14.01.2023ರ ಸಂಜೆ ಪುತ್ತೂರಿನ ಸುದಾನ ವಸತಿ ಶಾಲೆಯ ಆವರಣ ಒಂದು ಅತ್ಯಪೂರ್ವ ಸಂಗೀತ ರಸದೌತಣವನ್ನು ಸವಿಯುವ ವೇದಿಕೆಯಾಗಿ ಪರಿವರ್ತಿತವಾಯಿತು. ಕೆಲವೊಮ್ಮೆ ಹಾಗೆಯೇ. ಶಾಸ್ತ್ರೀಯ ಸಂಗೀತಪ್ರೇಮಿಗಳಿಗೆ ತಾವು ಬಯಸಿದ ಸಂಗೀತ ಕಾರ್ಯಕ್ರಮವನ್ನು ಕೇಳಲು ದೂರದ ಊರುಗಳಿಗೆ ಹೋಗಬೇಕು. ಹೋದರೂ ಸಂಗೀತವನ್ನು ಸವಿಯಲು, ಆಸ್ವಾದಿಸಲು ಬೇಕಾದ ವಾತಾವರಣ ಅಲ್ಲಿರುತ್ತದೆಯೇ ಎಂಬ ಖಚಿತ ವಿಶ್ವಾಸವಂತೂ ಇರುವುದಿಲ್ಲ. ಆದರೆ ಪುತ್ತೂರಿನ ಜನತೆಗೆ ಒಂದು ಉತ್ತಮ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಚೇರಿಯನ್ನು ಸವಿಯುವ ಸೌಭಾಗ್ಯ ದೊರಕಿತು. ಇದರ ಶ್ರೇಯ ಸಂಗೀತ ಗುರು ಶ್ರೀ ಕಾಂಚನ ಎ. ಈಶ್ವರ ಭಟ್ ಮತ್ತು ಅವರ ಸುನಾದ ಸಂಗೀತ ಕಲಾಶಾಲೆಗೆ ಸಲ್ಲಬೇಕು.
ಸುನಾದ ಸಂಗೀತ ಕಲಾಶಾಲೆ ಪುತ್ತೂರು, ಇದರ ವಾರ್ಷಿಕೋತ್ಸವವು ಇದೇ ಜನವರಿ ತಿಂಗಳ 13ರ ಶನಿವಾರ ಮತ್ತು 14ರ ಆದಿತ್ಯವಾರದಂದು ಪುತ್ತೂರಿನ ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ 14. 01.2024 ಆದಿತ್ಯವಾರ ವಿದ್ವಾನ್ ಪಾಲ್ಘಾಟ್ ರಾಮಪ್ರಸಾದ್, ಚೆನ್ನೈ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ಕಚೇರಿ ನಡೆಯಿತು.
ವಿದ್ವಾನ್ ಪಾಲ್ಘಾಟ್ ರಾಮಪ್ರಸಾದ್, ಚೆನ್ನೈ ಅವರಿಗೆ ವಿದ್ವಾನ್ ತ್ರಿವೇಂಡ್ರಮ್ ಡಾ. ಸಂಪತ್ ವಯೋಲಿನ್ ನಲ್ಲಿ, ಮೃದಂಗದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್, ಮೋರ್ಸಿಂಗ್ ನಲ್ಲಿ ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು ಅವರು ಸಾಥ್ ನೀಡಿದರು. ಇಡೀ ಕಾರ್ಯಕ್ರಮವು ಕರ್ನಾಟಕ ಶಾಸ್ತ್ರೀಯ ಸಂಗೀತದ ಈ ನಾಲ್ಕಂಗಗಳ ಆರೋಗ್ಯಕರ ಸ್ಪರ್ಧೆಯ ಮೇಲಾಟವೆಂಬಂತೆ ಭಾಸವಾಯಿತು.
ಮೊದಲಿಗೆ ಪಾಲ್ಘಾಟ್ ರಾಮಪ್ರಸಾದ್ ಅವರು ‘ರಾಮ ನನ್ನು ಬ್ರೋವರ” ಎಂಬ ತ್ಯಾಗರಾಜರ ಕೃತಿಯನ್ನು ಹರಿಕಾಂಭೋಜಿ ರಾಗದಲ್ಲಿ ಸುಂದರವಾಗಿ ಅನಾವರಣಗೊಳಿಸಿದರು. ಮುಂದಿನ ಮುತ್ತುಸ್ವಾಮಿ ದೀಕ್ಷಿತರ ‘ಮಾಮವ ಮೀನಾಕ್ಷಿ” ಎಂಬ ಹಾಡನ್ನು ಅಷ್ಟೇ ಸುಲಲಿತವಾಗಿ ಹಾಡಿದರು. ಈ ಹಾಡಿಗೆ ಕಾಂಚನ ಈಶ್ವರ ಭಟ್ ಅವರ ಮೃದಂಗ ಮತ್ತು ಡಾ. ಸಂಪತ್ ಅವರ ವಯೊಲಿನ್ ನುಡಿಸಾಣಿಕೆಯು ಕೂಡ ಅಷ್ಟೇ ಪರಿಣಾಮಕಾರಿಯಾಗಿತ್ತು.
ಮುಂದಿನ ಹಾಡು, ಸ್ವಾತಿ ತಿರುನಾಳ್ ಅವರ ಕೃತಿಯಾದ ಭೋಗೀಂದ್ರ ಸಾಯಿನಮ್’. ಕುಂತಲಾವರಾಳಿ ರಾಗದಲ್ಲಿ ಈ ಹಾಡು ಸುಶ್ರಾವ್ಯವಾಗಿ ಮೂಡಿಬಂತು. ಈ ಹಾಡಿಗೆ ಗಾಯನ ಮತ್ತು ಮೃದಂಗದ ನಡುವೆ ಒಂದು ಅತ್ಯುತ್ತಮ ಸಮನ್ವಯತೆಯ ಮತ್ತು ಸ್ಪರ್ಧೆಯ ನುಡಿಸಾಣಿಕೆ ಕಂಡುಬಂತು. ಈ ಹಂತದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಮೃದಂಗದ ಜೊತೆ ಸರ್ಕಸ್ ಮಾಡುತ್ತಿರುವಂತೆ ಅದ್ಭುತ ಲಯವಿನ್ಯಾಸವನ್ನು ಪ್ರಸ್ತುತಪಡಿಸಿದರು. ವಯೊಲಿನ್ ಮತ್ತು ಮೋರ್ಸಿಂಗ್ ಅಷ್ಟೇ ಪರಿಣಾಮಕಾರಿಯಾಗಿತ್ತು. ಮುಂದಿನ ‘ಕಂಡು ಮನ ಹಿಗ್ಗಿತು ರಂಗಯ್ಯನ’ ಮತ್ತು ‘ಕಲಿಯುಗದೊಳು ಹರಿ ನಾಮವ’ ಎಂಬ ಕೃತಿಗಳು ಅತ್ಯುತ್ತಮವಾಗಿ ಮೂಡಿಬಂದುವು. ಕೊನೆಗೆ ‘ಭಾವಯಾಮಿ ಗೋಪಾಲಪಾಲಂ’ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮೂಡಿಬಂತು.
ಕಾರ್ಯಕ್ರಮದುದ್ದಕ್ಕೂ ಶಿಸ್ತುಬದ್ಧ ಪ್ರೇಕ್ಷಕರ ಗಡಣ ಗಮನ ಸೆಳೆಯಿತು. ಉತ್ತಮ ಪ್ರಸ್ತುತಿಗೆ ಚಪ್ಪಾಳೆಯ ಪ್ರೋತ್ಸಾಹ ಮತ್ತು ಕರತಾಡನದ ಉತ್ಸಾಹ ಸಭಾಸದರಲ್ಲಿ ಕಾಣಿಸಿತು. ಒಳ್ಳೆಯ ಹಾಡಿಗೆ ಪ್ರೇಕ್ಷಕರು ಸೂಚನೆ ನೀಡದೆ ಸ್ಪಂದಿಸುತ್ತಾರೆ. ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಕರು “ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ” ಎಂದು ಪ್ರೇಕ್ಷಕರನ್ನು ಅಂಗಲಾಚಿ ಅಸಹ್ಯ ಹುಟ್ಟಿಸುತ್ತಾರೆ. ಆದರೆ ಇಂತಹಾ ಕ್ರಿಯೆಗಳು ಶಾಸ್ತ್ರೀಯ ಸಂಗೀತದ ಕಚೇರಿಗಳಲ್ಲಿ ಕಾಣಸಿಗುವುದಿಲ್ಲ. ಇಲ್ಲಿ ಪ್ರಬುದ್ಧ ಪ್ರೇಕ್ಷಕರು ಉತ್ತಮ ಕಲಾಪ್ರಸ್ತುತಿಗೆ ತಾವಾಗಿಯೇ ಸ್ಪಂದಿಸುತ್ತಾರೆ. ಇದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ.
ಒಟ್ಟು ಕಾರ್ಯಕ್ರಮ ಮುಗಿಸಿ ತೆರಳುವಾಗ ಒಂದೊಳ್ಳೆಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಸ್ವಾದಿಸಿದ ತೃಪ್ತಿ ಮನಸ್ಸಿನಲ್ಲಿ ಹಾಗೆಯೇ ಉಳಿಯಿತು.





