Saturday, May 18, 2024
Homeಯಕ್ಷಗಾನಸದ್ದಿಲ್ಲದ ಕಲಾಸೇವೆ - ಶ್ರೀ ಸತೀಶ ಉಪಾಧ್ಯ, ಅಂಬಲಪಾಡಿ 

ಸದ್ದಿಲ್ಲದ ಕಲಾಸೇವೆ – ಶ್ರೀ ಸತೀಶ ಉಪಾಧ್ಯ, ಅಂಬಲಪಾಡಿ 

ಸೃಷ್ಟಿಕರ್ತನಾದ ಕನಕಗರ್ಭನ ಕಾರ್ಯವೈಖರಿ ಅದೆಷ್ಟು ಕೌತುಕಮಯವಾದುದು! ಸತ್ಯಲೋಕೇಶನಾದ ಅಂಚೆದೇರನ ಸೃಷ್ಟಿಯಲ್ಲಿ ವೈವಿಧ್ಯತೆಯನ್ನು ಗುರುತಿಸಬಹುದು. ರೂಪದಲ್ಲಿ ವಿವಿಧತೆ, ಆಕಾರದಲ್ಲಿ ವೈವಿಧ್ಯತೆ, ಬಣ್ಣದಲ್ಲಿ ವಿವಿಧತೆ, ವ್ಯವಹಾರದಲ್ಲಿ ವೈವಿಧ್ಯತೆ. ಆದುದರಿಂದಲೇ ಬ್ರಹ್ಮನು ಬೇಧಬಿಜ್ಜಗ ಎಂದು ಪ್ರಸಿದ್ಧನಾಗಿದ್ದಾನೆ.

ನಾವು ಮಾನವರು. ಯೋನಿಜರು. ನಮ್ಮಲ್ಲೂ ವೈವಿಧ್ಯಗಳಿವೆ. ಕೋಟಿ ಕೋಟಿ ಸಂಖ್ಯೆಯಲ್ಲಿದ್ದರೂ ಒಬ್ಬರಂತೆ ಮತ್ತೊಬ್ಬರಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿಯೇ ಗುರುತಿಸಲ್ಪಡುತ್ತೇವೆ. ಸ್ವಭಾವದಲ್ಲೂ ಅಷ್ಟೇ. ಒಂದೇ ತೆರನಾಗಿ ಎಲ್ಲರೂ ಕಾಣಿಸಿಕೊಳ್ಳಲಾರರು. ಒಬ್ಬೊಬ್ಬರದು ಒಂದೊಂದು ಸ್ವಭಾವ. ಕೆಲವರು ತೆರೆದುಕೊಳ್ಳುವ ಸ್ವಭಾವವನ್ನು ಹೊಂದಿರುವುದಿಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ವ್ಯವಹಾರ. ಇವರದು ಸದಾ ಮುಚ್ಚಿಕೊಳ್ಳುವ ಸ್ವಭಾವ.

ಇನ್ನು ಕೆಲವರಿಗೆ ತಾನೂ ಕಾಣಿಸಿಕೊಳ್ಳಬೇಕು, ತನ್ನ ಜತೆಗೆ ಉಳಿದವರೂ ಕಾಣಿಸಿಕೊಳ್ಳಬೇಕು ಎಂಬ ಒಳ್ಳೆಯ ಮನಸ್ಸು. ತಾನು ಕಷ್ಟವನ್ನನುಭವಿಸುತ್ತಾ ಪರರಿಗೆ ಒಳಿತನ್ನುಂಟುಮಾಡುವವರೂ ಇದ್ದಾರೆ. ಪರರ ಕಷ್ಟಕ್ಕೆ ನೆರವಾಗುವ ಕ್ರಿಯೆಯಲ್ಲಿ ಸಿಗುವ ಆನಂದವು ವರ್ಣನಾತೀತವಾದುದು. ಅಸಾಮಾನ್ಯ ಪ್ರತಿಭೆಯನ್ನು ತೆರೆದುಕೊಳ್ಳದೆ ಸದಾ ಮುದುಡಿಕೊಳ್ಳುವ ಸ್ವಭಾವವನ್ನು ಹೊಂದಿದ ಕಾರಣವೋ ಏನೋ? ಅನೇಕ ಕಲಾವಿದರು ಪ್ರಚಾರದಿಂದ ದೂರ ಉಳಿದರು.

ಆದರೂ ನಿಜ ವಿಚಾರಗಳು ಎಷ್ಟು ಮುಚ್ಚಿಟ್ಟರೂ ಹೊರ ಬಾರದಿರದು. ವಿದ್ವಾಂಸರು ಗುಹೆಯೊಳಡಗಿದರೂ ಹೊರ ಕರೆತಂದು ಗೌರವಿಸಿಯೇ ಗೌರವಿಸುತ್ತಾರೆ. ಯಾಕೆಂದರೆ ನಮ್ಮ ಸಮಾಜದಲ್ಲಿ ಒಳ್ಳೆಯದನ್ನು ಗುರುತಿಸುವ ಕಣ್ಣುಗಳಿವೆ. ಅವರನ್ನು ಗೌರವಿಸುವ ಸುಮನಸರಿದ್ದಾರೆ. ಹೀಗೆ ಸದ್ದಿಲ್ಲದೇ ಕಲಾಸೇವೆಯು ತನಗೆ ಕರ್ತವ್ಯ ಎಂದು ತಿಳಿದು ವ್ಯವಹರಿಸುತ್ತಿರುವ ಕಲಾವಿದರನೇಕರನ್ನು ಯಕ್ಷಗಾನ ಕ್ಷೇತ್ರದಲ್ಲಿ ನಾವು ಕಾಣಬಹುದು. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಸತೀಶ ಉಪಾಧ್ಯ ಅಂಬಲಪಾಡಿ.

ಶ್ರೀಯುತರು ಹಿಮ್ಮೇಳ, ಮುಮ್ಮೇಳ ಕಲಾವಿದನಾಗಿಯೂ, ಶಿಕ್ಷಕನಾಗಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಶ್ರೇಷ್ಠ ಕಲಾವಿದ, ಯಕ್ಷಗಾನ ಶಿಕ್ಷಕರಾದ ಶ್ರೀ ಸತೀಶ ಉಪಾಧ್ಯ ಅವರು ಉಡುಪಿ ಸಮೀಪದ ಅಂಬಲಪಾಡಿಯಲ್ಲಿ ಶ್ರೀ ಎ. ರಾಘವೇಂದ್ರ ಉಪಾಧ್ಯಾಯ ಮತ್ತು ಶ್ರೀಮತಿ ಜಯಲಕ್ಷ್ಮಿ ಉಪಾಧ್ಯಾಯ ದಂಪತಿಗಳಿಗೆ ಮಗನಾಗಿ 1972ನೇ ಇಸವಿ ಮೇ 13ರಂದು ಜನಿಸಿದರು. ಅಂಬಲಪಾಡಿ ಶಾಲೆ, SMSP ಹೈಸ್ಕೂಲ್ ಮತ್ತು ಉಡುಪಿ ಬೋರ್ಡ್ ಶಾಲೆಗಳಲ್ಲಿ ವಿದ್ಯಾರ್ಜನೆ. ಪಿಯುಸಿ ವರೆಗೆ.

ಸತೀಶ ಉಪಾಧ್ಯರ ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರು ಅಂಬಲಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಯಕ್ಷಗಾನ ವೇಷಧಾರಿಯೂ ಭರತನಾಟ್ಯ ಗುರುಗಳೂ ಆಗಿದ್ದರು. ಯಕ್ಷಗಾನ ನಾಟ್ಯ ಹಿರಿಯಡಕ ಗೋಪಾಲರಾಯರಿಂದಲೂ ಭರತನಾಟ್ಯವನ್ನು ಉಡುಪಿ ಶ್ರೀ ರಾಧಾಕೃಷ್ಣ ತಂತ್ರಿಗಳಿಂದಲೂ ಅಭ್ಯಸಿಸಿದ್ದರು. ಅಂಬಲಪಾಡಿ ಶಾಲೆಯ ಸ್ಥಾಪಕರು ದಿ| ಶ್ರೀ ಮುಖ್ಯಪ್ರಾಣ ಉಪಾಧ್ಯಾಯರು. ಶ್ರೀಯುತರು ಕವಿಗಳೂ ಆಗಿದ್ದರು. ಅನೇಕ ಕವಿತೆಗಳನ್ನೂ, ಮಕ್ಕಳ ನಾಟಕಗಳನ್ನೂ ಬರೆದಿದ್ದರು. ಮಾತ್ರವಲ್ಲ ಮುದ್ರಣಕ್ಕೊಳಪಟ್ಟಿದ್ದುವು.

ಊರ ಕಲಾಭಿಮಾನಿಗಳ ನೇತೃತ್ವದಲ್ಲಿ ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿ ಎಂಬ ಸಂಸ್ಥೆಯು ಆರಂಭಗೊಂಡಿತ್ತು. ಈ ಕಲಾಸಂಸ್ಥೆಯ ಸ್ಥಾಪಕ ಪ್ರಮುಖರಲ್ಲಿ ಸತೀಶ ಉಪಾಧ್ಯರ ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರೂ ಒಬ್ಬರು. ವಾರಕ್ಕೊಂದು ತಾಳಮದ್ದಲೆಯೂ ನಡೆಯುತ್ತಿತ್ತು. ಶ್ರೀ ಮಲ್ಪೆ ರಾಮದಾಸ ಸಾಮಗ, ಶ್ರೀ ಕುಂಬಳೆ ಸುಂದರ ರಾವ್, ಮೊದಲಾದ ಅನೇಕ ಹಿರಿಯ ಕಲಾವಿದರೂ ಭಾಗವಹಿಸುತ್ತಿದ್ದರು.

ಶ್ರೀ ಸತೀಶ ಉಪಾಧ್ಯರಿಗೆ ತೀರ್ಥರೂಪರಿಂದಲೇ ಯಕ್ಷಗಾನವು ಬಳುವಳಿಯಾಗಿ ಬಂದಿತ್ತು. ಯಕ್ಷಗಾನಾಸಕ್ತಿಯೂ ಇತ್ತು. 6ನೇ ತರಗತಿಯ ವಿಧ್ಯಾರ್ಥಿಯಾಗಿರುವಾಗಲೇ ಶ್ರೀ ಬಾಬು ಶೆಟ್ಟಿಗಾರರಿಂದ ನಾಟ್ಯ ಕಲಿತರು. ಶ್ರೀ ಕೆಮ್ಮಣ್ಣು ಆನಂದ ಅವರಿಂದ ಹಿಮ್ಮೇಳ ಕಲಿಕೆ.  ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯಲ್ಲಿ ಹಿರಿಯಡಕ ಗೋಪಾಲ ರಾಯರೂ, ಗೋರ್ಪಾಡಿ ವಿಠ್ಠಲ ಪಾಟೀಲ್, ಐರೋಡಿ ರಾಮ ಗಾಣಿಗರು, ಹಳ್ಳಾಡಿ ಸುಬ್ರಾಯ ಮಲ್ಯ ಅವರುಗಳು ಗುರುಗಳಾಗಿ ಕಲಿಕಾಸಕ್ತರಿಗೆ ಯಕ್ಷಗಾನ ವಿದ್ಯೆಯನ್ನು ಧಾರೆಯೆರೆದಿದ್ದರು.

ಈ ಸಂಘದ ಪ್ರದರ್ಶನದಲ್ಲಿ ಸತೀಶ ಉಪಾಧ್ಯ ಅವರು ಬಾಲಗೋಪಾಲನಾಗಿ ರಂಗಪ್ರವೇಶ ಮಾಡಿದ್ದರು. ನಂತರ ಸಕ್ರಿಯನಾಗಿ ವೇಷ ಮಾಡಲು ಆರಂಭಿಸಿದರು. ಬನ್ನಂಜೆ ನಾರಾಯಣ ಅವರ ನಿರ್ದೇಶನದಲ್ಲಿ ರತ್ನಾವತೀ ಕಲ್ಯಾಣ ಪ್ರಸಂಗದ ಚಿತ್ರಧ್ವಜನ ಪಾತ್ರ ಮಾಡಿದ್ದರು. ಬನ್ನಂಜೆ ನಾರಾಯಣ ಅವರಲ್ಲಿ  ಬರಹದಿಂದ ಸಿದ್ಧಪಡಿಸಿದ ಅನೇಕ ಪ್ರಸಂಗ ಪುಸ್ತಕಗಳ ಸಂಗ್ರವಿದೆ ಎಂದು ಸತೀಶ ಉಪಾಧ್ಯ ಅವರು ಹೇಳುತ್ತಾರೆ. ಮಥುರಾ ಮಹೇಂದ್ರ ಪ್ರಸಂಗದ ಡಂಗುರ ದೂತನ ಪಾತ್ರವನ್ನು ಈ ಸಂದರ್ಭದಲ್ಲಿ ಮಾಡಿದ್ದರು. ಬಳಿಕ ಪಿಯುಸಿ ತನಕ ಸಂಘದ ಪ್ರದರ್ಶನಗಳಲ್ಲಿ ಹಾಗೂ ಇತರ ಕಡೆ ವೇಷ ಮಾಡುತ್ತಿದ್ದು, ಪಿಯುಸಿ ಆದ ಮೇಲೆ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕಾಯಿತು. ಇದು ಬದುಕಿನ ಒಂದು ಮಹತ್ತರ ತಿರುವು. ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುತ್ತೇನೆಂಬ ನಿರ್ಣಯವೇನೂ ಇರಲಿಲ್ಲ. 

ಶ್ರೀ ಸತೀಶ ಉಪಾಧ್ಯ ಅವರು ಪಿಯುಸಿ ಶಿಕ್ಷಣದ ಬಳಿಕ ಚಿತ್ರಕಲೆಯಲ್ಲಿ ಡಿಪ್ಲೋಮ ಪಡೆಯಲು ಕಾರವಾರಕ್ಕೆ ತೆರಳಿದ್ದರು. ಒಂದೂವರೆ ವರ್ಷಗಳ ಕಾಲ ತರಬೇತಿ ಮುಗಿದಿತ್ತು. ಅಂತಿಮ ಪರೀಕ್ಷೆಯಿನ್ನೂ ಆಗಿರಲಿಲ್ಲ. ಆಗಲೇ ವಿದೇಶಕ್ಕೆ ಹಾರುವ ಅವಕಾಶವೊಂದು ಒದಗಿ ಬಂದಿತ್ತು. ಶ್ರೀ ಎಂ.ಎಲ್. ಸಾಮಗರ ನೇತೃತ್ವದ ತಂಡ. ಬಡಗು ಪ್ರದರ್ಶನ. ಕಡಿಮೆ ಅವಧಿಯಲ್ಲಿ ಪಾಸ್ ಪೋರ್ಟ್ ಮಾಡಿಸಿ ಪರೀಕ್ಷೆ ಬರೆಯದೆಯೇ ತಂಡದ ಜೊತೆ ವಿಮಾನವೇರಿ ಸಿಂಗಾಪುರಕ್ಕೆ ಹಾರಿದ್ದರು! ಹನ್ನೊಂದು ದಿನ ‘ನೃತ್ಯೋತ್ಸವ’ದಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿದ್ದರು.

ವೇಷಧಾರಿಯಾಗಲು ಉತ್ತೇಜನ ನೀಡಿದವರು ಪೂರ್ಣಪ್ರಜ್ಞ  ಸಂಸ್ಕೃತ ಉಪಾನ್ಯಾಸಕರಾದ ಶ್ರೀ ಡಿ.ಜಿ.ಹೆಗಡೆ ಅವರು. ಅವರು ವೇಷಧಾರಿಯೂ ಆಗಿದ್ದರು. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಉಡುಪಿ ಸಮೂಹ ಸಂಸ್ಥೆಯ ಉದ್ಯಾವರ ಶ್ರೀ ಮಾಧವ ಆಚಾರ್ಯರೂ ಪ್ರೋತ್ಸಾಹಿಸಿದ್ದರು. ಕೇಂದ್ರ ಸರಕಾರದ ಸಾಂಸ್ಕೃತಿಕ ಸಂಘಗಳ ಅಡಿಯಲ್ಲಿ ಯಕ್ಷದೇಗುಲ ಬೆಂಗಳೂರು ಸಂಸ್ಥೆಯ ಪ್ರದರ್ಶನಗಳಲ್ಲಿ ಕರ್ನಾಟಕ ಹಳ್ಳಿ ಹಳ್ಳಿಗಳಲ್ಲಿ ವೇಷ ಮಾಡಿದ್ದರು. ಕರ್ನಾಟಕ ಕಲಾದರ್ಶಿನಿ, ಬೆಂಗಳೂರು ಈ ಸಂಸ್ಥೆಯ ಪ್ರದರ್ಶನಗಳಲ್ಲೂ ಕಲಾವಿದರಾಗಿ ಅಭಿನಯಿಸಿದ್ದರು.

ಶ್ರೀಮತಿ ರಶ್ಮಿ ಹೆಗ್ಡೆ ಗೋಪಿ ಇವರ ನೇತೃತ್ವದ ಶಂಕರ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಸಂಸ್ಥೆಯ ಪ್ರದರ್ಶನಗಳಲ್ಲಿ ಅಮೆರಿಕಾದ ಹನ್ನೊಂದು ನಗರಗಳಲ್ಲಿ, ಯೂರೋಪಿನ ನಾಲ್ಕು ನಗರಗಳಲ್ಲಿ ಭಾಗವಹಿಸಿದ್ದರು. ಊರ ಪರವೂರ ಪ್ರದರ್ಶನಗಳಲ್ಲೂ ವೇಷಗಾರಿಕೆ. ಸ್ತ್ರೀ ವೇಷವನ್ನುಳಿದು ಉಳಿದ ಎಲ್ಲಾ ರೀತಿಯ ವೇಷಗಳನ್ನು ನಿರ್ವಹಿಸಿದ್ದರು. ಹಾಸ್ಯ ಪಾತ್ರಗಳನ್ನೂ ಮಾಡಿದ್ದರು. ರತ್ನಾವತೀ ಕಲ್ಯಾಣ ಪ್ರಸಂಗದ ಚಿತ್ರಧ್ವಜ, ಘೋಷಯಾತ್ರೆ ಪ್ರಸಂಗದ ಚಿತ್ರಸೇನ, ಬಬ್ರುವಾಹನ, ಕಂಸ ದಿಗ್ವಿಜಯ ಪ್ರಸಂಗದ ಕಂಸ, ಭಸ್ಮಾಸುರ ಮೊದಲಾದುವು ಹೆಸರು ಕೊಟ್ಟ ಪಾತ್ರಗಳು. ಶ್ರೀರಾಮ ಪಟ್ಟಾಭಿಷೇಕ  ಮಂಥರೆ ಪಾತ್ರವನ್ನೂ ಮಾಡಿದ್ದರು. ಹೊಸ ಪಾತ್ರಗಳು ಬಂದಾಗ ಹಿರಿಯ ಅನುಭವೀ ಕಲಾವಿದರಿಂದ ಮಾಹಿತಿ ಸಂಗ್ರಹಿಸುತ್ತಿದ್ದರು.

ಕಳೆದ ಎಂಟು ವರ್ಷಗಳಿಂದ ಸತೀಶ ಉಪಾಧ್ಯ ಅವರು ವೇಷ ಮಾಡುವುದನ್ನು ನಿಲ್ಲಿಸಿ ತರಬೇತುದಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಕೆ. ಮೋಹನ್ ಅವರ ಯಕ್ಷದೇಗುಲ ಬೆಂಗಳೂರು ಈ ತಂಡದಲ್ಲಿ ವೇಷ ಮಾಡುತ್ತಿರುವಾಗ ಅವರು ಮಕ್ಕಳಿಗೆ ತರಬೇತಿ ನೀಡುವುದಕ್ಕಾಗಿ ಸತೀಶ ಉಪಾಧ್ಯರನ್ನು ಶಾಲೆಗಳಿಗೆ ಕಳಿಸುತ್ತಿದ್ದರು. ಯಕ್ಷಗಾನ ಶಿಕ್ಷಕನಾಗಿ ಮುಂದುವರಿಯಲು ಸತೀಶ ಉಪಾಧ್ಯರಿಗೆ ಕೆ. ಮೋಹನ್ ಅವರೇ ಪ್ರೇರಕರು. ನಿನಗೆ ಆ ಸಾಮರ್ಥ್ಯ ಇದೆ ಎಂದು ಹೇಳಿ ಹುರಿದುಂಬಿಸಿದ್ದರು. ಮೊತ್ತ ಮೊದಲು ತರಬೇತಿ ಆರಂಭಿಸಿದ್ದು ಹೊಸ್ತೋಟ ಮಂಜುನಾಥ ಭಾಗವತರ ನಿರ್ದೇಶನದಲ್ಲಿ ಹಾರ್ಸಿಕಟ್ಟಾ ಎಂಬಲ್ಲಿ. ದಿವಾನ ಯಕ್ಷ ಸಮೂಹ ತಂಡದ ಪರವಾಗಿ. ಇವರನ್ನು ಅಲ್ಲಿಗೆ ಕರೆಸಿದವರು ಸತೀಶ ಹೆಗಡೆ ದಂಟಕಲ್. 2004ರಲ್ಲಿ. ಇಲ್ಲಿ ಶಿಬಿರದಡಿಯಲ್ಲಿ ನಿರಂತರ ಹತ್ತು ವರ್ಷ ನಾಟ್ಯ ತರಬೇತಿಯನ್ನು ನೀಡಿದ್ದರು.

ಬಳಿಕ ಶ್ರೀ ಡಿ.ಜಿ.ಭಟ್ಟರ ಮುಂದಾಳತ್ವದಲ್ಲಿ ಕೋಳಿಗಾರದಲ್ಲಿ, ತುಳ್ಗೇರಿ ಗಜಾನನ ಭಟ್ಟರ ನೇತೃತ್ವದಲ್ಲಿ ವಾನಳ್ಳಿಯಲ್ಲಿ, ಶ್ರೀ ಆರ್.ಟಿ.ಹೆಗಡೆ ಕಲಾವನ ಇವರ ನೇತೃತ್ವದಲ್ಲಿ ಮಂಚಿಕೇರಿಯಲ್ಲಿ ತರಬೇತಿ ನೀಡಿದ್ದರು. ಮಂಚಿಕೇರಿಯಲ್ಲಿ ಎಳೆಯರಲ್ಲದೆ ವಯಸ್ಸಾದವರೂ ನಾಟ್ಯ ಕಲಿತಿದ್ದರು. ಸಾಗರ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಸಹಕಾರದಿಂದ ವಿದ್ಯಾರ್ಥಿಗಳಿಗೆ, ಉಡುಪಿ ಯಕ್ಷಗಾನ ಕಲಾರಂಗದ ಯಕ್ಷ ಶಿಕ್ಷಣ ಟ್ರಸ್ಟ್ ಯೋಜನೆಯಡಿಯಲ್ಲಿ ಹಲವಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ತರಬೇತಿಯನ್ನು ನೀಡಿದ್ದರು. ಉಡುಪಿಯ ಹಲವಾರು ಸಂಘ ಸಂಸ್ಥೆಗಳಡಿಯೂ ಕಲಿಕಾಸಕ್ತರಿಗೆ ನಾಟ್ಯ ಹೇಳಿ ಕೊಟ್ಟಿರುತ್ತಾರೆ. ಇವರ ಕೈಯಿಂದ ನಾಟ್ಯ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದು ಹವ್ಯಾಸೀ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.

ಪ್ರದರ್ಶನಗಳಲ್ಲಿ ಚೆಂಡೆವಾದಕರಾಗಿಯೂ ಭಾಗವಹಿಸುತ್ತಿದ್ದಾರೆ. ಬಡಗಿನ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಒದಗಿಸಿ ಕೊಡುತ್ತಾರೆ. 2013ರಲ್ಲಿ ಪೂರ್ಣಪ್ರಜ್ಞ ಯಕ್ಷ ಕಲಾ ಕೇಂದ್ರವನ್ನು ಸ್ಥಾಪಿಸಿ ಈ ಸಂಸ್ಥೆಯಡಿ ಹಲವಾರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಸರಕಾರದ ಸಾಂಸ್ಕೃತಿಕ ಇಲಾಖೆಯು ಕೊಡಮಾಡುವ ವಿದ್ಯಾರ್ಥಿ ವೇತನಕ್ಕೂ ಇವರು ಆಯ್ಕೆಯಾಗಿದ್ದರು. ಹಿಮ್ಮೇಳ ಕಲಿತುದು ನಾಟ್ಯ ಕಲಿಸಲು ಅನುಕೂಲವಾಗಿತ್ತು. ಎಲ್ಲರಿಗೂ ಹೇಳಿ ಕೊಡುವ ಕಲೆಯು ಸಿದ್ಧಿಸದು. ಮಕ್ಕಳಿಗೆ ಸರಳವಾಗಿ ಹೇಳಿ ಕೊಡುವ ಕಲೆ ಸತೀಶ ಉಪಾಧ್ಯರಿಗೆ ಕರಗತವಾಗಿದೆ ಎಂದು ವೃತ್ತಿ ಕಲಾವಿದರೂ ಹೇಳುತ್ತಾರೆ.

ಇವರು ಮೇಳದ ತಿರುಗಾಟದಲ್ಲಿ ಆಸಕ್ತರಲ್ಲ. ಆದರೂ ಅನಿವಾರ್ಯಕ್ಕೆ ಕರೆದರೆ ಚೆಂಡೆ ಬಾರಿಸಲು ಹೋಗುತ್ತಾರೆ. ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರು ನಿವೃತ್ತರಾದರೂ ಅಂಬಲಪಾಡಿ ಶಾಲೆಯ ಸಂಬಂಧವನ್ನು ಬಿಡದೆ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಆಡಳಿತ ಮಂಡಳಿಗೆ ಸಹಕಾರಿಯಾಗಿದ್ದಾರೆ. “ಕಲಿಕಾಸಕ್ತರಿಗೆ ವಿದ್ಯಾದಾನ ಮಾಡುವಲ್ಲಿ ಆಸಕ್ತಿಯಿದೆ. ತೃಪ್ತಿಯಿದೆ. ಮಕ್ಕಳು ಕಲಾವಿದರಾಗಿ ಹೆಸರು ತಂದರೆ ನನಗದು ಸಂತೋಷ” ಇದು ಸದ್ದಿಲ್ಲದೇ ಕಲಾಸೇವೆಯನ್ನು ಮಾಡುವ, ಕಲಾವಿದ, ಕಲಾಶಿಕ್ಷಕ ಶ್ರೀ ಸತೀಶ ಉಪಾಧ್ಯ ಅವರ ಮನದ ಮಾತು.

ಶ್ರೀಯುತರು ಸಂಸಾರಿಕವಾಗಿಯೂ ಅತ್ಯಂತ ತೃಪ್ತರು. ಪತ್ನಿ ಶ್ರೀಮತಿ ಲತಾ ಸತೀಶ ಉಪಾಧ್ಯ. ಸತೀಶ ಉಪಾಧ್ಯ, ಲತಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಮಾಣಿಕ್ಯ. 4ನೆಯ ತರಗತಿ ವಿದ್ಯಾರ್ಥಿ. ಕಿರಿಯ ಪುತ್ರ ಮಾ| ಮದನ 3ನೆಯ ತರಗತಿ ವಿದ್ಯಾರ್ಥಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಸತೀಶ ಉಪಾಧ್ಯರು ತರಬೇತಿಯನ್ನು ನೀಡುತ್ತಾ ಬಹಳಷ್ಟು ಕಲಾವಿದರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕುವ ಸತ್ಕಾರ್ಯವನ್ನು ಮಾಡುವಂತಾಗಲಿ. ಶ್ರೀ ದೇವರು ಅವರಿಗೆ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ  ಹಾರೈಕೆಗಳು.

ಲೇಖಕ: ರವಿಶಂಕರ್ ವಳಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments