Thursday, November 21, 2024
Homeಯಕ್ಷಗಾನ ವಿಡಿಯೋವಾಸುದೇವ ಸಾಮಗರ ಅಗಲಿಕೆಗೆ ಒಂದು ವರುಷ

ವಾಸುದೇವ ಸಾಮಗರ ಅಗಲಿಕೆಗೆ ಒಂದು ವರುಷ

ಯಕ್ಷಗಾನ ವೇಷಧಾರಿ, ಸಂಘಟಕ, ತಾಳಮದ್ದಳೆ ಅರ್ಥಧಾರಿ ಹೀಗೆ ಯಕ್ಷಗಾನದ ವಿವಿಧಂಗಗಳಲ್ಲಿ ತೊಡಗಿಸಿಕೊಂಡ ಎಂ.ಆರ್.ವಾಸುದೇವ ಸಾಮಗರು ನಮ್ಮನ್ನಗಲಿ ನಿನ್ನೆಗೆ ವರುಷವೊಂದು ಸಂದಿತು. (ನಿಧನ – 07.11.2020). ವಾಸುದೇವ ಸಾಮಗ ಎಂದ ಕೂಡಲೇ ನಮಗೆ ಫಕ್ಕನೆ ನೆನಪಾಗುವುದು ಅವರ ‘ಸಂಯಮಂ’ ಯಕ್ಷಗಾನ ತಾಳಮದ್ದಳೆ ತಂಡ. ಸಂಯಮಂ ಎಂದರೆ ‘ಸಂಚಾರಿ ಕ್ಷಗಾನ ಮಂಡಳಿ’.

ತನ್ನ ಅರ್ಥಗಾರಿಕೆಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ್ದ ವಾಸುದೇವ ಸಾಮಗರು ಸಂಯಮಂ ತಂಡ  ಕಟ್ಟಿದ ಬಗ್ಗೆ ಅಂದೊಮ್ಮೆ ವಿವರಿಸಿದ್ದರು.  ಮೊದಲು ಪ್ರಾಯೋಗಿಕವಾಗಿ ಮೂವತ್ತು ವರ್ಷಗಳ ಹಿಂದೆಯೇ ಒಮ್ಮೆ ಈ ತಾಳಮದ್ದಳೆ ತಂಡವನ್ನು ಪ್ರಾರಂಭಿಸಿದ್ದರು. ಅನುಭವದ ಕೊರತೆಯಿಂದ ಆಗ ಯಶಸ್ವಿಯಾಗಿರಲಿಲ್ಲ. ಆದರೆ ಈ ‘ಸಂಯಮಂ’ ತಂಡದ ವ್ಯವಸ್ಥಿತ ನಿರಂತರ ತಿರುಗಾಟಕ್ಕೆ 15 ವರ್ಷಗಳ ಇತಿಹಾಸವಿದೆ. ಎಲ್ಲಿಯೂ ಎಡರುತೊಡರುಗಳಿಲ್ಲದ ಪಯಣ ಈ ತಂಡದ್ದು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿ ಉತ್ತರಕುಮಾರನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ 

ವಾಸುದೇವ ಸಾಮಗರ ತಂಡದ ಕಾರ್ಯಕ್ರಮಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೇವಲ ದೂರವಾಣಿಯ ಮೂಲಕ 100ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳು ಮಳೆಗಾಲದಲ್ಲಿ ನಿಗದಿಯಾಗುತ್ತಿತ್ತು. ಅದರಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಖಾಯಂ ನೆಲೆಯಲ್ಲಿ ಕಾಯ್ದಿರಿಸಲಾಗುತ್ತಿತ್ತು. ಅವರಿಗೆ ದಿನಾಂಕ ಮಾತ್ರ ನಿಗದಿ ಮಾಡುವ ಕೆಲಸ ಉಳಿದಿರುತ್ತಿತ್ತು.

ಯಕ್ಷಗಾನಕ್ಕೆ ಅನ್ಯಾದೃಶ ಕೊಡುಗೆಯಿತ್ತ ಮನೆತನದಲ್ಲಿ ಖ್ಯಾತಿವೆತ್ತ ದಿ| ಮಲ್ಪೆ ರಾಮದಾಸ ಸಾಮಗರ ಸುಪುತ್ರರಾಗಿ ಜನಿಸಿ ಯಕ್ಷಗಾನದಲ್ಲಿ ತನ್ನದೇ ಆದ ಛಾಪನ್ನು ಒತ್ತಿ ಎತ್ತರಕ್ಕೆ ಬೆಳೆದವರು. ಇವರ ಯಕ್ಷಜೀವನದ ವಿವಿಧ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಹಲವಾರು ವಿಶಿಷ್ಠತೆಗಳು ಗೋಚರಿಸುತ್ತವೆ.

S. Mithyanthaya ಅವರ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿಅರ್ಜುನನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ 

ನಾಗಶ್ರೀಯ ಶುಭ್ರಾಂಗ ಪಾತ್ರದ ದಾಖಲೆ ಶ್ರೀ ವಾಸುದೇವ ಸಾಮಗರಿಗೆ ಅಪಾರವಾದ ಖ್ಯಾತಿಯನ್ನು ತಂದುಕೊಟ್ಟಿತು. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಭೀಷ್ಮ ವಿಜಯದ ಭೀಷ್ಮನ ಪಾತ್ರವನ್ನು ಮಾಡುವ ಸಂದರ್ಭ ಒದಗಿತು. ಭೀಷ್ಮನ ಪಾತ್ರ ಮಾಡಲು ಹಿರಿಯ ಕಲಾವಿದರು ಒಪ್ಪದಿದ್ದಾಗ ತಾನು ಆ ಪಾತ್ರವನ್ನು ನಿರ್ವಹಿಸಿ ಚೌಕಿಗೆ ಬಂದು ವೇಷ ತೆಗೆಯುತ್ತಿದ್ದಾಗ ಪ್ರೇಕ್ಷಕರು ಬಂದು ‘ಸಾಮಗರೇ, ನಿಮ್ಮದು ಅದ್ಭುತ ಭೀಷ್ಮ’ ಎಂದು ಅಭಿನಂದಿಸಿದ್ದರು.


ಮತ್ತೊಂದು ಆಟದಲ್ಲಿ ಪ್ರಸಿದ್ಧ ಕಲಾವಿದರೊಬ್ಬರು ಕೌರವ ಮಾಡುತ್ತಾರೆಂದು ಪ್ರಚಾರ ಮಾಡಲಾಗಿತ್ತು. ಆದರೆ ಬಸ್ ಮುಷ್ಕರದಿಂದಾಗಿ ಆ ಕಲಾವಿದರಿಗೆ ಬರಲಾಗಲಿಲ್ಲ. ಮೊದಲಿನ ಪ್ರಸಂಗದಲ್ಲಿ ಚಿಟ್ಟಾಣಿಯವರು ದುಷ್ಟಬುದ್ಧಿ ಮಾಡಿಯಾಗಿತ್ತು. ಆಟ ಆಡಿಸುವವರು ಗಲಾಟೆಯಾಗಬಹುದೆಂಬ ಭಯದಲ್ಲಿ ವಾಸುದೇವ ಸಾಮಗರಲ್ಲಿ ಬಂದು ಏನು ಮಾಡುವುದೆಂದು ಅಲವತ್ತುಕೊಳ್ಳುತ್ತಾರೆ. ಆಗ ಧೈರ್ಯ ತುಂಬಿದ ಸಾಮಗರು ತಾನೇ ಕೌರವನ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿದರು. ಅಂದಿನ ಕೌರವ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಚಿಟ್ಟಾಣಿಯವರ ಸಹಿತ ಅನೇಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
ಗದಾಯುದ್ಧದ ಕೌರವನಿಗೆ ವಾಸುದೇವ ಸಾಮಗರು ಸಮರ್ಥರೆಂದು ಕಾಳಿಂಗ ನಾವಡರಿಂದಲೇ ಹೊಗಳಿಸಿಕೊಂಡ ಕೀರ್ತಿ ವಾಸುದೇವ ಸಾಮಗರಿಗೆ ಸಲ್ಲುತ್ತದೆ.

ಮಧುಸೂದನ ಅಲೆವೂರಾಯ ಅವರ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿ ಕರ್ಣನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ 

ಆಟಕೂಟಗಳೆರಡರಲ್ಲಿಯೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದ ವಾಸುದೇವ ಸಾಮಗರ ಅಗಲಿಕೆ ಕಲಾಪ್ರಿಯರನ್ನು ಕಾಡುತ್ತಿದೆ, ಅವರು ಮರೆಯಾದರೂ ಅವರ ಆ ವಿಶಿಷ್ಟ ಶೈಲಿ, ವ್ಯಕ್ತಿತ್ವಗಳು ಎಂದೆಂದಿಗೂ ಮಾಸದ ನೆನಪಾಗಿ ಉಳಿಯುವುದು ಸತ್ಯ

ಲೇಖನ: ಮನಮೋಹನ್ ವಿ. ಎಸ್ . 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments