Sunday, June 2, 2024
Homeಯಕ್ಷಗಾನದೇರಾಜೆ ಸೀತಾರಾಮಯ್ಯ - ‘ಯಕ್ಷಲೋಕದ ರಸಋಷಿ’

ದೇರಾಜೆ ಸೀತಾರಾಮಯ್ಯ – ‘ಯಕ್ಷಲೋಕದ ರಸಋಷಿ’

                    ಶ್ರೀ ದೇರಾಜೆ ಸೀತಾರಾಮಯ್ಯನವರನ್ನು ನೋಡಿದ ನೆನಪಿಲ್ಲ. ಆದರೂ ಅವರ ಬಗೆಗೆ ನನ್ನ ಹಿರಿಯರು, ಹಿರಿಯ ಕಲಾಭಿಮಾನಿಗಳು ಆಡುವ ಮೆಚ್ಚುಗೆಯ ನುಡಿಗಳನ್ನು ಕೇಳಿದ್ದೇನೆ. ‘ರಸಋಷಿ’ ಎಂದೇ ಖ್ಯಾತರಾದ ಅವರು  ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಕಲಾವಿದನಾಗಿ ನಾನೂ ಅನುಭವಿಸಿದ್ದೇನೆ. ದೇರಾಜೆಯವರ ‘ಶ್ರೀರಾಮಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಎಂಬ ಶ್ರೇಷ್ಠ ಕೃತಿಗಳನ್ನು ಓದಿದ್ದೇನೆ. ಕಲಾವಿದನಾಗಿ ಬೆಳೆಯಲು ಅನುಕೂಲವಾಗಿದೆ. ಕಲಾವಿದರೆಲ್ಲರೂ ಮಾಹಿತಿಗಾಗಿ ಅವಲಂಬಿಸುವ ಕೃತಿಗಳಿವು.

ಬರಹದ ಮೌಲ್ಯ ನಿರ್ಣಯಿಸಲ್ಪಡುವುದು ಅದರ ಉಪಯೋಗದ ನೆಲೆಯಿಂದ. ಕಲಾವಿದರ ಬಳಿ ಇರುವ, ಇರಲೇಬೇಕಾದ ಎರಡು ಕೃತಿಗಳಿವು. ಅಲ್ಲದೆ ಓದಿನಲ್ಲಿ ಆಸಕ್ತಿ ಹೊಂದಿದ ಎಲ್ಲರ ಮನೆಗಳಲ್ಲೂ ಇರುವ ಪುಸ್ತಕಗಳಿವು. ರಾಮಾಯಣ ಮತ್ತು ಮಹಾಭಾರತ ಪುರಾಣಗಳ ಬಗ್ಗೆ ಮಾಹಿತಿ ಬೇಕಾದಾಗ ಈ ಎರಡು ಹೊತ್ತಗೆಗಳ ಮೊರೆ ಹೋಗುತ್ತಾರೆ. ಹಾಗಾಗಿ ದೇರಾಜೆ ರಾಮಾಯಣ ಮತ್ತು ದೇರಾಜೆ ಮಹಾಭಾರತ ಕೃತಿಗಳ ಮೌಲ್ಯವನ್ನು ಯಾರಿಂದಲೂ ಅಳೆಯಲಸಾಧ್ಯ. ವಾಲ್ಮೀಕಿ ರಾಮಾಯಣಕ್ಕೆ ಮತ್ತು ವ್ಯಾಸರ ಭಾರತಕ್ಕೆ ಅತ್ಯಂತ ಹತ್ತಿರವಾಗಿ, ಕನ್ನಡ ಸಾರಸ್ವತ ಲೋಕಕ್ಕೆ, ಯಕ್ಷಗಾನ ಸಾಹಿತ್ಯಕ್ಕೆ ಈ ಎರಡು ಗ್ರಂಥಗಳು ಅಮೂಲ್ಯ ಕೊಡುಗೆಗಳೆಂದು ಓದುಗರು ಈಗಾಗಲೇ ನಿರ್ಣಯಿಸಿರುತ್ತಾರೆ. ಇವುಗಳು ಯಕ್ಷಗಾನ ಕ್ಷೇತ್ರಕ್ಕೆ ಆಕರ ಗ್ರಂಥಗಳಾಗಿ ಪರಿಣಮಿಸಿದೆ.

ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ಕಲಾಕ್ಷೇತ್ರಗಳಲ್ಲಿ ಸಾಹಸವನ್ನು ಮೆರೆದು ಖ್ಯಾತರಾಗಿ, ಭಾವೀ ಜನಾಂಗಕ್ಕೆ ಅನುಕೂಲವಾಗಲೆಂದೇ ತನ್ನ ಸಾಧನೆಗಳನ್ನು ಕೊಡುಗೆಗಳಾಗಿ ನೀಡಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡ ದೇರಾಜೆ ಸೀತಾರಾಮಯ್ಯನವರು ಸತ್ತೂ ಬದುಕಿಯೇ ಇದ್ದಾರೆ. ಕಾಯ ಅಳಿದರೂ ಕೀರ್ತಿವಂತರಾಗಿದ್ದಾರೆ. ಕಲಾಭಿಮಾನಿಗಳ, ಸಾಹಿತ್ಯಪ್ರೇಮಿಗಳ ಮಾನಸವೆಂಬ ಮಂದಿರದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.


ದೇರಾಜೆ ಶ್ರೀ ಸೀತಾರಾಮಯ್ಯನವರು ಜನಿಸಿದ್ದು 1914ನೇ ಇಸವಿ ನವೆಂಬರ್ 17ರಂದು. ಹುಟ್ಟೂರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ. ಮಂಗಲ್ಪಾಡಿ ಕೃಷ್ಣಯ್ಯ ಮತ್ತು ಸುಬ್ಬಮ್ಮ ದಂಪತಿಗಳ ಪುತ್ರರಿವರು. ಮಂಗಲ್ಪಾಡಿ ಚೊಕ್ಕಾಡಿ ಸಮೀಪದ ಒಂದು ಊರು. ಕೃಷ್ಣಯ್ಯನವರು ತಾಳಮದ್ದಳೆ ಅರ್ಥಧಾರಿಗಳಾಗಿದ್ದರು. ಅಜ್ಜ ಗೋವಿಂದ ಭಟ್ಟರು(ತಾಯಿಯ ತಂದೆ) ಮತ್ತು ಸೋದರಮಾವ ಶಂಕರನಾರಾಯಣ ಭಟ್ಟರು ಕಲಾಸಕ್ತರೇ ಆಗಿದ್ದರು. ಇವರ ಪ್ರಭಾವ, ಪ್ರೋತ್ಸಾಹಗಳು ದೇರಾಜೆಯವರ ಯಕ್ಷಕಲಾ ಯಾತ್ರೆಗೆ ಭದ್ರಬುನಾದಿಯಾಗಿ ಪರಿಣಮಿಸಿತ್ತು. ದೇರಾಜೆಯವರು ಎಳವೆಯಲ್ಲೇ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳ ಬಗ್ಗೆ ಅರಿವನ್ನು ಹೊಂದಿ ಬೆಳೆದವರು. ಕಷ್ಟದಲ್ಲಿದ್ದವರಿಗೆ ಸಹಾಯ ನೀಡಿ ಮಾನವೀಯತೆಯನ್ನು ಮೆರೆದ ಘಟನೆಗಳನೇಕ.

ಮನೆಯ ಹಿರಿಯರೂ, ಬಂಧುಗಳೂ ಯಕ್ಷಗಾನಾಸಕ್ತರು. ಹಾಗಾಗಿ ದೇರಾಜೆಯವರೂ ಸಹಜವಾಗಿ ಕಲಾಸಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಗುರು ಕೊಟ್ಟೆಕಾಯಿ ನಾರಾಯಣ ರಾಯರಿಂದ ನಾಟಕ ಮತ್ತು ಅಭಿನಯಗಳ ಬಗೆಗೆ ಮಾರ್ಗದರ್ಶನ ದೊರಕಿತ್ತು. ಅವರು ಕುಮಾರವ್ಯಾಸನ ಬಗೆಗೆ ಮಾಡುತ್ತಿದ್ದ ಪಾಠದಿಂದ ದೇರಾಜೆಯವರ ಸಾಹಿತ್ಯಾಸಕ್ತಿಯು ಕೆರಳಿತು. ಅಭಿನಯ, ಅರ್ಥಗಾರಿಕೆಯ ದಾರಿಯೂ ಗೋಚರಿಸಿತು. ಎಳವೆಯಲ್ಲೇ ತಂದೆಯವರನ್ನು ಕಳೆದುಕೊಂಡು, ಹೈಸ್ಕೂಲ್ ಓದುತ್ತಿರುವಾಗ ಅಣ್ಣ ಗಣಪಯ್ಯನವರನ್ನೂ ಕಳೆದುಕೊಂಡು ತನ್ನ 16ನೆಯ ವಯಸ್ಸಿಗೆ ಮನೆಯ ಜವಾಬ್ದಾರಿಯನ್ನು ಹೊತ್ತರು. ಆಗ ಭಾರತದಲ್ಲಿ ಬ್ರಿಟಿಷರ ಆಡಳಿತ. ಮನೆತನಕ್ಕೆ ಬಂದಿದ್ದ ಗ್ರಾಮದ ಪಟೇಲ ಹುದ್ದೆಯನ್ನೂ ನಿರ್ವಹಿಸಿದ್ದರು. ಆಡಳಿತದ ಕೈಗೊಂಬೆಯಾಗದೆ ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದ್ದರು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಆರೋಗ್ಯಕರ, ಕಟ್ಟುನಿಟ್ಟಿನ ನಿಲುವುಗಳನ್ನು ಹೊಂದಿ ವ್ಯವಹರಿಸಿದ್ದರು. ಇದು ಹಲವರ ವಿರೋಧಕ್ಕೆ ಕಾರಣವಾದರೂ ನಾನು ಸರಿಯಾದ ಮಾರ್ಗದಲ್ಲಿ ಶ್ರಮಿಸಿದ್ದೇನೆ ಎಂಬ ತೃಪ್ತಿ ಅವರಿಗಿತ್ತು. ಕಾಲಾಂತರದಲ್ಲಿ ಸರಕಾರದ ಆಡಳಿತಾಧಿಕಾರಿಯಾಗಿ ಅವರ ನಿರ್ಣಯಗಳು ಪ್ರಶಂಸಿಸಲ್ಪಟ್ಟಿತ್ತು.


ದೇರಾಜೆಯವರು ತನ್ನ ಹದಿನೇಳನೆಯ ವಯಸ್ಸಿನಲ್ಲಿ ತಾಳಮದ್ದಳೆ ಅರ್ಥಗಾರಿಕೆಯನ್ನು ಆರಂಭಿಸಿದರು. ಮೊದಲ ಪಾತ್ರ ಉತ್ತರನ ಪೌರುಷದ ಗೋಪಾಲಕ. ಅಂದು ಉತ್ತರನ ಪಾತ್ರವನ್ನು ಗೋವಿಂದಯ್ಯನವರು ಹೇಳಿದ್ದರು. ಮುಂದೆ ಬೆಳೆಯುತ್ತಾ ದೇರಾಜೆಯವರು ಉತ್ತರಕುಮಾರನಾಗಿ ರಂಜಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆ ಪಾತ್ರವನ್ನು ದೇರಾಜೆಯವರು ಅನನ್ಯವಾಗಿ ಚಿತ್ರಿಸಿದ್ದರು. ಭೀಮಗುಳಿ ಗೋವಿಂದಯ್ಯನವರು ಮತ್ತು ಕಾವಿನಮೂಲೆ ಶಿವರಾಮಯ್ಯನವರ ಪ್ರೋತ್ಸಾಹವೂ ಇವರಿಗಿತ್ತು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳತ್ತವೂ ಗಮನಹರಿಯಿತು.

ತೀರ್ಥರೂಪರಿಂದ ಆರಂಭವಾಗಿದ್ದ ಚೊಕ್ಕಾಡಿ ದೇವಳದ ನಿರ್ಮಾಣ ಕಾರ್ಯವನ್ನು ಮುಂದುವರಿಸಿ ಕರ್ಮಪುತ್ರರೆನಿಸಿಕೊಂಡರು. ಜತೆಯಲ್ಲಿ ಕಲಾಚಟುವಟಿಕೆಯತ್ತ ಗಮನ. ಆಟ, ಕೂಟಗಳೆರಡನ್ನೂ ನಡೆಸುತ್ತಿದ್ದರು. ಇವರ ಜತೆ ಹೆಗಲು ಕೊಟ್ಟು ಸಹಕರಿಸಿದವರು ಅಜ್ಜನಗದ್ದೆ ಗಣಪಯ್ಯ ಭಾಗವತರು. ಉಡುವೆಕೋಡಿ ನಾರಾಯಣಯ್ಯ, ಮೈಂದಪ್ಪ ರೈಗಳು, ಪನ್ನೆಗುತ್ತು ತ್ಯಾಂಪಣ್ಣ ಸೇಕರು, ಭೀಮಗುಳಿ ಗೋವಿಂದಯ್ಯ, ಪನ್ನೆ ಕಿಟ್ಟಣ್ಣ ರೈಗಳು, ನಾರಾಯಣ ಸೇಕರು. ‘ಚೊಕ್ಕಾಡಿ ಮೇಳ’ ಎಂಬ ಕಲಾತಂಡವು ಚಿಗುರೊಡೆಯಿತು. ನಿರಂತರ ಕಲಾಪ್ರದರ್ಶನಗಳು ನಡೆದವು. ಅದೇ ಸಮಯ ಕುರಿಯ ವೆಂಕಟರಮಣ ಶಾಸ್ತ್ರಿಗಳು ಕೋಳ್ಯೂರು ಯಕ್ಷಗಾನ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದರು. ಕೋಳ್ಯೂರು ಕಂಪೆನಿ ಎಂದು ಪ್ರಸಿದ್ಧವಾಗಿದ್ದ ಈ ತಂಡದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಅನೇಕ ಆವಿಷ್ಕಾರಗಳನ್ನೂ ಮಾಡಿದ್ದರು.

ದೇರಾಜೆಯವರು ಈ ತಂಡದಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸಿದ್ದರು. ಈ ತಂಡದ ಚಟುವಟಿಕೆಯಿಂದ ಉತ್ತೇಜಿತರಾಗಿ ದೇರಾಜೆಯವರು ಚೊಕ್ಕಾಡಿ ಮೇಳವನ್ನು ‘ಶಾರದಾ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ’ ಎಂದು ಹೆಸರಿಸಿ, ಮುನ್ನಡೆಸಿ ಹೊಸ ಪ್ರಯೋಗಗಳಿಗೆ ಮುನ್ನುಡಿ ಬರೆದರು. ರಂಗಮಂದಿರವೂ ಸಿದ್ಧವಾಯಿತು. ಎರಡು ಅಂತಸ್ತುಗಳ ರಂಗಸ್ಥಳ. ಹಿಂಬದಿಗೆ ನಾಟಕ ಶೈಲಿಯ ಸೀನ್ ಸೀನರಿ ಪರದೆಗಳು. ಹೀಗೆ ನಿರಂತರ ಪ್ರದರ್ಶನಗಳು ನಡೆಯುತ್ತಿತ್ತು. ಲೇಖಕರಾದ ಎಸ್. ಆರ್. ಚಂದ್ರ, ಕೊಳಂಬೆ ಪುಟ್ಟಣ್ಣ ಗೌಡರೂ ತಂಡದಲ್ಲಿದ್ದರು.

ನಟಸಾರ್ವಭೌಮ ಕುರಿಯ ವಿಠಲ ಶಾಸ್ತ್ರಿಗಳೂ, ಉಡುವೆಕೋಡಿ ನಾರಾಯಣಯ್ಯನವರು, ಭೀಮಗುಳಿ ಗೋವಿಂದಯ್ಯನವರೂ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅಜ್ಜನಗದ್ದೆ ಗಣಪಯ್ಯನವರು ಭಾಗವತರು. ಮೈಂದಪ್ಪ ರೈಗಳು ಭಾಗವತರಾಗಿ, ವೇಷಧಾರಿಯಾಗಿಯೂ ಒದಗುತ್ತಿದ್ದರು. ದೇರಾಜೆ ಕೃಷ್ಣಯ್ಯ ಸೇರಿದಂತೆ (ದೇರಾಜೆಯವರ ಅಣ್ಣನ ಮಗ) ಕಿರಿಯರೂ ಅಭಿನಯಿಸಿದರು. ದೇರಾಜೆಯವರ ಆಪ್ತ ಪಾರೆ ಶಂಭಯ್ಯನವರು ಸಹಕರಿಸುತ್ತಿದ್ದರು. ತಂಡದ ಪ್ರದರ್ಶನವು ಊರ ಪರವೂರಿನ ಪ್ರೇಕ್ಷಕರಿಗೆ ಉತ್ಸವವಾಗಿ ಪರಿಣಮಿಸಿತ್ತು. ಇಷ್ಟಕ್ಕೆ ದೇರಾಜೆಯವರು ತೃಪ್ತರಾಗಲಿಲ್ಲ. ತಾಳಮದ್ದಳೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಮಾತಿನ ಜತೆ ಅಭಿನಯದಿಂದ ಪ್ರೇಕ್ಷಕರಲ್ಲಿ ರಸೋತ್ಪತ್ತಿಯಾಗುವಲ್ಲಿ ಶ್ರಮಿಸಿದರು. ನಾಟಕ ಕಂಪೆನಿಗಳಲ್ಲಿ ಇರುತ್ತಿದ್ದ ತಾಂತ್ರಿಕ ಅಂಶಗಳನ್ನೂ ತನ್ನ ತಂಡದಲ್ಲಿ ಅಳವಡಿಸಿಕೊಂಡರು.

ಹೀಗೆ ಚೊಕ್ಕಾಡಿ ಎಂಬ ಊರನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ಬೆಳೆಸಿದರು. ಮೊಳಹಳ್ಳಿ ಶಿವರಾಯರು ಡಾ| ಶಿವರಾಮ ಕಾರಂತರೂ ತಮ್ಮ ಕಾರ್ಯಕ್ರಮಗಳಿಗೆ ಚೊಕ್ಕಾಡಿಯನ್ನು ಕೇಂದ್ರವಾಗಿ ಆರಿಸಿದ್ದರು. ಹಿರಿಯ ಲೇಖಕ ತ.ರಾ.ಸು., ನೆಟ್ಟಾರು ಗೋಪಾಲಕೃಷ್ಣ, ಪೈಲೂರು ಶಿವರಾಮಯ್ಯ, ಕೊಳಂಬೆ ಪುಟ್ಟಣ್ಣ ಗೌಡ, ಎಸ್. ಆರ್. ಚಂದ್ರ, ಅಲ್ಲದೆ ಅನೇಕ ಹಿರಿಯ, ಕಿರಿಯ ಸಾಹಿತಿಗಳು, ಕಲಾವಿದರು ಚೊಕ್ಕಾಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ದೇರಾಜೆಯವರು ತಾಳಮದ್ದಳೆ, ನಾಟಕಗಳಲ್ಲಿ ತನಗಿದ್ದ ನಟನಾಕೌಶಲವನ್ನು ಸಹಕಲಾವಿದರಿಗೂ ತರಬೇತಿಯ ಮೂಲಕ ಧಾರೆ ಎರೆದ ಶ್ರೇಷ್ಠ ಕಲಾವಿದ.


ಯಕ್ಷಗಾನದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ ಡಾ| ಶಿವರಾಮ ಕಾರಂತರಿಂದ ಹೊಗಳಿಸಿಕೊಂಡದ್ದು ದೇರಾಜೆಯವರ ಸಾಧನೆಗೆ, ಪ್ರತಿಭೆಗೆ ಸಂದ ಪ್ರಶಸ್ತಿಯೇ ಹೌದು. ‘‘ನಾನು ದೇರಾಜೆ ಸೀತಾರಾಮಯ್ಯ… ಚೊಕ್ಕಾಡಿಯ ಪರಿಸರ ನನ್ನನ್ನು ರೂಪಿಸಿದೆ’’. ಮನುಷ್ಯನು ಸಂಘಜೀವಿ. ಏಕಾಂಗಿಯಾಗಿ ಬದುಕಲಾರ. ಸಮಾಜದ ಜತೆಯಲ್ಲಿದ್ದೇ ಜೀವಿಸಬೇಕು ಎಂಬ ಧ್ವನಿಯು ದೇರಾಜೆಯವರ ಈ ಮಾತುಗಳಲ್ಲಿ ಅಡಗಿದೆ. ಇವರ ಸಾಹಸ, ಸಾಧನೆಯಿಂದ ಪರಿಸರದ ಜನರಂತೂ ಉತ್ತೇಜಿತರಾದುದು ಸತ್ಯ. ಅಲ್ಲಲ್ಲಿ ನಾಟಕ, ಯಕ್ಷಗಾನವೇ ಮೊದಲಾದ ಸಾಂಸ್ಕೃತಿಕ ಕಲಾತಂಡಗಳು ಹುಟ್ಟಿ ಬೆಳೆಯ ಲಾರಂಭಿಸಿದವು.

1946ರಲ್ಲಿ ಚೊಕ್ಕಾಡಿಯ ಶ್ರೀರಾಮ ದೇವಾಲಯದ ಕೆಲಸ ಪೂರ್ಣಗೊಂಡು ಪೂಜಾ ಕೈಂಕರ್ಯಗಳು ಆರಂಭವಾಗಿದ್ದವು. ತಾಳಮದ್ದಳೆ ಕ್ಷೇತ್ರದಲ್ಲಿ ದೇರಾಜೆಯವರು ಈ ಕಾಲಕ್ಕೆ ಪ್ರಸಿದ್ಧರೂ ಆಗಿದ್ದರು. ಆದರೆ ಆರ್ಥಿಕ ಸ್ಥಿತಿಯು ಹದಗೆಟ್ಟಿತ್ತು. ಅವರನ್ನು ಅರ್ಥೈಸಿ ಹೆಜ್ಜೆಹಾಕುವ ಮಂದಿಗಳೂ ಇರಲಿಲ್ಲ. ಕೆಲವೊಂದು ಘಟನೆಗಳಿಂದ ನೊಂದ ಅವರಿಗೆ ಒಂದು ರೀತಿಯ ಅತೃಪ್ತಿಯು ಕಾಡತೊಡಗಿತ್ತು. ಸಂಘರ್ಷಕ್ಕಿಂತ ಸಾಮರಸ್ಯವೇ ಒಳಿತೆಂಬ ಮನೋಭಾವ ಉಳ್ಳವರಾಗಿ ವಿರೋಧಿಗಳನ್ನು ಎದುರಿಸದೆ ಮತ್ತೊಬ್ಬರಲ್ಲಿ ದೂರದೆ ತನ್ನತನವನ್ನು ಮೆರೆದ ಸಜ್ಜನ ದೇರಾಜೆಯವರು. ದಿಗ್ಗಜ ರೊಂದಿಗೆ ತಾಳಮದ್ದಳೆಗಳಲ್ಲಿ ವಾಕ್ಚಾತುರ್ಯವನ್ನು ಪ್ರಕಟಿಸುತ್ತಾ ನಂತರದ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಅನಿವಾರ್ಯವಾಗಿ ಚೊಕ್ಕಾಡಿಯನ್ನು ತೊರೆದು ಬೆಳ್ಳಾರೆ ಸಮೀಪದ ಗಟ್ಟಿಗಾರಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿ ಬೆಳ್ಳಾರೆ ಗ್ರಾಮ ಪಂಚಾಯತಿನ ಅಧ್ಯಕ್ಷರೂ ಆದರು. ದೇರಾಜೆಯವರು ತಮ್ಮ ಜ್ಞಾನ, ಅನುಭವಗಳನ್ನು ಹಿರಿಯರು, ಕಿರಿಯರೆಂಬ ಭೇದವಿಲ್ಲದೆ ಹಂಚಿಕೊಳ್ಳುತ್ತಿದ್ದರು.


ದೇರಾಜೆಯವರು ಕೃಷಿಕರಾಗಿಯೂ ಪ್ರಸಿದ್ಧರು. ಜಪಾನ್ ಮಾದರಿಯ ಭತ್ತದ ಕೃಷಿಯನ್ನು ಮಾಡಿ ‘ಉತ್ತಮ ಕೃಷಿಕ’ ಪುರಸ್ಕಾರವನ್ನು ಪಡೆದರೂ ಸಾವಯವ ಕೃಷಿಯೇ ನಿಜವಾದ ಕೃಷಿ. ರಾಸಾಯನಿಕಗಳ ಬಳಕೆ ಮುಂದೊಂದು ದಿನ ಖಂಡಿತ ನಮ್ಮನ್ನು ತೊಂದರೆಗೀಡು ಮಾಡುತ್ತದೆ ಎಂದು ಎಚ್ಚರಿಸಿದ್ದರು. ಸರಿಯಾಗಿ ಸಾವಯವ ಕೃಷಿ ಮಾಡಿದರೆ ಅಡಿಕೆಗೆ ಔಷಧಿ ಸಿಂಪಡಿಸುವ ಅಗತ್ಯ ಬಾರದೆಂಬ ಸಂದೇಶವನ್ನು ಕೃಷಿಕರಿಗೆ ನೀಡುವ ಜತೆಗೇ ಸಾಹಿತ್ಯಕ್ಷೇತ್ರದಲ್ಲೂ ಕೃಷಿಕರಾಗಿ ಖ್ಯಾತರಾದರು. ಭೀಷ್ಮಾರ್ಜುನ, ಧರ್ಮದಾಸಿ ನಾಟಕಗಳನ್ನು ಬರೆದು ಪ್ರಕಟವೂ ಆಗಿತ್ತು. ಸಹಕಾರಿ ಬ್ಯಾಂಕ್ ಮತ್ತು ಪುತ್ತೂರು ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಾ ಪ್ರಿಯದರ್ಶನಂ, ಯಕ್ಷಗಾನ ವಿವೇಚನೆ, ಸುಭದ್ರಾರ್ಜುನ ಮೊದಲಾದ ಕೃತಿಗಳನ್ನು ರಚಿಸಿದರು. ಶ್ರೀರಾಮಚರಿತಾಮೃತಂ ಎಂಬ ಮೇರುಕೃತಿಯೂ ಲೋಕಾರ್ಪಣೆ ಗೊಂಡಿತು (1959).

ಹಣದ ವಿಚಾರದಲ್ಲಿ ಧಾರಾಳಿ. ಮಿತಿಮೀರಿ ಖರ್ಚು ಮಾಡುತ್ತಿದ್ದರಂತೆ. ಆದರೆ ಸಾರ್ವಜನಿಕ ವಲಯದ ಹಣಕಾಸಿನ ವಿಚಾರದಲ್ಲಿ ಶಿಸ್ತಿನ ಸಿಪಾಯಿಯಾಗಿದ್ದರು. ಬೆಳ್ತಂಗಡಿಯಲ್ಲಿ ನೆಲೆಸಿದ ಮೇಲೂ ಹಲವಾರು ಸಂಘ-ಸಂಸ್ಥೆಗಳಲ್ಲಿ ದುಡಿದ ಅವರು ಕೃಷಿಕರ ಮತ್ತು ಕಲಾವಿದರ ಬಗೆಗೆ ಕಾಳಜಿ ಉಳ್ಳವರಾಗಿದ್ದರು. ಅಲ್ಲದೆ ಅವರ ಕಷ್ಟಗಳಿಗೆ ಸ್ಪಂದಿಸಿದ ನಿದರ್ಶನಗಳೂ ಇವೆ. 1974ರಲ್ಲಿ ಸಾಧನೆಯ ಪ್ರತೀಕವಾಗಿ ‘ರಸಋಷಿ’ ಅಭಿನಂದನ ಗ್ರಂಥವನ್ನು ದೇರಾಜೆಯವರಿಗೆ ಕಲಾಭಿಮಾನಿಗಳು ಅರ್ಪಿಸಿದ್ದರು. 1977ರಲ್ಲಿ ಇವರು ರಚಿಸಿದ ಶ್ರೀಮನ್ಮಹಾಭಾರತ ಗ್ರಂಥವೂ ಲೋಕಾರ್ಪಣೆಗೊಂಡಿತು. ನಂತರ ರಾಮರಾಜ್ಯದ ರೂವಾರಿ, ಕುರುಕ್ಷೇತ್ರಕ್ಕೊಂದು ಆಯೋಗ ಕೃತಿಗಳು ಪ್ರಕಟನೆಗೊಂಡವು. ಬೆಳ್ತಂಗಡಿಯಲ್ಲಿ ವಾಸವಾಗಿದ್ದ ಕಾಲದಲ್ಲೇ ಅವರ ಹೆಚ್ಚಿನ ಕೃತಿಗಳು ಪ್ರಕಟನೆಗೊಂಡವು. ತಾಳಮದ್ದಳೆ ಕ್ಷೇತ್ರದಲ್ಲೂ ವ್ಯವಸಾಯ ಮಾಡಿ ಖ್ಯಾತರಾದರು.

ಕೆಲವೇ ಪಾತ್ರಗಳಿಗೆ ತನ್ನನ್ನು ತಾನು ಸೀಮಿತಗೊಳಿಸದೆ ವೈವಿಧ್ಯಮಯ ಪಾತ್ರಗಳಲ್ಲಿ ರಂಜಿಸಿದರು. ಉತ್ತರಕುಮಾರ, ಗೋಪಾಲಕ, ಹನೂಮಂತ, ಸುಗ್ರೀವ, ಅಂಗದ ವಿಭೀಷಣ, ಅತಿಕಾಯ, ಪ್ರಹಸ್ತ, ರಾವಣ, ರಾಮ, ಭರತ, ದಶರಥ, ಹಂಸಧ್ವಜ, ಧರ್ಮರಾಯ, ಭೀಮ, ವಿದುರ, ಕೌರವ, ಕರ್ಣ, ಅರ್ಜುನ, ಕೃಷ್ಣ, ಭೀಷ್ಮ, ಸುಧನ್ವ ಅಲ್ಲದೆ ಶೂರ್ಪನಖಿ, ಮಂಥರೆ, ಪೂತನಿ ಮೊದಲಾದ ಸ್ತ್ರೀಪಾತ್ರಗಳನ್ನೂ ಮಾಡಿದ್ದಾರೆ. ನಾಟಕದಲ್ಲಿ ಮಕರಂದ ಮತ್ತು ಚಂದ್ರಾವಳೀ ವಿಲಾಸದ ಅತ್ತೆಯ ಪಾತ್ರವು ಪ್ರೇಕ್ಷಕರ ಮನಸೂರೆಗೊಂಡಿತ್ತು. ಅವರು ನಿವೃತ್ತರಾಗುವ ವರೇಗೆ ಉತ್ತರನ ಪಾತ್ರವನ್ನು ನಿರ್ವಹಿಸಲು ಕಲಾವಿದರು ಅಳುಕುತ್ತಿದ್ದರಂತೆ. ದೇರಾಜೆಯವರು ಉತ್ತರನ ಪಾತ್ರವನ್ನು ಆ ರೀತಿ ಚಿತ್ರಿಸಿದ್ದರು. ‘‘ಅರ್ಥ ಹೇಳುವುದೆಂದರೆ ಪ್ರತಿ ಕಾವ್ಯದ ಸೃಷ್ಟಿ. ದೇರಾಜೆಯವರು ಪ್ರತಿಯೊಂದು ಸಂದರ್ಭದಲ್ಲೂ ಇಂತಹ ಕಾವ್ಯವನ್ನು ಸೃಷ್ಟಿ ಮಾಡುತ್ತಿದ್ದ ಮಹಾನ್ ಕಲಾವಿದ’’. ಇದು ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರು ದೇರಾಜೆಯವರ ಬಗೆಗೆ ಆಡಿದ ಮೆಚ್ಚುಗೆ ನುಡಿಗಳು.


ಲೇಖಕ, ವಿಮರ್ಶಕ, ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಷಿಯವರ ಅಭಿಪ್ರಾಯದಂತೆ- ‘‘ದೇರಾಜೆ ಅರ್ಥಗಾರಿಕೆಯು ಕನ್ನಡ ವಾಙ್ಮಯದ ಉನ್ನತ ಸಿದ್ಧಿಗಳಲ್ಲಿ ಒಂದು. ಅರ್ಥಗಾರಿಕೆಯ ನಿಜವಾದ ಯಶಸ್ಸಿಗೆ ಬೇಕಾದುದು ಅಂತಹ ದೊಡ್ಡ ಪಾಂಡಿತ್ಯ ಅಲ್ಲ, ‘ಕಲೆಗಾರಿಕೆ’ ಎಂದು ತೋರಿಸಿದ್ದು ದೇರಾಜೆಯವರ ಸಾಧನೆ’’.


ಹಿರಿಯ ತಾಳಮದ್ದಳೆ ಅರ್ಥಧಾರಿ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯನವರು ದೇರಾಜೆಯವರ ಶಿಷ್ಯರು. ಶ್ರೀಯುತರು ದೇರಾಜೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡೇ ಖ್ಯಾತರಾದರು. ದೇರಾಜೆಯವರು ರಚಿಸಿದ ಕೃತಿಗಳು ಅನೇಕ. ಅವರ ಬಗೆಗೆ ಪ್ರಕಟಿತವಾದ ಪುಸ್ತಕಗಳೂ ಹಲವು. ಕಲಾ, ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ದೇರಾಜೆಯವರಿಗೆ ಉನ್ನತ ಪ್ರಶಸ್ತಿಗಳು ದೊರಕದೇ ಇದ್ದುದು ಆಶ್ಚರ್ಯಕರವಾದ ವಿಚಾರ. ಆದರೂ ಅವರ ಕೊಡುಗೆಗಳನ್ನು ನಾವು ಬಳಸುತ್ತಿದ್ದೇವೆ. ಅವರನ್ನು ಸ್ಮರಿಸುತ್ತಿದ್ದೇವೆ. ಇದುವೇ ಅವರಿಗೆ ನೀಡುವ ಗೌರವವೆಂದು ಭಾವಿಸೋಣ. ದೇರಾಜೆಯವರನ್ನು ಕರೆಸುವುದಕ್ಕಾಗಿಯೇ ತಾಳಮದ್ದಳೆ ಏರ್ಪಡಿಸುವಷ್ಟು ಜನಪ್ರಿಯತೆಯು ಬೆಳೆದಿತ್ತು.

ಆಗಲೇ ನಿವೃತ್ತಿಯನ್ನೂ ಘೋಷಿಸಿದ್ದರು. ‘‘ನಾಡಿನಾದ್ಯಂತ ನನ್ನನ್ನು ಬಲ್ಲವರಿದ್ದರೆ, ಅಭಿಮಾನಿಗಳಿದ್ದರೆ ಅದು ಯಕ್ಷಗಾನ ಕಲಾಮಾತೆಯ ಅನುಗ್ರಹದಿಂದ. ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ಹಳೆಯ ಮರವು ಕೊಳೆತು ಹೊಸ ಗಿಡಗಳಿಗೆ ಆಹಾರವಾಗಬೇಕು. ಇದು ಪ್ರಕೃತಿಯ ಧರ್ಮ. ಅಂತೆಯೇ ನಾನು ನಿವೃತ್ತನಾಗುತ್ತೇನೆ. ಸೀತಾರಾಮಯ್ಯ ಎಂಬವನೊಬ್ಬ ಇದ್ದ ಎಂಬ ನೆನಪು ನಿಮ್ಮ ಹೃದಯದಲ್ಲಿ ಇದ್ದರೆ ನಾನು ಧನ್ಯ’’ ಎಂದು ಹೇಳಿ ತನ್ನ ನಿವೃತ್ತಿಯ ಬಗೆಗೆ ಆ ಕಾಲದಲ್ಲಿ ಹುಟ್ಟಿಕೊಂಡ ತರ್ಕ, ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಬೆಳ್ತಂಗಡಿಯಿಂದ ವಿಟ್ಲಕ್ಕೆ ಬಂದು ನೆಲೆಸಿದ ಇವರು ಭಾಗವಹಿಸಿದ ಕೊನೆಯ ತಾಳಮದ್ದಳೆ 1984 ಜುಲೈ 29ರಂದು ಮಂಗಳೂರಿನಲ್ಲಿ.
ಸಾರ್ವಜನಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದ ದೇರಾಜೆ ಶ್ರೀ ಸೀತಾರಾಮಯ್ಯನವರನ್ನು ತಿಳಿಯದವರಿಲ್ಲ. ಅಂದಿನ ರಾಜಕೀಯ ನಾಯಕರುಗಳಿಗೆಲ್ಲಾ ದೇರಾಜೆಯವರು ಆಪ್ತರಾಗಿದ್ದರು. ಅವರ ಒಡನಾಟ, ಸ್ನೇಹವನ್ನು ಸ್ವಂತಕ್ಕಾಗಿ ಬಳಸದೆ, ಸಮಾಜದ ಹಿತಾಸಕ್ತಿಗಾಗಿಯೇ ಬಳಸಿಕೊಂಡರು. ಯಾರಲ್ಲೂ ಬೇಡದೆ ತನ್ನಲ್ಲಿದ್ದುದನ್ನು ಜನರಿಗೆ ನೀಡಿದರು.

ಅಪ್ಪಟ ಕಾಂಗ್ರೆಸಿಗನಾದರೂ ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು. ತಪ್ಪು ಮಾಡಿದರೆ ಆಪ್ತರನ್ನು ಖಂಡಿಸುವ, ಉತ್ತಮ ಕಾರ್ಯಗಳನ್ನು ಮಾಡಿದರೆ ವಿರೋಧಿಗಳಾದರೂ ಹಿಂದು ಮುಂದು ನೋಡದೆ ಪ್ರಶಂಸಿಸುವ ಗುಣ ದೇರಾಜೆಯವರಲ್ಲಿತ್ತು. ಸಮಯಸ್ಫೂರ್ತಿಯಿಂದ ಸ್ಫುರಿಸುತ್ತಿದ್ದ ಅವರ ಮಾತುಗಳು ತಾಳಮದ್ದಳೆಯ ಅರ್ಥಗಾರಿಕೆಯ ವಿಶೇಷತೆ. ಪ್ರತ್ಯುತ್ಪನ್ನಮತಿಯಾಗಿ, ವಾಕ್ಚಾತುರ್ಯದಿಂದ ಪಾತ್ರವನ್ನೂ, ದೃಶ್ಯವನ್ನೂ ಅದ್ಭುತವಾಗಿ ಚಿತ್ರಿಸುತ್ತಿದ್ದರೆ ಪಾತ್ರರಚನಾ ಕೌಶಲವು ಅನುಪಮವಾಗಿತ್ತು. ವಾಕ್ಚಾತುರ್ಯದ ಜತೆ ಹಾಸ್ಯಪ್ರಜ್ಞೆಯೂ ಅಪಾರವಾಗಿತ್ತು. ಅವರ ಸಹಕಲಾವಿದರಾಗಿದ್ದವರು, ಅವರ ಅರ್ಥಗಾರಿಕೆಯನ್ನು ಕೇಳಿದವರು ಅದನ್ನು ಉಲ್ಲೇಖಿಸಿ ದಾಖಲಿಸಿಯೂ ಇದ್ದಾರೆ. ನಿಜಜೀವನದಲ್ಲೂ ಹಾಗೆಯೇ, ತನ್ನನ್ನು ತಾನು ಹಾಸ್ಯ ಎಂಬ ವಿಷಯಕ್ಕೆ ವಸ್ತುವಾಗಿ ಒಡ್ಡಿಕೊಳ್ಳುತ್ತಿದ್ದರು. ಅಡಿಕೆ ಬೆಳೆಗಾರರಿಗಾಗಿ ‘ಕ್ಯಾಂಪ್ಕೋ’ ಸಂಸ್ಥೆಯನ್ನು ಆರಂಭಿಸುವಲ್ಲೂ ಇವರ ಪ್ರಯತ್ನವಿತ್ತು.


‘‘ದೇರಾಜೆಯವರಲ್ಲದಿದ್ರೆ ನಾನು ಕ್ಯಾಂಪ್ಕೋ ಸಂಸ್ಥೆ ಸ್ಥಾಪನೆಗೆ ಮನಸ್ಸು ಮಾಡುತ್ತಿರಲಿಲ್ಲ’’. ಇದು ವಾರಣಾಸಿ ಶ್ರೀ ಸುಬ್ರಾಯ ಭಟ್ಟರ ಮಾತುಗಳು. ಇವರಿಗೆ ಜ್ಯೋತಿಷಶಾಸ್ತ್ರದಲ್ಲಿ ಆಸಕ್ತಿಯೂ ಇತ್ತು. ಸಿಹಿತಿಂಡಿಗಳೆಂದರೆ ಪಂಚಪ್ರಾಣ. ಬೇಡುವಲ್ಲಿ ಸಂಕೋಚವೂ, ನೀಡುವಲ್ಲಿ ಧಾರಾಳಿಗರೂ ಆಗಿದ್ದರು. ಹೀಗೆ ಕಲಾವಿದನಾಗಿ, ಕವಿಯಾಗಿ, ನಿರ್ದೇಶಕನಾಗಿ, ಸಾಮಾಜಿಕ, ಧಾರ್ಮಿಕ ನಾಯಕನಾಗಿ ಸಮಾಜಕ್ಕೆ, ಯಕ್ಷಗಾನ ಕಲೆಗೆ ಬಹು ಉಪಯೋಗೀ ಕೊಡುಗೆಗಳನ್ನು ನೀಡಿ ದೇರಾಜೆಯವರು ಬದುಕನ್ನು ಸಾರ್ಥಕ ಪಡಿಸಿಕೊಂಡರು. 1984ನೇ ಇಸವಿ ಒಕ್ಟೋಬರ್ 5ರಂದು ಅಲೌಕಿಕ ಪ್ರಪಂಚವನ್ನು ಸೇರಿಕೊಂಡ ದೇರಾಜೆ ಸೀತಾರಾಮಯ್ಯ ಎಂಬ ಮಹಾನ್ ಚೇತನಕ್ಕೆ ನಮನಗಳು. ು

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments