Saturday, January 18, 2025
Homeಯಕ್ಷಗಾನಯಕ್ಷಕಲಾಕುಮುದ ಎಂ. ಕೆ. ರಮೇಶಾಚಾರ್ಯ

ಯಕ್ಷಕಲಾಕುಮುದ ಎಂ. ಕೆ. ರಮೇಶಾಚಾರ್ಯ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಲ್ಮನೆ ಗ್ರಾಮದ ಮಂಗಳಗಾರಿನಲ್ಲಿ ಕೃಷ್ಣಾಚಾರ್ ಮತ್ತು ರುಕ್ಮಿಣಿಯಮ್ಮ ದಂಪತಿಗಳ ಪುತ್ರನಾಗಿ 30-10-1949ರಲ್ಲಿ ಜನಿಸಿದ ಎಂ ಕೆ ರಮೇಶಾಚಾರ್ಯ ಯಕ್ಷಕಲಾದ್ರಿಯ ಸಾಧನಾಶಿಖರವನ್ನು ಏರಿ ವಿನಯಧ್ವಜವನ್ನು ಜೊತೆಗೇ ಹೊತ್ತೋಯ್ದು ತನಗಿಂತಲೂ ಎತ್ತರಕ್ಕೆ ಹಾರಿಸಿದ ಸುಜನ.
ಎಂ ಕೆ ಯವರ ಯಕ್ಷಬಾಲ್ಯ:
ತಂದೆ ಕೃಷ್ಣಾಚಾರ್ ಯಕ್ಷಗಾನ ಕಲಾವಿದ ಹಾಗು ಮೇಳವೊಂದರ ವ್ಯವಸ್ಥಾಪಕ. ತಂದೆಯ ಸೋದರ ನಾಗಪ್ಪಾಚಾರ್ ಉತ್ತಮ ಮದ್ದಲೆಗಾರ, ಅಣ್ಣ ನರಸಿಂಹಾಚಾರ್ (ನಾಗಪ್ಪಾಚಾರ್ ಅವರ ಮಗ)ಭಾಗವತರು ಮತ್ತು ಮದ್ದಲೆವಾದಕರು. ಎಳವೆಯಲ್ಲಿಯೇ  ಸಹಜವಾಗಿಯೇ ಇವರಿಗೆ ಯಕ್ಷಗಾನದ ಒಲವು ಮೂಡಿತು. ಮನೆಯ ಹಿರಿಯರಿಂದ ಒಂದಷ್ಟು ಕಲಿತು ಮಹಿಷಿ ಮೇಳದಲ್ಲಿ ಕೋಡಂಗಿ ವೇಷದಿಂದಲೇ ರಂಗಪ್ರವೇಶವಾಯಿತು. ಅಲ್ಲಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದರು. ಅನಂತರ ಶೃಂಗೇರಿ ಸಮೀಪದ ಕಿಗ್ಗ ಮೇಳ ಸೇರಿದರು. ಅಲ್ಲಿ ಗುಂಡುಮನೆ ರಾಮಯ್ಯ, ಹಳ್ಳದಾಚೆ ಪುಟ್ಟಶಾಮಯ್ಯ ಮತ್ತು ವೆಂಕಟರಮಣಯ್ಯ, ಕಿಗ್ಗ ಚಂದ್ರಶೇಖರ ಭಟ್ರು ಮೊದಲಾದವರಿಂದ ಸೂಕ್ತ ಮಾರ್ಗದರ್ಶನ ದೊರಕಿತು. ಅತಿ ಶೀಘ್ರಕಾಲದಲ್ಲಿಯೇ ವೇಷದ ಸ್ಥಾನದಲ್ಲಿ ಔನ್ನತ್ಯವನ್ನು ಸಾಧಿಸಿದರು. ಬಳಿಕ ಮಂದರ್ತಿ ಮೇಳ ಸೇರಿದರು. ಅಲ್ಲಿ ಗುರು ವೀರಭದ್ರನಾಯ್ಕರೇ ಗುರುಗಳಾಗಿ ದೊರಕಿದರು. ಪುಂಡು ವೇಷಗಳಾದ ಕುಶ-ಲವ-ಬಬ್ರುವಾಹನ ಮೊದಲಾದ ಪಾತ್ರಗಳನ್ನು ಮಾಡಿ ಹಿರಿಯ ಕಲಾವಿದರಿಂದಲೂ ಪ್ರೇಕ್ಷಕರಿಂದಲೂ ಮೆಚ್ಚುಗೆಗೆ ಪಾತ್ರರಾದರು. ಪೀಠಿಕೆ ಸ್ತ್ರೀವೇಷ, ರತಿ, ಕನಕಾಂಗಿ ಮೊದಲಾದ ಪಾತ್ರಮಾಡುತ್ತಾ ಸ್ತ್ರೀಪಾತ್ರದಲ್ಲಿಯೂ ಪರಿಣತಿಯನ್ನು ಪಡೆದರು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬೇಕೆಂಬ ವೀರಭದ್ರನಾಯ್ಕರ ಮಾತನ್ನು ಈಗಲೂ ಸ್ಮರಿಸುತ್ತಾರೆ ಎಂ ಕೆ ಯವರು.

ಯಕ್ಷಕನ್ನಿಕೆ ರಮೇಶಾಚಾರ್ಯ:
1969ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಲು ಹೋದರು.  ರತ್ನವರ್ಮ ಹೆಗ್ಗಡೆಯವರಿಗೆ ಇವರ ತೆಂಕಿನ ನಾಟ್ಯ ಇನ್ನಷ್ಟು ಪಳಗಬೇಕೆಂದು ಅನ್ನಿಸಿತು. ಆಗ ಕುರಿಯ ವಿಠಲಶಾಸ್ತ್ರಿಗಳು ಇವನನ್ನು ನಾನು ಸ್ತ್ರೀವೇಷಕ್ಕೆ ಸಿದ್ದಪಡಿಸುತ್ತೇನೆಂದು ಹೇಳಿ ಮೇ 28, 1969ರಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದರು. ಯಕ್ಷಗಾನ ಗುರುಕುಲವೆನಿಸಿದ ಕುರಿಯದಲ್ಲಿ ಮಳೆಗಾಲದಲ್ಲಿ ಅಭ್ಯಾಸ. ಕುರಿಯ ಶಾಸ್ತ್ರಿಗಳು ಊಟ ಬಟ್ಟೆ ಕೊಟ್ಟು ಮುಂದಿನ ತಿರುಗಾಟಕ್ಕೆ ಧರ್ಮಸ್ಥಳ ಮೇಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಮಹಾರಥಿ ಕರ್ಣದ ಕುಂತಿ, ಕ್ಷೇತ್ರ ಮಹಾತ್ಮೆಯ ಮಾಲತಿ, ನೇತ್ರಾವತಿ ಮೊದಲಾದ ಪಾತ್ರ ಮಾಡಿದರು. ಅಲ್ಲಿ ಕಡತೋಕ ಚಿಪ್ಪಾರು, ನಿಡ್ಲೆ, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಕಡಬ ಶಾಂತಪ್ಪ, ಪಾತಾಳ ವೆಂಕಟರಮಣ ಭಟ್ರು, ಕುಂಬ್ಳೆ, ಗೋವಿಂದ ಭಟ್ಟರಂತಹ ಕಲಾವಿದರ ಒಡನಾಟ ಇವರನ್ನು ಮತ್ತಷ್ಟು ಪಳಗಿಸಿತು. ಮೂರು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನೆಡೆಸಿದರು. 


ಅನಂತರ ವರದರಾಜ ಪೈಗಳ ಸುರತ್ಕಲ್ ಮೇಳ ಸೇರಿದರು. ಶೇಣಿ, ದೊಡ್ಡಸಾಮಗ, ತೆಕ್ಕಟ್ಟೆ, ಕೊಕ್ಕಡ ಮೊದಲಾದ ಯಕ್ಷದಿಗ್ಗಜರ ಸಂಗಮದ ಗಜಮೇಳವದು. ಅಲ್ಲಿ ಒಮ್ಮೆ  ಪಾರಿಜಾತದ ಸತ್ಯಭಾಮೆ ಮಾಡಬೇಕಾದ ಕಲಾವಿದ ಬಾರದೆ ಇದ್ದಾಗ ಸಖಿ ಮಾಡುವ ಇವರಲ್ಲಿ ಆ ಪಾತ್ರ ಮಾಡಿಸಿದರು ಅಗರಿಯವರು. ಅದು ಒಳ್ಳೆಯ ಕೀರ್ತಿಯನ್ನು ತಂದುಕೊಟ್ಟಿತು. ಅವರ ನಿಜವಾದ ಪ್ರತಿಭೆಯ ಅನಾವರಣವೂ ಆಯಿತು. ಇವರ ಲಾಲಿತ್ಯಪೂರ್ಣ ನಾಟ್ಯ, ಶ್ರುತಿಬದ್ಧ-ಕಾವ್ಯಾತ್ಮಕ-ಪಾತ್ರೋಚಿತ-ಪ್ರಸಂಗ,ಪುರಾಣಾಧಾರಿತ- ಅಸ್ಖಲಿತವಾದ ವಾಗ್ವೈಖರಿ, ಪಾತ್ರನಿರ್ವಹಣಾ ಕೌಶಲ ಮೊದಲಾದ ಗುಣಗಳಿಂದ ಶೇಣಿಯವರೊಟ್ಟಿಗೆ ಪಾತ್ರಮಾಡುವ ಯೋಗ ಲಭಿಸಿತು. ಅವರ ರಾವಣ-ಹರಿಶ್ಚಂದ್ರ-ವಾಲಿ-ನಳ-ವಿಷ್ಣುವರ್ಧನ-ಉದಯನ ಪಾತ್ರಗಳಿಗೆ ಮಂಡೋದರಿ-ಚಂದ್ರಮತಿ- ತಾರೆ- ದಮಯಂತಿ- ಶಾಂತಲೆ – ವಾಸವದತ್ತೆ ಮೊದಲಾದ ಪಾತ್ರಗಳನ್ನು ಮಾಡಿ ಶೇಣಿಯವರ ಮೆಚ್ಚುಗೆಗೂ ಪಾತ್ರರಾದರು. ತೆಕ್ಕಟ್ಟೆಯವರ ನಂದಿಶೆಟ್ಟಿ ಇವರ ಆಲೋಲಿಕೆ ಬಹಳ ಪ್ರಸಿದ್ಧಿ ಪಡೆದಿತ್ತು. ಶೇಣಿಯವರು ರಜೆಯಲ್ಲಿದ್ದಾಗ ಶನೀಶ್ವರ ಮಹಾತ್ಮೆಯಾದರೆ ಇವರದ್ದೇ ವಿಕ್ರಮಾದಿತ್ಯನ ಪಾತ್ರ. ಆಗ ಸತತ ಸ್ತ್ರೀವೇಷ ಮಾಡುತ್ತಿದ್ದರೂ ವಿಕ್ರಮನ ಪಾತ್ರ ಮಾಡುತ್ತಿದ್ದುದು ಇವರ ಪರಿಪೂರ್ಣತೆಗೊಂದು ಸಾಕ್ಷಿ. ಅಗರಿ,ಪದ್ಯಾಣ, ಅಡೂರು,ಕಡಬ ನಾರಾಯಣಾಚಾರ್ಯರ ಹಿಮ್ಮೇಳ ಮತ್ತು ಸಮರ್ಥ ಮುಮ್ಮೇಳ ಇವರ ಪಾತ್ರಪೋಷಣೆಗೆ ಮತ್ತಷ್ಟು ಸಹಕಾರಿಯಾಯಿತು. ಹೀಗೆ ಮೊದಲು 19ವರ್ಷ ಮತ್ತೆ 5 ವರ್ಷ ಒಟ್ಟು 24ವರ್ಷ ಸುರತ್ಕಲ್ ಮೇಳದ ತಿರುಗಾಟದಲ್ಲಿ ಯಕ್ಷಕನ್ನಿಕೆಯಾಗಿ ಕಲಾಭಿಮಾನಿಗಳ ಹೃದಯ ಸಿಂಹಾಸನ ಏರಿದರು.


ಉಭಯ ತಿಟ್ಟುಗಳ ಪ್ರವೀಣ:
19ವರ್ಷಗಳ ದೀರ್ಘಕಾಲದ ಸುರತ್ಕಲ್ ಮೇಳದ ತಿರುಗಾಟದ ಬಳಿಕ ಬಡಗಿನತ್ತ ಮತ್ತೆ ಮುಖಮಾಡಿದರು ಎಂ ಕೆ ಯವರು. ಮುಂದಿನ ತಿರುಗಾಟಕ್ಕೆ ಸಾಲಿಗ್ರಾಮ ಮೇಳಕ್ಕೆ ಎಂದು ಕಾಳಿಂಗ ನಾವಡರು ಇದ್ದೇ ಮಾತಾಯಿತು. ಆದರೆ ಮೇಳ ತಿರುಗಾಟ ಆರಂಭವಾಗುವಾಗ ನಾವಡರೇ ಇರಲಿಲ್ಲ. ಆ ವರ್ಷ ಜಯಭೇರಿ ಪ್ರದರ್ಶನ ಮೇಳಕ್ಕೇ ಒಂದು ಚಾಲೆಂಜ್ ಆಗಿತ್ತು. ನಾವಡರು ದಿವಂಗತರಾದ ಬಳಿಕ ಅನೇಕರು ಮೇಳದ ಟೆಂಟ್ ಕಡೆಗೆ ತಲೆಹಾಕುವುದನ್ನೇ ಬಿಟ್ಟಿದ್ದರು.  ಶಬರಾಯ,ಯಾಜಿ, ಕೊಂಡದಕುಳಿ ಮೊದಲಾದ ಪ್ರಸಿದ್ಧ ಕಲಾವಿದರಿದ್ದರು. ಮೇಘಮಯೂರಿ, ಶೃಂಗ ಸಾರಂಗ ಎಂಬ ಪ್ರಸಂಗಗಳು ಯಶಸ್ವೀ ಪ್ರದರ್ಶನ ಕಾಣುವಲ್ಲಿ ಸ್ವಾರಸ್ಯಕರವಾದ ಸಂಭಾಷಣೆಯ ಮಾರ್ಗದರ್ಶನ ನೀಡುತ್ತ ಪಾತ್ರಧಾರಿಯಾಗಿಯೂ ಯಶಸ್ವಿಯಾದ ಎಂಕೆಯವರ ಕೊಡುಗೆ ಉಲ್ಲೇಖನೀಯ. ಪ್ರೇಮಪಲ್ಲವಿ ಎಂಬ ಪ್ರಸಂಗ ರಚಿಸಿ ಅದೂ ಉತ್ತಮ ಪ್ರದರ್ಶನ ಕಂಡಿತು. ಮತ್ತೆ ಐದು ವರ್ಷ ಸುರತ್ಕಲ್ ಮೇಳದ ತಿರುಗಾಟ. ಅನಂತರ ಪೆರ್ಡೂರು ಮೇಳದ ತಿರುಗಾಟದಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು ಮತ್ತು ಇವರ ಜೋಡಿ ಸಾಮಾಜಿಕ ಪ್ರಸಂಗಗಳಲ್ಲಿಯೂ ಒಂದು ಪೌರಾಣಿಕ ಚೌಕಟ್ಟನ್ನು ಹಾಕಿಕೊಡುತ್ತಿತ್ತು. ಅನಂತರ ನೀಲಾವರ, ಸೀತೂರು, ತಳಕಲ, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ತಿರುಗಾಟ. ಅತಿಥಿ ಕಲಾವಿದರಾಗಿ ಬಾಳೆಹೊಳೆ ಮೇಳ, ಹೊನ್ನವಳ್ಳಿ ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿ, ಮಾರ್ಗದರ್ಶಕರಾಗಿ, ಪ್ರಾಚಾರ್ಯರಾಗಿ ಕಲಾಸೇವೆ ಮಾಡಿದರು.

ಎಂ ಕೆ ಯವರು ಮಾಡದ ಸ್ತ್ರೀವೇಷಗಳಿಲ್ಲ. ಪಾಪಣ್ಣವಿಜಯದ ಗುಣಸುಂದರಿಯ ಪಾತ್ರಕ್ಕೆ ಒಂದು ಅದ್ಭುತ ಮೆರಗು ನೀಡಿದವರು ಇವರು. ಭಿನ್ನ ಸ್ವಭಾವದ ಪಾತ್ರಗಳನ್ನು ಒಂದೇ ರಾತ್ರಿಯಲ್ಲಿ ಮಾಡಿ ಮೊದಲ ಪಾತ್ರ ಮಾಡಿದ್ದು ಇವರೆಯಾ? ಎನ್ನುವಷ್ಟರ ಮಟ್ಟಿಗೆ ಆ ವ್ಯತ್ಯಾಸ ಕಾಣುಸುತ್ತಿದ್ದರು. ಬ್ರಹ್ಮಕಪಾಲದ ಶಾರದೆ ಮಾಡಿ ಬೆಳಗಿನ ಜಾವ ಶಶಿಪ್ರಭೆ, ಯೋಜನಗಂಧಿ ಮಾಡಿ ಮೀನಾಕ್ಷಿ ಹೀಗೆ ಪಾತ್ರ ಭಾವವೈವಿಧ್ಯ ವೇಧ್ಯವಾಗುತ್ತದೆ ಅವರ ವೇಷಗಳಲ್ಲಿ. ಬೇಡರ ಕಣ್ಣಪ್ಪದ ರಾಣಿಯನ್ನು, ಪಂಚವಟಿಯ ಮಾಯಾಶೂರ್ಪಣಕಿಯನ್ನು ಎಷ್ಟು ಚೆನ್ನಾಗಿ ಮಾಡಬಲ್ಲರೋ ಅಷ್ಟೆ ಚೆನ್ನಾಗಿ ಚಂದ್ರಮತಿಯಾಗಿ, ಸುಭದ್ರೆಯಾಗಿ ಕರುಣಾರಸಾಮೃತವನ್ನು ಉಣ್ಣಿಸಬಲ್ಲರು. ಮಂಡೋದರಿ, ತಾರೆ, ಕೈಕಸೆಯಾಗಿ ನೀತಿಯ ತರಂಗಿಣಿಯನ್ನೇ ಹರಿಸಬಲ್ಲರು. ಶೇಣಿ, ತೆಕ್ಕಟ್ಟೆ, ರಾ.ಸಾಮಗ, ವಾ. ಸಾಮಗ, ಎಂ ಎಲ್ ಸಾಮಗ, ಕುಂಬ್ಳೆ, ಗೋವಿಂದಭಟ್ಟ, ಸಿದ್ದಕಟ್ಟೆ ದ್ವಯರು, ಯಾಜಿ, ಕೊಂಡದಕುಳಿ, ಜೋಗಿ, ಪೂಕಳ, ಉರಡ್ಕ, ಆರ್ಗೋಡು, ಜಲವಳ್ಳಿ ಮೊದಲಾದವರೊಂದಿಗೆ ಅವರ ಸಹಪಾತ್ರಗಳು ಅಮೋಘವಾದುದೆಂದು ಅನೇಕ ಕಲಾಭಿಮಾನಿಗಳ ಅಭಿಮತ. ಅವರ ಅನುಭವ ಅನುಪಮ. ಪೌರಾಣಿಕ ಪ್ರಸಂಗದ ಪಾತ್ರಗಳ ಮಾಹಿತಿಗಾಗಿ ಪೋನ್ ಮಾಡಿದವರಿಗೆ ತಾನು ಬ್ಯುಸಿ ಇದ್ದರೂ ಸಂತೋಷದಿಂದಲೇ ಅನುಭವವನ್ನು ದಾರೆ ಎರೆಯುತ್ತಾರೆ. 


ಶೇಣಿಯವರೊಂದಿಗಿನ ನಂಟು:
“ರಮೇಶನ ಸ್ತ್ರೀವೇಷದೊಂದಿಗೆ ವೇಷಮಾಡಿದಾಗ ಸದ್ಗೃಹಿಣಿಯೊಂದಿಗಿರುವ ಅನುಭವ ರಂಗದಲ್ಲಿ ಆಗುತ್ತದೆ” ಎಂದು ಒಂದು ಭಾಷಣದಲ್ಲಿ ಶೇಣಿಯವರೇ ಹೇಳುತ್ತಾರೆ. ಅದನ್ನು ಕೇಳಿ ನನಗೆ ಇನ್ಯಾವ ಪ್ರಶಸ್ತಿಯೂ ಬೇಡ. ಇದೇ ದೊಡ್ಡ ಪ್ರಶಸ್ತಿ ಎಂದು ಭಾವಿಸಿದ ಎಂಕೆ ಈಗಲೂ ಆ ಮಾತನ್ನು ಸ್ಮರಿಸುತ್ತಾರೆ. ಮಂಗಳೂರಿನ ಒಂದು ಆಟದಲ್ಲಿ ಶೇಣಿಯವರೊಂದಿಗೆ ಇವರಿಗೂ ಸನ್ಮಾನ ಮಾಡುತ್ತೇವೆಂದು ಸಂಘಟಕರು ಬಂದು ಕೇಳಿದಾಗ “ಅವರೊಂದಿಗೆ ಕುಳಿತು ಸನ್ಮಾನ ಸ್ವೀಕರಿಸಲು ನಾನು ಅರ್ಹನಲ್ಲ” ಎಂದು ನಿರಾಕರಿಸುತ್ತಾರೆ. ಸಂಘಟಕರು ಈ ವಿಷಯವನ್ನು ಶೇಣಿಯವರಲ್ಲಿ ತಿಳಿಸಿದಾಗ ಇವರನ್ನು ಕರೆದು “ವೇಷಮಾಡಿ ರಂಗದಲ್ಲಿ ನನ್ನ ಜೊತೆ ಕುಳಿತುಕೊಳ್ಳಲು ಆಗುತ್ತದೆ. ಸನ್ಮಾನಕ್ಕೆ ಯಾಕೆ ಆಗುವುದಿಲ್ಲ ” ಎಂದು ಹೇಳಿ ಅವರೊಂದಿಗೆ ಸನ್ಮಾನಕ್ಕೆ ಒಪ್ಪಿಸುತ್ತಾರೆ.  ಸುರತ್ಕಲ್ ಮೇಳದಲ್ಲಿ ಇದ್ದಾಗ ಇವರು ಒಂದುದಿನ ರಜೆ ಹಾಕಿ ಊರಿಗೆ ಹೊರಟರು. ಆದರೆ ಶೇಣಿಯವರು ಇವರು ರಜೆ ಹಾಕುವುದು ಬೇಡ ಎಂದರು. ಇವರು ಹೋಗಲೇ ಬೇಕೆಂದು ಹಠ ಹಿಡಿದರೂ ಶೇಣಿಯವರು ಒಪ್ಪಲಿಲ್ಲ. ಅದಕ್ಕೆ ಕಾರಣ ಅಂದಿನ ಅವರ ವಾಲಿಗೆ ಇವರ ತಾರೆಯೇ ಆಗಬೇಕೆಂಬ ಅಭಿಲಾಷೆಯಿಂದ. ಒಮ್ಮೆ ರಮೇಶಾಚಾರ್ಯರ ಸನ್ಮಾನ ಸಮಾರಂಭದ ಅಧ್ಯಕ್ಷರಾಗಿ ಆಗಮಿಸಿದ ಶೇಣಿಯವರು ತನಗೆ ನೀಡಿದ ಹಣವನ್ನೂ ಸಂಘಟಕರಿಗೆ ಹಿಂದಿರುಗಿಸಿದ್ದರು. ಅದು ರಮೇಶಾಚಾರ್ಯರ ಮೇಲಿನ ಪ್ರೀತಿಯಿಂದ.  ಹೀಗೆ ಶೇಣಿಯವರೊಂದಿಗೆ ಮಾಡಿದ ಪಾತ್ರಗಳನ್ನು ಸದಾ  ಸ್ಮರಿಸುತ್ತಾರೆ ಎಂಕೆ. ಇತ್ತೀಚೆಗಂತು ಶೇಣಿಯವರ ಸಂಸ್ಮರಣಾ ಭಾಷಣಕ್ಕೆ ಇವರಿಗೇ ಬೇಡಿಕೆ.

 ಅರ್ಥಧಾರಿಯಾಗಿ ರಮೇಶಾಚಾರ್ಯ:
ಎಲ್ಲಾ ಪ್ರಸಿದ್ಧ ಅರ್ಥಧಾರಿಗಳೊಂದಿಗೆ ಅರ್ಥಹೇಳಿದ ಇವರು ಸ್ತ್ರೀಪಾತ್ರದ ಅರ್ಥಗಾರಿಕೆಗೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರಲ್ಲಿ ಪ್ರಮುಖರು. ಇವರ ಅರ್ಥಗಾರಿಕೆಯಲ್ಲಿ ಪಾತ್ರನೆಡೆ, ಸಾಹಿತ್ಯ, ಪಾತ್ರವರಿತು ಖಂಡನೆ-ಮಂಡನೆಯ ವಿವೇಚನೆ, ಕನ್ನಡ ಸಂಸ್ಕೃತ ಕಾವ್ಯಗಳ ಸೊಲ್ಲುಗಳು, ರಸವತ್ತಾದ ನಿರೂಪಣೆ, ಮಡದಿಯ ಪಾತ್ರವಾದರೆ ಪತಿಯ ಪಾತ್ರಧಾರಿಯನ್ನು ಮೀರದ ಔಚಿತ್ಯಪ್ರಜ್ಞೆ  ಮೊದಲಾದ ಅಂಶಗಳು ಉಲ್ಲೇಖನೀಯ. ಹವ್ಯಾಸಿ ಅರ್ಥಧಾರಿಗಳೊಂದಿಗೆ ಅರ್ಥ ಹೇಳುವಾಗಲೂ ಅವರು ಧೈರ್ಯದಿಂದ ಮಾತನಾಡುವಂತೆ ಮಾಡುವ ಇವರ ಚಾಕಚಕ್ಯತೆ ಅದ್ಬುತವಾದುದು. ಕ್ಯಾಸೆಟ್ಗಳಲ್ಲಂತೂ ಇವರ ಪಾತ್ರವಿಲ್ಲದೇ ಇರುತ್ತಿದ್ದುದು ತುಂಬಾ ವಿರಳ.


 ಪ್ರಸಂಗಕರ್ತ ರಮೇಶಾಚಾರ್ಯ:
60-65ಪ್ರಸಂಗಗಳ ಪದ್ಯರಚನೆ. ಬಿಡಿಪದ್ಯಗಳನ್ನು ಬರೆದು ಕೊಟ್ಟದ್ದು ಲೆಕ್ಕವೇ ಇಲ್ಲ ಬಿಡಿ. ಅನೇಕ ಕ್ಷೇತ್ರಮಹಾತ್ಮೆಗಳ ಪದ್ಯಗಳೆಲ್ಲ ಇವರಿಂದಲೇ ರಚಿತವಾದವು. ಇವರ ಪದ್ಯರಚನೆಯ ಶೈಲಿ ಸರಳ ಮತ್ತು ಸುಂದರ. ಕ್ಲಿಷ್ಟವಲ್ಲದ ಅರ್ಥಪೂರ್ಣ ಧ್ವನಿಯುಕ್ತವಾದ ಪದಬಳಕೆ. ನಡುಗನ್ನಡ- ಹೊಸಗನ್ನಡದ ಸೊಗಸಾದ ಸಮ್ಮಿಲನ. *ಸಮಗ್ರ ವಿಶ್ವಾಮಿತ್ರ, ಮಹಾಮಾತೆ ಕುಂತಿ, ಅನಸೂಯೋಪಖ್ಯಾನ, ಶ್ರೀಕೃಷ್ಣತುಲಾಭಾರ, ಶುಭೋದಯ(ವಾಮನಪುರಾಣಾಧಾರಿತ) ಮೊದಲಾದವು ಇವರ ಪೌರಾಣಿಕ ಪ್ರಸಂಗಗಳು.


ಪ್ರಶಸ್ತಿ -ಸನ್ಮಾನಗಳು:
ಬಯಲಾಟ ಅಕಾಡೆಮಿ ಪ್ರಶಸ್ತಿ, ಬಂಗಾರಮಕ್ಕಿ ಜಾನಪದಶ್ರೀ ಪ್ರಶಸ್ತಿ, ಪಾತಾಳ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಅಜಾತಶತ್ರು ಪ್ರಶಸ್ತಿ, ಕಲ್ಕೂರು ಶೇಣಿ ಕಲೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ  ಹೀಗೆ ದೊರೆತ ಪ್ರಶಸ್ತಿಗಳು ಹತ್ತು ಹಲವು. ಇನ್ನು ಸನ್ಮಾನಗಳು ಅಗಣಿತ. ಮನೆಯ ಒಂದು ಗೋಡೆಯ ತುಂಬಾ ಸನ್ಮಾನಪತ್ರಗಳೇ ತುಂಬಿವೆ. ಇವೆಲ್ಲ ಎಂ ಕೆ ಯವರ ಸಾಧನೆಗೆ ಸಾಕ್ಷಿಯಾಗಿವೆ.


ಕುಟುಂಬ:
ಇವರ ಪತ್ನಿ ಶ್ರೀಮತಿ ವಿಶಾಲಾಕ್ಷಿ. ಎಂ ಕೆ ಯವರ ಸಾಧನೆಗೆ ಬೆನ್ನೆಲುಬಾಗಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಪತಿಯ ಪ್ರತಿಭಾ ದೀಪಕ್ಕೆ ತೈಲವಾದ ಸದ್ಗೃಹಿಣಿ. ಆಶಾಲತ ಮತ್ತು ಸರೋಜ ಎಂಬ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಒಳ್ಳೆಯ ಮನೆಸೇರಿ ಸಂತೃಪ್ತಿಯಿಂದ ಜೀವನ ನೆಡೆಸುತ್ತಿದ್ದಾರೆ. ಮಗ ಮನೋಜ್ ಯಕ್ಷಗಾನ ಕಲಾವಿದರಾಗದೇ ಇದ್ದರು ತಂದೆಯ ಸಾಧನೆಯ ಬಗ್ಗೆ ಹೆಮ್ಮೆ ಉಳ್ಳವರು. ಮಗಳಾಗಿ ಮಾವನನ್ನು ನೋಡಿಕೊಳ್ಳುತ್ತಿರುವ ಸೊಸೆ ಸರಿತಾ. ಈಶ್ವರಿ ಮತ್ತು ಪನ್ನಗ ಮೊಮ್ಮಕ್ಕಳು. ತಾಯಿ ರುಕ್ಮಿಣಮ್ಮ ಇತ್ತೀಚೆಗೆ ದಿವಂಗತರಾದರು. ಎಂ ಕೆ ಯವರ ತಮ್ಮ ಸತೀಶ್ ಮಂಗಳಗಾರು ಉತ್ತಮ ಯಕ್ಷಗಾನ ಕಲಾವಿದರಾಗಿದ್ದರು. ಎರಡು ದಶಕಗಳ ಹಿಂದೆಯೇ ವಿಧಿವಶರಾದ ನೋವು ಅಣ್ಣನಲ್ಲಿ ಇನ್ನೂ ಮಾಸಲಿಲ್ಲ.

ಇದೊಂದು ಅವರ ಕಿರು ಪರಿಚಯವಷ್ಟೆ. ಅವರ ಪ್ರತಿಭೆಯ ಪೂರ್ಣಪರಿಚಯಕ್ಕೆ ಪುಸ್ತಕವೇ ಬೇಕು. ಅಂತಹ ಒಂದು ಹೊತ್ತಗೆ ಸರಿ ಹೊತ್ತಿಗೆ ಬರಲಿ ಎಂದು ಆಶಿಸುತ್ತೇನೆ.
                                   

ಲೇಖಕ: ರಜನೀಶ ಹೊಳ್ಳ, ಕೆಂಪಿನಮಕ್ಕಿ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments