ದೇಶದ 72ನೇ ಗಣರಾಜ್ಯೋತ್ಸವದಂದು ದೇಶವೇ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಯಕ್ಷ ಕಲಾ ಅಕಾಡೆಮಿಯ ಕಲಾವಿದರು, “ಶ್ರೀರಾಮ ಪಟ್ಟಾಭಿಷೇಕ ” ಎನ್ನುವ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಕರುಣಾರಸ ಪೂರಿತ ಕಥಾ ಹಂದರವುಳ್ಳ ” ಶ್ರೀರಾಮ ಪಟ್ಟಾಭಿಷೇಕ ” ಕಥಾವಸ್ತುವನ್ನು ಯಕ್ಷ ಕಲಾ ಅಕಾಡೆಮಿಯ ಯುವ ಕಲಾವಿದರು ಮನೋಜ್ಞವಾಗಿ ತಾಳಮದ್ದಳೆಯ ರೂಪದಲ್ಲಿ ಪ್ರಸ್ತುತಪಡಿಸಿದರು.
ಸೂರ್ಯ ವಂಶದ ಹೆಗ್ಗಳಿಕೆಯೊಂದಿಗೆ, ರಾಮ ಪಟ್ಟಾಭಿಷೇಕದ ಅನಿವಾರ್ಯತೆಯನ್ನೂ , ಕೈಕೇಯಿಯಲ್ಲಿ ಪ್ರಲಾಪಿಸುವ, ಮಗ ರಾಮನಲ್ಲಿ ಸಣ್ಣವನಾದ ನೀನು ಕಾನನಕ್ಕೆ ತೆರಳಬೇಡವೆಂದಂಗಲಾಚುವ ದಶರಥನ ಪಾತ್ರದಲ್ಲಿ , ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರವಿ ಮಡೋಡಿಯವರು ತಮ್ಮ ಸಾಹಿತ್ಯ ಪ್ರೌಢಿಮೆಯನ್ನೂ , ಭಾವ ಪರವಶತೆಯನ್ನೂ ಪ್ರದರ್ಶಿಸಿದರು. ಮುಗ್ಧತೆಯಿಂದ, ಕ್ರೌರ್ಯದತ್ತ ಹೊರಳುವ ಕೈಕೇಯಿಯ ಪಾತ್ರದಲ್ಲಿ ಮನೋಜ್ ಭಟ್, ತಮ್ಮ ಮಾತಿನ ವರಸೆಯಲ್ಲಿ ತಮ್ಮ ಕಲಾನುಭವವನ್ನು ಪ್ರಸ್ತುತಪಡಿಸಿದರು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ತನ್ನ ಮಾತಿನ ಮೋಡಿಯಲ್ಲಿಯೇ ಕುಟಿಲ ತಂತ್ರದ ಬಲೆಯನ್ನು ಹೆಣೆದು, ತನ್ನ ಆ ಬಲೆಗೆ ” ಬಾಲೆ ಕೇಳ್ ಪೂ ಮಾಲೆ ” ಎನ್ನುತ್ತಲೇ ಸಾಮ್ರಾಜ್ಞಿ ಕೈಕೇಯಿಯನ್ನೂ , ಅವಳ ಮೂಲಕ ಚಕ್ರವರ್ತಿಯನ್ನೂ, ಅಯೋಧ್ಯೆಯ ಸಮಸ್ತ ಪರಿಜನರನ್ನೂ ತನ್ನ ಬಲೆಗೆ ಕೆಡಹಿ, ರಾಮನ ಪಟ್ಟಾಭಿಷೇಕವನ್ನ ತಪ್ಪಿಸಿ, ಕಾಡಿಗೆ ಹೋಗುವಂತೆ ಮಾತಿನ ಮೋಡಿಯ ಮಂಥರೆಯಾಗಿ ಯುವ ಅರ್ಥಧಾರಿ, ವೃತ್ತಿಯಲ್ಲಿ ಎನಿಮೇಷನ್ ಇಂಜಿನಿಯರ್ ಆಗಿರುವ ಆದಿತ್ಯ ಉಡುಪ ನೀಡಿದರು. ಭರತನೂ ರಾಜ್ಯವಾಳಲು ಸಮರ್ಥವಾಗಿರುವುದಲ್ಲದೇ, ಕಾಡಿಗೆ ತಾನು ಹೋಗಬೇಕಾಗಿರುವ ಅನಿವಾರ್ಯತೆಯನ್ನು ರಾಮನಾಗಿ ಪ್ರತಿಪಾದಿಸಿದವರು ಯುವಕನೇ ಆಗಿದ್ದರೂ, ಹಿರಿಯ ಅನುಭವವುಳ್ಳ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಶಶಾಂಕ್ ಎಂ. ಕಾಶಿ .

ಅಣ್ಣನ ಮಾತನ್ನು ಪಾಲಿಸುವ, ಚಿಕ್ಕಮ್ಮನ ಮಾತಿನಿಂದಾಗಿ ಕ್ರೋಧಗೊಳ್ಳುವ ಲಕ್ಷ್ಮಣನಾಗಿ , ಸುಹಾಸ ಕರಬ (ಇಂಜಿನಿಯರಿಂಗ್ ವಿದ್ಯಾರ್ಥಿ) ಮಾತಿನಲ್ಲಿಯೂ ತಮ್ಮ ಪ್ರಬುದ್ಧತೆಯನ್ನು ತೋರಿಸಿದರು. ಸೌಮ್ಯತೆ, ಮುಗ್ಧತೆ ಮೂರ್ತಿವೆತ್ತ ಸೀತೆ , ತನ್ನನ್ನು ನೀ ಅಗಲಿ ಪೋದರೆ ವಿಷವನುಣ್ಣುತ್ತೇನೆಂದಾಗ, ಸೀತೆಯ ಪಾತ್ರದಲ್ಲಿ ತಲ್ಲೀನರಾಗಿದ್ದ ಪ್ರದೀಪ ಮಧ್ಯಸ್ಥ (ಮೆಕ್ಯಾನಿಕಲ್ ಇಂಜಿನಿಯರ್)ರ ಕಣ್ಣಾಲಿಗಳು ತೇವಗೊಂಡದ್ದು ಸುಳ್ಳಲ್ಲ. ವಸಿಷ್ಠನಾಗಿ ಸಂಸ್ಕೃತ ಭೂಯಿಷ್ಠ ಮಾತನ್ನಾಡಿದ ಆದಿತ್ಯ ಹೊಳ್ಳ (ಮೆಕ್ಯಾನಿಕಲ್ ಇಂಜಿನಿಯರ್) ಸುಮಿತ್ರೆಯಾಗಿ , ಲಕ್ಷ್ಮಣ ನಲ್ಲಿ, ಸೀತೆಯಲ್ಲಿ ನನ್ನನ್ನು ಕಾಣು, ಅಣ್ಣ ರಾಮನಲ್ಲಿ ತಂದೆ ದಶರಥ ಭೂಪತಿಯನ್ನು ಕಾಣು ಎನ್ನುವ ಮಾತು ಹೃದ್ಯವಾಗಿತ್ತು.
ಸಮರ್ಥವಾದ ಹಿಮ್ಮೇಳದಲ್ಲಿ, ಭಾಗವತಿಕೆಯಲ್ಲಿ ಚಿತ್ಕಲಾ ಕೆ. ತುಂಗ ಸಂಪ್ರದಾಯ ಬದ್ಧ ನಾಟಿ ರಾಗದಿಂದ ಕಾರ್ಯಕ್ರಮ ಆರಂಭಿಸಿ, ಮಧ್ಯಮಾವತಿ, ಭೈರವಿ, ಕಾಂಬೋಧಿ, ಕಲ್ಯಾಣಿ, ಹಿಂದೋಳ, ಮೋಹನ, ಸಾವೇರಿ ಮುಂತಾದ ರಾಗಗಳ ಬಳಕೆ ಸಂದರ್ಭೋಚಿತವಾಗಿಯೂ, ರಸಸ್ಯಂದಿಯೂ ಆಗಿತ್ತು. ಮದ್ದಳೆಯಲ್ಲಿ ಹೇಮಂತ್ ಮತ್ತೋಡ್ ಹಾಗೂ ರಾಘು ಶರ್ಮಾರವರು ತಮ್ಮ ಕೈಚಳಕವನ್ನು ತೋರಿಸಿದರು. ಕಾರ್ಯಕ್ರಮ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನದಲ್ಲಿ ಔಚಿತ್ಯ ಪೂರ್ಣವಾಗಿ ಮೂಡಿಬಂದಿತು