Saturday, January 18, 2025
Homeಯಕ್ಷಗಾನಬಹುಮುಖ ಪ್ರತಿಭೆಯ ಯಕ್ಷತಾರೆ - ಉಂಡೆಮನೆ ಶ್ರೀಕೃಷ್ಣ ಭಟ್ 

ಬಹುಮುಖ ಪ್ರತಿಭೆಯ ಯಕ್ಷತಾರೆ – ಉಂಡೆಮನೆ ಶ್ರೀಕೃಷ್ಣ ಭಟ್ 

ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರು ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾವಿದರು. ಇವರು ಯಕ್ಷಗಾನದ ಎಲ್ಲಾ ಅಂಗಗಳನ್ನೂ ಬಲ್ಲವರು. ಭಾಗವತರಾಗಿ, ವೇಷಧಾರಿಯಾಗಿ ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು. ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಅನುಭವಿ ಇವರು. ಯಕ್ಷಗಾನ ಗುರುವಾಗಿ ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟಿದ್ದಾರೆ. ಇವರಿಂದ ಕಲಿತ ಅನೇಕರು ಇಂದು ಮೇಳಗಳಲ್ಲಿ ವ್ಯವಸಾಯ ಮಾಡುತ್ತಿರುವುದನ್ನು ನಾವು ಕಾಣಬಹುದು.

ಕರ್ನಾಟಕ ಸಂಗೀತದ ಜ್ಞಾನವನ್ನು ಹೊಂದಿದ ಇವರು ಭಾಗವತರಾಗಿಯೂ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಸ್ವರಭಾರವನ್ನು ಹೊಂದಿದ ಇವರು ಇಳಿ ಶೃತಿಯಲ್ಲೂ, ಏರು ಶೃತಿಯಲ್ಲೂ ಸಮಾನವಾಗಿ ಹಾಡಬಲ್ಲರು. ಮೀನಾಕ್ಷಿ ಕಲ್ಯಾಣ ಎಂಬ ಪ್ರಸಂಗದಲ್ಲಿ ಇವರು ಹಾಡಿದ “ಗೆಲುವನೆಂಬುತ್ಸಾಹದಿ ಬರಲು ದೂರದಿ …” ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರಚಾರವನ್ನು ಪಡೆದಿತ್ತು. ಅವರು ಹಾಡಿದ ಈ ಹಾಡನ್ನು ಕೆಲವರು ತಮ್ಮ ಮೊಬೈಲ್ ನ ರಿಂಗ್ ಟೋನ್ ಆಗಿಯೂ ಬಳಸಿಕೊಂಡಿದ್ದರು. ದಂಡಯಾತ್ರೆಯನ್ನು ಕೈಗೊಂಡ ಮೀನಾಕ್ಷಿಯು ಕೈಲಾಸಪರ್ವತವನ್ನು ಕಂಡು ಹೊಗಳುತ್ತಿರುವ ಹಾಡು ಇದು.  ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಲುವತ್ತು ವರ್ಷಗಳ ಅನುಭವಿ. 

ಉಂಡೆಮನೆ ಎಂಬುದು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಒಂದು ಹಳ್ಳಿ. ಕುಂಬಳೆ ಸೀಮೆಯೊಳಗಣ ಒಂದು ಊರಿದು. ಉಂಡೆಮನೆ ಶ್ರೀ ಶಂಕರ ಭಟ್ಟ ಮತ್ತು ಶ್ರೀಮತಿ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ ಶ್ರೀಕೃಷ್ಣ ಭಟ್ಟರ ಜನನ.  ಉಂಡೆಮನೆ ಶಂಕರ ಭಟ್ಟರ ಐದು ಮಂದಿ ಮಕ್ಕಳಲ್ಲಿ ಇವರು ಕಿರಿಯವರು. (ಮೂರು ಗಂಡು ಮತ್ತು ಇಬ್ಬರು ಹೆಣ್ಣು)  ಉಂಡೆಮನೆ ಶಂಕರ ಭಟ್ಟರು ಶಾಲಾ ಅಧ್ಯಾಪಕರು. ನಾಟಕದಲ್ಲಿ ವೇಷಗಳನ್ನೂ ಮಾಡುತ್ತಿದ್ದರು. ಇವರು ಪುರಾಣ ವಿಚಾರಗಳ ಜ್ಞಾನವನ್ನೂ ಹೊಂದಿದ್ದರು. 

ಉಂಡೆಮನೆ ಶ್ರೀಕೃಷ್ಣ ಭಟ್ಟರ ಅಜ್ಜನ ಮನೆ ಕುಂಟಿಕಾನ ಮಠ. ಈ ಮನೆಯವರೆಲ್ಲಾ ಯಕ್ಷಗಾನಾಸಕ್ತರು. ಶ್ರೀಕೃಷ್ಣ ಭಟ್ ಅವರು ಓದಿದ್ದು ಹತ್ತನೆಯ ತರಗತಿಯ ವರೆಗೆ. ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ಪೆರಡಾಲ, ನೀರ್ಚಾಲು ಎಂಬ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾಸಕ್ತಿ ಇತ್ತು. ಆಟ ಮತ್ತು ತಾಳಮದ್ದಳೆ ಎಂಬ ಎರಡು ವಿಭಾಗಗಳಲ್ಲೂ ಆಸಕ್ತಿಯನ್ನು ಹೊಂದಿದ್ದರು. ಊರ ಪರವೂರ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಮನೆಯವರ ಮತ್ತು ಅಜ್ಜನ ಮನೆಯವರ ಪ್ರೋತ್ಸಾಹವೂ ಇತ್ತು. ವಿಶೇಷವಾಗಿ ಸೋದರ ಮಾವಂದಿರ ಪ್ರೋತ್ಸಾಹವೂ ಸಿಕ್ಕಿತ್ತು.

ಐದನೇ ಕ್ಲಾಸಿನಲ್ಲಿ ಓದುತ್ತಿರುವಾಗ ಕುಂಟಿಕಾನ ಮಠದಲ್ಲಿ ನಡೆದ ತಾಳಮದ್ದಳೆಯಲ್ಲಿ ಅರ್ಥ ಹೇಳಲು ಅವಕಾಶವಾಗಿತ್ತು. ಆರನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಪ್ರದರ್ಶನದಲ್ಲಿ ದೇವೇಂದ್ರನ ಬಲ ವೇಷ ಧರಿಸಿ ರಂಗವೇರಲು ಅವಕಾಶವಾಗಿತ್ತು. ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಕುಂಬಳೆ ಸೇಸಪ್ಪ ಅವರ ಉಪ್ಪಳ ಮೇಳದಲ್ಲಿ ವೇಷ ಮಾಡುತ್ತಿದ್ದರು. ಊರಲ್ಲಿ ನಡೆಯುತ್ತಿದ್ದ ತಾಳಮದ್ದಳೆ ಕೂಟಗಳಲ್ಲೂ ಅರ್ಥ ಹೇಳುವ ಅವಕಾಶಗಳು ಸಿಕ್ಕಿತ್ತು. 

ಉಂಡೆಮನೆ ಶ್ರೀಕೃಷ್ಣ ಭಟ್ಟರು ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಯಕ್ಷಗಾನ ಹಿಮ್ಮೇಳ ವಿದ್ಯೆಯನ್ನು ಕಲಿತಿದ್ದರು. ನೆಲ್ಲಿಕುಂಜೆ ನಡುಮನೆ ಶ್ರೀ ಜತ್ತಪ್ಪ ರೈಗಳಿಂದ ಭಾಗವತಿಕೆಯನ್ನೂ, ಏರಿಕ್ಕಳ ಶ್ರೀನಿವಾಸ ರಾಯರಿಂದ ಚೆಂಡೆ ಮದ್ದಳೆ ಬಾರಿಸುವ ಕ್ರಮವನ್ನೂ ಅಭ್ಯಸಿಸಿದ್ದರು. ಕುಬಣೂರು ಶ್ರೀಧರ ರಾಯರ ಹಾಡುಗಾರಿಕೆಗೆ ಮೊತ್ತಮೊದಲು ಚೆಂಡೆ ಬಾರಿಸುವ ಭಾಗ್ಯವು ಇವರದಾಗಿತ್ತು. ಈ ಸಮಯದಲ್ಲಿ ಹಿಮ್ಮೇಳಕ್ಕಿಂತಲೂ ಮುಮ್ಮೇಳದಲ್ಲಿ ಆಸಕ್ತಿಯು ಹೆಚ್ಚಿತ್ತು. ವೇಷ ಮಾಡಲು, ತಾಳಮದ್ದಳೆಯಲ್ಲಿ ಅರ್ಥ ಹೇಳಲು ಬಯಸುತ್ತಿದ್ದರು. ಆದುದರಿಂದ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ನಿರ್ಧರಿಸಿದ್ದರು. 

ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ. ಶ್ರೀ ಕೆ.ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ತರಬೇತಿ. ಆಗ ನೆಡ್ಲೆ ನರಸಿಂಹ ಭಟ್ಟರು ತರಬೇತಿ ಕೇಂದ್ರದ ಹಿಮ್ಮೇಳ ಗುರುವಾಗಿದ್ದರು. ತರಬೇತಿ ಕೇಂದ್ರದಲ್ಲಿ ಬಾಯಾರು ರಮೇಶ ಭಟ್, ಉಮಾಮಹೇಶ್ವರ ಶರ್ಮ, ಚಾರ್ಮಾಡಿ ಬಾಬು ಗೌಡ, ನಾರಾಯಣ ಸುವರ್ಣ, ದಾಮೋದರ ಪಾಟಾಳಿ, ಲಕ್ಷ್ಮಣ ಕಲ್ಲಗುಡ್ಡೆ ಅವರು  ಉಂಡೆಮನೆ ಶ್ರೀಕೃಷ್ಣ ಭಟ್ಟರ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ನಡೆದ ಮೂರು ಪ್ರದರ್ಶನಗಳಲ್ಲಿ ಅರ್ಜುನ, ಇಂದ್ರಜಿತು, ಕಾರ್ತವೀರ್ಯ ಪಾತ್ರಗಳನ್ನು ಮಾಡುವ ಅವಕಾಶವು ಸಿಕ್ಕಿತ್ತು.

ವ್ಯವಸಾಯ ಆರಂಭಿಸಿದ್ದು ಕಟೀಲು ಮೇಳದಲ್ಲಿ. ಸದ್ರಿ ಮೇಳದಲ್ಲಿ ಆರು ವರ್ಷ ತಿರುಗಾಟ. ಮೊದಲ ಮೂರು ವರ್ಷ ವೇಷಧಾರಿಯಾಗಿ ತಿರುಗಾಟ. ಮುಂದಿನ ಮೂರು ವರ್ಷಗಳ ಕಾಲ ಸಂಗೀತಗಾರನಾಗಿ ವ್ಯವಸಾಯ. ಈ ಸಂದರ್ಭದಲ್ಲಿ ಬಲಿಪ ನಾರಾಯಣ ಭಾಗವತರು ಪಸಂಗದಲ್ಲಿ ಹಾಡಲೂ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಕಟೀಲು ಎರಡನೇ ಮೇಳದಲ್ಲಿ ಆರು ವರ್ಷಗಳ ವ್ಯವಸಾಯದ ಬಳಿಕ ಮೇಳದ ತಿರುಗಾಟಕ್ಕೆ ವಿದಾಯ.

ಬಳಿಕ ಹವ್ಯಾಸಿ ಕಲಾವಿದನಾಗಿ ಆಟ ಕೂಟಗಳಲ್ಲಿ ಭಾಗವತನಾಗಿ, ವೇಷಧಾರಿಯಾಗಿ ಭಾಗವಹಿಸುತ್ತಾ ಬಂದಿರುತ್ತಾರೆ. ಉಪ್ಪಳ, ಬಪ್ಪನಾಡು, ಮಲ್ಲ, ಕೊಲ್ಲಂಗಾನ, ಕೂಡ್ಲು, ಸಸಿಹಿತ್ಲು ಮೊದಲಾದ ಮೇಳಗಳ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಉಂಡೆಮನೆ ಶ್ರೀಕೃಷ್ಣ ಭಟ್ಟರು ದೇಂತಡ್ಕ ಮೇಳದ ಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ.

ಯಕ್ಷಗಾನ ಗುರುವಾಗಿ ಇವರು ನೀರ್ಚಾಲು, ಬೇಳ, ಕುಂಟಿಕಾನ ಶಾಲೆ, ಬದಿಯಡ್ಕ, ಕಲ್ಲಕಟ್ಟ, ಕಿದೂರು, ಮುಂಡ್ಯತ್ತಡ್ಕ, ಎಡನೀರಿನ ಸಮೀಪದ ಪಾಂಡಿ, ಕೀರಿಕ್ಕಾಡು, ಆರ್ಯಾಪು ಖಂಡಿಗೆ, ಕಬಕ, ಕೇಪು, ಅಡ್ಯನಡ್ಕ ಮೊದಲಾದ ಕಡೆಗಳಲ್ಲಿ ತರಬೇತಿಯನ್ನೂ ನೀಡಿರುತ್ತಾರೆ. ವೇದ ಮಂತ್ರಗಳನ್ನು ಕಲಿತು ಕಳೆದ ಇಪ್ಪತ್ತೈದು ವರ್ಷಗಳಿಂದ ಪೌರೋಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಇವರು ಪತ್ನಿ ಮತ್ತು ಪುತ್ರಿಯ ಜತೆ ನೇರಳಕಟ್ಟೆ ಎಂಬಲ್ಲಿ ವಾಸವಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಸುಮಾ. ಇವರು ಗೃಹಣಿ. ಪುತ್ರಿ ಕುಮಾರಿ ಸ್ವರ್ಣಲಕ್ಷ್ಮಿ. ಇವರಿ ಸ್ನಾತಕೋತ್ತರ ಪದವೀಧರೆ.  ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಉಂಡೆಮನೆ ಶ್ರೀಕೃಷ್ಣ ಭಟ್, ಮೊಬೈಲ್: 9448108767

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments