Saturday, May 18, 2024
Homeಭರತನಾಟ್ಯಹೊಸ ಪ್ರಯೋಗಕ್ಕೆ ಮೊದಲು ಎಚ್ಚರ...

ಹೊಸ ಪ್ರಯೋಗಕ್ಕೆ ಮೊದಲು ಎಚ್ಚರ…

ಈ ಪ್ರಪಂಚವೇ ಹಾಗೆ. ಜನರ ಯೋಚನೆಯ ಅಲೆಗಳು ಸಾಗುವುದು ಆ ದಿಕ್ಕಿನಲ್ಲೇ. ನಾಗರಿಕ ಸಮಾಜ ಯೋಚಿಸುವುದು ಮತ್ತು ಆಚರಿಸಲು ಇಷ್ಟಪಡುವುದು ನವನವೀನವಾದ ಸಂಗತಿಗಳನ್ನೇ ಆಗಿದೆ. ಹಾಗೆ ನೋಡಿದರೆ ‘ನಾಗರಿಕತನ’ ಎನ್ನುವುದು ಮನುಷ್ಯನ ಬದಲಾವಣೆ ಅಥವಾ ಹೊಸತನದ ಯೋಚನೆಗಳಿಂದ ಪ್ರಪಂಚದಲ್ಲಿ ಆವಿರ್ಭವಿಸಿದ ಧನಾತ್ಮಕ ಕೊಡುಗೆ ಎಂದೇ ಹೇಳಬಹುದು. ಅನಾದಿ ಕಾಲದಿಂದ ಮನುಷ್ಯನ ಬೆಳವಣಿಗೆಯು ಹೊಸತನದ ಸೃಷ್ಟಿ ಅಥವಾ ಬದಲಾವಣೆಯಿಂದಲೇ ಆಯಿತು.


ಮನುಷ್ಯನ ಸ್ವಭಾವವೇ ಹಾಗೆ. ದೈನಂದಿನ ಚಟುವಟಿಕೆಗಳಲ್ಲಿ ಹೊಸತನ್ನು ಹುಡುಕುತ್ತಾ ಬದಲಾವಣೆಯನ್ನು ಅನ್ವೇಷಿಸುವುದು ಮತ್ತು ಅದರಲ್ಲಿ ನೆಮ್ಮದಿಯನ್ನು, ಸಂತೋಷವನ್ನು ಅನುಭವಿಸುವುದು ನಿರಂತರವಾಗಿ ಸಾಗಿಬಂದ ಪ್ರಕ್ರಿಯೆ. ಹೊಸತನದ ಯೋಚನೆ ಇಲ್ಲದಿದ್ದರೆ ಯುಗ ಯುಗಾಂತರಗಳ ಹಿಂದೆ ಕಾಡುಮನುಷ್ಯರಾಗಿದ್ದ ಮಾನವರು ಪ್ರಸ್ತುತ ನಾಗರಿಕ ಲೋಕದ ಬೆಳವಣಿಗೆಗಳನ್ನು ಕಾಣುವುದಕ್ಕಿತ್ತೇ?


ಆಟದಲ್ಲಿ ಬದಲಾವಣೆ, ನೋಟದಲ್ಲಿ ಹೊಸತನ, ರಾಜಕೀಯ, ಕ್ರೀಡೆ, ವಿಜ್ಞಾನ, ಸಾಂಸ್ಕೃತಿಕ ರಂಗ ಹೀಗೆ ಎಲ್ಲ ರಂಗಗಳಲ್ಲಿಯೂ ಹೊಸತನದ ಸೃಷ್ಟಿಯ ಮೂಲಕ ಆಕರ್ಷಣೆ ಹಾಗೂ ಯಶಸ್ಸನ್ನು ಸಂಪಾದಿಸುವ ವಿಧಾನವನ್ನು ಅರಿತ ಮಂದಿ ಅವುಗಳನ್ನು ನಗದೀಕರಿಸಿಕೊಂಡರು. ನಿರಂತರ ಅನ್ವೇಷಣೆಯಿಂದ ಯಶಸ್ಸು ಹಾಗೂ ಅಭಿವೃದ್ಧಿಯನ್ನೂ ಕಂಡುಕೊಂಡರು.
ಯಾರಲ್ಲೂ ಇಲ್ಲದ ಹೊಸ ವಿನ್ಯಾಸದ ಬಟ್ಟೆಯನ್ನು ತೊಡಬೇಕೆಂಬ ತುಡಿತದಿಂದ ವಿದ್ಯಾರ್ಥಿನಿಯೊಬ್ಬಳು ಚಿತ್ರವಿಚಿತ್ರ ಆಧುನಿಕ ವಿನ್ಯಾಸದ ಹರಿದಂತಿರುವ ಹೊಸ ಉಡುಗೆಯನ್ನು ಧರಿಸುತ್ತಾ ರಸ್ತೆಯಲ್ಲಿ ನಡೆಯುತ್ತಾಳೆ. ಹೊಸ ವಿನ್ಯಾಸದ ಕೇಶವಿನ್ಯಾಸವನ್ನು ತಾನೇ ಮೊದಲು ಮಾಡಿಸಬೇಕೆಂಬ ಆಸೆಯಿಂದ ಹುಡುಗನೊಬ್ಬ ಅರ್ಧ ಬೋಳುತಲೆ ಮತ್ತು ಚಿತ್ರವಿಚಿತ್ರ ಗೆರೆ ಗಳಿರುವ ಎಳನೀರು ಕೆತ್ತಿದಂತೆ ಕಾಣುವ ಕೇಶವಿನ್ಯಾಸವನ್ನು ಮಾಡಿಸಿಕೊಂಡು ಇತರರಿಗೆ ಮಾದರಿಯಾಗುತ್ತಾನೆ!


ಮಾಧ್ಯಮಗಳು ನಿಮಿಷಕ್ಕೆರಡು ಚಿತ್ರವಿಚಿತ್ರವಾದ ಬ್ರೇಕಿಂಗ್ ನ್ಯೂಸ್ ಗಳನ್ನು ಕೊಡುತ್ತಾ ಇದು ನಮ್ಮಲ್ಲೇ ಮೊದಲು ಎಂದು ಹೇಳುತ್ತಾ ಹೊಸತನದ ದಾರಿಯಲ್ಲಿ ಹೆಜ್ಜೆ ಹಾಕುತ್ತದೆ. ರಾಜಕಾರಣಿಗಳು ಕತ್ತೆಯ ಮೇಲೆ ಕುಳಿತು ವಿಭಿನ್ನ ಮಾದರಿಯ ಮತಪ್ರಚಾರಗಳನ್ನೂ ಮಾಡುತ್ತಾರೆ.
ತರುಣಿಯೊಬ್ಬಳು ಯಾರಲ್ಲೂ ಇಲ್ಲದ ಹೊಸ ವಿನ್ಯಾಸದ ಕಿವಿಯೋಲೆಯನ್ನೋ, ಕೊರಳಹಾರವನ್ನೋ ಮಾಡಿಸಿಕೊಂಡು ಸಭೆ, ಸಮಾರಂಭಗಳಲ್ಲಿ ದೃಷ್ಟಿಗೆ ಕೇಂದ್ರಬಿಂದುವಾಗುತ್ತಾಳೆ. ಹೆಂಗಸೊಬ್ಬಳು ತನ್ನ ಕುಪ್ಪಸದ ಹಿಂದೆ ಚಿತ್ರ ವಿಚಿತ್ರ ಕಿಟಕಿಗಳನ್ನು, ಕಿಂಡಿಗಳನ್ನು ವಿನ್ಯಾಸಗೊಳಿಸಿ ಗೊಂಡೆ, ಕುಚ್ಚುಗಳನ್ನು ನೇತಾಡಿಸುತ್ತಾ ಬೆನ್ನ ಹಿಂದಿನ ಮೆಚ್ಚುಗೆಯ ನೋಟಕ್ಕೆ ಆಹಾರವಾಗುತ್ತಾಳೆ.


ಆದ್ದರಿಂದ ಈ ಬದಲಾವಣೆಯ ಹಪಹಪಿಸುವಿಕೆ, ಆಗ್ರಹಗಳು ಇಂದು ನಿನ್ನೆಯದಲ್ಲ. ಹೊಸತನ್ನ ಕೊಡುವ ಕಾತರ, ತುಡಿತಗಳು ಎಲ್ಲ ರಂಗದಲ್ಲೂ ಇವೆ. ಮೊದಲಿನ ಶಾಸ್ತ್ರೀಯವಾದ ಬರವಣಿಗೆ ಸಾಹಿತ್ಯಗಳು ಮಾಯವಾಗಿ ಸಾಹಿತ್ಯಕ್ಕೊಂದು ನಾವೀನ್ಯತೆಯ ಶೈಲಿ ಬಂದಿದೆ. ಈಗಿನ ಯುವ ಬರಹಗಾರರಲ್ಲಿ ಅದನ್ನು ಕಾಣಬಹುದು. ಛಂದಸ್ಸು, ವ್ಯಾಕರಣ ಯಾವುದೂ ಇಲ್ಲದ ಕವನ, ಹನಿಗಳು ಬಂದಿವೆ. ಕೊನೆಗೆ ಪ್ರಾಸ ಒಂದಿದ್ದರೆ ಆಯಿತು. ಆದ್ದರಿಂದ ಆದಿಕವಿಗಳ ಹಳೆಗನ್ನಡ ಕಾವ್ಯದಿಂದ ತೊಡಗಿ ನಾವು ಇಂಥದ್ದೇ ಎಂದು ಗುರುತಿಸಲಾಗದ ನವ್ಯಕವನಗಳ ಕಾಲಕ್ಕೆ ಬಂದಿದ್ದೇವೆ.


ಸಮಾಜಕ್ಕೆ ಒಳಿತಾಗುವ, ಮೂಲಕ್ಕೆ ತೊಡಕಾಗದೆ ಯಾವುದೇ ಪ್ರಾಕಾರಗಳ ಸಂಶೋಧನೆ ಹಾಗೂ ಹೊಸ ಪ್ರಯೋಗಗಳು ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಆದರೆ ಕೇವಲ ತನ್ನನ್ನು ಗುರುತಿಸಬೇಕು ಹಾಗೂ ಬಹುಬೇಗ ಪ್ರಸಿದ್ಧಿಗೆ ಬರಬೇಕೆಂಬ ಹುಚ್ಚು ಹಂಬಲಗಳಿಂದ ಮಾಡುವ ಅನಾರೋಗ್ಯಕರ ಬದಲಾವಣೆಗಳು, ಅಪಾಯಕಾರೀ ಸಂಶೋಧನೆಗಳು ಹಾಗೂ ಅವುಗಳ ಪ್ರಯೋಗ ಪರಿಸರಕ್ಕೆ ಮಾರಕವಾಗಬಹುದು.
ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅಣು ಹಾಗೂ ರಾಸಾಯನಿಕ ಅಸ್ತ್ರಗಳ ಸಂಶೋಧನೆ ಒಳ್ಳೆಯದೇ. ಆದರೆ ಪ್ರಯೋಗದಿಂದ ಮಾತ್ರ ಪರಿಣಾಮ ಘೋರ. ಕೇವಲ ವಿಜ್ಞಾನ ಮಾತ್ರವಲ್ಲ ಎಲ್ಲ ವಿಭಾಗಗಳಿಗೂ ಈ ಮಾತು ಅನ್ವಯಿಸುತ್ತದೆ.


ಯಾವುದೇ ವಿಚಾರದಲ್ಲಿ ಭಿನ್ನತೆಯ ಹಾದಿ ತುಳಿಯುವುದು ಅಷ್ಟು ಸುಲಭವಲ್ಲ. ಮೊದಲು ಉಲ್ಲೇಖಿಸಿದಂತೆ ಸಾಹಿತ್ಯದ ಅಥವಾ ಪುರಾಣದ ಕಥಾನಕದ ಪಾತ್ರಗಳನ್ನು ಈಗಿನ ಕಾಲದ ಜೀವನಕ್ರಮ ಮತ್ತು ವಿಧಾನಗಳ ವ್ಯಾಪ್ತಿಯಲ್ಲಿ ವಿಮರ್ಶಿಸಹೊರಟರೆ ಸಮಂಜಸವೆನಿಸುವುದಿಲ್ಲ.
ಯುಗಾಂತರದ ಹಿಂದೆ ಇದ್ದ ‘ನಿಯೋಗ’ ಪದ್ಧತಿಯನ್ನು ಈ ಕಾಲದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸುವುದು ಅಷ್ಟೊಂದು ಸಮಂಜಸ ಎನಿಸುವುದಿಲ್ಲ. ಈ ಕಾಲದಲ್ಲಿ ಆ ಪದ್ಧತಿ ‘ಅನಾಗರಿಕ’ವೇ ಆಗಿರಬಹುದು. ಆದರೆ ಆ ಕಾಲಕ್ಕೆ ಅದು ಪ್ರಸ್ತುತವೇ ಆಗಿತ್ತು ಎಂಬುದು ಎಲ್ಲರೂ ಒಪ್ಪುವ ಮಾತು. ಆ ಕಾಲದಲ್ಲಿ ವಿಜ್ಞಾನ ಮುಂದುವರಿಯಲಿಲ್ಲ ಎಂಬುದರಿಂದ ನಿಯೋಗ ಪದ್ಧತಿಯಿಂದ ನಡೆಯುತ್ತಿದ್ದ ಗರ್ಭದಾನವು ಈಗ ಪರಿಷ್ಕೃತಗೊಂಡು Sperm Donate (ವೀರ್ಯದಾನ) ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಆದ್ದರಿಂದ ಅಂದಿನ ನಿಯೋಗ ಪದ್ಧತಿಯನ್ನು ಈ ಕಾಲದಲ್ಲಿ ಭಿನ್ನ ದೃಷ್ಟಿಕೋನದಿಂದ ನೋಡುತ್ತಿದ್ದವರೆಲ್ಲಾ ಈಗಿನ ಪದ್ಧತಿಯ ಬಗ್ಗೆ ಮೌನವಾಗಿದ್ದಾರೆ


ಪೌರಾಣಿಕ ಪಾತ್ರಗಳಿಗೆ ವರ್ತಮಾನದ ಜೀವನಕ್ರಮಗಳ ಲೇಪನವನ್ನು ಕೊಟ್ಟು ಚಿತ್ರಿಸುವುದು ಈಗ ಒಂದು ಪಿಡುಗಾಗಿ ಮಾರ್ಪಟ್ಟಿದೆ. ಬರಹಗಾರರು, ನಟರು, ರಂಗ ಕಲಾವಿದರು ಹೊಸತನದ ಸೃಷ್ಟಿಯಲ್ಲಿ ಅಗ್ಗದ ಜನಪ್ರಿಯತೆಗೆ ಜೋತುಬಿದ್ದು ಮೂಲದಲ್ಲಿ ಇಲ್ಲದ್ದನ್ನು ತಮ್ಮದೇ ವ್ಯಾಖ್ಯಾನವೆಂಬಂತೆ ರಂಗದಲ್ಲಿ ಅಥವಾ ಬರಹದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ. ಯಾಕೆಂದರೆ ಇದೇ ನೈಜಕಥೆ ಎಂದು ಸಾಮಾನ್ಯ ಪ್ರೇಕ್ಷಕರು ತಿಳಿದುಕೊಳ್ಳುವ ಅಪಾಯವಿದೆ. ಆದ್ದರಿಂದ ಮೂಲಕಥೆಯಲ್ಲಿ ಇಲ್ಲದ್ದನ್ನು ತಂದು ಪ್ರದರ್ಶಿಸುವ ಮೊದಲು ಅಥವಾ ಕೃತಿ ರಚಿಸುವಾಗ “ಅಲ್ಲಲ್ಲಿ ಕಾಲ್ಪನಿಕ ದೃಶ್ಯಗಳನ್ನು ಸೇರಿಸಿ ಕಥೆ ಹೆಣೆಯಲಾಗಿದೆ’’ ಎಂಬ ಸೂಚನೆಯನ್ನು ನೀಡುವುದು ಉತ್ತಮ.


ಒಬ್ಬರಿಗೆ ಕರ್ಣನ ಬಗ್ಗೆ ವಿಪರೀತ ಮರುಕ ಹುಟ್ಟಿ ಕಥೆಯನ್ನು ವಿರೂಪಗೊಳಿಸಿ ಕರ್ಣನ ಪರವಾಗಿ ಚಿತ್ರಣ ಕೊಡಬಹುದು. ಇನ್ನೊಬ್ಬರಿಗೆ ಕುಂತಿಯ ಮನದಾಳದ ಬಗ್ಗೆ ಬರೆಯಬೇಕೆಂದು ಅನಿಸಿ ಉತ್ಸಾಹದಿಂದ ಮೂಲಕಥೆಯಲ್ಲಿ ಕುಂತಿಯ ಮನಸ್ಸಿನಲ್ಲಿ ಇಲ್ಲದ ಸಂಗತಿಗಳನ್ನೆಲ್ಲಾ ತುರುಕಿ ಈ ಕಾಲಕ್ಕನುಗುಣವಾಗಿ ಪಾತ್ರಚಿತ್ರಣ ಮಾಡಬಹುದು. ಇನ್ನೊಬ್ಬರು ದ್ರೌಪದಿಯ ಬಗ್ಗೆ, ಕಣ್ಣಿಗೆ ಬಟ್ಟೆ ಕಟ್ಟಿದ ಗಾಂಧಾರಿಯ ಬಗ್ಗೆ ಮರುಕ ಹುಟ್ಟಿ ಪುರಾಣದಲ್ಲಿ ಇಲ್ಲದ್ದನ್ನೆಲ್ಲಾ ಸ್ತ್ರೀಶೋಷಣೆ ಎಂದು ಹೇಳುತ್ತಾ ಪ್ರಸ್ತುತಪಡಿಸಬಹುದು. ಮಗದೊಬ್ಬರಿಗೆ ಅಂಬೆಯ ನೋವಿನ ಬಗ್ಗೆ ಅತೀವ ಹೃದಯಮಿಡಿತವಿದ್ದು ಅಂಬೆಯಾಗಿ ಈ ಕಾಲದಲ್ಲಿ ನಿಂತು ಮಾತನಾಡುವಂತೆ ಭಾವನೆಗಳನ್ನು ಪ್ರಕಟಿಸಿ ಬರೆಯಬಹುದು. ಆದರೆ ಅದು ಸಾಹಿತ್ಯವಿರಲಿ ಅಥವಾ ಪ್ರದರ್ಶನವಿರಲಿ ಇಂತಹಾ ಎಷ್ಟೋ ಲೇಖನಗಳಲ್ಲಿ ಅಥವಾ ಪ್ರದರ್ಶನಗಳಲ್ಲಿ ಕಾಲ್ಪನಿಕ ಸಂಗತಿಗಳನ್ನು ಸೇರಿಸಿ ಕಥೆ ಹೆಣೆಯಲಾಗಿದೆ ಎಂಬುದರ ಉಲ್ಲೇಖವಿರದಿದ್ದರೆ ಅದು ಆಕ್ಷೇಪಾರ್ಹ.


ರಂಗಕಲೆಗಳಿರಲಿ ಅಥವಾ ಸಾಹಿತ್ಯವೇ ಇರಲಿ ಮೂಲಕಥೆಗೆ ಚ್ಯುತಿಬರದಂತೆ ಪ್ರಸ್ತುತಪಡಿಸುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ತಾನು ನಡೆದದ್ದೇ ದಾರಿ ಎಂಬಂತೆ ಆಗುತ್ತದೆ.
ಇತ್ತೀಚೆಗೆ ಭಾರತೀಯ ರಂಗಕಲೆಯ ಕಲಾವಿದರೊಬ್ಬರು ಮಾತನಾಡುತ್ತಾ ‘‘ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತನ್ನ ಮಿತಿಯೊಳಗೆ ವಿಮರ್ಶಿಸಲು ಕೆಲವು ಕಲಾವಿದರಲ್ಲಿ ಅರಿವಿನ ಕೊರತೆಯಿರುವುದು ನಿಜ. ಆದರೆ ಎಲ್ಲರೂ ಹಾಗೆಂದು ಅರ್ಥವಲ್ಲ. ಅಂತಹಾ ಕಲಾವಿದರಲ್ಲಿ ಪ್ರಶ್ನಿಸಿದಾಗ ‘ನನ್ನ ದೇವಿಯ ಪಾತ್ರ ಹೀಗೆ, ನನ್ನ ಇಂದ್ರಜಿತು ಹೀಗೆ, ನನ್ನ ಮುಖವರ್ಣಿಕೆ ಹೀಗೆ’ ಎಂದು ಹೇಳುತ್ತಾರೆಯೇ ವಿನಃ ಈ ರಂಗಕಲೆಯ ದೇವಿ, ಇಂದ್ರಜಿತು ಪಾತ್ರಗಳ ಬಗ್ಗೆ ಹೀಗೆ ಎಂದು ಹೇಳುವುದಿಲ್ಲ’’ ಎಂದು ಹೇಳಿದರು. ಅಕ್ಷರಶಃ ಸತ್ಯವನ್ನೇ ಅವರು ಅಂದು ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments