Saturday, January 18, 2025
Homeಯಕ್ಷಗಾನತೆಂಕುತಿಟ್ಟು-ಪುಂಡುವೇಷಕ್ಕೆ ಮಾದರಿ ‘ಲಿಂಗಣ್ಣ’ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್

ತೆಂಕುತಿಟ್ಟು-ಪುಂಡುವೇಷಕ್ಕೆ ಮಾದರಿ ‘ಲಿಂಗಣ್ಣ’ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್

ಯಕ್ಷಗಾನದಲ್ಲಿ ಪುಂಡುವೇಷಧಾರಿಯಾಗಿ ಪ್ರೇಕ್ಷಕರ ಮನಸೂರೆಗೊಂಡು ತಾನು ಕಾಣಿಸಿಕೊಳ್ಳಲು ಕಲಾವಿದರಿಗೆ ಅವಕಾಶಗಳು ಧಾರಾಳ ಇವೆ. ಪ್ರವೇಶದ ರೀತಿ, ಧೀಂಗಿಣ, ಅಭಿನಯ, ವನವಿಹಾರ, ಯುದ್ಧದ ಸಂದರ್ಭಗಳ ವೈವಿಧ್ಯತೆ ಹೀಗೆ ಅವಕಾಶಗಳು ಒದಗುತ್ತವೆ. ತೆಂಕುತಿಟ್ಟಿನಲ್ಲಿ ಉದಯೋನ್ಮುಖರನೇಕರು ಈಗ ಮಿಂಚುತ್ತಿದ್ದರೂ ಹಳೆಯ ಪ್ರೇಕ್ಷಕರು ಹೊಸಹಿತ್ತಿಲು ಮಹಾಲಿಂಗ ಭಟ್ (ಲಿಂಗಣ್ಣ), ಕ್ರಿಶ್ಚಿಯನ್ ಬಾಬು ಮೊದಲಾದವರನ್ನು ಇನ್ನೂ ಮರೆತಿಲ್ಲ. ಯಾಕೆಂದರೆ ಸಾಧಕರಾಗಿಯೇ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹೊಸಹಿತ್ತಿಲು ಮಹಾಲಿಂಗ ಭಟ್ಟರಂತೂ ಪುತ್ತೂರು ಶ್ರೀಧರ ಭಂಡಾರಿ ಎಂಬ ಅಸಾಮಾನ್ಯ ಪ್ರತಿಭೆಯು ಬೆಳಗಲು ಕಾರಣರಾಗಿ ಧನ್ಯರೆನಿಸಿಕೊಂಡರು.

ತೆಂಕುತಿಟ್ಟಿನ ಪುಂಡುವೇಷಗಳಿಗೆ ಅನನ್ಯ ಮಾದರಿಯಾಗಿದ್ದ ಮಹಾಲಿಂಗ ಭಟ್ಟರು ಸದ್ರಿ ವಿಚಾರಕ್ಕೆ ಅರ್ಹ ಸಂಪನ್ಮೂಲ ವ್ಯಕ್ತಿಯಾಗಿದ್ದವರು. ಹೊಸಹಿತ್ತಿಲು ಮಹಾಲಿಂಗ ಭಟ್ಟರ ಆಪ್ತೇಷ್ಟರು, ಕಲಾಭಿಮಾನಿಗಳೆಲ್ಲಾ ‘ಲಿಂಗಣ್ಣ’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. 1950-1990ರ ಕಾಲದಲ್ಲಿ ಶ್ರೀಯುತರು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿ ವಿಜೃಂಭಿಸಿದ್ದರು. ಆಳಂಗದ ಕೊರತೆಯನ್ನು ಬಿಟ್ಟರೆ (ಗಿಡ್ಡದೇಹ) ಬೇರೇನೂ ಕೊರತೆಗಳಿಲ್ಲದ ಅತ್ಯುತ್ತಮ ಪುಂಡುವೇಷಧಾರಿಯಾಗಿ ರಂಗವನ್ನಾಳಿದ್ದರು. ಬಾಲಗೋಪಾಲರಿಂದ ತೊಡಗಿ ಬೆಳೆಯುತ್ತಾ ಪುಂಡುವೇಷ, ಸ್ತ್ರೀವೇಷ, ಕಸೆ ಸ್ತ್ರೀವೇಷ, ಕಿರೀಟ ವೇಷ, ಹೆಣ್ಣುಬಣ್ಣ ಮೊದಲಾದ ವಿಭಾಗಗಳಲ್ಲಿ ಹೊಳೆದು ಕಾಣಿಸಿಕೊಂಡಿದ್ದರು.

ತರುಣವೀರರ ಪಾತ್ರಗಳಲ್ಲಿ ಇವರು ರಂಗಪ್ರವೇಶಿಸುವ ರೀತಿ ಪ್ರವೇಶದ ಮುಕ್ತಾಯಕ್ಕೆ ಹಾರಿ ರಥದಲ್ಲಿ ಕುಳಿತುಕೊಳ್ಳುವ ರೀತಿ, ರಥದ ಮೇಲೆಯೇ ಧೀಂಗಿಣ ಮತ್ತು ನಮೂನೆವಾರು ಕುಣಿಯುತ್ತಿದ್ದ ಇವರ ಅದ್ಭುತ ಸಾಹಸವನ್ನು ನೋಡಿದ ಹಳೆಯ ಪ್ರೇಕ್ಷಕರು ಅದನ್ನು ಈಗಲೂ ನೆನಪಿಸಿಕೊಂಡು ಸಂತೋಷಪಡುತ್ತಾರೆ. ಪುರಾಣಜ್ಞಾನ, ರಂಗನಡೆ, ಪ್ರಸಂಗ ಮಾಹಿತಿಗಳನ್ನು ತಿಳಿದು ಮತ್ತೊಬ್ಬರಿಗೆ ಹೇಳಬಲ್ಲ ಆ ಕಾಲದ ಕಲಾವಿದರಲ್ಲೊಬ್ಬರಾಗಿದ್ದರು ಲಿಂಗಣ್ಣ. ಅಭಿಮನ್ಯು, ಬಭ್ರುವಾಹನ, ಭಾರ್ಗವ, ಚಂಡಮುಂಡರು ಮೊದಲಾದ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಛಳಿಯದೆ ಉಳಿಯುವಂತೆ ಅಭಿನಯಿಸಿದ ಹಿರಿಮೆ ಇವರದು.

ಲಿಂಗಣ್ಣನವರು ಕಲಾವಿದನಾಗಿ ತನ್ನ ಮಿತಿಯನ್ನು ತಿಳಿದಿದ್ದರೂ, ಯಕ್ಷಗಾನದ ಪ್ರತಿಯೊಂದು ವಿಚಾರವೂ ತಿಳಿಯಬೇಕೆಂಬ ಹಂಬಲದಿಂದ ಕಲಿತವರು. ಇಂತವರು ಬಹಳ ಅಪರೂಪ. ಇವರೊಳಗೊಬ್ಬ ಕವಿಯೂ ಅಡಗಿದ್ದ. ಪದ್ಯ ರಚನೆಯನ್ನೂ ಮಾಡುತ್ತಿದ್ದರು. ಹೀಗೆ ಯಕ್ಷಗಾನ ಕಲೆಯ ಸಮಗ್ರ ಜ್ಞಾನವನ್ನು ಹೊಂದಿ ಸಮರ್ಥ ಸಂಪನ್ಮೂಲ ವ್ಯಕ್ತಿಯೂ ಆಗಿದ್ದರು.


                    ಹೊಸಹೊತ್ತಿಲು ಶ್ರೀ ಮಹಾಲಿಂಗ ಭಟ್ಟರು (ಲಿಂಗಣ್ಣ) ಕಾಸರಗೋಡು ತಾಲೂಕು ಮೀಂಜ ಗ್ರಾಮದ ಹೊಸಹಿತ್ತಿಲಿನಲ್ಲಿ ಗಣಪತಿ ಭಟ್ಟ ವೆಂಕಮ್ಮ ದಂಪತಿಗಳಿಗೆ ಪುತ್ರನಾಗಿ 1936ನೇ ಇಸವಿ ಮೇ 1ರಂದು ಜನಿಸಿದರು. ಅಜ್ಜಿ ಸರಸ್ವತೀ ಅಮ್ಮ ಹಾಡುತ್ತಿದ್ದ ಭಜನೆಯ ಪದ್ಯಗಳನ್ನು ಕೇಳಿಯೇ ಬೆಳೆದವರು. ಲಿಂಗಣ್ಣನವರ ತಂದೆ ಹೊಸಹಿತ್ತಿಲು ಗಣಪತಿ ಭಟ್ಟರು ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದರು. ಕಿರೀಟ ವೇಷಧಾರಿ. ಗದಾಯುದ್ಧದಲ್ಲಿ ಅವರ ಕೌರವನ ಪಾತ್ರ ಹೆಸರುವಾಸಿಯಾಗಿತ್ತು. ಅಲ್ಲದೆ ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಹಾಗಾಗಿ ಲಿಂಗಣ್ಣನವರಿಗೆ ಯಕ್ಷಗಾನವು ರಕ್ತವಾಗಿಯೇ ಬಂದಿತ್ತು. ಮೀಯಪದವು ಶಾಲೆಯಲ್ಲಿ 5ನೇ ತರಗತಿಯ ವರೇಗೆ ಓದಿದ್ದರು. ತನ್ನ 11ನೆಯ ವಯಸ್ಸಿನಲ್ಲಿ ತೀರ್ಥರೂಪರನ್ನು ಕಳೆದುಕೊಂಡ ಕಾರಣ ಓದಿಗೆ ವಿದಾಯ ಹೇಳಬೇಕಾಯಿತು.

ಲಿಂಗಣ್ಣನವರ ತಂದೆ ಹೊಸಹಿತ್ತಿಲು ಗಣಪತಿ ಭಟ್ಟರು ಧರ್ಮಸ್ಥಳ ಮೇಳದ ಕಲಾವಿದರಾಗಿದ್ದರು. 1947ರಲ್ಲಿ ನ್ಯುಮೋನಿಯಾದಿಂದ ಮರಣ ಹೊಂದಿದ್ದರು. ಲಿಂಗಣ್ಣನವರನ್ನು ಯಕ್ಷಗಾನ ಕಲಾವಿದನಾಗೆಂದು ಪ್ರೋತ್ಸಾಹಿಸಿದ್ದು ಅವರ ಅಣ್ಣ ಹುಲಿಕುಂಞ ನಾರಾಯಣ ಭಟ್ಟರು (ದೊಡ್ಡಪ್ಪನ ಮಗ). ಮೀಯಪದವಿನಲ್ಲಿ ದಿನನಿತ್ಯವೆಂಬಂತೆ ಬಯಲಾಟ ನಡೆಯುತ್ತಿದ್ದ ಕಾಲ. ಒಮ್ಮೆ ಹಾಕಿದ ರಂಗಸ್ಥಳವನ್ನು ತೆಗೆಯುವುದು ತಿರುಗಾಟ ಮುಗಿದ ಮೇಲೆಯೇ. ಕದ್ರಿ ಮೇಳದವರು ಹೆಚ್ಚಾಗಿ ಬಂದು ಆಟವಾಡುತ್ತಿದ್ದರು. ಹಗಲು ಲಿಂಗಣ್ಣನವರು ಮತ್ತು ನೆರೆಕರೆಯ ಮಕ್ಕಳು ಈ ರಂಗಸ್ಥಳದಲ್ಲಿ ಕುಣಿಯುತ್ತಿದ್ದರಂತೆ.

ಅಡಿಕೆ ಮರದ ಹಾಳೆಗಳು ಕಿರೀಟಗಳಾಗಿ ಮತ್ತು ತೆಂಗಿನ ಕೊತ್ತಳಿಕೆಗಳನ್ನು ಆಯುಧಗಳಾಗಿ ಬಾಲಕರ ಯಕ್ಷಗಾನದ ಹುಚ್ಚಿಗೆ ಬಳಸಲ್ಪಡುತ್ತಿದ್ದವು. ಹೊಸಹಿತ್ತಿಲು ಗಣಪತಿ ಭಟ್ಟರ ಮೇಲಿನ ಗೌರವದಿಂದ ಮೇಳದ ಕಲಾವಿದರು ವಿಶ್ರಾಂತಿಗೆ ಮನೆಗೆ ಬರುತ್ತಿದ್ದರು. ಅವರು ಮನೆಯ ಕೊಟ್ಟಿಗೆಯಲ್ಲಿ ಮಕ್ಕಳಿಗೆ ನಾಟ್ಯವನ್ನೂ ಕಲಿಸುತ್ತಿದ್ದರಂತೆ. ರಾತ್ರಿ ಅವರ ಜತೆ ಚೌಕಿಗೆ. ಆಟ ನೋಡುವುದು ಹೀಗೆ ಕಲಾಸಕ್ತಿ ಬೆಳೆಯಿತು. 1948ರಲ್ಲಿ ಶ್ರೀಕೃಷ್ಣಾಷ್ಟಮಿಯ ದಿನದಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಲಿಂಗಣ್ಣನವರು ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು. (ಬಾಲ ಗೋಪಾಲನಾಗಿ 12ನೆಯ ವಯಸ್ಸಿನಲ್ಲಿ).

ಲಿಂಗಣ್ಣನವರು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಆಗ ಮೇಳವನ್ನು ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರೂ, ಕುರಿಯ ವಿಠಲ ಶಾಸ್ತ್ರಿಗಳೂ ನಡೆಸುತ್ತಿದ್ದರು. ದೊಡ್ಡಪ್ಪನ ಮಗ ಹುಲಿಕುಂಞ ನಾರಾಯಣ ಭಟ್ಟರೂ ವೇಷಧಾರಿಗಳಾಗಿದ್ದರು. ಮುಂದಿನ ವರ್ಷ (1949) ಕಟೀಲು ಮೇಳದಲ್ಲಿ ತಿರುಗಾಟ. ಶಾಸ್ತ್ರೀಯವಾಗಿ ನಾಟ್ಯ ಕಲಿಯಬೇಕೆಂಬ ಛಲದಿಂದ ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳ ಮನೆಗೆ ತೆರಳಿದರು. ಹೊಸ ಹಿತ್ತಿಲು ಗಣಪತಿ ಭಟ್ಟರ ಅಭಿಮಾನಿಯಾಗಿದ್ದ ವಿಠಲ ಶಾಸ್ತ್ರಿಗಳು ಲಿಂಗಣ್ಣನನ್ನು ಶಿಷ್ಯನಾಗಿ ಸ್ವೀಕರಿಸಿದರು.

ಮೇಳಕ್ಕೆ ಬಂದು ಹಿರಿಯ ಕಲಾವಿದರ ಮನಗೆದ್ದು ನಾಟ್ಯ ಕಲಿಯುವ ಕ್ರಮವಿದ್ದ ಕಾಲ ಅದು. ವಿಠಲ ಶಾಸ್ತ್ರಿಗಳು ತನ್ನ ಕೋಳ್ಯೂರು ಮನೆಯಲ್ಲಿ ಅನೇಕ ಶಿಷ್ಯಂದಿರಿಗೆ ನಾಟ್ಯ ಹೇಳಿಕೊಡಲು ಆರಂಭಿಸಿದ್ದರು. ಅದು ಯಕ್ಷಗಾನ ಕಲಿಕಾ ಕೇಂದ್ರವಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳೂ, ಅವರ ಶಿಷ್ಯರೂ ನಾಟ್ಯ, ಮಾತು, ಬಣ್ಣಗಾರಿಕೆಯನ್ನು ಅಲ್ಲಿ ಕಲಿಸುತ್ತಿದ್ದರು. ಲಿಂಗಣ್ಣನವರು ಶಾಸ್ತ್ರಿಗಳಿಂದಲೂ, ಅವರ ಶಿಷ್ಯ ಖ್ಯಾತ ಸ್ತ್ರೀಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರಿಂದಲೂ ಯಕ್ಷಗಾನವನ್ನು ಕ್ರಮವತ್ತಾಗಿ ಅಭ್ಯಾಸ ಮಾಡಿದರು. ಆ ವರ್ಷ ಶಾಸ್ತ್ರಿಗಳ ಜತೆ ಧರ್ಮಸ್ಥಳ ಮೇಳಕ್ಕೆ. ಅಗರಿ ಭಾಗವತರು, ನೆಡ್ಲೆ, ಗೋಪಾಲಕೃಷ್ಣ ಕುರುಪ್, ಮಾಣಂಗಾಯಿ ಕೃಷ್ಣ ಭಟ್, ದೊಡ್ಡ ಸುಬ್ಬಯ್ಯ ಶೆಟ್ರು (ಕಾಸರಗೋಡು) ವಿಟ್ಲ ರಾಮಯ್ಯ ಶೆಟ್ರು, ಅಣ್ಣ ನಾರಾಯಣ ಭಟ್ಟರೊಂದಿಗೆ ತಿರುಗಾಟ ನಡೆಸಿದರು.

ಮುಂದಿನ ವರ್ಷ ಕುರಿಯ ರಾಮಶಾಸ್ತ್ರಿಗಳ ಯಾಜಮಾನ್ಯ. ಬಾಲಗೋಪಾಲ, ದೇವೇಂದ್ರನ ಬಲ ಮೊದಲಾದ ವೇಷಗಳನ್ನೂ ಮಾಡುತ್ತಾ ಎರಡನೆಯ ಪುಂಡುವೇಷಧಾರಿಯಾಗಿ ಆಯ್ಕೆಯಾದರು. ಲಿಂಗಣ್ಣನವರು ಸತತ ಅಭ್ಯಾಸಿ. ವೇಷವಿಲ್ಲದ ಸಮಯದಲ್ಲಿ ನಿದ್ರಿಸದೆ ಚಕ್ರತಾಳ ಬಾರಿಸುತ್ತಿದ್ದರು. ಇಲ್ಲವಾದರೆ ಭಾಗವತರ ಹಿಂದೆ ನಿಂತು ಆಟ ನೋಡುವುದು. ಹಾಗಾಗಿಯೇ ತನ್ನ ವೃತ್ತಿಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಂಡರು. ಅಲ್ಲದೆ ಬಣ್ಣದ ಮಹಾಲಿಂಗ, ಪಡ್ರೆ ಚಂದು, ಸಣ್ಣ ತಿಮ್ಮಪ್ಪು ಮೊದಲಾದವರ ಸಹಕಾರ, ಪ್ರೋತ್ಸಾಹವೂ ಸಿಕ್ಕಿತ್ತು. ಯಾವ ವೇಷವನ್ನೂ ಮಾಡಬಲ್ಲೆ ಎಂಬ ಧೈರ್ಯವೂ ಮೂಡ ತೊಡಗಿತ್ತು.

1953ರಲ್ಲಿ ಮೂಲ್ಕಿ ಮೇಳದ ತಿರುಗಾಟ. ಇದು ಕಲಾಬದುಕಿನ ಮಹತ್ವದ ತಿರುವು. ಮುಖವರ್ಣಿಕೆ, ವೇಷಗಳ ಕ್ರಮವನ್ನು ಕಲಿಯಲು ಇದು ವೇದಿಕೆಯೂ ಆಯಿತು. ಅಜ್ಜ ಬಲಿಪ ಭಾಗವತರ ಶಿಷ್ಯ ಈಶ್ವರಪ್ಪಯ್ಯ ಭಾಗವತರು. ಇವರು ಅಗರಿ ಅವರಂತೆ ರಂಗಮಾಹಿತಿಯನ್ನು ಹೊಂದಿದವರು. ಚೇವಾರು ರಾಮಕೃಷ್ಣ ಕಾಮತ್, ತೊಕ್ಕೊಟ್ಟು ಲೋಕಯ್ಯ ಗಟ್ಟಿ, ಹಾಸ್ಯಕ್ಕೆ ಪೆರುವಡಿ ನಾರಾಯಣ ಭಟ್, ಅಗಲ್ಪಾಡಿ ಮಹಾಲಿಂಗ (ಸ್ತ್ರೀವೇಷ), ಕುಂಬಳೆ ಶಂಕರ ಬಲ್ಯಾಯ, ಚವರಿಕಾಡು ಕೃಷ್ಣ ಭಂಡಾರಿ ಮೊದಲಾದವರೊಡನೆ ತಿರುಗಾಟ. ಬಣ್ಣಕ್ಕೆ ಸಣ್ಣ ತಿಮ್ಮಪ್ಪು (ಹಂದಿ ತಿಮ್ಮಪ್ಪು ಪಂಜಿ ತಿಮ್ಮಪ್ಪು ಎಂದು ಇವರನ್ನು ಕರೆಯುತ್ತಿದ್ದರು).

ಅಲ್ಲದೆ ಮೊದಲು ಕಲಾವಿದನಾಗಿದ್ದು ಮತ್ತೆ ಅರಣ್ಯ ರಕ್ಷಕ ಕೆಲಸಕ್ಕೆ ಹೋಗಿದ್ದ ಪುತ್ತೂರು ನಾರಾಯಣ ಹೆಗ್ಡೆಯವರೂ ಮುಲ್ಕಿ ಮೇಳಕ್ಕೆ ಬಂದಿದ್ದರು. ಲಿಂಗಣ್ಣನವರು ಒಂದನೇ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡರು. ಮುಲ್ಕಿ ದೇವಸ್ಥಾನದ ಎದುರುಗಡೆ ಬಭ್ರುವಾಹನನಾಗಿ ಅಭಿನಯಿಸಿದರು (1953). ಆಗ ಲಿಂಗಣ್ಣನವರ ವಯಸ್ಸು ಕೇವಲ ಹದಿನೇಳು! ಹಿಂದಿನ ಕಾಲದ ತಿರುಗಾಟ. ನಡೆದೇ ಸಾಗಬೇಕಿತ್ತು. ಆಯಾಸವಾದಾಗ ಮರದಡಿ ವಿಶ್ರಾಂತಿ. ಅಲ್ಲಿಯೇ ಹಿರಿಯ ಕಲಾವಿದರಿಂದ ಅಭ್ಯಾಸಿಗಳಿಗೆ ಪಾಠ. ಚೆಂಡೆ ಮದ್ದಳೆ ಬಾರಿಸಿ ಕುಣಿಸುತ್ತಿದ್ದರಂತೆ. ಸಣ್ಣ ತಿಮ್ಮಪ್ಪುನವರು ಪ್ರೀತಿಯಿಂದ ಮುಖವರ್ಣಿಕೆ ಹೇಳಿಕೊಟ್ಟವರು. ರಂಗಮಾಹಿತಿಯನ್ನೂ ಹೇಳಿಕೊಟ್ಟಿದ್ದರಂತೆ.

ಪುಂಡುವೇಷದ ಜತೆಗೆ ಲಿಂಗಣ್ಣನವರು ಕಿರೀಟ ವೇಷಗಳನ್ನೂ ಅನಿವಾರ್ಯಕ್ಕೆ ಮಾಡುತ್ತಿದ್ದರು. ಸಣ್ಣ ತಿಮ್ಮಪ್ಪು ಅವರ ವರಾಹ ಪಾತ್ರಕ್ಕೆ ಹಿರಣ್ಯಾಕ್ಷನಾಗಿಯೂ ಅಭಿನಯಿಸಿದರು. ಹೆಜಮಾಡಿಯಲ್ಲಿ ಮುಲ್ಕಿ-ಕಟೀಲು ಮೇಳಗಳ ಜೋಡಾಟ. ಲಿಂಗಣ್ಣನವರ ಅಭಿಮನ್ಯು ಪಾತ್ರವನ್ನು ಮೆಚ್ಚಿದ ಪ್ರೇಕ್ಷಕರು ಬಂಗಾರ ಬಳೆಗಳನ್ನು ಬಹುಮಾನವಾಗಿ ನೀಡಿದ್ದರು. ಆ ಕಾಲದಲ್ಲಿ ಇವರ ಅಭಿಮನ್ಯುವಿನ ಪಾತ್ರಕ್ಕೆ ಸಾರಥಿಯಾಗಿ ಕೆ. ಗೋವಿಂದ ಭಟ್ಟರು ಅಭಿನಯಿಸುತ್ತಿದ್ದರಂತೆ. ಲಿಂಗಣ್ಣನವರು ಕುರುಕ್ಷೇತ್ರ ಪ್ರಸಂಗದಲ್ಲಿ ಅಭಿಮನ್ಯು ಮಾಡಿ, ಕೌರವ ಅಲ್ಲದೆ ಭೀಷ್ಮ ಮಾಡಿ ಕೌರವನ ಪಾತ್ರಗಳನ್ನೂ ನಿರ್ವಹಿಸಿದವರು. ದೈಹಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠರಾದರೆ ಮಾತ್ರ ಇದು ಸಾಧ್ಯ. ವೃತ್ತಿನಿಷ್ಠೆ, ಮೇಳನಿಷ್ಠೆಯೂ ಜತೆಗಿರಬೇಕು. ಇಂತವರು ನಿಜಕ್ಕೂ ಸಾಧಕರೇ ಹೌದು.


               1954ರಲ್ಲಿ ಮತ್ತೆ ಗುರು ಕುರಿಯ ವಿಠಲ ಶಾಸ್ತ್ರಿಗಳ ಜತೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. 1967ರ ವರೇಗೆ ಸದ್ರಿ ಮೇಳದಲ್ಲಿ ವ್ಯವಸಾಯ. ಬಣ್ಣದ ಮಹಾಲಿಂಗ, ಕದ್ರಿ ವಿಷ್ಣು, ಕುಂಞಬಾಬು, ಕರುವೊಳು ದೇರಣ್ಣ ಶೆಟ್ಟಿ, ಮಾಣಂಗಾಯಿ ಕೃಷ್ಣ ಭಟ್ರು, ವಿಟ್ಲ ರಾಮಯ್ಯ ಶೆಟ್ರು, ಮುಳಿಯಾಲ ಭೀಮ ಭಟ್ಟ, ಕೋಳ್ಯೂರು, ಕರ್ಗಲ್ಲು ಸುಬ್ಬಣ್ಣ ಭಟ್, ಮುದುಕುಂಜ ವಾಸುದೇವ ಪ್ರಭು, ಮಿತ್ತನಡ್ಕ ರಾಮಕೃಷ್ಣ ಕಾಮತ್ ಮೊದಲಾದವರಿದ್ದರು. ಮೊದಲ ಸೇವೆ ಆಟದ ದಿನವೇ ಬಭ್ರುವಾಹನ. ಕರ್ಗಲ್ಲು ಸುಬ್ಬಣ್ಣ ಭಟ್ಟರು ಚಿತ್ರಾಂಗದೆಯಾಗಿಯೂ ಕುರಿಯ ವಿಠಲ ಶಾಸ್ತ್ರಿಗಳು ಶ್ರೀಕೃಷ್ಣನಾಗಿಯೂ ಅಭಿನಯಿಸಿದ್ದರು.

ಬಣ್ಣದ ಮಹಾಲಿಂಗನವರದ್ದೂ ಲಿಂಗಣ್ಣನವರದ್ದೂ ಕೊಡು-ಕೊಂಡುಕೊಳ್ಳುವಿಕೆಯ ವ್ಯವಹಾರ. ಬಣ್ಣದ ಮಹಾಲಿಂಗನವರು ಬಣ್ಣಗಾರಿಕೆ, ರಂಗನಡೆಗಳನ್ನು ಲಿಂಗಣ್ಣನವರಿಗೂ, ಲಿಂಗಣ್ಣನವರು ಮಾತುಗಾರಿಕೆ, ಪ್ರಸಂಗ ಮಾಹಿತಿಗಳನ್ನೂ ಮಹಾಲಿಂಗನವರಿಗೂ ಪರಸ್ಪರ ಹೇಳಿಕೊಡುತ್ತಿದ್ದರಂತೆ. ಬಣ್ಣದ ಮಹಾಲಿಂಗಜ್ಜನವರಿಗೆ ನನ್ನಲ್ಲಿ ಅತೀವ ಪ್ರೀತಿ ಎಂದು ಲಿಂಗಣ್ಣನವರು ಹೇಳಿಕೊಳ್ಳುತ್ತಿದ್ದರು.


                   ಹೊಸಹಿತ್ತಿಲು ಮಹಾಲಿಂಗ ಭಟ್ಟರು ಜೋಡಾಟದಲ್ಲೂ ಸೈ ಎನಿಸಿಕೊಂಡವರು. ಅಂದಿನ ಕಾಲ ಇವರೂ ಕ್ರಿಶ್ಚನ್‍ಬಾಬುರವರೂ ಜೋಡಾಟದ ಪ್ರತಿಸ್ಪರ್ಧಿಗಳಾಗಿದ್ದರು. ಅಭಿಮನ್ಯು, ಲಕ್ಷ್ಮಣ, ಚಂಡ, ಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳಲ್ಲಿ ಇಬ್ಬರೂ ಪರಸ್ಪರ ತಾವೇ ಮಿಗಿಲೆಂಬಂತೆ ಅಭಿನಯಿಸಿದರು. ಇವರಿಬ್ಬರೊಳಗೆ ಯಾರು ಹೆಚ್ಚೆಂದು ತೀರ್ಮಾನಕ್ಕೆ ಬರಲು ಪ್ರೇಕ್ಷಕರಿಗೂ ಕಷ್ಟವಾಗುತ್ತಿತ್ತು. ಬಾಲಲೀಲೆ ಬಿಲ್ಲಹಬ್ಬ ಪ್ರಸಂಗವಾದರೆ ಕೃಷ್ಣ ಕಂಸವಧೆಯಲ್ಲಿ ವಿಠಲ ಶಾಸ್ತ್ರಿಗಳು ಕಂಸ ಮಾಡುವಾಗ ಲಿಂಗಣ್ಣನವರದೇ ಕೃಷ್ಣ.
               ಧರ್ಮಸ್ಥಳ ಮೇಳದಲ್ಲಿ ಪುಂಡುವೇಷಧಾರಿಯಾಗಿಯೂ, ನಂತರ ಕಿರೀಟ ವೇಷಧಾರಿಯಾಗಿಯೂ ಲಿಂಗಣ್ಣನವರು ಪ್ರಸಿದ್ಧರಾದರು. ಅತಿಕಾಯ, ಕರ್ಣ, ಋತುಪರ್ಣ, ಕೌರವ, ಹಿರಣ್ಯಾಕ್ಷ, ರಕ್ತಬೀಜ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದರು. 1954-67ರ ಎಡೆಯಲ್ಲಿ ಎರಡು ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ಅಗರಿಯವರ ಭಾಗವತಿಕೆಯಲ್ಲಿ ತಿರುಗಾಟ ಮಾಡಿದ್ದರು. 1965ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ನಿವೃತ್ತರಾಗಿದ್ದರು. 1967ರ ವರೇಗೆ ಧರ್ಮಸ್ಥಳದಲ್ಲಿ ತಿರುಗಾಟ. ಸದ್ರಿ ಮೇಳದಲ್ಲಿದ್ದಾಗಲೇ ಶ್ರೀಧರ ಭಂಡಾರಿಯವರನ್ನು ಬಳ್ಳಂಬಟ್ಟು ಮೇಳದಿಂದ ಕರೆತಂದು ಪುಂಡುವೇಷದ ಮಾಹಿತಿಗಳನ್ನು ನೀಡಿದರು.

ಲಿಂಗಣ್ಣನವರ ಗರಡಿಯಲ್ಲಿ ಪಳಗಿದ ಶ್ರೀಧರ ಭಂಡಾರಿಯವರದ್ದು ಪುಂಡುವೇಷಗಳಲ್ಲಿ ಅಮೋಘ ನಿರ್ವಹಣೆಯೆಂದು ಗುರುತಿಸಲ್ಪಟ್ಟಿದೆ. 1968ರಲ್ಲಿ ಲಿಂಗಣ್ಣನವರು ಕೂಡ್ಲು ಮೇಳಕ್ಕೆ ಸೇರಿದ್ದರು. ಸಣ್ಣ ಬಲಿಪರು, ಶೇಣಿ, ಅಡ್ಕಸ್ಥಳ ನಾರಾಯಣ ಶೆಟ್ಟಿ, ಪುತ್ತೂರು ಕೃಷ್ಣ ಭಟ್ಟರ ಜತೆ ತಿರುಗಾಟ. ಮುಂದಿನ ವರುಷ ಅಗರಿ ಭಾಗವತರೂ, ಕುದ್ರೆಕೋಡ್ಲು ರಾಮ ಭಟ್ಟರೂ ಇದ್ದರು. ಕೂಡ್ಲು ಮೇಳ 1969ರಲ್ಲಿ ತಿರುಗಾಟ ನಿಲ್ಲಿಸಿದ ಮೇಲೆ ಕುಂಡಾವು ಮೇಳದಲ್ಲೂ, 1972ರಿಂದ ಎರಡು ವರ್ಷ ಶ್ರೀಧರ ಭಂಡಾರಿಯವರ ಪುತ್ತೂರು ಮೇಳದಲ್ಲೂ, ಅರುವ ಮೇಳದಲ್ಲೂ ಉಡುಪಿ (ಪೇಜಾವರ) ಮೇಳದಲ್ಲಿ ತಿರುಗಾಟ ನಡೆಸಿ, ಕೊನೆಗೆ 1995ರಲ್ಲಿ ಡಾ. ಎಂ. ಪ್ರಭಾಕರ ಜೋಷಿ ಅವರ ಪ್ರೇರಣೆಯಿಂದ ಬಪ್ಪನಾಡು ಮೇಳದಲ್ಲಿ ವ್ಯವಸಾಯ ಮಾಡಿದರು. ನಂತರ ತಿರುಗಾಟವನ್ನು ನಿಲ್ಲಿಸಿದ ಹೊಸಹಿತ್ತಿಲು ಮಹಾಲಿಂಗ ಭಟ್ಟರು 1997ರ ವರೇಗೆ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಅಪರೂಪಕ್ಕೆ ವೇಷ ಮಾಡುತ್ತಿದ್ದರು.

ಯಕ್ಷಗಾನ ಕಮ್ಮಟ, ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಅನುಭವ, ವಿದ್ಯೆಗಳನ್ನು ಧಾರೆ ಎರೆದಿದ್ದಾರೆ. ತರಗತಿಗಳನ್ನು ನಡೆಸಿ ಶಿಷ್ಯ ಸಂಪತ್ತನ್ನೂ ಹೊಂದಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಪ್ರಸಂಗದ ಗೋವಿಂದ ದೀಕ್ಷಿತ ಪಾತ್ರವನ್ನೂ, ಶಬರಿಮಲೆ ಅಯ್ಯಪ್ಪ ಪ್ರಸಂಗದ ವಾವರನ ಪಾತ್ರವನ್ನೂ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು.
                      ವಿಷ್ಣು, ಶ್ರೀಕೃಷ್ಣ, ಅಭಿಮನ್ಯು, ಬಭ್ರುವಾಹನ, ಭಾರ್ಗವ, ಸುಧನ್ವ ಮೊದಲಾದ ಪುಂಡುವೇಷಗಳಲ್ಲೂ, ಅತಿಕಾಯ, ಭೀಷ್ಮ, ಮಕರಾಕ್ಷ, ಇಂದ್ರಜಿತು, ಋತುಪರ್ಣ, ರಕ್ತಬೀಜ, ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಕೌರವ ಮೊದಲಾದ ಕಿರೀಟ ವೇಷಗಳಲ್ಲೂ ಮೆರೆದ ಪರಂಪರೆಯ ವೇಷಧಾರಿಯಾಗಿದ್ದರು ಹೊಸಹಿತ್ತಿಲು ಮಹಾಲಿಂಗ ಭಟ್ಟರು. ಶ್ರೀಯುತರು ತುಳು, ಸಾಮಾಜಿಕ ಪ್ರಸಂಗಗಳಲ್ಲೂ ವೇಷ ಮಾಡಿದ್ದರು. ತೆಂಕುತಿಟ್ಟಿನ ರಂಗವೈಖರಿಗೆ ನಿಷ್ಠೆ ಉಳ್ಳವರಾಗಿ ಮೆರೆದ ಕಲಾವಿದ. ಯಕ್ಷಗಾನದ ಮೂಲ ಸ್ವರೂಪವೇನೆಂದು ತಿಳಿಯದೆ, ನೋಡದೆ ಅದನ್ನು ಇನ್ನಾವುದೋ ಆಗಿ ಬದಲಾಯಿಸಬಾರದು ಅವರು ಹೇಳುತ್ತಿದ್ದವರು.

ಸಾಧನೆ, ಅರ್ಹತೆಗಳಿದ್ದರೂ ಇವರಿಗೆ ತಾರಾಮೌಲ್ಯ ಪ್ರಾಪ್ತವಾಗಿರಲಿಲ್ಲ. ಈಗಿನಂತೆ ಮಾಧ್ಯಮಗಳಿಲ್ಲದ ಕಾರಣವೂ ಕಾರಣವಿರಬಹುದು. ಆದರೂ ವೇಷಗಳನ್ನು ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ ಲಿಂಗಣ್ಣನವರೂ ಈಗಲೂ ಇದ್ದಾರೆ. ಇದುವೇ ನಿಜವಾದ ಪ್ರಶಸ್ತಿ. ಪೂರ್ವ ಸಂಪ್ರದಾಯ, ಪರಂಪರೆಯ ಕ್ರಮಗಳೇ ಯಕ್ಷಗಾನವನ್ನು ಶಾಶ್ವತವಾಗಿ ಉಳಿಸುತ್ತದೆ ಎನ್ನುವ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರು  ನಿಜಕ್ಕೂ ಆದರ್ಶ ಕಲಾವಿದ. ಎಲ್ಲರಿಗೂ ಮಾದರಿಯಾಗಬಲ್ಲರು.

ಫೋಟೋ ಕೃಪೆ: ‘ಲಿಂಗಣ್ಣ’ ಹೊಸಹಿತ್ಲು ಮಹಾಲಿಂಗ ಭಟ್ಟರ ಅನುಭವ ಕಥನ 

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

1 COMMENT

  1. ಅದ್ಭುತ ವಾದ ನಟನೆ.
    ೨೦೧೦ ರೆ ಕುರುಡಪದವುನಲ್ಲಿ ಯು ಟ್ಯೂಬ್ ನಲ್ಲಿ ಚೂಡಾಮಣಿ ‌‌‌‌‌‌‌‌ಪ್ರಸಂಗ ದಲ್ಲಿ ಇವರ ವೇಷ ನನ್ನ ನೋಡಿದೆ .
    ಅದರಲ್ಲಿ ಪೆರುವೋಡಿ ನಾರಾಯಣ ಭಟ್ ಹನು ಮಂತ ನಾ ವೇಷ, ಕೋಳ್ಯೂರು ರಾಮಚಂದ್ರ ರಾವ್ ‌‌‌ಸೀತೆ ತನ್ನ ನೋಡಿದೆ.
    ಹಳೇ ವೇಷಧಾರಿ ಗಳಿಗೆ ಹಳೆ ಯಕ್ಷಗಾನ ಕಲಾವಿದ ರೇ ಸಾಟಿ.

LEAVE A REPLY

Please enter your comment!
Please enter your name here

Most Popular

Recent Comments