Saturday, May 18, 2024
Homeಪುಸ್ತಕ ಮಳಿಗೆಯಕ್ಷಗಾನ ಸಾಹಿತ್ಯ ಚರಿತ್ರೆ –ಒಂದು ಅಧ್ಯಯನ ಪೂರ್ಣ ಗ್ರಂಥ

ಯಕ್ಷಗಾನ ಸಾಹಿತ್ಯ ಚರಿತ್ರೆ –ಒಂದು ಅಧ್ಯಯನ ಪೂರ್ಣ ಗ್ರಂಥ

ಲೇಖಕರು: ಗ.ನಾ.ಭಟ್ಟ, ಮೈಸೂರು 

ಯಕ್ಷಗಾನವೆಂಬ ಕಲಾಪ್ರಕಾರಕ್ಕೆ ಪುರಾಣಾಧಾರಿತವಾದ ಯಾವುದಾರೂ ಒಂದು ಸಂದರ್ಭ, ಸನ್ನಿವೇಶವನ್ನೊಳಗೊಂಡ ಪದ್ಯಾತ್ಮಕವಾದ ಕೃತಿಯನ್ನು ‘ಪ್ರಸಂಗ’ವೆಂದು ಕರೆಯುತ್ತಾರೆ. ಮುಖ್ಯವಾಗಿ ರಾಮಾಯಣ, ಭಾರತ, ಭಾಗವತಾದಿ ಕಾವ್ಯಗಳನ್ನು ಆಧರಿಸಿ ಈ ‘ಪ್ರಸಂಗ’ಗಳು ರಚನೆಗೊಳ್ಳುತ್ತವೆ. ಹಾಗೆ ರಚಿಸುವ ಕವಿ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅಥವಾ ಕೆಲವು ಸಲ ದೊಡ್ಡ ಬದಲಾವಣೆಗಳೊಂದಿಗೆ ಕೃತಿಯನ್ನು ಹೆಣೆಯುತ್ತಾನೆ. ಯಕ್ಷಗಾನ ಆಡುವವರಿಗೆ, ತಾಳಮದ್ದಳೆಯಲ್ಲಿ ಅರ್ಥ ಹೇಳುವವರಿಗೆ ಈ ‘ಪ್ರಸಂಗ’ ಅನ್ನವುದು ಪ್ರಾಣಭೂತವಾದುದು. ಇದಿಲ್ಲದೆ ಯಕ್ಷಗಾನವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ‘ಪ್ರಸಂಗ’ಗಳನ್ನು ಆಡುವವರಿಗೆ ಇವು ಮುಖ್ಯವಾಗಿ ನಿರ್ದೇಶಕನ ಪಾತ್ರವನ್ನು ವಹಿಸುತ್ತವೆ. ಆ ಕಾರಣಕ್ಕಾಗಿಯೇ ಯಕ್ಷಗಾನಕ್ಕೆ ನಿರ್ದೇಶಕರಿಲ್ಲ ಅನ್ನವುದು. ‘ಕರ್ಣಪರ್ವ’ವೋ ‘ಸಂಧಾನ’ವೋ, ‘ವಾಲಿವಧೆ’ಯೋ ಯಾವುದಾದರೂ ಒಂದು ಪ್ರಸಂಗವನ್ನು ಎತ್ತಿಕೊಂಡರೆ ಆ ‘ಪ್ರಸಂಗ’ವು ಕಲಾವಿದನಿಗೆ ಆ ‘ಪ್ರಸಂಗ’ದ ಮುಖ್ಯ ರಸ ಯಾವುದು? ಭಾವ ಯಾವುದು? ವಾದ-ವಿವಾದಗಳ ಭೂಮಿಕೆ ಎಲ್ಲಿದೆ? ಅದು ನೀಡುವ ಸಂದೇಶ ಏನು? ಯಾವ ಸಂದರ್ಭದಲ್ಲಿ ‘ಪುರಾಣಪ್ರವಚನ’ದಂತೆ, ‘ವಿಚಾರಗೋಷ್ಠಿ’ಯಂತೆ ಕಾರ್ಯನಿರ್ವಹಿಸಬಲ್ಲಕುದು? ‘ಚಿತ್ತಸಂಸ್ಕಾರಕ ಶಿಕ್ಷಣ’ವಾಗಿ, ‘ಸಂಸ್ಕೃತಿಯ ವಾಹಕ’ವಾಗಿ ಕೆಲಸಮಾಡಬಲ್ಲುದು? ಹಾಸ್ಯದ ಹೊನಲಾಗಿ ಪ್ರೇಕ್ಷಕರನ್ನು ನಗಿಸಬಹುದು? ನೃತ್ಯವಿದರ ಕೈಯಲ್ಲಿ ಯಾವ ಪದ್ಯಕ್ಕೆ ಚೇತೋಹಾರಿಯಾದ ನೃತ್ಯ-ನೃತ್ತಗಳ ಸಂಗಮವಾಗಿ ಪ್ರೇಕ್ಷಕರಿಗೆ ಮುದನೀಡಬಹುದು? ಹಿಮ್ಮೇಳದವರ ಕೈಯಲ್ಲಿ ಯಾವ ಪದ್ಯಗಳು ಗಾನಗೋಷ್ಠಿ’ಯಾಗಿ ಮೆರೆಯಬಲ್ಲವು ಎಂಬಿತ್ಯಾದಿ ಎಲ್ಲಾ ಸಂಗತಿಗಳನ್ನೂ ಹೇಳಿಬಿಡುತ್ತದೆ. ಈ ಕಾರಣಕ್ಕಾಗಿಯೇ ಈ ‘ಪ್ರಸಂಗ’ಗಳನ್ನು ಯಕ್ಷಗಾನದ ‘ಮುಖ್ಯ ಸಾಹಿತ್ಯ’ ಅಂತ ಕರೆಯುವುದು. ಒಂದು ಸಾಹಿತ್ಯ ಅಂದಮೇಲೆ ಅದಕ್ಕೆ ಒಂದು ಚರಿತ್ರೆ ಅಥವಾ ಇತಿಹಾಸ ಅಂತ ಇರಲೇ ಬೇಕಲ್ಲವೆ?


ಒಂದು ಕಾಲದಲ್ಲಿ ಯಕ್ಷಗಾನ ಎಂದರೆ ವಿದ್ಯಾವಂತರನ್ನು, ವಿದ್ಯಾಂಸರನ್ನು, ಸುಶಿಕ್ಷಿತರನ್ನು ಆಕರ್ಷಿಸಿದ ಕಲೆಯಾಗಿರಲ್ಲಿಲ್ಲ. ಕಲಾವಿದರೂ ಅಂತಹ ವಿದ್ಯಾವಂತರಾಗಿರುತ್ತಿರಲಿಲ್ಲ. ತಕ್ಕಮಟ್ಟಿನ ವಿದ್ಯೆ ಅವರದಾಗಿರುತ್ತಿತ್ತು. ಹಾಗಾಗಿ ಅದು ಬಹಳ ಕಾಲದವರೆಗೆ ‘ಜಾನಪದ ಕಲೆ’ –Folk Art ಎಂದೇ ಗುರುತಿಸಲ್ಪಡುತ್ತಿತ್ತು. ಈಗ ಸ್ವಲ್ಪ ಬದಲಾವಣೆ ಆಗಿದೆ. ಆದರೂ ಅದು ಶಾಸ್ತ್ರೀಯವೇ-Classical ಅಥವಾ ಜಾನಪದವೇ-Folklore ಎಂಬ ಚರ್ಚೆ ನಡೆಯುತ್ತಲೇ ಇದೆ. ಅದು ಬೇರೆ ಪ್ರಶ್ನೆ.


ಪ್ರಕೃತ ಯಕ್ಷಗಾನ ಕಲೆಗೆ ಸಂಬಂಧಪಟ್ಟಂತೆ ಏನೇ ಚರ್ಚೆ ನಡೆಯಲಿ. ಅದರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅಂದರೆ ಇಂಗ್ಲಿಷಿನಲ್ಲಿ ನಾವು ಯಾವುದನ್ನು Literature ಎಂದು ಕರೆಯುತ್ತೇವೋ ಆ ನೆಲೆಯಲ್ಲಿ ಅದಕ್ಕೊಂದು ದೊಡ್ಡ ಚರಿತ್ರೆಯೇ ಇದೆ. ಆದರೆ ಅದನ್ನು ದಾಖಲೀಕರಿಸುವ ಕೆಲಸ ಇದುವರೆಗೂ ನಡೆದೇ ಇರಲಿಲ್ಲ. ಅದು ಈಗ ನಡೆದಿದೆ. ಅದು ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಂದ. ಡಾ. ಕಬ್ಬಿನಾಲೆ ಅವರು 2010ರಲ್ಲಿ ‘ಕರ್ನಾಟಕ ಯಕ್ಷಗಾನ ಕವಿಚರಿತ್ರೆ’ ಎಂಬ ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದರು. ಈಗ ಅವರು 2020ರಲ್ಲಿ ‘ಯಕ್ಷಗಾನ ಸಾಹಿತ್ಯ ಚರಿತ್ರೆ’ ಎಂಬ ಬೃಹತ್ ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.
“ಕನ್ನಡ ಸಾಹಿತ್ಯಾಭ್ಯಾಸವು ಸಾಮಾನ್ಯವಾಗಿ ಪರಿಚಯ- ವಿಮರ್ಶೆ- ಸಂಶೋಧನೆ ಮತ್ತು ದಾಖಲಾತಿ ಎಂಬ ನಾಲ್ಕು ಮುಖಗಳಲ್ಲಿ ನಡೆಯುತ್ತಿರುವುದು ಹೊಸಕಾಲದ ಪದ್ಧತಿ” ಎಂದು ಈ ಕೃತಿಗೆ ಮುನ್ನುಡಿ ಬರೆದ ಡಾ.ಪಾದೇಕಲ್ಲು ವಿಷ್ಣು ಭಟ್ಟರು ಅದರ ಆರಂಭದಲ್ಲೇ ಹೇಳಿದಂತೆ ಕಬ್ಬಿನಾಲೆಯವರ ಈ ಕೃತಿಯೂ ಅದೇ ದಿಕ್ಕಿನಲ್ಲಿ ಸಾಗಿದೆ. ಅಷ್ಟೇ ಅಲ್ಲ. ಅವಕ್ಕೆ ಸಾಕಷ್ಟು ಅಧಿಕೃತತೆಯನ್ನು ಒದಗಿಸಿದ್ದಾರೆ ಅವರು. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ, ಪಡುವಲಪಾಯ-ಪ್ರಸಂಗ ಸಾಹಿತ್ಯ, ಮೂಡಲಪಾಯ -ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು- ಹೀಗೆ ಒಟ್ಟು ಏಳು ಅಧ್ಯಾಯಗಳಲ್ಲಿ ಸಾಗುವ ಈ ಕೃತಿ ಯಕ್ಷಗಾನದ ಒಟ್ಟು ಸ್ವರೂಪವನ್ನು ಒಂದೇ ತೆಕ್ಕೆಗೆ ಪರಿಚಯಿಸಿಬಿಡುತ್ತದೆ. ಯಕ್ಷಗಾನ ಅಭ್ಯಾಸಿಗಳಿಗೆ, ಜಿಜ್ಞಾಸುಗಳಿಗೆ ಇದೊಂದು ಆಕರಗ್ರಂಥ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಂದೇ ಸೂರಿನಡಿಯಲ್ಲಿ ಹಲವು ವಿಷಯಗಳು ಸಂಗಮಿಸಿರುವುದು ಈ ಗ್ರಂಥದ ವಿಶೇಷ. ಜೊತೆಗೆ ಆಯಾ ಸಂದರ್ಭ, ಸನ್ನಿವೇಶಕ್ಕನುಗುಣವಾಗಿ ಆಯಾ ವಸ್ತು- ಪದಾರ್ಥಗಳ ಬಗ್ಗೆ, ಪ್ರಸಂಗಕೃತಿಗಳ ಬಗ್ಗೆ, ಪ್ರಯೋಗಶೀಲತೆಗಳ ಬಗ್ಗೆ, ಮೌಖಿಕ ಸಾಹಿತ್ಯಗಳ ಬಗ್ಗೆ, ಕವಿಗಳ ಬಗ್ಗೆ ಹೊಸ ಬೆಳಕು ಚೆಲ್ಲುವ ಕಿರು ಪರಿಚಯ, ವಿಮರ್ಶೆ ಮಾಡಿರುವುದು ಆಯಾ ಕೃತಿಗಳಿಗೆ, ವ್ಯಕ್ತಿಗಳಿಗೆ, ಕಲಾವಿದರಿಗೆ ಸಿಕ್ಕ ಬಹುದೊಡ್ಡ ಮನ್ನಣೆಯಾಗಿದೆ. ಅದನ್ನು ಕಬ್ಬಿನಾಲೆಯವರು ಬಹು ಸುಂದರವಾಗಿ, ಮನೋಜ್ಞವಾಗಿ ಒಂದು ಕುಸುರಿ ಕೆಲಸ ಎಂಬಂತೆ ಮಾಡಿದ್ದಾರೆ. ಇದೊಂದು ವಿದ್ವತ್ಪ್ರಪಂಚದ ಕೆಲಸ. ನಮ್ಮಲ್ಲಿ ಯಾವುದೇ ಕ್ಷೇತ್ರದಲ್ಲಾಗಲೀ ವಿದ್ವತ್ತಿನ ಪರಿಶ್ರಮ ಸುಲಭವಾಗಿ ಸರಳವಾಗಿ ಸಾಮಾನ್ಯ ಜನರಿಗೆ ತಲುಪುವ ಕೆಲಸ ನಡೆದಿರುವುದು ವಿರಳ. ಅದರಲ್ಲೂ ಯಕ್ಷಗಾನ ಕ್ಷೇತ್ರದಲ್ಲಂತೂ ವಿರಳಾತಿವಿರಳ. ಆ ನಿಟ್ಟಿನಲ್ಲಿ ಅದು ಇನ್ನೂ ಕನ್ಯೆನೆಲ. ಅದನ್ನಿನ್ನೂ ಫಲವತ್ತಾಗಿಸಬೇಕು. ಅದಕ್ಕೆ ನೊಗಕಟ್ಟಿ ನೇಗಿಲು ಹೂಡಿ, ಒಳ್ಳೆಯ ಫಸಲವನ್ನು ತೆಗೆದಿದ್ದಾರೆ ಕಬ್ಬಿನಾಲೆಯವರು.
‘ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ’ದೊಂದಿಗೆ ಆರಂಭವಾಗುವ ಅವರ ಈ ಕೃತಿ ಯಕ್ಷಗಾನ ಹಾಡಿನ ಜಾಡು ಎಲ್ಲಿಂದ ಮೊದಲ್ಗೊಂಡಿತು? ಅದಕ್ಕೆ ಭಕ್ತಿಪಂಥ, ದಾಸಸಾಹಿತ್ಯಗಳ ಕೊಡುಗೆ ಏನು? ಅವು ಹೇಗೆ ಕೆಲಸ ಮಾಡಿವೆ? ವಿವಿಧ ಛಂದೋಬಂಧಗಳು ಹೇಗೆ ಹಾಸುಹೊಕ್ಕಾಗಿವೆ? ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಿವೆ. ಇಲ್ಲಿ ಕಬ್ಬಿನಾಲೆಯವರು ಯಕ್ಷಗಾನ ಹಾಡಿನಲ್ಲಿ ಅಂದರೆ ಯಕ್ಷಗಾನ ಸಾಹಿತ್ಯದಲ್ಲಿ ಆರತಿಹಾಡು, ಶೋಭಾನೆಹಾಡುಗಳ ಚೆಲುವು, ಗಾದೆಮಾತು, ಭಾಷಾಪ್ರಯೋಗದ ಸೌಂದರ್ಯ, ಭಾವಗೀತಾತ್ಮಕತೆ, ಮಾರ್ಗ- ದೇಸೀಗಳ ಸಮ್ಮಿಶ್ರ ಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರಗಳ ಬೆಡಗು, ರೂಪಕ-ಪ್ರಹೇಲಿಕೆಗಳ ಮೆರವಣಿಗೆ ಹೇಗೆ ಪ್ರಭಾವಿಸಿವೆ ಮತ್ತು ಅವೆಲ್ಲವನ್ನೂ   ಹೀರಿಕೊಂಡು ಅದು ಹೇಗೆ ಶ್ರೀಮಂತವಾಯಿತು ಮತ್ತು ಅವೆಲ್ಲವೂ ಯಕ್ಷಗಾನ ಸಾಹಿತ್ಯದಲ್ಲಿ ಹೇಗೆ ನಿಹಿತವಾಗಿದ್ದವು ಅನ್ನುವದನ್ನು ಸಾಕ್ಷ್ಯಾಧಾರಗಳೊಂದಿಗೆ ತೌಲನಿಕವಾಗಿ ಚರ್ಚಿಸಿದ್ದಾರೆ.
ಹಾಗೆಯೇ ಪಡುವಲಪಾಯ ಯಕ್ಷಗಾನ ಪ್ರಸಂಗಸಾಹಿತ್ಯಗಳನ್ನು ಎತ್ತಿಕೊಂಡ ಕಬ್ಬಿನಾಲೆಯವರು ಅವು ಯಾವ ಯಾವ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತವೆ ಎಂದು ಹೇಳುತ್ತಾ ಅವನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜನಪದೀಯ, ಕಾಲ್ಪನಿಕ ಎಂದು ಐದು ವಿಧವಾಗಿ ವಿಂಗಡಿಸುತ್ತಾರೆ. ರಾಮಾಯಣಾಧಾರಿತ ಪ್ರಸಂಗಗಳೇ 150ರಷ್ಟು ಇವೆ ಎಂದು ಹೇಳುವ ಅವರು ಇಪ್ಪತ್ತು ಇಪ್ಪತ್ತೊಂದನೆ ಶತಮಾನದ ಎರಡು ದಶಕಗಳಲ್ಲಿ ನೂರಕ್ಕೂ ಹೆಚ್ಚು ಕೃತಿಗಳು ಬಂದಿವೆ ಎಂದು ದಾಖಲಿಸುತ್ತಾರೆ. ಈ ದಾಖಲಾತಿಗಳೊಂದಿಗೆ ಅವರು ಕೆಲವು ಪದ್ಯಗಳ ಸ್ವಾರಸ್ಯವನ್ನು ವಿಶ್ಲೇಷಿಸಿದ್ದು ಮತ್ತು ಯಾವ ಕೃತಿ ಯಾರಿಂದ ರಚನೆಗೊಂಡಿತು ಅಂತ ಹೇಳಿದ್ದು- ಓದುಗರಿಗೆ, ಮುಖ್ಯವಾಗಿ ಆಸಕ್ತ ಅಭ್ಯಾಸಿಗಳಿಗೆ, ಜಿಜ್ಞಾಸುಗಳಿಗೆ ಬಹುದೊಡ್ಡ ಉಪಕಾರವಾಗಿದೆ.


ಇದೇ ರೀತಿ ಭಾರತ, ಭಾಗವತಗಳನ್ನಾಧರಿಸಿ ಬಂದ ಪ್ರಸಂಗಸಾಹಿತ್ಯಗಳ ಬಗ್ಗೆ ಬೆಳಕು ಚೆಲ್ಲುತ್ತಾ ಕೃಷ್ಣಾರ್ಜುನ ಕಾಳಗ, ರಾಮಾಂಜನೇಯ, ದ್ರೌಪದೀ ಪ್ರತಾಪ, ಚಕ್ರಚಂಡಿಕಾ, ವೀರನಾರೀ ಅಪ್ರಮೇಯೀ, ಭಾನುಮತೀ ನೆತ್ತ ಮೊದಲಾದ ಪ್ರಸಂಗಗಳು ಪುರಾಣಗಳ ಯಾವುದೋ ಒಂದು ಎಳೆಯನ್ನು ಇಟ್ಟುಕೊಂಡು, ಅವು ಕವಿಯ ಪ್ರತಿಭೆಯಲ್ಲಿ ಹೇಗೆ ಕಲ್ಪನೆಯ ವಿಸ್ತಾರವನ್ನು ಪಡೆದುಕೊಂಡು, ಸಾಹಿತ್ಯಾತ್ಮಕವಾಗಿಯೂ ಮೌಲ್ಯವನ್ನು ಉಳಿಸಿಕೊಂಡು, ಜನಮಾನಸದಲ್ಲಿ ಪ್ರತಿಷ್ಠಾಪನೆಗೊಂಡಿವೆ ಮತ್ತು ಜನಪ್ರಿಯವಾಗಿವೆ ಅನ್ನವುದನ್ನು ಸೋದಾಹರಣವಾಗಿ ಎಳೆಎಳೆಯಾಗಿ ವಿವರಿಸಿದ್ದಾರೆ. ಇನ್ನು ಜೈನಪುರಾಣ, ಬೌದ್ಧಧರ್ಮ, ಇತಿಹಾಸ, ಸಾಮಾಜಿಕ, ಜಾನಪದ ಪ್ರಸಂಗಗಳೊಂದಿಗೆ ಶಂಕರ, ರಾಮಾನುಜ, ಮಧ್ವ, ರಾಘವೇಂದ್ರ, ಕ್ರಿಸ್ತ ಮೊದಲಾದ ಮಹಾಪುರುಷರ ಕುರಿತಾಗಿ ಬಂದ ಪ್ರಸಂಗಗಳನ್ನು ಅವರು ಕಲೆಹಾಕಿದ್ದನ್ನು ನೋಡಿದರೆ ಯಕ್ಷಗಾನ ಸಾಹಿತ್ಯ ಚರಿತ್ರೆಯ ವಿರಾಟ್ ಸ್ವರೂಪ ಅದಾವ ಪರಿ ಬೆಳೆದಿದೆ ಅನ್ನವುದು ವೇದ್ಯವಾಗುತ್ತದೆ. ಜೊತೆಗೆ ವಿಸ್ಮಯವೂ ಆಗುತ್ತದೆ.


ಪಡುವಲಪಾಯ ಯಕ್ಷಗಾನಗಳಲ್ಲಿ ‘ಕ್ಷೇತ್ರಮಹಾತ್ಮೇ’ಗಳಿಗೇ ಒಂದು ವಿಶೇಷ ಸ್ಥಾನವಿದೆ. ಬಹುಪಾಲು ಎಲ್ಲಾ ಕ್ಷೇತ್ರಗಳ ಮಹಾತ್ಮೆಯೂ ಬಯಲಾಟವಾಗಿ ಪ್ರದರ್ಶನಗೊಂಡಿವೆ. ಅದಕ್ಕೆ ಕಾರಣ ಎಲ್ಲಾ ಮೇಳಗಳೂ ಯಾವುದಾರೊಂದು ದೇವಸ್ಥಾನದ ದೇವರ ಹೆಸರಲ್ಲಿ ಸಂಸ್ಥಾಪನೆಗೊಂಡು ತಿರುಗಾಟಕ್ಕೆ ಹೊರಡುತ್ತವೆ. ಅಂತಹ ಸಂದರ್ಭದಲ್ಲಿ ಆಯಾ ದೇವರ ಮಹಿಮೆಯನ್ನು ಪ್ರಚುರಪಡಿಸುವುದು, ಭಕ್ತಿಯಿಂದ ನಡೆದುಕೊಳ್ಳುವುದು ಕಲಾವಿದರಿಗೂ, ಮೇಳದ ಯಜಮಾನರಿಗೂ ಹೆಮ್ಮೆಯ ಸಂಗತಿ. ಆ ಕಾರಣಕ್ಕಾಗಿಯೇ ಅವು ಶ್ರದ್ಧಾ-ಭಕ್ತಿಯಿಂದ ಪ್ರದರ್ಶನಗೊಂಡಿವೆ. ಇಡಗುಂಜಿ ಕ್ಷೇತ್ರಮಹಾತ್ಮೆ, ಕಟೀಲು ಕೇತ್ರ ಮಹಾತ್ಮೆ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆ, ಮಧೂರು ಕ್ಷೇತ್ರ ಮಹಾತ್ಮೆ ಹೀಗೆ ಮೂವತ್ತಕ್ಕೂ ಹೆಚ್ಚು ಕ್ಷೇತ್ರ ಮಹಾತ್ಮೆಗಳನ್ನು ಗುರುತಿಸಿದ್ದಾರೆ ಕಬ್ಬಿನಾಲೆಯವರು. ಹೀಗೆ ಒಂದೆಡೆ ಕ್ಷೇತ್ರ ಮಹಾತ್ಮೆಗಳು, ಮತ್ತೊಂದೆಡೆ ಕಲಾವತಿ ಪರಿಣಯ, ಭಾಸವತಿ, ನಾಗಶ್ರೀ, ವಂಶವಲ್ಲರೀ, ಸಂಧ್ಯಾಸಾವೇರಿ ಮುಂತಾದ ಕಾಲ್ಪನಿಕ ಪ್ರಸಂಗಗಳು, ಜೊತೆಗೆ ಕೋಡ್ದಬ್ಬು ತನ್ನಿಮಾನಿಗ, ಅಮರಶಿಲ್ಪಿ ವೀರಕಲ್ಕುಡ, ಅಮರೇಂದ್ರಪದ ವಿಜಯ, ಕಾಯಕಲ್ಪ, ಶುಕ್ರಸಂಜೀವಿನೀ ಮೊದಲಾದ ಹೊಸ ಅಲೆಗಳ ಪ್ರಸಂಗಗಳು ಹೀಗೆ ಯಕ್ಷಗಾನ ಸಾಹಿತ್ಯ ಚರಿತ್ರೆಗೆ ಸಿಗದೇ ಇದ್ದ ಸಾಹಿತ್ಯಗಳೇ ಇಲ್ಲ. ಕಬ್ಬಿನಾಲೆಯವರು ಇವೆಲ್ಲವನ್ನೂ ಒಂದೆಡೆ ಸಂಕಲಿಸಿ ದಾಖಲಿಸಿದ್ದಾರೆ. ಮಾತ್ರವಲ್ಲ. ಅವುಗಳ ಸಂಕ್ಷಿಪ್ತ ಪರಿಚಯವನ್ನೂ ಅದೇ ಕಾಲಕ್ಕೆ ಕವಿಗಳ ಪರಿಚಯವನ್ನೂ, ಅವು ರಚನೆಗೊಂಡ ಕಾಲವನ್ನೂ ಕಬ್ಬಿನಾಲೆ ಹೇಳಿರುವುದು ವಿಮರ್ಶಾ ಪದ್ಧತಿಯಲ್ಲಿ ಒಂದಾದ ‘ಕೃತಿಪರಿಶೀಲನೆ’, ‘ಕವಿ -ವ್ಯಕ್ತಿ’ ಮತ್ತು ‘ಚಾರಿತ್ರಿಕ ವಿಧಾನ’ಕ್ಕೆ ಗಟ್ಟಿಯಾದ ತಳಹದಿಯನ್ನು ಹಾಕಿದಂತಾಗಿದೆ. ಈ ವಿಮರ್ಶೆಯಲ್ಲಿ ಮಾಹಿತಿಯ ಭರಪೂರವೇ ಹರಿದುಬಂದಿರುವುದು ಇದರ ವಿಶೇಷವಾಗಿದೆ.
ಈ ಕೃತಿಯ ಮೂರನೆಯ ಅಧ್ಯಾಯದಲ್ಲಿ ‘ಮೂಡಲಪಾಯ -ಪ್ರಸಂಗ ಸಾಹಿತ್ಯ’ ಕುರಿತಾಗಿ ಬಂದಿದೆ. ಅದರ ಬೇರೆ ಬೇರೆ ಪ್ರಕಾರಗಳಾದ ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಘಟ್ಟದ ಕೋರೆ, ಶ್ರೀಕೃಷ್ಣ ಪಾರಿಜಾತಗಳನ್ನು ‘ಪಡುವಲಪಾಯ ಪ್ರಸಂಗ ಸಾಹಿತ್ಯ’ ಪರಿಚಯದ ದಾರಿಯಲ್ಲೇ ಮಾಡಿಕೊಟ್ಟಿದ್ದಾರೆ.

ಲೇಖಕರು: ಗ.ನಾ.ಭಟ್ಟ, ಮೈಸೂರು 


‘ಯಕ್ಷಗಾನದಲ್ಲಿ ಪ್ರಯೋಗಶೀಲತೆ’ ಎಂಬ ನಾಲ್ಕನೆಯ ಅಧ್ಯಾಯದಲ್ಲಿ ಡಾ. ಕಬ್ಬಿನಾಲೆಯವರು ಮಾರಾವತಾರ, ಕಾರಂತರ ಬ್ಯಾಲೆಗಳು, ಅಷ್ಟಾವಧಾನ ಮತ್ತು ಕಾವ್ಯ-ಚಿತ್ರ-ಗಾನ-ನಾಟ್ಯ, ಏಕವ್ಯಕ್ತಿಪ್ರದರ್ಶನಗಳು, ಇತರ ಬಾಷೆಯಲ್ಲಿ ಯಕ್ಷಗಾನ, ವಿಶಿಷ್ಟ ಪ್ರಸಂಗಗಳು ಎಂಬ ಶೀರ್ಷಿಕೆಗಳಲ್ಲಿ ಅವೆಲ್ಲದರ ಐತಿಹಾಸಿಕ ಹಿನ್ನೆಲೆ, ಕವಿ-ಕಾವ್ಯ ಪರಿಚಯ, ಕೆಲವು ಕೃತಿಗಳ ಸ್ವಾರಸ್ಯಕರ ಘಟ್ಟ, ಪದ್ಯಗಳ ಚಮತ್ಕಾರ ಮುಂತಾದುವನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಅವುಗಳ ಮೇಲೆ ಪ್ರೀತ್ಯಾದರ, ಗೌರವ ಹುಟ್ಟುವಂತೆ ಮಾಡಿದ್ದಾರೆ.
ಐದನೆಯ ಅಧ್ಯಾಯದಲ್ಲಿ ಬಂದ ‘ಮೌಖಿಕ ಸಾಹಿತ್ಯ’ ಕುರಿತಾದ ವಿಶ್ಲೇಷಣೆ ‘ತಾಳಮದ್ದಳೆ’ಯ ವಿಶ್ಲೇಷಣೆ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಇಲ್ಲಿಯೂ ಕಬ್ಬಿನಾಲೆಯವರು ಅದರ ಉಗಮ, ವಿಕಾಸ ಎಂಬ ಸಂಶೋಧನೆಯ ನೆಲೆಯಲ್ಲಿ ಒಂದಿಷ್ಟು ಮಾತನಾಡುತ್ತಾ ತಾಳಮದ್ದಳೆಯ ಬೆಳವಣಿಗೆಯನ್ನು ನಾಲ್ಕು ಹಂತದಲ್ಲಿ ಗುರುತಿಸಿದ ಡಾ. ಎಂ ಪ್ರಭಾಕರ ಜೋಶಿಯವರ ಅಭಿಪ್ರಾಯವನ್ನು ಇಲ್ಲಿ ಕ್ರೋಢೀಕರಿಸಿದ್ದು ಜೊತೆಗೇನೇ ಸೇಡಿಯಾಪು, ಕಾರಂತ, ತಕ್ಕಂಜೆ, ತೋಳ್ಪಾಡಿ, ಉಚ್ಚಿಲ ಮೊದಲಾದವರ ಅಭಿಪ್ರಾಯವನ್ನು ಉಲ್ಲೇಖಿಸಿದ್ದು ಈ ಕೃತಿಗೆ ನಿಜಕ್ಕೂ ಘನತೆ, ಗಾಂಭೀರ್ಯವನ್ನು ತಂದುಕೊಟ್ಟಿದೆ. ಆದರೆ ಇತ್ತೀಚಿನ ಯಾವ ತಾಳಮದ್ದಳೆ ಕಲಾವಿದರೂ ಈ ಮಹನೀಯರು ಹೇಳಿದ ಯಾವ ಮೌಲಿಕ ಮಾತುಗಳನ್ನೂ ಕಲಾಧೋರಣೆಯನ್ನೂ ಅನುಸರಿಸುತ್ತಿಲ್ಲ ಅನ್ನವುದು ಅತ್ಯಂತ ಖೇದಾವಹ ವಿಚಾರವಾಗಿದೆ.


ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು, ಉಪಸಂಹಾರ ಎಂವ ಅಧ್ಯಾಯಗಳೊಂದಿಗೆ ಮುಕ್ತಾಯಗೊಳ್ಳುವ ಈ ಕೃತಿ ಯಕ್ಷಗಾನಪ್ರಪಂಚಕ್ಕೇ ಒಂದು ಅಮೂಲ್ಯ ಕೃತಿಯಾಗಿದೆ. ಇದೊಂದು ಅಧ್ಯಯನಪುರ್ಣ ಅಪರೂಪದ ಪುಸ್ತಕವಾಗಿ ನಮ್ಮೆಲ್ಲರ ಎದುರಿಗೆ ಇದೆ. ಯಕ್ಷಗಾನದ ಬಗ್ಗೆ ವಸಂತ ಭಾರದ್ವಾಜರು ತಳೆದಿರುವ ಪ್ರೀತಿ, ಅಭಿಮಾನ, ವಿದ್ವತ್ತು ಎಲ್ಲವೂ ಇಲ್ಲಿ ಹರಳುಗಟ್ಟಿ ಯಕ್ಷಗಾನದ ಹಲವು ಸಂಗತಿಗಳು ಒಂದೇ ಸೂರಿನಡಿಯಲ್ಲಿ ಸಿಗುವಂತೆ ಮಾಡಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು.

ಲೇಖಕರು: ಗ.ನಾ.ಭಟ್ಟ, ಮೈಸೂರು 


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments