Saturday, January 18, 2025
Homeಯಕ್ಷಗಾನಪೆರ್ಮುದೆ ಜಯಪ್ರಕಾಶ ಶೆಟ್ಟಿ -  ಆಟಕ್ಕೂ ಸೈ, ಕೂಟಕ್ಕೂ ಸೈ 

ಪೆರ್ಮುದೆ ಜಯಪ್ರಕಾಶ ಶೆಟ್ಟಿ –  ಆಟಕ್ಕೂ ಸೈ, ಕೂಟಕ್ಕೂ ಸೈ 

ಇಂದು ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆ ಎಂಬ ಎರಡೂ ವಿಭಾಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕಲಾವಿದರನೇಕರಿದ್ದಾರೆ. ಕೆಲವರು ಅನುಭವಿಗಳಾಗಿ ಮೆರೆಯುತ್ತಿದ್ದರೆ, ಉದಯೋನ್ಮುಖರೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಆಟ-ಕೂಟಗಳೆರಡರಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಕಲಾವಿದರಲ್ಲೊಬ್ಬರು ಪೆರ್ಮುದೆ ಜಯಪ್ರಕಾಶ ಶೆಟ್ಟಿ. (ಕುಡಾಲು ಭಂಡಾರಗುತ್ತು) ಪ್ರಸ್ತುತ ಶ್ರೀ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.


ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಳ ಗ್ರಾಮದ ಕುಡಾಲುಗುತ್ತು ಮನೆಯಲ್ಲಿ 1975ನೇ ಇಸವಿ ಎಪ್ರಿಲ್ 26ನೇ ತಾರೀಕಿನಂದು ಕುಡಾಲುಗುತ್ತು ಬಾಲಕೃಷ್ಣ ಶೆಟ್ಟಿ ಮತ್ತು ಲೀಲಾವತಿ ಶೆಟ್ಟಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಬಾಲಕೃಷ್ಣ ಶೆಟ್ಟಿಯವರು ಹವ್ಯಾಸೀ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಇವರ ಸೋದರಮಾವ ಕುಡಾಲುಗುತ್ತು ಬಾಬು ಶೆಟ್ಟಿಯವರೂ ಹವ್ಯಾಸೀ ಅರ್ಥಧಾರಿಯಾಗಿದ್ದರು.

ಖ್ಯಾತ ಕಲಾವಿದರಾದ ಗುಂಪೆ ರಾಮಯ್ಯ ರೈಗಳೂ (ತಂದೆಯ ಮಾವ), ಪೆರುವಾಯಿ ನಾರಾಯಣ ಶೆಟ್ಟಿಯವರೂ (ಗುರು ಮತ್ತು ಮಾವ) ಜಯಪ್ರಕಾಶ ಶೆಟ್ಟಿಯವರ ಬಂಧುಗಳೇ ಆಗಿದ್ದರು. 4ನೇ ತರಗತಿಯವರೇಗೆ ಕುಡಾಲು ಶಾಲೆಯಲ್ಲಿ ಓದು. 5ರಿಂದ 10ನೇ ತರಗತಿ ವರೇಗೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಸ್ಕೂಲಿನಲ್ಲಿ ಓದುತ್ತಿರುವಾಗ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು.

ಇವರ ತಂದೆಯ ಸೋದರಮಾವ ಕುಡಾಲುಗುತ್ತು ಬಾಬು ಶೆಟ್ಟಿಯವರು ಪೆರ್ಮುದೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಅಲ್ಲಿ ವಾರಕ್ಕೊಂದು ಕೂಟ ನಿರಂತರ ನಡೆಯುತ್ತಿತ್ತು. ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪ್ರತಿ ಕಾರ್ಯಕ್ರಮಕ್ಕೂ ತೆರಳಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಮತ್ತು ಗಮನವಿಟ್ಟು ನೋಡುತ್ತಿದ್ದರು. ಅರ್ಥಗಾರಿಕೆಯನ್ನು ಕೇಳುತ್ತಿದ್ದರು.

ಪ್ರಸಂಗಜ್ಞಾನ, ಶ್ರುತಿಜ್ಞಾನ, ರಂಗನಡೆಗಳ ಬಗ್ಗೆ ತಿಳಿದುಕೊಳ್ಳಲು ಇದು ಅವಕಾಶವಾಯಿತು ಆಗಲೇ ಮಾತುಗಾರಿಕೆಯತ್ತ ಗಮನಹರಿಸಿದ್ದರು.  5ನೇ ಕ್ಲಾಸಿನಲ್ಲಿ ಓದುತ್ತಿರುವಾಗ ತಾಳಮದ್ದಳೆಯಲ್ಲಿ ಮೊದಲ ಪಾತ್ರವನ್ನು ನಿರ್ವಹಿಸಿದ್ದರು. ಸೀತಾಪಹಾರ ಪ್ರಸಂಗದ ಮಾರೀಚನಾಗಿ. ವೇಷಧಾರಿಯಾಗಿ ಮೊದಲು ರಂಗಪ್ರವೇಶ ಮಾಡಿದ್ದು 7ನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದಾಗ.

ಎಸ್.ಎಸ್. ಎಲ್.ಸಿ. ಓದಿನ ನಂತರ ರಜೆಯಲ್ಲಿ 27 ದಿನಗಳ ಕಾಂತಾವರ ಮೇಳದಲ್ಲಿ ತಿರುಗಾಟವನ್ನೂ ನಡೆಸಿದರು. ಇವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಕಲಿಕಾಕೇಂದ್ರಕ್ಕೆ ಸೇರಿಸಿದವರು ಅಧ್ಯಾಪಕರಾದ ನಡುಗುಡ್ಡೆ ಜಯಂತ ಮಾಸ್ತರ್. ಕೋಳ್ಯೂರು ಅವರಿಂದ ನಾಟ್ಯಾಭ್ಯಾಸ. ನರೇಂದ್ರ ಮಾಸ್ತರ್ ಅವರಿಂದ ಬಣ್ಣಗಾರಿಕೆಯ ಪಾಠ. ಜತೆಗೆ ಠಾಕೂರ್ ಅವರ ಸಲಹೆ ನಿರ್ದೇಶನಗಳು.

ಧರ್ಮಸ್ಥಳ ಪರಿಸರದಲ್ಲಿ ನಡೆಯುತ್ತಿದ್ದ ಆಟ-ಕೂಟಗಳಿಗೆ ಗುರುಗಳಾದ ಕೋಳ್ಯೂರು ರಾಮಚಂದ್ರ ರಾಯರ ಜತೆ ಜಯಪ್ರಕಾಶ ಶೆಟ್ಟಿಯವರೂ ಹೋಗುತ್ತಿದ್ದರು. “1991ನೇ ಸಾಲಿನ ಆ ತಂಡದಲ್ಲಿ 24 ಮಂದಿ ವಿದ್ಯಾರ್ಥಿಗಳಿದ್ದರು. ಅಭ್ಯಾಸ ಮುಗಿದ ನಂತರ 9 ಮಂದಿಯನ್ನು ವಿವಿಧ ಮೇಳದವರು ಆಯ್ಕೆ ಮಾಡಿ ಕರೆದು ಕೊಂಡು ಹೋಗಿದ್ದರಂತೆ. ಕಟೀಲು ಮೇಳದಲ್ಲಿ ಆಗ ಸಂಗೀತಗಾರರಾಗಿದ್ದ ಇಳಂತಿಲ ಪದ್ಮನಾಭ ಎಂಬವರು ನನ್ನನ್ನು ಕರೆದೊಯ್ದು ಕಟೀಲು ಮೇಳಕ್ಕೆ ಸೇರುವಂತೆ ಮಾಡಿದರು’’ ಎಂದು ಅಂದಿನ ದಿನಗಳನ್ನು ಪೆರ್ಮುದೆಯವರು ನೆನಪಿಸಿಕೊಳ್ಳುತ್ತಾರೆ.

ಮೊದಲು 1ನೇ ಮೇಳಕ್ಕೆ ಆಯ್ಕೆಯಾಗಿದ್ದರು. ಆದರೆ ಅನಿವಾರ್ಯವಾಗಿ ಪೆರ್ಮುದೆಯವರನ್ನು 2ನೇ ಮೇಳಕ್ಕೆ ಕಳುಹಿಸಲಾಯಿತು. ಬಲಿಪ ಭಾಗವತರೂ, ಶ್ರೇಷ್ಠ ಕಲಾವಿದರೂ ಇದ್ದ ಮೇಳ, ಪೆರುವಾಯಿ ನಾರಾಯಣ ಶೆಟ್ಟಿಯವರ ಮರುಪ್ರವೇಶ ಹೀಗೆ ಮೊದಲ ವರ್ಷವೇ ಎರಡು ಭಾಗ್ಯಗಳು ನನಗೆ ಜತೆಯಾಗಿ ಬಂತು ಎಂಬುದು ಜಯಪ್ರಕಾಶ ಶೆಟ್ಟಿಯವರ ಅಭಿಪ್ರಾಯ. ಮೊದಲ 2 ವರ್ಷ ನಿತ್ಯವೇಷದಿಂದ ತೊಡಗಿ ಬೆಳಗಿನ ವರೇಗೂ ಸಣ್ಣಪುಟ್ಟ ವೇಷಗಳು.

ತನ್ನ ಕಲಾಜೀವನದ ಆರಂಭದ ದಿನಗಳು ಹೇಗಿದ್ದವು ಎಂಬುದನ್ನು ಪೆರ್ಮುದೆಯವರು ನಗುನಗುತ್ತಲೇ ಹೀಗೆ ಹೇಳುತ್ತಾರೆ- ‘‘ಮನೆಯಲ್ಲಿ ಬಡತನ ಇತ್ತು. ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ಆಶ್ರಯಿಸಿದೆ. ಇವನಿಗೆ ಆಟ ಬೇಕಾ? ಮಂಗನ ವೇಷಕ್ಕೆ ಆದೀತು ಎಂದು ಹೀಯಾಳಿಸಿದವರೂ ಇದ್ದಾರೆ. ಹಾಗಾಗಿ ಸಾಧಿಸಬೇಕೆಂಬ ಛಲ ಬಂತು. ಸಹಕಾರ ಪ್ರೋತ್ಸಾಹ ನೀಡಿದವರೂ ಇದ್ದಾರೆ. ಆಟ ನೋಡುತ್ತಿದ್ದೆ. ಓದುತ್ತಿದ್ದೆ. ಹಿರಿಯ ಕಲಾವಿದರ ಸೇವೆ ಮಾಡುತ್ತಿದ್ದೆ. ಕಲಿಕೆಯ ವಿಚಾರದಲ್ಲಿ ರಾಜಿ ಇರುತ್ತಿರಲಿಲ್ಲ. ನಿದ್ದೆ ಮಾಡದೆ ಅಭ್ಯಾಸ ಮಾಡುತ್ತಿದ್ದೆ. ಹಾಸ್ಯ, ಸ್ತ್ರೀವೇಷ, ಬಣ್ಣದ ವೇಷಗಳನ್ನು ಬಿಟ್ಟು ಉಳಿದ ಎಲ್ಲಾ ವೇಷಗಳನ್ನೂ ಮಾಡುವ ಅವಕಾಶ ಸಿದ್ಧಿಸಿದೆ. ನಿತ್ಯವೇಷದಿಂದ ಎದುರುವೇಷದ ವರೇಗೆ ಕಟೀಲು ಮೇಳದಲ್ಲೇ ಬೆಳೆದ ಸಂತೋಷ ಇದೆ.’’

ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಸತತ ಅಧ್ಯಯನದಿಂದ ಕ್ಷಿಪ್ರ ಬೆಳವಣಿಗೆ ಹೊಂದಿದವರು. ಪ್ರಹ್ಲಾದ, ಚಂಡ ಮುಂಡರು, ವಿಷ್ಣು, ಕೃಷ್ಣ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಕಿರೀಟ ವೇಷಧಾರಿಯಾಗಿ ತೇರ್ಗಡೆಗೊಂಡರು. 2006ರ ವರೇಗೆ 2ನೇ ಮೇಳದಲ್ಲಿ ವ್ಯವಸಾಯ. 1998ರಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಂಡರು. 

2006-2007ರ ತಿರುಗಾಟ ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ಭಾಗವತಿಕೆ. ಪೆರ್ಮುದೆಯವರ ಹೆಚ್ಚಿನ ಎಲ್ಲಾ ವೇಷಗಳಿಗೆ ಸಹಕಲಾವಿದನಾಗಿ ಅಭಿನಯಿಸಿದ್ದೇನೆ. ಸಹಕಲಾವಿದರೊಡನೆ ಉತ್ತಮವಾಗಿ ಸಂಭಾಷಿಸುತ್ತಾರೆ ಎಂಬ ಅನುಭವವಾಗಿದೆ. 2007ರಿಂದ ನಿರಂತರ 9 ವರ್ಷ ಹೊಸನಗರ ಮೇಳ, ಮತ್ತೆ 1 ವರ್ಷ ಎಡನೀರು ಮೇಳ. ಈಗ ಹನುಮಗಿರಿ ಮೇಳದಲ್ಲಿ ತಿರುಗಾಟ. ಹೀಗೆ- ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಕಳೆದ 30 ವರ್ಷಗಳಿಂದ ವೃತ್ತಿಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ.
ಕಟೀಲು ಮೇಳದ ತಿರುಗಾಟದಲ್ಲಿ ಆಸ್ರಣ್ಣ ಬಂಧುಗಳ, ಕಲ್ಲಾಡಿ ವಿಠಲ ಶೆಟ್ಟಿಯವರ ಆಶೀರ್ವಾದ, ಸಹಕಾರಗಳಿತ್ತು.

“ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ 2 ವರ್ಷ, ಪುತ್ತೂರು ಶ್ರೀಧರ ಭಂಡಾರಿಗಳ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ 5 ವರ್ಷ ತಿರುಗಾಟ ನಡೆಸಿದ್ದೇನೆ. ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಟೀಲು ಪದ್ಮನಾಭರೂ, ಅನೇಕ ಸಂಘಟಕರೂ ಒದಗಿಸಿದ್ದಾರೆ. ಕಟೀಲು ಮೇಳದ ತಿರುಗಾಟದಲ್ಲಿ ಶಿವಾಜಿ ಶೆಟ್ಟಿಯವರೂ ಸಹಕರಿಸಿದ್ದಾರೆ. ಕಷ್ಟದ ದಿನಗಳಲ್ಲಿ ಸಹಾಯವಿತ್ತವರು. ಕಲಾಫೋಷಕ ಡಾ. ಟಿ. ಶ್ಯಾಮ ಭಟ್ ಮತ್ತು ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು. ಮಾನಸಿಕವಾಗಿ ಕುಂದಿರುವಾಗ ಮರೆಯಲಾಗದ ಸಹಾಯ ಮಾಡಿದ್ದಾರೆ. ಧೈರ್ಯತುಂಬಿ ಪ್ರೋತ್ಸಾಹಿಸಿದ್ದಾರೆ. ತಾಳಮದ್ದಳೆ ಕ್ಷೇತ್ರದಲ್ಲಿ ವಾಸುದೇವ ರಂಗಾಭಟ್ಟರೂ ಸಹಕರಿಸಿ, ಪ್ರೋತ್ಸಾಹಿಸಿದ್ದಾರೆ. ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಪ್ರೋತ್ಸಾಹಿಸಿದ್ದಾರೆ. ಪ್ರೀತಿಸಿದ್ದಾರೆ. ಅಲ್ಲದೆ ಹನುಮಗಿರಿ ಮೇಳದ ತಿರುಗಾಟದಲ್ಲಿ ಕಲಾವಿದರೂ, ತೋಡುಗುಳಿ ಮಹಾಬಲ ಭಟ್ಟರೂ, ಅರವಿಂದ ಹೊಳ್ಳರೂ ಪ್ರೋತ್ಸಾಹಿಸಿದ್ದಾರೆ. ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ನಂಬಿದ್ದೇನೆ. ಕಲಾ ಮಾತೆಯು ಅನುಗ್ರಹಿಸಿದ್ದಾಳೆ ಎಂಬ ತೃಪ್ತಿ ಇದೆ. ಯಕ್ಷಗಾನದಲ್ಲಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ನಾನು ಪೂರ್ಣಕಲಾವಿದನಲ್ಲ. ಅರ್ಧ ಕಲಾವಿದ” ಎಂಬುದು ಜಯಪ್ರಕಾಶ ಶೆಟ್ಟಿಯವರ ಅನಿಸಿಕೆ. 

ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪುರಾಣಜ್ಞಾನ, ಪ್ರಸಂಗನಡೆಗಳನ್ನು ತಿಳಿದು ಮಾತುಗಾರಿಕೆಯಲ್ಲೂ ಪಳಗಿದ ಕಾರಣ ಕೂಟಗಳಲ್ಲೂ ಬೇಡಿಕೆಯ ಕಲಾವಿದರು.

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments