Saturday, January 18, 2025
Homeಪುಸ್ತಕ ಮಳಿಗೆಯಕ್ಷಭೀಮನ ನೂರು ಹೆಜ್ಜೆಗಳು - ಪುತ್ತೂರು ಕೃಷ್ಣ ಭಟ್ಟರ (ಮಾಣಂಗಾಯಿ) ಸಂಸ್ಮರಣಾ ಗ್ರಂಥ 

ಯಕ್ಷಭೀಮನ ನೂರು ಹೆಜ್ಜೆಗಳು – ಪುತ್ತೂರು ಕೃಷ್ಣ ಭಟ್ಟರ (ಮಾಣಂಗಾಯಿ) ಸಂಸ್ಮರಣಾ ಗ್ರಂಥ 

ಶ್ರೀ ಪುತ್ತೂರು ಕೃಷ್ಣ ಭಟ್ಟರು (ಮಾಣಂಗಾಯಿ) ತೆಂಕುತಿಟ್ಟಿನ ಗತಕಾಲದ ಪ್ರಸಿದ್ಧ ವೇಷಧಾರಿಗಳಲ್ಲೊಬ್ಬರು. ಎಲ್ಲಾ ರೀತಿಯ ಪಾತ್ರಗಳನ್ನೂ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಪ್ರತಿಭಾವಂತರಾಗಿದ್ದರೆಂದು ಹಿರಿಯ ಕಲಾಭಿಮಾನಿಗಳು ಹೇಳುತ್ತಾರೆ. ಶ್ರೀಯುತರ ಜೀವಿತಾವಧಿ ೧೯೦೪ – ೧೯೭೯. ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಭೀಮಗುಳಿ ಇವರ ಹುಟ್ಟೂರು. ಭೀಮಗುಳಿ ವೆಂಕಟರಮಣಯ್ಯ ಮತ್ತು ಶ್ರೀಮತಿ ದೇವಮ್ಮ ದಂಪತಿಗಳ ಏಕಮಾತ್ರ ಪುತ್ರನಾಗಿ ಜನನ. ಹಾಗಾಗಿ ದಾಖಲೆಗಳಲ್ಲಿ ಪುತ್ತೂರು ಕೃಷ್ಣ ಭಟ್ಟರ ಹೆಸರು ಭೀಮಗುಳಿ ಕೃಷ್ಣಯ್ಯ ಎಂದು. ಜನಿಸಿದ್ದು ಅಜ್ಜನ ಮನೆ ಕಾಸರಗೋಡಿನ ಬೋವಿಕ್ಕಾನದ ಸಮೀಪ ಮಾಣಂಗಾಯಿ  ಎಂಬಲ್ಲಿ. ಹಾಗಾಗಿ ಮಾಣಂಗಾಯಿ ಕೃಷ್ಣ ಭಟ್ಟರೆಂದೇ ಕರೆಸಿಕೊಂಡಿದ್ದರು. ಈ ಊರನ್ನು ಮಾಡಂಗಾಯಿ ಅಥವಾ ಮಾಳಂಗಾಯಿ ಎಂದೂ ಹೇಳುವುದು ರೂಡಿಯಲ್ಲಿದೆ. ಪುತ್ತೂರು ಕೃಷ್ಣ ಭಟ್ಟರಿಗೆ ತಂದೆ ತಾಯಿಯರ ಕಡೆಯಿಂದ ಯಕ್ಷಗಾನವು ಬಳುವಳಿಯಾಗಿಯೇ ಬಂದಿತ್ತು. ಓದಿದ್ದು ೩ನೇ ತರಗತಿ ವರೆಗೆ ಮಾತ್ರ. ೧೯೧೮ರಲ್ಲಿ ಅಂದರೆ ತನ್ನ ೧೫ನೇ ವಯಸ್ಸಿನಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ರಂಗಪ್ರವೇಶ ಮಾಡಿದ್ದರು. ಕಾಟುಕುಕ್ಕೆ ಮಾಲಿಂಗ ರೈಗಳಿಂದ ನಾಟ್ಯ ಕಲಿತಿದ್ದರೆಂಬ ಹೇಳಿಕೆಯಿದೆ. ನಂತರ ಪ್ರದರ್ಶನಗಳನ್ನು ನೋಡಿ ಕಲಿತುದೇ ಹೆಚ್ಚು. ಕಲಾ ಕ್ಷೇತ್ರದಲ್ಲಿ ಸದಾ ಅಧ್ಯಯನಶೀಲರಾಗಿ ಕ್ಷಿಪ್ರ ಬೆಳವಣಿಗೆಯನ್ನು ಕಂಡವರು. ಜೋಡಾಟಗಳಲ್ಲೂ ಭಾಗವಹಿಸಿ ಪ್ರಶಂಸೆಗೊಳಗಾಗಿದ್ದರು. ಕಟೀಲು, ಕೂಡ್ಲು, ಕುಂಡಾವು ಸುರತ್ಕಲ್, ಮೂಲ್ಕಿ, ಕದ್ರಿ, ಮೂಡಬಿದ್ರೆ, ಕಾಪು, ತಲಪಾಡಿ ಅಲ್ಲದೆ ತಾನೇ ಕಟ್ಟಿ ಬೆಳೆಸಿದ ಕಾಂಚನ ಮೇಳದಲ್ಲೂ ತಿರುಗಾಟ ನಡೆಸಿದ್ದರು. ಕಣ್ಣುಗಳ ಮೂಲಕವೇ ವಿವಿಧ ರೀತಿಯ ಭಾವಗಳನ್ನು ಪ್ರಕಟಿಸುತ್ತಿದ್ದರೆಂದು ಅವರ ವೇಷಗಳನ್ನು ನೋಡಿದ ಕಲಾಭಿಮಾನೀ ಹಿರಿಯರು ಹೇಳುತ್ತಾರೆ. ಕಂಸ, ಇಂದ್ರಜಿತು, ತಾಮ್ರಧ್ವಜ, ಕಾರ್ತವೀರ್ಯ,ಮಾಗಧ, ಭಸ್ಮಾಸುರ, ವಲಲ, ಅಕ್ರೂರ, ದುಷ್ಟಬುದ್ಧಿ, ಹನುಮಂತ,ಶಕುನಿ, ಭಾರತ, ಕರ್ಣ ಮೊದಲಾದುವುಗಳು ಪುತ್ತೂರು ಕೃಷ್ಣ ಭಟ್ಟರಿಗೆ ಪ್ರೀತಿಯ ಪಾತ್ರಗಳು. ನಾಟ್ಯದ ಮುಕ್ತಾಯಕ್ಕೆ ತಿರುಗಿ ನೋಡದೆ ಚಂಗನೆ ನೆಗೆದು ಸಿಂಹಾಸನವೇರುತ್ತಿದ್ದುದು ಪುತ್ತೂರು ಕೃಷ್ಣ ಭಟ್ಟರ ವಿಶೇಷತೆ. ಯಾರಿಗೂ ಸಿದ್ಧಿಸದ ಕಲೆ ಇದು. ಪ್ರಸಂಗಕರ್ತರಾಗಿ, ಹರಿದಾಸರಾಗಿ,ನಾಟ್ಯಗುರುವಾಗಿಯೂ ಕಲಾ ಸೇವೆಯನ್ನು ಮಾಡಿದ್ದರು. ವೇಷಭೂಷಣಗಳ ಚಿತ್ರವನ್ನೂ ಮುಖವರ್ಣಿಕೆಯನ್ನೂ ಬರೆದಿರಿಸಿ ಮುಂದಿನ ಜನಾಂಗಕ್ಕೆ ಉಳಿಸಿಹೋದ ಮಹನೀಯರಿವರು. ಎಳವೆಯಲ್ಲಿಯೇ ಪುತ್ತೂರಿನಲ್ಲಿ ನೆಲೆಸಿದ್ದರು. ಹಾಗಾಗಿ ಭೀಮಗುಳಿ ಕೃಷ್ಣಯ್ಯನವರು ಮಾಡಂಗಾಯಿ ಕೃಷ್ಣ ಭಟ್ಟರಾಗಿ ಪುತ್ತೂರು ಕೃಷ್ಣ ಭಟ್ಟರೆಂದೇ ಪ್ರಸಿದ್ಧರಾಗಿ ತನ್ನ ಪ್ರತಿಭಾ ವ್ಯವಹಾರದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಪುತ್ತೂರು ಶ್ರೀ ಕೃಷ್ಣ ಭಟ್ಟರ (ಮಾಣಂಗಾಯಿ) ಸಂಸ್ಮರಣಾ ಗ್ರಂಥ ‘ಯಕ್ಷಭೀಮನ ನೂರು ಹೆಜ್ಜೆಗಳು’ ಪ್ರಕಟಗೊಂಡದ್ದು ೨೦೦೪ರಲ್ಲಿ . ಡಾ. ಶ್ರೀ ಪಾದೆಕಲ್ಲು ವಿಷ್ಣು ಭಟ್ಟ ಮತ್ತು ಶ್ರೀ ಕೆ. ಪಿ. ರಾಜಗೋಪಾಲ ಇದರ ಸಂಪಾದಕರು. ಪ್ರಕಾಶಕರು ಡಾ. ಕೃಷ್ಣಮೂರ್ತಿ ಪಂಜ. ಇವರು ಪುತ್ತೂರು ಕೃಷ್ಣ ಭಟ್ಟರ ಮೊಮ್ಮಗ. ಈ ಪುಸ್ತಕದ ಮುದ್ರಣದ ಬಗೆಗೆ ಆಸಕ್ತಿ ಉಂಟಾದ ಸನ್ನಿವೇಶವನ್ನು ವಿವರಿಸುತ್ತಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಸಂಪಾದರು ಈ ಗ್ರಂಥದ ಮಹತ್ವ ಮತ್ತು ಉದ್ದೇಶಗಳನ್ನು ವಿವರಿಸಿದ್ದಾರೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮತ್ತು ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಚನ ಸಂದೇಶಗಳೂ ಇವೆ. ಬಳಿಕ ಸ್ಮರಣ ಎಂಬ ಶೀರ್ಷಿಕೆಯಡಿಯಲ್ಲಿ ಅರುವತ್ತಾರು ಮಂದಿ ಮಹನೀಯರುಗಳ ಲೇಖನಗಳಿವೆ. ಈ ಲೇಖನಗಳನ್ನು ಓದುವಾಗ ಮಾಣಂಗಾಯಿ ಕೃಷ್ಣ ಭಟ್ಟರ ಬದುಕು ಮತ್ತು ಸಾಧನೆಗಳನ್ನು ತಿಳಿಯಬಹುದು. ಬಳಿಕ ಚಿಂತನ ಎಂಬ ತಲೆಬರಹದಡಿಯಲ್ಲಿ ಹನ್ನೆರಡು ಅತ್ಯುತ್ತಮ ಬರಹಗಳಿವೆ. ಬಳಿಕ ಪ್ರಯೋಗ ಎಂಬ ವಿಭಾಗದಡಿ ನಲುವತ್ತಕ್ಕೂ ಹೆಚ್ಚು ಮುಖವರ್ಣಿಕೆ ಚಿತ್ರಗಳಿವೆ. ಹಳೆಯ ಚಿತ್ರಗಳನ್ನು ಹೊಸತಾಗಿ ಮೂರ್ತೀಕರಿಸಿದವರು ಡಾ. ಕೆ. ಎಂ. ರಾಘವ ನಂಬಿಯಾರ್.  ಆ ಬಗೆಗೆ ನಂಬಿಯಾರರು ಲೇಖನದ ರೂಪದಲ್ಲಿ ವಿವರಣೆಯನ್ನೂ ನೀಡಿರುತ್ತಾರೆ. ಬಳಿಕ ಪರಾಮರ್ಶನ ಎಂಬ ಶೀರ್ಷಿಕೆಯಡಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಯಕ್ಷಗಾನದ ಬಗ್ಗೆ ಪ್ರಕಟಗೊಂಡ ಅನೇಕ ಪುಸ್ತಕಗಳ ಬಗ್ಗೆ ವಿವರಣೆಯನ್ನು ನೀಡಿರುತ್ತಾರೆ. ಪುಸ್ತಕದ ಕೊನೆಯ ಭಾಗ ಅನುಬಂಧಗಳು ಎಂಬ ಶೀರ್ಷಿಕೆಯಡಿಯಲ್ಲಿ ಪುತ್ತೂರು ಕೃಷ್ಣ ಭಟ್ಟರ ಲೇಖನ, ಸನ್ಮಾನ ಪತ್ರ, ಜನ್ಮ ಪತ್ರಿಕೆ, ಭೀಮಗುಳಿ ವಂಶವೃಕ್ಷ ಮೊದಲಾದ  ಹದಿಮೂರು ವಿಚಾರಗಳಿವೆ. ಮಾಣಂಗಾಯಿಯವರ ಬಗೆಗೆ ಅಲ್ಲದೆ ಯಕ್ಷಗಾನ ಕಲೆಯ ಬಗೆಗೂ ತಿಳಿಯಲು ಇದು ಒಂದು ಉತ್ತಮ ಪುಸ್ತಕ. 

RELATED ARTICLES

2 COMMENTS

  1. Great artist, great article! ಉತ್ತಮ ಲೇಖನ! ನಮ್ಮ ಬದಿಯಡ್ಕದ ಆಟಗಳಿಗೆ ಮೇಳದಲ್ಲಿ ಬಂದಾಗಲೆಲ್ಲ ನಮ್ಮ ಮನೆಯಲ್ಲಿ ಇರುತ್ಹಿದ್ದರು. ನಮಗೆಲ್ಲಾ ತುಂಬಾ ಪರಿಚಿತರು. ಅವರ ಕರ್ಣ, ಋತುಪರ್ಣ ಮೊದಲಾದ ಪಾತ್ರಗಳು ಅಸಾಮಾನ್ಯ 🙏

  2. ಯಕ್ಷಭೀಮನ ನೂರು ಹೆಜ್ಜೆಗಳು 2004ನೇ ಸಾಲಿನ ಜಾನಪದ ವಿಭಾಗದಲ್ಲಿ ಅತ್ಯುತ್ತಮ ಕೃತಿಯೆಂದು ಉದಯವಾಣಿ ದಿನಪತ್ರಿಕೆಯಿಂದ ಆಯ್ಕೆಯಾದ ಪುಸ್ತಕ. ಇದರ ಸಂಪಾದಕನನ್ನಾಗಿ ಮಾಡಿ ಪ್ರೋತ್ಸಾಹಿಸಿದ ಡಾ.ಕೃಷ್ಣಮೂರ್ತಿ ಪಂಜ ಅವರಿಗೆ ಕೃತಜ್ಞನಾಗಿದ್ದೇನೆ.

    ಕ್ಷಮಿಸಿ, ಈ ಲೇಖನ ಈಗಷ್ಟೇ ನನ್ನ ಗಮನಕ್ಕೆ ಬಂತು. ಒಳ್ಳೆಯ ಲೇಖನ, ಸಂಪಾದಕರಿಗೆ ವಂದನೆಗಳು.

    ರಾಜ ಗೋಪಾಲ್ ಕನ್ಯಾನ.

LEAVE A REPLY

Please enter your comment!
Please enter your name here

Most Popular

Recent Comments