ಮೇಳಗಳು ತಮ್ಮದೇ ಆದ ವೇಷಭೂಷಣಗಳ ವ್ಯವಸ್ಥೆಯನ್ನು ಹೊಂದಿ ತಿರುಗಾಟ ನಡೆಸುತ್ತವೆ. ಆದರೆ ಸಂಘ, ಶಾಲಾ ಕಾಲೇಜುಗಳ ಪ್ರದರ್ಶನ, ಇನ್ನಿತರ ಸಮಾರಂಭಗಳ ಯಕ್ಷಗಾನ ಪ್ರದರ್ಶನಗಳ ಸಂಘಟಕರು ಬಾಡಿಗೆಗೆ ತರಿಸಿಕೊಳ್ಳಲೇಬೇಕಾಗುತ್ತದೆ. ಇಂದು ಹಲವಾರು ಸಂಘ ಸಂಸ್ಥೆಗಳು ವೇಷಭೂಷಣಗಳನ್ನು ಹೊಂದಿ ಅದನ್ನು ಸಂಘಟಕರಿಗೆ ಪೂರೈಸಿ ಪ್ರದರ್ಶನಗಳು ಯಶಸ್ವಿಯಾಗಿ ನಡೆಯುವುದಕ್ಕೆ ಕಾರಣ ಸ್ಥಾನದಲ್ಲಿವೆ. ಅಂತಹ ಸಂಸ್ಥೆಗಳಲ್ಲೊಂದು ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು.
ಈ ಸಂಸ್ಥೆಯು ಹೂ ಹಾಕುವ ಕಲ್ಲು (ಮುಡಿಪು), ಅಲ್ಲದೆ ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪದ ಕಟ್ಟಡದಲ್ಲೂ ಕಾರ್ಯಾಚರಿಸುತ್ತಿದೆ. ಶ್ರೀ ರಾಘವದಾಸ್ ಬಜಪೆ ಅವರು ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕರು. ಇವರು ಕಲಾವಿದರೂ ಹೌದು. ನಗುಮೊಗದ ಇವರು ಶುಭ್ರ ವಸನಧಾರಿ. ಯಾವಾಗಲೂ ಬಿಳಿ ಅಂಗಿ ಮತ್ತು ಬಿಳಿ ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ಮುಡಿಪು ಸಮೀಪ ವಾಸವಿದ್ದರೂ ಹುಟ್ಟೂರು ಬಜಪೆ ಸಮೀಪವಾದ ಕಾರಣ ಬಜಪೆ ರಾಘವದಾಸ್ ಎಂದೇ ಪ್ರಸಿದ್ಧರಾಗಿದ್ದಾರೆ.
ಶ್ರೀ ರಾಘವದಾಸ್ ಅವರು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ತಲಕಳ ಎಂಬಲ್ಲಿ ಬಜಪೆ ನಾರಾಯಣದಾಸ್ ಮತ್ತು ಸೀತಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರದು ಬಡ ಕೃಷಿ ಕುಟುಂಬ. ಬಜಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದರು. ತಲಕಳ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆಯುತ್ತಿದ್ದ ಆಟ, ಕೂಟ, ಭಜನಾ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪ್ರೇಕ್ಷಕನಾಗಿ ಆಸ್ವಾದಿಸುತ್ತಿದ್ದರು. ಇವರ ತಂದೆ ನಾರಾಯಣದಾಸರು ಯಕ್ಷಗಾನ ಕಲಾವಿದರಾಗಿದ್ದರು. ಹವ್ಯಾಸೀ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಪರಿಸರದಲ್ಲಿ ನಡೆಯುತ್ತಿದ್ದ ಕಟೀಲು ಮೇಳದ ಪ್ರದರ್ಶನಗಳನ್ನು ರಾಘವದಾಸರು ನೋಡುತ್ತಿದ್ದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಸಹಜವಾಗಿ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆ ಮೂಡಿತು. ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯ ವತಿಯಿಂದ ತರಗತಿಯೂ ನಡೆಯುತ್ತಿತ್ತು. ಶ್ರೀ ದೇರಣ್ಣ ದೇವಾಡಿಗರಿಂದ ನಾಟ್ಯ ಕಲಿತು ತಲಕಳ ದೇವಸ್ಥಾನದಲ್ಲಿ ನಡೆದ ಪ್ರದರ್ಶನ ಬ್ರಹ್ಮಕಪಾಲ ಪ್ರಸಂಗದಲ್ಲಿ ದಿಕ್ಪತಿಯಾಗಿ ರಂಗಪ್ರವೇಶ. ಕಟೀಲು ದೇವಳದಲ್ಲಿ ನವರಾತ್ರಿಯ ಪ್ರಯುಕ್ತ ನಡೆದ ಪ್ರದರ್ಶನ. ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಸಂಘದ ಆಟ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಿದಾಗ ಮೆಚ್ಚಿದ ಬಜಪೆ ರಾಮರಾಯರು ಮತ್ತು ಪಡ್ಡೋಡಿಗುತ್ತು ಸುಂದರ ಶೆಟ್ಟರು ರಾಘವದಾಸರನ್ನು ಸುಂಕದಕಟ್ಟೆ ಮೇಳಕ್ಕೆ ಸೇರಿಸಿದರು. ಒಂದು ವರ್ಷ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ನಡೆಸಿ ಮುಂದಿನ ವರ್ಷ ಕುಂಡಾವು ಮೇಳದಲ್ಲಿ ವ್ಯವಸಾಯ. ಶ್ರೀ ಕಲ್ಲಾಡಿ ನಾಗರಾಜ ಶೆಟ್ರ ಸಂಚಾಲಕತ್ವ. ಅಗರಿ ಶ್ರೀನಿವಾಸ ರಾಯರು ಭಾಗವತರಾಗಿದ್ದರು. ಹೊಸಹಿತ್ಲು ಮಹಾಲಿಂಗ ಭಟ್, ಗುಂಪೆ ರಾಮಯ್ಯ ರೈ, ಪುತ್ತೂರು ಕೃಷ್ಣ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಕೇಶವ ಬೈಪಡಿತ್ತಾಯ ಮೊದಲಾದವರ ಒಡನಾಟ ಕಲಿಕೆಗೆ ಅವಕಾಶವಾಯಿತು.
ಅಭ್ಯಾಸೀ ಕಲಾವಿದನಾಗಿರುವಾಗ ಸಮಯಾವಕಾಶ ಕಡಿಮೆಯಿದ್ದರೂ ಪ್ರದರ್ಶನವೊಂದು ನಡಯಲೇಬೇಕಾದ ಅನಿವಾರ್ಯ ಸಂದರ್ಭ ಬಂದಾಗ ಕಲ್ಲಾಡಿ ನಾಗರಾಜ ಶೆಟ್ಟರು ದೂರದೂರಿಂದ ಕಲಾವಿದರನ್ನೆಲ್ಲಾ ವಾಹನದಲ್ಲಿ ಕರೆದುಕೊಂಡು ಹೋಗಿದ್ದರಂತೆ. ಗಿರಿಜಾ ಕಲ್ಯಾಣ ಪ್ರಸಂಗ. ಸಿಕ್ಕ ಅತ್ಯಲ್ಪ ಸಮಯದಲ್ಲಿ ರಾಘವದಾಸರು ತಾರಕಾಸುರನಾಗಿ ರಂಗವೇರಿದ್ದರು. ಇದು ವಿಶೇಷ ಅನುಭವ. ಇಂತಹ ವಿಶೇಷ ಅನುಭವಗಳು ಜೀವನದಲ್ಲಿ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುತ್ತವೆ ಎಂಬುದು ಅವರ ಅನಿಸಿಕೆ. ಕುಂಡಾವು ಮೇಳದಲ್ಲಿ ಒಂದು ವರ್ಷ ತಿರುಗಾಟ. ನಂತರ ಶ್ರೀ ಕುಬಣೂರು ಶ್ರೀಧರ ರಾಯರ ನೇತೃತ್ವದ ಕೂಡ್ಲು ಮೇಳದಲ್ಲಿ ಒಂದು ವರ್ಷ, ಮತ್ತೆ ಮೂರು ವರ್ಷಗಳ ಕಾಲ ಹವ್ಯಾಸಿಯಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು.
ಮುಡಿಪು ವಿಘ್ನೇಶ್ವರ ಭಟ್ಟರ ಸಂಚಾಲಕತ್ವದಲ್ಲಿ ನಂದಾವರ ಮೇಳ ಆರಂಭವಾದಾಗ ಸದ್ರಿ ಮೇಳದಲ್ಲಿ ಎರಡು ವರ್ಷಗಳ ಕಲಾಸೇವೆ ಮಾಡಿ ಬಳಿಕ ಅರುವ ನಾರಾಯಣ ಶೆಟ್ಟರ ನೇತೃತ್ವದ ಅರುವ ಮೇಳಕ್ಕೆ ಮುಖ್ಯ ವೇಷಧಾರಿಯಾಗಿ ಸೇರ್ಪಡೆಕೊಂಡರು. ಅರುವ ಮೇಳದಲ್ಲಿ ಎರಡು ತಿರುಗಾಟ. ತಿಮ್ಮಪ್ಪ ಗುಜರನ್ ಸಂಚಾಲಕತ್ವದ ತಲಕಳ ಮೇಳದಲ್ಲಿ ಎರಡು ವರ್ಷಗಳ ತಿರುಗಾಟ ನಡೆಸಿದರು. ಕಾವೂರು ಕೇಶವನವರು ಕೂಡ್ಲು ಮೇಳವನ್ನು ವಹಿಸಿಕೊಂಡಾಗ ಸದ್ರಿ ಮೇಳದಲ್ಲಿ ತಿರುಗಾಟ. ಕಾವೂರು ಕೇಶವನವರು ಮೇಳವನ್ನು ನಿಲ್ಲಿಸಿ ವೇಷಭೂಷಣಗಳನ್ನು ಖರೀದಿಸುವಂತೆ ರಾಘವದಾಸರಲ್ಲಿ ಕೇಳಿ ಕೊಂಡರಂತೆ. ಹಣ ಇಲ್ಲ ಎಂದಾಗ ಇದ್ದಷ್ಟು ಕೊಡಿ ಎಂದು ವಿಶ್ವಾಸದಿಂದ ಕೊಟ್ಟರಂತೆ. ವೇಷಭೂಷಣಗಳನ್ನು ಹೇಗೆ ನಿರ್ವಹಿಸುವುದು? ಕಾರ್ಯಕ್ರಮಗಳು ಸಿಗದಿದ್ದರೆ ಎಂಬ ಚಿಂತೆಯಲ್ಲಿರುವಾಗ ಪಟ್ಲಗುತ್ತು ಶ್ರೀ ಮಹಾಬಲ ಶೆಟ್ರ ಸಂಚಾಲಕತ್ವದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ಆರಂಭವಾಗಿತ್ತು. ಮಹಾಬಲ ಶೆಟ್ರು ರಾಘವದಾಸರ ಚಿಂತೆ ಯನ್ನು ದೂರ ಮಾಡಿದ್ದರು. ಮಲ್ಲ ಮೇಳಕ್ಕೆ ವೇಷಭೂಷಣಗಳನ್ನು ನೀಡಿದರು. ಅಲ್ಲದೆ ವೇಷಧಾರಿಯಾಗಿಯೂ ಭಾಗವತನಾಗಿಯೂ ಮಲ್ಲ ಮೇಳದಲ್ಲಿ ವ್ಯವಸಾಯ ಮಾಡಿದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಶ್ರೀ ರಾಘವದಾಸರು ಶ್ರೀ ಕೊಡಕ್ಕಲ್ಲು ಗೋಪಾಲಕೃಷ್ಣ ಹಾಸ್ಯಗಾರರಿಂದ ಭಾಗವತಿಕೆಯ ಬಾಲಪಾಠ, ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆಯನ್ನೂ ಅಭ್ಯಾಸ ಮಾಡಿದ್ದರು. ನಂದಾವರ, ಅರುವ ಮೇಳದಲ್ಲಿ ಸಂಗೀತಗಾರನಾಗಿ ಪದ್ಯ ಹೇಳಿದ್ದರು. ಮಲ್ಲ ಮೇಳದಲ್ಲಿ ಶ್ರೀ ರವಿಶಂಕರ್ ಮಧೂರು ಮತ್ತು ಇವರು ಭಾಗವತಿಕೆ ಮಾಡುತ್ತಿದ್ದರು. ಎರಡು ವರ್ಷಗಳ ಕಾಲ ಮಲ್ಲ ಮೇಳದ ತಿರುಗಾಟ, ನಂತರ ಅಡ್ಯಾರು ಶಂಕರ ಆಳ್ವರ ಸಂಚಾಲಕತ್ವದಲ್ಲಿ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ನಂತರ ರಾಘವದಾಸರು ಕಲಾವಿದನಾಗಿ ವೃತ್ತಿಜೀವನದಿಂದ ನಿವೃತ್ತರಾಗಿ 1989ರಲ್ಲಿ ಶ್ರೀ ಭಾರತಿ ಕಲಾ ಆರ್ಟ್ಸ್ ‘ಹೂ ಹಾಕುವ ಕಲ್ಲು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ವೇಷಭೂಷಣಗಳ ನಿರ್ವಹಣೆಯತ್ತ ಗಮನ ಹರಿಸಿದರು. ಆಗ ಪ್ರಸಾಧನ ಸಂಸ್ಥೆಗಳು ಕಡಿಮೆ ಸಂಖ್ಯೆಯಲ್ಲಿತ್ತು. ಹಾಗಾಗಿ ಬೇಡಿಕೆಯೂ ಇತ್ತು. ರಾಘವದಾಸರು ದಿನವೊಂದಕ್ಕೆ ಮೂರು ಅಥವಾ ನಾಲ್ಕು ಪ್ರದರ್ಶನಗಳನ್ನೂ ಒಪ್ಪಿಕೊಂಡದ್ದೂ ಇದೆ. ಪ್ರತಿದಿನವೂ ಇವರ ತಂಡದಲ್ಲಿ ವೇಷಭೂಷಣಗಳ ತಯಾರಿ ಮತ್ತು ನಿರ್ವಹಣೆಗಾಗಿ ಐದಾರು ಮಂದಿ ದುಡಿಯುತ್ತಾರೆ. ಪ್ರದರ್ಶನಗಳ ಸಂಖ್ಯೆಯನ್ನು ಮತ್ತು ಪ್ರಸಂಗ ಮತ್ತು ಅದರಲ್ಲಿ ಬರುವ ವೇಷಗಳನ್ನು ಹೊಂದಿಕೊಂಡು ತಂಡದಲ್ಲಿ ಎಷ್ಟು ಜನ ಹೋಗಬೇಕು ಎಂದು ನಿರ್ಣಯಿಸುತ್ತಾರೆ. ಹವ್ಯಾಸೀ ತಂಡದವರಾದರೆ ಮೇಕಪ್‍ಗೂ ಕಲಾವಿದರನ್ನು ಕರೆದೊಯ್ಯಬೇಕು. ರಾಘವದಾಸರು ಮೇಕಪ್ ಮಾಡುವ ಕಲೆಯಲ್ಲೂ ನಿಷ್ಣಾತರು. 2004ರಲ್ಲಿ ಶ್ರೀ ಎಸ್. ಎನ್. ಪಂಜಾಜೆ ಅವರು ಜಪಾನ್‍ನಲ್ಲಿ ಏರ್ಪಡಿಸಿದ ಪ್ರದಶನಕ್ಕೆ ಶ್ರೀ ಭಾರತೀ ಕಲಾ ಆರ್ಟ್ಸ್ ನ ವೇಷಭೂಷಣಗಳನ್ನು ಕೊಂಡು ಹೋಗಲಾಗಿತ್ತು. ದೇಶ ವಿದೇಶಗಳ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಪೂರೈಸಿದ ಹಿರಿಮೆ ರಾಘವದಾಸರದ್ದು.

ಯಕ್ಷಗಾನ ಅಲ್ಲದೆ ನಾಟಕ, ಭರತನಾಟ್ಯ, ಸಿನಿಮಾ ನೃತ್ಯಗಳು, ಮಕ್ಕಳ ವೇಷಗಳ ಸ್ಪರ್ಧೆ, ಕೋಲಾಟ ಮುಂತಾದ ಕಲೆಗಳಿಗೆ ಸಂಬಂಧಿಸಿದ ವೇಷಭೂಷಣಗಳನ್ನೂ ಶ್ರೀ ಭಾರತೀ ಕಲಾ ಆರ್ಟ್ಸ್ ಸಂಸ್ಥೆಯು ಹೊಂದಿದೆ. ರಾಘವದಾಸರ ಮನೆಯಲ್ಲಿ ಮತ್ತು ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪ ಈ ಸಂಸ್ಥೆಯ ವ್ಯವಹಾರ ಕೇಂದ್ರಗಳಿವೆ. ನೇಪಥ್ಯ ಕಲಾವಿದರು ಸಿದ್ಧವಾಗುತ್ತಿಲ್ಲ ಎಂಬ ಬೇಸರವಿದ್ದರೂ ಇದ್ದವರು ಹೊಣೆಗಾರಿಕೆಯಿಂದ ಕೆಲಸ ಮಾಡುವುದರಿಂದ ಡ್ರೆಸ್ ನಿರ್ವಹಣೆ ಸುಲಭವಾಗಿ ಸಾಗುತ್ತಿದೆ ಎನ್ನುವ ರಾಘವದಾಸರು ಜವುಳಿ, ಮಣಿ, ವೆಲ್ವೆಟ್ ಮೊದಲಾದ ಪರಿಕರಗಳನ್ನು ದೂರದ ಮುಂಬಯಿ ನಗರದಿಂದ ತರಿಸುತ್ತಾರೆ. 1989ರಿಂದ ಇಂದಿನ ತನಕ ನಿರಂತರ 30 ವರ್ಷಗಳ ಕಾಲ ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕನಾಗಿ ಜನಪ್ರಿಯರಾಗಿದ್ದಾರೆ. ಅಲ್ಲದೆ ಸಂಸ್ಥೆಯು ಆರಂಭವಾಗಿ 15, 20, 25ನೇ ವರ್ಷಗಳಂದು ಧನಸಹಾಯ ಯಾಚಿಸದೇ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. 15ನೇ ವರ್ಷದ ಕಾರ್ಯಕ್ರಮವು ಅಡಿಕೆ ಪತ್ರಿಕೆಯ ಸಂಪಾದಕ, ಲೇಖಕ, ಕಲಾವಿದ ಶ್ರೀ ನಾ. ಕಾರಂತರ ನಿರ್ದೇಶನದಲ್ಲಿ ನಡೆದಿತ್ತು. ಅಂದು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನೂ, ಕುರ್ನಾಡು ಶಿವಣ್ಣ ಆಚಾರ್ಯರನ್ನೂ ಮತ್ತು ಕಾವೂರು ಕೇಶವರನ್ನು ಗೌರವಿಸಲಾಗಿತ್ತು. 20ನೇ ವರ್ಷ ಕಾಸರಗೋಡು ಸದಾನಂದ ರಾವ್, ಕೂಡ್ಲು (ಹಿಮ್ಮೇಳ ವಾದ್ಯಗಳ ತಯಾರಕರು), ಕಲಾವಿದ ಜೋಡುಕಲ್ಲು ಆನಂದ ಪುರುಷರನ್ನು ಸನ್ಮಾನಿಸಿದ್ದರು. 25ನೇ ವರ್ಷದ ಸಮಾರಂಭದಲ್ಲಿ ಶ್ರೀ ಲಲಿತ ಕಲಾ ಆರ್ಟ್ಸ್ ಸಂಸ್ಥೆಯ ಧನಪಾಲ ಶೆಟ್ಟಿಗಾರ್, ಹೊಳ್ಳ ಆರ್ಟ್ಸ್ ನ ಶಂಕರನಾರಾಯಣ ಹೊಳ್ಳ ಬಿ.ಸಿ ರೋಡ್, ಕಲಾವಿದ ಉಮೇಶ್ ಕೊಳಂಬೆ, ಶ್ರೀ ಭಾರತೀ ಕಲಾ ಆರ್ಟ್ಸ್ ನ ನೇಪಥ್ಯ ಕಲಾವಿದರಾದ ಗಂಗಾಧರ ಟೈಲರ್ ಮತ್ತು ರಾಘವ ಕುಲಾಲ್‍ರನ್ನು ಸನ್ಮಾನಿಸಿದ್ದರು.
ರಾಘವದಾಸರ ಪತ್ನಿ ಚಂದ್ರಾವತಿ ಸಂತುಷ್ಟ ಗೃಹಣಿ. ರಾಘವದಾಸ್ ದಂಪತಿಗಳಿಗೆ ಇಬ್ಬರು ಮಕ್ಕಳು. ಆರತಿಗೊಂದು, ಕೀರುತಿಗೊಂದು ಎಂಬಂತೆ. ಪುತ್ರಿ ಭಾರತಿ ಬಿ. ಎಡ್. ಓದಿರುತ್ತಾರೆ. ವಿವಾಹಿತೆ, ಗೃಹಣಿ. ಪುತ್ರ ಬಾಲಸುಬ್ರಹ್ಮಣ್ಯ ಪಿ ಯು ಸಿ ಓದಿ ಯಕ್ಷಗಾನ ವೇಷಭೂಷಣಗಳ ತಯಾರಿಕೆಯಲ್ಲಿ ಪಳಗಿ ಶ್ರೀ ಭಾರತೀ ಕಲಾ ಆರ್ಟ್ಸ್ ಸಂಸ್ಥೆಯ ಅಭಿವೃದ್ಧಿಯಲ್ಲಿ ತಂದೆಗೆ ನೆರವಾಗುತ್ತಿದ್ದಾರೆ.

