Thursday, May 9, 2024
Homeಯಕ್ಷಗಾನಬಡಗುತಿಟ್ಟಿನ ಮದ್ದಳೆವಾದನದಲ್ಲಿ ಕರ್ಕಿ ಮನೆತನ - ಶ್ರೀ ಪ್ರಭಾಕರ ಭಂಡಾರಿ, ಶ್ರೀ ಮಂಜುನಾಥ ಭಂಡಾರಿ, ಶ್ರೀ...

ಬಡಗುತಿಟ್ಟಿನ ಮದ್ದಳೆವಾದನದಲ್ಲಿ ಕರ್ಕಿ ಮನೆತನ – ಶ್ರೀ ಪ್ರಭಾಕರ ಭಂಡಾರಿ, ಶ್ರೀ ಮಂಜುನಾಥ ಭಂಡಾರಿ, ಶ್ರೀ ಪರಮೇಶ್ವರ ಭಂಡಾರಿ ಕರ್ಕಿ 

ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಎಂಬ ಊರು ಯಕ್ಷಗಾನ ಕಳೆಯ ಆಡೊಂಬಲ ಎಂದರೂ ತಪ್ಪಾಗಲಾರದು. . ಬಡಗುತಿಟ್ಟಿನ ಹಿಮ್ಮೇಳ, ಮುಮ್ಮೇಳದ ಅನೇಕ ಕಲಾವಿದರನ್ನು ಯಕ್ಷಗಾನ ಕಲಾ ಮಾತೆಯ ಮಡಿಲಿಗಿಕ್ಕಿದ ಮಣ್ಣು ಇದು. ಇಲ್ಲಿ ಹುಟ್ಟಿ ಬೆಳೆದ ಕಲಾವಿದರೆಲ್ಲಾ ತಾವು ತೊಡಗಿಸಿಕೊಂಡ ವಿಭಾಗದಲ್ಲಿ ಖ್ಯಾತರಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಕರ್ಕಿ ಹಾಸ್ಯಗಾರ ಮನೆತನದಲ್ಲಿ ಜನಿಸಿದ ಅನೇಕರು ಬಡಗುತಿಟ್ಟಿನ ಮುಮ್ಮೇಳದ ಕಲಾವಿದರಾಗಿ ಖ್ಯಾತರಾದುದು ನಮಗೆಲ್ಲಾ ತಿಳಿದ ವಿಚಾರ. ಬಡಗುತಿಟ್ಟಿನ ಯಕ್ಷಗಾನ ಹಿಮ್ಮೇಳಕ್ಕೂ ಕರ್ಕಿ ಮಣ್ಣಿನ ಕೊಡುಗೆಯು ಅಪಾರ. ಕರ್ಕಿ ಭಂಡಾರಿ ಮನೆತನದಲ್ಲಿ ಜನಿಸಿದ ಅನೇಕರು ಅತ್ಯುತ್ತಮ ಮದ್ದಳೆವಾದಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಖ್ಯಾತರಾಗಿದ್ದಾರೆ.

ಇವರಲ್ಲಿ ಶ್ರೀ ಪ್ರಭಾಕರ ಭಂಡಾರಿ ಕರ್ಕಿ, ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಪ್ರಮುಖರು. ಬಡಗುತಿಟ್ಟಿನ  ಹಿರಿಯ,ಅನುಭವೀ, ಖ್ಯಾತ ಮದ್ದಳೆಗಾರ ಶ್ರೀ ಪ್ರಭಾಕರ ಭಂಡಾರಿ ಕರ್ಕಿ ಅವರಿಗೀಗ 82 ವರ್ಷ ವಯಸ್ಸು. ಕಳೆದ 20 ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯಕ್ಕೆ ವಿದಾಯ ಹೇಳಿ ಮಕ್ಕಳಾದ ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಇವರೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ ಪ್ರಭಾಕರ ಭಂಡಾರಿ ಕರ್ಕಿ

ಬಡಗುತಿಟ್ಟಿನ ಹಿರಿಯ ಅನುಭವೀ ಮದ್ದಳೆಗಾರರಾದ ಶ್ರೀ ಪ್ರಭಾಕರ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಕರ್ಕಿ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಇವರ ಮನೆ. 1940ರಲ್ಲಿ ಕರ್ಕಿ ಶ್ರೀ ಪಾಂಡುರಂಗ ಭಂಡಾರಿ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಶ್ರೀ ಪಾಂಡುರಂಗ ಭಂಡಾರಿಗಳು ಆ ಕಾಲದ ಅತ್ಯುತ್ತಮ ಮದ್ದಳೆಗಾರರಾಗಿದ್ದರು. ಶ್ರೀಯುತರು ಕರ್ಕಿ ಪರಮಯ್ಯ ಹಾಸ್ಯಗಾರರ ಕರ್ಕಿ ಮೇಳದಲ್ಲಿ ವ್ಯವಸಾಯ ಮಾಡಿದವರು.

ಪ್ರಭಾಕರ ಭಂಡಾರಿಗಳ ಅಣ್ಣಂದಿರಾದ ಶ್ರೀ ಕೇಶವ ಭಂಡಾರಿ ಮತ್ತು  ಶ್ರೀ ಸತ್ಯನಾರಾಯಣ ಭಂಡಾರಿಗಳು ಮದ್ದಳೆಗಾರರಾಗಿ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಹೀಗೆ ಕಲಾಸಕ್ತಿಯು ಪ್ರಭಾಕರ ಭಂಡಾರಿಗಳಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಈ ಮನೆಯ ಸದಸ್ಯರೆಲ್ಲರೂ  ನುಡಿಸುವಿಕೆಯಲ್ಲಿ ಪ್ರವೀಣರಾಗಿದ್ದರು. (ಪಂಚವಾದ್ಯ) ದೇವಸ್ಥಾನದ ಕಾರ್ಯಕ್ರನಗಳಲ್ಲಿ, ಮದುವೆ ಇನ್ನಿತರ ಶುಭಸಮಾರಂಭಗಳಲ್ಲಿ ಇವರು ವಾದ್ಯಗಳನ್ನು ನುಡಿಸುತ್ತಿದ್ದರು. ಈ ಕಲೆಯು ಇವರಿಗೆ ಪರಂಪರೆಯಿಂದ ಬಂದುದು.

ಇವರು ಕರಕುಶಲಗಾರಿಕೆಯನ್ನೂ ಬಲ್ಲವರು. ಮಣ್ಣಿನಿಂದ ಗಣಪತಿಯ ಮೂರ್ತಿಯನ್ನು ರಚಿಸುತ್ತಿದ್ದರು. ಅಲ್ಲದೆ ವಿವಿಧ ದೇವರುಗಳ, ಪುರಾಣ ಪುರುಷರ, ಸಮಾಜ ಸೇವಕರ ಮೂರ್ತಿಗಳನ್ನೂ ಮಣ್ಣಿನಿಂದ ರಚಿಸುವ ಕಲೆಯು ಈ ಮನೆಯವರಿಗೆ ಕರಗತವಾಗಿತ್ತು. ಶ್ರೀ ಪ್ರಭಾಕರ ಭಂಡಾರಿಯವರಿಗೆ ಮದ್ದಳೆಗಾರಿಕೆಯಲ್ಲಿ ತಂದೆ ಮತ್ತು ಅಣ್ಣಂದಿರೇ ಗುರುಗಳು. ಅವರು ಮದ್ದಳೆ ನುಡಿಸುವುದನ್ನು ನೋಡಿ ಕೇಳಿಯೇ ಕಲಿತಿದ್ದರು. ತಂದೆ ಮತ್ತು ಅಣ್ಣಂದಿರಿಂದ ತರಬೇತಿಯನ್ನೂ ಪಡೆದಿದ್ದರು.  ಶ್ರೀ ಪ್ರಭಾಕರ ಭಂಡಾರಿ ಅವರು ಓದಿದ್ದು ಐದನೆಯ ತರಗತಿಯ ವರೆಗೆ. ಇವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ಸದ್ರಿ ಮೇಳದಲ್ಲಿ  ಏಳು ವರ್ಷ ತಿರುಗಾಟ.

ಬಳಿಕ ಕೊಳಗಿ ಬೀಸ್ ಟೆಂಟ್ ಮೇಳದಲ್ಲಿ ಎರಡು ವರ್ಷಗಳ ತಿರುಗಾಟ. ಬಳಿಕ ಅಮೃತೇಶ್ವರೀ ಮೇಳದಲ್ಲಿ  ಶ್ರೀ ನಾರಣಪ್ಪ ಉಪ್ಪೂರರ ಜತೆ ವ್ಯವಸಾಯ. ಬಳಿಕ ಸಾಲಿಗ್ರಾಮ ಮೇಳದಲ್ಲಿ ಒಂಭತ್ತು ವರ್ಷ ವ್ಯವಸಾಯ. ಬಳಿಕ ಕೆರೆಮನೆ ಶಂಭು  ಹೆಗಡೆ ಅವರ ಇಡಗುಂಜಿ ಮೇಳದಲ್ಲಿ ವ್ಯವಸಾಯ. ಮರಳಿ ಅಮೃತೇಶ್ವರೀ ಮೇಳದಲ್ಲಿ ವ್ಯವಸಾಯ. ಅಲ್ಲದೆ ಕೆರೆಮನೆ ಶಂಭು ಹೆಗಡೆ ಅವರ ನೇತೃತ್ವದ ಕಾಲಮಿತಿಯ ತಂಡದಲ್ಲಿ ಒಂಭತ್ತು ವರ್ಷ ವ್ಯವಸಾಯ ಮಾಡಿದ್ದರು. (ಮೂರು ಘಂಟೆಗಳ ಕಾಲದ ಪ್ರದರ್ಶನ) ಇಡಗುಂಜಿ ಮೇಳದಲ್ಲಿರುವಾಗ ಕಿನ್ನೀರು ನಾರಾಯಣ ಹೆಗಡೆ ಮತ್ತು ಅಮೃತೇಶ್ವರೀ ಮೇಳದಲ್ಲಿರುವಾಗ ಬೇಳಿಂಜೆ ತಿಮ್ಮಪ್ಪ ನಾಯ್ಕ ಇವರಿಂದ ಕಲಿತು ಅನುಭವಗಳನ್ನು ಗಳಿಸಲು ಅವಕಾಶವಾಗಿತ್ತು.

ಶ್ರೀ ಪ್ರಭಾಕರ ಭಂಡಾರಿ ಅವರು ತಮ್ಮ ವೃತ್ತಿ ಬದುಕಿನುದ್ದಕ್ಕೂ ಶ್ರೀ ನಾರ್ಣಪ್ಪ ಉಪ್ಪೂರ, ಗುಂಡ್ಮಿ ರಾಮಚಂದ್ರ ನಾವಡ, ಕಪ್ಪೆಕೆರೆ ಸುಬ್ರಾಯ ಭಾಗವತ, ಜಿ.ಆರ್ ಕಾಳಿಂಗ ನಾವಡ, ಕಡತೋಕಾ ಕೃಷ್ಣ ಭಾಗವತ, ವಿದ್ವಾನ್ ಗಣಪತಿ ಭಟ್, ನಾರಾಯಣ ಶಬರಾಯ ಮೊದಲಾದ ಭಾಗವತರ ಹಾಡುಗಾರಿಕೆಗೆ ಮದ್ದಳೆ ನುಡಿಸಿದ್ದರು. ಮಳೆಗಾಲದ ಪ್ರದರ್ಶನಗಳಲ್ಲಿ ಕಡತೋಕಾ ಮಂಜುನಾಥ ಭಾಗವತರೊಂದಿಗೂ ವ್ಯವಸಾಯ ಮಾಡಿದ್ದರು. ಕೆರೆಮನೆ ತಂಡದ ಸದಸ್ಯನಾಗಿ ಇಂಗ್ಲೆಂಡ್, ಬಹರೈನ್, ಬಾಂಗ್ಲಾ, ಮಲೇಷಿಯಾ ಮೊದಲಾದ ಕಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಅನಾರೋಗ್ಯದ ನಿಮಿತ್ತ ಮೇಳದ ವ್ಯವಸಾಯಕ್ಕೆ ವಿದಾಯ  ಶ್ರೀ  ಪ್ರಭಾಕರ ಭಂಡಾರಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ತನ್ನ ಪ್ರತಿಭಾ ವ್ಯಾಪಾರದಿಂದ ಮದ್ದಳೆ ನುಡಿಸುತ್ತಾ ಕಲಾವಿದರಲ್ಲಿ ಉತ್ಸಾಹವನ್ನು ತುಂಬಿ. ಪ್ರದರ್ಶನಗಳನ್ನು ರಂಜಿಸುವಂತೆ ಮಾಡಿದ ಹಿರಿಯ ಕಲಾವಿದರಿವರು. ಮದ್ದಳೆವಾದಕನಾಗಿ ಇವರ ಕೆಲವು ನುಡಿತಗಳು ಕರ್ಕಿ ಪೆಟ್ಟುಗಳೆಂದೇ ಪ್ರಸಿದ್ಧವಾಗಿದೆ. ಈ ಪ್ರತಿಭೆಯನ್ನು ಇವರ ಮಕ್ಕಳಾದ  ಶ್ರೀ ಮಂಜುನಾಥ ಭಂಡಾರಿ ಮತ್ತು  ಶ್ರೀ ಪರಮೇಶ್ವರ ಭಂಡಾರಿ ಇವರ ವಾದನ ಕ್ರಮದಲ್ಲೂ ಗಮನಿಸಬಹುದು. 

ಶ್ರೀ ಮಂಜುನಾಥ ಭಂಡಾರಿ ಕರ್ಕಿ :

ಕರ್ಕಿ  ಶ್ರೀ ಮಂಜುನಾಥ ಭಂಡಾರಿ ಅವರು ಬಡಗುತಿಟ್ಟಿನ ಅನುಭವೀ ಮದ್ದಳೆವಾದಕರು. ಇಡಗುಂಜಿ, ಅಮೃತೇಶ್ವರೀ, ಪೆರ್ಡೂರು, ಹಾಲಾಡಿ, ಸಾಲಿಗ್ರಾಮ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿ ಮದ್ದಳೆಗಾರರಾಗಿ ಹೆಸರನ್ನು ಗಳಿಸಿದ್ದಾರೆ. ತಂದೆಯಂತೆ ಶಿಸ್ತಿನ, ಸರಳ, ಸಜ್ಜನ ಕಲಾವಿದರಿವರು. ತಂದೆ ಪ್ರಭಾಕರ ಭಂಡಾರಿ ಅವರಂತೆ ಯಕ್ಷಗಾನ ವಾದ್ಯೋಪಕರಣಗಳಾದ ಚೆಂಡೆ, ಮದ್ದಳೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಹಳೆ ಚೆಂಡೆ ಮದ್ದಳೆಗಳನ್ನು ದುರಸ್ಥಿಗೊಳಿಸಿ ವಾದನಯೋಗ್ಯವನ್ನಾಗಿ ಮಾಡುವ ಕೆಲಸವನ್ನೂ ಇವರು ಬಲ್ಲವರು.

ಶ್ರೀ ಮಂಜುನಾಥ ಭಂಡಾರಿ ಕರ್ಕಿ

ವಿಶೇಷವಾಗಿ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತವಾಗಿದೆ. ಈ ಮನೆಯವರು ನಿರ್ಮಿಸುವ ಗಣಪತಿ ದೇವರ ಮೂರ್ತಿಗಳಿಗೆ ಕರ್ನಾಟಕ ಅಲ್ಲದೆ ದೇಶದಾದ್ಯಂತ ಬಹು ಬೇಡಿಕೆಯಿದೆ. ಇವರು ನಿರ್ಮಿಸುವ ಗಣಪತಿ ದೇವರುಗಳ ಮೂರ್ತಿಗಳು ‘ಕರ್ಕಿ ಗಣಪತಿ’ ಎಂದೇ ಪ್ರಸಿದ್ಧವಾಗಿದೆ. ವಿವಿಧ ದೇವರ ಮೂರ್ತಿಗಳನ್ನೂ, ಪುರಾಣ ಪುರುಷರ, ಸಮಾಜ ಸೇವಕರ ಮೂರ್ತಿಗಳನ್ನೂ ಇವರು ಮಣ್ಣಿನಿಂದ ನಿರ್ಮಿಸಬಲ್ಲರು. ಶ್ರೀದೇವಿ, ಹನುಮಂತ, ಗಣಪತಿ, ವಿವೇಕಾನಂದ, ಅಂಬೇಡ್ಕರ್, ಶಿವಾಜಿ, ಮಹಾತ್ಮಾ ಗಾಂಧಿ ಹೀಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಇವರು ಮೂರ್ತಿಗಳನ್ನು ಮಣ್ಣಿನಿಂದ ನಿರ್ಮಿಸಿಕೊಡಬಲ್ಲರು. ಈ ಕಲೆಯು ಮಂಜುನಾಥ ಭಂಡಾರಿ ಅವರಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಮೂರ್ತಿ ರಚನೆಯ ಕಾಯಕದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಶ್ರೀ ಮಂಜುನಾಥ ಭಂಡಾರಿಗಳು ಗ್ರಾಹಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ. 

ಬಡಗುತಿಟ್ಟಿನ ಅನುಭವಿ ಮದ್ದಳೆಗಾರರಾದ  ಶ್ರೀ ಮಂಜುನಾಥ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಖ್ಯಾತ ಮದ್ದಳೆಗಾರರಾದ  ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳ ಮಗನಾಗಿ 1967 ಜುಲೈ 20ರಂದು ಜನನ. ಇವರು ಓದಿದ್ದು ಆರನೇ ತರಗತಿ ವರೆಗೆ. ಎಳವೆಯಲ್ಲೇ ಯಕ್ಷಗಾನ ಆಸಕ್ತಿ ಇತ್ತು. ಅದು ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ತಂದೆಯ ಜತೆ ತೆರಳಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಹೀಗೆ ವಾದನ ಕ್ರಮವನ್ನು ಅಭ್ಯಾಸ ಮಾಡಿದ್ದರು.  ಶ್ರೀ ಪ್ರಭಾಕರ ಭಂಡಾರಿಗಳು ಮಕ್ಕಳಿಗೆ ತರಬೇತಿಯನ್ನೂ ನೀಡಿದ್ದರು. 

ಶ್ರೀ ಮಂಜುನಾಥ ಭಂಡಾರಿಗಳು ಮೊದಲ ತಿರುಗಾಟ ನಡೆಸಿದ್ದು ಕೆರೆಮನೆ ಶಂಭು ಹೆಗಡೆ ಅವರ ಸಂಚಾಲಕತ್ವದ ಇಡಗುಂಜಿ ಮೇಳದಲ್ಲಿ. ಸದ್ರಿ ಮೇಳದಲ್ಲಿ ಎರಡು ವರ್ಷ ತಿರುಗಾಟ. ಬಳಿಕ ಪಳ್ಳಿ  ಶ್ರೀ ಸೋಮನಾಥ ಹೆಗ್ಡೆ ಮತ್ತು ಬಿ.ವಿ ಶೆಟ್ರ ಅಮೃತೇಶ್ವರೀ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಬಳಿಕ ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ. (ಬಯಲಾಟ ಮೇಳ) ಬಳಿಕ ಒಂದು ವರ್ಷದಲ್ಲಿ ಹಾಲಾಡಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಟೆಂಟ್ ಮೇಳದಲ್ಲಿ. ಇಲ್ಲಿ ಖ್ಯಾತ ಮದ್ದಳೆಗಾರರಾದ ದುರ್ಗಪ್ಪ ಗುಡಿಗಾರರ ಒಡನಾಟವು ಸಿಕ್ಕಿತ್ತು. ಬಳಿಕ ಐದು ವರ್ಷ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ನಾಲ್ಕು ವರ್ಷಗಳ ವ್ಯವಸಾಯ ಮಾಡಿದ ಬಳಿಕ ಮುಖ್ಯ ಮದ್ದಳೆಗಾರನಾಗಿ ಭಡ್ತಿ ಹೊಂದಿದ್ದರು.

ಈ ಸಂದರ್ಭದಲ್ಲಿ ಜಿ.ಆರ್ ಕಾಳಿಂಗ ನಾವಡರ ಹಾಡುಗಾರಿಕೆಗೆ ಮದ್ದಳೆ ನುಡಿಸಲು ಅವಕಾಶವಾಗಿತ್ತು. ಮಳೆಗಾಲದ ಪ್ರದರ್ಶನಗಳಲ್ಲೂ ಅವರ ಹಾಡುಗಾರಿಕೆಗೆ ಮದ್ದಳೆಗಾರನಾಗಿ ವ್ಯವಸಾಯ ಮಾಡಲು ಅನುಕೂಲವಾಗಿತ್ತು. ಕರ್ಕಿ ಮನೆಯ ಮದ್ದಳೆಗಾರರನ್ನು ತಮ್ಮ ಹಾಡುಗಾರಿಕೆಗೆ ಕಾಳಿಂಗ ನಾವಡರು ಬಯಸುತ್ತಿದ್ದರು. ಸಾಲಿಗ್ರಾಮ ಮೇಳದಲ್ಲಿ ಐದು ವರ್ಷ ವ್ಯವಸಾಯ ನಡೆಸಿ  ಶ್ರೀ ಮಂಜುನಾಥ ಭಂಡಾರಿಗಳು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು. ಬಹು ಬೇಡಿಕೆಯ ಕಲಾವಿದನಾಗಿರುವಾಗಲೇ ಇವರು ವ್ಯವಸಾಯದಿಂದ ದೂರ ಉಳಿದುದು ಬಹು ಬೇಸರದ ವಿಚಾರ. ಮೇಳ ಬಿಟ್ಟ ಬಳಿಕವೂ ಅತಿಥಿ ಕಲಾವಿದನಾಗಿ ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ, ಮಣ್ಣಿನ ಮೂರ್ತಿಯ ರಚನೆ, ಚೆಂಡೆ ಮದ್ದಳೆ ತಯಾರಿಕೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಕರ್ಕಿಯ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ. 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ: 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಅವರು ಬಡಗುತಿಟ್ಟಿನ ಅನುಭವಿ ಮದ್ದಳೆಗಾರರು. ಕಳೆದ ಮೂವತ್ತನಾಲ್ಕು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಗುಂಡಬಾಳಾ, ಭುವನಗಿರಿ, ಶಿರಸಿ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಚೆಂಡೆ ಮದ್ದಳೆ ತಯಾರಿಕಾ ಕಲೆಯನ್ನೂ ಬಲ್ಲವರು. ಅಲ್ಲದೆ ಕರಕುಶಲಗಾರಿಕೆಯನ್ನೂ ಬಲ್ಲವರು. ಕರ್ಕಿ ಮನೆತನದ ಸರಳ, ಸಜ್ಜನ ಶಿಸ್ತಿನ ಕಲಾವಿದರಿವರು. ಸಹ ಕಲಾವಿದರಿಗೆ ಮತ್ತು ಮಿತ್ರರಿಗೆ ಇವರು ಪ್ರೀತಿಯ ‘ಪರಮಣ್ಣ’. 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ

ಬಡಗುತಿಟ್ಟಿನ ಅನುಭವಿ ಮದ್ದಳೆಗಾರ  ಶ್ರೀ ಪರಮೇಶ್ವರ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಕರ್ಕಿ ಮನೆಯ ಮತ್ತೊಬ್ಬ ಮದ್ದಳೆಗಾರರಾಗಿ ಇವರು ಗುರುತಿಸಿಕೊಂಡಿದ್ದಾರೆ. 1971ನೇ ಇಸವಿ ಮೇ ತಿಂಗಳ 3ರಂದು  ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ ಜನನ. ಓದಿದ್ದು ಎಸ್ಸೆಸ್ಸೆಲ್ಸಿ ವರೆಗೆ. ಏಳನೇ ತರಗತಿ ವರೆಗೆ ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕರ್ಕಿ ಚೆನ್ನಕೇಶವ ಪ್ರೌಢ ಶಾಲೆಯಲ್ಲಿ.

ಇವರಿಗೆ ಯಕ್ಷಗಾನವು ಹಿರಿಯರಿಂದ ಬಳುವಳಿಯಾಗಿ ಬಂದುದು. ತಂದೆ ಮತ್ತು ಅಣ್ಣ ಮದ್ದಳೆ ಬಾರಿಸುವುದನ್ನು ನೋಡಿ, ಕೇಳಿಯೇ ಕಲಿತವರು. ಅವರು ಮೇಳದ ತಿರುಗಾಟಕ್ಕೆ ತೆರಳಿದಾಗ ಇವರು ಮನೆಯಲ್ಲಿ ಮದ್ದಳೆ ಬಾರಿಸುತ್ತಾ ಅಭ್ಯಾಸ ಮಾಡುತ್ತಿದ್ದರು. ತಂದೆಯವರಿಂದ ಮತ್ತು ಅಣ್ಣನಿಂದ ತರಬೇತಿಯನ್ನು ಪಡೆದಿದ್ದರು. ಶಾಲಾ ರಜಾದಿನಗಳಲ್ಲಿ ಭಾಗವತರಾದ ಗುಣವಂತೆ ಕೃಷ್ಣ ಭಂಡಾರಿಗಳ ಜತೆ ತೆರಳಿ ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಿ ಅನುಭವಗಳನ್ನು ಗಳಿಸಿಕೊಂಡರು. 

ಶ್ರೀ ಪರಮೇಶ್ವರ ಭಂಡಾರಿ ಅವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ದೊಡ್ಡಪ್ಪ ಸತ್ಯನಾರಾಯಣ ಭಂಡಾರಿಗಳ ಜತೆ ಸದ್ರಿ ಮೇಳದಲ್ಲಿ ವ್ಯವಸಾಯ. ಅಲ್ಲಿ ಚಂದ್ರಶೇಖರ ಹೆಗಡೇಕಾರ್ ಅವರ ಒಡನಾಟವು ದೊರೆತಿತ್ತು. ಗುಂಡಬಾಳಾ ಮೇಳದಲ್ಲಿ ಏಳು ವರ್ಷ ವ್ಯವಸಾಯ. ಬಳಿಕ ಶಿರಳಗಿ ಭಾಸ್ಕರ ಜೋಶಿ ಅವರ ಸಿದ್ಧಾಪುರ ಭುವನಗಿರಿ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಕಲಾವಿದನಾಗಿ ಇವರದ್ದು ಕ್ಷಿಪ್ರ ಬೆಳವಣಿಗೆ. ಭುವನಗಿರಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ವ್ಯವಸಾಯ. ಬಳಿಕ ಶಿರಸಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ಒಂದು ವರ್ಷ ವ್ಯವಸಾಯ. ಕಳೆದ 25 ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಮೊದಲ ಎರಡು ವರ್ಷ ಒತ್ತು ಮದ್ದಳೆಗಾರನಾಗಿ ತಿರುಗಾಟ. ಆಗ ಯಲ್ಲಾಪುರ ಶಂಕರ ಭಾಗವತರು ಪ್ರಧಾನ ಮದ್ದಳೆಗಾರರಾಗಿದ್ದರು. ಕಳೆದ 23 ವರ್ಷಗಳಿಂದ ಕರ್ಕಿ ಪರಮೇಶ್ವರ ಭಂಡಾರಿ ಅವರು ಮುಖ್ಯ ಮದ್ದಳೆಗಾರರಾಗಿ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಮೇಳದ ಮತ್ತು ಮಳೆಗಾಲದ ಪ್ರದರ್ಶನಗಳಲ್ಲಿ ನೆಬ್ಬೂರು, ಕಪ್ಪೆಕೆರೆ, ಸುಬ್ರಹ್ಮಣ್ಯ ಧಾರೇಶ್ವರ, ಹೆರಂಜಾಲು ಗೋಪಾಲ ಗಾಣಿಗ, ನಾರಾಯಣ ಶಬರಾಯ, ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಸತ್ಯನಾರಾಯಣ ಪುಣಿಂಚತ್ತಾಯ, ಚಂದ್ರಕಾಂತ ಮೂಡುಬೆಳ್ಳೆ, ಮೊದಲಾದ ಭಾಗವತರ ಹಾಡುಗಾರಿಕೆಗೆ ಶ್ರೀ ಪರಮೇಶ್ವರ ಭಂಡಾರಿ ಅವರು ಮದ್ದಳೆಗಾರರಾಗಿ ವ್ಯವಸಾಯ ಮಾಡಿರುತ್ತಾರೆ.

ಶ್ರೀಯುತರು ಮಳೆಗಾಲದಲ್ಲಿ ದೆಹಲಿ, ಹೈದೆರಾಬಾದ್, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಇವರು ತೆರೆದುಕೊಳ್ಳುವ ಸ್ವಭಾವದವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ಬಹು ಬೇಗನೆ ಪ್ರದರ್ಶನ ನಡೆಯುವ ಸ್ಥಳಕ್ಕೆ ಬಂದು ಸಿದ್ಧರಾಗುವ ಕರ್ಕಿ ಮನೆತನದ ಶಿಸ್ತನ್ನು ಇವರೂ ರೂಢಿಸಿಕೊಂಡು ಮುಂದುವರಿಯುತ್ತಿದ್ದಾರೆ. ಇವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ. ಕರ್ಕಿ ಮನೆಯ ಮದ್ದಳೆಗಾರರಿಗೆ ಶ್ರೀ  ದೇವರ ಅನುಗ್ರಹವು ಸದಾ ಇರಲಿ. ಭಗವಂತನು ಸಕಲ ಸೌಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ – 9164487083

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments