ಯಕ್ಷಗಾನದಲ್ಲಿ ಹಾಸ್ಯ ವಿಭಾಗವನ್ನು ಶ್ರೀಮಂತಗೊಳಿಸಿ ಹಾಸ್ಯಗಾರ ಸ್ಥಾನಕ್ಕೆ ಗೌರವವನ್ನು ತಂದುಕೊಟ್ಟು ಪ್ರೇಕ್ಷಕರನ್ನು ರಂಜಿಸಿದವರು ಅನೇಕ ಕಲಾವಿದರು. ಅಂತಹವರಲ್ಲೊಬ್ಬರು ಪೆರುವಡಿ ನಾರಾಯಣ ಭಟ್ಟರು. ಈಗ ಕಲಾಜೀವನದಿಂದ ನಿವೃತ್ತರಾಗಿ ಪುತ್ತೂರು ಸಮೀಪದ ಬಪ್ಪಳಿಗೆಯಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ಪರಂಪರೆಯ ಹಾಸ್ಯಗಾರರಾದ ಶ್ರೀಯುತರು ಮೇಳದ ಸಂಚಾಲಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಯಕ್ಷಗಾನಕ್ಕೆ ಒಬ್ಬ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಯೂ ಹೌದು. ಅನೇಕ ಕಮ್ಮಟಗಳಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಧಾರೆಯೆರೆದಿದ್ದಾರೆ.
ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಪೆರುವಡಿಯಲ್ಲಿ ಪದ್ಯಾಣ ಭೀಮ ಭಟ್ ಮತ್ತು ಗುಣವತಿ ಅಮ್ಮ ದಂಪತಿಗಳ ಮಗನಾಗಿ ಮೇ 28, 1927ರಂದು ಜನಿಸಿದರು. ಮಿತ್ತನಡ್ಕ (ಕರೋಪಾಡಿ) ಮತ್ತು ಪೆರುವಡಿ ಕುದ್ರಡ್ಕ ಶಾಲೆಗಳಲ್ಲಿ 5ನೇ ತರಗತಿ ವರೆಗೆ ಓದಿದ್ದರು. ಎಳವೆಯಲ್ಲಿ ಅಜ್ಜನ ಮನೆಯ ಆಸರೆಯಲ್ಲಿ ಬೆಳೆದು ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಡೆಯುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿ ಎರಡು ವರ್ಷ ವಿದ್ಯಾರ್ಥಿಯಾಗಿದ್ದರು. ಪದ್ಯಾಣ ಪುಟ್ಟುನಾರಾಯಣ ಭಾಗವತರು ಮತ್ತು ಮಾಂಬಾಡಿ ನಾರಾಯಣ ಭಾಗವತರು ಇವರ ಬಂಧುಗಳು. ಪೆರುವಡಿ ಮನೆಯರಿಗಂತೂ ಯಕ್ಷಗಾನ ಅಚ್ಚುಮೆಚ್ಚಿನ ಕಲೆ. ಮನೆಯ ಸದಸ್ಯರೆಲ್ಲರೂ ಹಿಮ್ಮೇಳ, ಮುಮ್ಮೇಳ ಕಲಾವಿದ ರಾಗಿದ್ದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಸಹಜವಾಗಿ ಯಕ್ಷಗಾನ ಆಸಕ್ತಿ ಮೂಡಿತು. ತನ್ನ 14ನೇ ವಯಸ್ಸಿನಲ್ಲಿ ಪೆರುವಡಿ ನಾರಾಯಣ ಭಟ್ಟರು ನಾಟ್ಯಾಭ್ಯಾಸ ಇಲ್ಲದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟ ಮಾಡಿದ್ದರು. (ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲ, ಕುರಿಯ ವಿಠಲ ಶಾಸ್ತ್ರಿಗಳು ಮೇಳ ವಹಿಸಿಕೊಂಡ ಸಮಯ) ನಂತರ ಕುರಿಯ ವಿಠಲ ಶಾಸ್ತ್ರಿಗಳು ಇವರನ್ನು ನಾಟ್ಯ ಕಲಿಯಲು ಪ್ರೇರೇಪಿಸಿದರಂತೆ. ವ್ಯವಸ್ಥೆಯೂ ಆಯಿತು. ದೇಲಂತಬೆಟ್ಟು ಶಾಲೆಯಲ್ಲಿ ನಾಟ್ಯ ತರಗತಿ ನಡೆಯುತ್ತಿತ್ತು. ಅಲ್ಲಿಗೆ ಕುರಿಯ ವಿಠಲ ಶಾಸ್ತ್ರಿಗಳು, ಕರ್ಗಲ್ಲು ಸುಬ್ಬಣ್ಣ ಭಟ್, ಕಾವು ಕಣ್ಣ ಮೊದಲಾದವರು ನಾಟ್ಯ ಕಲಿಸಲು ಬರುತ್ತಿದ್ದರು. “ಯಕ್ಷರಂಗದ ರಸಋಷಿಗಳೆನಿಸಿದ ಸಂಕಯ್ಯ ಭಾಗವತರೂ, ಈಶ್ವರ ಹಾಸ್ಯಗಾರರೂ, ಕುರಿಯ ವಿಠಲ ಶಾಸ್ತ್ರಿಗಳೂ ನನ್ನನ್ನು ಯಕ್ಷಗಾನ ರಂಗಕ್ಕೆ ಬರುವಂತೆ ಮಾಡಿದರು. ಕರ್ಗಲ್ಲು, ಹೊಸಹಿತ್ತಿಲು ಗಣಪತಿ ಭಟ್ಟ, ಕಾಸರಗೋಡು ಸುಬ್ಬಯ್ಯ ಶೆಟ್ಟಿ ಮೊದಲಾದವರ ಮಾರ್ಗದರ್ಶನದಿಂದ ನಾನು ಕಲಾವಿದನಾಗಿ ರೂಪುಗೊಂಡೆ. ವಿಟ್ಲ ಅರಸರ ಆಶ್ರಯದಿಂದ ಪ್ರಭಾವಿತರಾಗಿ ಸಂಕಯ್ಯ ಭಾಗವತರೂ ಈಶ್ವರ ಹಾಸ್ಯಗಾರರೂ ಕಲಾವಿದರಾಗಿ ರಂಜಿಸಿದವರು. ಅವರಿಂದ ಮತ್ತು ಮನೆಯವರಿಂದಲೂ ನಾನು ಪ್ರೇರಿತನಾಗಿ ಕಲಾವಿದನಾದೆ” ಎಂಬುದು ಪೆರುವಡಿ ನಾರಾಯಣ ಭಟ್ಟರ ಅಭಿಪ್ರಾಯ.
ಧರ್ಮಸ್ಥಳ, ಸುರತ್ಕಲ್, ಕದ್ರಿ, ನಂದಾವರ, ಅರುವ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದರು. 1954ರಲ್ಲಿ ಮುಲ್ಕಿ ಮೇಳದ ಸಂಚಾಲಕರಾಗಿ ಶ್ರೀ ಪೆರುವಡಿ ನಾರಾಯಣ ಭಟ್ಟರು ಸದ್ರಿ ಮೇಳವನ್ನು 11 ವರ್ಷಗಳ ಕಾಲ ಮುನ್ನಡೆಸಿದ್ದರು. ಮೇಳದ ಸಂಚಾಲಕನಾಗಿ ಆರ್ಥಿಕವಾಗಿ ಸೋಲುಂಡರೂ ಕೀರ್ತಿಯನ್ನು ಸಂಪಾದಿಸಿದರು. ಸಮರ್ಥ ಸಂಚಾಲಕ ಎಂದು ಹೆಸರು ಗಳಿಸಿದರು. ತೆಂಕಿನ ಮೇಳಗಳು ಬಡಗಿನ ಕಡೆಗೂ ಬಡಗಿನ ಮೇಳಗಳು ತೆಂಕಿನ ಕಡೆಗೂ ತಿರುಗಾಟಕ್ಕೆ ಬರದೇ ಇರುತ್ತಿದ್ದ ಕಾಲ ಅದು. ಪೆರುವಡಿಯವರು ಮೂಲ್ಕಿ ಮೇಳವನ್ನು ಬಡಗಿನ ಕಡೆಗೂ ನಡೆಸಿ ಸಾಹಸವನ್ನು ತೋರಿದರು. ತೆಂಕಿನ ಆಟಗಳು ಬಡಗಿನ ಕಡೆಯಲ್ಲೂ ಬಡಗಿನ ಪ್ರದರ್ಶನಗಳು ತೆಂಕಿನ ಕಡೆಯಲ್ಲೂ ಆರಂಭಗೊಳ್ಳಲು ಇವರು ಒಂದು ಭದ್ರ ವೇದಿಕೆಯನ್ನೇ ಹಾಕಿಕೊಟ್ಟರು.
ಮತ್ತೆ 17 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು. ಪೆರುವಡಿಯವರು ಹಳ್ಳಿಯಿಂದ ದಿಲ್ಲಿಯ ವರೆಗೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿದವರು. ‘ರಾಜಹಾಸ್ಯ’ ಖ್ಯಾತಿಯ ಇವರು ರಾಕ್ಷಸ ದೂತನಾಗಿ ವಿಜೃಂಭಿಸಿದರು. ಮಕರಂದನಾಗಿ ಶ್ರೀಕೃಷ್ಣನಿಗೆ ನೆರವಾಗಿ ಪ್ರೇಕ್ಷಕರನ್ನು ರಂಜಿಸಿದರು. ವಿಜಯನಾಗಿ ವಿಜಯಿಯಾದರು. ನಾರದನಾಗಿ ಕಲಹಬೀಜವನ್ನು ಬಿತ್ತಿ ಪ್ರಸಂಗವನ್ನು ಮೆರೆಸಿದರು. ಬ್ರಹ್ಮನಾಗಿ ಅನುಗ್ರಹಿಸಿದರು. ಬಾಹುಕನಾಗಿ ಮೆರೆದರು. ‘ಪಾಪಣ್ಣ’ನ ಪಾತ್ರವನ್ನು ನೋಡಿ ಪ್ರೇಕ್ಷಕರು “ಅಯ್ಯೋ, ಪಾಪ… ಅಣ್ಣ” ಎಂದು ಹೇಳುವಂತೆ ಅಭಿನಯಿಸಿದರು. ಪಾಪಣ್ಣ ವಿಜಯ – ಗುಣಸುಂದರಿ’ ಪ್ರಸಂಗದ ‘ಪಾಪಣ್ಣ’ ಪಾತ್ರ ಇವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೆರುವಡಿ ನಾರಾಯಣ ಭಟ್ಟರು ‘ಪಾಪಣ್ಣ ಭಟ್ರು’ ಎಂದೇ ಪ್ರಸಿದ್ಧರಾದರು. ವೃತ್ತಿ ಸಂಕಷ್ಟವನ್ನು ಸಾರುವ ಮೂರ್ತೆಯವನಾಗಿ, ತಾಮಸಿ ಪ್ರವೃತ್ತಿಯ ರಾಕ್ಷಸ ದೂತನಾಗಿ, ಸಹಜ ಬದುಕಿಗೆ ಕನ್ನಡಿ ಹಿಡಿಯುವ ವಿಪ್ರನಾಗಿ, ದೇವತ್ವವನ್ನು ಎತ್ತಿ ಹಿಡಿವ ದೇವದೂತನಾಗಿ ಅಭಿನಯಿಸುತ್ತಾ ಇವರು ಎಲ್ಲಾ ಹಾಸ್ಯಗಾರರಿಗೂ ಆದರ್ಶರಾದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಹಿರಿಯ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ ಮತ್ತು ಸಾವಿತ್ರಿ ದಂಪತಿಗಳದ್ದು ಮೂವರು ಪುತ್ರಿಯರು, ಅಳಿಯಂದಿರು ಹಾಗೂ ಮೊಮ್ಮಕ್ಕಳ ಜೊತೆಗಿನ ಸಂತೃಪ್ತ ಜೀವನ. ಪ್ರಥಮ ಪುತ್ರಿ ಕೃಷ್ಣಕುಮಾರಿ ವಿವಾಹಿತೆ. ಅಳಿಯ ಮುಳಿಯ ಈಶ್ವರ ಭಟ್ ಕೃಷಿಕರು. ಇವರ ಮಕ್ಕಳಾದ ಶ್ರೀಕಾಂತ ಮತ್ತು ಶ್ರೀದೇವಿ ಬೆಂಗಳೂರಿನಲ್ಲಿ ಉದ್ಯೋಗಿಗಳು. ದ್ವಿತೀಯ ಪುತ್ರಿ ಸುಗುಣಕುಮಾರಿ ವಿವಾಹಿತೆ. ಇವರು ಉತ್ತಮ ಚಿತ್ರಕಲಾವಿದೆ. ಅಳಿಯ ವೆಂಕಟ್ರಾಮ ಸುಳ್ಯ ಅವರು ಸುಳ್ಯದಲ್ಲಿ ಶ್ರೀ ಪ್ರತಿಭಾ ವಿದ್ಯಾಲಯವನ್ನು ನಡೆಸುತ್ತಿದ್ದಾರೆ. ಲೇಖಕರಾಗಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ಪ್ರಸಿದ್ಧರು. ಶ್ರೀಮುಖ ಮತ್ತು ಕೃತಿಕಾ ಇವರ ಮಕ್ಕಳು. ತೃತೀಯ ಪುತ್ರಿ ಮಹಾಲಕ್ಷ್ಮಿ ವಿವಾಹಿತೆ. ಅಳಿಯ ಶ್ರೀ ಚಂದ್ರಶೇಖರ ಭಟ್ ಉದ್ಯೋಗಿ. ಇವರ ಪುತ್ರ ಸ್ಕಂದ ಎನ್. ಭಟ್ ಪಿ.ಯು.ಸಿ. ವಿದ್ಯಾರ್ಥಿ. ಪೆರುವಡಿ ಹಾಸ್ಯಗಾರರು ಪ್ರಸ್ತುತ ಪುತ್ತೂರಿನ ಬಪ್ಪಳಿಗೆಯ ಸಮೀಪದ ತೆಂಕಿಲ ನೂಜಿ ಶ್ರೀ ದುರ್ಗಾ ನಿಲಯದಲ್ಲಿ ವಾಸವಾಗಿದ್ದಾರೆ.
ಫೋಟೋ ಕೃಪೆ: ಕೋಂಗೋಟ್ ರಾಧಾಕೃಷ್ಣ ಭಟ್, ಸುಬ್ಬರಾಯ ಹೆಬ್ಬಾರ್