Saturday, May 18, 2024
Homeಯಕ್ಷಗಾನನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ - ಶ್ರೀ ಚಿದಂಬರ ಬಾಬು ಕೋಣಂದೂರು

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ – ಶ್ರೀ ಚಿದಂಬರ ಬಾಬು ಕೋಣಂದೂರು

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ತೆಂಕುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಅನುಭವಿ. ಕಳೆದ 42 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಮೂವತ್ತೈದು ವರ್ಷಗಳ ಕಾಲ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ನಡೆಸಿದವರು. ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಬಾಲ್ಯದಲ್ಲಿ ಇವರು ನಾಟಕ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಾ ತಬಲಾ ವಾದನವನ್ನು ಕಲಿತು ತೊಡಗಿಸಿಕೊಂಡಿದ್ದರು. ಪುರಾಣ ಪ್ರಸಂಗಗಳ ಜತೆಗೆ ತುಳು ಪ್ರಸಂಗಗಳಲ್ಲೂ ವೇಷಗಳನ್ನು ನಿರ್ವಹಿಸಿದ ಅನುಭವಿ ಇವರು. ಕಿರೀಟ ಮತ್ತು ನಾಟಕೀಯ ವೇಷಗಳಲ್ಲಿ ಪ್ರಸ್ತುತ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ‘ಅಣ್ಣಪ್ಪ’ ಪಾತ್ರವನ್ನು ಕಳೆದ ಆರು ವರ್ಷಗಳಿಂದ ಇವರೇ ನಿರ್ವಹಿಸುತ್ತಿದ್ದಾರೆ. 

ಶ್ರೀ ಧರ್ಮಸ್ಥಳ ಮೇಳದ ಕಲಾವಿದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅತಲಾಪುರ ಗ್ರಾಮದ ಕೋಣಂದೂರು ಸಮೀಪದ ಹಿತ್ತಲಸರ. 1961ನೇ ಇಸವಿ ಏಪ್ರಿಲ್ 23ರಂದು ಶ್ರೀ ನಾಗೇಶ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಕೃಷಿ ಕುಟುಂಬ. ಮನೆಯವರೆಲ್ಲ ಕೃಷಿಯಲ್ಲಿ ಆಸಕ್ತರು.  ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಓದಿದ್ದು ನಾಲ್ಕನೇ ತರಗತಿಯವರೆಗೆ. ಅತಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.

ಬಾಲ್ಯದಲ್ಲಿ ಇವರಿಗೆ ಯಕ್ಷಗಾನ ಪ್ರದರ್ಶನಗಳನ್ನು ನೋಡುವ ಅವಕಾಶಗಳು ಸಿಕ್ಕಿರಲಿಲ್ಲ. ಆದರೂ ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು.  ಅಧ್ಯಾಪಕರೂ ಹೆಸರಾಂತ ಕಲಾವಿದರೂ ಆಗಿದ್ದ ಶ್ರೀ ಹಾಲೇಶಪ್ಪ ಇವರಿಂದ ನಾಟಕ ಕಲೆಯ ತರಬೇತಿಯನ್ನು ಹೊಂದಿ ವೇಷ ಮಾಡಲು ಆರಂಭಿಸಿದ್ದರು. ಪ್ರಪ್ರಥಮ ಬಾರಿಗೆ “ತ್ಯಾಗಿ” ಎಂಬ ನಾಟಕದಲ್ಲಿ ಕಥಾನಾಯಕನಾಗಿ ರಂಗ ಪ್ರವೇಶ ಮಾಡಲು ಅವಕಾಶವಾಗಿತ್ತು. ಖ್ಯಾತ ನಾಟಕ ಕಲಾವಿದರಾದ ಶ್ರೀ ಸತ್ಯನಾರಾಯಣ ಜೋಯಿಸ್, ಶ್ರೀ ಬಸವರಾಜ ಮಾಸ್ತರ್, ಶ್ರೀ ಜಯಪ್ಪ ಮಾಸ್ತರ್ ಅವರ ಒಡನಾಟವು ನಾಟಕ ಕಲಾವಿದನಾಗಿ ಬೆಳೆಯಲು ಅನುಕೂಲವಾಗಿತ್ತು.

ಮೂರೇ ವರ್ಷಗಳಲ್ಲಿ ನಾಟಕ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದರು. ಇವರ ನಿರ್ದೇಶನದಲ್ಲಿ ಕೆಲವು ನಾಟಕ ಪ್ರದರ್ಶನಗಳು ನಡೆದಿತ್ತು. ಕೋಣಂದೂರಿನ ಶ್ರೀ ಮಲ್ಲಿಕಾರ್ಜುನ ಕಲಾ ಸಂಘದಲ್ಲಿ ಸಕ್ರಿಯರಾಗಿ ಇವರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ತ್ಯಾಗಿ, ತಂಗಿಯ ತಾಳಿ, ಗೌಡರ ಗದ್ದಲ, ಮುದುಕನ ಮದುವೆ, ಪಶ್ಚಾತಾಪ ಮೊದಲಾದ ನಾಟಕಗಳಲ್ಲಿ ಇವರು ಅಭಿನಯಿಸಿದ್ದರು. ಸುಮಾರು ನೂರಾ ಐವತ್ತಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ಅಭಿನಯಿಸಲು ಅವಕಾಶವಾಗಿತ್ತು.

ನಾಟಕ ಕಲಾವಿದನಾಗಿರುವಾಗಲೇ ತಬಲಾ ಕಲಿಯುವ ಆಸಕ್ತಿಯೂ ಆಗಿತ್ತು. ಹೆಸರಾಂತ ಕಲಾವಿದ ಶ್ರೀ ಬಸವರಾಜ್ ಗವಾಯಿ ಅವರಿಂದ ತರಬೇತಿ ಪಡೆದು ತಬಲಾ ನುಡಿಸಲು ಆರಂಭಿಸಿದ್ದರು. ಪ್ರಸ್ತುತ ನ್ಯಾಯವಾದಿಗಳೂ, ಯಕ್ಷಗಾನ ವೇಷಧಾರಿ, ತಾಳಮದ್ದಳೆ ಅರ್ಥಧಾರಿಗಳೂ ಆದ ಶ್ರೀ ರಮಣ ಆಚಾರ್ಯ ಕಾರ್ಕಳ ಇವರು ತಬಲಾ ವಾದನವನ್ನು ಕಲಿಯುವಾಗ ಇವರ ಸಹಪಾಠಿಯಾಗಿದ್ದರು.  ಶ್ರೀ ಚಿದಂಬರ ಬಾಬು ಕೋಣಂದೂರು ಎರಡೂವರೆ ವರ್ಷಗಳ ಕಾಲ ತರಬೇತಿಯನ್ನು ಪಡೆದು ತಬಲಾವಾದಕರಾಗಿ ಕಾಣಿಸಿಕೊಂಡರು. ಅನೇಕ ಹರಿಕಥೆಗಳಲ್ಲಿ ತಬಲಾ ನುಡಿಸಲು ಅವಕಾಶವಾಗಿತ್ತು. 

ನಾಟಕ ಕಲಾವಿದರಾಗಿದ್ದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರಿಗೆ ಯಕ್ಷಗಾನಾಸಕ್ತಿ ಹುಟ್ಟಿಕೊಂಡದ್ದು ತನ್ನ ಹತ್ತೊಂಭತ್ತನೆಯ ವಯಸ್ಸಿನಲ್ಲಿ. ಆ ವರ್ಷ ಸಾಲಿಗ್ರಾಮ ಮೇಳದ ಕೆಲವು ಪ್ರದರ್ಶನಗಳನ್ನು ನೋಡಿದ್ದರು. ಶ್ರೀ ಜಿ.ಆರ್. ಕಾಳಿಂಗ ನಾವಡರ ಹಾಡುಗಾರಿಕೆ ಮತ್ತು ವೇಷಧಾರಿಗಳ ನಿರ್ವಹಣೆಯನ್ನು ಕಂಡು ತಾನೂ ಯಕ್ಷಗಾನ ಕಲಾವಿದನಾಗಬೇಕು ಎಂಬ ಆಸೆಯಾಗಿತ್ತು. ಯಕ್ಷಗಾನ ನಾಟ್ಯ ಕಲಿಯಲು ಅವಕಾಶವೂ ಸಿಕ್ಕಿತ್ತು. ಶ್ರೀ ಧರ್ಮಸ್ಥಳ ಲಲಿತಕಲಾ ತರಬೇತಿ ಕೇಂದ್ರದ ಸಂದರ್ಶನ ಕರೆಯನ್ನು ಪತ್ರಿಕೆಯಲ್ಲಿ ಓದಿ ಅಲ್ಲಿಗೆ ತೆರಳಿದರು.

ಅಣ್ಣಪ್ಪ ಪಾತ್ರಧಾರಿಯಾಗಿ

1980ರಲ್ಲಿ ಶ್ರೀ ಧರ್ಮಸ್ಥಳ ತರಬೇತಿ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ಟರಿಂದ ತರಬೇತಿ. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಕೇಂದ್ರ ಪ್ರದರ್ಶನಗಳಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ರಾವಣ ಮತ್ತು ಜಮದಗ್ನಿ, ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಭೀಮನಾಗಿ ವೇಷ ಮಾಡುವ ಅವಕಾಶವೂ ದೊರೆತಿತ್ತು. ಇವರಿಗೆ ಬಣ್ಣಗಾರಿಕೆಯನ್ನು ಕಲಿಸಿದವರು ಖ್ಯಾತ ಬಣ್ಣದ ವೇಷಧಾರಿ ಶ್ರೀ ಡಿ. ಗೋಪಾಲ ಭಟ್ ಅವರು. ತರಬೇತಿ ಮುಗಿದ ಬಳಿಕ ಅದೇ ವರ್ಷ ನೆಡ್ಲೆ ಶ್ರೀ ನರಸಿಂಹ ಭಟ್ಟರ ಹೇಳಿಕೆಯಂತೆ ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ ಜತೆ ಸುಂಕದಕಟ್ಟೆ ಮೇಳಕ್ಕೆ.

ಅದು ಪೋರ್ಕೋಡಿ ಶ್ರೀ ಸುಂದರ ಶೆಟ್ರ ಸಂಚಾಲಕತ್ವದ ಮೇಳ. ಇವರು ಮೇಳದಲ್ಲಿ ಮನೆಯಂತೆಯೇ ಇದ್ದು ಕಲಿತು ಕಲಾವಿದನಾಗಿ ಕಾಣಿಸಿಕೊಂಡವರು. ವೇಷ  ಮಾಡುವುದರ ಜತೆಗೆ ಲೈಟಿಂಗ್ಸ್, ಅಡುಗೆ ಕೆಲಸಗಳನ್ನೂ ಮಾಡಿದ್ದರು. 24 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ವ್ಯವಸಾಯ. ಬಳಿಕ 11 ವರ್ಷ ಮುಖ್ಯ ವೇಷಧಾರಿಯಾಗಿ ವ್ಯವಸಾಯ. ಹೀಗೆ ಸುಂಕದಕಟ್ಟೆ ಮೇಳದಲ್ಲಿ ಒಟ್ಟು 35 ವರ್ಷಗಳ ವ್ಯವಸಾಯ. ಯಕ್ಷಗಾನ ಕ್ಷೇತ್ರಕ್ಕೆ ಬಂದ ಮೇಲೂ ಮಳೆಗಾಲದಲ್ಲಿ ಏಳು ವರ್ಷ ನಾಟಕಗಳಲ್ಲೂ ಭಾಗವಹಿಸಿದ್ದರು. 

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಪುರಾಣ ಮತ್ತು ತುಳು ಪ್ರಸಂಗಗಳ ವೇಷಧಾರಿಯಾಗಿ ಸುಂಕದಕಟ್ಟೆ ಮೇಳದಲ್ಲಿ ಕಾಣಿಸಿಕೊಂಡರು. ಕೋಟಿ ಚೆನ್ನಯ ಪ್ರಸಂಗದ ಕೋಟಿ, ಮಲ್ಲಯ್ಯ ಬುದ್ಧಿವಂತ, ಚಂದುಗಿಡಿ ಪಾತ್ರಗಳನ್ನು ಮಾಡಿದ್ದರು. ಕಾಂತಾಬಾರೆ ಬೂದಾಬಾರೆ ಪ್ರಸಂಗದಲ್ಲಿ ಮೊದಲು ಗೌಡರಸು ಪಾತ್ರಮಾಡಿದ್ದರು. ಬಳಿಕ ಕಾಂತಾಬಾರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತುಳು ಪ್ರಸಂಗದಲ್ಲಿ ಇವೆಲ್ಲಾ ಇವರಿಗೆ ಇಷ್ಟವಾದ ಮತ್ತು ಹೆಸರು ಕೊಟ್ಟ ಪಾತ್ರಗಳು.

ಪುರಾಣ ಪ್ರಸಂಗಗಳಲ್ಲಿ ಕಿರೀಟ ಮತ್ತು ನಾಟಕೀಯ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಸುಂಕದಕಟ್ಟೆ ಮೇಳದಲ್ಲಿ ಶ್ರೀ ಪುತ್ತಿಗೆ ತಿಮ್ಮಪ್ಪ ರೈ  ಮತ್ತು ಪದ್ಯಾಣ ಶಂಕರನಾರಾಯಣ ಭಟ್ ಅವರ ನಿರ್ದೇಶನವು ದೊರೆತಿತ್ತು. ಕಲಾವಿದನಾಗಿ ಬೆಳೆಯಲು ಇದರಿಂದ ಅನುಕೂಲವಾಗಿತ್ತು. ಸದ್ರಿ ಮೇಳದಲ್ಲಿ ಖ್ಯಾತ ಹಿರಿಯ ಕಿರಿಯ ಕಲಾವಿದರ ಒಡನಾಟವು ದೊರೆತಿತ್ತು. ಭಸ್ಮಾಸುರ, ಹಿರಣ್ಯಕಶ್ಯಪ ಮೊದಲಾದ ನಾಟಕೀಯ ಪಾತ್ರಗಳನ್ನೂ ಅರ್ಜುನ, ದೇವೇಂದ್ರ, ಋತುಪರ್ಣ, ಅತಿಕಾಯ ಮೊದಲಾದ ಪಾತ್ರಗಳನ್ನೂ ಮಾಡುವ ಅವಕಾಶವಾಗಿತ್ತು. ‘ನಳದಮಯಂತಿ’ ಪ್ರಸಂಗದಲ್ಲಿ ನಳ, ಋತುಪರ್ಣ ಮತ್ತು ಬಾಹುಕ ಈ ಮೂರೂ ಪಾತ್ರಗಳನ್ನೂ ನಿರ್ವಹಿಸಿದ ಅನುಭವಿ ಇವರು. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಧು, ಕೈಟಭ, ಮಹಿಷಾಸುರ, ರಕ್ತಬೀಜ ಈ ನಾಲ್ಕೂ ಪಾತ್ರಗಳನ್ನೂ ಮಾಡಿದ ಅನುಭವಿ ಇವರು.

ಒಳ್ಳೆಯ ಸ್ವರಭಾರ, ಆಳಂಗ, ಹಿತಮಿತವಾದ ಮಾತು ಮತ್ತು ಕುಣಿತಗಳಿಂದ ಇವರು ಪಾತ್ರಗಳನ್ನು ನಿರ್ವಹಿಸುತ್ತಾರೆ. ಸುಂಕದಕಟ್ಟೆ ಮೇಳದ ತಿರುಗಾಟದ ಬಳಿಕ ಕಳೆದ ಆರು ವರ್ಷಗಳಿಂದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಮತ್ತು ಶ್ರೀ ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಡಿ ವೇಷಗಳನ್ನು ಮಾಡುವ ಅವಕಾಶವಾಗಿತ್ತು. ಅವರ ನಿರ್ದೇಶನವೂ ಸಿಕ್ಕಿತ್ತು. ಅಲ್ಲದೆ ಹಿರಿಯ ಕಿರಿಯ ಕಲಾವಿದರ ಒಡನಾಟ ಮತ್ತು ಸಹಕಾರವೂ ಸಿಕ್ಕಿತ್ತು.

ಧರ್ಮಸ್ಥಳ ಮೇಳಕ್ಕೆ ಸೇರಿದ ಮೊದಲ ವರ್ಷ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಮೊದಲ ಮೂರು ಪ್ರಯೋಗಗಳಲ್ಲಿ ಈಶ್ವರನಾಗಿ ಅಭಿನಯಿಸಿದ್ದರು. ನಾಲ್ಕನೇ ಪ್ರಯೋಗದಲ್ಲಿ ಗೋವಿಂದ ದೀಕ್ಷಿತ ಎಂಬ ಪಾತ್ರ ಮಾಡಿದ್ದರು. ಐದನೇ ಪ್ರಯೋಗದಿಂದ ತೊಡಗಿ ಕಳೆದ ಆರು ವರ್ಷಗಳಿಂದ ಅಣ್ಣಪ್ಪ ಎಂಬ ಪಾತ್ರವನ್ನು ಇವರೇ ಮಾಡುತ್ತಿದ್ದಾರೆ. ಪ್ರಸ್ತುತ ನಾಟಕೀಯ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

“ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುವುದು ಎಂದರೆ ಅದು ಒಂದು ಗೌರವದ ವಿಚಾರ. ಈ ಅವಕಾಶವನ್ನು ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಡೆಯವರು ಮತ್ತು ಮೇಳವನ್ನು ಮುನ್ನಡೆಸುತ್ತಿರುವ ಶ್ರೀ ಡಿ. ಹರ್ಷೇ೦ದ್ರಕುಮಾರರು ಒದಗಿಸಿಕೊಟ್ಟಿದ್ದಾರೆ. ಅವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ವ್ಯವಸಾಯ ಮಾಡುತ್ತಿದ್ದೇನೆ” ಈ ಮಾತುಗಳಿಂದ  ಚಿದಂಬರ ಬಾಬು ಅವರು ಶ್ರೀ ಕ್ಷೇತ್ರವನ್ನು ಮತ್ತು ತಮ್ಮ ಆಶ್ರಯದಾತರನ್ನು ಗೌರವಿಸುತ್ತಾರೆ.

ಮಳೆಗಾಲದಲ್ಲಿ ಶ್ರೀಯುತರು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ಮುಂಬಯಿ ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಳಿಯಾಲ ಶ್ರೀ ಭೀಮ ಭಟ್, ಹಾಸ್ಯರತ್ನ  ನಯನಕುಮಾರ್,ಉದ್ಯಾವರ ಜಯಕುಮಾರ್ ಅವರ ನೇತೃತ್ವದ ತಂಡಗಳ ಸದಸ್ಯನಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ.

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ವೃತ್ತಿ ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ಅತ್ಯಂತ ತೃಪ್ತರು.  ಇವರ ಪತ್ನಿ ಶ್ರೀಮತಿ ಪಾರ್ವತಿ. ಇವರು ಗೃಹಣಿ. ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಕಾರ್ತಿಕ್. ಇವರು ಕೃಷಿಕರು. ಕಿರಿಯ ಪುತ್ರ ಶ್ರೀ ಕೌಶಿಕ್. ಇವರು ಬೆಂಗಳೂರಿನಲ್ಲಿ ಉದ್ಯೋಗಿ. ಅನುಭವೀ ಕಲಾವಿದ ಶ್ರೀ ಚಿದಂಬರ ಬಾಬು ಕೋಣಂದೂರು ಇವರಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಾಲ ಕಲಾ ವ್ಯವಸಾಯವು ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಚಿದಂಬರ ಬಾಬು ಕೋಣಂದೂರು, ಮೊಬೈಲ್: 9880911375

ಲೇಖಕ: ರವಿಶಂಕರ್ ವಳಕ್ಕುಂಜ

ಲೇಖಕ: ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ಫೋಟೋ: ಶ್ರೀ ರಾಧಾಕೃಷ್ಣ ಭಟ್ ಕೊಂಗೋಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments