Saturday, January 18, 2025
Homeಯಕ್ಷಗಾನಯಕ್ಷಗಾನ ವೇಷಧಾರಿಯಾಗಿ ಅನುಭವದ ಮತ್ತು ಹಿರಿಯ ಕಲಾವಿದ - ಶ್ರೀ ಶಿವರಾಮ ಜೋಗಿ

ಯಕ್ಷಗಾನ ವೇಷಧಾರಿಯಾಗಿ ಅನುಭವದ ಮತ್ತು ಹಿರಿಯ ಕಲಾವಿದ – ಶ್ರೀ ಶಿವರಾಮ ಜೋಗಿ

ಶ್ರೀ ಶಿವರಾಮ ಜೋಗಿ ಬಿ. ಸಿ. ರೋಡು ಅವರು ಯಾರನ್ನೂ ಅನುಕರಿಸದೆ ತನ್ನದೇ ಆದ ಶೈಲಿಯನ್ನು ರೂಢಿಸಿಕೊಂಡು ಮೆರೆದವರು. ಕುಡಾಣ ಶ್ರೀ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ, ಅಗರಿ, ಶೇಣಿ, ತೆಕ್ಕಟ್ಟೆಯವರಲ್ಲದೆ ಇನ್ನೂ ಅನೇಕ ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ 60ಕ್ಕೂ ಮಿಕ್ಕಿ ವರ್ಷಗಳ ತಿರುಗಾಟ ನಡೆಸುತ್ತಿರುವ ಇವರಿಗೆ ಈಗ ವಯಸ್ಸು 79. ಪುತ್ತೂರು ತಾಲೂಕಿನ ಕಾಂಚನ ಎಂಬಲ್ಲಿ 7-6-1941ರಂದು ಶ್ರೀ ಗುರುವಪ್ಪ ಜೋಗಿ, ಸೀತಮ್ಮ ದಂಪತಿಗಳಿಗೆ ಮಗನಾಗಿ ಶಿವರಾಮ ಜೋಗಿಯವರು ಜನಿಸಿದರು.

ಪ್ರಾಥಮಿಕ ವಿದ್ಯಾಭ್ಯಾಸ ಕಾಂಚನ ಶಾಲೆಯಲ್ಲಿ. ಖ್ಯಾತ ಕಲಾವಿದ ಕಾಂಚನ ಸಂಜೀವ ರೈಗಳು ಶಾಲೆಯಲ್ಲಿ ಇವರ ಸಹಪಾಠಿಯಾಗಿದ್ದರಂತೆ. ನಂತರ ಶ್ರೀ ಜೋಗಿಯವರು ಒಂದು ವರ್ಷ ಟೈಲರಿಂಗ್ ಕೆಲಸವನ್ನೂ ಮಾಡಿದ್ದರು. ಆಗ ಶೇಣಿ ಗೋಪಾಲಕೃಷ್ಣ ಭಟ್ಟರ ವ್ಯವಸ್ಥಾಪಕತ್ವದಲ್ಲಿ ಕೂಡ್ಲು ಮೇಳ ತಿರುಗಾಟ ನಡೆಸುತ್ತಿತ್ತು. ಕೂಡ್ಲು ಮೇಳದಲ್ಲಿ ಹಾಸ್ಯಗಾರರಾಗಿದ್ದವರು ರಸಿಕರತ್ನ ಗೋಪಾಲಕೃಷ್ಣ ಜೋಷಿಯವರು. ಇವರು ಕಾಂಚನದಲ್ಲಿ ವಾಸ್ತವ್ಯವಿದ್ದರಂತೆ. ಬಾಲಕನಲ್ಲಿ (ಶಿವರಾಮ ಜೋಗಿ) ಅವ್ಯಕ್ತವಾಗಿರುವ ಪ್ರತಿಭೆಯನ್ನು ಚತುರಮತಿಗಳಾದ ಜೋಷಿಯವರು ಗುರುತಿಸಿದರೋ? ಅಲ್ಲ, ಶ್ರೇಷ್ಠ ಕಲಾವಿದನಾಗುವ ಭಾಗ್ಯವನ್ನು ದೇವರು ಕರುಣಿ ಸಿದರೋ? ರಸಿಕರತ್ನ ಜೋಷಿಯವರು ಶಿವರಾಮ ಜೋಗಿಯವರನ್ನು ಮೇಳಕ್ಕೆ ಕರೆದುಕೊಂಡು ಹೋದದ್ದಂತೂ ಸತ್ಯ. ಆಗ ಯಕ್ಷಗಾನದಲ್ಲಿ ಪಾತ್ರ ಮಾಡಿಯೇ ಗೊತ್ತಿರಲಿಲ್ಲವಂತೆ ಜೋಗಿಯವರಿಗೆ. ಶಾಲಾ ದಿನಗಳಲ್ಲಿ ಕಾಂಚನ ಸಂಜೀವ ರೈಗಳ ಜತೆ ನಾಟಕದಲ್ಲಿ ಅಭಿನಯಿಸಿದ್ದರಂತೆ. ಕಾಂಚನ ಸಂಜೀವ ರೈಗಳು ಕರ್ಣನಾಗಿಯೂ, ಜೋಗಿಯವರು ಅಶ್ವತ್ಥಾಮನಾಗಿಯೂ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರಂತೆ.

ಕೂಡ್ಲು ಮೇಳದಲ್ಲಿ ಆಗ ಹೆಚ್ಚಾಗಿ ಸತ್ಯಹರಿಶ್ಚಂದ್ರ, ಭಕ್ತ ಪ್ರಹ್ಲಾದ ಮೊದಲಾದ ಪೌರಾಣಿಕ ಪ್ರಸಂಗಗಳು ಪ್ರದರ್ಶಿಸಲ್ಪಡುತ್ತಿತ್ತು. ಪ್ರಾರಂಭದಲ್ಲಿ ಸಹಜವಾಗಿ ಶಿವರಾಮ ಜೋಗಿಯವರು ಅಳುಕಿದರೂ ಶ್ರೀ ಶೇಣಿಯವರು ಧೈರ್ಯ ತುಂಬಿದರು. ಸಂಭಾಷಣೆಗಳನ್ನು ಹೇಳಿಕೊಡುವ ಮೊದಲೇ ಪಾತ್ರದ ಸ್ವಭಾವ, ರಂಗದಲ್ಲಿ ವ್ಯವಹರಿಸುವ ರೀತಿ, ತಾನು ಯಾರ ಜತೆ ಮಾತನಾಡುತ್ತಿದ್ದೇನೆ, ಭಾವನೆಗಳನ್ನು ವ್ಯಕ್ತಪಡಿಸುವ ಕ್ರಮಗಳನ್ನು ಹೇಳಿಕೊಡುತ್ತಿದ್ದರಂತೆ. ಹಾಗಾಗಿಯೇ ಶೇಣಿಯವರ (ಹಿರಣ್ಯಕಶ್ಯಪ-ಪ್ರಹ್ಲಾದ, ಹರಿಶ್ಚಂದ್ರ-ಲೋಹಿತಾಶ್ವ) ಜತೆ ವೇಷ ಮಾಡಿದೆ. ಶೇಣಿಯವರು ಪ್ರೀತಿಸಿದರು, ಆಶೀರ್ವದಿಸಿದರು ಎಂದು ಜೋಗಿಯವರು ಬಾಲಕಲಾವಿದನಾಗಿ ಕಳೆದ ದಿನಗಳನ್ನು ನೆನಪಿಸುತ್ತಾರೆ.

ಆಗ ಕೂಡ್ಲು ಮೇಳದಲ್ಲಿ ಬಲಿಪರು, ಕುದ್ರೆಕೋಡ್ಲು, ಶೇಣಿ, ರಸಿಕರತ್ನ ಜೋಷಿ, ವೇಣೂರು ವೆಂಕಟ್ರಮಣ, ಮಾಣಂಗಾಯಿ ಕೃಷ್ಣ ಭಟ್ಟ ಮೊದಲಾದವರ ಒಡನಾಟವೂ ಇವರಿಗೆ ದೊರಕಿತು. ತಿರುಗಾಟ ಆರಂಭಿಸಿದ್ದು ಕೂಡ್ಲು ಗೋಪಾಲಕೃಷ್ಣ ದೇವರ ಮೇಳದಲ್ಲಿ. ಮೇಳಕ್ಕೆ ಕರೆದುಕೊಂಡು ಹೋದವರು ಗೋಪಾಲಕೃಷ್ಣ ಜೋಷಿಯವರು. ಮಾತುಗಾರಿಕೆ ಕಲಿಸಿದವರು ಶೇಣಿ ಗೋಪಾಲಕೃಷ್ಣ ಭಟ್ಟರು. ನಾಟ್ಯ ಕಲಿಸಿ ಆಶೀರ್ವದಿಸಿದವರು ಕುಡಾಣ ಗೋಪಾಲಕೃಷ್ಣ ಭಟ್ಟರು. ಹೀಗೆ ಗೋಪಾಲಕೃಷ್ಣ ಎಂಬ ಹೆಸರು  ಶಿವರಾಮ ಜೋಗಿಯವರ ಜೀವನದುದ್ದಕ್ಕೂ ಬೆಸೆದುಕೊಂಡಿದೆ. ಮುಂದಿನ ವರುಷ ತಿರುಗಾಟ ಮುಲ್ಕಿ ಮೇಳದಲ್ಲಿ. ಆಗ ಖ್ಯಾತ ಹಾಸ್ಯಗಾರರಾದ ನಾರಾಯಣ ಭಟ್ಟ ಪೆರುವೊಡಿ ಇವರ ಸಂಚಾಲಕತ್ವ. ಮುಲ್ಕಿ ಮೇಳಕ್ಕೆ ಸೇರುವ ಮೊದಲೇ ಮಳೆಗಾಲದಲ್ಲಿ ಶ್ರೀ ಕುಡಾಣ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿದ್ದು ಜೋಗಿಯವರು ನಾಟ್ಯ ಕಲಿತರು.

ಮುಲ್ಕಿ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರು, ಕುಡಾಣ ಗೋಪಾಲಕೃಷ್ಣ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಪಾತಾಳ ವೆಂಕಟ್ರಮಣ ಭಟ್, ಕೊಕ್ಕಡ ಈಶ್ವರ ಭಟ್, ಪೆರುವೊಡಿ ಹಾಸ್ಯಗಾರರು, ಮಧೂರು ಗಣಪತಿ ರಾವ್, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ಎಂಪೆಕಟ್ಟೆ ರಾಮಯ್ಯ ರೈ, ಪಕಳಕುಂಜ ಕೃಷ್ಣ ನಾೈಕ ಮೊದಲಾದವರ ಒಡನಾಟ, ಪ್ರಹ್ಲಾದ, ಧ್ರುವ, ಶ್ರೀಕೃಷ್ಣ, ಲೋಹಿತಾಶ್ವ ಮೊದಲಾದ ಪಾತ್ರಗಳಲ್ಲಿ ಶಿವರಾಮ ಜೋಗಿಯವರು ಮಿಂಚಲಾರಂಭಿಸಿದರು.

ಮರೆಯಲಾಗದ ದಿನ : ‘‘ನಾನು ಬಾಲಕಲಾವಿದ. ಮುಲ್ಕಿ ಮೇಳದ ತಿರುಗಾಟ. ಪುತ್ತೂರು ನಾರಾಯಣ ಹೆಗ್ಡೆಯವರ ಹಿರಣ್ಯಕಶ್ಯಪ. ನಾನು ಪ್ರಹ್ಲಾದ. ಅವರ ಜತೆ ವೇಷ ಮಾಡುವುದೇ ಭಾಗ್ಯ. ಅವರು ರಂಗಪ್ರವೇಶ ಮಾಡಿದ ಮೇಲೆ ಪಾತ್ರವೇ ಆಗಿಬಿಡುತ್ತಿದ್ದರು. ಅವರದು ಪರಕಾಯ ಪ್ರವೇಶ. ಅಷ್ಟೂ ತನ್ಮಯರಾಗಿ ಅಭಿನಯಿಸುತ್ತಿದ್ದರು. ಆಗ ಮೇಳಗಳಲ್ಲಿ ಟೋಪನ್ ವ್ಯವಸ್ಥೆ ಇರುತ್ತಿರಲಿಲ್ಲ. ಎಲ್ಲಾ ಕಲಾವಿದರೂ ತಲೆಕೂದಲು ಬೆಳೆಸುತ್ತಿದ್ದರು. ಸ್ತ್ರೀವೇಷದವರೂ ಕೂಡಾ. ಕೊನೆಯ ದೃಶ್ಯ ಹರಿ ಎಲ್ಲಿದ್ದಾನೆ ಎಂದು ಹಿರಣ್ಯಕಶ್ಯಪನಾಗಿ ಹೆಗ್ಡೆಯವರು ಪ್ರಹ್ಲಾದನಾಗಿ ಅಭಿನಯಿಸುತ್ತಿದ್ದ ನನ್ನಲ್ಲಿ ಕೇಳಿದರು. ಎರಡು ಬಾರಿ ಕಂಬದಲ್ಲಿದ್ದಾನೆ ಎಂದು ಹೇಳಿದೆ. ಮೂರನೆ ಬಾರಿ ಕೇಳಿದಾಗ ಮಾಳಿಗೆಯಲ್ಲಿದ್ದಾನೆ ಎಂದು ಹೇಳಿದೆ. ಅವರು ಸಹಜವಾಗಿ, ತನ್ಮಯರಾಗಿ ನನ್ನ ತಲೆಮೇಲೆ ಕೈಯಿಟ್ಟು ಕೂದಲನ್ನು ಅಮುಕಿ ಎತ್ತಿ ಎಸೆಯುವಂತೆ ಅಭಿನಯಿಸಿದ್ದರು. ಶಿಕ್ಷೆ ಕೊಡುವ ದೃಶ್ಯಗಳಲ್ಲಿ, ಎದುರು ಪಾತ್ರಧಾರಿ ತಲೆಯ ಮೇಲೆ ಕೈಯಿಕ್ಕಿದಾಗ ನೋವಾಗದೇ ಇರಬೇಕಾದರೆ ನಾವೂ ಅವರ ಕೈಗಳನ್ನು ಹಿಡಿದು ಅಭಿನಯಿಸಬೇಕು. ನಾನು ಎಚ್ಚರ ವಹಿಸಿದ್ದು ಕಡಿಮೆಯಾಯಿತು. ರಂಗದಿಂದ ಹೊರಗೆ ಎಸೆಯಲ್ಪಟ್ಟೆ. ಆಗ ಎತ್ತರದ ರಂಗಸ್ಥಳ ಇರಲಿಲ್ಲ. ನೆಲದಲ್ಲೇ ಪ್ರದರ್ಶನ. ಆಗ ಹುಡುಗಾಟಿಕೆ. ಪ್ರದರ್ಶನ ಮುಗಿದ ಮೇಲೆ ನೋವಾಯಿತೆ? ಎಂದು ಕೇಳಿ ಹೆಗ್ಡೆಯವರು ಸಮಾಧಾನದಿಂದ ನೀತಿಯನ್ನೂ ಹೇಳಿದರು. ಗದರಿಸಲಿಲ್ಲ’’ ಎಂದು ಶಿವರಾಮ ಜೋಗಿಯವರು ನೆನಪಿಸಿಕೊಳ್ಳುತ್ತಾರೆ.

ಯಕ್ಷಗಾನವಲ್ಲದೆ ಭರತನಾಟ್ಯ, ಕೂಚುಪುಡಿ, ಕಥಕ್ಕಳಿ ಮೊದಲಾದ ಕಲಾಪ್ರಕಾರಗಳ ಹೆಜ್ಜೆಗಾರಿಕೆಯ ಜ್ಞಾನ ಹೊಂದಿದ್ದ ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯ ಕಲಿತ ಶಿವರಾಮ ಜೋಗಿಯವರು ಮುಂದೆ ಸತತ 40 ವರ್ಷಗಳ ಕಾಲ ಶ್ರೀ ಕೆ. ವಿ. ಪೈ ಸಂಚಾಲಕತ್ವದ ಸುರತ್ಕಲ್ಲು ಮೇಳದಲ್ಲಿ ಕಲಾಸೇವೆ ಮಾಡಿದರು. (ಶ್ರೀ ಮಹಮ್ಮಾಯಿ ಯಕ್ಷಗಾನ ನಾಟಕ ಸಭಾ, ಸುರತ್ಕಲ್) ಮೇಳದ ಆರಂಭವಾದಾಗಿನಿಂದ ಕೊನೆಯ ತನಕವೂ (40 ವರ್ಷ) ತಿರುಗಾಟ ನಡೆಸಿದವರು ವೇಣೂರು ಸುಂದರ ಆಚಾರ್ಯರು ಮತ್ತು ಇವರು ಮಾತ್ರ. ಅಗರಿ ಶ್ರೀನಿವಾಸ ಭಾಗವತರು, ಅಗರಿ ರಘುರಾಮ ಭಾಗವತರು, ಪದ್ಯಾಣ ಗಣಪತಿ ಭಟ್, ಕುದ್ರೆಕ್ಕೋಡ್ಲು, ತಲೆಂಗಳ ಗೋಪಾಲಕೃಷ್ಣ ಭಟ್ಟ, ಕಡಬ ನಾರಾಯಣ ಆಚಾರ್ಯ, ಶೇಣಿ, ತೆಕ್ಕಟ್ಟೆ, ಪಾತಾಳ, ಕುಂಬಳೆ ಸುಂದರ ರಾವ್, ಪುತ್ತೂರು ನಾರಾಯಣ ಹೆಗ್ಡೆ, ರಾ. ಸಾಮಗ, ಕೊಕ್ಕಡ, ಎಂ.ಕೆ. ರಮೇಶಾಚಾರ್ಯ, ಕೆ. ಗೋವಿಂದ ಭಟ್ಟರಂತಹ ಶ್ರೇಷ್ಠ ಕಲಾವಿದರ ಒಡನಾಟ ಸಿಕ್ಕಿತ್ತು. ಕಡಬ ಸಾಂತಪ್ಪ, ಉಜಿರೆ ರಾಜ ಮೊದಲಾದವರೂ ಇದ್ದರು. (ಡಿ. ಮನೋಹರ ಕುಮಾರ್, ಸದಾಶಿವ ಕುಲಾಲ್, ಸದಾಶಿವ ಆಚಾರ್ಯ, ವೇಣೂರು, ಅಶೋಕ ಆಚಾರ್ಯ ಮೊದಲಾದವರು. ಆಗ ಬಾಲ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದರು.) ಇಂತಹ ಪ್ರಬುದ್ಧ ಕಲಾವಿದರ ಒಡನಾಟದಿಂದಲೇ ನಾನು ಸುರತ್ಕಲ್ ಮೇಳದಲ್ಲಿ ಕಲಾವಿದನಾಗಿ ಕಾಣಿಸಿಕೊಂಡೆ ಎಂದು ಶಿವರಾಮ ಜೋಗಿಯವರು ಹೇಳುತ್ತಾರೆ

ಸುರತ್ಕಲ್ಲು ಮೇಳದಲ್ಲಿ, ಕಡುಗಲಿ ಕುಮಾರ ರಾಮ ಪ್ರಸಂಗದಲ್ಲಿ ಮೊಗಲರ ದಬ್ಬಾಳಿಕೆಯ ವಿರುದ್ಧ ಹೋರಾಡುವ ಕುಮಾರರಾಮನ ಪಾತ್ರ ಜೋಗಿಯವರಿಗೆ ಪ್ರಸಿದ್ಧಿಯನ್ನು ಕೊಟ್ಟಿತು. ಆಗ ಶೇಣಿಯವರು ಮಹಮ್ಮದ್ ಬಿನ್ ತುಘಲಕ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ರಾಜಾ ಯಯಾತಿ ಪ್ರಸಂಗದ ಯಯಾತಿ, ಕೋಟಿ, ಚೆನ್ನಯ, ಕಾಂತಾಬಾರೆ ಬೂದಾಬಾರೆ, ಪಾತ್ರಗಳಲ್ಲಿ ರಂಜಿಸಿದರು. ಅಭಿಮನ್ಯು, ಬಬ್ರುವಾಹನ, ಚಂಡಮುಂಡರು, ಭಾರ್ಗವ- ಮೊದಲಾದ ವೇಷಗಳನ್ನೂ ಮಾಡುತ್ತಿದ್ದರು. ಪುಂಡುವೇಷಗಳಲ್ಲಿ ಇವರ ಜತೆಗಾರನಾಗಿದ್ದವರು ಖ್ಯಾತ ಕಲಾವಿದ ಕ್ರಿಶ್ಚನ್ ಬಾಬು. ಸುರತ್ಕಲ್ಲು ಮೇಳದಲ್ಲಿ ಅಗರಿ ಮತ್ತು ಪದ್ಯಾಣರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಪ್ರಸಂಗಗಳು ಮತ್ತು ಯಾರ್ಯಾರಿಗೆ ಯಾವ ಪಾತ್ರಗಳು ಪ್ರಸಿದ್ಧಿಯನ್ನು ಕೊಟ್ಟವು ಎಂಬುದನ್ನು ಜೋಗಿಯವರು ಈಗಲೂ ನೆನಪಿಸುತ್ತಾರೆ.

ನಾಟ್ಯರಾಣಿ ಶಾಂತಲಾ – ಶೇಣಿಯವರದ್ದು ವಿಷ್ಣುವರ್ಧನನಾಗಿ ಅಮೋಘ ಪಾತ್ರ ನಿರ್ವಹಣೆ. ಕುವರ ವಿಷ್ಣುವಾಗಿ (ದತ್ತಪುತ್ರ) ಜೋಗಿಯವರು. ಶೇಣಿಯವರು ಕುಣಿಯದೇ, ಹೆಚ್ಚು ಮಾತನಾಡದೇ ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದರು. ಮನಸೂರೆಗೊಳ್ಳುತ್ತಿದ್ದರು. ಅವರ ಮಾತು, ಭಾವಾಭಿವ್ಯಕ್ತಿಗೆ ಪ್ರೇಕ್ಷಕರು ತಲೆತೂಗುತ್ತಲಿದ್ದರು.
ಶ್ರೀನಿವಾಸ ಕಲ್ಯಾಣ – ಜೋಗಿಯವರ ಶ್ರೀನಿವಾಸ, ಎಂ. ಕೆ.ಯವರ ಪದ್ಮಾವತಿ, ವೇಣೂರು ಸುಂದರ ಆಚಾರ್ಯರ ಸಖ. ಈ ಪ್ರಸಂಗವನ್ನು ನೋಡಲು ಸಾಗರ ಮೊದಲಾದ ಮಲೆನಾಡ ಪ್ರದೇಶದಲ್ಲಿ ಜನಸಾಗರವೇ ಹರಿದು ಬರುತಿತ್ತಂತೆ. ಶಿವರಾಮ ಜೋಗಿಯವರ ಪ್ರಾಮಾಣಿಕ ಅಭಿಪ್ರಾಯದಂತೆ ಇಲ್ಲೊಂದು ಗಮನಿಸಬೇಕಾದ ಅಂಶವಿದೆ- ಇದು ನಮ್ಮ ಕಲ್ಪನೆ ಅಲ್ಲ. ನಮಗೆ ಹಿರಿಯ ಕಲಾವಿದರ ಕೊಡುಗೆ ಈ ಪ್ರಸಂಗ. ನಾವು ಅದನ್ನು ಅನುಸರಿಸಿದೆವು. ಅಗರಿಯವರ ನಿರ್ದೇಶನದಲ್ಲಿ ಶೇಣಿಯವರು ಶ್ರೀನಿವಾಸನಾಗಿ, ಕೋಳ್ಯೂರು ರಾಮಚಂದ್ರ ರಾಯರು ಪದ್ಮಾವತಿಯಾಗಿ, ವಿಟ್ಲ ಜೋಷಿಯವರು ಸಖನಾಗಿ, ಕಡಬ ಸಾಂತಪ್ಪನವರು ಸಖಿಯಾಗಿ ಪ್ರಸಂಗವನ್ನು ರಂಜಿಸಿದರು. ಶ್ರೇಯಸ್ಸು ಅವರಿಗೆ.

ಹೀಗೆ ಕಲಾವಿದನಾಗಿ ಬೆಳೆದ ಜೋಗಿಯವರಿಗೆ ಮೇಳದಲ್ಲಿ ವಾಹನ ಚಾಲಕನಾಗಿ 20 ವರುಷ ದುಡಿದ ಅನುಭವವೂ ಇದೆ. ಕೆ. ವಿ. ಪೈಯವರು ಒಳ್ಳೆಯ ಯಜಮಾನರು. ಶ್ರೇಷ್ಠ ಕಲಾವಿದ ಒಡನಾಟ. ಇನ್ನೇನು ಬೇಕು? ತಿರುಗಾಟ ಇನ್ನೂ ಬೇಕೆನಿಸಿದಾಗ ಅನಿವಾರ್ಯ ಕಾರಣಗಳಿಂದ ಸುರತ್ಕಲ್ಲು ಮೇಳ ತಿರುಗಾಟ ನಿಲ್ಲಿಸಿತು. ನಂತರ ಕಿಶನ್ ಹೆಗ್ಡೆಯವರ ಕರ್ನಾಟಕ ಮೇಳ (ಕಾಲಮಿತಿ) ಮತ್ತು ಕುಂಟಾರು ಮೇಳದಲ್ಲಿ ವ್ಯವಸಾಯ ಮಾಡಿದೆ. 12 ವರ್ಷ ಹೊಸನಗರ, ಎಡನೀರು , ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿದೆ. ಶ್ರೀ ಟಿ. ಶ್ಯಾಮ ಭಟ್ಟರು ಯಕ್ಷಗಾನವನ್ನೂ, ಕಲಾವಿದರನ್ನೂ ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಕಿರಿಯ ಕಲಾವಿದನಾದರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅದು ಅವರ ಶ್ರೇಷ್ಠ ಗುಣ. ಯಕ್ಷಗಾನದಿಂದಲೇ ಬದುಕಿದೆ. ಕಲಾವಿದನಾಗಿ ನಾನು ಅತ್ಯಂತ ತೃಪ್ತ ಎಂಬುದು ಜೋಗಿಯವರ ಮನತುಂಬಿದ ಮಾತುಗಳು.
ಶಿವರಾಮ ಜೋಗಿಯವರು ಪಡೆದ ಪ್ರಶಸ್ತಿಗಳ ವಿವರ :
ಪೇಜಾವರ ವಿಜಯವಿಠಲ ಪ್ರಶಸ್ತಿ, ಎಡನೀರು ಪ್ರಶಸ್ತಿ, ಕೀಲಾರು ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳು. ಕಾಂಚನದಲ್ಲಿ ಜನಿಸಿದರೂ 50 ವರುಷಗಳಿಂದ ಬಿ. ಸಿ. ರೋಡಿನಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಕುಟುಂಬದ ಬಗ್ಗೆ : ಪತ್ನಿ ಲತಾ. ಮಗಳು ಸೌಮ್ಯ-ವಿವಾಹಿತೆ. ಮಗ ಸುಮಂತ್‍ರಾಜ್-ಪದವೀಧರ. IDBI ಉದ್ಯೋಗಿ. ವಿವಾಹಿತ. ಇವರು ಹವ್ಯಾಸೀ ಯಕ್ಷಗಾನ ಕಲಾವಿದ.


ಲೇಖನ: ರವಿಶಂಕರ್ ವಳಕ್ಕುಂಜ 

ಫೋಟೋ : ಕೋಂಗೋಟ್ ರಾಧಾಕೃಷ್ಣ ಭಟ್, ರಾಮ್ ನರೇಶ್ ಮಂಚಿ

RELATED ARTICLES

1 COMMENT

  1. ಶಿವರಾಮ ಜೋಗಿಯವರ ಪರಿಚಯ ಲೇಖನ ಉತ್ತಮವಾಗಿ ಬಂದಿದೆ . ಅವರ ಉತ್ತಮವಾದ ಸ್ವರ ಸ್ಪಷ್ಟ ಉಚ್ಚಾರ ಅಭಿನಯ ನನಗೆ ತುಂಬಾ ಹಿಡಿಸಿದೆ. ಧನ್ಯವಾದಗಳು.

LEAVE A REPLY

Please enter your comment!
Please enter your name here

Most Popular

Recent Comments