Friday, September 20, 2024
Homeಯಕ್ಷಗಾನಶಂಭು ಶರ್ಮ ವಿಟ್ಲ - ಅನುಭವೀ ಅರ್ಥಧಾರಿ (Shambhu Sharma Vitla)

ಶಂಭು ಶರ್ಮ ವಿಟ್ಲ – ಅನುಭವೀ ಅರ್ಥಧಾರಿ (Shambhu Sharma Vitla)

ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.

ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರ,  ಹುಡುಗಾಟಿಕೆಯ ಮನೋಭಾವ, ಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.

ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 


ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.

ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 

ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 

ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 

ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.

ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 

ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. 

ಲೇಖನ: ಮನಮೋಹನ್ ವಿ.ಎಸ್. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments