Saturday, May 18, 2024
Homeಯಕ್ಷಗಾನಬಣ್ಣದ ವೇಷಧಾರಿ ಚಂದ್ರಗಿರಿ ಅಂಬು ಅವರು ವಾಸವಿದ್ದ ಮನೆ ಈಗ ಹೇಗಿದೆ? - ರಂಗಸ್ಥಳದಲ್ಲಿ ಅಂಬು...

ಬಣ್ಣದ ವೇಷಧಾರಿ ಚಂದ್ರಗಿರಿ ಅಂಬು ಅವರು ವಾಸವಿದ್ದ ಮನೆ ಈಗ ಹೇಗಿದೆ? – ರಂಗಸ್ಥಳದಲ್ಲಿ ಅಂಬು ಅವರ ಗತವೈಭವವನ್ನು ನೆನಪಿಸುವ ಸನ್ಮಾನಪತ್ರಗಳನ್ನು ಗೋಡೆಗಳಲ್ಲಿ ತೂಗುಹಾಕಿದ ಪುಟ್ಟ ಮನೆ ಕಲಾಸ್ಮಾರಕವಾಗಲು ಯೋಗ್ಯ 

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಬಣ್ಣದ ವೇಷಧಾರಿ ಚಂದ್ರಗಿರಿ ಅಂಬು ಅವರು ವಾಸವಿದ್ದ ನಿವಾಸ ಈಗ ಹೇಗಿದೆ? – ರಂಗಸ್ಥಳದಲ್ಲಿ ಅಂಬು ಅವರ ಗತವೈಭವವನ್ನು ನೆನಪಿಸುವ ಸನ್ಮಾನಪತ್ರಗಳನ್ನು ಗೋಡೆಗಳಲ್ಲಿ ತೂಗುಹಾಕಿದ ಪುಟ್ಟ ಮನೆ ಕಲಾಸ್ಮಾರಕವಾಗಲು ಯೋಗ್ಯ ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. 

ಒಂದು ಕಾಲದಲ್ಲಿ ತೆಂಕುತಿಟ್ಟಿನ ಬಣ್ಣದ ವೇಷದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಚಂದ್ರಗಿರಿ ಅಂಬು ಕೊನೆಯ ದಿನಗಳು ಅಷ್ಟೇನೂ ಸುಖಮಯವಾಗಿರಲಿಲ್ಲ. ಇರಲು ಪುಟ್ಟದಾದ ಒಂದು ಹಂಚಿನ ಮಾಡಿನ ಮನೆ. ಅದೂ ಆಗಾಗ ದುರಸ್ತಿಯನ್ನು ಕಾಣುತ್ತಿತ್ತು.

ಅಂಬು ಅವರ ನಿವೃತ್ತ ಜೀವನದ ಕೊನೆಯ ವರ್ಷಗಳಲ್ಲಿಯೂ ಶ್ರೀ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಮನೆಯನ್ನು ದುರಸ್ತಿಗೊಳಿಸಲಾಗಿತ್ತು ಎಂದು ಹತ್ತಿರದ ಮನೆಯವರು ಈಗಲೂ ಹೇಳುತ್ತಿದ್ದುದನ್ನು ನಾನು ಇಂದು ಕೇಳಿಸಿಕೊಂಡೆ. ನಿವೃತ್ತಿಯಾದ ನಂತರವೂ ಶ್ರೀ ಧರ್ಮಸ್ಥಳ ಕ್ಷೇತ್ರ ಮತ್ತು ಖಾವಂದರು ಸಹಾಯಹಸ್ತವನ್ನು ನೀಡುತ್ತಿದ್ದರು. 

ಅದಿರಲಿ, ಅತಿ ಸಣ್ಣವನಿದ್ದಾಗ ನಾನು ಅವರ ಬಣ್ಣದ ವೇಷವನ್ನು ನೋಡಿದ ನೆನಪು ನನಗಿತ್ತು. ಹಾಗೆಂದೂ ಅವರ ಎಲ್ಲ ವೇಷಗಳನ್ನು ನೋಡಿದವನು ನಾನಲ್ಲ. ಮೂರೋ ನಾಲ್ಕೋ ವೇಷಗಳನ್ನು ಮಾತ್ರ ನೋಡಿದ್ದೆನಷ್ಟೆ. ಅಷ್ಟು ಪಾತ್ರಗಳಲ್ಲೇ ಅವರು ನನ್ನ ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರಿದ್ದರು.

ಸಣ್ಣ ವಯಸ್ಸಿನವರಾಗಿದ್ದುದರಿಂದ ಆ ಸಮಯದಲ್ಲಿ ಆಗಾಗ ಯಕ್ಷಗಾನ ಪ್ರದರ್ಶನಗಳಿಗೆ ಹೋಗುವ ಅನುಕೂಲವೂ ಇಲ್ಲ, ಅವಕಾಶವೂ ಇರಲಿಲ್ಲ. ಆದರೆ ನನಗೆ ಮತ್ತೆ ಚಂದ್ರಗಿರಿ ಅಂಬು ಬಗ್ಗೆ ಆಗಿಲ್ಲದ ಕುತೂಹಲ ಈಗ ಮೂಡಿತು. ಯಾಕೆಂದರೆ ನಾನು ಆಗಾಗ ಭೇಟಿ ನೀಡುತ್ತಿದ್ದ ಕಾಂಞಗಾಂಡ್ ಪರಿಸರದಲ್ಲಿಯೇ ಅವರ ಮನೆಯಿದೆ ಎಂದು ಗೊತ್ತಿತ್ತು.

ರಂಗದಲ್ಲಿ ಅಬ್ಬರದ ರಾಕ್ಷಸ ಪಾತ್ರಧಾರಿಯಾಗಿದ್ದರೂ ಮನೆಯಲ್ಲಿ ಸಾಧು ಸ್ವಭಾವದ ಸಾತ್ವಿಕರಾಗಿದ್ದರು ಎಂಬುದನ್ನು ಕೇಳಿ ಬಲ್ಲೆವು. ಅಂತಹಾ ಸಾತ್ವಿಕರ ಮನೆ ಹೇಗಿದೆ ಎಂಬ ಕುತೂಹಲದಿಂದ ದಾರಿ ಹುಡುಕಿಕೊಂಡು ಹೋದೆ. ಮನೆಯೇನೂ ಸಿಕ್ಕಿತು.  ಆದರೆ ಈಗ ಆ ಮನೆಯಲ್ಲಿ ಯಾರೂ ವಾಸವಿರಲಿಲ್ಲ.

ಚಂದ್ರಗಿರಿ ಅಂಬು ಅವರ ಮನೆಯ ಮುಂದೆ ಲೇಖಕರು 

ಆದರೂ ಹತ್ತಿರದ ಮನೆಯ ಸುರೇಶ್ ಎಂಬವರು ಸಿಕ್ಕಿದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ.  ಅವರಲ್ಲಿ ಮಲಯಾಳದಲ್ಲಿ ಮಾತನಾಡಿ ಕೇಳಿ ಅನುಮತಿಯನ್ನು ಪಡೆದು ಮನೆಯ ಹತ್ತಿರ ಹೋದೆ. ಮನೆಗೆ ಬೀಗ ಹಾಕಲಾಗಿತ್ತು.

ಆದರೂ ಹೊರಜಗಲಿಯಲ್ಲಿ ನೋಡಿದಾಗ ಸಾಲು ಸಾಲು ಸನ್ಮಾನಪತ್ರಗಳು ಕಾಣಿಸಿತು. ಅಂಬು ಅವರ  ಒಂದೆರಡು ವೇಷದ ಫೋಟೋಗಳೂ ಕಂಡಿತು. ಆ ಫೋಟೋಗಳನ್ನು ನೋಡಿದಾಗ ಚಂದ್ರಗಿರಿ ಅಂಬು ಈಗಲೂ ನಮ್ಮ ಜೊತೆಯಲ್ಲಿ ಜೀವಂತವಾಗಿ ಇರುವಂತೆ ಭಾಸವಾಯಿತು. ಕೆಲವು ಕ್ಷಣಗಳ ಕಾಲ ಅಲ್ಲಿದ್ದೆ.

ಯಾಕೋ ಮನಸ್ಸು ಭಾರವಾಯಿತು. ಕೆಲವು ಫೋಟೋಗಳನ್ನು ಹೊಡೆದುಕೊಂಡು ಭಾರವಾದ ಮನಸ್ಸಿನಿಂದ ಹಿಂದಿರುಗಿದೆ. ನಿಜವಾಗಿಯೂ ಚಂದ್ರಗಿರಿ ಅಂಬು ಅವರು ಸಾಯಲಿಲ್ಲ. ಅವರು ನಮ್ಮೆಲ್ಲರ ಮನಸ್ಸುಗಳಲ್ಲಿ ಜೀವಂತ ಇದ್ದಾರೆ.

ಅವರನ್ನು ಇನ್ನೂ ಜೀವಂತವಾಗಿಡಲು ಅವರ ಮನೆಯನ್ನು ಕಲಾಸ್ಮಾರಕವನ್ನಾಗಿ ನಿರ್ಮಿಸಬೇಕು. ಹೇಳಿದಷ್ಟು ಸುಲಭ ಅಲ್ಲ. ನಮ್ಮಂತಹಾ ಸಾಮಾನ್ಯ ಮನುಷ್ಯರಿಂದ ಸಾಧ್ಯವಿಲ್ಲ. ದೊಡ್ಡವರೇ ಮನಸ್ಸು ಮಾಡಬೇಕು. ಸರಕಾರ, ಸ್ಥಳೀಯ ಆಡಳಿತ, ಕುಟುಂಬದವರೇ ಮೊದಲಾದವರು ಕೈಜೋಡಿಸಬೇಕು. 

ಲೇಖಕ: ಮನಮೋಹನ್ ವಿ.ಎಸ್ – 9164828688

ಲೇಖಕ: ಮನಮೋಹನ್ ವಿ.ಎಸ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments