Sunday, January 19, 2025
Homeಯಕ್ಷಗಾನ"ರಾವಣ ವಧೆ" - ಯಕ್ಷಗಾನ

“ರಾವಣ ವಧೆ” – ಯಕ್ಷಗಾನ

ಹನುಮಜ್ಜಯಂತಿ ಯ ಪ್ರಯುಕ್ತ ಇತ್ತೀಚಿಗೆ 11.12.2022 ರಂದು ಜಯನಗರದ ಅಶೋಕ ಪಿಲ್ಲರ್ ನ “ಶ್ರೀ ರಾಮ ಸೇವಾ ಟ್ರಸ್ಟ್” ನಲ್ಲಿ ಬೆಂಗಳೂರಿನ “ಯಕ್ಷ ಕಲಾ ಅಕಾಡೆಮಿ (ರಿ)”ಯವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾವಣ ವಧೆ” ಎಂಬ ಯಕ್ಷಗಾನ ಪ್ರಸಂಗ ನೆರವೇರಿತು

ಕಾಸರಗೋಡು ಸುಬ್ರಾಯ ಪಂಡಿತರಿಂದ ವಿರಚಿಸಲ್ಪಟ್ಟ ರಾವಣ ವಧೆಯ, “ಮುಂದೆ ರವಿ ತಾ ಪಶ್ಚಿಮಾಂಬುಧಿ” ಎಂಬ ಪದ್ಯಕ್ಕೆ ರಾವಣನ ಒಡ್ಡೋಲಗದಿಂದ ಕಥಾನಕ ಆರಂಭಗೊಂಡಿತು.

ರಣಕಣದ ವಾರ್ತಾ ವಾಹಕ (ಕೃಷ್ಣ ಶಾಸ್ತ್ರಿ) ರಣದ ವರ್ತಮಾನವನ್ನು ಹೇಳಿದಾಗ ಮಂಡೋದರಿಯ ಗೃಹವನ್ನು ಪ್ರವೇಶಿಸಿ “ಹರನೇ ಶಂಕರ ಪಾರ್ವತಿ ವರನೇ” ಪದ್ಯಕ್ಕೆ ವ್ಯಥಿಸುತ್ತಿರುವ ಸಂದರ್ಭದಲ್ಲಿ ಮಂಡೋದರಿಯ ಪ್ರವೇಶ. ಮಂಡೋದರಿಯ ಪಾತ್ರದಲ್ಲಿ ಪ್ರವೀಣ ಚಂದ್ರ ಕುತ್ಪಾಡಿ ಯವರು ಇನ್ನು ಬಿಡು ಬಿಡು ಛಲವ, ಸಾಕೋರ್ವ ಮಗ ವಿರೂಪಾಕ್ಷ ವಿಶೇಷವಾಗಿ “ಅಳಲಿದಳು ಬೇಡಕಟ” ಪದ್ಯಕ್ಕೆ ತಮ್ಮ ಸುದೀರ್ಘವಾದ ನಾಲ್ಕು ದಶಕಗಳ ಅಭಿನಯದ ಅನುಭವವನ್ನು ಧಾರೆ ಎರೆದು, ಪ್ರೇಕ್ಷಕರ ಕಣ್ಣಂಚು ತೀವಗೊಂಡದ್ದು ಸುಳ್ಳಲ್ಲ.

ಮಾತಲಿಯಾಗಿ ಯುವ ಪ್ರತಿಭೆ ನಾಗೇಶ್ ಗೀಜಗಾರ್ ತಮ್ಮ ವೈವಿಧ್ಯಮಯ ನಾಟ್ಯಗಳಿಂದ ಜನಮನ ಗೆದ್ದರು. ವಿಭೀಷಣನಾಗಿ ಶಶಿಕಾಂತ್ ಆಚಾರ್ಯ ತಮ್ಮ ಆಳ್ತನ, ವೇಷಗಾರಿಕೆಯಿಂದ ರಂಜಿಸಿದರು. ರಾಮನ ಪಾತ್ರದಲ್ಲಿ ತಮ್ಮ ಎಂದಿನ ಮಟಪಾಡಿ ಶೈಲಿಯ ಚುರುಕಿನ ಹೆಜ್ಜೆಯ, ಶೃತಿ ಬದ್ಧ ಮಾತಿನಲ್ಲಿ ಗುರು ಕೃಷ್ಣಮೂರ್ತಿ ತುಂಗರು ಪ್ರೇಕ್ಷಕರನ್ನು ರಂಜಿಸಿದರು.

ತಮ್ಮವರನ್ನು ಕಳೆದುಕೊಂಡ ನೋವು, ಹಿಂದಿನ ಜನ್ಮದ ನೆನಪು, ರಾಮನ ಮೇಲಿನ ದ್ವೇಷಗಳನ್ನು ತೋರ್ಪಡಿಸುವಲ್ಲಿ ಮಾಹಿತಿ ತಂತ್ರಜ್ಞ ರವಿ ಮಡೋಡಿಯವರು ತಮ್ಮ ರಸಾಭಿನಯ, ಸಾಹಿತ್ಯ ಪಾರಮ್ಯದಲ್ಲಿ ಯಶ ಪಡೆದರು. ಮೇಲಾಗಿ ಕಂಡನು ದಶವದನ ಪದ್ಯಕ್ಕೆ ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. ಶ್ರೀಮತಿ ಲತಾ ಹೊಳ್ಳ, ರಿತೇಶ್ ರಾವಣನ ಎಡಬಲದಲ್ಲಿದ್ದರೆ, ಶ್ರೀ ರಮೇಶ್ ಮಟಪಾಡಿ, ಶ್ರೀ ನಿಧಿ ಎಂ ಎಸ್, ಸದಾಶಿವ, ಮಂಜುನಾಥ್ ಭಟ್ ವೇಷಭೂಷಣದಲ್ಲಿ ಸಹಕರಿಸಿದರು.

ಹಿಮ್ಮೇಳದಲ್ಲಿ ಯುವ ಪ್ರತಿಭೆ ಕುಮಾರಿ ಚಿತ್ಕಲಾ ಕೆ ತುಂಗ, ಮದ್ದಲೆಯಲ್ಲಿ ಹಿರಿಯರಾದ ಶ್ರೀ ಎ ಪಿ ಫಾಟಕ್, ಚಂಡೆಯಲ್ಲಿ ಮತ್ತೋರ್ವ ಯುವ ಪ್ರತಿಭೆ ಮನೋಜ್ ಆಚಾರ್ಯ ತಮ್ಮ ಕಲಾ ಪ್ರೌಢಿಮೆಯನ್ನು ತೋರಿದರು.

ಈ ಪ್ರದರ್ಶನಕ್ಕೆ ಹಿರಿಯ ಅನುಭವೀ ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನ ಗೋಪುರಕ್ಕೆ ಕಳಶವಿಟ್ಟಂತಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments