Monday, September 21, 2026
Homeಯಕ್ಷಗಾನಸಾಹಿತ್ಯಿಕ ಕಾವ್ಯದ ರಂಗದೀಪದಲ್ಲಿ ಅರಳಿದ ಗದಾಯುದ್ಧ

ಸಾಹಿತ್ಯಿಕ ಕಾವ್ಯದ ರಂಗದೀಪದಲ್ಲಿ ಅರಳಿದ ಗದಾಯುದ್ಧ

ಕೌರವೇಂದ್ರನ ಅಂತಿಮ ಯುದ್ಧಧರ್ಮಕ್ಕೆ ಮರುಜೀವ ನೀಡಿದ ಯಕ್ಷಸಾಧನೆ!

​ಸಾಮಾನ್ಯವಾಗಿ ಇಂದಿನ ಯಕ್ಷರಂಗದಲ್ಲಿ ‘ಗದಾಯುದ್ಧ’ ಎಂದರೆ ಸಮಯದ ಅಭಾವಕ್ಕೋ, ಅಥವಾ ಆ ಭೀಕರ ಯುದ್ಧಧರ್ಮದ ರಂಗನಡೆಯ ಜ್ಞಾನದ ಕೊರತೆಗೋ ಸಿಲುಕಿ, ಹೆಸರಿಗಷ್ಟೇ ಗದಾಯುದ್ಧವಾಗಿ, ನೈಜ ಯುದ್ಧಕ್ರಮವನ್ನೇ ಕೈಬಿಟ್ಟ ಕಥಾನಕ ಪ್ರದರ್ಶನಗೊಳ್ಳುವುದು ಕಟು ಸತ್ಯ. ಆದರೆ, ಆ ಕೊರತೆಯನ್ನು ನೀಗಿಸಿ, ಪ್ರಸಂಗದ ಶೀರ್ಷಿಕೆಗೆ ಪೂರ್ಣ ಅರ್ಥ ತಂದುಕೊಟ್ಟ ಅಪೂರ್ವ ಸಾಂಸ್ಕೃತಿಕ ಮಹಾವಿಸ್ಮಯವೊಂದು   ದಿನಾಂಕ 19-9-2026 ನೇ ಶನಿವಾರ ಶ್ರೀ ಎಡನೀರು ಮಠದಲ್ಲಿ ಅನಾವರಣಗೊಂಡಿತು!

​ಪೂಜ್ಯ ಶ್ರೀಗಳ ಪಾವನ ಚಾತುರ್ಮಾಸ ವ್ರತದ ಮಂಗಳಕರ ಸನ್ನಿಧಿಯಲ್ಲಿ, ಪಾರ್ತಿಸುಬ್ಬನ ಜನ್ಮ ನಾಡಿನಲ್ಲಿ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸಿ ಬೆಳೆಸುವ ಮಹದುದ್ದೇಶದಿಂದ ನಿರಂತರ ಚಟುವಟಿಕೆಯ  ‘ಸಿರಿಬಾಗಿಲು ಪ್ರತಿಷ್ಠಾನ’ದ ರಂಗಸಂಕಲ್ಪದೊಂದಿಗೆ ರೂಪುಗೊಂಡ ‘ಗದಾಯುದ್ಧ’ ಪ್ರಸಂಗವು ಕೇವಲ ಆಟವಾಗಿ ಉಳಿಯದೆ, ಕಾವ್ಯ ಮತ್ತು ಕಾಲಮಿತಿಯ ಸಾಹಸವನ್ನು ಮೇಳೈಸಿದ ಮಹಾ ರಂಗಯಜ್ಞವಾಯಿತು.

ಪ್ರಸಂಗದ ಹೆಸರಿಗೆ ತಕ್ಕಂತೆ ಗದಾಪ್ರಹಾರದ ಪ್ರತಿಯೊಂದು ಸೂಕ್ಷ್ಮ ನಡೆಗಳನ್ನು, ಶಾಸ್ತ್ರೀಯ ಯುದ್ಧನಿಯಮಗಳನ್ನು ಕಾಲಮಿತಿಯ ಗೆರೆಯೊಳಗೇ ಬಂಧಿಸಿ, ಅದ್ಭುತ ಅಭಿನಯದ ಮೂಲಕ ರಂಗಸ್ಥಳದಲ್ಲಿ ವೈಭವೀಕರಿಸಿದ ಹಿರಿಯ ಕಲಾವಿದರಾದ ಶ್ರೀ ಶಂಭಯ್ಯ ಕಂಜರ್ಪಣೆ, ಹಾಗೂ ಶ್ರೀ ಶ್ರುತಕೀರ್ತಿ ರಾಜ್ ಉಜಿರೆ ಅವರ ರಂಗಪ್ರದರ್ಶನ ಸಾಟಿಯಿಲ್ಲದ್ದು! ಭೀಮ-ದುರ್ಯೋಧನರ ರೌದ್ರಾವತಾರವನ್ನು, ಕೌರವನ ಕಡೆಯ ಉಸಿರಿನ ಸ್ವಾಭಿಮಾನ ಹಾಗೂ ವೃಕೋದರನ ಗದೆಯ ಭೀಕರತೆಯನ್ನು ತಮ್ಮ ಪ್ರತಿಯೊಂದು ಹಾವಭಾವ, ಹೆಜ್ಜೆಗಾರಿಕೆ ಮತ್ತು ಶರೀರಭಾಷೆಯಲ್ಲಿ ಜೀವಂತಗೊಳಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

ಈ ಅಸಾಧ್ಯವಾದ ಕಾವ್ಯಬಂಧವನ್ನು ಅದ್ಭುತವಾಗಿ ನಿರ್ದೇಶಿಸಿ, ರಂಗಶಿಸ್ತಿನ ಗಡಿಯೊಳಗೆ ರಸದೌತಣವನ್ನು ಉಣಬಡಿಸಿದ ನಿರ್ದೇಶಕ, ಪ್ರತಿಷ್ಠಾನದ ಅದ್ಯಕ್ಷ, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ಶ್ರೀ ರಾಮಕೃಷ್ಣ ಮಯ್ಯರ ದೂರದೃಷ್ಟಿ ಮತ್ತು ರಂಗಜ್ಞಾನ ಅಭಿನಂದನಾರ್ಹ. ಅವರ ಗಾಯನದ ಏರಿಳಿತಗಳು ಹಾಗೂ ಹಿಮ್ಮೇಳದ ಸಮರ್ಥ ಕಲಾವಿದರ ನಾದವೈಭವವು ರಂಗಸ್ಥಳಕ್ಕೆ ಜೀವಕಳೆ ತುಂಬಿತು. 

​ಕಾಲಮಿತಿಯ ಸವಾಲನ್ನೂ ಮೆಟ್ಟಿ ನಿಂತು, ಯಕ್ಷಗಾನದ ಪಾರಂಪರಿಕ ರಂಗನಡೆಯನ್ನು ಪುನರುಜ್ಜೀವನಗೊಳಿಸುವ ಸಿರಿಬಾಗಿಲು ಪ್ರತಿಷ್ಠಾನದ ಪ್ರದರ್ಶನ ಕಲಾಭಿಮಾನಿಗಳ ಮೆಚ್ಚುಗೆ ಗೆ ಪಾತ್ರವಾಯಿತು.

ಛಾಯಾಗ್ರಹಣ: ಶ್ಯಾಮ್ ಕುಂಚಿನಡ್ಕ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments