ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರು ತೆಂಕುತಿಟ್ಟಿನ ಉದಯೋನ್ಮುಖ ಯುವ ಕಲಾವಿದರು. ಶ್ರೀ ಧರ್ಮಸ್ಥಳದ ಯುವ ಪ್ರತಿಭೆಗಳಲ್ಲಿ ಇವರೂ ಒಬ್ಬರು. 2006ರಿಂದ ತೊಡಗಿ ಕಳೆದ ಹದಿಮೂರು ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಏಳನೇ ಕ್ಲಾಸಿನ ವಿದ್ಯಾರ್ಥಿಯಾಗಿರುವಾಗಲೇ ಇವರು ವೇಷ ಮಾಡಲು ಆರಂಭಿಸಿದ್ದರು. ಇವರು ಸದಾ ಅಧ್ಯಯನಶೀಲರು. ಸಾಕಷ್ಟು ಪೂರ್ವಸಿದ್ಧತೆ ಮಾಡಿಯೇ ರಂಗವೇರುತ್ತಾರೆ. ಮಾತುಗಾರಿಕೆಯ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ. ಕುಣಿತದ ಜತೆಗೆ ಶುದ್ಧವಾದ ಭಾಷೆಯಿಂದ ಹಿತಮಿತವಾದ ಮಾತುಗಳಿಂದ ಪಾತ್ರವನ್ನು ಕಟ್ಟಿಕೊಡುವ ಕಲೆಯು ಇವರಿಗೆ ಕರಗತವಾಗಿದೆ.
ಬಣ್ಣದ ವೇಷಧಾರಿಯಾದರೂ ಮಾತುಗಾರಿಕೆಯ ಬಗೆಗೆ ವಿಶೇಷವಾಗಿ ಗಮನಹರಿಸಿ ಅಧ್ಯಯನಶೀಲರಾಗಿ ತೊಡಗಿಸಿಕೊಂಡ ಕಾರಣ ಕಿರೀಟ ವೇಷಗಳನ್ನೂ ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ತಮ್ಮ ಪ್ರತಿಭೆಯಿಂದ ವೇಷಗಳು ತಾನಾಗಿಯೇ ಇವರಿಗೆ ಒಲಿದುಬಂದಿತ್ತು. ಅನಿವಾರ್ಯಕ್ಕೆಂದು ಮಾಡಿದ ವೇಷಗಳೆಲ್ಲಾ ಮತ್ತೆ ಇವರೇ ನಿರ್ವಹಿಸುವಂತಾಗಿತ್ತು. ಆಳಂಗವೂ ಆಕರ್ಷಕ ಕಂಠಸಿರಿಯೂ ಇವರಿಗೆ ದೇವರ ಅನುಗ್ರಹದಿಂದ ದೊರಕಿದ್ದು. ಬಣ್ಣದ ವೇಷಕ್ಕೂ ಕಿರೀಟ ವೇಷಕ್ಕೂ ಹೇಳಿ ಮಾಡಿಸಿದ ಆಳಂಗ ಇವರದ್ದು. ಪ್ರೇಕ್ಷಕರನ್ನು ಆಕರ್ಷಿಸಿ ಹಿಡಿದಿಡಬಲ್ಲ ಧ್ವನಿಯನ್ನೂ ಹೊಂದಿರುತ್ತಾರೆ. ಬಣ್ಣದ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಂಡು ರಂಗದಲ್ಲಿ ಅಬ್ಬರಿಸುವ ಇವರು ನಿಜ ಜೀವನದಲ್ಲಿ ಸಾತ್ವಿಕ ಸ್ವಭಾವವುಳ್ಳವರು. ನಗುಮೊಗದ, ವಿನಯವಂತ ಕಲಾವಿದರಿವರು.
ಶ್ರೀ ಧರ್ಮಸ್ಥಳ ಮೇಳದ ಯುವ ಪ್ರತಿಭೆ ಶ್ರೀ ಹರೀಶ್ ಶೆಟ್ಟಿ ಅವರ ಹುಟ್ಟೂರು ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಮಣ್ಣಾಪು ಎಂಬಲ್ಲಿ. 1980ನೇ ಇಸವಿ ಜನವರಿ 23ರಂದು ಶ್ರೀ ನಾರಾಯಣ ಶೆಟ್ಟಿ ಮಣ್ಣಾಪು ಮತ್ತು ಶ್ರೀಮತಿ ಪದ್ಮಿನಿ ದಂಪತಿಗಳ ಪುತ್ರನಾಗಿ ಜನನ. ಹರೀಶ್ ಶೆಟ್ಟಿ ಅವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಒಲಿದಿತ್ತು. ತಂದೆ ನಾರಾಯಣ ಶೆಟ್ರು ಒಳ್ಳೆಯ ಕಿರೀಟ ವೇಷಧಾರಿಯಾಗಿದ್ದರು. ನಾಟಕೀಯ ವೇಷಗಳನ್ನೂ ಮಾಡುತ್ತಿದ್ದರು.
ಹೆಸರಾಂತ ಕಲಾವಿದ ನಾರಂಪಾಡಿ ಸುಬ್ಬಯ್ಯ ಶೆಟ್ರು ತಂದೆಯ ಸೋದರ ಮಾವ. (ಇವರು ತಾಯಿಯ ತಂದೆಯೂ ಹೌದು) ನಾರಂಪಾಡಿ ಸುಬ್ಬಯ್ಯ ಶೆಟ್ರ ಮಗ ಶೇಷಪ್ಪ ಶೆಟ್ರು ಹಿಮ್ಮೇಳ ಮುಮ್ಮೇಳಗಳನ್ನು ಅರಿತ ಕಲಾವಿದರಾಗಿದ್ದರು. ಇವರಿಂದಲೇ ಹರೀಶ್ ಶೆಟ್ರು ನಾಟ್ಯ ಕಲಿತು ವೇಷ ಮಾಡಲು ಆರಂಭಿಸಿದ್ದು. ಹರೀಶ್ ಅವರು ಓದಿದ್ದು ಎಸ್.ಎಸ್.ಎಲ್.ಸಿ ವರೆಗೆ. ಬೆಳ್ಳೂರು ಸರಕಾರೀ ಪ್ರೌಢಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆತಾಯಿಯರ ಜತೆ ತೆರಳಿ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಅದು ಈಡೇರುವುದಕ್ಕೆ ಅವಕಾಶವೂ ಒದಗಿತ್ತು.
ಶಾಲಾ ರಜಾದಿನಗಳಲ್ಲಿ ಬಂಧುಗಳಾದ ಶ್ರೀ ಶೇಷಪ್ಪ ಶೆಟ್ಟರಿಂದ ನಾಟ್ಯ ಕಲಿತರು.6ನೇ ಕ್ಲಾಸಿನಲ್ಲಿರುವಾಗ ನಾಟ್ಯ ಕಲಿಕೆಗೆ ಆರಂಭ. ಮೊಟ್ಟಮೊದಲು ವೇಷ ಮಾಡಿದ್ದು 7ನೇ ಕ್ಲಾಸಿನಲ್ಲಿ ಓದುತ್ತಿರುವಾಗ. ಮನೆ ಸಮೀಪ ನಡೆದ ಪ್ರದರ್ಶನ, ವೀರಮಣಿ ಕಾಳಗ ಪ್ರಸಂಗದಲ್ಲಿ ಶಿವಗಣಗಳಲ್ಲಿ ಒಬ್ಬನಾಗಿ ರಂಗ ಪ್ರವೇಶ ಮಾಡಿದ್ದರು. ಬಳಿಕ ಎಸ್.ಎಸ್.ಎಲ್.ಸಿ ವರೆಗೂ ಊರ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ವೇಷ ಮಾಡುವ ಅವಕಾಶಗಳು ಸಿಕ್ಕಿತ್ತು.
9ನೇ ಕ್ಲಾಸಿನಲ್ಲಿ ಓದುತ್ತಿರುವಾಗ ಕೂವೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ಮಕ್ಕಳ ತಂಡಕ್ಕೆ ಸೇರ್ಪಡೆಯಾದರು. ಶ್ರೀ ಕೆ.ಸಿ ಪಾಟಾಳಿ ಅವರು ಈ ತಂಡದ ಸಂಚಾಲಕರು. ಅಲ್ಲಿ ಕಲಿಕಾಸಕ್ತರಿಗೆ ಪಡುಮಲೆ ನಾರಾಯಣ ಪಾಟಾಳಿ ಅವರು ತರಬೇತಿ ನೀಡುತ್ತಿದ್ದರು. ಅವರಿಂದಲೂ ಹರೀಶ್ ಮಣ್ಣಾಪು ಅವರು ತರಬೇತಿಯನ್ನು ಪಡೆದರು. ಎಸ್.ಎಸ್.ಎಲ್.ಸಿ ಪರೀಕ್ಷೆ ಕಳೆದು ಶ್ರೀ ಹರೀಶ್ ಮಣ್ಣಾಪು ಅವರನ್ನು ನಾರಾಯಣ ಪಾಟಾಳಿ ಅವರು ಕಟೀಲು ಮೇಳಕ್ಕೆ ಕರೆದೊಯ್ದರು. ಕಟೀಲು 1ನೇ ಮೇಳದಲ್ಲಿ ವೇಷಧಾರಿಯಾಗಿ ಎರಡು ತಿಂಗಳು ತಿರುಗಾಟ ನಡೆಸಿದ್ದರು.
ಮುಂದಿನ ವರ್ಷ ಮೇಳಕ್ಕೆ ಹೋಗದೆ ಮನೆಯಲ್ಲೇ ಉಳಿದಿದ್ದರು. ಕೃಷಿಯ ಜೊತೆಗೆ ಊರ ಪರವೂರ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಬಣ್ಣದ ವೇಷಗಳತ್ತ ಆಕರ್ಷಿತರಾಗಿ ಆ ವಿಭಾಗದ ಪಾತ್ರಗಳನ್ನೇ ಮಾಡುತ್ತಿದ್ದರು. ತನ್ನ ಆಳಂಗ ಮತ್ತು ಸ್ವರಭಾರಗಳಿಂದ ಬಹುಬೇಗನೆ ಪ್ರೇಕ್ಷಕರನ್ನು ಆಕರ್ಷಿಸಿ ಹಿಡಿದಿಡುತ್ತಿದ್ದರು. ಆದುದರಿಂದ ಬಣ್ಣದ ವೇಷಧಾರಿಯಾಗಿಯೇ ಪಾತ್ರಗಳನ್ನು ಮಾಡುತ್ತಾ ಮುಂದೆ ಸಾಗಿದರು. 2003ರಿಂದ ಕೂಡ್ಲು ಮತ್ತು ಕೊಲ್ಲಂಗಾನ ಮೇಳಗಳಲ್ಲಿ ಖಾಯಂ ಕಲಾವಿದನಾಗಿ ಬಣ್ಣದ ವೇಷಗಳನ್ನು ನಿರ್ವಹಿಸತೊಡಗಿದರು.
ಮನೆಯಲ್ಲಿ ಹಿರಿಯರು ಸಂಗ್ರಹಿಸಿ ಇರಿಸಿದ್ದ ಪುರಾಣ ಪುಸ್ತಕಗಳು ಮತ್ತು ಪ್ರಸಂಗ ಪುಸ್ತಕಗಳು ಶ್ರೀ ಹರೀಶ್ ಶೆಟ್ಟಿ ಅವರಿಗೆ ಒಂದು ಆಸ್ತಿಯೇ ಆಗಿ ಅನುಕೂಲವಾಗಿತ್ತು. ಪುಸ್ತಕ ನೋಡಿ ಸಾಕಷ್ಟು ಸಿದ್ಧನಾಗಿಯೇ ಪ್ರದರ್ಶನಕ್ಕೆ ತೆರಳುತ್ತಿದ್ದರು. ವಿಚಾರಗಳ ಸಂಗ್ರಹಣೆ ಮತ್ತು ಮಾತುಗಾರಿಕೆಯನ್ನು ಕಲಿಯಲು ಆ ಪುಸ್ತಕಗಳು ಸಹಕಾರಿಯಾಗಿತ್ತು. ವೇಷಗಾರಿಕೆ ಮತ್ತು ಮಾತುಗಾರಿಕೆ ಬಗ್ಗೆ ತಂದೆಯ ನಿರ್ದೇಶನವೂ ಇತ್ತು. ನಾಟಕೀಯ ವೇಷಗಳನ್ನು ಮಾಡುವ ರೀತಿಯನ್ನು ಹೇಳಿಕೊಟ್ಟಿದ್ದರು. ಬಣ್ಣದ ವೇಷದ ಬಗ್ಗೆ ಶ್ರೀ ನಾರಾಯಣ ಪಾಟಾಳಿ ಅವರ ನಿರ್ದೇಶನವೂ ಇತ್ತು.
ಶ್ರೀ ಹರೀಶ್ ಶೆಟ್ಟಿ ಅವರು ಧರ್ಮಸ್ಥಳ ಮೇಳಕ್ಕೆ ಸೇರಿದ್ದು 2009ರಲ್ಲಿ. ಅಲ್ಲಿ ಮೊದಲ ತಿರುಗಾಟದಲ್ಲೇ ದಶಾವತಾರ ಪ್ರಸಂಗದಲ್ಲಿ ಮತ್ಸ್ಯ ಪಾತ್ರವನ್ನು ಮಾಡಿ ಶಿಶುಪಾಲನಾಗಿಯೂ ಅಭಿನಯಿಸುವ ಅವಕಾಶವಾಗಿತ್ತು. ಚತುರ್ಜನ್ಮ ಮೋಕ್ಷ ಪ್ರಸಂಗದಲ್ಲಿ ಕಾಲನೇಮಿ ಮಾಡಿ ಕೌಂಡ್ಲಿಕನ ಪಾತ್ರವನ್ನೂ ಮಾಡಿದ್ದರು. ಮೇಳದಲ್ಲಿ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಅಡೂರು ಗಣೇಶ್ ರಾವ್ ಅವರ ಸಹಕಾರವು ದೊರಕಿತ್ತು. ಮುಮ್ಮೇಳದ ಸಹಕಲಾವಿದರೆಲ್ಲರೂ ಸಹಕರಿಸಿದ್ದರು. ವೇಷಗಾರಿಕೆಯ ಬಗೆಗೆ ಹಿರಿಯ ಕಲಾವಿದರ ಸಲಹೆ ಸೂಚನೆಗಳೂ ಸಿಕ್ಕಿತ್ತು.
ಬಣ್ಣದ ವೇಷಧಾರಿಗಳಾದ ಎಡನೀರು ಹರಿನಾರಾಯಣ ಭಟ್ ಮತ್ತು ಸತೀಶ್ ನೈನಾಡು ಇವರಿಬ್ಬರೂ ಸಲುಗೆಯಿಂದ ಮಾತಾಡಬಲ್ಲಷ್ಟು ಹರೀಶ್ ಅವರಿಗೆ ಆತ್ಮೀಯರಾಗಿದ್ದರು. ಬಣ್ಣದ ವೇಷಗಳ ಬಗ್ಗೆ ಅವರಿಂದಲೂ ಸಲಹೆ ಪಡೆಯುತ್ತಿದ್ದರು. ಮಾತುಗಾರಿಕೆಯ ಬಗ್ಗೆ ಗಮನ ಹರಿಸಿ ಅಧ್ಯಯನ ಮಾಡಿದ ಕಾರಣದಿಂದ ಬಣ್ಣದ ವೇಷಗಳ ಜತೆಗೆ ಕಿರೀಟ ವೇಷಗಳನ್ನೂ ಮಾಡುವಂತಾಗಿತ್ತು. ಯಾವ ವೇಷವನ್ನು ನೀಡಿದರೂ ಶ್ರೀ ಹರೀಶ್ ಅವರು ಪಾತ್ರೋಚಿತವಾಗಿ ನಿರ್ವಹಿಸಬಲ್ಲರು.
ಇತ್ತೀಚಿನ ದಿನಗಳಲ್ಲಿ ಮೇಳದಲ್ಲಿ ಬಣ್ಣದ ವೇಷಕ್ಕಿಂತಲೂ ಹೆಚ್ಚು ಕಿರೀಟ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರು ಮಳೆಗಾಲದಲ್ಲೂ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿರುತ್ತಾರೆ. 2012ರಿಂದ ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಈ ತಂಡವನ್ನು ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಮುನ್ನಡೆಸುತ್ತಿದ್ದಾರೆ.
ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರು ಈಗ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಇವರಿಗೆ ಸಿಗಲೆಂದು ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ.
ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರ ಪತ್ನಿ ಶ್ರೀಮತಿ ಕವಿತಾ (೨೦೨೦ರಲ್ಲಿ ವಿವಾಹ) ಹರೀಶ್, ಕವಿತಾ ದಂಪತಿಗಳಿಗೆ ಓರ್ವ ಪುತ್ರ. ಹೆಸರು ಕ್ರಿಯಾನ್ಸ್. ಬಾಲಕನಿಗೆ ಉಜ್ವಲವಾದ ಭವಿಷ್ಯವು ದೊರೆಯಲಿ. ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರಿಗೆ ಸಕಲ ಭಾಗ್ಯಗಳನ್ನೂ ಕಲಾ ಮಾತೆಯು ಅನುಗ್ರಹಿಸಲಿ. ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಹರೀಶ್ ಶೆಟ್ಟಿಯವರು ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಯಾಗಿದ್ದಾಗ ನನಗೆ ಪರಿಚಯವಾದದ್ದು. ಅವರು sslc ಬಳಿಕ ಐಟಿಐ ಕೂಡಾ ಮಾಡಿರುತ್ತಾರೆ.