Saturday, May 18, 2024
Homeಯಕ್ಷಗಾನಯಕ್ಷಗಾನ ವೇಷಧಾರಿ, ನೇಪಥ್ಯ ಕಲಾವಿದ ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ 

ಯಕ್ಷಗಾನ ವೇಷಧಾರಿ, ನೇಪಥ್ಯ ಕಲಾವಿದ ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ 

ಯಕ್ಷಗಾನದ ಯಶಸ್ವೀ ಪ್ರದರ್ಶನಗಳಿಗೆ ಕಲಾವಿದರ ಜತೆ ನೇಪಥ್ಯ ಕಲಾವಿದರೂ ಕಾರಣರಾಗುತ್ತಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆಗಳು ಅಪಾರವಾದುದು. ವೇಷಭೂಷಣಗಳ ನಿರ್ವಹಣೆ, ಮೇಕಪ್ ಮಾಡುವುದು, ವೇಷ ಕಟ್ಟಿ ಕಲಾವಿದರನ್ನು ರಂಗ ಪ್ರವೇಶಕ್ಕೆ ಸಿದ್ಧಗೊಳಿಸುವುದು, ಬಣ್ಣದ ಮನೆಯ ನಿರ್ವಹಣೆ, ರಂಗಸ್ಥಳಕ್ಕೆ ಬೇಕಾದ ಪರಿಕರಗಳನ್ನು ಒದಗಿಸಿಕೊಡುವುದು, ವೇಷಭೂಷಣಗಳ ತಯಾರಿಕೆ ಇತ್ಯಾದಿ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅವರನ್ನು ಕಲಾಭಿಮಾನಿಗಳು ಗುರುತಿಸಿ ಗೌರವಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ಯಶಸ್ವೀ ಪ್ರದರ್ಶನಗಳಿಗೆ ರಂಗದಲ್ಲಿ ಕಲಾವಿದರು ಕಾರಣರಾದರೆ ಅದಕ್ಕೆ ತೆರೆಯ ಮರೆಯಲ್ಲಿ ನೇಪಥ್ಯ ಕಲಾವಿದರ ಕೊಡುಗೆಯೂ ಇರುತ್ತದೆ. ಅನೇಕ ನೇಪಥ್ಯ ಕಲಾವಿದರು ರಂಗದಲ್ಲಿ ಕಲಾವಿದರಾಗಿಯೂ ಕಾಣಿಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತಹಾ ಕಲಾವಿದರಲ್ಲೊಬ್ಬರು  ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ. ಸುಮಾರು ಐವತ್ತು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀ ಮಹಾಬಲ ಕಲ್ಮಡ್ಕ ಅವರ ನೇತೃತ್ವದ ‘ರಂಗ ಸುರಭಿ’ ಕಲ್ಮಡ್ಕ ಎಂಬ ತಂಡದಲ್ಲಿ ನೇಪಥ್ಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕಲಾವಿದ, ನೇಪಥ್ಯ ಕಲಾವಿದ  ಶ್ರೀ ಪಿ. ರಾಮಣ್ಣ ಗೌಡ ಅವರು ಶ್ರೀ ಶಿವಣ್ಣ ಗೌಡ ಮತ್ತು ಶ್ರೀಮತಿ ಶಿವಮ್ಮ ದಂಪತಿಗಳ ಪುತ್ರರು. 1951ರಲ್ಲಿ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ರಾಮತ್ತಿಕಾರಿ ಮನೆಯಲ್ಲಿ ಜನನ. ಕಲ್ಮಡ್ಕ ಮತ್ತು ಪಂಜ ಶಾಲೆಗಳಲ್ಲಿ 7ನೇ ತರಗತಿ ವರೆಗೆ ಓದಿದ್ದರು. ತಂದೆಯವರ ನಿಧನದ ಕಾರಣದಿಂದ ರಾಮಣ್ಣ ಗೌಡರಿಗೆ ಓದು ಮುಂದುವರಿಸಲು ಅನಾನುಕೂಲವಾಗಿತ್ತು. ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ಮೇಳಗಳ ಮತ್ತು ಕಲ್ಮಡ್ಕದ ಸಂಗಮ ಕಲಾ ಸಂಘದ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು.

ಸಂಗಮ ಕಲಾ ಸಂಘದ ರೂವಾರಿ ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಪ್ರೋತ್ಸಾಹದಿಂದ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸುವಂತಾಗಿತ್ತು. ಕುಡ್ಪ ಶ್ರೀ ರಾಮಚಂದ್ರ ಹೆಗಡೆ ಅವರಿಂದ ನಾಟ್ಯ ಕಲಿಕೆ. ( ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರ ಗೋಳ್ತಜೆ ಮನೆಯಲ್ಲಿ ನಾಟ್ಯ ಕಲಿಕೆ). ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ದೇವೇಂದ್ರ ಬಲ ಮತ್ತು ಕಾಳಿಯಾಗಿ ರಂಗ ಪ್ರವೇಶ. ಬಳಿಕ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು. ಪಟ್ಟಾಜೆ ವೈದ್ಯ ಗಣೇಶ ಭಟ್ಟರಿಂದ ಮಾತುಗಾರಿಕೆ ಮತ್ತು ಮೇಕಪ್ ಮಾಡುವ ಕ್ರಮವನ್ನೂ ಅಭ್ಯಾಸ ಮಾಡಿದ್ದರು.

ವೇಷಗಾರಿಕೆಯ ಜತೆಗೆ ಕಲ್ಮಡ್ಕ ಸಂಗಮ ಕಲಾ ಸಂಘದ ನೇಪಥ್ಯ ಕಲಾವಿದನಾಗಿಯೂ ತೊಡಗಿಸಿಕೊಂಡವರು ಶ್ರೀ ರಾಮಣ್ಣ ಗೌಡರು. ಪುಂಡು ವೇಷ, ಕಿರೀಟ ವೇಷಗಳನ್ನು ಮಾಡುತ್ತಾ ಹಾಸ್ಯಗಾರನಾಗಿ ಕಾಣಿಸಿಕೊಂಡಿದ್ದರು. ಪ್ರಾರಂಭದಲ್ಲಿ ಚೌಡೇಶ್ವರೀ ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. ಆಗ ಸದ್ರಿ ಮೇಳದಲ್ಲಿ ದಾಸರಬೈಲು ಚನಿಯ ನಾಯ್ಕ, ಪದ್ಯಾಣ ಗಣಪತಿ ಭಟ್, ನಯನ ಕುಮಾರ್, ಸಂಪಾಜೆ ಶೀನಪ್ಪ ರೈ ಮೊದಲಾದ ಕಲಾವಿದರಿದ್ದರು. ಬಳಿಕ ಕಲ್ಮಡ್ಕ ಸಂಘದ ಕಲಾವಿದನಾಗಿಯೇ ಕಾಣಿಸಿಕೊಂಡವರು.

ನೇಪಥ್ಯ ಕಲಾವಿದನಾಗಿ ತೆರಳಿದರೂ ಅನಿವಾರ್ಯವಾದರೆ ಪ್ರದರ್ಶನಗಳಲ್ಲಿ ವೇಷವನ್ನೂ ಮಾಡುವ ಶ್ರೀ ರಾಮಣ್ಣ ಗೌಡರು ಕಾರ್ಯಕ್ರಮ ಸಂಘಟಕರಿಗೆ ಆಪದ್ಬಾಂಧವನಾಗಿ ಒದಗುತ್ತಾರೆ. ಕಳೆದ ಎರಡು ವರ್ಷಗಳಿಂದ ವೇಷ ಮಾಡುವುದನ್ನು ನಿಲ್ಲಿಸಿ ನೇಪಥ್ಯ ಕಲಾವಿದನಾಗಿ ಮುಂದುವರಿಯುತ್ತಿದ್ದಾರೆ. ಶ್ರೀ ರಾಮಣ್ಣ ಗೌಡರಿದ್ದರೆ ಬಣ್ಣದ ಮನೆಯ ಸೊಬಗು ಎದ್ದು ಕಾಣುತ್ತದೆ. ಎಲ್ಲರನ್ನೂ ನಗು ನಗುತ್ತಾ ಮಾತನಾಡಿಸುತ್ತಾರೆ. ಚುರುಕಾಗಿ ಮೇಕಪ್ ಮಾಡಿ, ವೇಷ ಕಟ್ಟಿ ಕಲಾವಿದರಿಗೆ ನೆರವಾಗುತ್ತಾರೆ.

ಮೇಳಕ್ಕಿಂತಲೂ ಹವ್ಯಾಸಿ ಸಂಘ ಸಂಸ್ಥೆ ಮತ್ತು ಮಕ್ಕಳ ತಂಡದಲ್ಲಿ ನೇಪಥ್ಯ ಕಲಾವಿದನಾಗಿ ಸೇವೆ ಸಲ್ಲಿಸುವುದು ಕಷ್ಟ. ಇದಕ್ಕೆ ಕಾರಣವೇನೆಂದು ಎಲ್ಲರಿಗೂ ತಿಳಿದಿದೆ. ಸಹನೆ ಮತ್ತು ಪ್ರದರ್ಶನ ಮುಗಿಯುವ ವರೆಗೆ ಎಚ್ಚರದಿಂದ ಇರಬೇಕಾಗುತ್ತದೆ. ಮೈಮರೆಯುವಂತಿಲ್ಲ. ಈ ಎಲ್ಲಾ ಗುಣಗಳನ್ನು ಹೊಂದಿದ ಕಾರಣವೇ ಶ್ರೀ ರಾಮಣ್ಣ ಗೌಡರನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.

ಇವರು ವೃತ್ತಿಯಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. 1994ರಲ್ಲಿ ಲಲಿತಾ ಅವರ ಜತೆ ವಿವಾಹ. ರಾಮಣ್ಣ ಗೌಡ ಮತ್ತು ಲಲಿತಾ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಶ್ರೀ ವಾಸುದೇವ. ಮೆಸ್ಕಾಂ ಉದ್ಯೋಗಿ. ಪುತ್ರಿ ಕು| ವಂದನಾ. ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಉದ್ಯೋಗಸ್ಥೆ. ಕಿರಿಯ ಪುತ್ರ ವಸಂತಕುಮಾರ. ಪದವಿ ವಿದ್ಯಾರ್ಥಿ. ಸರಳ, ಸಜ್ಜನ, ಅನುಭವೀ ಕಲಾವಿದ  ಶ್ರೀ ಪಿ. ರಾಮಣ್ಣ ಗೌಡರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ.

ಲೇಖಕ: ರವಿಶಂಕರ್ ವಳಕ್ಕುಂಜ

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments