ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸ್ತಂಗತರಾದರು.
ಅದ್ಭುತ ಕೂಚುಪುಡಿ ನೃತ್ಯ ಕಲಾವಿದೆಯಾಗಿದ್ದ ಅವರು ತನ್ನ ಪ್ರತಿಭಾ ಕೌಶಲಕ್ಕಾಗಿ 2001ರಲ್ಲಿ ಕೇಂದ್ರ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. 1962ರಲ್ಲಿ ಜನಿಸಿದ್ದ ಶೋಭಾ ನಾಯ್ಡು 1991ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು.
ಚೆನ್ನೈಯಲ್ಲಿರುವ ಶ್ರೀ ಕೃಷ್ಣ ಗಾನ ಸಭಾವು ಅವರಿಗೆ “ನೃತ್ಯ ಚೂಡಾಮಣಿ” ಎಂಬ ಬಿರುದನ್ನೂ ನೀಡಿ ಗೌರವಿಸಿತ್ತು. ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಹೈದರಾಬಾದ್ ನಲ್ಲಿರುವ ಕೂಚುಪುಡಿ ಕಲಾ ಅಕಾಡೆಮಿಯ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಶೋಭಾ ನಾಯ್ಡು ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೂಚುಪುಡಿ ತರಬೇತಿ ನೀಡಿದ್ದರು.