Saturday, January 18, 2025
Homeಯಕ್ಷಗಾನವಿಶ್ವವಿನೋದ ಬನಾರಿಯವರಿಗೆ 75ರ ಅಭಿನಂದನಾ ಸಮಾರಂಭ ‘ವಿಶ್ಯವಿನೋದ 75 ಯಕ್ಷಕಲಾರವ’

ವಿಶ್ವವಿನೋದ ಬನಾರಿಯವರಿಗೆ 75ರ ಅಭಿನಂದನಾ ಸಮಾರಂಭ ‘ವಿಶ್ಯವಿನೋದ 75 ಯಕ್ಷಕಲಾರವ’

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ದಿನಾಂಕ 13-11-2022ರಂದು ಶ್ರೀ ವಿಶ್ವವಿನೋದ ಬನಾರಿಯವರಿಗೆ 75ರ ಅಭಿನಂದನಾ ಸಮಾರಂಭ ‘ವಿಶ್ಯವಿನೋದ 75 ಯಕ್ಷಕಲಾರವ’ ನಡೆಯಿತು.

ಯಕ್ಷಗಾನ ಗುರುಕುಲದ ರೂವಾರಿಯೆಂದೇ ಖ್ಯಾತರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸುಪುತ್ರ ಶ್ರೀ ವಿಶ್ವವಿನೋದ ಬನಾರಿಯವರು ಈಗ ತನ್ನ ಬಾಳಿನ ಎಪ್ಪತ್ತೈದರ ಹೊಸ್ತಿಲಲ್ಲಿದ್ದಾರೆ. ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಯಕ್ಷಗಾನದ ವಿವಿಧ ಮಜಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಯಕ್ಷಗಾನದ ಓರ್ವ ಸರ್ವಾಂಗ ಸಾಧಕನಾಗಿ ಅಪಾರ ಜನರ ಗೌರವಕ್ಕೆ ಪಾತ್ರರಾದವರು. ಯಕ್ಷಗಾನ ಪ್ರಸಂಗಕರ್ತರಾಗಿ ಭಾಗವತರಾಗಿ ಮತ್ತು ಭಾಗವತ ಗುರುಗಳಾಗಿ ಪ್ರಸಿದ್ಧರಾದ ಶ್ರೀಯುತರನ್ನು ಅವರ ಶಿಷ್ಯವೃಂದದವರು, ಅಭಿಮಾನಿಗಳು ಮತ್ತು ಬಂಧುವರ್ಗದವರು ಸೇರಿ ಔಚಿತ್ಯಪೂರ್ಣವಾಗಿ ಅಭಿನಂದಿಸಲಾಯಿತು.

ಮೊದಲಿಗೆ ಅಭಿನಂದನಾರ್ಹ ವಿ.ವಿ.ಬನಾರಿಯವರನ್ನು ‘ಹರಿಹರ ಸುತ ಸಿಂಗಾರಿ ಮೇಳ ದೇಲಂಪಾಡಿ’ ಇದರ ಚೆಂಡೆ ನಾದದೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಬಳಿಕ ಬಿಡುಗಡೆಯಾಗಲಿರುವ ‘ವಿಶ್ವಯಾನ’ ಅಭಿನಂದನಾ ಗ್ರಂಥವನ್ನು ವಿಶಿಷ್ಟ ರೀತಿಯಲ್ಲಿ ವೇದಿಕೆಗೆ ತರಲಾಯಿತು.

ಕರ್ನಾಟಕ ಸರಕಾರದ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಅಂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಯಕ್ಷಗಾನ ಒಂದು ಮಹತ್ತರವಾದ ಕಲೆ. ಈ ಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ದೇಲಂಪಾಡಿ ಅಭಿವೃದ್ಧಿ ಹೊಂದಬೇಕಾದ ಅಗತ್ಯ ಇದೆ. ಇಲ್ಲಿನ ರಸ್ತೆಗೆ ಮರುಡಾಮರೀಕರಣಕ್ಕೆ, ಕಾಂಕ್ರಿಟೀಕರಣಕ್ಕೆ ಸರಕಾರದಿಂದ ಅನುದಾನ ಕೊಡಿಸುತ್ತೇವೆ’ ಎಂಬುದಾಗಿ ಭರವಸೆಯನ್ನು ಇತ್ತರು.  

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಡಾ. ಜಿ. ಎಲ್ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಸಿ.ಹೆಚ್.ಕುಞಂಬು ಶಾಸಕರು, ಉದುಮ ಇವರು ಭಾಗವಹಿಸಿದರು. ‘ಯಕ್ಷಗಾನ ಕಲೆ ಬಹಳ ರಮ್ಯಾದ್ಭುತ ಕಲೆ. ನೃತ್ಯ, ಮಾತು, ವೇಷಭೂಷಣ, ಅಭಿನಯ ಎಲ್ಲವೂ ಒಳಗೊಂಡ ಈ ಕಲೆ ಸಮಗ್ರವಾಗಿದೆ. ಕೇರಳದಲ್ಲಿ ಈ ಕಲೆಗೆ ಪೂರ್ಣ ಮಾನ್ಯತೆ ಸಿಗುವಂತೆ ತಾನು ಪ್ರಯತ್ನಿಸುತ್ತೇನೆ. ವಿ.ವಿ.ಬನಾರಿಯವರು ಬಹುಮುಖಿ ಸಾಧಕರು. ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಶ್ರೀಯುತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಶ್ವವಿನೋದ ಬನಾರಿಯವರ ಆತ್ಮವೃತ್ತಾಂತವೂ ಸೇರಿದಂತೆ ಅಭಿನಂದನಾ ಗ್ರಂಥ ‘ವಿಶ್ವಯಾನ’ವನ್ನು ಲೋಕಾರ್ಪಣೆಗೊಳಿಸಲಾಯಿತು. ನಾರಾಯಣ ನಾಯ್ಕ್ ಊಜಂಪಾಡಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಚಂದ್ರಶೇಖರ ಏತಡ್ಕ ಅವರು ಸಂಪಾದಕರ ನುಡಿಯನ್ನಾಡಿದರು. ‘ಬನಾರಿಯವರ ಜೀವನದ ಸಮಗ್ರ ಚಿತ್ರಣವನ್ನು ನೀಡುವಲ್ಲಿ ಈ ಕೃತಿಯು ಸಾಫಲ್ಯವನ್ನು ಕಂಡಿದೆ. ಅವರ ನಿಕಟವರ್ತಿಗಳು, ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಕೃತಿಯಲ್ಲಿ ಕೆಲವು ವಿಚಾರಗಳು ಪುನರಾವರ್ತನೆಯಾದರೂ ಅದು ಅಭಾಸ ಎಂದೆನಿಸುವುದಿಲ್ಲ’ವೆಂದು ಅವರು ಹೇಳಿದರು.

ಜಾನಪದ ಸಂಶೋಧಕರಾದ ಡಾ.ಸುಂದರ ಕೇನಾಜೆಯವರು ಗ್ರಂಥಾವಲೋಕನ ಮಾಡುತ್ತಾ “ವಿ.ವಿ.ಬನಾರಿಯವರು ತಮ್ಮ ಜೀವಿತಾವಧಿಯಲ್ಲಿ  ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಕುರಿತು ಈ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಇದು ಈ ಊರಿನ ಸಮಗ್ರ ಚಿತ್ರಣವಾಗಿದೆ. ಅವರ ಸ್ಮರಣಶಕ್ತಿ ಅಗಾಧವಾದುದು. ಕೃತಿಯು ಸಾಹಿತ್ಯ ಕ್ಷೇತ್ರಕ್ಕೊಂದು ಕೊಡುಗೆ” ಎಂದರು.

ತದನಂತರ ವಿಶ್ವವಿನೋದ ಬನಾರಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಉಮಾಪರಮೇಶ್ವರಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ “ರಮಾನಂದ ಬನಾರಿ ವಿರಚಿತ ಶುಭಾಶಯ ಗೀತೆ’ಯನ್ನು ಅನ್ನಪೂರ್ಣ ಏತಡ್ಕ ಹಾಗೂ ಬಳಗದವರು ಬಹಳ ಸುಶ್ರಾವ್ಯವಾಗಿ ಹಾಡಿದರು. ಹಿರಿಯ ಕಲಾವಿದರಾದ ಜಬ್ಬಾರ್ ಸಮೊ ಸಂಪಾಜೆ ಅವರು ಅಭಿನಂದನಾ ಭಾಷಣ ಗೈದರು. ಬನಾರಿಯವರ ಸಹೃದಯತೆ, ಕಲಾ ಸಹಜ ಒಲವುಗಳು ಅನುಕರಣೀಯ. ಅವರ ಒಂದು ಕುಟುಂಬವೇ ಕಲಾಮಾಧ್ಯಮಕ್ಕೆ ತೆರೆದುಕೊಂಡ ರೀತಿ ಅನ್ಯಾದೃಶವಾದುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಪ್ರಭಾಕರ ಶಿಶಿಲ, ಅಡ್ವಕೇಟ್ ಎ.ಪಿ.ಉಷಾ, ಗಣರಾಜ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.

ನಾರಾಯಣ ತೋರಣಗಂಡಿ ಅವರು ಶಿಷ್ಯನುಡಿ ವಂದನೆ ಸಲ್ಲಿಸಿ ಗುರುಗಳ ವಿಶಿಷ್ಟ ರೀತಿಯ ಯಕ್ಷಪಾಠ ಅನನ್ಯ ಮತ್ತು ಅಸಂಖ್ಯ ಶಿಷ್ಯಂದಿರಿಗೆ ದಾರಿದೀವಿಗೆ ಎಂದರು.

ಶ್ರೀಮತಿ ಅಪರ್ಣಾ ರಾವ್ ಕುತ್ಯಾಡಿಯವರಿಂದ ಪ್ರಾಥನೆ ಮೊದಲ್ಗೊಂಡು ಆರಂಭವಾದ ಈ ಕಾರ್ಯಕ್ರಮದಲ್ಲಿ ನಾರಾಯಣ ದೇಲಂಪಾಡಿ ಅವರು ಎಲ್ಲರನ್ನೂ ಸ್ವಾಗತಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಚಂದ್ರಶೇಖರ ಏತಡ್ಕ ಧನ್ಯವಾದ ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments