ಕೋಳ್ಯೂರು ಎಂಬುದು ಒಂದು ಊರಿನ ಹೆಸರು. ಆ ಹೆಸರನ್ನು ಕೇಳಿದ ಕೂಡಲೆ ಕೋಳ್ಯೂರು ರಾಮಚಂದ್ರರಾಯರು ಕಣ್ಣೆದುರು ಬರುತ್ತಾರೆ. ಮೋಹಿನಿಯಂಥ ಶೃಂಗಾರ ಪಾತ್ರದಿಂದ ತೊಡಗಿ, ಚಂದ್ರಮತಿ, ದಮಯಂತಿಯಂತಹ ಕರುಣರಸದ ಪಾತ್ರಗಳನ್ನು ಪ್ರಮೀಳೆ, ಶಶಿಪ್ರಭೆಯಂಥ ವೀರರಸದ ಪಾತ್ರಗಳನ್ನು ಮಾಡಿ, ತುಳು ತಿಟ್ಟಿನಲ್ಲಿ ಬೊಮ್ಮಕ್ಕೆ ನಾಗ್ವಕ್ಕೆಯಂಥ ವಿಭಿನ್ನ ಮನೋಧರ್ಮದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮಾನಸದಲ್ಲಿ ನಿರಂತರ ವಿಹರಿಸುತ್ತಿರುವ ಕೋಳ್ಯೂರು ರಾಮಚಂದ್ರರಾಯರಿಗೆ ಈಗ ನವತ್ಯಬ್ದ ಸಡಗರ.
ತೊಂಬತ್ತು ವರ್ಷದ ಜೀವಮಾನವೆಂದರೆ ಸರಳ ಸಂಗತಿಯಲ್ಲ. ಅವರು ತಮ್ಮ ಕಿಶೋರ ಹರೆಯದಲ್ಲಿ 60 ವರ್ಷದ ಹಿರಿಯ ಕಲಾವಿದರೊಂದಿಗೆ ಒಡನಾಡಿದ ಅನುಭವವನ್ನು ಸಮಗ್ರವಾಗಿ ನೋಡಿದರೆ ಕೋಳ್ಯೂರು ರಾಮಚಂದ್ರರಾಯರು ನಮ್ಮೊಂದಿಗೆ ನಡೆದಾಡುತ್ತಿರುವ 150 ವರ್ಷಗಳ ಇತಿಹಾಸದ ದಾಖಲೆ ಪುಸ್ತಕ. ಇಂಥ ಯಕ್ಷಗಾನದ ವಿಶ್ವಕೋಶವಾಗಿರುವ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿ.ವಿ ಗೌರವ ಡಾಕ್ಟರೇಟ್ ಪದವಿ ಪಡೆದ ಕೋಳ್ಯೂರು ರಾಮಚಂದ್ರರಾಯರನ್ನು ನವತ್ಯಬ್ದ ಸಂಭ್ರಮದ ನಿಮಿತ್ತ ಸಮ್ಮಾನಿಸಬೇಕೆಂದು ಸಮಾಲೋಚಿಸುತ್ತಿದ್ದೆವು.
ಆಗ ಕೋಳ್ಯೂರು ಅವರ ಕುಟುಂಬದ ಪ್ರತಿನಿಧಿಯಾಗಿ ಅವರ ತೃತೀಯ ಪುತ್ರ ಶ್ರೀಧರ ರಾವ್ ಅವರು ನಮ್ಮನ್ನು ಸಂಪರ್ಕಿಸಿ ಅಭಿನಂದನ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಮಕ್ಕಳಾದ ನಾವೆಲ್ಲ ಸೇರಿ ಭರಿಸುವುದಾಗಿ ಹೇಳಿದರು. ಹೀಗೆ ಇದರ ಪ್ರಾಯೋಜಕತ್ವ ವಹಿಸಿ ಸಂಸ್ಥೆಗೆ ದೊಡ್ಡ ಸಹಕಾರ ನೀಡಿರುತ್ತಾರೆ.
ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಕಾರ್ಯಕ್ರಮ ಆಯೋಜಿಸಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಧರ್ಮಾಧಿಕಾರಿಗಳಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಎಡನೀರು ಮಠಾಧೀಶರು ನಮಗೆ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿದ್ದಾರೆ. ಪ್ರತಿದಿನ ಒಬ್ಬೊಬ್ಬ ಮೇರುಕಲಾವಿದರ ನೆನಪಿಗೆ ಕಾರ್ಯಕ್ರಮವನ್ನು ಸಮರ್ಪಿಸಲಾಗುತ್ತಿದೆ. ದಿನಕ್ಕೊಬ್ಬರಂತೆ ಕಲಾಪೋಷಕರು, ಮೇಳದ ಯಜಮಾನರು, ಕೋಳ್ಯೂರು ಅವರ ಒಡನಾಡಿ ಕಲಾವಿದರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.

ನವಂಬರ್ 14 ರಂದು ಬೆಳಿಗ್ಗೆ 9 ಗಂಟೆಯಿಂದ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ಜರಗಲಿದೆ. ಹಿರಿಯ ಕಲಾವಿದ ಪೆರ್ವೋಡಿ ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಸೇರಿದಂತೆ ಅನೇಕ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
ಸುಮಾರು 90 ಜನ ಸ್ತ್ರೀ ವೇಷಧಾರಿಗಳನ್ನು ಕೋಳ್ಯೂರು ರಾಮಚಂದ್ರರಾಯರು ಗೌರವಿಸಲಿದ್ದಾರೆ. ಹಿರಿಯ ವಿದ್ವಾಂಸರುಗಳಾದ ಲಕ್ಷ್ಮೀಶ ತೋಳ್ಪಾಡಿ, ಅರುವಕೊರಗಪ್ಪ ಶೆಟ್ಟಿ, ಎ. ಪಿ. ಮಾಲತಿ, ಮಂಟಪ ಪ್ರಭಾಕರಉಪಾಧ್ಯ, ಎಚ್.ಎಸ್. ಬಲ್ಲಾಳ್, ಪಿ.ಎಸ್. ಎಡಪಡಿತ್ತಾಯ, ಪದ್ಮಾ ಸುಬ್ರಹ್ಮಣ್ಯಂ, ವಿದ್ವಾನ್ ಪಪ್ಪು, ವೇಣುಗೋಪಾಲ್, ಕಲಾಮಂಡಲಂ ಗೋಪಿ, ರಾಜ್ ಕೆ. ಶೆಟ್ಟಿ, ಪೆರುವೋಡಿ ನಾರಾಯಣ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಇದೇ ಸಂದರ್ಭದಲ್ಲಿ ಕೋಳ್ಯೂರ್‌ರ ಕುರಿತಾದ ಗ್ರಂಥ ಪ್ರಕಟಣೆಗೊಳ್ಳಲಿದೆ. ಹಿರಿಯ ವಿದ್ವಾಂಸರ ಮತ್ತು ಯುವ ಕಲಾವಿದರ ಘೋಷ್ಠಿ ಸಂಪನ್ನಗೊಳ್ಳಲಿದೆ. ಕೊನೆಯಲ್ಲಿ ಕಥಕಳಿ-ಯಕ್ಷಗಾನ ಜುಗಲ್‌ಬಂದಿ ಕಲಾಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಪ್ರತಿದಿನದ ಕಾರ್ಯಕ್ರಮಗಳು ಯೂ-ಟ್ಯೂಬ್ ಸ್ಟ್ರೀಮ್ ನಲ್ಲಿ ಪ್ರಸಾರಗೊಳ್ಳಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ವಿವರ ನೀಡಿದರು. ಸಂಸ್ಥೆಯಉಪಾಧ್ಯಕ್ಷರಾದ ಎಸ್. ವಿ ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಹಾಗೂ ಕೋಳ್ಯೂರರ ಸುಪುತ್ರ ಶ್ರೀಧರ ರಾವ್ ಮತ್ತು ಮೊಮ್ಮಗ ನಟರಾಜ ಗೋಪಾಡಿ ಉಪಸ್ಥಿತರಿದ್ದರು.
ನಾನು ತಿಳಿದಂತೆ, ಕನ್ಯಾನ, ಕೋಳ್ಯೂರು ಬದಿಯಿಂದ, ತೆಂಕುತಿಟ್ಟಿನ ಯಕ್ಷಗಾನಕ್ಕೆ ಕೊಡುಗೆ ಅಪಾರ.
ಇಂದು ನಮ್ಮನಗಲಿದ, ಗಣಪ್ಪಣ್ಣ ನ ಪದ್ಯಾಣ ಕನ್ಯಾ ನವೆ.
ಯಕ್ಷಗಾನ ದ ಅಗ್ರಮಾನ್ಯ ಕಲಾವಿದರಾದ
ದಿ.ವಿಠಲ ಶಾಸ್ತ್ರಿಗಳು,ಅವರ ತಮ್ಮ ರಾಮ ಶಾಸ್ತ್ರಿಗಳು, ಅವರ ತಂದೆ ಒಪ್ಪಕುಂಙಿ ಶಾಸ್ತ್ರಿ ಗಳು , ಕೋಳ್ಯೂರು, ನಾರಾಯಣ ಭಟ್ಟರು,ಹೊಸಹಿತ್ತ್ಲ ಲಿಂಗಣ್ಣ, , ಗಣಪ್ಪಣ್ಣ,, ಹಿರಿಯಾರದ ರಾಮಚಂದ್ರ ರಾವ್, ಕೋಳ್ಯೂರು, ವಿದ್ಯಾ ಕೋಳ್ಯೂರು,ದಿ.ಬೇತ ಕುಂಙ,ಇವರೆಲ್ಲ ಮೂಲ ಕನ್ಯಾ ನ, ಕೋಳ್ಯೂರು.
ಭವಿಷ್ಯ ಶೋಧನೆ ಮಾಡಿದರೆ , ತೆಂಕುತಿಟ್ಟಿನ ಯಕ್ಷಗಾನ ದ ಮೂಲವೇ ,ಕನ್ಯಾನ, ಕೋಳ್ಯೂರು, ಪೈವಳಿಕೆ,ಕೋಡಪದವು ಇರಬಹುದು ಎಂತ ಅನಿಸಿಕೆ.