Wednesday, May 8, 2024
Homeಕೃಷಿಕೃಷಿಯಲ್ಲಿ ತೊಡಗಿಸಿಕೊಂಡ ರಕ್ತರಾತ್ರಿಯ ಅಶ್ವತ್ಥಾಮ ಖ್ಯಾತಿಯ ಗುಂಡಿಮಜಲು

ಕೃಷಿಯಲ್ಲಿ ತೊಡಗಿಸಿಕೊಂಡ ರಕ್ತರಾತ್ರಿಯ ಅಶ್ವತ್ಥಾಮ ಖ್ಯಾತಿಯ ಗುಂಡಿಮಜಲು

ತೆಂಕುತಿಟ್ಟಿನ ಅತ್ಯುತ್ತಮ ಪುಂಡುವೇಷಧಾರಿಗಳಲ್ಲಿ ಗುಂಡಿಮಜಲು ಒಬ್ಬರು. ಮಿತ್ರರು, ಸಹಕಲಾವಿದರು, ಕಲಾಭಿಮಾನಿಗಳು ಇವರನ್ನು ಗುಂಡಿಮಜಲು ಗೋಪಣ್ಣ ಎಂದೇ ಕರೆದರೂ ಇವರ ಪೂರ್ತಿ ಹೆಸರು ಗುಂಡಿಮಜಲು ಗೋಪಾಲಕೃಷ್ಣ ಭಟ್. 1959 ನವೆಂಬರ್ 5ರಂದು ಬಂಟ್ವಾಳ ತಾಲೂಕು, ಬೋಳಂತೂರು ಗ್ರಾಮದ ಗುಂಡಿಮಜಲು ಎಂಬಲ್ಲಿ ಇವರ ಜನನ. ಗುಂಡಿಮಜಲು ಸುಬ್ರಾಯ ಭಟ್, ವೆಂಕಟೇಶ್ವರೀ ಅಮ್ಮ ದಂಪತಿಗಳ ಏಳು ಮಂದಿ ಪುತ್ರರಲ್ಲಿ ಇವರು 5ನೇಯವರು. ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ಸುರಿಬೈಲು ಮತ್ತು ಬೋಳಂತೂರು ಶಾಲೆಗಳಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತಿ. ಬಹಳ ದೂರದ ವರೆಗೆ ನಡೆದುಕೊಂಡೇ ಸಾಗಿ ಆಟಗಳನ್ನು ನೋಡುತ್ತಿದ್ದರಂತೆ.

ಶಾಲಾ ವಿದ್ಯಾರ್ಥಿಯಾಗಿದ್ದಾಗ ವಿಟ್ಲ ರಾಮಯ್ಯ ರೈಗಳಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ನಂತರ ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಶ್ರೀ ಪಡ್ರೆ ಚಂದು ಅವರಿಂದ ನಾಟ್ಯ ಕಲಿತರು (ಎರಡನೇ ಬ್ಯಾಚ್). ಕೇಂದ್ರದಲ್ಲಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಉಮೇಶ ಹೆಬ್ಬಾರ್, ಬೆಳಾಲು ಲಕ್ಷ್ಮಣ ಗೌಡ ಮೊದಲಾದವರು ಇವರ ಸಹಪಾಠಿಗಳಾಗಿದ್ದರು. ನಾಟ್ಯಾರ್ಜನೆಯ ಬಳಿಕ ಸೊರ್ನಾಡು ವಿಶ್ವನಾಥ ಶೆಟ್ಟರ ಸಂಚಾಲಕತ್ವದ ಸೊರ್ನಾಡು ಮೇಳದಲ್ಲಿ 1 ವರುಷ ತಿರುಗಾಟ ನಡೆಸಿ, ಮತ್ತೆ ಕಟೀಲು ಮೇಳವನ್ನು ಸೇರಿಕೊಂಡರು.


ಶ್ರೀ ಬಲಿಪರು ಆಗ ಕಟೀಲು 2ನೇ ಮೇಳದ ಪ್ರಧಾನ ಭಾಗವತರಾಗಿದ್ದರು. ಕೋಡಂಗಿ, ಬಾಲಗೋಪಾಲರು, ಪೀಠಿಕಾ ಸ್ತ್ರೀವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದು ಕಲಾವಿದನಾಗಿ ರೂಪುಗೊಂಡವರು ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್. ಪೆರುವಾಯಿ, ಅರುವ, ರೆಂಜಾಳ, ಶೀನಪ್ಪ ರೈ, ಮಂಕುಡೆ ಸಂಜೀವ ಶೆಟ್ಟಿ, ಕುಟ್ಯಪ್ಪು, ಕುಂಞಕಣ್ಣ ಮಣಿಯಾಣಿ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟವೂ ಇವರಿಗೆ ಸಿಕ್ಕಿತ್ತು. ಮಳೆಗಾಲ ಶ್ರೀ ಬಲಿಪ ನಾರಾಯಣ ಭಾಗವತರ ಮನೆಯಲ್ಲಿದ್ದು ಗುಂಡಿಮಜಲು ಅವರು ಪುರಾಣ ಪ್ರಸಂಗಗಳ ನಡೆ, ವೇಷಗಳ ಸ್ವಭಾವ, ಚಿತ್ರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಲಿಪರು ನನ್ನನ್ನು ತಿದ್ದಿತೀಡಿದರು ಎಂದು ಗುಂಡಿಮಜಲು ಗೋಪಾಲ ಭಟ್ಟರು ಹೇಳುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಬಲಿಪರ ಜತೆ 5 ವರ್ಷ ತಿರುಗಾಟ ನಡೆಸಿ, ಇರಾ ಗೋಪಾಲಕೃಷ್ಣ ಭಾಗವತರ ಜತೆ ಕಟೀಲು 1ನೇ ಮೇಳದಲ್ಲಿ 1 ವರ್ಷ ತಿರುಗಾಟ, ಮತ್ತೆ ಬಲಿಪರ ಜತೆ 6 ವರ್ಷ ಕಟೀಲು ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಮತ್ತೆ 3 ವರ್ಷ ಕುರಿಯ ಶ್ರೀ ಗಣಪತಿ ಶಾಸ್ತ್ರಿಯವರ ಜತೆ 3ನೇ ಮೇಳದಲ್ಲಿ ವ್ಯವಸಾಯ ಮಾಡಿದರು. ನಾನು ಕಲಾವಿದನಾಗಿ ಕಾಣಿಸಿಕೊಳ್ಳುವುದಕ್ಕೆ ಬಲಿಪ ಭಾಗವತರು ಮತ್ತು ಸಹಕಲಾವಿದರೇ ಕಾರಣರು. ಅವರೇ ನನ್ನನ್ನು ರಂಗದಲ್ಲಿ ಮೆರೆಯುವಂತೆ ಮಾಡಿದವರು ಎಂದು ಕೃತಜ್ಞತೆಯಿಂದ ಹೇಳುವ ಗುಂಡಿಮಜಲು, ಅಭಿಮನ್ಯು, ಚಂಡಮುಂಡರು, ಕುಶ, ಬಭ್ರುವಾಹನ ಮೊದಲಾದ ಪಾತ್ರಗಳನ್ನು ಮಾಡುತ್ತಾ ಪ್ರಸಿದ್ಧರಾದರು.

ಬಲಿಪ ನಾರಾಯಣ ಭಾಗವತರು ಬರೆದ ಪ್ರಸಂಗ- ರಕ್ತರಾತ್ರಿ (ಚಾಲ್ತಿಯಲ್ಲಿರಲಿಲ್ಲ) ಮೊದಲ ಪ್ರಯೋಗ ನಡೆದದ್ದು ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪ. ಅಶ್ವತ್ಥಾಮನಾಗಿ ಕಾಣಿಸಿಕೊಂಡರು ಗುಂಡಿಮಜಲು ಗೋಪಾಲಣ್ಣ. ಆಗ ನೆಲದ ರಂಗಸ್ಥಳ. ಅಶ್ವತ್ಥಾಮನ ಪಾತ್ರಕ್ಕೊಂದು ರೂಪು ಕೊಟ್ಟು ಪ್ರಚಂಡನಾಗಿ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡರು. ಸಂತೋಷಗೊಂಡ ಬಲಿಪ ಭಾಗವತರು ಇವನಿಂದ ಯಾವ ವೇಷವನ್ನೂ ಮಾಡಿಸಬಹುದು ಎಂದು ಹೇಳಿದರಂತೆ. ತೆಂಕಿನ ಪುಂಡುವೇಷಗಳಿಗೆ, ಕಲಾವಿದರಿಗೆ ಇವರೊಬ್ಬ ಮಾದರಿಯಾಗಬಲ್ಲ ಕಲಾವಿದ.

ಮೇಳದ ತಿರುಗಾಟದಿಂದ ನಿವೃತ್ತರಾಗಿ ಈಗ ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃಷಿಕ ಕುಟುಂಬದಲ್ಲಿ ಜನಿಸಿದ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು ಉತ್ತಮ ಕೃಷಿಕರೂ ಹೌದು. ರಂಗಸ್ಥಳದಲ್ಲಿ ಕಸುಬು ಮಾಡಿದಂತೆ ತನ್ನ ಹೊಲ, ತೋಟಗಳಲ್ಲೂ ಚೆನ್ನಾಗಿ ದುಡಿಯುತ್ತಾರೆ. ಶ್ರಮಜೀವಿಯಾಗಿದ್ದಾರೆ. ಪತಿಯ ಮನವರಿತು ನಡೆಯುವ ಪತ್ನಿ ಶ್ರೀಮತಿ ಲತಾ ಗೋಪಾಲಕೃಷ್ಣ ಭಟ್ ಮತ್ತು ಪುತ್ರ ಸುಚೇತ್ ಅವರೊಂದಿಗೆ ಸುಖೀಸಂಸಾರ ಗುಂಡಿಮಜಲು ಅವರದು. (ಪುತ್ರ ಸುಚೇತ್ ಇಂಜಿನಿಯರಿಂಗ್ ವಿದ್ಯಾರ್ಥಿ). ಸಾಧಕರಾದ ಶ್ರೀ ಗುಂಡಿಮಜಲು ಅವರಿಗೆ ‘ಸರ್ಪಂಗಳ ಪ್ರಶಸ್ತಿ’ ಒಲಿಯಿತು ು

ಲೇಖನ: ರವಿಶಂಕರ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments