ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅವರು ಇಂದು ಬೆಳಿಗ್ಗೆ (12.102017, ಮಂಗಳವಾರ) ಅಸ್ತಂಗತರಾಗಿದ್ದಾರೆ. ನ್ಯುಮೋನಿಯಾ ಜ್ವರದಿಂದ ಬಳಲಿ ಚೇತರಿಸಿಕೊಂಡಿದ್ದ ಅವರು ಹೃದಯಾಘಾತದಿಂದ ನಿಧನರಾದರು. ಜನಪ್ರಿಯ ಪದ್ಯಾಣ ಶೈಲಿಯ ಜನಕರಾಗಿದ್ದ ಅವರ ದಿಢೀರ್ ಅಗಲಿಕೆಯಿಂದ ಯಕ್ಷಗಾನಾಭಿಮಾನಿಗಳು ಮತ್ತು ಇಡೀ ಯಕ್ಷಲೋಕವೇ ದಿಗ್ಭ್ರಮೆಗೊಳಗಾಗಿದೆ. ಹಲವಾರು ಕಲಾಭಿಮಾನಿಗಳು ದುಃಖದ ಕಡಲಿನಲ್ಲಿ ಮುಳುಗಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಗೆ ಹೊಸ ಆಯಾಮವನ್ನೇ ನೀಡಿದ, ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ ಪದ್ಯಾಣ ಗಣಪತಿ ಭಟ್ಟರಿಗೆ ಎಲ್ಲರೂ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ.
ಪದ್ಯಾಣ ಗಣಪತಿ ಭಟ್ಟರ ಕಲಾಯಾನ: ಶ್ರೀ ಪದ್ಯಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಚಿಕ್ಕ ಮಗುವಾಗಿದ್ದಾಗ ಬಾಲಪೀಡೆ ಎಂಬ ರೋಗಕ್ಕೆ ತುತ್ತಾಗಿ ಕಾಲನಾಲಯದ ಬಳಿಯವರೆಗೂ ಸಾಗಿ ಮೃತ್ಯುವನ್ನು ಜಯಿಸಿ ಬಂದಿದ್ದರು. ಒಂದು ರೀತಿಯಲ್ಲಿ ಪುನರ್ಜನ್ಮ. ಕಲ್ಮಡ್ಕ ಸರಕಾರೀ ಶಾಲೆಯಲ್ಲಿ 7ನೇ ತರಗತಿ ವರೇಗೆ ಓದಿ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಸೇರಿದ್ದರು. ಶಾಲೆಯಲ್ಲಿ ಯಕ್ಷಗಾನ ತಂಡವು ಸಿದ್ಧವಾಗಿತ್ತು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರವನ್ನು ಮಾಡಿದ್ದರು.
ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಗಿತ್ತು. ಯಕ್ಷಗಾನವು ಪದ್ಯಾಣ ಮನೆಯವರಿಗೆ ರಕ್ತಗತವೇ ಆಗಿರುವ ವಿಚಾರ. ಗಣಪತಿ ಭಟ್ಟರು ಧರ್ಮಸ್ಥಳದತ್ತ ಸಾಗಿದರು. ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯತ್ತ ಗಮನಹರಿಸಿದರು. ತರಬೇತಿ ಮುಗಿದು ಮನೆಗೆ ತೆರಳುವಾಗ ಸಂದರ್ಶನದಲ್ಲಿ ಅನುತ್ತೀರ್ಣನಾಗಿದ್ದ ನೀನು ಮನೆಗೆ ಹೋಗಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ನಿನಗೂ ನಷ್ಟವಾಗುತ್ತಿತ್ತು ಎಂದು ಮಾಂಬಾಡಿ ನಾರಾಯಣ ಭಾಗವತರು ಹೇಳಿದ್ದರಂತೆ.
ಧರ್ಮಸ್ಥಳ ಕಲಿಕಾ ಕೇಂದ್ರದಿಂದ ಮರಳಿದ ನಂತರ ಪದ್ಯಾಣ ಗಣಪತಿ ಭಟ್ಟರು ಕಲ್ಮಡ್ಕ ಪರಿಸರದಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಭಾಗವತರಾದ ದಾಸರಬೈಲು ಚನಿಯ ನಾಯ್ಕರ ಒಡನಾಟ ರಂಗದೊಳಗೆ ಪ್ರತ್ಯಕ್ಷ ಕಲಿಕೆಗೆ ವೇದಿಕೆಯಾಯಿತು. 1972-73ರ ಕಾಲ ಚೌಡೇಶ್ವರೀ ಮೇಳದ ಪ್ರದರ್ಶನ, ಪೆರಾಜೆ, ಪೆರ್ನಾಜೆ ಮೊದಲಾದ ಸ್ಥಳಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸಿದರು. ದಾಸರಬೈಲು ಚನಿಯ ನಾಯ್ಕರು ಪ್ರಸಂಗವನ್ನು ಮುನ್ನಡೆಸುತ್ತಿದ್ದ ಕ್ರಮವನ್ನು ನೋಡಿ ಕಲಿತರು. ಚನಿಯ ನಾಯ್ಕ, ಪ್ರಸಂಗಕರ್ತ ಮಧುಕುಮಾರ್ ಭಾಗವತರ ಹಾಡುಗಳಿಗೆ ಚೆಂಡೆ ಮದ್ದಳೆ ವಾದಕನಾಗಿಯೂ ಭಾಗವಹಿಸಿದರು.
ಮುಂದೆ ಶಂಕರ ಭಟ್ಟರ ‘ಟೂರಿಂಗೆ ಕ್ಯಾಂಪು’ ತಿರುಗಾಟ. ಭಾಗವತನಾಗಿ ಕಲಾಸೇವೆ. ಆ ತಂಡದಲ್ಲಿ ಶಿವರಾಮ ಜೋಗಿ, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ ಮೊದಲಾದ ಕಲಾವಿದರಿದ್ದರು. ಮುಂದಿನ ವರುಷ ಸುರತ್ಕಲ್ಲು ಮೇಳಕ್ಕೆ ಸಂಗೀತಗಾರರಾಗಿ ಬರಲು ಶಿವರಾಮ ಜೋಗಿಯವರು ಮತ್ತು ವೇಣೂರು ಸುಂದರ ಆಚಾರ್ಯರು ಆಹ್ವಾನಿಸಿದಾಗ ಗಣಪತಿ ಭಟ್ಟರು ಸಂತೋಷದಿಂದ ಒಪ್ಪಿಕೊಂಡಿದ್ದರು.
ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ, ಸತೀ ಶೀಲವತಿ, ತುಳುನಾಡ ಬಲಿಯೇಂದ್ರೆ ಪದ್ಯಾಣ ಗಣಪತಿ ಭಟ್ಟರಿಗೆ ತಾರಾಮೌಲ್ಯವನ್ನು ತಂದಿತ್ತವು. ಯಶಸ್ವೀ ಯಜಮಾನರಾದ ಕಸ್ತೂರಿ ಪೈಗಳ ಸುರತ್ಕಲ್ಲು ಮೇಳವು ಗಜಮೇಳವಾಗಿ ವಿಜೃಂಭಿಸುತ್ತಿತ್ತು. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತರು, ಜಲವಳ್ಳಿ ಅಲ್ಲದೆ ಅನೇಕ ಹಿರಿಯ ಕಲಾವಿದರ ಒಡನಾಟ ಇವರಿಗೆ ದೊರಕಿತು. ರಾಮದಾಸ ಸಾಮಗರ ಜತೆ ತಿರುಗಾಟವೂ ಇತ್ತು. ಶೇಣಿಯವರು ತಿದ್ದಿ ತೀಡಿದರು. ಅಗರಿ ರಘುರಾಮ ಭಾಗವತರು ಹೆಚ್ಚು ಹೆಚ್ಚು ಹಾಡಲು ಅವಕಾಶವಿತ್ತು ಗಣಪತಿ ಭಟ್ಟರ ಪ್ರತಿಭೆ ಬೆಳಗಲು ಕಾರಣರಾದರು. ಅಗರಿಯವರ ನಿವೃತ್ತಿಯ ನಂತರ ಪ್ರಧಾನ ಭಾಗವತರಾಗಿ ಸುರತ್ಕಲ್ಲು ಮೇಳವನ್ನು ಮುನ್ನಡೆಸಿದರು.
ಶೇಣಿಯವರಿಗೆ ಬಡಗಿನ ಶ್ರೇಷ್ಠ ಭಾಗವತರಾಗಿದ್ದ ಜಿ. ಆರ್. ಕಾಳಿಂಗ ನಾವಡ ಮತ್ತು ತೆಂಕಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀ ದಾಮೋದರ ಮಂಡೆಚ್ಚರೆಂದರೆ ಅಚ್ಚುಮೆಚ್ಚು. ಕಾಳಿಂಗ ನಾವಡರಿಂದ ಪ್ರಶಂಸಿಸಲ್ಪಟ್ಟವರು ಪದ್ಯಾಣ ಗಣಪತಿ ಭಟ್ಟರು. ದಾಮೋದರ ಮಂಡೆಚ್ಚರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಆಟ, ಕೂಟಗಳಿಗೆ ಶೇಣಿಯವರು ಪದ್ಯಾಣರನ್ನೇ ಆಯ್ಕೆ ಮಾಡುತ್ತಿದ್ದರಂತೆ. ಇದು ಪದ್ಯಾಣ ಗಣಪತಿ ಭಟ್ಟರ ಪ್ರತಿಭೆಗೆ ಸಂದ ಗೌರವ. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಿಂದ ಪಕ್ವರಾಗಿ ಶ್ರೀ ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ವಿಜೃಂಭಿಸಿದರು. ಸುರತ್ಕಲ್, ಮಂಗಳಾದೇವಿ, ಹೊಸನಗರ ಮೇಳಗಳಲ್ಲಿ ತಿರುಗಾಟ ನಡೆಸಿ ಕೊನೆಯ ಕೆಲವು ವರ್ಷಗಳಲ್ಲಿ ಶ್ರೀ ಹನುಮಗಿರಿ ಮೇಳದಲ್ಲಿ ಕಲಾಸೇವೆಯನ್ನು ನಡೆಸುತ್ತಿದ್ದರು.
‘‘ರಂಗವನ್ನು ಆಳುವ ಜಾಣ್ಮೆ ಪದ್ಯಾಣರಲ್ಲಿ ಮೈತುಂಬಿದೆ. ಅವರು ರಂಗದಲ್ಲಿದ್ದಷ್ಟು ಹೊತ್ತು ರಂಗದ ಎಲ್ಲಾ ಸೂಕ್ಷ್ಮ ಸಂಗತಿಗಳು ಅವರಿಗೆ ಶರಣಾಗುವ ಅವ್ಯಕ್ತ ಸಂಗತಿಯೊಂದು ಗೋಚರವಾಗುವುದು ಪದ್ಯಾಣರ ದೀರ್ಘಕಾಲದ ಅನುಭವದ ಪರಿಪಕ್ವ ಫಲವಾಗಿದೆ’’. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ಟರು ಆಟಕೂಟಗಳಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್ಟರ ಪ್ರಸಂಗವನ್ನು ಮುನ್ನಡೆಸಿದ ರೀತಿಯನ್ನು ನೋಡಿ, ಅನುಭವಿಸಿ ಹೇಳಿದ ಮಾತಿದು.
ಪದ್ಯಾಣ ಗಣಪತಿ ಭಟ್ಟರ ನಿಧನ ಯಕ್ಷಗಾನ ಕ್ಷೇತ್ರಕ್ಕೊಂದು ತುಂಬಲಾರದ ನಷ್ಟ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬ, ಬಂಧುಮಿತ್ರರಿಗೂ, ಅಪಾರ ಸಂಖ್ಯೆಯ ಕಲಾಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸೋಣ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
