Saturday, May 18, 2024
Homeಪುಸ್ತಕ ಮಳಿಗೆಮರೆಯಬಾರದ ಮಹಾಚೇತನಗಳು

ಮರೆಯಬಾರದ ಮಹಾಚೇತನಗಳು

ಸುಂದರವಾದ,   ಸಂಶೋಧಿತ   ಲೇಖನ   ಸರಣಿಗಳ   ಸಂಕಲಿತ   ಕೃತಿಯನ್ನು ರವಿ  ಮಡೋಡಿಯವರು  ಗ್ರಂಥರೂಪದಲ್ಲೂ  ಪ್ರಕಟಗೊಳಿಸುತ್ತಿರುವುದು  ತುಂಬಾ ಸಂತೋಷದ  ವಿಷಯ.  ಈ  ಲೇಖನ  ಮಾಲಿಕೆಯು  ವಾಟ್ಸಾಪ್,  ಫೇಸ್ಬುಕ್‍ನಲ್ಲಿ ಸರಣಿಯಾಗಿ ಮೂಡಿಬಂದಾಗ ಬಹಳ ಖುಶಿಪಟ್ಟಿದ್ದೇನೆ. ನಾನು, ರವಿ ಇಬ್ಬರೂ ಒಂದೇ   ಪ್ರದೇಶದವರು,   ಉದ್ಯೋಗ   ನಿಮಿತ್ತ   ದೂರದ   ನೆಲೆಯಲ್ಲಿ   ಬದುಕು ಕಂಡವರು.

ವೃತ್ತಿ ಬೇರೆಬೇರೆ. ಆದರೂ ಪ್ರವೃತ್ತಿ ಒಂದೇ. ಅದು ಯಕ್ಷಗಾನ. ನನಗೆ ಬಾಲ್ಯದಲ್ಲೇ ಹತ್ತಿದ ಹುಚ್ಚು ಇನ್ನೂ ಬಿಟ್ಟಿಲ್ಲ. ರವಿಗೆ ಬಿಡುವಷ್ಟು ಸಮಯವಾಗಿಲ್ಲ. ಸಂಪೂರ್ಣ ಯಕ್ಷಗಾನಾಸಕ್ತಿಯಲ್ಲಿ ಅಂದರೆ ಯಕ್ಷಗಾನ  ಸಂಬಂಧಿಯಾದ ಸರ್ವ  ವಿಷಯಗಳಲ್ಲಿ  ತನ್ನನ್ನು  ತೊಡಗಿಸಿಕೊಂಡು  ಪ್ರಯತ್ನಶೀಲರಾಗಿ  ಅವರು ಮುಂದುವರೆದಿದ್ದಾರೆ. ಇದು ನನ್ನಂತವನಿಗೆ ಆಪ್ತವಾಗುವ ವಿಷಯ. ಯಕ್ಷಗಾನ   ನೃತ್ಯವನ್ನು   ಶಾಸ್ತ್ರೀಯವಾಗಿ ಕಲಿತು, ಅದಕ್ಕೆ ಸಂಬಂಧಿಸಿದ ಸಕಲವನ್ನೂ ಅಧ್ಯಯನಮಾಡಿ, ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರಿನಂತಹ ಅಯಕ್ಷಗಾನೀಯ   ನೆಲದಲ್ಲಿ   ನೆಲೆಯನ್ನು    ಕಲ್ಪಿಸಿದ್ದಾರೆ.  

ಮುನ್ನೂರಕ್ಕೂ   ಹೆಚ್ಚು ಪ್ರಯೋಗಗಳನ್ನು  ನಾಡಿನಾದ್ಯಂತ    ನಡೆಸಿ    ಹವ್ಯಾಸಿಯಾದರೂ    ವೃತ್ತಿನಿರತರ ಪ್ರಾವೀಣ್ಯವನ್ನು  ಸಾಧಿಸಿದ್ದಾರೆ.  ಯಕ್ಷವಾಹಿನಿ  ಮತ್ತು  ಯಕ್ಷ  ಸಿಂಚನ  ಎಂಬೆರಡು ಸಮರ್ಥ ಸಂಸ್ಥೆಯ ಕರ್ಣಧಾರತ್ವವಹಿಸಿ ಎರಡು ಭುಜದಲ್ಲಿ ಎರಡು ಸಂಸ್ಥೆಗಳನ್ನು ಹೊತ್ತ ಆಂಜನೇಯ ಶಕ್ತಿಯ ಅನುಭಾವಿ ರವಿ. ಜೊತೆಗೆ ಪೋಟೋಗ್ರಫಿಯಂತಹ ಪ್ರವೃತ್ತಿಯಲ್ಲೂ ಪರಿಣತಿಯನ್ನು ಸಾಧಿಸಿದವರು.

ವೃತ್ತಿಯಿಂದ   ತಂತ್ರಜ್ಞಾನಿಯಾದ   ಇವರು   ಯಕ್ಷಲೋಕದ   ಆಂತರ್ಯವನ್ನು ಪ್ರವೇಶಿಸಿ ಅಲ್ಲಿಯ ಸೊಗವನ್ನು ಆಸಕ್ತರೆಲ್ಲರಿಗೆ ಉಣಬಡಿಸುವ ಪ್ರಯತ್ನಶೀಲ ಸಾಹಸಿ. ಹಿಂದೆಯೇ  ಇವರು  `ಯಕ್ಷಲೋಕ’  ಎಂಬ  ಮೊಬೈಲ್  ಆಪ್  ಸಿದ್ಧಪಡಿಸಿ  ಎಲ್ಲೆಲ್ಲಿ ಯಕ್ಷಗಾನ ನಡೆಯುತ್ತದೆ ಎಂಬುದರ ವಿವರಗಳನ್ನೆಲ್ಲ ಅಂಗೈಗೆ ತಂದುಕೊಟ್ಟಿದ್ದರು. ಮತ್ತೆ  ಶ್ರೀ  ನಟರಾಜ  ಉಪಾಧ್ಯರೆಂಬ  ಬಹುಮುಖೀ  ಪ್ರತಿಭೆಯ  ಸಮಾನಾಸಕ್ತರ ಜೊತೆಗಾರಿಕೆಗೆ  ಬಂದಾಗ  ಯಕ್ಷವಾಹಿನಿ  ಎಂಬ  ಸಂಸ್ಥೆಯ  ಉದಯವಾಯಿತು.

ಇದಕ್ಕಾಗಿ ಪ್ರಸಂಗಪ್ರತಿಸಂಗ್ರಹ ಎಂಬ ಆಪ್  ಸಿದ್ಧವಾಯಿತು. ನಾಡಿನಾದ್ಯಂತದ ಯಕ್ಷಗಾನಾಸಕ್ತರ ಸ್ವಯಂಸೇವೆಯ   ಬಲವನ್ನು   ಪಡೆದು   ಯಕ್ಷಪ್ರಸಂಗಕೋಶ, ಯಕ್ಷಗಾನ ಮಟ್ಟುಕೋಶ, ಯಕ್ಷಗಾನ ಪ್ರಸಂಗಪ್ರತಿ ಸಂಗ್ರಹ ಹೀಗೆ ಬಹುಮುಖದ ಕೆಲಸದಲ್ಲಿ ಆಸಕ್ತರಾಗಿ ದಾಖಲೆಯ ಸಾಧನೆಯತ್ತ ಸಾಗಿದ್ದಾರೆ. ಇವರ ಕೆಲಸವನ್ನು ಮೆಚ್ಚಿ  ಯಕ್ಷಗಾನ  ಅಕಾಡೆಮಿಯ  ನಿಕಟಪೂರ್ವ  ಅಧ್ಯಕ್ಷರಾದ  ಪ್ರೋ  ಎಂ.  ಎ. ಹೆಗಡೆಯವರು    ಅಕಾಡೆಮಿಯ    ಸಹಾಯವನ್ನೂ    ಒದಗಿಸಿಕೊಟ್ಟರು.   

ಇವರ ಪ್ರಯತ್ನದ   ಫಲವಾಗಿ   ಈಗ   ನಮ್ಮ   ಅಂಗೈಗೆ   ಇನ್ನೂರೈವತ್ತರಷ್ಟು   ಪರಿಷ್ಕೃತ ಪ್ರಸಂಗಗಳು  ಲಭ್ಯವಾಗಿವೆ.  ಪ್ರಸಂಗ  ರಚನೆಯ  ರೀತಿಯನ್ನು  ತಿಳಿಸುವ ಕಾರ್ಯಾಗಾರ, ಪ್ರಸಂಗರಚನಾ ಸ್ಪರ್ಧೆ ಮುಂತಾದವೂ ಸಂಪನ್ನವಾಗಿವೆ. ಇವಿಷ್ಟೂ ಹಿನ್ನೆಲೆಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ರವಿಯವರು ಕೈಗೆತ್ತಿಕೊಂಡ  ಕೆಲಸ  ಮಲೆನಾಡಿನ  ಯಕ್ಷಚೇತನಗಳನ್ನು  ನಾಡಿಗೆ  ಪರಿಚಯಿಸುವ ಪ್ರಯತ್ನ.  ಇದು  ಅಕ್ಷರಶಃ  ಸಾಹಸ. 

ಸಾಮಾನ್ಯವಾಗಿ  ಯಕ್ಷಗಾನವೆಂದರೆ  ಕರಾವಳಿ ಪ್ರದೇಶದ ಕಲೆ ಎಂತಲೇ ಪ್ರಸಿದ್ಧ. ಆದರೆ ಇದು ಅಲ್ಲಿ ಹೇಗೆ ಬೆಳೆದಿತ್ತೋ ಹಾಗೆಯೇ ಮಲೆನಾಡ   ಪ್ರಾಂತದಲ್ಲೂ   ಪ್ರಸಿದ್ಧವಾಗಿತ್ತು   ಎಂಬುದು   ಸತ್ಯವಾದ   ವಿಚಾರ. ಮಲೆನಾಡ ಪ್ರಾಂತವನ್ನಾಳಿದ ಕೆಳದಿ ಅರಸರ ಕಾಲದಲ್ಲಿ ಧರ್ಮ, ಕಲೆ, ಸಾಹಿತ್ಯಕ್ಕೆ ವಿಶೇಷ ಪ್ರೋತ್ರಾಹ ಸಿಕ್ಕಿತ್ತು ಎಂಬುದು ಸರ್ವವೇದ್ಯ.


ಈ ಅರಸರ ಕಾಲದಲ್ಲಿ ಮಹಾಕವಿ ವೆಂಕಾಮಾತ್ಯ, ಹನೂಮದ್ರಾಮಾಯಣ, ಯಕ್ಷಗಾನ  ಪಾರಿಜಾತ,  ರುಕ್ಮಿಣೀ  ಸ್ವಯಂವರ,  ಮುಂತಾದ  ಪ್ರಸಂಗವನ್ನು  ಬರೆದ ಕವಿ,  ಆತನ  ಮಗ  ವೆಂಕಣ್ಣ  ಮೈರಾವಣ  ಕಾಳಗ  ಪ್ರಸಂಗದ  ಕವಿ,  ಪರಮದೇವ, ನಂಜುಂಡ, ಸುಬ್ರಹ್ಮಣ್ಯ ಕವಿ ಮುಂತಾದವರೆಲ್ಲ ಈ ಪ್ರದೇಶದಲ್ಲೇ ಇದ್ದರು. ರಾಜಾಶ್ರಯದ ನೆಲೆ ತಪ್ಪಿದ ಮೇಲೂ ಅಲ್ಲಲ್ಲಿ ವ್ಯಕ್ತಿಗತ ಪ್ರಯತ್ನ, ಸಂಸ್ಥೆಗಳ ಆಸಕ್ತಿಯಿಂದ  ಕೆಲವುಕಾಲ  ಯಕ್ಷಗಾನ  ಬದುಕಿತ್ತು,  ಕಷ್ಟದಲ್ಲಿ  ಬಾಳಿತ್ತು.  ಸ್ವಾತಂತ್ರ್ಯ ಬಂದ  ನಂತರ  ಅಭಿವೃದ್ಧಿ  ಮಂತ್ರ  ಜೋರಾದಂತೆ  ಮಲೆನಾಡಿನ  ಭವ್ಯ  ಸಂಪತ್ತು ಸರಕಾರಗಳ ಕಣ್ಣಿಗೆ ಬಿದ್ದು ಕಲೆ ಮೂಲೆಗೆ ಸರಿದು ಅಣೆಕಟ್ಟುಗಳ ನಿರ್ಮಾಣದಂತಹ ಕಾಮಗಾರಿಗಳು ಮುನ್ನೆಲೆಗೆ ಬಂದವು.

ರಾತ್ರಿಯನ್ನು ಬೆಳಕು ಮಾಡುತ್ತಿದ್ದ ಕಲಾವಿದರ ಬದುಕು ಮತ್ತು ಅವರವರ ಊರು ನೆಲೆಗಳನ್ನು ಮುಳುಗಿಸಿ ಕತ್ತಲೆಯ ಹಿನ್ನೆಲೆಗೆ ಜಾರಿಸಿದವು. ಕರಾವಳಿಯಲ್ಲಿ ರಾಜಾಶ್ರಯವಿಲ್ಲದಿದ್ದರೂ ಸುಪ್ರಸಿದ್ಧ ಕ್ಷೇತ್ರಗಳ ಆಶ್ರಯದಲ್ಲಿ  ಯಕ್ಷಗಾನ  ಬದುಕಿ  ಬೆಳೆಯಿತು.  ಇಲ್ಲಿ  ಅನೇಕರು  ಈ  ಕಷ್ಟದಲ್ಲೂ ಪ್ರಯತ್ನಶೀಲರಾಗಿ ಮುಂದುವರೆದಿದ್ದರು. ಆದರೆ  ಅವರ  ಕೊಡುಗೆ  ಯಕ್ಷಲೋಕಕ್ಕೆ  ದೊರಕದೆ  ಮರೆಯಾಗಿಯೇ ಉಳಿದಿತ್ತು. ಇಂತಹ ಕಲಾವಿದರ ಬದುಕಿನ ಕೊಡುಗೆಗಳು ಮುಂದಿನ ತಲೆಮಾರಿಗೆ ನೆನಪಾಗಿ  ಉಳಿಸಬೇಕು  ಎಂಬ  ಆಸೆಯಿಂದ  ರವಿ  ಮಡೋಡಿಯವರು  ಬಹಳ ಶ್ರಮವಹಿಸಿ ಬಹುಮಂದಿ ಆಗಿಹೋದ ಕಲಾವಿದರ ಇತ್ಯೋಪರಿಗಳನ್ನು ಸಂಗ್ರಹಿಸಿ ಕೃತಿರೂಪದಲ್ಲಿ ಪ್ರಕಟಿಸುತ್ತಿದ್ದಾರೆ.

ರವಿಯವರು ಮಾಹಿತಿಗಳಿಗಾಗಿ ಅರಿವುಳ್ಳ ಹಿರಿಯರು, ಗೆಳೆಯರು, ಕಲಾವಿದರ ಮಕ್ಕಳು, ಬಂಧುಗಳು, ಕಲಾವ್ಯವಸಾಯಿಗಳು, ಕಲಾವಿದರ ಶಿಷ್ಯರು ಮುಂತಾದವರ ಸಂಪರ್ಕವನ್ನು ಸಾಧಿಸಿ ಅವರೊಂದಿಗೆಲ್ಲ ಚರ್ಚಿಸಿ ಬರೆದುದನ್ನು ಪರಿಣತರ ಗಮನಕ್ಕೆ ತಂದು  ಮತ್ತೆ  ಫೇಸ್ಬುಕ್,  ವಾಟ್ಸಾಪ್  ಪ್ರಕಟಿಸಿ  ಆಮೇಲೆ  ಪುಸ್ತಕಕ್ಕಿಳಿಸಲು  ಮನಸ್ಸು ಮಾಡಿದ್ದಾರೆ. ಈ ಕೆಲಸ ಸುಲಭದ್ದಲ್ಲ. ಕೇಳಿದರೂ ತಿಳಿದವರು ಸ್ಪಂದಿಸದೆ ಇರುವುದು, ಅದೆಲ್ಲ ಬರೆಯುವಷ್ಟು ದೊಡ್ಡದಲ್ಲ ಎಂಬ ದೊಡ್ಡಸ್ತಿಕೆಯ ಮಾತಾಡುವುದು, ನಾಳೆ ಹೇಳುವೆ  ನಾಡಿದ್ದು  ಹೇಳುವೆ  ಎಂದು  ಸತಾಯಿಸುವುದು,  ಹೇಳಿದರೆ  ನಮಗೇನು ಲಾಭ   ಇವನಿಗೇನೋ   ಅನುಕೂಲವಿರಬೇಕೆಂದು ಊಹಿಸುವುದು ಮುಂತಾದ ಹಲವು ಅಡಚಣೆಗಳನ್ನು ದಾಟಿ ಮುಂದುವರಿಯಬೇಕಾಗುತ್ತದೆ.

ಕಲಾವಿದರು ಜೀವಿಸಿದ್ದ ಕಾಲ ದೂರದೂರವಾದಷ್ಟೂ ಮಾಹಿತಿಗಳೂ ದೂರದೂರವಾಗುತ್ತವೆ. ಕಲಾವಿದನ ಕೊಡುಗೆ ದೊಡ್ಡದೇ ಇದ್ದರೂ ಅವರ ಉತ್ತರಾಧಿಕಾರಿಗಳಿಗೆ ಆಸಕ್ತಿಯೇ ಇಲ್ಲದಿರುವುದು ಬಹುದೊಡ್ಡ ತೊಡಕಾಗುತ್ತದೆ. ಈ ಎಲ್ಲ ಪ್ರಯತ್ನಗಳನ್ನು ಮಾಡುತ್ತಾ ಇಷ್ಟೊಂದು  ಕಲಾವಿದರನ್ನು  ಕುರಿತು  ಇವರು  ಸಂಗ್ರಹಿಸಿದ  ಮಾಹಿತಿ  ಯಕ್ಷಗಾನಕ್ಕೆ ಬಹುದೊಡ್ಡ ಕೊಡುಗೆಯಾಗಿದೆ.

ಮಲೆನಾಡಿನಲ್ಲಿ ಹಿಂದೆ ಸೀಮೆಗೊಂದೊಂದು ಮೇಳವಿದ್ದ ದಾಖಲೆ ಇದೆ. ಈಗ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಕಳೆದು ಹೋದುದು ಸಿಗದಾದರೂ ಅಲ್ಲಿಯ ನೆನಪು ಉಳಿಯಬೇಕು. ಈ ಪ್ರದೇಶಗಳ ವ್ಯಾಪ್ತಿಯೂ ದೊಡ್ಡದು. ರವಿಯವರು ಪರಿಚಯಿಸಿದ ಕಲಾವಿದರು ಬಾಳಿಬದುಕಿದ ಪ್ರದೇಶ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಮೂರು ಜಿಲ್ಲೆಗಳಲ್ಲಿ ಶೃಂಗೇರಿಯಿಂದ ಯಲ್ಲಾಪುರದವರೆಗೆ ವ್ಯಾಪಿಸಿದೆ. ಪರಿಚಿತ, ಅಪರಿಚಿತ ಮೇಳಗಳಿವೆ, ಪ್ರಸಿದ್ಧ, ಸುಪ್ರಸಿದ್ಧ, ಅಪ್ರಸಿದ್ಧ ಕಲಾವಿದರೂ   ಇದ್ದಾರೆ.  

ಇವೆಲ್ಲ ಈಗ ರವಿಯವರ ಬರೆಹದಿಂದ ಸಾಕಷ್ಟು ಮಂದಿಯ  ಅರಿವಿಗೂ  ಬಂದಿವೆ.  ಈಗ  ಕೃತಿಯಾಗಿಯೂ  ಬರುತ್ತಿದೆ.  ಹಾಗೆಂದು ಮುಗಿಯುವುದಿಲ್ಲ.  ಇನ್ನೂ  ಮುಂದೆಯೂ  ಬರುತ್ತಿರುತ್ತದೆ.  ಕಲಾವಿದರ  ಕುರಿತು ಇಲ್ಲಿ ಬಂದ ಮಾಹಿತಿ ಪರಿಪೂರ್ಣ ಎನ್ನುವಂತಿಲ್ಲ. ಇದು ಲೇಖಕರಿಗೂ ತಿಳಿದಿದೆ. ಮೊದಲ ಬರವಣಿಗೆಯನ್ನು ಮತ್ತೆ ಪರಿಷ್ಕರಿಸಿದ್ದಾರೆ. ಇನ್ನೂ ಸೇರಬಹುದಾದುದೂ ಇರಬಹುದು. ಅದನ್ನೂ ಮಡೋಡಿಯವರು ಮಾಡಬಲ್ಲವರು. ಇಲ್ಲಿ ಪ್ರಸ್ತಾಪಿಸದ ಅನೇಕ   ಪ್ರಸಿದ್ಧ   ಕಲಾವಿದರೇ   ಉಳಿದುಹೋಗಿರುವ   ಸಾಧ್ಯತೆ   ಇದೆ.  

ಇದು ಮಾಹಿತಿಗಳಿಂದಲೇ ರೂಪುಗೊಳ್ಳಬೇಕಾದ ಬರೆಹ. ಅದು ಸಿಕ್ಕಷ್ಟೂ ಗಟ್ಟಿಗೊಳ್ಳುತ್ತದೆ. ಈ ಕೃತಿ ಸರಣಿಯ ಒಂದನೇ ಸಂಪುಟ ಎಂದು ಭಾವಿಸೋಣ. ಮುಂದುವರಿಯಲಿ ಎಂದು ಆಶಿಸೋಣ. ಕಲಾವಿದರನ್ನು  ಕುರಿತು  ಅರಿವಿರುವವರು  ರವಿಯವರಿಗೆ  ವಿಫುಲ  ಮಾಹಿತಿ ನೀಡಿ ನಮ್ಮ ಮಲೆನಾಡಿನ ಕಲಾವಿದರ ಕಲಾಸೇವೆಯನ್ನು ಜನಮನಕ್ಕೆ ತಲುಪುವಂತೆ ಮಾಡಿರೆಂದು ಪ್ರಾರ್ಥಿಸುತ್ತೇನೆ.

ಈ  ಅಪೂರ್ವ  ಪ್ರಯತ್ನಕ್ಕಾಗಿ  ರವಿ  ಮಡೋಡಿಯವರನ್ನು  ಅಭಿನಂದಿಸುತ್ತಾ ಇಂತಹ    ಪ್ರಯತ್ನ    ನಿಮ್ಮ    ನಿರಂತರ    ಕಾರ್ಯವಾಗಲಿ    ಎಂದು    ಹಾರೈಸಿ ಶುಭಕೋರುತ್ತೇನೆ.

ಯಕ್ಷಗಾನಂ ಗೆಲ್ಗೆ.

ಶ್ರೀಧರ ಡಿ. ಎಸ್. ತಾಳಿಪಾಡಿ
ಅಂಚೆ: ಎಳತ್ತೂರು
ವಯಾ : ಕಿನ್ನಿಗೋಳಿ. ದ.ಕ 574159 ದೂರವಾಣಿ: 7760647383

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments