ಮರೆಯಲಾಗದ ಮಹಾನುಭಾವರು
ಇವರ ಹೆಸರನ್ನು ನಾನು ವೆಂಕಟೇಶ್ವರ ಉಪಾಧ್ಯ ಎಂದೋ, ವೆಂಕಟೇಶ ಉಪಾಧ್ಯಾಯ ಎಂದೋ ಬರಯಲಾಗದು. ಅವರು ಹಾಗೆ ಬರೆಯುವ ಎರಡು ರೀತಿಯೂ ತಪ್ಪು ಎಂದು ಖಂಡಿತಾ ಅಸಮಾಧಾನಗೊಳ್ಳುವವರೇ ಎಂದು ನನಗೆ ಗೊತ್ತು! ಏಕೆಂದರೆ ಸಂಸ್ಕೃತದಲ್ಲಿ ಹ್ರಸ್ವಾಕ್ಷರ ಎ ಇಲ್ಲ!.ಅದು ವ್ಯಾಕರಣ ನಿಷ್ಠರಾದ ಅವರಿಗೆ ಅಪಚಾರ. ತೆಂಕು,ಬಡಗು ಉಭಯ ಪ್ರದೇಶಗಳಲ್ಲೂ ಅರ್ಥಧಾರಿಯಾಗಿ ವಿಜೃಂಭಿಸಿದವರು.ಪೌರೋಹಿತ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧಕರು,.ಸಂಸ್ಕೃತ,ಕನ್ನಡ ಉಭಯ ಭಾಷೆಗಳಲ್ಲೂ ಸ್ನಾತಕೋತ್ತರ ಪದವಿಯ ಸಾಧಕರು. ಹಿಂದಿಯಲ್ಲಿ ರಾಷ್ಟ್ರಭಾಷೆ, ಬಿಎಡ್ ಮುಂತಾದ ಹಲವು ಉಪಾಧಿಗಳೆಲ್ಲವನ್ನೂ ಸ್ವಾಧ್ಯಾಯದಿಂದಲೇ ಸಾಧಿಸಿಕೊಂಡವರು. ಸಂಸ್ಕೃತ ಕಾಲೇಜಿನ ಶಿಕ್ಷಣವನ್ನುಳಿದು ಒಂದುದಿನವೂ’ ಸರ್ಟಿಫಿಕೇಟ್’ ಬೇಕಾಗುವ ಸರ್ಕಾರಿ ಶಾಲೆಗೆ ಹೋದವರೇ ಅಲ್ಲ!
ಉಪಾಧ್ಯಾಯರು ಜನಿಸಿದ್ದು 1952ರ ಜುಲೈ ತಿಂಗಳಿನಲ್ಲಿ. ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ. ತಂದೆ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು ಶ್ರೇಷ್ಠ ಪ್ರಸಂಗ ಕರ್ತೃ, ಜ್ಯೋತಿಷಿ, ಅರ್ಚಕರು,ಪುರೋಹಿತರು. ವೈದಿಕ ವಿದ್ಯೆಗೂ ಕಲೆಗೂ’ ಎಣ್ಣೆ -ಸೀಗೆ’ಯಾಗಿದ್ದ ಕಾಲದಲ್ಲೂ ಎರಡಕ್ಕೂ ‘ಸೈ’ ಎನ್ನಿಸಿಕೊಂಡವರು. ಕೊರ್ಗಿ ಎಂಬುದು ತಂದೆಯವರ ಊರು ಅಷ್ಟೆ. ಇವರು ಹುಟ್ಟುವ ಮೊದಲೇ ಬಿಟ್ಟ ಊರು. ಆದರೂ ಅವರನ್ನದು ಬಿಡಲಿಲ್ಲ.! ( ಬಹು ಮಂದಿ ಕಲಾವಿದರ ಕಥೆ ಇದೇ. ಅವರಿಗಿಂತ ಅವರಿಲ್ಲದ ಅವರೂರು ಅವರಿಂದಾಗಿಯೇ ಸುಪ್ರಸಿದ್ಧವಾಗಿಬಿಡುತ್ತದೆ!). ತಂದೆ ತನಗೆ ತಿಳಿದಿರುವ ವೈದಿಕ ವಿದ್ಯೆಗಳನ್ನು ಕುಳಿತಲ್ಲಿ, ನಿಂತಲ್ಲಿ, ಸ್ನಾನಮಾಡುವಲ್ಲೂ ಕಲಿಸಿದರು. ವಿಶೇಷ ಅಧ್ಯಯನಕ್ಕಾಗಿ ಎಂಟನೇ ವರ್ಷದಲ್ಲೇ ಶೃಂಗೇರಿಗೆ ಕಳುಹಿಸಿದರು. ಅಲ್ಲಿ ಘನವಿದ್ವಾಂಸರಾದ ಸಾಮಗ ಸುಬ್ರಹ್ಮಣ್ಯ ಶಾಸ್ತ್ರಿಗಳ ಶಿಷ್ಯನಾಗಿ ಐದು ವರ್ಷ ಋಗ್ವೇದ ಅಧ್ಯಯನ ಮಾಡಿದರು. ಅಲ್ಲಿಂದ 1966-67 ರಲ್ಲಿ ಉಡುಪಿಗೆ ಬಂದರು. ಇಲ್ಲಿ ಯಜುರ್ವೇದ ಅಧ್ಯಯನ ಮಾಡಿದರು. ಮುಂದೆ ಸಂಸ್ಕೃತ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಘನವಿದ್ವಾಂಸ ವ್ಯಾಕರಣ, ಅಲಂಕಾರ ಶಾಸ್ತ್ರ ಶಿರೊಇಮಣಿ ಕೆ ಹರಿದಾಸ ಉಪಾಧ್ಯಾಯರಿಂದ ವ್ಯಾಕರಣ, ಅಲಂಕಾರ ಶಿಕ್ಷಣ, ತರ್ಕ ಶಿರೋಮಣಿ ಕಾಪು ಹಯಗ್ರೀವ ಆಚಾರ್ಯರಿಂದ ತರ್ಕಶಾಸ್ತ್ರದ ಅಧ್ಯಯನ(ನ್ಯಾಯ ಶಾಸ್ತ್ರ) ,ಪಾದೂರು ವೆಂಕಟರಮಣ ಐತಾಳರಿಂದ ವ್ಯಾಕರಣದ ವಿಶೇಷ ಅಧ್ಯಯನ ನಡೆಸಿದರು. ಆಗ ಉಡುಪಿಯ ಪೇಜಾವರ ಮಠ ಸಂಸ್ಕೃತ ವಿದ್ಯಾರ್ಥಿಗಳಿಗೆ ಆಶ್ರಯ ಸ್ಥಾನವಾಗಿತ್ತು. ಅಲ್ಲಿರುವ ವಿದ್ಯಾರ್ಥಿಗಳಿಗೆ ಸಿನೇಮಾ ನೋಡುವುದು ನಿಷೇಧವಾಗಿತ್ತು. ಆದರೂ ವಿದ್ಯಾರ್ಥಿಗಳು ಮಠದ ಕಾಂಪೌಂಡ್ ಹತ್ತಿ ಹಾರಿ ಸಿನೇಮಾಕ್ಕೆ ಕದ್ದು ಹೋಗುತ್ತಿದ್ದರು (ನಾನೂ ಆಗ ಪೇಜಾವರ ಮಠದಲ್ಲಿದ್ದೆ). ವಿಷಯ ಶ್ರೀಗಳ ಗಮನಕ್ಕೆ ಬಂತು. ಇವರ ಆಸಕ್ತಿ ಗಮನಿಸಿ ಒಂದು ರಿಯಾಯಿತಿ “ಉತ್ತಮವಾದ ಸಿನೇಮಾ ನೋಡಬಹುದು”. ಮಕ್ಕಳ ಬಾಯಾದ ವೇಂಕಟೇಶ್ವರ ಕೂಡಲೇ ಕೇಳಿಬಿಟ್ಟರು. “ಪಾತ್ರೆಯಲ್ಲಿಟ್ಟದ್ದು ಸಿಹಿ ತಿಂಡಿ ಎಂದು ತಿಳಿಯುವುದು ಅದನ್ನು ತಿಂದಮೇಲಲ್ಲವೆ?” ಸ್ವಾಮಿಗಳಿಗೂ ನಗು ಬಂತು. ತಿಂಗಳಿಗೆ ಒಂದು ಸಿನೇಮಾ ನೋಡಬಹುದು ಎಂದರು.
ತಂದೆಯ ಯಕ್ಷಗಾನದ ಗೀಳು ಮಗನ ಮೀಸೆಯೊಂದಿಗೇ ಚಿಗುರುತ್ತಿತ್ತು. ಅದಕ್ಕೆ ಉಡುಪಿಯ ನೀರು ಪೋಷಣೆ ಒದಗಿಸಿತು. ಆಗ ಪೇಜಾವರ ಮಠದ ಕೋಣೆಗಳಲ್ಲೂ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳ ತಾಳಮದ್ದಲೆ ಹೊಡಿಹಾರತೊಡಗಿತು. ದೇವರು ನಾರಾಯಣ ಹೆಗಡೆ, ನರಹರಿಭಟ್, ನಿಟಿಲಾಪುರ ಕೃಷ್ಣಮೂರ್ತಿ, ಗಣಪಯ್ಯ ಹೊಳ್ಳ , ಬಾಲಕೃಷ್ಣ ಜೋಶಿ,( ಈ ಎಲ್ಲರೂ ಮುಂದೆ ಘನ ವಿದ್ವಾಂಸರೆಂದು ಖ್ಯಾತಿಯನ್ನು ಪಡೆದವರು) ಮುಂತಾದವರು ತಾಳಮದ್ದಲೆ ಕಲಿಗಳಾಗತೊಡಗಿದರು.
ಒಮ್ಮೆ ತಂದೆಯೊಂದಿಗೆ ಸಿದ್ದಾಪುರದ ಕಡೆಗೆ ತಿರುಗಾಟದಲ್ಲಿದ್ದಾಗ ಬರೆಗುಂಡಿ ಪ್ರಾಂತದ ಓಟೆ ಬಚ್ಚಲು ಸಣ್ಣಯ್ಯನವರ ಮನೆಯಲ್ಲಿ ಜಾಗರವಿತ್ತು. ಇವರ ತಂದೆ ಆ ಪ್ರದೇಶದಲ್ಲಿ ಪ್ರಖ್ಯಾತ ಅರ್ಥಧಾರಿ . ಅಂದು ಪಂಚವಟಿ ವಾಲಿವಧೆ ಪ್ರಸಂಗ. ಸೂರ್ಯನಾರಾಯಣ ಉಪಾಧ್ಯಾಯರ ರಾಮ. ನಿಮ್ಮ ಮಗ ಅರ್ಥ ಹೇಳುತ್ತಾನೋ ಎಂದು ಕೇಳಿದರಂತೆ. ಅವರಿನ್ನೂ ಇವರ ಅರ್ಥ ಕೇಳಿಯೇ ಇರಲಿಲ್ಲ. ಹೇಳುತ್ತಾನಂತೆ ಎಂದರು. ಮಾರೀಚ ಬರೆದರು. ತಂದೆಯೇ ಕೇಳಿದರು .”ಮಾರೀಚ ನಾನು ಹೇಳುತ್ತೇನೆ ನೀನು ರಾಮ ಮಾಡುತ್ತೀಯೋ? ” ಉಮೇದಿನಲ್ಲಿ ಮಾಡುತ್ತೇನೆ ಎಂದರು. ಇಡೀ ರಾತ್ರಿ ರಾಮನ ಪಾತ್ರ ಮಾಡಿಯೇ ಬಿಟ್ಟರು. ಅಂದಿನ ಅವರ ಅರ್ಥಕ್ಕೆ ಆ ಪ್ರದೇಶದ ಖ್ಯಾತ ಅರ್ಥಧಾರಿ ಮಧೂರು ಪಟೇಲರ ಮೆಚ್ಚುಗೆಯೂ ದೊರೆಯಿತು. ಹೀಗೆ ರಾಮನಾಗಿ ತಾಳಮದ್ದಲೆ ರಂಗಪ್ರವೇಶಗೈದ ಉಪಾಧ್ಯಾಯರು ಹಿಂತಿರುಗಿ ನೋಡಲಿಲ್ಲ. ಉಡುಪಿ ಉಪಾಧ್ಯಾಯರಿಗೆ ವಿದ್ವತ್ತಿನ ಉಡುಪನ್ನು ತೊಡಿಸಿತು. ಸಂಸ್ಕೃತ ಕಾಲೇಜಿನಲ್ಲಿ ನ್ಯಾಯ ವಿದ್ವತ್ ಪಡೆಯುವ ಮೊದಲೇ ಹಲವಾರು ಆಟ ಕೂಟಗಳ ಮೂಲಕ ಪ್ರಸಿದ್ಧರಾದರು. ಉಡುಪಿ ವೆಂಕಟರಮಣ ದೇವಸ್ಥಾನದಲ್ಲಿ ದೊಡ್ಡ ಸೆಟ್ಟಿನ ತಾಳಮದ್ದಲೆ. ಭೀಷ್ಮಾರ್ಜುನ ಪ್ರಸಂಗ. ಅಂದು ವಿದ್ಯಾರ್ಥಿ ಉಪಾಧ್ಯಾಯರ ಭೀಮ . ಅಂದು ಶೇಣಿಯವರ ಕೃಷ್ಣ. ಹೀಗೆ ಹಿರಿಯರ ಕೂಟದಲ್ಲಿ ಶೇಣಿಯವರೊಂದಿಗೆ ಪ್ರಥಮ ಪ್ರವೇಶ. ಶಂಕರನಾರಾಯಣ ಸಾಮಗರ ಮೇಲೆ ಅಪಾರ ಭಕ್ತಿ. ಎಷ್ಟೆಂದರೆ ಒಮ್ಮೆ ಸಂಧಾನದ ಧರ್ಮರಾಯನ ಪಾತ್ರವನ್ನು ಪೂರ್ತಿಯಾಗಿ ಅವರದೇ,ಸ್ವರ,ಶೈಲಿಯಲ್ಲಿ ಹೇಳಿ ಮುಗಿಸಿದ್ದರು.! ರಾಮದಾಸ ಸಾಮಗರ ಬಗ್ಗೆಯೂ ಇದೇ ಬಗೆಯ ಗೌರವ. ಈ ಇಬ್ಬರು ಮಹನೀಯರೂ ಇವರ ಮನೆಗೆ ಸದಾ ಬರುತ್ತಿದ್ದರು. ಕಟೀಲು ದೇವಳ ಪ್ರೌಢಶಾಲೆಯಲ್ಲಿ ಸಂಸ್ಕೃತ ಭಾಷಾ ಶಿಕ್ಷಕರಾಗಿ ನಿಯುಕ್ತರಾದ ಮೇಲೆ ಉಪಾಧ್ಯಾಯರಿಗೆ ಅವಕಾಶ ತುಂಬಾ ಹೆಚ್ಚು ದೊರೆಯಿತು.
ಅಲ್ಲಿ ಆಗ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ವಾಸುದೇವ ಮುಗೇರಾಯರು ಯಕ್ಷಗಾನದ ಸರ್ವಾಂಗೀಣ ಪಾಂಡಿತ್ಯ ಉಳ್ಳವರು. ಅವರ ಆಪ್ತರು ಡಾ.ಎನ್ ನಾರಾಯಣ ಶೆಟ್ಟರು ಶಿಮಂತೂರು. ಈಗ ಉಪಾಧ್ಯಾಯರೂ ಸೇರಿ ವಿದ್ವಾಂಸತ್ರಯರ ಸಮ್ಮಿಲನವಾಯಿತು. ಅಲ್ಲಿ ಆಗ ಸ್ಥಾಪನೆಯಾದ ಭ್ರಾಮರಿ ಯಕ್ಷಗಾನ ಮಂಡಳಿ” ಮುಂದೆ ಹಲವು ಪ್ರಥಮಗಳ ಪ್ರಯೋಗಕ್ಕೆ ತೊಡಗಿತು. ಅದು ಉಪಾಧ್ಯಾಯರ ಚಿಂತನೆಯ ಪ್ರಯೋಗಗಳಿಗೆ ಸಹಕಾರಿಯಾಗಿತ್ತು. (ಡಾ.ಎನ್.ನಾರಾಯಣ ಶೆಟ್ಟರ ಯಕ್ಷಗಾನ ಛಂದೋಂಬುಧಿಗೆ ಶ್ರೀ ವಾಸುದೇವ ಮುಗೇರಾಯರ ಮತ್ತು ವೇಂಕಟೇಶ್ವರ ಉಪಾಧ್ಯಾಯರ ಚಿಂತನೆ ಸಲಹೆ,ಸೂಚನೆಗಳು , ಆಧಾರವಾಗಿತ್ತು). ಕಟೀಲು ತೆಂಕುತಿಟ್ಟಿನ ಯಕ್ಷಗಾನದ ತೌರು ಮನೆ. ಊರು,ಶಾಲೆ,ಜನ ಎಲ್ಲರೂ ಯಕ್ಷಗಾನವನ್ನೇ ಉಸಿರಾಡುವವರು. ಡಾ.ಭಾಸ್ಕರಾನಂದ ಕುಮಾರ್,(ಮಣಿಪಾಲದಲ್ಲಿ ಕೆ ಎಂ ಸಿಯ ಪ್ರಖ್ಯಾತ ವೈದ್ಯರು, ಸುಪ್ರಸಿದ್ದ ಹವ್ಯಾಸಿ ಯಕ್ಷಗಾನ ಕಲಾವಿದರು) , ಪುಚ್ಚಕರೆ ಕೃಷ್ಣ ಭಟ್, ಪು ಶ್ರೀನಿವಾಸ ಭಟ್ ,ಲಕ್ಷ್ಮೀನಾರಾಯಣ ಭಟ್, ಮುಂತಾದ ಪರಿಣತರ ಸಹಯೋಗದಿಂದ ರೂಪುಗೊಂಡ ಭ್ರಾಮರಿ ಯಕ್ಷಗಾನ ಮಂಡಳಿ ತುಂಬಾ ಪ್ರಸಿದ್ಧವಾಗಿದ್ದ ಕಾಲ ಅದು. ಶಾಲಾ ವಿದ್ಯಾರ್ಥಿಗಳ ಯಕ್ಷಗಾನವೂ ಹಿರಿಯರಷ್ಟೇ ಪರಿಣತಿಯುಳ್ಳ ಪ್ರಯೋಗವಾಗುತ್ತಿತ್ತು. ಇವರ ನಿರ್ದೇಶನದ “ಚಂದ್ರಹಾಸ” ನಲವತ್ತಕ್ಕಿಂತಲೂ ಹೆಚ್ಚು ಪ್ರಯೋಗವಾಗಿತ್ತು. ಇದೇ ಸಂದರ್ಭದಲ್ಲಿ ವಾತಾಪೆ ಜೀರ್ಣೋಭವ, ಶ್ರೀರಾಮ ಪಟ್ಟಾಭಿಷೇಕ ಎಂಬೆರಡು ಸಂಸ್ಕೃತ ಯಕ್ಷಗಾನವನ್ನು ರಚಿಸಿದರು. ಅದನ್ನು ಸಹೋದರ ಶಂಕರನಾರಾಯಣ ಉಪಾಧ್ಯಾಯರು ಕನ್ನಡಕ್ಕೆ ಅನುವಾದಿಸಿದರು.
ಮಿತ್ರ, ಸಹಪಾಠಿ ವಿ.ನರಹರಿ ಭಟ್ಟರ “ಶ್ರೀಕೃಷ್ಣ ದೌತ್ಯಂ “ಸಂಸ್ಕೃತ ಯಕ್ಷಗಾನವನ್ನು( ಇದು ಸಂಸ್ಕೃತ ಭಾಷೆಯ ಮೊದಲ ಯಕ್ಷಗಾನ ಕೃತಿ) ಪ್ರಯೋಗಕ್ಕೆ ತಂದರು. ವಾತಾಪೆ ಜೀರ್ಣೋಭವ ದೂರದರ್ಶನದಲ್ಲಿ ಪ್ರಸಾರವಾಯಿತು. ತುಳುವಿನಲ್ಲಿ ನರಕಾಸುರ ವಧೆಯೂ ದೂರದರ್ಶನದಲ್ಲಿ ಪ್ರಸಾರವಾಯಿತು. ಉಪಾಧ್ಯಾಯರ ತೀರ್ಥರೂಪರು ಮುಕ್ಕಾಲು ಅಂಶ ಬರೆದಿದ್ದ ‘ಗುರುದ್ರೋಣ’ ಪ್ರಸಂಗವನ್ನು ಪೂರ್ಣಗೊಳಿಸಿ ಪ್ರಕಟಿಸಿದರು. ಮುಂದೆ ಅವರ ತಂದೆಯವರ ಇನ್ನೊಂದು ಕೃತಿ ‘ಬಾಲ ಘಟೋತ್ಕಚ’ವನ್ನೂ ಪ್ರಕಟಿಸಿದರು. ಡಾ.ಎನ್.ನಾರಾಯಣ ಶೆಟ್ಟರ ಕಟೀಲು ಕ್ಷೇತ್ರಮಹಾತ್ಮ್ಯೆಗೆ ಅರ್ಥ ಬರೆದು ಪ್ರಕಟಿಸಿದರು. ಆಕಾಶವಾಣಿ ಚಿಂತನ ಕಾರ್ಯಕ್ರಮದ ಸರಣಿಯೇ ಬಂತು. ಕಸ್ತೂರಿ ಮಾಸ ಪತ್ರಿಕೆಯಲ್ಲಿ ಶ್ರೀ ಪಾ ವೆಂ ಆಚಾರ್ಯರ ನಿಧನದ ನಂತರ ನಿಂತು ಹೋಗಿದ್ದ” ಪದಾರ್ಥ ಚಿಂತಾಮಣಿ” ಅಂಕಣವನ್ನ ಹಲವು ವರ್ಷಗಳ ಕಾಲ ಮುಂದುವರಿಸಿದ್ದರು.
ಅರ್ಥಧಾರಿಯಾಗಿ ಪ್ರತ್ಯೇಕ ಶೈಲಿ, ದೃಷ್ಟಿ ಧೋರಣೆಗಳನ್ನು ಹೊಂದಿದ್ದ ಉಪಾಧ್ಯಾಯರ ಬಗ್ಗೆ ‘ಸದ್ಯದ ಹೊಸ ತಲೆಮಾರಿನ ಅರ್ಥಧಾರಿಗಳ ಪೈಕಿ ಅತಿ ದೊಡ್ಡ ವಿದ್ವಾಂಸರು’ ಎಂದು ಡಾ.ಎಂ.ಪ್ರಭಾಕರ ಜೋಶಿ ಹೇಳಿದ ಮಾತು ಅಕ್ಷರಶಃ ಸತ್ಯ. ಸ್ತ್ರೀ ಪಾತ್ರದಿಂದ ಖಲ ಪಾತ್ರದ ವರೆಗೆ ಸಮರ್ಥವಾಗಿ ನಿರ್ವಹಿಸಬಲ್ಲ ಇವರದು ಎದುರಾಳಿಯೂ, ಪ್ರೇಕ್ಷಕರೂ ಒಂದು ಕ್ಷಣವಾದರೂ ಆಲೋಚಿಸಿ ಅರ್ಥಮಾಡಿಕೊಳ್ಳಬೇಕಾದ ಮಾತುಗಾರಿಕೆ. ವಾಚ್ಯಕ್ಕಿಂತ ಧ್ವನಿಗೆ ಮಹತ್ವ ,ಚಿಂತನೆ ಪಾತ್ರದ ಸ್ವಭಾವಕ್ಕೆ ಹೊಂದಿ ಬರಬೇಕು ಎಂದು ನಂಬಿದವರು. ವಸಿಷ್ಠ-ವಿಶ್ವಾಮಿತ್ರರಲ್ಲಿ ಉಪನಿಷತ್ತಿನ ಲೋಕ,ಶ್ರೀಕೃಷ್ಣ ಮುತ್ಸದ್ಧಿಯಾಗಿ ಅಸಾಮಾನ್ಯನಾಗುವುದು,ದುರ್ಯೋಧನ ಮುತ್ಸದ್ದಿಯಾಗಿ ಅಸಾಮಾನ್ಯನಂತೆ ನಟಿಸುತ್ತಾ ಸಾಮಾನ್ಯನಾಗಿಯೇ ಉಳಿಯುವುದು,ಇವೆಲ್ಲ ಪುರಾಣಗಳ ನಿರಂತರ ಅಧ್ಯಯನದಲ್ಲಿ ಮೈದಾಳುತ್ತಿದ್ದವು.
ಸಮಗ್ರ ಸಂಸ್ಕೃತ ಸಾಹಿತ್ಯದ ಅಧ್ಯಯನ ಹಲವು ಬಾರಿ ತೀರಾ ಪಾಂಡಿತ್ಯದ ಗಡಸು ಎನ್ನಿಸುವುದೂ ಇತ್ತು. ಸಂಸ್ಕೃತ ಕಾವ್ಯ,ನಾಟಕಗಳ ಅಧ್ಯಯನದಿಂದ ಕನ್ನಡದ ಯಕ್ಷಗಾನ ತಾಳಮದ್ದಲೆಯ ಪಾತ್ರಗಳನ್ನು ಕಟ್ಟಿದವರಲ್ಲಿ ಉಪಾಧ್ಯಾಯರು ಪ್ರಮಖರು. ಮಾತು ಬೀಸು ನೋಟದ ವಿಸ್ತಾರವನ್ನು ಮೈದುಂಬಿಸಿಕೊಂಡು ಹೊಸ ಹೊಸ ತರ್ಕಗಳನ್ನು ಕಟ್ಟಿಕೊಡುತ್ತಿತ್ತು. ಕೆಲವು ಬಾರಿ ಎಂತಹ ವಾದವನ್ನೂ ಅಡಿಮೇಲು ಮಾಡುವ ವಾಘ್ಝರಿ! .ಅವರನ್ನು ಕಟ್ಟುವುದು ಸುಲಭವಲ್ಲ ,ಅಸಾಧ್ಯವೂ. ಅನೇಕರು ಪ್ರಯತ್ನಿಸಿ ಸೋತುದೂ ಉಂಟು. ಒಮ್ಮೆ ಒಬ್ಬರು ಹಿರಿಯ ಕಲಾವಿದರೇ ಇವರು ಮುಂದೆ ಒಡ್ಡಬಹುದಾದ ಸಮಸ್ಯೆಗಳನ್ನು ಗ್ರಹಿಸಿ ನೀನು ಹೀಗೆ ಯೋಚಿಸಬಹುದು ಎಂದು ಮೊದಲೇ ಹೇಳಿ ಸಿಕ್ಕಿಸಲಿಕ್ಕೆ ನೋಡಿದರು. ಇವರೋ…ಮಹಾಪ್ರಚಂಡ ನಾನು ಹಾಗೆ ಯೋಚಿಸುವುದೇ ಇಲ್ಲ ಎಂದು ಬೇರೆಯೇ ಸ್ವರೂಪಕ್ಕೆ ತಿರುಗಿಸಿದರು.
ಅಂಬೆ ದ್ರೌಪದಿ, ಮಂಥರೆ,ಕೈಕೆ ಮುಂತಾದ ಭಿನ್ನ ಸ್ವಭಾವಗಳ ಸ್ತ್ರೀ ಪಾತ್ರಗಳಿಂದ ತೊಡಗಿ ಮಹೋನ್ನತ ವ್ಯಕ್ತಿತ್ವದ ಭೀಷ್ಮಾಚಾರ್ಯರ ವರೆಗೆ ಆಯಾ ಪಾತ್ರಗಳ ಗತ್ತು ಗಾಂಭೀರ್ಯಗಳಿಂದ ಚಿತ್ರಿಸುತ್ತಿದ್ದರು. ಕನ್ನಡ ಸಂಸ್ಕೃತ ಭಾಷೆಗಳ ಸೊಗಸುಗಳನ್ನೆಲ್ಲ ಅರ್ಥದಲ್ಲಿ ತುಂಬಿಕೊಡುತ್ತಿದ್ದ ಉಪಾಧ್ಯಾಯರು ಸರಳ ಮಾತುಗಾರರಾಗಿರಲಿಲ್ಲ. ಭಾಷೆ ಸಹಜ ಸ್ಥಿತಿಯಿಂದ ಮೇಲೇರಿ ಪೌರಾಣಿಕ ಆವರಣವನ್ನು ನಿರ್ಮಿಸಬೇಕೆಂಬುದು ಇವರ ನಿಲುವು. ಪ್ರತ್ಯುತ್ಪನ್ನಮತಿತ್ವದಲ್ಲಿ ಅಸಾಧಾರಣ ಸಿದ್ಧಿ ಇವರಿಗಿತ್ತು .ಇವರ ಅತಿ ಮೆಚ್ಚಿನ ಪಾತ್ರ ಶ್ರೀರಾಮ, ಮತ್ತು ಸುಂದರವಾದ ಅರ್ಥ ಸಂಧಾನದ ಕೃಷ್ಣ. ಹವ್ಯಾಸಿಯಾಗಿ ಬಯಲಾಟದಲ್ಲೂ ಸಾಕಷ್ಟು ವೇಷಮಾಡಿದ್ದಾರೆ. ಇವರ ವಿದ್ವತ್ ಪ್ರಭೆಯಲ್ಲಿ ಅರಳಿದ ಎರಡು ಅಸಾಧಾರಣ ಪ್ರತಿಭೆಗಳು ದಿ. ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ವರ್ತಮಾನದ ಪ್ರಸಿದ್ಧ ಅರ್ಥಧಾರಿ ಶ್ರೀ ವಾಸುದೇವ ರಂಗ ಭಟ್ಟರು. ಇವರುಗಳಲ್ಲದೆ ಅನೇಕ ಪ್ರಸಿದ್ಧರು ಅವರನ್ನು ಗುರುಗಳು ಎಂದೇ ಕರೆಯುತ್ತಿದ್ದುದನ್ನು ಕೇಳಿದ್ದೇನೆ. ಶ್ರೀಮತಿ ಕಮಲಾಕ್ಷಿ ಉಪಾಧ್ಯಾಯರು ಅವರ ಬದುಕನ್ನು ಅಕ್ಷರಶಃ ಹೊತ್ತು ನಡೆದ ಬಾಳ ಸಂಗಾತಿ. ಅವರೂ ಯಕ್ಷಗಾನದ ಅಭಿರುಚಿಯುಳ್ಳವರು. ಲಲಿತಾ ಪಯಸ್ವಿನೀ, ಮಂಗಲಾ ಮನಸ್ವಿನೀ,ಇಬ್ಬರು ಹೆಣ್ಣು ಮಕ್ಕಳು.ಸಹೋದರ ಶಂಕರನಾರಾಯಣ ಉಪಾಧ್ಯಾಯ(ಕೆ.ಎಸ್ ಉಪಾಧ್ಯಾಯ) ಬೆಂಗಳೂರಿನಲ್ಲಿ ನೆಲೆಯಾಗಿ ಆರ್ ಗಣೇಶರಂತಹ ವಿದ್ವಾಂಸರ ಆಪ್ತರೂ ಆಗಿ,ರಾಷ್ಟ್ರೋತ್ಥಾನ ಬಳಗದಲ್ಲಿ ಹೊಣೆಹೊತ್ತು ತೊಡಗಿಸಿಕೊಂಡಿದ್ದಾರೆ. ನಾಟಕ,ಸಾಹಿತ್ಯ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ವಿದ್ವಾಂಸರು.ಇನ್ನೊಬ್ಬ ಸಹೋದರ ಸೀತಾರಾಮ ಉಪಾಧ್ಯಾಯರು ಪೌರೋಹಿತ್ಯ,ಜ್ಯೋತಿಷ್ಯಗಳಲ್ಲಿ ನಿರಂತರ ನಿರತರು.
ಉಪಾಧ್ಯಾಯರಿಂದ ತುಂಬಾ ಉಪಕೃತನಾದವನು ನಾನು. ನನ್ನ ಪ್ರತಿಯೊಂದು ಪ್ರಸಂಗಗಳನ್ನೂ ಅಕ್ಷರ ಅಕ್ಷರ ಓದಿ ದೋಷಗಳನ್ನು ಗುರುತಿಸಿ ಹೇಳುತ್ತಿದ್ದರು. ಅವರು ತಾನೇ ಎಂದೂ ಸರಿಪಡಿಸುತ್ತಿರಲಿಲ್ಲ. ನನ್ನಿಂದಲೇ ಸರಿಮಾಡಿ ಎಂದು ಮಾಡಿಸುತ್ತಿದ್ದರು. ಇದರಿಂದ ಅವರಿಗೆ ತೋರಿಸುವಾಗಲೇ ನಾನು ಸಾಕಷ್ಟು ಗಮನಿಸುವುದನ್ನು, ಮತ್ತೆ ಮತ್ತೆ ಓದಿ ಸರಿಪಡಿಸಿಕೊಂಡು ಅವರ ಬಳಿ ಹೋಗುತ್ತಿದ್ದೆ. ನನ್ನ ಅವರ ಒಡನಾಟ ವಿದ್ಯಾರ್ಥಿದೆಸೆಯಿಂದ ತೊಡಗಿ ನಾಲ್ಕು ದಶಕ. ಇದೊಂದು ಸೌಭಾಗ್ಯ.
ವಾಸ್ತವದಲ್ಲಿ ವೇಂಕಟೇಶ್ವರ ಉಪಾಧ್ಯಾಯರದು ಪೌರೋಹಿತ್ಯಕ್ಕಾಗಿ ಸಿದ್ಧಗೊಂಡ ವ್ಯಕ್ತಿತ್ವ. ಯಕ್ಷಗಾನ ಎರಡನೆಯ ಆಸಕ್ತಿ. ಯಕ್ಷಗಾನಕ್ಕಿಂತ ಹತ್ತುಪಟ್ಟು ಪೌರೋಹಿತ್ಯದ ಸಿದ್ಧಿ ಅವರದ್ದು. ದಿ.ವೇ.ಮೂ ಬಾರ್ಕೂರು ಸುಬ್ರಾಯ ಬಾಯಿರಿಯವರ ಮಾರ್ಗದರ್ಶನದಲ್ಲಿ ಪಳಗಿದ ಇವರು ಹತ್ತಾರು ದೇವಸ್ಥಾನಗಳ ಪ್ರತಿಷ್ಠಾ ಕಾರ್ಯಗಳನ್ನು ನೆರವೇರಿಸಿದ್ದರು. ಶತಚಂಡೀಯಾಗ, ಸಹಸ್ರ ನಾರಿಕೇಲ ಗಣಪತಿ ಯಾಗಗಳ ಅಧ್ವರ್ಯುವಾಗಿ ,ಹಲವು ಸಂಹಿತಾ ಹೋಮಗಳ ಆರ್ತ್ವಿಜ್ಯವನ್ನೂ ವಹಿಸಿದ್ದರು. ಮಂತ್ರ-ತಂತ್ರಗಳಲ್ಲಿ ಸಿದ್ಧಿ -ಶುದ್ಧಿ ಇವರ ಸಾಧನೆ. ಆ ಕ್ಷೇತ್ರದಲ್ಲಿ ವಿಸ್ತಾರವಾದ ವಲಯವೂ ಅವರಿಗಿತ್ತು. ನೂರಾರು ಮಂದಿ ಶಿಷ್ಯರೂ ಇದ್ದರು. ಹಲವರು ಅಂತೇವಾಸಿಗಾಳಾಗಿ ಅವರಮನೆಯಲ್ಲೇ ಇದ್ದು ಕಲಿತು ಪ್ರಸಿದ್ಧರಾದರು. ಮಹಾ ನಾರಾಯಣ ಉಪನಿಷತ್, ಗಣಪತಿ ಮಹಾನ್ಯಾಸ, ರುದ್ರಮಹಾನ್ಯಾಸ, ಪವಮಾನ(ಎರಡು ಭಾಗ) ಸಪ್ತಶತಿ( ಮೂರು ಭಾಗ) ,ಲಕ್ಷ್ಮೀನಾರಾಯಣ ಹೃದಯ, ಅಭಿಷೇಕಸೂಕ್ತಮಾಲಾ, ಮನೋರಥಸಿದ್ಧಿ ಸೂಕ್ತಾನಿ, ನಮಕಚಮಕಂ, ಮತ್ತು ಶಂಕರನಾರಾಯಣ ಸಹಸ್ರನಾಮ ಈ ಹತ್ತು ಧ್ವನಿಸುರಳಿಗಳು ಇವರವು. ಅನೇಕ ಪೌರೋಹಿತ್ಯ ಪರವಾದ ಕೃತಿಗಳು ಪ್ರಕಟವಾಗಿವೆ. ಹತ್ತರ ಹಿರಿಮೆ,ಭಾಸಭಾಷಿತ, ಅಕ್ಷರ ಯಕ್ಷಗಾನ ಮೂರರ ಮಹಿಮೆ.ಮುಂತಾದ ಹತ್ತಾರು ಕೃತಿಗಳ ಲೇಖಕರೂ ಆಗಿರುವ ಉಪಾಧ್ಯಾಯರು ಜಯದೇವ ಕವಿಯ ಗೀತಗೋವಿಂದ ಕಾವ್ಯವನ್ನು ಸುಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಹಾಡುಗಾರಿಕೆಯಲ್ಲಿ ಯಕ್ಷಗಾನ ಶೈಲಿಯಲ್ಲಿ ನಿರ್ದೇಶಿಸಿ ಪ್ರಕಟಿಸಿದ್ದರು.
ಆಪ್ತೇಷ್ಟರಿಗೆಷ್ಟೇ ಪ್ರಶ್ನೆ ಹಾಗೂ ಜಾತಕ ಫಲಗಳನ್ನು ಹೇಳುತ್ತಿದ್ದ ಉಪಾಧ್ಯಾಯರಿಗೆ ಜ್ಯೋತಿಷ ವಾಂಶಿಕ ವಿದ್ಯೆಯಾಗಿತ್ತು. ಹರಿಕತೆಯನ್ನು ವೃತ್ತಿಯಾಗಿ ಇಟ್ಟುಕೊಳ್ಳದಿದ್ದರೂ ಹತ್ತಾರು ಕಡೆ ವೃತ್ತಿಪರ ಹರಿದಾಸರೂ ಮೆಚ್ಚುವಂತೆ ನಡೆಸಿಕೊಟ್ಟದ್ದುಂಟು. ರಾಮಾಯಣ, ಭಗವದ್ಗೀತೆಗಳ ಪ್ರವಚನಗಳನ್ನು ಕೆಲವೆಡೆ ನಿರಂತರವಾಗಿ ನಡೆಸಿಕೊಟ್ಟಿದ್ದಾರೆ. ಪುರಾಣಗಳ ಘಟನೆಗಳನ್ನು ಸಮಕಾಲೀನ ಸಂದರ್ಭಕ್ಕೂ ಸಮೀಕರಿಸುವುದು,ವ್ಯಾಸ ವಾಲ್ಮೀಕಿಗಳ ಸಂಸ್ಕೃತ ಭಾಷೆಯ ಅರ್ಥ ಸೂಕ್ಷ್ಮವನ್ನು ತಿಳಿಸಿಕೊಡುವುದು ಇವರ ಪ್ರವಚನ ಶೈಲಿಯಾಗಿತ್ತು. ಅವರ ಪುರಾಣ ವ್ಯಾಖ್ಯಾನ ಸೂಕ್ಷ್ಮ ಚಿಂತನೆಗಳ ಗುಚ್ಛ.
ಕಟೀಲಿನ ಅವರ ಮನೆಗೆ ಹೆಸರು “ಪ್ರಜ್ಞಾದೀಪ್ತಿ” ಅಲ್ಲಿಗೆ ನಿತ್ಯ ಜ್ಞಾನದಾಹಿಗಳು ಬಂದೇ ಬರುತ್ತಿದ್ದರು. ಬಂದವರು ಇವರ ಸಲಹೆಯ ನಿರೀಕ್ಷಿತರು. ಅವರಿಂದ ಪರಿಹಾರವೂ ಸಿಗುತ್ತಿತ್ತು. ಹೀಗೆ ಬರುವವರು ವೇದಾಂತ,ಯಕ್ಷಗಾನ,ಜ್ಯೋತಿಷ್ಯ,ವ್ಯಾಕರಣ,ಆಗಮ,ಪೌರೋಹಿತ್ಯ, ಯಾವಯಾವುದೋ ನೂರಾರು ಸಮಸ್ಯೆಗಳ ಜಿಜ್ಞಾಸುಗಳು ಬರುತ್ತಿದ್ದರು. ಡಾ.ಆರ್ .ಗಣೇಶರೊಂದಿಗೆ ನಿಕಟವಾದ ಸಂಪರ್ಕದಲ್ಲಿದ್ದ ಉಪಾಧ್ಯಾಯರು ಅವರ ಅವಧಾನಕ್ಕೆ ನಿಷೇಧಾಕ್ಷರಿಯಾಗಿ ಬಹಳ ತೊಡಕು ಕೊಡುತ್ತಿದ್ದರು! ಉಪಾಧ್ಯಾಯರಿದ್ದರೆ ನಿಷೇಧಾಕ್ಷರದ ಪದ್ಯ ಒಳ್ಳೆಯ ಕಾವ್ಯಗುಣದ ಪದ್ಯವಾಗುವುದೇ ಇಲ್ಲ ಎಂದು ಗಣೇಶರೇ ಅವಧಾನದಲ್ಲೇ ಹೇಳುವುದನ್ನು ಕೇಳಿದ್ದೇನೆ. ಇವರು ಬಿಟ್ಟರಲ್ಲವೆ? ..!
ಐವತ್ತರ ಅಂಚಿಗೆ ಸರಿದಾಗ ಅನಿರೀಕ್ಷಿತ ಅನಾರೋಗ್ಯ ತುಂಬಿದ ಮನದಲ್ಲಿ ತುಮುಲವನ್ನೆಬ್ಬಿಸಿತು. ಅವರನ್ನು ,ಹೃದಯ ಸಂಬಂಧಿ ಖಾಯಿಲೆ ಬಹುವಾಗಿ ದಣಿಸಿತು. ಅದರಲ್ಲೂ ಏಳೆಂಟು ವರ್ಷ ವೃತ್ತಿ ಪ್ರವೃತ್ತಿಗಳಿಂದ ದೂರಾಗದೆ ಹೊಯ್ದಾಡಿದರು. ತುಂಬಾ ತಲ್ಲಣಗೊಂಡರು. ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದರು .ಗುಣಮುಖರಾಗಲೇ ಇಲ್ಲ.12-9 2011 ರಂದು ಐವತ್ತೊಂಬತ್ತರ ವಯಸ್ಸಿನಲ್ಲಿ ನಮ್ಮನ್ನಗಲಿದರು.ಅವರು ಅರ್ಥವನ್ನು ಪ್ರಾರಂಭಿಸಿದ್ದು ಪಂಚವಟಿಯ ರಾಮನಾಗಿ. ಕೊನೆಯ ಅರ್ಥವನ್ನು ಹೇಳಿದ್ದೂ ಅದೇ ಪ್ರಸಂಗದ ರಾಮನನ್ನು.. ಆ ಮಹಾ ಚೇತನಕ್ಕೆ ನಮಿಸಿ ವಿರಮಿಸುವೆ.
ಲೇಖಕ: ಶ್ರೀಧರ ಡಿ.ಎಸ್. ಕಿನ್ನಿಗೋಳಿ
೨೦೧೧ ರಲ್ಲಿ ನನ್ನ ಪ್ರಸಂಗ ಮಾಲಿಕಾ ಪ್ರಥಮ ಸಂಪುಟ ಉಡುಪಿ ಯಕ್ಷಗಾನ ಕೇಂದ್ರದಿಂದ ಪ್ರಕಟವಾದಾಗ ವೇಂಕಟೇಶ್ವರ ಉಪಾಧ್ಯಾಯರಿಗೆ ಕೃತಿಯನ್ನು ಅರ್ಪಿಸಿ ಪದ್ಯ ನಮನವನ್ನು ಸಲ್ಲಿಸಿದ್ದೆ.ಅವರು ತೀರಿಕೊಂಡು ಕೇವಲ ಒಂದು ತಿಂಗಳಾಗಿತ್ತು. ಅದು ಹೀಗಿದೆ.
ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ ( ೧೯೫೨-೨೦೧೧) *ಕಂದ*
ವಿದ್ವಜ್ಜನಸಂಮಾನ್ಯಂ| ಅದ್ವೈತಂ ತೆಂಕು ಬಡಗಿನಾಟಂ ಕೂಟಂ||ಸದ್ವಿನಿಯೋಗಂ ಚಣಚಣ|ತದ್ವಚನಂ ಕೊರ್ಗಿ ವೇಂಕಟೇಶ್ವರ ನಿರುತಂ||
*ವಾರ್ಧಕ*
ಶ್ರೀರಾಮನಿಂತೊಡಗಿದರ್ಥವಾದಿತ್ವ ಮ|ತ್ತಾರಾಮವಾಯ್ತದೇ ಪಾತ್ರದಿಂ,ದಶರಥಂ|ಕೌರವಂ ಕೃಷ್ಣ ಭೀಷ್ಮಂ ಪರಶುರಾಮ ದ್ರೋಣಾಚಾರ್ಯ ಕರ್ಣಾರ್ಜುನರ್||ನಾರಿದ್ರೌಪದಿಯಂಬೆ ಕೈಕೆ ಯೋಜನಗಂಧಿ|ಮಾರುತಿಯು ಸುಗ್ರೀವ ವಾಲಿ ರಾವಣ ಶುಕ್ರ|ವೈರೋಚನಿ ವಸಿಷ್ಠನತಿಕಾಯ ಕೌಶಿಕರ ಕಂಡರಿಸಿ ವಾಗ್ವಿಭವದಿಂ||
*ಸಾಂಗತ್ಯ*
ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ|ಸಂತನ ಸಾಂತ್ವನ ಬದುಕು||ಎಂತೋ ತನ್ನೊಳಗಿನ ನೋವುಂಡು ನಗೆಯಲಿ|ಕಂತಿಸಿ ಬೆಳೆದಿಹಪರಕು||
*ಕೇದಾರಗೌಳ ಅಷ್ಟ*’
ಹತ್ತರ ಹಿರಿಮೆಯು ‘ಭಾಸ ಭಾಷಿತ’ವನ್ನ|ಇತ್ತಿರಿ’ಪಂಚ ಪ್ರಪಂಚ’ವನು.||ಎತ್ತಿ ತೋರುತ್ತಲಿ’ಮೂರರ ಮಹಿಮೆ’ಯಮತ್ತೆ’ಅಕ್ಷರ ಯಕ್ಷಗಾನ’ವನು||
*ಭಾಮಿನಿ*
ವೇದವಾರಿಧಿಯಾಗಮಜ್ಞ ಸು|ವಾದಿ ಛಂದೋವಿದ ಪ್ರವಾಚಕ|ಸಾಧನೆಯ ಶಬ್ದಾರ್ಥಸಿದ್ಧಿಯ ಶುದ್ಧ ಚಿಂತಕರೆ||ಹಾದಿಯರ್ಧಕೆ ನಿಲಿಸಿ ಪಯಣವ|ಗೈದ ವಿದ್ವನ್ಮಣಿಯುಪಾಧ್ಯರೆ|ಸಾಧಕರೆ ತವಸ್ಮೃತಿಗೆ ಕೃತಿಯರ್ಪಿಸುವೆ ತಲೆವಾಗಿ||