Saturday, May 18, 2024
Homeಯಕ್ಷಗಾನನಗುಮೊಗದ ಅನುಭವಿ, ಸಜ್ಜನ ಕಲಾವಿದ - ಶ್ರೀ ವಾಮನ್ ಕುಮಾರ್ ವೇಣೂರು

ನಗುಮೊಗದ ಅನುಭವಿ, ಸಜ್ಜನ ಕಲಾವಿದ – ಶ್ರೀ ವಾಮನ್ ಕುಮಾರ್ ವೇಣೂರು

ಶ್ರೀ ವಾಮನ್ ಕುಮಾರ್ ವೇಣೂರು ಅವರು ತೆಂಕುತಿಟ್ಟಿನ ಅನುಭವಿ ಕಲಾವಿದರು. ಸುಮಾರು ಮೂವತ್ತು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಸ್ತ್ರೀ ವೇಷ ಮತ್ತು ಪುಂಡುವೇಷಧಾರಿಯಾಗಿ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗುಮೊಗದ ಸರಳ, ಸಜ್ಜನ ಕಲಾವಿದರಿವರು. ಪ್ರಸ್ತುತ ಕಿಶನ್ ಹೆಗ್ಡೆ ಸಂಚಾಲಕತ್ವದ ಹಿರಿಯಡಕ ಮೇಳದಲ್ಲಿ ಕಲಾವಿದರಾಗಿ ಮತ್ತು ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಶ್ರೀ ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು. ಇವರ ಅಣ್ಣನೂ ಮಹಾಲಿಂಗೇಶ್ವರ ದೇವರ ಸೇವೆ ಮಾಡಿದ್ದರು. ಪ್ರಸ್ತುತ ವಾಮನ ಕುಮಾರರ ಅಳಿಯ ಈ ಕಾಯಕವನ್ನು ನಡೆಸುತ್ತಿದ್ದಾರೆ.

ವಾಮನಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ. ಎಂಟನೇ ತರಗತಿ ವರೆಗೆ. ಇವರೂ ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು. ವೇಣೂರಿನಲ್ಲಿ ಪ್ರತಿ ಮಂಗಳವಾರ ಮೇಳದ ಆಟ ನಡೆಯುತ್ತಿತ್ತು. (ವಾರದ ಸಂತೆಯ ದಿನ) ಅಲ್ಲದೆ ಬೇರೆ ದಿನಗಳಲ್ಲಿಯೂ ಪ್ರದರ್ಶನಗಳು ನಡೆಯುತ್ತಿತ್ತು. ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ ನೋಡುವ ಅವಕಾಶ ಇತ್ತು.

ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಪುಂಡುವೇಷ ಮತ್ತು ಸ್ತ್ರೀವೇಷಧಾರಿಯಾಗಬೇಕೆಂದು ಬಯಸಿದ್ದರು. ನಾಟ್ಯ ಕಲಿಯುವ ತೀರ್ಮಾನವನ್ನೂ ಮಾಡಿದರು. ಬಾವನಾದ ಶ್ರೀ ಜಗದೀಶ ದೇವಾಡಿಗರು (ಅಕ್ಕನ ಗಂಡ) ಇವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. 1989ರಲ್ಲಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.

ಜಾಹೀರಾತು 

ಕಲಿಕಾ ಕೇಂದ್ರದಲ್ಲಿ ಶಂಭಯ್ಯ ಭಟ್, ಮಹೇಶ ಮಣಿಯಾಣಿ. ಪಂಜ ಕಿರಣ್ ಕುಮಾರ್, ಸುಜಯ ಹೆಗ್ಡೆ ಕುತ್ಲೂರು ಇವರ ಸಹಪಾಠಿಗಳಾಗಿದ್ದರು. ಕಲಿಕಾ ಕೇಂದ್ರದ ಮೊದಲ ಪ್ರದರ್ಶನ ಪಂಚವಟಿ ಪ್ರಸಂಗದಲ್ಲಿ ಸೀತೆಯಾಗಿ ರಂಗಪ್ರವೇಶ. ಬಳಿಕ ರತಿಕಲ್ಯಾಣ ಪ್ರಸಂಗದ ಮನ್ಮಥ. ಬಾಲಲೀಲೆ ಪ್ರಸಂಗದ ಶ್ರೀಕೃಷ್ಣನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. 

ಶ್ರೀ ವಾಮನ ಕುಮಾರರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ಕಲಿಕಾ ಕೇಂದ್ರದ ಸಹಪಾಠಿ ಪಂಜ ಕಿರಣ್ ಕುಮಾರರ ಜತೆ ಬಾಲಗೋಪಾಲರಾಗಿ ವ್ಯವಸಾಯ ಆರಂಭ. ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ. ಹಿರಿಯ ಹೆಸರಾಂತ ಕಲಾವಿದರ ಒಡನಾಟ ಕಲಿಕೆಗೆ ಅವಕಾಶವಾಗಿತ್ತು. ಅದು ನನ್ನ ಭಾಗ್ಯ ಎಂದು ವಾಮನಕುಮಾರರು ಹೇಳುತ್ತಾರೆ. ಬಳಿಕ ಮೇಳದ ತಿರುಗಾಟ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು.

ಭಾಗವತರಾದ ಪೆರುವಡಿ ಶ್ರೀ ಶ್ಯಾಮ ಭಟ್ಟರ ಕೇಳಿಕೆಯಂತೆ ಕದ್ರಿ ಮೇಳಕ್ಕೆ ಸೇರಿದ್ದರು. ಖ್ಯಾತ ಹಿರಿಯ ಕಲಾವಿದ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 4 ವರ್ಷಗಳ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ವಾಮನ ಕುಮಾರರ ವೇಷಗಳನ್ನು ರಂಗದಲ್ಲಿ ಮೆರೆಸಿದವರು ಶ್ರೀ ಮನೋಹರ ಕುಮಾರರು. ತಿರುಮಲೆತ ತೀರ್ಥ ಪ್ರಸಂಗದ ತೇಜಾಕ್ಷಿ ಪಾತ್ರ. ಕೇವಲ ಒಂದು ಪದ್ಯದ ಪಾತ್ರ. ತೇಜಾಕ್ಷನ ಪಾತ್ರ ನಿರ್ವಹಿಸುತ್ತಿದ್ದ ಡಿ. ಮನೋಹರ ಕುಮಾರರು ಅವಕಾಶಗಳನ್ನಿತ್ತು ವಾಮನ ಕುಮಾರರ ತೇಜಾಕ್ಷಿ ಪಾತ್ರವನ್ನು ಮೆರೆಸಿದ್ದರು. (ಅಣ್ಣ-ತಂಗಿ ಪಾತ್ರ)

ಡಿ.ಮನೋಹರ ಕುಮಾರರ ಜತೆ ಕೋಟಿ- ಚೆನ್ನಯ, ಕಾಂತಾಬಾರೆ ಬೂದಬಾರೆ ಮೊದಲಾದ ಜೋಡಿ ಪಾತ್ರಗಳಲ್ಲಿ ಮಿಂಚಲು ಅವಕಾಶವಾಗಿತ್ತು. ಈ ಸಂದರ್ಭ ಕೊಕ್ಕಡ ಈಶ್ವರ ಭಟ್ ,ಮತ್ತು ಬಂಟ್ವಾಳ ಜಯರಾಮ ಆಚಾರ್ಯರ ಒಡನಾಟ ಕಲಿಕೆಗೆ ಅನುಕೂಲವಾಗಿತ್ತು. ಗೆಜ್ಜೆದ ಪೂಜೆ ಪ್ರಸಂಗದಲ್ಲಿ ನಾಗನಾಗಿ ಅಭಿನಯಿಸಿ ಖ್ಯಾತರಾದ ಮನೋಹರಕುಮಾರರು ವಾಮನಕುಮಾರರ ರವಿವರ್ಮನ ಪಾತ್ರವೂ ರಂಜಿಸುವಂತೆ ಸಹಕರಿಸಿದ್ದರು.

ಪುರಾಣ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಶ್ರೀ ವಿಶ್ವನಾಥ ಶೆಟ್ಟರ ನಿರ್ದೇಶನ, ಸಹಕಾರಗಳು ವಾಮನ ಕುಮಾರರಿಗೆ ದೊರಕಿತ್ತು. ಅವರ ಜತೆ, ಜತೆಪಾತ್ರಗಳಲ್ಲಿ ರಂಜಿಸಿದರು. (ವಿಷ್ಣು-ಸುದರ್ಶನ, ಶ್ರೀರಾಮ-ತರಣಿಸೇನ ಮೊದಲಾದವುಗಳು). ಕದ್ರಿ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಳಿಕ ಶ್ರೀ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ. ಆರಂಭದಿಂದ ಕೊನೆ ತನಕ ಹದಿನೈದು ವರ್ಷ ಸದ್ರಿ ಮೇಳದಲ್ಲಿ ವ್ಯವಸಾಯ. ಖ್ಯಾತ ಕಲಾವಿದರ ಒಡನಾಟ ದೊರಕಿತ್ತು. ಖ್ಯಾತ ಪುಂಡುವೇಷಧಾರಿಯಾಗಿದ್ದ ಶ್ರೀ ಉದಯ ನಾವಡರೊಂದಿಗೆ ಜತೆ ವೇಷಗಳಲ್ಲಿ ರಂಜಿಸಿದ್ದರು.

ಬಾರ್ಕೂರ್ದ ಬಂಗಾರಿ ಪ್ರಸಂಗದಲ್ಲಿ ಉದಯ ನಾವಡರು ವೀರವರ್ಮನಾಗಿಯೂ, ವಾಮನ ಕುಮಾರರು ಕನಕವರ್ಮನಾಗಿಯೂ ಕೋಟಿ ಚೆನ್ನಯ ಪ್ರಸಂಗದಲ್ಲಿ ನಾವಡರು ಕೋಟಿ ಪಾತ್ರದಲ್ಲಿಯೂ ವಾಮನ ಕುಮಾರರು ಚೆನ್ನಯ ಪಾತ್ರದಲ್ಲೂ ಹೆಸರು ಗಳಿಸಿದ್ದರು. ಮಂಗಳಾದೇವಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಪೊಲ್ಯ, ಶಬರಾಯರು, ಸತ್ಯನಾರಾಯಣ ಪುಣಿಂಚತ್ತಾಯ, ರವೀಂದ್ರ ಶೆಟ್ಟಿ, ಕಡಬ, ಉಪಾಧ್ಯಾಯರು, ಲಕ್ಷ್ಮೀಶ ಅಮ್ಮಣ್ಣಾಯ, ಪಡ್ರೆ ಶ್ರೀಧರ, ಪಡ್ರೆ ಆನಂದ, ದಾಸಪ್ಪ ರೈ, ಶಿವರಾಮ ಜೋಗಿ, ಕೊಳ್ತಿಗೆ, ಮನೋಹರ ಕುಮಾರ್, ರಾಧಾಕೃಷ್ಣ ನಾವಡ, ಅಂಬಾ ಪ್ರಸಾದ, ಸರಪಾಡಿ ಅಶೋಕ ಶೆಟ್ಟಿ, ಉದಯ ನಾವಡ, ಸಿದ್ದಕಟ್ಟೆ ಸದಾಶಿವ ಶೆಟ್ಟಿ, ಸೀತಾರಾಮ ಕುಮಾರ್, ಮವ್ವಾರು ಬಾಲಕೃಷ್ಣ, ವೇಣೂರು ಸದಾಶಿವ ಆಚಾರ್ಯ, ವೇಣೂರು ಸದಾಶಿವ ಕುಲಾಲ್ ಮೊದಲಾದವರ ಒಡನಾಟ ದೊರಕಿತ್ತು.

ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯಲ್ಲಿ ಹತ್ತು ವರ್ಷ ಕಲಾಸೇವೆ ಮಾಡುವ ಅವಕಾಶವಾಗಿತ್ತು.(2008ರಿಂದ ತೊಡಗಿ) ಶ್ರೀಧರ ಭಂಡಾರಿ ಅವರ ನಿರ್ದೇಶನದಲ್ಲಿ ಪುರಾಣ ಪ್ರಸಂಗಗಳ ಅನುಭವವನ್ನೂ ಪಡೆದುಕೊಂಡಿದ್ದರು. ಅಲ್ಲದೆ ಈ ತಂಡದಲ್ಲಿ ಖ್ಯಾತ ಕಲಾವಿದರ ಒಡನಾಟವೂ ಪುರಾಣ ಪ್ರಸಂಗಗಳಲ್ಲಿ ವೇಷ ಮಾಡಲು ಸಹಕಾರಿಯಾಗಿತ್ತು.

ಪುರಾಣ ಪ್ರಸಂಗದ ಹೆಚ್ಚಿನ ಎಲ್ಲಾ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳಲ್ಲಿ ವಾಮನ ಕುಮಾರರು ಅಭಿನಯಿಸಿದ್ದಾರೆ. ಚಂಡಮುಂಡರು, ಬಬ್ರುವಾಹನ, ವಿಷ್ಣು, ಶ್ರೀಕೃಷ್ಣ, ಭಾರ್ಗವ, ಶ್ರೀರಾಮ, ಲಕ್ಷ್ಮಣ, ಶ್ವೇತಕುಮಾರ, ತ್ರಿಲೋಕಸುಂದರಿ, ಪದ್ಮಾವತಿ, ಲಕ್ಷ್ಮಿ ಅಲ್ಲದೆ ಅನೇಕ ಶೃಂಗಾರಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಶ್ವೇತಕುಮಾರ, ತ್ರಿಲೋಕಸುಂದರಿ, ಸಿತಕೇತ, ರಂಭೆ ಈ ನಾಲ್ಕೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣ ಪ್ರಸಂಗದಲ್ಲಿ ಕಿರಾತನ ಪಾತ್ರವನ್ನೂ, ಪದ್ಮಾವತಿಯ ಪಾತ್ರವನ್ನೂ ಮಾಡಬಲ್ಲರು.

ಭೃಗುಲಾಂಛನ ಪ್ರಸಂಗದಲ್ಲಿ ನಿಷ್ನು ಮತ್ತು ಲಕ್ಷ್ಮಿ ಪಾತ್ರಗಳನ್ನು ಮಾಡಿದ ಅನುಭವಿ. ಸುದರ್ಶನ ವಿಜಯ ಪ್ರಸಂಗದಲ್ಲಿ ವಿಷ್ಣು, ಲಕ್ಷ್ಮಿ, ಸುದರ್ಶನ ಎಂಬ ಮೂರೂ ಪಾತ್ರಗಳನ್ನು ಮಾಡಿರುತ್ತಾರೆ. ಇದು ವಾಮನಕುಮಾರರ ಪ್ರತಿಭಾ ಸಾಮರ್ಥ್ಯ. ಪುರಾಣ ಪ್ರಸಂಗಗಳ ಪರಿಪೂರ್ಣ ಅನುಭವ ದೊರೆಯಲು ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ತಿರುಗಾಟ ಕಾರಣ ಎಂಬುದು ವಾಮನಕುಮಾರರ ಅಭಿಪ್ರಾಯ.

ಕಸೆ ಸ್ತ್ರೀ ವೇಷಗಳಲ್ಲೂ ವಾಮನ ಕುಮಾರರು ಕಾಣಿಸಿಕೊಂಡರು. ಮೀನಾಕ್ಷಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಂಸಾರಿಕವಾಗಿಯೂ ಇವರು ತೃಪ್ತರು. ಇವರ ಪತ್ನಿ ಶ್ರೀಮತಿ ಆಶಾ ವಾಮನಕುಮಾರ್. ಗೃಹಣಿ. ಆಶಾ, ವಾಮನಕುಮಾರ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ವಂಶಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುತ್ರ ಮಾ| ಭುವನ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ವಾಮನಕುಮಾರರು ಮಕ್ಕಳಿಬ್ಬರಿಗೂ ಯಕ್ಷಗಾನ ಹೆಜ್ಜೆಗಾರಿಕೆ ಕಲಿಸಿದ್ದಾರೆ. ಮಕ್ಕಳು ಶಾಲಾ ಪ್ರದರ್ಶನಗಳಲ್ಲಿ ವೇಷ ಮಾಡಿರುತ್ತಾರೆ. ಮಕ್ಕಳಿಗೆ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ವಾಮನಕುಮಾರರಿಂದ ಕಲಾ ಸೇವೆಯು ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments