್ರಗಳನ್ನು ಬಾಲಕಲಾವಿದನಾಗಿರುವಾಗ ಮಾಡುವ ಅವಕಾಶ ಸಿಕ್ಕಿತು. 6ನೇ ತಿರುಗಾಟಕ್ಕೆ ಮಂಗಳೂರು ನೆಹರೂ ಮೈದಾನದಲ್ಲಿ ಕರ್ನಾಟಕ ಮತ್ತು ಕಟೀಲು ಮೇಳಗಳ ನಡುವೆ ನಡೆದ ಜೋಡಾಟದಲ್ಲೂ ಭಾಗವಹಿಸಿದರು. ಬಭ್ರುವಾಹನ ಕಾಳಗದಲ್ಲಿ ಅರ್ಜುನನ ಬಲಗಳಲ್ಲಿ ಒಬ್ಬನಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮತ್ತು ಪೊಳಲಿ ರಾಜರಾಜೇಶ್ವರೀ ಮೇಳಗಳ ನಡುವೆ ನಡೆದ ಅನೇಕ ಜೋಡಾಟಗಳಲ್ಲೂ ರೈಗಳು ಭಾಗವಹಿಸಿದ್ದರು.


                     ಶ್ರೇಷ್ಠ ಭಾಗವತರಾದ ಶ್ರೀ ದಾಮೋದರ ಮಂಡೆಚ್ಚರು, ಕರ್ನಾಟಕ ಮೇಳದಲ್ಲಿ ಬಾಲ ಕಲಾವಿದನಾಗಿರುವಾಗ ಬೆಳ್ಳಾರೆಯವರನ್ನು ‘ಕಲ್ಪನಾ’ ಎಂದು ಕರೆಯುತ್ತಿದ್ದರಂತೆ. ಯಾಕೆಂದು ಕೇಳಿದರೆ, ಕಲ್ಪನಾಳ (ಖ್ಯಾತ ನಟಿ) ಮುಖಕ್ಕಿಂತಲೂ ಅಭಿನಯ ಚಂದ. ಹಾಗಾಗಿ ಕಲ್ಪನಾ ಎಂದು ಕರೆಯುವುದು ಎಂದು ಶ್ರೀ ಮಂಡೆಚ್ಚರು ಹೇಳುತ್ತಿದ್ದರಂತೆ. ಪರಮ ಸಾತ್ವಿಕರಾದ ಅವರು ದೇವರಿಗೆ ಸಮಾನರು ಎಂದು ಬೆಳ್ಳಾರೆಯವರು ಹೇಳುತ್ತಿದ್ದರು.

ಕರ್ನಾಟಕ ಮೇಳದಲ್ಲಿ ದಾಮೋದರ ಮಂಡೆಚ್ಚರು, ದಿನೇಶ ಅಮ್ಮಣ್ಣಾಯರು, ಕಾಸರಗೋಡು ವೆಂಕಟರಮಣ, ಬೋಳಾರ ನಾರಾಯಣ ಶೆಟ್ಟರು, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಅಳಿಕೆ ರಾಮಯ್ಯ ರೈ, ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಎನ್. ಮಾಧವ ಶೆಟ್ಟಿ, ಮಂಕುಡೆ ಸಂಜೀವ ಶೆಟ್ಟಿ, ಮೂಡುಬಿದಿರೆ ಕೃಷ್ಣ ರಾವ್, ಕರ್ನೂರು ಕೊರಗಪ್ಪ ರೈ, ಅರುವ ಕೊರಗಪ್ಪ ಶೆಟ್ಟಿ, ಮಿಜಾರು ಅಣ್ಣಪ್ಪ ಹಾಸ್ಯಗಾರ, ಅಳಿಕೆ ಲಕ್ಷ್ಮಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಸಂಜಯ ಕುಮಾರ್ ಮೊದಲಾದ ಕಲಾವಿದರ ಒಡನಾಡಿಯಾಗಿ ಕಲಾಸೇವೆ ಮಾಡಿದ ಬೆಳ್ಳಾರೆಯವರು, ಇವರೆಲ್ಲರೂ ನಾನು ಕಲಾವಿದನಾಗಿ ಬೆಳೆಯಲು ಕಾರಣರು ಎಂದು ಹೇಳುತ್ತಿದ್ದರು. 

ನಿರಂತರ 33 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ, ಬಳಿಕ 1 ವರ್ಷ ಮಧೂರು ಮೇಳದಲ್ಲಿ, ಮತ್ತೆರಡು ವರ್ಷ ಕರ್ನಾಟಕ ಮೇಳದಲ್ಲಿ ಮತ್ತೆ 5 ವರ್ಷ ಸುರತ್ಕಲ್ಲು ಮೇಳದಲ್ಲಿ ತಿರುಗಾಟ ನಡೆಸಿದರು. ನಂತರ ಡಿ. ಮನೋಹರ ಕುಮಾರ್ ಸಂಚಾಲಕತ್ವದ ಕದ್ರಿಯಲ್ಲಿ, ಬಳಿಕ ಬಪ್ಪನಾಡು ಕುಂಟಾರು, ಎಡನೀರು, ಕಟೀಲು (5 ವರ್ಷ) ಹೀಗೆ 58 ವರ್ಷಕ್ಕಿಂತಲೂ ಹೆಚ್ಚು ಕಾಲ ಇವರು ಕಲಾಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ. ಸುರತ್ಕಲ್ಲು ಮೇಳದಲ್ಲಿ ಅಗರಿ ಭಾಗವತರು, ಶ್ರೀ ಶೇಣಿ, ತೆಕ್ಕಟ್ಟೆ ಮೊದಲಾದವರ ಒಡನಾಟ ವಿಶಿಷ್ಟ ಅನುಭವ ಎಂದು ಬೆಳ್ಳಾರೆ ವಿಶ್ವನಾಥ ರೈಗಳು ಹೇಳುತ್ತಿದ್ದರು. 


                               ಬೆಳ್ಳಾರೆ ವಿಶ್ವನಾಥ ರೈಗಳಿಗೆ ಪ್ರಸಿದ್ಧಿಯನ್ನು ತಂದುಕೊಟ್ಟ ಪಾತ್ರಗಳು : ಮತ್ತೂರ ಬೀರೆ ಪ್ರಸಂಗದ ಮತ್ತೂರೆ. ಬಿರುವ ಬೀರೆ ಬೊಳ್ಳ ಬೈದ್ಯೆ ಪ್ರಸಂಗದ ಬೊಳ್ಳ ಬೈದ್ಯೆ. ಕಾಂಚನಗಂಗೆಯ ಕಾಂಚನ, ಮಗಳೆನ ಮದಿಪು ಪ್ರಸಂಗದ ಗಂಗಾಂಬೆ ಮತ್ತು ಚಿನ್ನಾಂಬೆ ಪಾತ್ರಗಳು. ಅಕ್ಷಯಾಂಬರ ವಿಲಾಸದ ವಿಕರ್ಣ. ನಳದಮಯಂತಿ ಪ್ರಸಂಗದಲ್ಲಿ ದಮಯಂತಿ ಮತ್ತು ನಳ. ಹರಿಶ್ಚಂದ್ರ ಪ್ರಸಂಗದಲ್ಲಿ ಲೋಹಿತಾಶ್ವ ಮತ್ತು ಚಂದ್ರಮತಿ. ಕಾಡಮಲ್ಲಿಗೆ ಪ್ರಸಂಗದ ಮಲ್ಲಿಗೆ ಇವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಅರುವ ಕೊರಗಪ್ಪ ಶೆಟ್ರು ಮತ್ತು ಬೆಳ್ಳಾರೆ ಜೋಡಿ ಆ ಪ್ರಸಂಗದಲ್ಲಿ ಮೆರೆದ ವಿಚಾರ ಎಲ್ಲರಿಗೂ ತಿಳಿದಿದೆ. ಕದ್ರಿ ಮೇಳದಲ್ಲಿ ಡಿ. ಮನೋಹರ ಕುಮಾರ್ ಮತ್ತು ಬೆಳ್ಳಾರೆ ವಿಶ್ವನಾಥ ರೈ ಜೋಡಿ ಕೂಡಾ ಹಲವು ತುಳು ಪ್ರಸಂಗಗಳಲ್ಲಿ ರಂಜಿಸಿತ್ತು. ಬೆಳ್ಳಾರೆಯವರ ಮಲ್ಲಿಗೆ ಪಾತ್ರವನ್ನು ನೋಡಿದ ಖ್ಯಾತ ಕವಿಗಳಾದ ಕಯ್ಯಾರ ಕಿಞ್ಞಣ್ಣ ರೈಗಳವರು ಒಂದು ಪತ್ರವನ್ನು ಮತ್ತು 40 ರೂಪಾಯಿಗಳನ್ನು ಬೆಳ್ಳಾರೆಯವರ ಮನೆಗೆ ಕಳುಹಿಸಿ ಕೊಟ್ಟಿದ್ದರಂತೆ. ಆ ಪತ್ರವನ್ನು ಬೆಳ್ಳಾರೆ ವಿಶ್ವನಾಥ ರೈಗಳು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.


                            ಪ್ರಮೀಳೆ, ಶಶಿಪ್ರಭೆ ಮೊದಲಾದ ಕಸೆ ಸ್ತ್ರೀವೇಷಗಳಲ್ಲೂ ರಂಜಿಸಿದ ಇವರು ಮಾನಿಷಾದ ಪ್ರಸಂಗದ ಸೀತೆ ಮೊದಲಾದ ಸ್ತ್ರೀಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಬಾಲ ಕಲಾವಿದನಾಗಿದ್ದಾಗ ಕುಶಲವರು, ಸೀತಾ ಕಲ್ಯಾಣದ ರಾಮಲಕ್ಷ್ಮಣರ ವೇಷಗಳಲ್ಲೂ ರಂಜಿಸಿದರು. ಕೆಲವೊಮ್ಮೆ ಕಲಾವಿದರು ತಾನು ನಿರೀಕ್ಷಿಸದ, ಮಾಡದೇ ಇದ್ದ ಪಾತ್ರವನ್ನೂ ಅನಿವಾರ್ಯವಾಗಿ ಮಾಡಬೇಕಾಗಿ ಬರುತ್ತದೆ. ಹರಿಶ್ಚಂದ್ರ ಪ್ರಸಂಗದಲ್ಲಿ ಶೇಣಿಯವರ ವಿಶ್ವಾಮಿತ್ರನಿಗೆ ವಸಿಷ್ಠನಾಗಿ, ಕಚದೇವಯಾನಿ ಪ್ರಸಂಗದಲ್ಲಿ ಶೇಣಿಯವರ ಶುಕ್ರಾಚಾರ್ಯನೊಂದಿಗೆ ಕಚನಾಗಿಯೂ ಬೆಳ್ಳಾರೆಯವರು ಅಭಿನಯಿಸಿದ್ದರು. ಶೇಣಿಯವರೇ ನನ್ನನ್ನು ಕರೆದು ವೇಷ ಮಾಡಲು ಹೇಳಿದರು. ನಾನು ಹೆದರಿದ್ದೆ. ಅದನ್ನು ತಿಳಿದ ಅವರು ಹೆದರಬೇಡ. ನಾನಿದ್ದೇನೆ. ವೇಷ ಮಾಡು ಎಂದರು. ಅಂದವಾಗಿ ಹೇಳಿಯೂ ಕೊಟ್ಟರು. ರಂಗದಲ್ಲಿ ತಾನು ಮೆರೆಯುತ್ತಾ ನನ್ನನ್ನೂ ಮೆರೆಸಿದರು. ಅಂದು ಮಂಟಪ ಪ್ರಭಾಕರ ಉಪಾಧ್ಯಾಯರು ದೇವಯಾನಿಯಾಗಿ ಅಭಿನಯಿಸಿದ್ದರು ಎಂದು ಬೆಳ್ಳಾರೆ ವಿಶ್ವನಾಥ ರೈಗಳು ಹೇಳುತ್ತಿದ್ದರು.


                    ಬೆಳ್ಳಾರೆಯವರು ಮೆರೆದ ಪಾತ್ರಗಳು ಅನೇಕ. ಪಟ್ಟದ ಪೆರುಮಳೆ ಪ್ರಸಂಗದ ಕೇಮರೆ. ಸಂಜಯ ಕುಮಾರರ ಜತೆ. ಅವರದು ಕೇಮರನ ಅಕ್ಕನ ಪಾತ್ರ. ಭಾವನಾತ್ಮಕ ಸನ್ನಿವೇಷ. ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಪ್ರಸಂಗವು ಮೆರೆದಿತ್ತು. ಕಾಡಮಲ್ಲಿಗೆ – ಮಲ್ಲಿಗೆ. ಅರುವ ಕೊರಗಪ್ಪ ಶೆಟ್ರ ಬೀರಣ್ಣೆ. ತುಳುನಾಡ ಬಲಿಯೇಂದ್ರೆ – ವಾಮನ. (ಪೂಕಳದವರ ಬಲಿ ಮತ್ತು ಪುತ್ತಿಗೆ ಕುಮಾರ ಗೌಡರ ಶುಕ್ರಾಚಾರ್ಯ) ಕಡಲಕಾಮಿನಿ ಪ್ರಸಂಗದಲ್ಲಿ ಡಿ. ಮನೋಹರ ಕುಮಾರರೂ ಬೆಳ್ಳಾರೆಯವರೂ ಅಣ್ಣ ತಮ್ಮಂದಿರ ಪಾತ್ರಗಳಲ್ಲಿ ರಂಜಿಸಿದ್ದರು. ತಿರುಮಲೆದ ತೀರ್ಥ ಪ್ರಸಂಗದಲ್ಲಿ ಡಿ. ಮನೋಹರರು ಮತ್ತು ಬೆಳ್ಳಾರೆಯವರ ಅಮೋಘ ಅಭಿನಯ ನೀಡಿದ್ದರು. ಅನೇಕ ಸನ್ಮಾನ, ಪ್ರಶಸ್ತಿಗಳನ್ನು ಪಡೆದ ಬೆಳ್ಳಾರೆ ವಿಶ್ವನಾಥ ರೈಗಳ ಪತ್ನಿ ಕುಸುಮಾವತಿ, ಮಧುಚಂದ್ರ ಮತ್ತು ರವಿಚಂದ್ರ ಪುತ್ರರು. ಪುತ್ರಿ ಮಮತಾ.

ಬೆಳ್ಳಾರೆ ವಿಶ್ವನಾಥ ರೈಗಳು ಇಂದು ನಮ್ಮೊಂದಿಗಿಲ್ಲ ಎನ್ನುವುದು ನಂಬಲು ಕಷ್ಟಸಾಧ್ಯ. ಅವರ ಕುಟುಂಬಸ್ಥರಿಗೂ ಕಲಾಭಿಮಾನಿಗಳಿಗೂ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಸುತ್ತೇನೆ. 

ಲೇಖನ : ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments