Saturday, May 18, 2024
Homeಯಕ್ಷಗಾನಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ಬಡಗಿನ ಅನುಭವೀ ಕಲಾವಿದ, ಸಂಘಟಕ – ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಬಡಗು ತಿಟ್ಟಿನ ಅನುಭವೀ ಹಿರಿಯ  ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ ಇವರು ಸುಮಾರು ನಲುವತ್ತೈದು ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಗುಂಡಬಾಳಾ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದ ಇವರು ಶ್ರೇಷ್ಠ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ.

1998ನೇ ಇಸವಿಯಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಬಂಗಾರಮಕ್ಕಿ ಎಂಬ ಕಲಾ ಸಂಘಟನೆಯನ್ನು ಸ್ಥಾಪಿಸಿರುತ್ತಾರೆ. ಈ ಸಂಘಟನೆಯಡಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುತ್ತಾರೆ. ಈ ಸಂಸ್ಥೆಯ ನಾಯಕನಾಗಿ ವಿದೇಶ ಯಾತ್ರೆಯನ್ನು ಕೈಗೊಂಡು ಬಹರೇನ್ ನಲ್ಲಿ  ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಶ್ರೀಯುತರು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸುಪುತ್ರರು. 

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿ. ಪ್ರಸ್ತುತ ಇವರು ನಗರ ಬಸ್ತಿಕೇರಿ ಗ್ರಾಮದ ಮೊಗೆಹಳ್ಳ ಎಂಬಲ್ಲಿ ವಾಸವಾಗಿದ್ದಾರೆ. 1962ನೇ ಇಸವಿ ಮಾರ್ಚ್ 25ರಂದು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಚಿಟ್ಟಾಣಿ ಅವರ ಮೂವರು ಪುತ್ರರಲ್ಲಿ ಇವರೇ ಹಿರಿಯರು.

ಕೃಷ್ಣನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ , ಫೋಟೋ: Yaksha Chandana (Facebook)

ಶ್ರೀ ನರಸಿಂಹ ಚಿಟ್ಟಾಣಿ ಮತ್ತು ಶ್ರೀ ನಾರಾಯಣ ಚಿಟ್ಟಾಣಿ ಅವರು ಸುಬ್ರಹ್ಮಣ್ಯ ಚಿಟ್ಟಾಣಿ ಅವರ ತಮ್ಮಂದಿರು. ಇವರಲ್ಲಿ ಶ್ರೀ ನರಸಿಂಹ ಚಿಟ್ಟಾಣಿ ಅವರು ಅನುಭವೀ ಕಲಾವಿದರಾಗಿ ಎಲ್ಲರಿಗೂ ಪರಿಚಿತರು. ಶ್ರೀ ನಾರಾಯಣ ಚಿಟ್ಟಾಣಿ ಅವರು ಕೃಷಿಕರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿಯವರು ಓದಿದ್ದು ಹತ್ತನೇ ತರಗತಿ ವರೆಗೆ. ಏಳನೇ ತರಗತಿ ವರೆಗೆ ಭಾಸ್ಕೇರಿ ಶಾಲೆಯಲ್ಲಿ. ಬಳಿಕ ಅರೆಯಂಗಡಿ, ಕವಲಕ್ಕಿ ಮತ್ತು ಸಂಶಿ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ತನಕ ಓದಿದ್ದರು.

ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿಯ ಜತೆಗೆ ತಾನೂ ಕಲಾವಿದನಾಗಬೇಕೆಂಬ ಆಸೆಯೂ ಇತ್ತು. ಗುಡ್ಡೆಬಾಳು ಶ್ರೀ ಗೋವಿಂದ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿ ಏಳನೇ ತರಗತಿಯಲ್ಲಿ ಓದುತ್ತಿರುವಾಗ ಮೊತ್ತ ಮೊದಲು ವೇಷ ಮಾಡಲು ಅವಕಾಶವಾಗಿತ್ತು. ಹೊಸಾಕುಳಿ ಜಾತ್ರೆಯ ಪ್ರದರ್ಶನ, ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಷಣ್ಮುಖನಾಗಿ ರಂಗವೇರಿದ್ದರು. ಅಂದು ಕಡತೋಕ ಮಂಜುನಾಥ ಭಾಗವತರು ಪ್ರಸಂಗವನ್ನು ಮುನ್ನಡೆಸಿದ್ದರು. ಬಳಿಕ್ಕ ಎಸ್ಸೆಸ್ಸೆಲ್ಸಿ ತನಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡಲು ಅವಕಾಶ ಸಿಕ್ಕಿತ್ತು.

ಹತ್ತನೇ ತರಗತಿ ವರೆಗೆ ಓದಿದ ಬಳಿಕ ಮೇಳಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ಹಡಿನಬಾಳ ಶ್ರೀ ಸತ್ಯ ಹೆಗಡೆ ಅವರ ಸಂಚಾಲಕತ್ವದ ಗುಂಡಬಾಳಾ ಮೇಳದಲ್ಲಿ ಮೂರು ವರ್ಷಗಳ ವ್ಯವಸಾಯ. ಬಾಲಗೋಪಾಲ ವೇಷದಿಂದ ತೊಡಗಿ ಒಡ್ಡೋಲಗದ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಈ ಅವಧಿಯಲ್ಲಿ ಮಣಿಪಾಲ ಶ್ರೀ ವಿಜಯನಾಥ ಶೆಣೈ ಅವರು ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರ ನಿರ್ದೇಶನದಲ್ಲಿ ನಡೆಸಿದ 48 ದಿನಗಳ ಶಿಬಿರದಲ್ಲೂ ಭಾಗವಹಿಸಿ ತರಬೇತಿಯನ್ನು ಪಡೆದಿದ್ದರು.

ಗುಂಡಬಾಳಾ ಮೇಳದ ಬಳಿಕ ಶ್ರೀ ವೈ. ಕರುಣಾಕರ ಶೆಟ್ರ ಸಂಚಾಲಕತ್ವದ ಪೆರ್ಡೂರು ಮೇಳದಲ್ಲಿ ವ್ಯವಸಾಯ. ಈ ಸಮಯದಲ್ಲಿ ಪುಂಡುವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಬಳಿಕ ಎರಡು ವರ್ಷ ಪಳ್ಳಿ ಶ್ರೀ ಸೋಮನಾಥ ಹೆಗ್ಡೆ ಅವರ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಬಳಿಕ ಪುರ್ಲೆ ಶ್ರೀ ರಾಮಚಂದ್ರ ಹೆಗಡೆ ಅವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಇಲ್ಲಿ ಪುಂಡುವೇಷ ಮತ್ತು ಒಡ್ಡೋಲಗ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬಳಿಕ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರ ಜತೆ ಸೇರಿ ಬಚ್ಚಗಾರು ಟೆಂಟ್ ಮೇಳವನ್ನು ನಡೆಸಿ ಮೊತ್ತಮೊದಲು ಸಂಘಟಕನಾಗಿ ಗುರುತಿಸಿಕೊಂಡರು.

ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರು ಬಚ್ಚಗಾರು ಮೇಳವನ್ನು ನಡೆಸಿದಾಗ ಎರಡು ವರ್ಷ ವ್ಯವಸಾಯ. ಬಚ್ಚಗಾರು ಮೇಳದಲ್ಲಿ ಒಟ್ಟು ಐದು ವರ್ಷ ವ್ಯವಸಾಯ. ಬಳಿಕ ಶ್ರೀ ಕೃಷ್ಣ ನಾಯ್ಕ್ ಅವರ ಶಿರಸಿ ಮಾರಿಕಾಂಬಾ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಬಳಿಕ ಸಾಲಿಗ್ರಾಮ ಮೇಳದಲ್ಲಿ ಮೂರು ವರ್ಷ ಮತ್ತು ಮಂದಾರ್ತಿ ಮೇಳದಲ್ಲಿ ಮೂರು ವರ್ಷ. ಹೀಗೆ ಸಾಗಿತ್ತು ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಮೇಳದ ವ್ಯವಸಾಯ . ಪುಂಡುವೇಷ, ಒಡ್ಡೋಲಗ ವೇಷಗಳಲ್ಲದೆ ಎಲ್ಲಾ ಪಾತ್ರಗಳನ್ನೂ ಇವರು ನಿರ್ವಹಿಸಬಲ್ಲರು.

ಚಕ್ರಚಂಡಿಕಾ ಪ್ರಸಂಗದ ಬರ್ಬರೀಕ ಎಂಬ ಪಾತ್ರವು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಕವಿರತ್ನ ಕಾಳಿದಾಸ ಪ್ರಸಂಗದ ಕಲಾಧರ, ಕೃಷ್ಣಾರ್ಜುನ ಕಾಳಗ ಮತ್ತು ಚಂದ್ರಾವಳೀ ವಿಲಾಸದ ಶ್ರೀಕೃಷ್ಣ, ಗದಾಯುದ್ಧ ಪ್ರಸಂಗದ ಭೀಮ, ಸುಧನ್ವ ಮೋಕ್ಷ ಪ್ರಸಂಗದ ಸುಧನ್ವ, ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು. ಗದಾಯುದ್ಧ ಪ್ರಸಂಗದಲ್ಲಿ ಭೀಮನಾಗಿ ಇವರ ನಿರ್ವಹಣೆಯನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮೆಚ್ಚಿಕೊಂಡು ‘ನೀನು ಕಲಾವಿದ ಹೌದು’ ಎಂಬ ಹೊಗಳಿಕೆಯ ಪ್ರಮಾಣಪತ್ರವನ್ನು ನೀಡಿದ್ದರು. 

1998ರಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಸಂಘಟಕನಾಗಿಯೂ ಕಾಣಿಸಿಕೊಂಡರು. ಶುಂಠಿ ಶ್ರೀ ಸತ್ಯನಾರಾಯಣ ಭಟ್ಟರ ಜತೆ ಸೇರಿ ಬಚ್ಚಗಾರು ಮೇಳವನ್ನು ಮೂರು ವರ್ಷ ನಡೆಸಿದ ಅನುಭವವು ಸಂಘಟಕನಾಗಿ ಮುನ್ನಡೆಯಲು ಅನುಕೂಲವಾಗಿತ್ತು. ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಪ್ರಸ್ತುತ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಸಂಚಾಲಕರಾಗಿ ಮುನ್ನಡೆಸುತ್ತಿದ್ದಾರೆ.

2016-17ನೇ ಸಾಲಿನಲ್ಲಿ ಇವರು ಜಲವಳ್ಳಿ ಶ್ರೀ ವಿದ್ಯಾಧರ ರಾವ್ ಅವರ ಕಲಾಧರ ಯಕ್ಷರಂಗ ಬಳಗ ತಂಡದ ಕಲಾವಿದನಾಗಿಯೂ ವ್ಯವಸಾಯ ಮಾಡಿತುತ್ತಾರೆ. ಬಡಗು ತಿಟ್ಟಿನ ಖ್ಯಾತ ಹಿಮ್ಮೇಳ ಮುಮ್ಮೇಳ ಕಲಾವಿದರ ಒಡನಾಟವು ಇವರಿಗೆ ದೊರಕಿದೆ. ಅನೇಕ ಹಿರಿಯ, ಕಿರಿಯ ಕಲಾವಿದರೊಂದಿಗೆ ರಂಗವೇರಿ ಅಭಿನಯಿಸಿದ ಅನುಭವೀ ಕಲಾವಿದರಿವರು.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಪತ್ನಿ ಶ್ರೀಮತಿ ಪಾರ್ವತಿ. ಇವರು ಗೃಹಣಿ. ಯಕ್ಷಗಾನ ಕಲಾಸಕ್ತೆಯೂ ಹೌದು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಪಾರ್ವತೀ ದಂಪತಿಗಳಿಗೆ ಇಬ್ಬರು ಮಕ್ಕಳು. (1985ರಲ್ಲಿ ವಿವಾಹ) ಪುತ್ರಿ ಶ್ರೀಮತಿ ಪ್ರೀತಿ. ಇವರ ಪತಿ ಶ್ರೀ ಗುರುಪ್ರಸಾದ ಭಟ್. ಇವರು ಸಹಕಾರೀ ಸಂಸ್ಥೆಯಲ್ಲಿ ಉದ್ಯೋಗಿ ಮತ್ತು ಕೃಷಿಕರು.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಪುತ್ರ ಶ್ರೀ ಕಾರ್ತಿಕ್ ಚಿಟ್ಟಾಣಿ. ಇವರನ್ನು ಕಲಾಭಿಮಾನಿಗಳು ಚೆನ್ನಾಗಿ ಬಲ್ಲರು. ಬಡಗುತಿಟ್ಟಿನ ಉದಯೋನ್ಮುಖ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ಇವರು ಯಕ್ಷಋಷಿ ಶ್ರೀ ಹೊಸ್ತೋಟ ಮಂಜುನಾಥ ಭಾಗವತರಿಂದ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಅಭ್ಯಸಿಸಿದ್ದಾರೆ. ಅಗತ್ಯ ಬಿದ್ದರೆ ಭಾಗವತಿಕೆಯನ್ನೂ ಮಾಡಬಲ್ಲರು. ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು.

ಇವರು ಮೊದಲು ಗುಂಡಬಾಳಾ ಮೇಳದಲ್ಲಿ ಮೂರು ವರ್ಷ ವ್ಯವಸಾಯ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆಗಾಲದ ಪ್ರದರ್ಶನಗಳಲ್ಲೂ ಇವರು ಬೇಡಿಕೆಯ ಕಲಾವಿದರು. ಶ್ರೀ ಕಾರ್ತಿಕ್ ಚಿಟ್ಟಾಣಿಯವರ ಪತ್ನಿ ಶ್ರೀಮತಿ ಅರ್ಪಿತಾ. ಇವರು ಗೃಹಣಿ. ಯಕ್ಷ ಕಲಾಸಕ್ತೆಯಾಗಿ ಪತಿಯನ್ನು ಪ್ರೋತ್ಸಾಹಿಸುತ್ತಾರೆ. ಶ್ರೀ ಕಾರ್ತಿಕ್ ಚಿಟ್ಟಾಣಿ ಅವರಿಗೆ ಕಲಾಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಅವರಿಗೆ ಸಕಲ ಭಾಗ್ಯಗಳನ್ನೂ ಭಗವಂತನು ಅನುಗ್ರಹಿಸಲಿ.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರಿಂದ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಮೊಬೈಲ್: 9113622582

ಶ್ರೀ ರವಿಶಂಕರ್ ವಳಕ್ಕುಂಜ

 ಲೇಖಕ:ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments