Saturday, January 18, 2025
Homeಪುಸ್ತಕ ಮಳಿಗೆಜೀವನ ಸಂದೇಶಗಳನ್ನು ಸಾರುವ ಕಲ್ಚಾರರ ವಿಭಿನ್ನ ಆಲೋಚನೆಗಳು - "ಆ ಲೋಚನ"

ಜೀವನ ಸಂದೇಶಗಳನ್ನು ಸಾರುವ ಕಲ್ಚಾರರ ವಿಭಿನ್ನ ಆಲೋಚನೆಗಳು – “ಆ ಲೋಚನ”

‘ಆ ಲೋಚನ’ ಒಂದು ವಿಭಿನ್ನ ವಿಶಿಷ್ಟ ಕೃತಿ. ಲೋಚನ ಎಂದರೆ ಕಣ್ಣು. ಆ ಲೋಚನ ಎಂದರೆ ಒಳಗಣ್ಣು ಎಂದು ಭಾವಿಸಿದರೆ ತಪ್ಪಲ್ಲ. ಲೇಖಕ ಕಲಾವಿದ ಶ್ರೀ ರಾಧಾಕೃಷ್ಣ ಕಲ್ಚಾರರು ತನ್ನ ಒಳಗಣ್ಣ ನೋಟಕ್ಕೆ ಆಹಾರವಾದ ಉತ್ಕೃಷ್ಟ ವಿಚಾರಗಳಿಗೆ ಇಲ್ಲಿ ಬರಹ ರೂಪ ನೀಡಿದ್ದಾರೆ. 

ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಆ ಲೋಚನ’ ಎಂಬ ಅಂಕಣದಲ್ಲಿ ಪ್ರಕಟವಾದ ಲೇಖನಗಳನ್ನು ಒಟ್ಟುಗೂಡಿಸಿ ಅದೇ ಹೆಸರಿನಲ್ಲಿ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಕೆಲವು ಲೇಖನಗಳನ್ನು ನಾನು ಈ ಮೊದಲೇ ಪತ್ರಿಕೆಯಲ್ಲಿ ಓದಿದ್ದೆನಾದರೂ ಎಲ್ಲವನ್ನೂ ಓದಲಾಗಿರಲಿಲ್ಲ.

ಆದರೆ ಲೇಖಕ ರಾಧಾಕೃಷ್ಣ ಕಲ್ಚಾರರೇ ಹೇಳುವಂತೆ ಒಟ್ಟಾಗಿ ಪುಸ್ತಕ ರೂಪದಲ್ಲಿ ಓದುವ ಅನುಭವವೇ ಬೇರೆ. ಈ ಪುಸ್ತಕದಲ್ಲಿರುವ ಪ್ರತಿಯೊಂದು ಲೇಖನವೂ ನಮ್ಮನ್ನು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಮಾತ್ರವಲ್ಲ, ಎಲ್ಲ ಲೇಖನಗಳಲ್ಲಿಯೂ ಉತ್ಕೃಷ್ಟ ಜೀವನ ಸಂದೇಶಗಳಿವೆ. ಮಾನವ ಬದುಕಿನ  ಪಾಠಗಳಿವೆ. ಈ ದೃಷ್ಟಿಯಲ್ಲಿ ‘ಆ ಲೋಚನ’ ಪುಸ್ತಕ ಪ್ರಪಂಚದಲ್ಲಿ ಮಹತ್ವವನ್ನು ಪಡೆಯುತ್ತದೆ.

ಜೀವನವೆಂಬುದು ಒಂದು ಪಾಠಶಾಲೆಯಿದ್ದಂತೆ. ಇಲ್ಲಿ ಅನವರತವೂ ನಾವು ಬದುಕಲು ಕಲಿಯಬೇಕಾಗುತ್ತದೆ. ಕಲ್ಚಾರರ ಎಲ್ಲಾ ಲೇಖನಗಳೂ ಈ ದಿಸೆಯಲ್ಲಿ ದಿಕ್ಸೂಚಿಯ ಹಾಗೆ ಕೆಲಸ ಮಾಡುತ್ತದೆ. ನಮ್ಮನ್ನು ಪದೇ ಪದೇ ಆಲೋಚಿಸುವಂತೆ ಮಾಡುತ್ತದೆ ಎಂಬುದು ಈ ಪುಸ್ತಕವನ್ನು ಓದಿದ ಯಾರಿಗಾದರೂ ಅರ್ಥವಾಗುವ ವಿಚಾರ.

ಲೇಖಕರು ಇಲ್ಲಿ  ಸರಳ, ಸುಂದರ ಭಾಷೆಯಿಂದಲೂ ಸುಲಲಿತ ಜೀವನಕ್ಕೆ ಹಿತವೆನಿಸುವ ಸಲಹೆಗಾರನಾಗಿಯೂ ಓದುಗರ ಮನಸ್ಸಿಗೆ ಹತ್ತಿರವಾಗುತ್ತಾರೆ. ಇಷ್ಟವಾಗುತ್ತಾರೆ. ಲೇಖಕ ಕಲ್ಚಾರರು ಈ ಬರಹಗಳ ಗುಚ್ಛದಲ್ಲಿ ಹಲವಾರು ವಿಭಿನ್ನ ವಿಚಾರ, ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಪರಿಹಾರಗಳನ್ನೂ ಸೂಚಿಸಿದ್ದಾರೆ. ಕೆಲವೊಮ್ಮೆ ಲೇಖಕರು ಒಬ್ಬ ಮಾನಸಿಕ ಸಲಹೆಗಾರನ ರೂಪದಲ್ಲಿ ಮನಸ್ಸಿಗೆ ಹತ್ತಿರವಾಗುತ್ತಾರೆ. ಪುಸ್ತಕದ ಓದು ನಮ್ಮನ್ನು ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತದೆ. ನಮ್ಮದೇ ತಪ್ಪು ಒಪ್ಪುಗಳ ಬಗ್ಗೆ ಮನಸ್ಸು ಆತ್ಮಾವಲೋಕನ ಮಾಡುವಂತೆ ಪ್ರೇರೇಪಿಸುತ್ತದೆ. 

ಸ್ವತಃ ತಾಳಮದ್ದಳೆಯ ಅರ್ಥಧಾರಿಯಾಗಿರುವ ಲೇಖಕರು ಈ ಲೇಖನಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಪ್ರಸ್ತುತ ಜೀವನದ ಆಗುಹೋಗುಗಳನ್ನು ಪೌರಾಣಿಕ ಘಟನೆಗಳೊಂದಿಗೆ ಹೋಲಿಸಿ ಸಮೀಕರಿಸುತ್ತಾರೆ. ಇದು ಓದುಗರ ಮೇಲೆ ಅದ್ಭುತ ಪರಿಣಾಮವನ್ನು ಬೀರಲು ಸಾಧ್ಯವಿದೆ. ಬಂಟ್ವಾಳದ ಸೇವಂತಿ ಪ್ರಕಾಶನದವರು ಪ್ರಕಟಿಸಿದ ಈ ಕೃತಿ ‘ಆ ಲೋಚನ’ ಶ್ರೇಷ್ಠ ಬರಹಗಳ ಗುಚ್ಛ ಎಂದು ನಿಸ್ಸಂಶಯವಾಗಿ ಹೇಳಬಹುದು. 

‘ಆ ಲೋಚನ’ ಪುಸ್ತಕದ ಲೇಖಕರು: ಶ್ರೀ ರಾಧಾಕೃಷ್ಣ ಕಲ್ಚಾರ್, ವಿಟ್ಲ. ದೂರವಾಣಿ: 9449086653, email: [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments