ಮುಂಬೈ ಯಕ್ಷಗಾನ ಕಲಾವಲಯದಲ್ಲಿ ‘ಅಜೆಕಾರು ಬಾಲಣ್ಣ’ ಎಂದರೆ ಯಾರಿಗೆ ತಾನೇ ತಿಳಿದಿಲ್ಲ? ದೂರದ ಮುಂಬೈಯಲ್ಲಿ ಚೆಂಡೆ-ಮದ್ದಳೆಗಳ ನಿನಾದವನ್ನು ಅನುರಣಿಸುವ ಕ್ರಿಯೆಯನ್ನು ಅನವರತ ಒಂದು ತಪಸ್ಸಿನಂತೆ ನಡೆಸುತ್ತಾ ಬರುತ್ತಿರುವವರು ಶ್ರೀಯುತ ಅಜೆಕಾರು ಬಾಲಕೃಷ್ಣ ಶೆಟ್ಟಿ. ಬೆಡಗು-ಬಿನ್ನಾಣದ, ಧಾವಂತದ ಬದುಕಿನಲ್ಲಿ ಯಾಂತ್ರಿಕವಾಗಿ ಕಳೆದು ಹೋಗುತ್ತಿರುವ ಮಾಯಾನಗರಿಯ ಜನತೆಗೆ ಅಪರಿಚಿತವಾದ, ದುರ್ಲಭವಾದ ಯಕ್ಷಗಾನದ ರುಚಿ ಹತ್ತಿಸಿದವರು. ಮಹಾನಗರಿಯ ದಶದಿಕ್ಕುಗಳಲ್ಲಿ ಹರಡಿದ್ದ ತುಳು-ಕನ್ನಡಿಗರನ್ನು ಒಂದು ಕಲೆಯ ಮೂಲಕ ಹತ್ತಿರ ತಂದವರು ಬಾಂಧವ್ಯ ವೃದ್ಧಿಸಿದವರು. ಅರಳಿದ ಹೂವಿನ ಸುಗಂಧವನ್ನು ಹರಡಲು ಗಾಳಿಯು ಮಾಧ್ಯಮವಾಗುವಂತೆ ಕಲಾವಿದ ಮತ್ತು ಪ್ರೇಕ್ಷಕರ ನಡುವಿನ ಮಾಧ್ಯಮವಾದವರು, ಸೇತುವೆಯಾದವರು.
ಸದಾ ಹಸನ್ಮುಖಿ, ಸಹನಶೀಲ, ಸರಳ ಸ್ವಭಾವದ, ಮೃದುಮಾತಿನ ಕುಶಲ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟರು ಜನಿಸಿದ್ದು ಕಾರ್ಕಳ ತಾಲೂಕಿನ ಅಜೆಕಾರು ಮರ್ಣೆಯಲ್ಲಿ, ಸುಬ್ಬಯ್ಯ ಶೆಟ್ಟಿ ಮತ್ತು ಸಂಪಾ ಶೆಟ್ಟಿಯವರ ಸುಪುತ್ರನಾಗಿ ಎಳವೆಯಿಂದಲೇ ಯಕ್ಷಗಾನದ ಬಗ್ಗೆ ಅಪಾರವಾದ ಪ್ರೀತಿ ಹೊಂದಿದವರು. ಬಾಲ್ಯದಲ್ಲಿ ಹೆತ್ತವರಿಂದ ಪೆಟ್ಟು ತಿಂದರೂ ಸರಿಯೇ, ಯಕ್ಷಗಾನ ನೋಡುವುದರಿಂದ ತಪ್ಪಿಸಿಕೊಳ್ಳಲಾರರು. ಮರುದಿನ ಮನೆಗೆ ಬಂದು ಯಕ್ಷಗಾನದ ಆಟವನ್ನೇ ಆಡುತ್ತಿದ್ದರಂತೆ. ಶ್ರೀಯುತರ ರಕ್ತದ ಕಣಕಣದಲ್ಲೂ ಯಕ್ಷಗಾನ ಕಲೆಯ ಒಲವಿದೆ ಎನ್ನುವುದಕ್ಕೆ ಇದರಿಂದ ಹೆಚ್ಚಿನ ನಿದರ್ಶನ ಬೇಕೇ?
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು | ಜಗದ ಬೀದಿಗಳೊಳು ನಿಜಾತ್ಮ ಯಾತ್ರೆಯನು || ಜಗದ ಜೀವಿತದಿ ನಿಜ ಜೀವಿತದ ಪೂರ್ತಿಯನು ಬಗೆಯಲರಿತವನೆ ಸುಖಿ ಮಂಕುತಿಮ್ಮ ||’’ ಎಂಬ ಡಿ.ವಿ.ಜಿ.ಯವರ ಕಗ್ಗ ಇಲ್ಲಿ ಸೂಕ್ತವೆನಿಸುತ್ತದೆ.
ಉದ್ಯೋಗ ನಿಮಿತ್ತವಾಗಿ ಮುಂಬೈ ಮಹಾನಗರಿಯನ್ನು ಸೇರಿದ ಬಾಲಣ್ಣ ಸ್ವತಃ ಯಕ್ಷಗಾನ ಕಲಾವಿದರಾಗಿ ರೂಪುಗೊಂಡರು. ಉತ್ತಮ ಸಂಘಟಕರಾಗಿರುವ ಇವರು ಉತ್ತಮ ಯಕ್ಷಗಾನ ವೇಷಧಾರಿಯೂ ಹೌದು. ಶ್ರೀಯುತ ಪುರುಷೋತ್ತಮ ಪೂಂಜರಿಂದ ಯಕ್ಷನಾಟ್ಯ ಕಲಿತಿದ್ದಾರೆ. ತಾನು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಇವರು ಪಾತ್ರಕ್ಕೆ ಜೀವ ತುಂಬಿ ಭಾವಪೂರ್ಣವಾಗಿ ಅಭಿನಯಿಸುತ್ತಾರೆ. ಚಂಡ-ಮುಂಡ, ಕೋಟಿ-ಚೆನ್ನಯ, ಭಾರ್ಗವ, ಅಭಿಮನ್ಯು,ಗುಳಿಗ, ಶಬರಿಮಲೈ ಸ್ವಾಮಿ ಅಯ್ಯಪ್ಪ, ಕೃಷ್ಣ, ವಿಷ್ಣು ಸೇರಿದಂತೆ ಇನ್ನೂ ಹಲವಾರು ಪಾತ್ರಗಳನ್ನು ರಂಗದಲ್ಲಿ ಸಾಕ್ಷಾತ್ಕರಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ‘ಚಿಣ್ಣರ ಬಿಂಬ ಮುಂಬಯಿ’ ಸೇರಿದಂತೆ ನೂರಾರು ಚಿಣ್ಣರಿಗೆ, ಯುವಕರಿಗೆ, ಮಹಿಳೆಯರಿಗೆ ನಾಟ್ಯಾಭಿನಯಗಳನ್ನು ಕಲಿಸಿ ಯಕ್ಷಗುರುವೆನಿಸಿದ್ದಾರೆ. ಹಲವಾರು ತಂಡಗಳನ್ನು ಕಟ್ಟಿ ನೂರಾರು ಪ್ರದರ್ಶನಗಳನ್ನು ನೀಡಿ ಗುರುವಾಗಿಯೂ ಸಾರ್ಥಕ್ಯ ಪಡೆದಿದ್ದಾರೆ. ಇವರ ಶಿಷ್ಯರನೇಕರು ಯಕ್ಷಗಾನದಲ್ಲಿ ತೊಡಗಿಸಿಕೊಂಡವರಿದ್ದಾರೆ. ಮೇಳದ ವ್ಯವಸಾಯವನ್ನು ಹಿಂದೊಮ್ಮೆ ಪಡೆದವರಾದ್ದರಿಂದ ಕಲಾವಿದರ ನೋವು-ನಲಿವುಗಳನ್ನು ಬಲ್ಲರು. ಔದ್ಯೋಗಿಕ ಕ್ಷೇತ್ರದಲ್ಲಿ ಏಳು-ಬೀಳುಗಳನ್ನು ಕಂಡರೂ ಯಕ್ಷಗಾನವನ್ನು ಬಿಟ್ಟವರಲ್ಲ. ತಾನು ಕಲಾವಿದನಾದರಷ್ಟೇ ಸಾಲದು, ಮುಂಬೈಯಲ್ಲಿ ಯಕ್ಷಗಾನದ ಸಂಸ್ಕೃತಿ ಉಳಿದು ಬೆಳೆಯಬೇಕೆನ್ನುವ ಉದ್ದೇಶದಿಂದ 2002ರಲ್ಲಿ ಸಮಾನಾಸಕ್ತರನ್ನು ಒಗ್ಗೂಡಿಸಿಕೊಂಡು
ಅಜೆಕಾರು ಕಲಾಭಿಮಾನಿ ಬಳಗ (ರಿ.), ಮುಂಬಯಿ’’ನ್ನು ಸ್ಥಾಪಿಸಿದರು.
ಇದಕ್ಕೂ ಹಿಂದೆ ಯಕ್ಷಗಾನ ಪ್ರದರ್ಶನಗಳು, ತಾಳಮದ್ದಳೆಗಳು ನಡೆಯುತ್ತಿದ್ದರೂ 2002ರ ಹೊತ್ತಿಗೆ ಅವೆಲ್ಲವೂ ಜನಾಕರ್ಷಣೆ ಕಳೆದುಕೊಂಡಿದ್ದವು. ಸಮರ್ಥ ಸಂಘಟಕರಿಲ್ಲದೆ ಯಕ್ಷಗಾನ ಚರಮಗೀತೆ ಹಾಡುವ ಹಂತದಲ್ಲಿ ಅಜೆಕಾರು ಸಂಘಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಊರಿನಿಂದ ಪ್ರಸಿದ್ಧ ಕಲಾವಿದರನ್ನು ಕರೆಸಿ ಆಟ-ಕೂಟಗಳನ್ನು ಏರ್ಪಡಿಸಿದರು. ಮುಂಬೈಯಲ್ಲಿ ಪ್ರಪ್ರಥಮವಾಗಿ ಸರಣಿ ತಾಳಮದ್ದಳೆಗಳನ್ನು ನಡೆಸಿದ ಹೆಗ್ಗಳಿಕೆ ಬಾಲಕೃಷ್ಣ ಶೆಟ್ಟರದು. ಅಂದಿನಿಂದ ಇಂದಿನ ವರೆಗೂ ಸರಣಿ ತಾಳಮದ್ದಳೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಇದೊಂದು ಸುಲಭಸಾಧ್ಯವಾದ ಕೆಲಸವೇನಲ್ಲ. ಕಲಾವಿದರ ಸಂಯೋಜನೆ, ಅವರ ಪ್ರಯಾಣ, ವಸತಿ, ಊಟೋಪಚಾರಗಳ ವ್ಯವಸ್ಥೆಯು ಬೇಡುವ ಶ್ರಮ ಹಾಗೂ ವೆಚ್ಚವನ್ನು ಭರಿಸುವುದು ಸಾಹಸವೇ ಸರಿ. ಮಳೆಗಾಲದ ಆರಂಭವೆಂದರೆ ಮುಂಬೈಯಲ್ಲಿ ಯಕ್ಷಗಾನದ ರಸದೌತಣ.
ಹೀಗೆ ಕಾರ್ಯಕ್ರಮಗಳ ಆಯೋಜನೆಗಷ್ಟೇ ತೃಪ್ತರಾಗದ ಬಾಲಣ್ಣ 2004ರಿಂದ ‘ಅಜೆಕಾರು ಕಲಾಭಿಮಾನಿ ಬಳಗ’ದ ಮೂಲಕ ‘ಯಕ್ಷರಕ್ಷಾ’ ಪ್ರಶಸ್ತಿಯನ್ನು ಸಹಾಯಧನ ಸಹಿತವಾಗಿ ಮುಂಬೈಯ ಮತ್ತು ಊರಿನ ಕಲಾವಿದರಿಗೆ ನೀಡುತ್ತಾ ಬಂದಿದ್ದಾರೆ. ಶ್ರೀ ಮಾತಾ ಯಕ್ಷ-ರಕ್ಷಾ’’ ಪುರಸ್ಕಾರವನ್ನೂ ತಮ್ಮ ತಾಯಿಯವರ ಸ್ಮರಣಾರ್ಥವಾಗಿ ನೀಡುತ್ತಿದ್ದಾರೆ. ಇದೀಗ ಬಳಗಕ್ಕೆ ಹದಿನೆಂಟರ ಹರೆಯ. ಜುಲೈನಿಂದ ಅಕ್ಟೋಬರ್ 20ರ ವರೆಗೂ ವಿಶೇಷ ಯಕ್ಷಗಾನ ಸಂಬಂಧೀ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಈ ತನಕ ಹಲವು ಮಂದಿ ಕಲಾವಿದರು ಈ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಗೆಂದು ಅವರೇನೂ ಆಗರ್ಭ ಶ್ರೀಮಂತರಲ್ಲ. ಎಲ್ಲ ‘ಇಲ್ಲ’ಗಳ ನಡುವೆಯೂ ಯಕ್ಷಗಾನಕ್ಕಾಗಿ ವ್ಯಯ ಮಾಡಿ ಬರಿದಾದವರು, ಕೈಸುಟ್ಟುಕೊಂಡವರು. ವರುಷಗಳು ಕಳೆದಂತೆ ಜೋಡಿಸುವ ಕೈಗಳು ಹೆಚ್ಚಾಗಿವೆ, ಕಲಾಪ್ರೀತಿ ಹೆಚ್ಚಿದೆ. ಪ್ರೀತಿಯಿಂದ ನೀಡುವ ಕೊಡುಗೈ ದಾನಿಗಳನ್ನು ಸದಾ ಸ್ಮರಿಸುತ್ತಾರೆ, ಗೌರವಿಸುತ್ತಾರೆ. ಸ್ವತಃ ಕಲಾವಿದನಾಗಿ, ಕಲಾಸೇವಕನಾಗಿ, ಒಂದು ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ.
ಈ ಮೂಲಕ ಮುಂಬೈಯಂತಹ ಮಾಯಾಲೋಕದಲ್ಲೂ ನಮ್ಮ ಸಂಸ್ಕೃತಿಯ ರಕ್ಷಣೆಯನ್ನಲ್ಲದೆ, ಕನ್ನಡ-ತುಳು ಭಾಷೆಗಳನ್ನು ಉಳಿಸಿ-ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ. ಪುರಾಣದ ಕಥಾನಕಗಳ ಮೂಲಕ ಮಕ್ಕಳಿಗೆ ಸಂಸ್ಕಾರವನ್ನು, ನೈತಿಕ ಶಿಕ್ಷಣವನ್ನು ಪರೋಕ್ಷವಾಗಿ ನೀಡುತ್ತಾ ಬಂದಿರುವುದು ಸಾಧನೆಯೇ ಸರಿ. ಒಟ್ಟಿನಲ್ಲಿ ಒಂದು ಪಾರಿಭಾಷಿಕ ನಾಡಿನಲ್ಲಿ ಒಂದು ಸಾಂಸ್ಕೃತಿಕ ಪುನರುತ್ಥಾನವನ್ನು ಮಾಡುತ್ತಿರುವ ಶ್ರೀಯುತ ಬಾಲಕೃಷ್ಣ ಶೆಟ್ಟರು ಸ್ತುತ್ಯರ್ಹರು. ಎಲ್ಲಕ್ಕೂ ಮಿಗಿಲಾಗಿ ಪತಿಯ ಎಲ್ಲಾ ಸಾರ್ವಜನಿಕ ಸೇವಾ ಕೈಂಕರ್ಯಗಳಲ್ಲಿ ಸರ್ವವಿಧದಲ್ಲೂ ಸಹಕರಿಸುತ್ತಿರುವ ಪತ್ನಿ ಆಶಾ ಬಿ. ಶೆಟ್ಟಿಯವರ ಸಹೃದಯತೆ ಅಭಿನಂದನೀಯ, ಅನುಸರಣೀಯ. ಪತ್ನಿ, ಮಕ್ಕಳು ಅನಿಶಾ ಮತ್ತು ಅನುಷಾರೊಂದಿಗೆ ಸಂತೃಪ್ತ ಸಂಸಾರಿಯಾಗಿರುವ ‘ಬಾಲಣ್ಣ’ನಿಗೆ ಕಲಾಸೇವೆಯನ್ನು ಮಾಡುವ ಶಕ್ತಿ ಅನವರತವಿರಲಿ, ಆ ಕಲಾಮಾತೆ ಅವರನ್ನು ಸದಾ ಅನುಗ್ರಹಿಸಲಿ.
ಯಕ್ಷಗಾನಂ ಗೆಲ್ಗೆ – ಯಕ್ಷಗಾನಂ ಬಾಳ್ಗೆ’’
ಲೇಖಕಿ: ಸುಮಾ ಹರೀಶ್, ಬಳಂತಿಮೊಗರು
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು