Saturday, May 18, 2024
Homeಯಕ್ಷಗಾನತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ. ಬಾಬು ರೈ ಆಯ್ಕೆ.

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ. ಬಾಬು ರೈ ಆಯ್ಕೆ.

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ. ಬಾಬು ರೈ ಆಯ್ಕೆ.


ಅಪ್ಪಟ ಕಲೋಪಾಸಕರಾಗಿರುವ ಮೃದಂಗ ವಿದ್ವಾನ್ ಕೋಟೆಕ್ಕಾರು ಬಾಬು ರೈ ಅವರಿಗೆ ಜನ್ಮಶತಮಾನೋತ್ಸವ. ಹರೆಯದಂತೆಯೇ ಇವರ ವಿದ್ವತ್ತಿನ ಘನತೆಗೂ ಶತ-ಮಾನ !

1943ರಲ್ಲಿ ಯಕ್ಷಗಾನ ಮದ್ದಲೆವಾದಕನಾಗಿ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿ ಮಧೂರು ಮೇಳದಲ್ಲಿ ತಿರುಗಾಟ ನಡೆಸಿದ ಇವರಿಗೆ ಸಹೋದರ ಕೋಟೆಕ್ಕಾರ್ ದೇರಣ್ಣ ರೈಗಳೇ ಮೊದಲ ಗುರು. ಜೀವನೋಪಾಯಕ್ಕಾಗಿ ಊರು ತೊರೆದು ಬೆಂಗಳೂರು, ಮೈಸೂರು ಸೇರಿ ಮೈಸೂರು ಮಹಾರಾಜರ ಆಸ್ಥಾನ ವಿದ್ವಾನ್ ಟಿ. ಎಂ. ವೆಂಕಟೇಶ ದೇವರ್ ಅವರೊಂದಿಗೆ ಶಿಷ್ಯತ್ವವನ್ನು ಅಂಗೀಕರಿಸಿಕೊಂಡರು.

ಏಳು ವರ್ಷ ಮೃದಂಗ ಕಲಿತು ಸಂಗೀತ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದರು. ಚಲನಚಿತ್ರದಲ್ಲಿಯೂ ನಟಿಸಿದರು. ಆಕಾಶವಾಣಿಯ ಕಲಾವಿದರಾದರು.

ಊರಿಗೆ ಮರಳಿದ ಮೇಲೆ ‘ಕಲಾಸದನ’ ಎಂಬ ಸಂಸ್ಥೆ ಆರಂಭಿಸಿ ಕಲಾಕಾರ್ಯಕ್ರಮಗಳಿಗೆ ಆಸರೆಯಾದರು. ಟಿ. ಆರ್. ಮಹಾಲಿಂಗಂ, ದೊರೆಸ್ವಾಮಿ ಅಯ್ಯಂಗಾರ್, ಬಾಲಮುರಲೀಕೃಷ್ಣ ರಂಥ ದಿಗ್ಗಜರಿಗೆ ಸಾಥಿ ನೀಡಿದರು.

ಯಕ್ಷಗಾನ ಮದ್ದಲೆವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಗೆ ಮೃದಂಗ ಹೇಳಿಕೊಟ್ಟರು. ಪುತ್ತಿಗೆ ರಾಮಕೃಷ್ಣ ಜೋಯಿಸ, ಮಾಂಬಾಡಿ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ದಾಮೋದರ ಮಂಡೆಚ್ಚರಂಥ ಭಾಗವತರಿಗೆ ಮದ್ದಲೆ ಸಾಥಿ ನೀಡಿದರು. ಕುರಿಯ ವಿಠಲ ಶಾಸ್ತ್ರಿ ಮಲ್ಪೆ ಶಂಕರನಾರಾಯಣ ಸಾಮಗ, ಕರ್ಗಲ್ಲು ಸುಬ್ಬಣ್ಣ ಭಟ್ಟರಂಥ ಕಲಾವಿದರನ್ನು ರಂಗದ ಮೇಲೆ ಕುಣಿಸಿದರು. ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಿಯ ಮಿತ್ರರಾಗಿ ಅವರ ಹರಿಕಥೆಗೆ ತಬಲಾಸಾಥಿ ನೀಡಿದರು.

ಕುದ್ರೆಕೂಡ್ಲು ರಾಮ ಭಟ್, ನಿಡ್ಲೆ ನರಸಿಂಹ ಭಟ್ಟರಂಥ ಕಲಾವಿದರ ಒಡನಾಡಿಯಾದರು. ಮೃದಂಗ-ಮದ್ದಲೆಗಳ ಸಮ್ಯಕ್ ಬಂಧದ ಕುರಿತು ಸದಾ ಚಿಂತನಶೀಲರಾಗಿರುವ ಬಾಬು ರೈಗಳು ‘ಪ್ರತಿಧ್ವನಿ’ ಎಂಬ ಮೃದಂಗ ಪಾಠದ ಕೃತಿಯನ್ನೂ ಬರೆದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ 75 ವರ್ಷಗಳ ಸಾಂದ್ರ ಅನುಭವ. ತಾಳಬಂಧಗಳ ಕುರಿತು ಮಾತನಾಡಲಾಂಭಿಸಿದರೆ ಬತ್ತದ ವಿದ್ವತ್ ಗಂಗೋತ್ರಿ. ವಿದ್ವತ್ತಿನಷ್ಟೇ ವಿನಮ್ರತೆಯನ್ನೂ ಭೂಷಣವಾಗಿಸಿಕೊಂಡ ಬಾಬು ರೈಗಳಿಗೆ

ಕಾಸರಗೋಡಿನ ಶ್ರೀ ಎಡನೀರು ಮಠದ ಸಭಾಂಗಣದಲ್ಲಿ ಆಗಸ್ಟ್ 15, ಮಂಗಳವಾರ 2023ರಂದು ಸಂಜೆ 5.00 ಗಂಟೆಗೆ ವಿದ್ವಾನ್ ಕೆ. ಬಾಬು ರೈ ಕಾಸರಗೋಡು ಜನ್ಮಶತಮಾನೋತ್ಸವ ಸಮಿತಿಯು ಆಚರಿಸುತ್ತಿರುವ ಜನ್ಮಶತಮಾನೋತ್ಸವ ಸಂಭ್ರಮ-ಅಭಿನಂದನೆ ಕಾರ್ಯಕ್ರಮದಲ್ಲಿ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ

ಉಡುಪಿಯ ಯಕ್ಷಗಾನ ಕಲಾರಂಗವು ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಸ್ಥಾಪಿಸಿದ 40,000/- ಮೊತ್ತಗಳನ್ನೊಳಗೊಂಡ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ, ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸುವುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments