ನಂದಿನಿ ರಾವ್ ಗುಜಾರ್ ಗಾಯನ ಲೋಕದಲ್ಲಿ ಒಂದು ಅಪೂರ್ವ ಪ್ರತಿಭೆ. ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಹಳಷ್ಟು ಹೆಸರು ಮಾಡಿದ ಸಂಗೀತಗಾರ್ತಿಯರಲ್ಲಿ ನಂದಿನಿ ಕೂಡಾ ಒಬ್ಬರು. ತನ್ನ 12ನೆಯ ವಯಸ್ಸಿನಲ್ಲಿಯೇ ಹಾಡಲು ಪ್ರಾರಂಭಿಸಿದ ನಂದಿನಿ ಇಂದು ವಿಶ್ವಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರ ಹಾಡುಗಾರಿಕೆಗೆ ವಿದೇಶಗಳಲ್ಲೂ ಬಹಳಷ್ಟು ಬೇಡಿಕೆ ಇದೆ.
ಅವರು ಹಾಡಲು ತೊಡಗಿ ಈ ವರೆಗೆ ಸಾಗಿ ಬಂದ ಇಪ್ಪತ್ತು ವರ್ಷಗಳಲ್ಲಿ ಅಮೋಘವಾದುದನ್ನೇ ಸಾಧಿಸಿದ್ದಾರೆ. ಕರ್ನಾಟಕದ ಈ ಹುಡುಗಿ ಬೆಳೆದ ಪರಿ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಇದು ವರೆಗೆ ಸುಮಾರು 1500 ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಅಮೆರಿಕಾ, ಕೆನೆಡಾ, ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿ ಅಲ್ಲಿಯೂ ಜನಪ್ರಿಯತೆಯನ್ನು ಪಡೆದಿದ್ದಾರೆ.
ಹಲವಾರು ಕನ್ನಡ ಚಾನೆಲ್ ಗಳಲ್ಲಿಯೂ ಪ್ರದರ್ಶನ ಮತ್ತು ಲೈವ್ ಷೋಗಳನ್ನೂ ನೀಡಿರುವ ನಂದಿನಿ ರಾವ್ ಅವರ ಸುಮಾರು 100ಕ್ಕೂ ಹೆಚ್ಚು ಸಿಡಿ ಗಳು ಧ್ವನಿಮುದ್ರಣಗೊಂಡಿವೆ. ತುಂಬಾ ಬೇಡಿಕೆಯಿರುವ ಹೊಸ ತಲೆಮಾರಿನ ಕಲಾವಿದೆ. ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಾರೆ.
ಅವರ ಹಾಡನ್ನು ಕೇಳಿದರೆ ಮತ್ತೆ ಮತ್ತೆ ಕೇಳುವಂತೆ ಕೇಳುಗರ ಮನಸ್ಸನ್ನು ಮೋಡಿ ಮಾಡುತ್ತಾರೆ. ಕಚೇರಿ ನೋಡಿದರೆ ಮತ್ತೆ ಹೋಗುವಂತೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಅವರ ‘ರಾಮ ಮಂತ್ರವ ಜಪಿಸೋ’ ಎಂಬ ಒಂದು ಹಾಡು ಅವರದೇ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಿ. ಲಿಂಕ್ ಕೊಡಲಾಗಿದೆ.