Saturday, May 18, 2024
Homeಯಕ್ಷಗಾನಸ್ತ್ರೀ ಪಾತ್ರಗಳಿಂದ ಪುರುಷ ಪಾತ್ರಗಳೆಡೆಗೆ - ಬಡಗಿನ ಖ್ಯಾತ ಸ್ತ್ರೀ ಪಾತ್ರಧಾರಿ ನೀಲ್ಕೋಡು ಶ್ರೀ ಶಂಕರ...

ಸ್ತ್ರೀ ಪಾತ್ರಗಳಿಂದ ಪುರುಷ ಪಾತ್ರಗಳೆಡೆಗೆ – ಬಡಗಿನ ಖ್ಯಾತ ಸ್ತ್ರೀ ಪಾತ್ರಧಾರಿ ನೀಲ್ಕೋಡು ಶ್ರೀ ಶಂಕರ ಹೆಗಡೆ 

ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ಬಡಗುತಿಟ್ಟಿನ ಖ್ಯಾತ ಸ್ತ್ರೀ ಪಾತ್ರಧಾರಿಗಳು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಇಪ್ಪತ್ತಾರು ವರ್ಷಗಳ ಅನುಭವಿ. ಕಳೆದ ನಾಲ್ಕು ವರ್ಷಗಳಿಂದ ಪುರುಷ ಪಾತ್ರಗಳಲ್ಲೂ ಕಾಣಿಸಿಕೊಂಡು, ಯಶಸ್ವಿಯಾಗಿ ರಂಜಿಸುತ್ತಿದ್ದಾರೆ. ಸ್ತ್ರೀ ಪಾತ್ರಧಾರಿಯಾಗಿ ಬಹುಬೇಡಿಕೆಯ ಕಲಾವಿದನಾಗಿದ್ದಾಗಲೇ ಪುರುಷ ಪಾತ್ರಗಳನ್ನೂ ನಿರ್ವಹಿಸುವಲ್ಲಿ ತೊಡಗಿಸಿಕೊಂಡ ಚತುರಮತಿ ಇವರು. ನಿರಂತರವಾಗಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಕಲಾವಿದರು ಪುರುಷ ಪಾತ್ರಗಳಲ್ಲಿ ಅಭಿನಯಿಸುವುದು ಅಷ್ಟು ಸುಲಭವಲ್ಲ. ನಿರ್ವಹಿಸುವ ಮನಮಾಡಿ ತೊಡಗಿಸಿಕೊಂಡು ಯಶಸ್ವಿಯಾದರೆ ಅದೊಂದು ಸಾಹಸವೇ ಹೌದು.

ನಿರಂತರವಾದ ಅಧ್ಯಯನ ಮತ್ತು ಸಾಧನೆಯಿಂದ ಮಾತ್ರ ಈ ಸಾಹಸವನ್ನು ಪ್ರದರ್ಶಿಸಬಹುದು. ಈ ನಿಟ್ಟಿನಲ್ಲಿ ನೋಡಿದರೆ ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರು ಸಾಧಕರೂ ಹೌದು. ಸಾಹಸಿಯೂ ಹೌದು. ಶ್ರೀಯುತರು ಯಕ್ಷಗಾನ ಕ್ಷೇತ್ರದಲ್ಲಿ ಶ್ರೇಷ್ಠ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಮತ್ತು ಅಶಕ್ತ ಕಲಾವಿದರಿಗೆ ನೆರವೀಯುವ ಉದ್ದೇಶದಿಂದ 2018ರಲ್ಲಿ ‘ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು’ ಎಂಬ ಸಂಸ್ಥೆಯನ್ನು ಆರಂಭಿಸಿ ಮುನ್ನಡೆಸುತ್ತಿದ್ದಾರೆ.

ಈ ಸಂಸ್ಥೆಯಡಿ ಈ ವರೆಗೆ ಒಟ್ಟು ಹದಿನಾರು ಲಕ್ಷ ರೂಪಾಯಿಗಳನ್ನು ಅರ್ಹ ಅಶಕ್ತ ಕಲಾವಿದರಿಗೆ ನೀಡಲಾಗಿದೆ. ಸದ್ರಿ ಸಂಸ್ಥೆಯ ವತಿಯಿಂದ ಕಲಾವಿದರಿಗೆ ಗೌರವ ಧನವನ್ನು ನೀಡಿ ಗೌರವಿಸುವ ಸತ್ಕಾರ್ಯವೂ ನಡೆದಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲೂ ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ತಮ್ಮ ಸಂಘಟನಾ ಚಾತುರ್ಯವನ್ನು ತೋರಿ ಕಲಾವಿದರ ಕಷ್ಟಕ್ಕೆ ಒದಗಿ ಸಹಕರಿಸಿರುತ್ತಾರೆ.

ಜಿಲ್ಲಾಡಳಿತದ ಅನುಮತಿ ಪಡೆದು ಸರಕಾರದ ನಿಯಮಕ್ಕೆ ಕೊರತೆಯಾಗದಂತೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮೊದಲ ವರ್ಷ 38 ಪ್ರದರ್ಶನಗಳನ್ನೂ ದ್ವಿತೀಯ ವರ್ಷ 48 ಪ್ರದರ್ಶನಗಳನ್ನೂ ನೀಡಿರುತ್ತಾರೆ. ಕಾರ್ಯಕ್ರಮಗಳಿಲ್ಲದೆ ಕಂಗಾಲಾಗಿದ್ದ ಕಲಾವಿದರಿಗೆ ಇದರಿಂದ ಅನುಕೂಲವಾಗಿತ್ತು. ಸಾಮಾಜಿಕ ಜಾಲತಾಣದ ವರ್ಚುವಲ್ ವೇದಿಕೆಯಲ್ಲಿ Watch & Pay ಕಾರ್ಯಕ್ರಮದಡಿ ಮೂರು ಪ್ರದರ್ಶನಗಳನ್ನು ನಡೆಸಿ ಯಶಸ್ವಿಯಾಗಿದ್ದರು. ಇದು ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರ ಸಂಘಟನಾ ಕೌಶಲ್ಯಕ್ಕೆ ಸಾಕ್ಷಿ.

ಬಡಗುತಿಟ್ಟಿನ ಖ್ಯಾತ ಸ್ತ್ರೀ ಪಾತ್ರಧಾರಿ ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರ ಹುಟ್ಟೂರು ಹೊನ್ನಾವರ ತಾಲೂಕು ನೀಲ್ಕೋಡು ಗ್ರಾಮದ ಗುಬ್ಬಿಮನೆ. 1978 ಮೇ 9 ರಂದು ನೀಲ್ಕೋಡು ಶ್ರೀ ವಿಶ್ವನಾಥ ಹೆಗಡೆ ಮತ್ತು ಶ್ರೀಮತಿ ಪಾರ್ವತಿ ಹೆಗಡೆ ದಂಪತಿಗಳ ಪುತ್ರನಾಗಿ ಜನನ. ಮನೆಯವರೆಲ್ಲಾ ಯಕ್ಷಗಾನ ಕಲಾಸಕ್ತರಾಗಿದ್ದರು. ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರ ವಿದ್ಯಾರ್ಜನೆ ಪಿಯುಸಿ ವರೆಗೆ. ನೀಲ್ಕೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವರೆಗೆ. ಬಳಿಕ ಪಿಯುಸಿ ವರೆಗೆ ಅರೆಯಂಗಡಿ ಎಸ್.ಕೆ.ಪಿ ಜೂನಿಯರ್ ಕಾಲೇಜಿನಲ್ಲಿ.

ಎಳವೆಯಲ್ಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ರಾತ್ರಿಯಿಡೀ ಪ್ರದರ್ಶನಗಳನ್ನು ನೋಡಿ, ಹಗಲು ಗೆಳೆಯರೊಂದಿಗೆ ಕುಣಿಯುವ ಅಭ್ಯಾಸವೂ ಇತ್ತು. ಶಾಲಾ ರಾಜಾ ದಿನಗಳಲ್ಲಿ ಗುಂಡಬಾಳಾ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ವರ್ಷಕ್ಕೆ ಇಪ್ಪತ್ತೈದರಿಂದ ಮೂವತ್ತು ಪ್ರದರ್ಶನಗಳನ್ನು ನೋಡಿದ್ದೂ ಇದೆ. ಇತರ ಮೇಳದ ಪ್ರದರ್ಶನಗಳನ್ನೂ ನೋಡುತ್ತಿದ್ದರು. ಖ್ಯಾತ ಕಲಾವಿದರ ಪಾತ್ರನಿರ್ವಹಣೆಯನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯು ಮೊಳಕೆಯೊಡೆದಿತ್ತು.

ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಲು ತೀರ್ಮಾನ. ಗುಣವಂತೆ ಶ್ರೀಮಯ ಕಲಾಕೇಂದ್ರಕ್ಕೆ ಅರ್ಜಿ ಸಲ್ಲಿಕೆ. ಸದ್ರಿ ತರಬೇತಿ ಕೇಂದ್ರದ ಸಂದರ್ಶನದಲ್ಲಿ ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರು ಉತ್ತೀರ್ಣರಾಗಿದ್ದರು. ಆಗ ವಿದ್ವಾನ್ ಗಣಪತಿ ಭಟ್, ಎ.ಪಿ ಪಾಠಕ್, ಹೆರಂಜಾಲು ಗೋಪಾಲ ಗಾಣಿಗರು ಗುಣವಂತೆ ಶ್ರೀಮಯ ಕಲಾಕೇಂದ್ರದ ಗುರುಗಳಾಗಿದ್ದರು. ಹೆರಂಜಾಲು ಗೋಪಾಲ ಗಾಣಿಗರಿಂದ ನಾಟ್ಯಾಭ್ಯಾಸ. (1995ರಲ್ಲಿ) ತರಬೇತಿ ಕೇಂದ್ರದ ಪ್ರದರ್ಶನ, ಹಿಡಿಂಬಾ ವಿವಾಹ ಪ್ರಸಂಗದಲ್ಲಿ ಮಾಯಾ ಹಿಡಿಂಬೆಯಾಗಿ ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ರಂಗವೇರಿದ್ದರು.

1996ರಲ್ಲಿ ಕೆರೆಮನೆ ಶ್ರೀ ಶಂಭು ಹೆಗಡೆಯವರ ಸಂಚಾಲಕತ್ವದ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸದಸ್ಯನಾಗಿ ತಿರುಗಾಟ ಆರಂಭ. ಪ್ರದರ್ಶನಗಳಿಲ್ಲದೆ ತಂಡಕ್ಕೆ ಬಿಡುವು ಇದ್ದ ದಿನ ಗುಂಡಬಾಳಾ ಮೇಳಕ್ಕೆ ತೆರಳಿ ವೇಷ ಮಾಡಲು ಅವಕಾಶವಾಗಿತ್ತು. ಕೆರೆಮನೆ ಮೇಳದಲ್ಲಿ ನೆಬ್ಬೂರು ನಾರಾಯಣ ಭಾಗವತರು, ಪ್ರಭಾಕರ ಭಂಡಾರಿ ಕರ್ಕಿ (ಮದ್ದಳೆಗಾರರು), ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ ಅವರ ಒಡನಾಟವೂ ನಿರ್ದೇಶನವೂ ದೊರೆತಿತ್ತು.

ತಿರುಗಾಟ ಪ್ರಾರಂಭಿಸಿದ ಮುಂದಿನ ವರ್ಷವೇ ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರಿಗೆ ವಿದೇಶ ಯಾತ್ರೆ ಮಾಡುವ ಭಾಗ್ಯವು ದೊರೆತಿತ್ತು. ಕೆರೆಮನೆ ಶ್ರೀ ಶಂಭು ಹೆಗಡೆ ಅವರ ನೇತೃತ್ವದ ತಂಡದ ಜತೆ ಐದು ರಾಷ್ಟ್ರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ವಾಲಿ ಮೋಕ್ಷ ಪ್ರಸಂಗದಲ್ಲಿ ಕೆರೆಮನೆ ಶಂಭು ಹೆಗಡೆಯವರು ವಾಲಿಯಾಗಿಯೂ ಕೆರೆಮನೆ ಶಿವಾನಂದ ಹೆಗಡೆಯವರು ಶ್ರೀರಾಮನಾಗಿಯೂ ಅಭಿನಯಿಸಿದಾಗ ಸುಗ್ರೀವನ ಪಾತ್ರವನ್ನು ಇವರು ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ನೆಬ್ಬೂರು ನಾರಾಯಣ ಭಾಗವತ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಶಿವರಾಮ ಹೆಗಡೆಯವರ ನಿರ್ದೇಶನವೂ ದೊರೆತಿತ್ತು.

ಶಿಸ್ತು ಮತ್ತು ಕಲಾವಿದನು ಹೇಗಿರಬೇಕೆಂಬ ಉತ್ತಮ ಸಂಸ್ಕಾರವು ತಿರುಗಾಟದಲ್ಲಿ ದೊರಕಿತ್ತು ಎಂದು ಹೇಳುವ ಮೂಲಕ ನೀಲ್ಕೋಡು ಶ್ರೀ ಶಂಕರ ಹೆಗಡೆ  ಅವರು ಕೆರೆಮನೆ ಮೇಳವನ್ನು ಗೌರವಿಸುತ್ತಾರೆ. ಕೆರೆಮನೆ ಶಂಭು ಹೆಗಡೆ ಅವರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ ಇವರು ಬೆಳೆದವರು. ಕೆರೆಮನೆ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಬಳಿಕ ಎರಡು ವರ್ಷ ಮಂದಾರ್ತಿ ಮೇಳದಲ್ಲಿ ವ್ಯವಸಾಯ. ಮೊದಲ ವರ್ಷ ಒಂದನೇ ಮೇಳದಲ್ಲಿ. ಖ್ಯಾತ ಸ್ತ್ರೀ ಪಾತ್ರಧಾರಿ ಎಂ.ಎ ನಾಯ್ಕ್ ಅವರ ಒಡನಾಟ. ಕಲಿಕೆಗೆ ಇದರಿಂದ ಅನುಕೂಲವಾಗಿತ್ತು. ಎಂ.ಎ ನಾಯ್ಕ್ ಅವರು ದಮಯಂತಿಯ ಪಾತ್ರವನ್ನು ನಿರ್ವಹಿಸುವಾಗ ಅವರ ಜತೆ ಚೈದ್ಯರಾಣಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ಚಿತ್ರಾಕ್ಷಿಯಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು.

ಎರಡನೇ ವರ್ಷ ಮಂದಾರ್ತಿ ಎರಡನೇ ಮೇಳದಲ್ಲಿ ವ್ಯವಸಾಯ. ಹೆರಂಜಾಲು ಗೋಪಾಲ ಗಾಣಿಗರ ನಿರ್ದೇಶನವು ದೊರೆತಿತ್ತು. ಪ್ರಧಾನ ಸ್ತ್ರೀ ಪಾತ್ರಧಾರಿ ಹೊಸಂಗಡಿ ರಾಜೀವ ಶೆಟ್ರ ಒಡನಾಟವೂ ಸಿಕ್ಕಿತ್ತು. ದೇವಿ ಮಹಾತ್ಮೆ ಪ್ರಸಂಗದ ಮಾಲಿನಿ, ಮಂದಾರ್ತಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಮಾಲಿನಿ ಅಲ್ಲದೆ ಪುರಾಣ ಪ್ರಸಂಗಗಳ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮಂದಾರ್ತಿ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ನಾಗನಂದನೆ ಪ್ರಸಂಗದಲ್ಲಿ ನಂದೆಯಾಗಿ ರಂಜಿಸಿದ್ದರು.

ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ಬಳಿಕ ತಿರುಗಾಟ ಮಾಡಿದ್ದು ಕಮಲಶಿಲೆ ಮೇಳದಲ್ಲಿ. ಸದ್ರಿ ಮೇಳದಲ್ಲಿ ಎರಡನೇ ಸ್ತ್ರೀ ವೇಷಧಾರಿಯಾಗಿ ಎರಡು ವರ್ಷ ವ್ಯವಸಾಯ. ಖ್ಯಾತ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಅವರ ನಿರ್ದೇಶನವು ದೊರೆತಿತ್ತು. ಅವರು ವಿಶ್ವಾಮಿತ್ರ, ದಶರಥ, ಭೀಷ್ಮ, ರುಕ್ಮಾಂಗದ, ವಲಲ, ಕೌರವ ಪಾತ್ರಗಳನ್ನು ನಿರ್ವಹಿಸಿದಾಗ ನೀಲ್ಕೋಡು ಶಂಕರ ಹೆಗಡೆಯವರು ಕ್ರಮವಾಗಿ ಮೇನಕೆ, ಕೈಕೇಯಿ, ಅಂಬೆ, ಮೋಹಿನಿ, ಸೈರಂದ್ರಿ, ದ್ರೌಪದಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆರ್ಗೋಡು-ನೀಲ್ಕೋಡು ಜತೆಗಾರಿಕೆಯನ್ನು ಅಂದು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

ಬಳಿಕ ಪೆರ್ಡೂರು ಮೇಳದಲ್ಲಿ ಆರು ವರ್ಷಗಳ ಕಾಲ ವ್ಯವಸಾಯ. ಆಗ ಎಂ.ಕೆ ರಮೇಶ ಆಚಾರ್ಯರು ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿದ್ದರು. ಪಾತ್ರ ನಿರ್ವಹಣೆಯಲ್ಲಿ ಅನುಭವಗಳನ್ನು ಗಳಿಸಲು ಇದರಿಂದ ಅನುಕೂಲವಾಗಿತ್ತು. ಮೊದಲ ತಿರುಗಾಟ ಕಳೆದು ಮಳೆಗಾಲದ ಪ್ರದರ್ಶನದಲ್ಲಿ ಶಿವರಂಜಿನಿ ಪ್ರಸಂಗದ ಶಿವರಂಜಿನಿ ಪಾತ್ರವನ್ನು ನಿರ್ವಹಿಸುವ ಅವಕಾಶವಾಗಿತ್ತು. ಈ ಪಾತ್ರವನ್ನು ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಎರಡನೇ ವರ್ಷದ ತಿರುಗಾಟ, ನಾಗವಲ್ಲಿ ಪ್ರಸಂಗದ ನಾಗವಲ್ಲಿ ಇವರಿಗೆ ಖ್ಯಾತಿಯನ್ನು ತಂದುಕೊಟ್ಟ ಪಾತ್ರ. ಪ್ರೇಕ್ಷಕರ ಮನಸೂರೆಗೊಂಡ ಪಾತ್ರ ಇದು. ಈ ಪಾತ್ರ ನಿರ್ವಹಣೆಗೆ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ನಿರ್ದೇಶನವೂ ದೊರೆತಿತ್ತು. ಪೆರ್ಡೂರು ಮೇಳದಲ್ಲಿ ಅನೇಕ ಖ್ಯಾತ ಕಲಾವಿದರ ಒಡನಾಟವೂ ಸಿಕ್ಕಿತ್ತು.

ಬಳಿಕ ಎರಡು ವರ್ಷ ಮೇಳದ ವ್ಯವಸಾಯದಿಂದ ದೂರ ಉಳಿದಿದ್ದರು. ಆದರೂ ಅತಿಥಿ ಕಲಾವಿದನಾಗಿ ಅನೇಕ ಕಡೆ ಭಾಗವಹಿಸಿದ್ದರು. ಮಳೆಗಾಲದ ಪ್ರದರ್ಶನಗಳಲ್ಲಿ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಜತೆಯೂ ಕಲಾ ವ್ಯವಸಾಯ ಮಾಡುವ ಅವಕಾಶ ಸಿಕ್ಕಿತ್ತು. ಚಿಟ್ಟಾಣಿಯವರು ಭಸ್ಮಾಸುರ, ಕೀಚಕ, ಉಗ್ರಸೇನ, ಸಾಲ್ವ ಅರ್ಜುನ, ದುಷ್ಟಬುದ್ಧಿ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ನೀಲ್ಕೋಡು ಶಂಕರ ಹೆಗಡೆಯವರು ಮೋಹಿನಿ, ಸೈರಂಧ್ರಿ, ರುಚಿಮತಿ, ಅಂಬೆ ಸುಭದ್ರೆ, ವಿಷಯೆ ಪಾತ್ರಗಳಲ್ಲಿ ಅವರ ಜತೆ ಅಭಿನಯಿಸಿದ್ದರು. ಚಿಟ್ಟಾಣಿ ರಾಮಚಂದ್ರ ಹೆಗಡೆ-ನೀಲ್ಕೋಡು ಶಂಕರ ಹೆಗಡೆ ಜತೆಗಾರಿಕೆಯು ಆ ಕಾಲದಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡಿತ್ತು.

2012-13ರಿಂದ ತೊಡಗಿ ಮರಳಿ ಮೇಳದ ತಿರುಗಾಟ. ಪೆರ್ಡೂರು ಮೇಳದಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ನಾಲ್ಕು ವರ್ಷ ವ್ಯವಸಾಯ. ಮೇಘ ರಂಜಿನಿ, ಗಗನ ತಾರೆ ಎಂಬ ಕಾಲ್ಪನಿಕ ಪ್ರಸಂಗಗಳಲ್ಲೂ, ಅನೇಕ ಪುರಾಣ ಪ್ರಸಂಗಗಳಲ್ಲೂ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ರಂಜಿಸಿದ್ದರು. ಬಳಿಕ ಎರಡು ವರ್ಷ ವಿದ್ಯಾಧರ ಜಲವಳ್ಳಿ ಅವರ ಕಲಾಧರ ಯಕ್ಷಗಾನ ಬಳಗ ತಂಡದಲ್ಲಿ ಎರಡು ವರ್ಷ ವ್ಯವಸಾಯ. ಇಲ್ಲಿ ಬಳ್ಕೂರು ಕೃಷ್ಣಯಾಜಿ, ಹಳ್ಳಾಡಿ ಜಯರಾಮ ಶೆಟ್ಟಿ, ಜಲವಳ್ಳಿ ವಿದ್ಯಾಧರ ರಾವ್ ಮೊದಲಾದವರ ಒಡನಾಟವು ದೊರೆತಿತ್ತು.  ಇದೇ ಸಂದರ್ಭದಲ್ಲಿ ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ಪುರುಷ ಪಾತ್ರಗಳನ್ನು ಮಾಡುವ ಸಾಹಸವನ್ನು ತೋರಿದ್ದರು.

ಪುರುಷ ಪಾತ್ರಗಳನ್ನು ನಿರ್ವಹಿಸುವಲ್ಲಿ ಇವರು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಅವರನ್ನು ಆದರ್ಶವಾಗಿ ಸ್ವೀಕರಿಸುತ್ತಾರೆ. ಯಕ್ಷಗಾನದ ಚೌಕಟ್ಟಿನೊಳಗೆ ಹೊಸತನವನ್ನು ಪಾತ್ರ ನಿರ್ವಹಣೆಯಲ್ಲಿ ತೋರುವ ಕೊಂಡದಕುಳಿ ಅವರನ್ನು ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರು ಬಹುವಾಗಿ ಮೆಚ್ಚಿ ಗೌರವಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ನೀಲ್ಕೋಡು ಅವರು ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪುರುಷ ಪಾತ್ರಧಾರಿಯಾಗಿ ಮೇಳಕ್ಕೆ ಸೇರಿದರೂ ಕೆಲವು ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡಬೇಕಾಗಿ ಬಂದಿತ್ತು. ಖ್ಯಾತ ಯುವ ಕಲಾವಿದ ಶ್ರೀ ಶಶಿಕಾಂತ ಶೆಟ್ರ ಜತೆ ಚಂದ್ರಮುಖಿ-ಸೂರ್ಯಸಖಿ ಪ್ರಸಂಗದಲ್ಲಿ ಸ್ತ್ರೀ ಪಾತ್ರ ಮಾಡಬೇಕಾಗಿ ಬಂದಿತ್ತು. ಜನಮನ ಸೂರೆಗೊಂಡ ಈ ಪ್ರಸಂಗದಲ್ಲಿ ಶಶಿಕಾಂತ ಶೆಟ್ರು ಚಂದ್ರಮುಖಿಯಾಗಿಯೂ, ನೀಲ್ಕೋಡು ಅವರು ಸೂರ್ಯಸಖಿಯಾಗಿಯೂ ಅಭಿನಯಿಸಿದ್ದರು.

ಕಲಿಕಾ ವಿದ್ಯಾರ್ಥಿಯಾಗಿರುವಾಗಲೇ ಕೆರೆಮನೆ ತಂಡದ ಸದಸ್ಯನಾಗಿ ವಿದೇಶಯಾತ್ರೆ ಕೈಗೊಂಡಿದ್ದ ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ಮತ್ತೆ ನಾಲ್ಕು ಬಾರಿ ವಿದೇಶಗಳಿಗೆ ತೆರಳಿ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ವೀರಾಂಜನೇಯ ಯಕ್ಷಗಾನ ಮಂಡಳಿ ಬಂಗಾರಮಕ್ಕಿ ತಂಡದ ಸದಸ್ಯನಾಗಿ ಬಹರೇನ್, ಕೊಂಡದಕುಳಿ ರಾಮಚಂದ್ರ ಹೆಗಡೆಯವರ ತಂಡದ ಸದಸ್ಯನಾಗಿ 2012ರಲ್ಲಿ ದುಬಾಯಿಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. 2013ರಲ್ಲಿ ಮತ್ತೆ ಬಹರೇನ್ ಗೆ ಪ್ರಯಾಣ. 2015ರಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ನೇತೃತ್ವದ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ ಸದಸ್ಯನಾಗಿ ಅಮೇರಿಕ ದೇಶಕ್ಕೆ ತೆರಳಿ ಅಲ್ಲಿ ಮೂರು ತಿಂಗಳು ಇದ್ದು, 28 ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಪ್ರಸ್ತುತ ಸ್ತ್ರೀ, ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ನೀಲ್ಕೋಡು ಶ್ರೀ ಶಂಕರ ಹೆಗಡೆ ಅವರು ಸಂಘಟಕರಾಗಿಯೂ ಕಲಾಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ತಾವೇ ಆರಂಭಿಸಿದ ‘ಅಭಿನೇತ್ರಿ ಆರ್ಟ್ ಟ್ರಸ್ಟ್’ ಸಂಸ್ಥೆಯಡಿ ಕಲಾ ಚಟುವಟಿಕೆಗಳ ಜತೆಗೆ ಸಮಾಜ ಸೇವೆಯನ್ನೂ ನಡೆಸುವ ಯೋಜನೆ ಇವರಿಗಿದೆ. ಯಕ್ಷಗಾನ ಕಲಿಕೆಯ ಜತೆಗೆ ಭಾರತೀಯ ಸಮಗ್ರ ಕಲೆಗಳ ಅಧ್ಯಯನ ಮತ್ತು ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲು ಗ್ರಂಥಾಲಯದ ಸಹಿತ ಸುಸಜ್ಜಿತ, ಸಕಲ ವ್ಯವಸ್ಥೆಗಳನ್ನೂ ಒಳಗೊಂಡ ರಂಗಮಂದಿರವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದಾರೆ. ಈ ಕಟ್ಟಡದಲ್ಲಿ ವಿವಾಹವೇ ಮೊದಲಾದ ಕಾರ್ಯಕ್ರನಗಳು ನಡೆಸುವಂತಿರಬೇಕು. ಇದರಿಂದ ಆರ್ಥಿಕವಾಗಿ ಹಿಂದುಳಿದವರ ಕಷ್ಟಕ್ಕೆ ನೆರವಾಗಬೇಕೆಂಬುದು ನೀಲ್ಕೋಡು ಶ್ರೀ ಶಂಕರ ಹೆಗಡೆಯವರ ಆಸೆ.

ಶ್ರೀಯುತರ ಪತ್ನಿ ಶ್ರೀಮತಿ ತೃಪ್ತಿ. ಇವರು ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಸ್ಥೆ. ಮನೆವಾರ್ತೆಗಳ ಹೊಣೆಯನ್ನೂ ಹೊತ್ತುಕೊಂಡು ಪತಿಯ ಕಲಾಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾರೆ. ನೀಲ್ಕೋಡು ಶ್ರೀ ಶಂಕರ ಹೆಗಡೆ, ತೃಪ್ತಿ ದಂಪತಿಗಳ ಪುತ್ರಿ ಕುಮಾರಿ ದ್ಯುತಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ನೀಲ್ಕೋಡು ಶಂಕರ ಹೆಗಡೆ ಅವರ ಕಲಾವ್ಯವಸಾಯವು ನಿರಂತರವಾಗಿ ನಡೆಯಲಿ. ಅವರ ಯೋಜನೆಗಳೆಲ್ಲಾ ಶೀಘ್ರವಾಗಿ ನೆರವೇರಲಿ. ಶ್ರೀದೇವರ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ನೀಲ್ಕೋಡು ಶ್ರೀ ಶಂಕರ ಹೆಗಡೆ, ‘ಅಭಿನೇತ್ರಿ’, ಗಣೇಶನಗರ,ಅಂಚೆ ಹಲ್ಕಾರ, ಕುಮಟಾ, ಉ.ಕ. ಮೊಬೈಲ್:9449615716

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments