Saturday, May 18, 2024
Homeಯಕ್ಷಗಾನವೇಷಧಾರಿ, ತಬಲಾವಾದಕ ಮದ್ದಳೆಗಾರನಾದ ಬಗೆ - ಶ್ರೀ ಲವಕುಮಾರ್ ಐಲ 

ವೇಷಧಾರಿ, ತಬಲಾವಾದಕ ಮದ್ದಳೆಗಾರನಾದ ಬಗೆ – ಶ್ರೀ ಲವಕುಮಾರ್ ಐಲ 

ಶ್ರೀ ಲವಕುಮಾರ್ ಐಲ ಅವರು ತೆಂಕುತಿಟ್ಟಿನ, ಶ್ರೀ ಹನುಮಗಿರಿ ಮೇಳದ ಮದ್ದಳೆಗಾರರು. ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡ ಇವರು ತಬಲಾವಾದಕರೂ ಆಗಿದ್ದರು. ಪ್ರಸ್ತುತ ಕಲಾಕಾರ್ಯಕ್ರಮಗಳಲ್ಲಿ ತಬಲಾ ವಾದನಕಾರನಾಗಿಯೂ, ಯಕ್ಷಗಾನ ಕಲೆಯಲ್ಲಿ ಮದ್ದಳೆಗಾರನಾಗಿಯೂ ವ್ಯವಸಾಯ ಮಾಡುತ್ತಿದ್ದಾರೆ. ಇವರು ತಬಲಾ ವಾದನವನ್ನು ನೋಡಿ ಕೇಳಿಯೇ ಕಲಿತವರು. ಬಳಿಕ ಅಭ್ಯಾಸ ಮಾಡುತ್ತಾ ತಬಲಾ ಬಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು.

ತಬಲಾ ವಾದನಗಾರಿಕೆಯೇ ಯಕ್ಷಗಾನದಲ್ಲಿ ಮದ್ದಳೆಗಾರನಾಗಲು ಇವರಿಗೆ ಇದ್ದ ಮೂಲ ಬಂಡವಾಳ. ತಬಲ ಎಂಬ ವಾದ್ಯೋಪಕರಣವನ್ನು ನುಡಿಸುತ್ತಾ ಮದ್ದಳೆ ವಾದನಗಾರಿಕೆಯನ್ನು ಕಲಿತಿದ್ದರು. ಬಳಿಕ ಹಿರಿಯ ಅನುಭವೀ ಭಾಗವತರು ಮತ್ತು ಮದ್ದಳೆಗಾರರ ಜತೆ ವ್ಯವಸಾಯ ಮಾಡುತ್ತಾ ಅವರ ನಿರ್ದೇಶನದಿಂದ ಮದ್ದಳೆಗಾರಿಕೆಯಲ್ಲಿ ಅನುಭವವನ್ನು ಗಳಿಸಿಕೊಂಡರು. 2009ರಿಂದ ತೊಡಗಿ ಕಳೆದ ಹದಿನಾಲ್ಕು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಲಾ ವಿದ್ಯೆಗಳನ್ನು ಕೇಳಿ ನೋಡಿಯೇ ಕಲಿತ ಸಾಧಕರಿವರು. 

ಶ್ರೀ ಲವಕುಮಾರ್ ಇವರ ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಗ್ರಾಮದ ಐಲ ಮಾಳಿಗೆಮನೆ. 1990 ಮಾರ್ಚ್ 2ರಂದು ಮಾಳಿಗೆಮನೆ ಶ್ರೀ ಚಂದ್ರಶೇಖರ ಆಚಾರ್ಯ ಮತ್ತು ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರನಾಗಿ ಜನನ. ಇವರ ಮೂವರು ಮಕ್ಕಳಲ್ಲಿ ಲವಕುಮಾರ್ ಕೊನೆಯವರು. ಲವಕುಮಾರ್ ಅವರ ತಂದೆ ಶ್ರೀ ಚಂದ್ರಶೇಖರ ಆಚಾರ್ಯರು ಹರಿಕಥೆ, ಭಜನೆ ಕಾರ್ಯಕ್ರಮಗಳಲ್ಲಿ ತಬಲಾ ವಾದಕರಾಗಿದ್ದವರು. ಉಪ್ಪಳ ಶ್ರೀ ಕೃಷ್ಣ ಮಾಸ್ತರರು ಮಾಡುತ್ತಿದ್ದ ಹರಿಕಥೆಗೆ ಇವರು ತಬಲ ನುಡಿಸುತ್ತಿದ್ದರು.

ಲವಕುಮಾರ್ ಅವರ ಅಣ್ಣ ಶ್ರೀ ಮನೋಹರ ಆಚಾರ್ಯರು ತಬಲಾ ವಾದಕರು. ಇವರು ಕಾಸರಗೋಡು ಶ್ರೀಧರ ರೈಗಳ ಶಿಷ್ಯ. ಮನೋಹರ ಆಚಾರ್ಯರು ಯಕ್ಷಗಾನ ವೇಷಧಾರಿಯೂ ಆಗಿದ್ದರು. ಇವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪಾನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲವಕುಮಾರರ ಅಕ್ಕ ಶ್ರೀಮತಿ ಮಲ್ಲಿಕಾ. ಇವರ ಪತಿ ಶ್ರೀ ಕಿಶೋರ್ ಪೆರ್ಲ. ಇವರು ಸುಗಮ ಸಂಗೀತದಲ್ಲಿ ಖ್ಯಾತ ಗಾಯಕರು. ಲವಕುಮಾರ್ ಅವರು ಓದಿದ್ದು ಪಿಯುಸಿ ವರೆಗೆ. ಏಳನೇ ತರಗತಿ ವರೆಗೆ ಐಲ ಶ್ರೀ ಶಾರದಾ ಬೋವಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಮಂಗಲ್ಪಾಡಿ ಸರಕಾರೀ ಪ್ರಾಢಶಾಲೆಯಲ್ಲಿ. ಪಿಯುಸಿ ಓದಿದ್ದು ಬೇಕೂರು ಶಾಲೆಯಲ್ಲಿ. (ಪ್ಲಸ್ ಟು)

ಇವರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ ಇತ್ತು. ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಪ್ರದರ್ಶನ ಸ್ಪರ್ಧೆಯೂ ಆಗ ನಡೆಯುತ್ತಿತ್ತು. ಮಂಗಲ್ಪಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಆಗ ತರಬೇತಿ ನೀಡಿದವರು ಶ್ರೀರಾಮ ಸಾಲಿಯಾನ್. ಇವರು ಭಾಗವತರೂ ಆಗಿದ್ದರು. ಶ್ರೀಯುತರು ಯಕ್ಷಕಲಾ ಭಾರತಿ ಮಂಗಲ್ಪಾಡಿ ಈ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು. ಶ್ರೀ ಲವಕುಮಾರರು ಇವರಿಂದ ನಾಟ್ಯ ಕಲಿತು ಕಲೋತ್ಸವದ ಸ್ಪರ್ಧೆ – ಏಕಾದಶೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮುರಾಸುರನಾಗಿ ರಂಗಪ್ರವೇಶ ಮಾಡಿದ್ದರು.

ಇವರು ಐದು, ಆರನೇ ಕ್ಲಾಸಿನಲ್ಲಿರುವಾಗಲೇ ತಬಲಾ ನುಡಿಸುತ್ತಿದ್ದರು. ಇವರು ಕಲಿತು ನುಡಿಸಿದ್ದಲ್ಲ. ತಬಲಾ ನುಡಿಸುತ್ತಾ ಆ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಇವರ ಅಣ್ಣ ಮನೋಹರ ಆಚಾರ್ಯರು ತಬಲಾ ನುಡಿಸುವುದನ್ನು ನೋಡಿ, ಕೇಳಿಯೇ ಕಲಿತಿದ್ದರು. ಮೊದಮೊದಲು ಭಜನಾ ಕಾರ್ಯಕ್ರಮಗಳಲ್ಲಿ ತಬಲಾ ನುಡಿಸಲು ತೊಡಗಿದ್ದರು. ಅಲ್ಲಲ್ಲಿ ಸಂಘ ಸಂಸ್ಥೆಗಳು ಆಯೋಜಿಸಿದ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬೆಳೆದರು. ಜತೆಗೆ ಯಕ್ಷಗಾನ ವೇಷಧಾರಿಯಾಗಿಯೂ ಕಾಣಿಸಿಕೊಂಡಿದ್ದರು. ದೇವೇಂದ್ರ ಬಲ. ರಕ್ಕಸಬಲ. ಮಹಿಷಾಸುರ, ಅನುಸಾಲ್ವ, ವೃಷಕೇತ ಮೊದಲಾದ ವೇಷಗಳನ್ನು ಮಾಡಿದ್ದರು. ಒಂದೆರಡು ಬಾರಿ ಸ್ತ್ರೀವೇಷ ಮತ್ತು ಹಾಸ್ಯ ಪಾತ್ರಗಳನ್ನೂ ಮಾಡಿದ್ದರು.

ಎಸ್ಸೆಸ್ಸೆಲ್ಸಿ ಓದಿನ ಬಳಿಕ ತಬಲಾ ವಾದಕರಾಗಿ ಆರ್ಕೆಸ್ಟ್ರಾ ತಂಡದಲ್ಲೂ ಕಾಣಿಸಿಕೊಂಡರು. ಹೊಸಂಗಡಿಯ ಹಂಸಧ್ವನಿ ಆರ್ಕೆಷ್ಟ್ರಾ ತಂಡದಲ್ಲಿ ಶ್ರೀ ಲವಕುಮಾರರು ಸಕ್ರಿಯರಾಗಿದ್ದರು. ತಬಲಾ ವಾದನಗಾರನಾಗಿ ಇವರು ಹೊಳೆದು ಕಾಣಿಸಿಕೊಳ್ಳಲು ಶ್ರೀ ಅನಂತ ಪದ್ಮನಾಭಯ್ಯ ಐಲ ಇವರು ಕಾರಣರು. ಇವರು ಖ್ಯಾತ ಸ್ಯಾಕ್ಸೋಫೋನ್ ವಾದಕರು. ಅವರು ನಡೆಸುತ್ತಿದ್ದ ಕಚೇರಿಗಳಲ್ಲಿ ಶ್ರೀ ಲವಕುಮಾರರಿಗೆ ತಬಲಾ ನುಡಿಸಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಇವರ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕ, ಖ್ಯಾತ ಯಕ್ಷಗಾನ ಕಲಾವಿದ, ಪ್ರಸಾಧನ ತಜ್ಞ ಶ್ರೀ ದೇವಕಾನ ಕೃಷ್ಣ ಭಟ್ಟರು ಯಕ್ಷಗಾನದಲ್ಲಿ ಮದ್ದಳೆಗಾರನಾಗಲು ಸಲಹೆ ನೀಡಿದ್ದರು. ತಬಲಾ ವಾದನದ ಜತೆ ಮದ್ದಳೆ ನುಡಿಸುವ ಕಲೆಯೂ ಸ್ವಲ್ಪ ಮಟ್ಟಿಗೆ ಕರಗತವಾಗಿತ್ತು. ಶ್ರೀ ದೇವಕಾನ ಕೃಷ್ಣ ಭಟ್ಟರ ಸೂಚನೆಯಂತೆ ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಲು ತೊಡಗಿದರು. 

ಲವಕುಮಾರರು ಮದ್ದಳೆಗಾರರಾಗಿ ಮೊದಲು ತಿರುಗಾಟ ನಡೆಸಿದ್ದು ಕಟೀಲು ಮೇಳದಲ್ಲಿ. 2009ನೇ ಇಸವಿಯಲ್ಲಿ. ಕಟೀಲು ಎರಡನೇ ಮೇಳದಲ್ಲಿ. ಕಟೀಲು ಎರಡನೇ ಮೇಳದ ಭಾಗವತರಾಗಿದ್ದ ಪಟ್ಲ ಸತೀಶ ಶೆಟ್ಟರಿಗೆ ಇವರನ್ನು ಪರಿಚಯಿಸಿದ್ದು ಯಕ್ಷಗಾನ ಸಂಘಟಕ ಶ್ರೀ ಸತೀಶ ಅಡಪ ಸಂಕಬೈಲು ಅವರು. ಅವರಿಬ್ಬರ ಕರೆಯಂತೆ ಕಟೀಲು ಮೇಳ ಸೇರಿದ್ದರು. ಮದ್ದಳೆ ನುಡಿಸುವಲ್ಲಿ ಪ್ರೋತ್ಸಾಹದ ನುಡಿಗಳನ್ನು ಆಡಿ ಪಟ್ಲ ಸತೀಶ ಶೆಟ್ಟರು ಲವಕುಮಾರರಿಗೆ ಧೈರ್ಯ ತುಂಬಿದ್ದರು. ಅವರಿಂದ ನುಡಿಸುವಿಕೆಯ ಬಗೆಗೆ ನಿರ್ದೇಶನವೂ ದೊರೆತಿತ್ತು. ಹಿರಿಯ ಮದ್ದಳೆಗಾರ ಪೆರುವಾಯಿ ಶ್ರೀ ನಾರಾಯಣ ಭಟ್ಟರ ಸಹಕಾರ ನಿರ್ದೇಶನವೂ ದೊರಕಿತ್ತು. ಮೇಳದಲ್ಲಿ ಮದ್ದಳೆವಾದನವನ್ನು ಸರಿಯಾಗಿ ಕಲಿಯಲು ಅವಕಾಶವಾಗಿತ್ತು.

ಬಳಿಕ ಒಂದು ವರ್ಷ ಮೇಳ ಬಿಟ್ಟು ಕೇಬಲ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಅನಿವಾರ್ಯ ಕಾರಣಗಳಿಂದ ಮತ್ತೆ ಕಟೀಲು ಮೇಳ ಸೇರುವ ಹಾಗಾಗಿತ್ತು. ಕಟೀಲು ಒಂದನೇ ಮೇಳದಲ್ಲಿ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರ ಜತೆ ನಾಲ್ಕು ತಿಂಗಳು ವ್ಯವಸಾಯ ಮಾಡಿದ್ದರು. ಮುಂದಿನ ವರ್ಷ ಕಟೀಲು ಐದನೇ ಮೇಳಕ್ಕೆ. ಪಟ್ಲ ಸತೀಶ ಶೆಟ್ಟರ ಜತೆ ವ್ಯವಸಾಯ. ಸದ್ರಿ ಮೇಳದಲ್ಲಿ ಮದ್ದಳೆಗಾರರಾದ ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ಪ್ರಶಾಂತ್ ಶೆಟ್ಟಿ ವಗೆನಾಡು, ಗುರುಪ್ರಸಾದ್ ಬೊಳಿಂಜಡ್ಕ ಇವರ ಒಡನಾಟವು ಸಿಕ್ಕಿತ್ತು.

ಒಂದು ವರ್ಷ ಐದನೇ ಮೇಳದಲ್ಲಿ ವ್ಯವಸಾಯ. ಬಳಿಕ ಮೇಳ ಬಿಟ್ಟು ಎರಡು ವರ್ಷ ಪುರೋಹಿತರ ಜತೆ ಪೌರೋಹಿತ್ಯ ಸಂಬಂಧೀ ಕೆಲಸ ಮಾಡಿದ್ದರು. ಜತೆಗೆ ಹವ್ಯಾಸೀ ಮದ್ದಳೆಗಾರನಾಗಿ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಎಡನೀರು ಮೇಳಕ್ಕೆ ಸೇರುವ ಅವಕಾಶವಾಗಿತ್ತು. ಈಗಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಎಡನೀರು ಮೇಳ ಸೇರುವಂತೆ ಸೂಚನೆ ನೀಡಿದ್ದರು. ಮೂರು ವರ್ಷಗಳ ಕಾಲ ಎಡನೀರು ಮೇಳದಲ್ಲಿ ವ್ಯವಸಾಯ.

ಈ ಸಂದರ್ಭದಲ್ಲಿ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಮತ್ತು ಈಗಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ಸಹಕಾರ, ಪ್ರೋತ್ಸಾಹವು ದೊರೆತಿತ್ತು. ಎಲ್ಲಾ ವಿಚಾರಗಳಲ್ಲೂ ಅವರುಗಳು ಲವಕುಮಾರರನ್ನು ಆಧರಿಸಿ ಸಹಕರಿಸಿದ್ದರು. ಅನೇಕ ಕಛೇರಿಗಳಲ್ಲಿ ಹಿರಿಯ ಹಾಡುಗಾರರೊಂದಿಗೆ ತಬಲ ಬಾರಿಸಲು ಅವಕಾಶ ನೀಡಿದ್ದರು. ಹಿರಿಯ ಭಾಗವತರುಗಳಾದ ಶ್ರೀ ದಿನೇಶ ಅಮ್ಮಣ್ಣಾಯ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಗಣಪತಿ ಭಟ್, ಅವರ ಹಾಡುಗಾರಿಕೆಗೆ ಮದ್ದಳೆ ಬಾರಿಸಲು ಅವಕಾಶ ಮಾಡಿ ಕೊಟ್ಟಿದ್ದರು.

ಅವರಿಂದಾಗಿ ಬಲಿಪ ನಾರಾಯಣ ಭಾಗವತ ಕುರಿಯ ಶ್ರೀ ಗಣಪತಿ ಶಾಸ್ತ್ರಿ, ಶ್ರೀ ನಾರಾಯಣ ಶಬರಾಯ, ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ ಅವರ ಹಾಡುಗಳಿಗೂ ಮದ್ದಳೆ ನುಡಿಸಲು ಅವಕಾಶವಾಗಿತ್ತು. ಮೇಳದಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರು ಪ್ರೋತ್ಸಾಹದ ನುಡಿಗಳನ್ನು ಆಡಿ ಭಯವನ್ನು ದೂರ ಮಾಡಿದ್ದರು. ಹಿರಿಯ ಮದ್ದಳೆಗಾರ ದೇಲಂತಮಜಲು ಶ್ರೀ ಸುಬ್ರಹ್ಮಣ್ಯ ಭಟ್ಟರ ಸಹಕಾರ, ಪ್ರೋತ್ಸಾಹವೂ ಸಿಕ್ಕಿತ್ತು. ಶ್ರೀ ದಿನೇಶ ಅಮ್ಮಣ್ಣಾಯ ಮತ್ತು ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರೊಂದಿಗಿನ ವ್ಯವಸಾಯವು ಮದ್ದಳೆವಾದನದಲ್ಲಿ ಲಯವನ್ನು ಕಂಡುಕೊಳ್ಳಲು ಕಾರಣವಾಯಿತೆಂದು ಲವಕುಮಾರರ ಅನುಭವದ ಮಾತು. ಇವರ ಒಡನಾಟವು ಮದ್ದಳೆಗಾರನಾಗಿ ಕಾಣಿಸಿಕೊಳ್ಳಲು ಕಾರಣವೂ ಆಗಿತ್ತು.

ಎಡನೀರು ಮೇಳದ ಬಳಿಕ ಮೂರು ವರ್ಷ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ಇಲ್ಲಿ ಹೆಬ್ರಿ ಗಣೇಶ್ ಕುಮಾರ್, ಗಿರೀಶ್ ರೈ, ನೆಕ್ಕರೆಮೂಲೆ ಗಣೇಶ್ ಭಟ್, ಇವರ ಒಡನಾಟವು ದೊರೆತಿತ್ತು. ಕಳೆದ ವರ್ಷದಿಂದ ಲವಕುಮಾರ್ ಐಲ ಅವರು ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮತ್ತು ಸಂಪಾಜೆ ಯಕ್ಷೋತ್ಸವದ ರೂವಾರಿ ಕಲಾಪೋಷಕರಾದ ಶ್ರೀ ಟಿ. ಶ್ಯಾಮ ಭಟ್ಟರ ಹೇಳಿಕೆಯಂತೆ ಹನುಮಗಿರಿ ಮೇಳದಲ್ಲಿ ವ್ಯವಸಾಯ ನಡೆಸುತ್ತಿದ್ದಾರೆ. ಕಲೆ ಮತ್ತು ಕಲಾವಿದರನ್ನು ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ಟರ ಪ್ರೋತ್ಸಾಹವು ವ್ಯವಸಾಯ ಮಾಡುವಲ್ಲಿ ಲವಕುಮಾರರಿಗೆ ದೊರೆತಿದೆ. 

ಯಕ್ಷಗಾನ ಮದ್ದಳೆವಾದನದ ಜತೆ ಲವಕುಮಾರ್ ಐಲ  ಅವರು ಉತ್ತಮ ತಬಲಾ, ಕೀಬೋರ್ಡ್ ಮತ್ತು ಹಾರ್ಮೋನಿಯಂ ವಾದಕರೂ ಹೌದು. ಇವರು ಬಹುಮುಖ ಪ್ರತಿಭೆ ಉಳ್ಳವರು. ತಮ್ಮ ಮನೆಯಲ್ಲಿಯೇ ‘ನಾದರಂಜಿನಿ’ ಎಂಬ ಆಡಿಯೋ ಸ್ಟುಡಿಯೋ ಸ್ಥಾಪಿಸಿ ಸಂಗೀತ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಸ್ವತಃ ಸಂಗೀತ ನಿರ್ದೇಶನ, ರಾಗ ಸಂಯೋಜನೆಗಳನ್ನು ಮಾಡುವ ಇವರ ಸ್ಟುಡಿಯೋದಲ್ಲಿ ಈಗಾಗಲೇ ಹಲವಾರು ಧ್ವನಿಮುದ್ರಣಗಳು ಪೂರ್ಣಗೊಂಡು ಯಶಸ್ವಿಯಾಗಿವೆ. 

ಮೊದಲು ವೇಷಧಾರಿಯಾಗಿದ್ದ, ಬಳಿಕ ತಬಲಾ ವಾದಕರಾಗಿದ್ದ ಶ್ರೀ ಲವಕುಮಾರ್ ಐಲ  ಅವರು ಪ್ರಸ್ತುತ ಯಕ್ಷಗಾನದಲ್ಲಿ ಉತ್ತಮ ಮದ್ದಳೆಗಾರರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ಚಿತ್ರಾಕ್ಷಿ (2019ರಲ್ಲಿ ವಿವಾಹ) ಶ್ರೀ ಲವಕುಮಾರ್ ಐಲಾ ಅವರಿಗೆ ಶ್ರೀ ದೇವರ ಅನುಗ್ರಹವಿರಲಿ. ಶ್ರೀಮದೆಡನೀರು ಕ್ಷೇತ್ರದ ಒಡೆಯನಾದ ಶ್ರೀ ಗೋಪಾಲಕೃಷ್ಣನು ಅವರ ಮನೋಕಾಮನೆಗಳನ್ನು ಈಡೇರಿಸಲಿ. ಯಕ್ಷಗಾನ ಕಲಾಸೇವೆಯನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು  ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಲವಕುಮಾರ್ ಐಲ, ಮೊಬೈಲ್: 8139093220

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments