Saturday, January 18, 2025
Homeಯಕ್ಷಗಾನಅನುಭವಿ ಸಹೃದಯಿ ಭಾಗವತ ಶ್ರೀನಿವಾಸ ಬಳ್ಳಮಂಜ

ಅನುಭವಿ ಸಹೃದಯಿ ಭಾಗವತ ಶ್ರೀನಿವಾಸ ಬಳ್ಳಮಂಜ

ಫೋಟೋ ಕೃಪೆ: ಶ್ರೀ ಮಧುಸೂದನ ಅಲೆವೂರಾಯ 

ಶ್ರೀ ಶ್ರೀನಿವಾಸ ಬಳ್ಳಮಂಜ ಅವರು ಕಟೀಲು ಮೇಳದ ಭಾಗವತರು. ಪ್ರಸ್ತುತ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಭಾಗವತ ಸ್ಥಾನದ ಹೊಣೆಗಾರಿಕೆಯು ವಿಶಾಲವಾದುದು. ನಾಲ್ಕಾರು ಪದ್ಯಗಳನ್ನು ಹೇಳಿದವರು ಭಾಗವತರಾಗಲಾರರು. ಯಶಸ್ವಿ ಪ್ರದರ್ಶನಕ್ಕೆ ಬೇಕಾದ ಅಂಶಗಳನ್ನೆಲ್ಲಾ ಅವನು ತಿಳಿದಿರಬೇಕು.

ತೆಂಕು ತಿಟ್ಟಿನ ಹಿರಿಯ ಭಾಗವತರಾದ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳು ಪ್ರದರ್ಶನ ಮುಗಿದ ಮೇಲೆ ಆಟ ಹೇಗಾಗಿದೆ? ಎಂದು ಕೇಳುತ್ತಿದ್ದರು. ಪ್ರದರ್ಶನವು ಚೆನ್ನಾಗಿರಬೇಕೆಂಬ ತುಡಿತವು ಅವರಿಗಿತ್ತು. ಕಲಾವಿದರು ನಿಮ್ಮ ಪದ್ಯ ಚೆನ್ನಾಗಿತ್ತು ಎಂದು ಹೇಳಿದರೆ, ‘ನೀವು ಚೆನ್ನಾಗಿ ದುಡಿದಿರಿ,ಆದ ಕಾರಣ ನನ್ನ ಪದ್ಯ ಒಳ್ಳೆಯದಾಯಿತು” ಎಂದು ಹೇಳುತ್ತಿದ್ದರು. ಯಕ್ಷಗಾನವು ಸ್ವಪ್ರತಿಷ್ಠೆಗಾಗಿ ಇರುವ ವೇದಿಕೆಯಲ್ಲ, ಕಲಾವಿದರು ತಂಡವಾಗಿ ಮುನ್ನಡೆದು ಪ್ರದರ್ಶನದ ಗೆಲುವಿಗೆ ಕಾರಣರಾಗಬೇಕು ಎಂಬ ಸಂದೇಶವು ಇದರಲ್ಲಿದೆ.

“ಭಾಗವತನು ಯಶಸ್ವೀ ಪ್ರದರ್ಶನದ ಶ್ರೇಯಸ್ಸನ್ನು ಪಡೆಯುವುದರ ಜತೆಗೆ ಸೋಲಿನ ಹೊಣೆಯನ್ನೂ ಹೊರಬೇಕು. ಸೋಲಿಗಾಗಿ ಮತ್ತೊಬ್ಬರ ಕಡೆಗೆ ಬೆರಳು ತೋರಿಸಬಾರದು” ಇದು ಉಭಯ ತಿಟ್ಟುಗಳ ಖ್ಯಾತ ಭಾಗವತ ಕೀರ್ತಿಶೇಷ ಕಡತೋಕಾ ಮಂಜುನಾಥ ಭಾಗವತರ ಮಾತುಗಳು. ಇದರಿಂದ ಯಕ್ಷಗಾನದಲ್ಲಿ ಭಾಗವತನ ಸ್ಥಾನ, ಹೊಣೆಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಹೀಗೆ ಪ್ರದರ್ಶನಗಳ ಗೆಲುವಿಗಾಗಿಯೇ ಶ್ರಮಿಸಿದವರನೇಕರು. ಅಂತಹ ಹಿರಿಯರ ಆದರ್ಶವೇ ಉದಯೋನ್ಮುಖರಿಗೆ ಸ್ಪೂರ್ತಿಯಾಗುತ್ತದೆ. ಆಗಿರಬೇಕು. ಈ ವಿಚಾರಗಳಲ್ಲಿ ಶ್ರೀನಿವಾಸ ಬಳ್ಳಮಂಜ ಅವರನ್ನು ಅಭಿನಂದಿಸಲೇ ಬೇಕು. ಪ್ರದರ್ಶನವು ಉತ್ತಮವಾಗಿ ನಡೆಯಬೇಕೆಂಬ ತುಡಿತವುಳ್ಳ ಕಲಾವಿದರಿವರು. ಅದಕ್ಕಾಗಿ ಅವರು ಮಾಡುವ ಪೂರ್ವ ಸಿದ್ಧತೆಯನ್ನು ಮೆಚ್ಚಲೇ ಬೇಕು. ಸದಾ ಅಧ್ಯಯನಶೀಲರು. ಕಲಾವಿದರಿಗೆ ಹೀಗೆಯೇ ಸಾಗೋಣ ಎಂದು ಸೂಚಿಸಿಯೇ ರಂಗವೇರುತ್ತಾರೆ. 

ಶ್ರೀನಿವಾಸ ಬಳ್ಳಮಂಜ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ. ಶ್ರೀ ಬಾಬು ಗೌಡ ಮತ್ತು ಶ್ರೀಮತಿ ಬೂದಮ್ಮ ದಂಪತಿಗಳಿಗೆ ಮಗನಾಗಿ 1976ನೇ ಇಸವಿಯಲ್ಲಿ ಜನನ. ಶ್ರೀ ಬಾಬು ಗೌಡರು ಉತ್ತಮ ಕೃಷಿಕರು. ಹತ್ತು ವರ್ಷಗಳ ಕಾಲ ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದರೂ ಆಗಿದ್ದರು. ಶ್ರೀನಿವಾಸರ ಅಣ್ಣ ಶ್ರೀ ಸಿದ್ದಪ್ಪ ಗೌಡರು ಕಟೀಲು ಮೇಳದಲ್ಲಿ 30 ವರ್ಷಗಳ ಕಾಲ ನೇಪಥ್ಯ ಕಲಾವಿದರಾಗಿದ್ದರು.

ಶ್ರೀನಿವಾಸ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆ, ಅಣ್ಣನ ಜತೆ ಹೋಗಿ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ಊರಲ್ಲಿ ನಡೆಯುವ ಇತರ ಪ್ರದರ್ಶನಗಳನ್ನೂ ನೋಡುತ್ತಿದ್ದರು. ಇವರಿಗೆ ಭಾಗವತಿಕೆಯಲ್ಲಿ ಅತಿಯಾದ ಆಸಕ್ತಿ.  ಭಾಗವತನಾಗಬೇಕೆಂಬ ಆಸೆಯು ಮೂಡಿತ್ತು. ವಿದ್ಯಾರ್ಜನೆ ಹತ್ತನೇ ತರಗತಿ ವರೆಗೆ ಸಾಗಿತ್ತು. ಒಂದನೇ ತರಗತಿಯಿಂದ ಏಳರ ವರೆಗೆ ಪಾಲಡ್ಕ ಸರಕಾರೀ ಶಾಲೆಯಲ್ಲಿ. ಎಂಟರಿಂದ ಹತ್ತರ ವರೆಗೆ ಗೇರುಕಟ್ಟೆ ಸರಕಾರೀ ಹೈಸ್ಕೂಲಿನಲ್ಲಿ.

1995ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ಹಿಮ್ಮೇಳ ಕಲಿಕೆಗಾಗಿ ಸೇರಿಕೊಂಡರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಂದ ಭಾಗವತಿಕೆ ಅಭ್ಯಾಸ (ಬೈಪಾಡಿತ್ತಾಯ ದಂಪತಿಗಳು). ಬಳ್ಳಮಂಜ ಶ್ರೀನಿವಾಸರ ಮೊದಲ ತಿರುಗಾಟ ಕಟೀಲು ಮೂರನೆಯ ಮೇಳದಲ್ಲಿ. ಸಂಗೀತಗಾರನಾಗಿ. ರಂಗನಾಯಕ ಖ್ಯಾತಿಯ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಜತೆಯಲ್ಲಿ. ಖ್ಯಾತ ಹಿಮ್ಮೇಳ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ಟರೂ ಅಡೂರು ಗಣೇಶ ರಾಯರೂ ಜತೆಗಿದ್ದರು. ಗೇರುಕಟ್ಟೆ ಗಂಗಯ್ಯ ಶೆಟ್ಟರು, ಪುಂಡರೀಕಾಕ್ಷ ಉಪಾಧ್ಯಾಯರು, ಕೈರಂಗಳ ಕೃಷ್ಣ ಮೂಲ್ಯ ಮೊದಲಾದ ಕಲಾವಿದರ ಒಡನಾಟವೂ ದೊರಕಿತ್ತು.

ಜಾಹೀರಾತು 

ಕಲಿಕೆಗೆ ಇದು ಅತ್ಯಂತ ಸಹಕಾರಿಯಾಗಿತ್ತು. ಏಳು ವರ್ಷಗಳ ಕಾಲ ಸಂಗೀತಗಾರನಾಗಿ ಮೂರನೇ ಮೇಳದಲ್ಲಿ ತಿರುಗಾಟ. ಪೂರ್ವರಂಗಕ್ಕೆ ಪದ್ಯ ಹೇಳಿ ಬೆಳಗಿನ ವರೆಗೂ ಚಕ್ರತಾಳ ಬಾರಿಸುತ್ತಿದ್ದರು. ಪ್ರಸಂಗ ನಡೆ, ಆಟ ಆಡಿಸುವ ಕ್ರಮವನ್ನು ಅರಿಯಲು ಅವಕಾಶವಾಗಿತ್ತು.

ಬಳಿಕ ಏಳು ವರ್ಷಗಳ ಕಾಲ ಭಾಗವತನಾಗಿ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆ. ತ್ರಿವಿಕ್ರಮ ಶೆಣೈ, ಚಿದಂಬರ ಬಾಬು, ಕರುಣಾಕರ ಶೆಟ್ಟಿಗಾರ್, ದಯಾನಂದ ಶೆಟ್ಟಿಗಾರ್ ಮೊದಲಾದ ಕಲಾವಿದರ ಒಡನಾಟ ದೊರಕಿತ್ತು. ಎಂಟು ವರ್ಷಗಳ ಕಾಲ ಸದ್ರಿ ಮೇಳದಲ್ಲಿ ಕಲಾಸೇವೆ. ಮತ್ತೆ ಕಟೀಲು ಮೇಳಕ್ಕೆ ಪುನರಾಗಮನ. ಒಂದನೇ ಮೇಳದಲ್ಲಿ ತಿರುಗಾಟ. ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜ ಮತ್ತು ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳ ಜತೆ.

ಮತ್ತೆ ಕಟೀಲು 5ನೇ ಮೇಳದಲ್ಲಿ ಪಟ್ಲ ಶ್ರೀ ಸತೀಶ ಶೆಟ್ಟರ ಜತೆ ಕಲಾ ಸೇವೆ. ಬಳಿಕ ನಾಲ್ಕನೆಯ ಮೇಳಕ್ಕೆ. ಕಳೆದ ಎರಡು ವರ್ಷಗಳಿಂದ ಕಟೀಲು ನಾಲ್ಕನೇ ಮೇಳದ ಮುಖ್ಯ ಭಾಗವತರಾಗಿ ಕಲಾಸೇವೆ ಮಾಡುತ್ತಿದ್ದಾರೆ. ವರ್ಷವೂ ಹೊಸ ಹೊಸ ಪ್ರಸಂಗಗಳನ್ನು ಆಡಿಸಬೇಕೆಂಬ ಆಸಕ್ತಿ ತೋರುತ್ತಾರೆ. ಆ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಪ್ರಯತ್ನಿಸುತ್ತಾರೆ. ಪ್ರಸ್ತುತ ಕೆಲವು ಕಡೆ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ.

ಉತ್ತಮ ಕೃಷಿಕರೂ ಆಗಿರುತ್ತಾರೆ. ಕಳೆದ ವರ್ಷ ಹೊಸತಾಗಿ ಮನೆಯನ್ನು ಕಟ್ಟಿಸಿ ‘ಯಕ್ಷ ವೈಭವ’ ಎಂದು ಹೆಸರಿಸಿದ್ದಾರೆ. ಶ್ರೀನಿವಾಸ ಬಳ್ಳಮಂಜ ಅವರ ಪತ್ನಿ ಶ್ರೀಮತಿ ಸವಿತ. ದಂಪತಿಗಳಿಗೆ ಮೂವರು ಮಕ್ಕಳು. ಮಾಸ್ಟರ್ ರಕ್ಷಿತ್ ಆರನೇ ತರಗತಿ ವಿದ್ಯಾರ್ಥಿ. ಮಾಸ್ಟರ್ ಮೋಕ್ಷಿತ್ ೩ನೇ ತರಗತಿ ವಿದ್ಯಾರ್ಥಿ. ಮಾಸ್ಟರ್ ಸನ್ವಿತ್ ಗೆ ನಾಲ್ಕು ವರ್ಷ ಪ್ರಾಯ. ಪತ್ನಿ ಮಕ್ಕಳೊಂದಿಗೆ ಸಂತೃಪ್ತ ಜೀವನ ಶ್ರೀನಿವಾಸ ಬಳ್ಳಮಂಜರದ್ದು. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments