Saturday, January 18, 2025
Homeಯಕ್ಷಗಾನಮಧೂರು ನಾರಾಯಣ ಹಾಸ್ಯಗಾರರು

ಮಧೂರು ನಾರಾಯಣ ಹಾಸ್ಯಗಾರರು

ಯಕ್ಷಗಾನದ ಹಳೆಯ ತಲೆಮಾರಿನವರಾದ ಅಣ್ಣಿ ಭಾಗವತರು, ಶಿವ ಮದ್ಲೆಗಾರರು ಮೊದಲಾದ ಪ್ರಸಿದ್ಧ ಯಕ್ಷಗಾನ ದಿಗ್ಗಜಗಳು ಜನಿಸಿದ ಪರಂಪರೆಯಲ್ಲಿಯೇ ರೂಪುಗೊಂಡ ಮಧೂರು ನಾರಾಯಣ ಹಾಸ್ಯಗಾರರು ಜನಮನದಲ್ಲಿ ಇಂದಿಗೂ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. ಮಧೂರಿನ ಸುಬ್ಬರಾವ್-ರುಕ್ಮಿಣಿ ದಂಪತಿಗಳಿಗೆ ಸುಮಾರು 1908ನೇ ಇಸವಿಯಲ್ಲಿ ಜನಿಸಿದ ನಾರಾಯಣ ಹಾಸ್ಯಗಾರರು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನಷ್ಟೆ ಪಡೆದ ಇವರು ತಮ್ಮ ಸ್ವಸಾಮರ್ಥ್ಯದಿಂದ ಯಕ್ಷಗಾನದ ಕಥಾಮೃತಗಳನ್ನು ಮನನ ಮಾಡಿಕೊಂಡಿದ್ದರು.


ಯಕ್ಷಗಾನದ ಬಾಂದಳದಲ್ಲಿ ಮಿನುಗಿದ ಹಾಸ್ಯ ಪ್ರತಿಭೆಗಳು ಹಲವು. ಆದರೆ ಇದರಲ್ಲಿ ಧ್ರುವತಾರೆಯಂತೆ ಮಿನುಗುವ ಸಿದ್ಧಿ ಪಡೆದವರು ಬೆರಳೆಣಿಕೆಯ ಮಂದಿ. ಈ ದಿಶೆಯಲ್ಲಿ ಪರಂಪರೆಯ ಪರಿವೃತ್ತವನ್ನು ಮೀರದೆ ಮಿತಿಯರಿತು ಚತುರ ಮಾತುಗಳಿಂದಲೂ ಬಣ್ಣ, ವಿನ್ಯಾಸ, ನಾಟ್ಯ ಭಾವಾಭಿವ್ಯಕ್ತಿಗಳಿಂದಲೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಕಲೆಯಲ್ಲಿ ನಾರಾಯಣ ಹಾಸ್ಯಗಾರರು ಪರಿಣತರು. ನಗುವುದು ಸ್ವಾಭಾವಿಕವಲ್ಲದ ಈ ಯುಗದಲ್ಲಿ ಅನ್ಯರನ್ನು ನಗಿಸುವ ಕಲೆ ಸಿದ್ಧಿಸುವುದು ವಿರಳ. ನಕ್ಕು ನಗಿಸುವ ಕಲೆಗಿಂತ ತಾನು ನಗದೆ ಇತರರನ್ನು ನಗಿಸುವ ಕಲೆ ಸಂಜೀವಿನಿ ಇದ್ದ ಹಾಗೆ.

ಈಗಿನ ಕೆಲ ಹಾಸ್ಯಗಾರರು ತಮ್ಮ ಕೀಳ್ತರಗತಿಯ ಹಾಸ್ಯದಿಂದ ದ್ವಂದ್ವಾರ್ಥ ಮಾತುಗಳಿಂದ ಜನರನ್ನು ನಗಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕೇವಲ ಪಾತ್ರಚಿತ್ರಣದಿಂದ ಸ್ವಾಭಾವಿಕವಾಗಿ ನಗೆಗಡಲಲ್ಲಿ ತೇಲಿಸುವ ಕಲೆ ಸಿದ್ಧಿಸಬೇಕಾದರೆ ಅದನ್ನು ಹುಟ್ಟಿನಿಂದಲೇ ರೂಢಿಸಿಕೊಳ್ಳಬೇಕು. ಹಾಸ್ಯಗಾರರು ಯಕ್ಷಗಾನದ ಹಲವು ಸ್ತರಗಳಲ್ಲಿ ದುಡಿದವರು. ಮೇಳದ ಯಜಮಾನನಾಗಿ, ಅನಿವಾರ್ಯ ಸಂದರ್ಭಗಳಲ್ಲಿ ಭಾಗವತರಾಗಿ ಮದ್ದಳೆಗಾರನಾಗಿ, ಪಾತ್ರಧಾರಿಯಾಗಿ, ಹೀಗೆ ವಿಭಿನ್ನ ಕಾರ್ಯವನ್ನು ಕೌಶಲದಿಂದ ನಡೆಸುವ ಕಲೆ ಅವರಿಗೆ ಸಿದ್ಧಿಸಿತ್ತು.

ಚತುರನಾದ ಶಿಲ್ಪಿಯ ಕೈಯಲ್ಲಿ ಸಿಕ್ಕಿದ ಕಲ್ಲು ಸುಂದರ ಮೂರ್ತಿಯಾಗಿ ರೂಪುಗೊಳ್ಳುವಂತೆ ಶ್ರೀಯುತರು ನಿರ್ವಹಿಸಿದಂತಹ ಹತ್ತು ಹಲವು ಪಾತ್ರಗಳು ಜನಮನದಲ್ಲಿ ಇಂದಿಗೂ ರಾರಾಜಿಸುತ್ತವೆ. ಇವರು ನಿರ್ವಹಿಸಿದ ಗಿರಿಜಾ ಕಲ್ಯಾಣದ ಬೈರಾಗಿಯಿರಲಿ, ಉತ್ತರನ ಪೌರುಷದ ಉತ್ತರ ಕುಮಾರನ ಪಾತ್ರವಿರಲಿ, ಅದರಲ್ಲಿ ಅವರದೇ ಆದ ಛಾಪನ್ನು ಒತ್ತಿದ್ದರು ಹಾಗೂ ಜನಮನವನ್ನು ಸೂರೆಗೊಂಡಿದ್ದರು. ಪುಂಡುವೇಷದಿಂದ ಹಿಡಿದು ಬಣ್ಣದ ವೇಷದ ವರೇಗಿನ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಇವರ ಅಭಿನಯಕಲೆ ಎಲ್ಲರನ್ನೂ ಸ್ಥಂಭೀಭೂತರನ್ನಾಗಿ ಮಾಡುತ್ತದೆ.


ಬರಿಯ ಮಾತಿನಿಂದಲ್ಲ ಹಾವಭಾವಗಳಿಂದ, ಬಣ್ಣ ವಿನ್ಯಾಸದಿಂದ ಇವರು ಪಾತ್ರಗಳಿಗೆ ಜೀವವನ್ನು ತುಂಬುತ್ತಿದ್ದರು. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹಾಸ್ಯಗಾರರು ಮಾಡುವ ಪಾತ್ರಗಳು ಕೆಲವು. ಆದರೆ ನಾರಾಯಣ ಹಾಸ್ಯಗಾರರು ಮಾಡುತ್ತಿದ್ದ ಪಾತ್ರಗಳು ಹಲವು. ದೇವಿಮಹಾತ್ಮೆಯಲ್ಲಿ ಮಾಡಾಂಗಾಯಿ ಕೃಷ್ಣ ಭಟ್ಟರು ಹಾಗೂ ನಾರಾಯಣ ಹಾಸ್ಯಗಾರರ ಚಂಡ-ಮುಂಡರ ಪಾತ್ರಾಭಿನಯ ಪ್ರಸಿದ್ಧಿಯನ್ನು ಪಡೆದಿತ್ತು. ಅದೇ ರೀತಿ ಶ್ರೀರಾಮ ಪಟ್ಟಾಭಿಷೇಕ ದಲ್ಲಿ ಮಂಥರೆಯಾಗಿ ಅಭಿನಯಿಸುವಾಗ “ನಾಳೆ ರಾಮಚಂದ್ರನಿಗೆ ಅಭಿಷೇಕವಂತೆ’’ ಎಂಬ ಪದ್ಯದ ಕೊನೆಯವರೇಗೂ ಅದನ್ನು ಆಲಿಸಿ ಕೇಳುವ ಭಂಗಿ ಮುಖದ ಅಭಿನಯ, ಕೈಕೆಯಲ್ಲಿಗೆ ಬರುವ, ಬಂದು ಮಾತಾಡುವ ದೃಶ್ಯ ಅನ್ಯಾದೃಶ.

ಗುಹನ ಪಾತ್ರದಲ್ಲಿ ಬಣ್ಣಗಳಿಂದ ಮೈಯೆಲ್ಲಾ ಶ್ರೀರಾಮ, ರಘುರಾಮ, ಜಯರಾಮ, ಸೀತಾರಾಮ ಮುಂತಾದ ರಾಮನ ಹೆಸರನ್ನು ಬರೆದು ರಂಗಸ್ಥಳಕ್ಕೆ ಬರುವ ದೃಶ್ಯ ನೋಡಲು ಬಲು ಸುಂದರವಾಗಿತ್ತಂತೆ. ಶ್ವೇತಕುಮಾರ ಚರಿತ್ರೆಯಲ್ಲಿನ ಪ್ರೇತದ ಪಾತ್ರವನ್ನು ತನ್ನ ಬಣ್ಣಗಾರಿಕೆಯ ವಿನ್ಯಾಸದಿಂದ ಬಲು ಸೊಗಸಾಗಿ ಅಭಿನಯಿಸುತ್ತಿದ್ದರು. ಇವರ ಒಡನಾಡಿಗಳಾಗಿ ಅಳಕೆ ರಾಮಯ್ಯ ರೈ, ಅಳಕೆ ಮಾದಪ್ಪ ಶೆಟ್ಟಿ, ಕೂಡ್ಲು ದೂಮ ಪ್ಪ, ಸುಬ್ಬಯ್ಯ ಶೆಟ್ಟಿ (ವಾಲಿಖ್ಯಾತಿ) ಮಾಡಾಂಗಾಯಿ ಕೃಷ್ಣ ಭಟ್ಟರು, ಶೇಣಿ, ಸಾಮಗರೂ ಇದ್ದರು. ಇವರ ತಮ್ಮ ಮಧೂರು ಗಣಪತಿ ರಾವ್ ಕೂಡಾ ಪ್ರಸಿದ್ಧ ಕಲಾವಿದರಾಗಲು ಪಳಗಿದ್ದು ಅಣ್ಣನ ಗರಡಿಯಲ್ಲೆ. 1973ರಲ್ಲಿ ತಮ್ಮ ಸ್ವಲ್ಪ ಸಮಯದ ಅಸೌಖ್ಯದಿಂದ ಇವರು ತಮ್ಮ ಕಲಾಯಾತ್ರೆಯನ್ನು ಮುಗಿಸಿದರು. ು

ಲೇಖಕ: ಮಧೂರು ಕೃಷ್ಣ ರಾವ್
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments