Saturday, September 21, 2024
Homeಯಕ್ಷಗಾನಯಕ್ಷರಂಗದ ನವರಸ ನಾಯಕ ಪುಳಿಂಚ - ಶ್ರೀ ಪುಳಿಂಚ ರಾಮಯ್ಯ ಶೆಟ್ಟರು 

ಯಕ್ಷರಂಗದ ನವರಸ ನಾಯಕ ಪುಳಿಂಚ – ಶ್ರೀ ಪುಳಿಂಚ ರಾಮಯ್ಯ ಶೆಟ್ಟರು 

ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ಯಕ್ಷಗಾನ ಕಲೆಯ ನವರಸ ನಾಯಕನೆಂದೇ ಪ್ರಸಿದ್ಧರು. ಅವರಿಂದು ನಮ್ಮ ಜತೆ ಇಲ್ಲ. ಆದರೂ ಅಲೌಕಿಕ ಲೋಕದಲ್ಲಿ ನೆಲೆಯಾಗಿ ನಮ್ಮನ್ನು ಅನುಗ್ರಹಿಸುತ್ತಿದ್ದಾರೆ. ಯಾವುದೇ ಕೊರತೆಯಾಗದಂತೆ ಯಕ್ಷಗಾನ ಕಲೆಯು ಬೆಳಗಲಿ. ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಾ ರಂಜಿಸಲಿ ಎಂದು ಅಲ್ಲಿಂದಲೇ ಹಾರೈಸುತ್ತಿರಬಹುದು. ಅವರ ಕಾಯವು ಅಳಿದರೂ ಗಳಿಸಿದ ಕೀರ್ತಿಯು ಉಳಿದಿದೆ. ಯಕ್ಷಕಲಾ ಲೋಕದಲ್ಲಿ ಅಪ್ರತಿಮ ಸಾಧಕರಾಗಿ ಮೆರೆದ ಕಾರಣದಿಂದ ಅವರು ಜನಮಾನಸದಲ್ಲಿ ಶಾಶ್ವತರಾಗಿ ಉಳಿಯುತ್ತಾರೆ. ಯಕ್ಷಗಾನವು ಒಂದು ಗಂಡುಕಲೆ. ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ಗಂಡು ಕಲೆ ಎಂದು ಪ್ರಸಿದ್ಧವಾಗಿರಬೇಕು.

ಎಲ್ಲಾ ಕಲಾ ಪ್ರಾಕಾರಗಳಲ್ಲಿಯೂ ನಮಗೆ ಗೌರವವಿದೆ. ಎಲ್ಲವೂ ನಮ್ಮ ಹೆಮ್ಮೆಯ ದೇಶ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಗಳು. ಆದರೂ ಯಕ್ಷಗಾನಕ್ಕೆ ಯಕ್ಷಗಾನವೇ ಸಾಟಿ. ಅದು ನಮ್ಮ ನಾಡಿನ ಕಲೆ ಎಂಬುದು ನಮಗೆಲ್ಲಾ ಹೆಮ್ಮೆಯ ವಿಚಾರ. ಬಹಳ ಕಾಲದ ಹಿಂದೆ ಯಕ್ಷಗಾನವು ಹೇಗಿತ್ತು? ನಾವು ಪ್ರತ್ಯಕ್ಷದರ್ಶಿಗಳಲ್ಲ. ಆದರೂ ಹಿರಿಯರಿಂದ ಕೇಳಿ ತಿಳಿದಿರುತ್ತೇವೆ. ವಾಹನ, ಸೌಕರ್ಯ ಸರಿಯಾದ ರಸ್ತೆಗಳಿಲ್ಲದ ಕಾಲ. ಪ್ರಚಾರಕ್ಕೆ ಮಾಧ್ಯಮಗಳೂ ಕಡಿಮೆ. ಹಿರಿಯ ಕಲಾವಿದರೆಲ್ಲಾ ಕಾಲ್ನಡಿಗೆಯಲ್ಲೇ ಸಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಸರಂಜಾಮುಗಳನ್ನು ಹೊತ್ತುಕೊಂಡೇ ಸಾಗಿದರು. ಯಕ್ಷಗಾನ ಕಲೆಯ ಉಳಿವಿಗೆ ಹಿರಿಯ ಕಲಾವಿದರ, ಸಂಘಟಕರ, ಕಲಾಭಿಮಾನಿಗಳ ಕೊಡುಗೆಯನ್ನು ನಾವು ಯಾವತ್ತೂ ಸ್ಮರಿಸಲೇ ಬೇಕು. ಅವರ ತ್ಯಾಗದ ಪರಿಣಾಮವನ್ನೇ ನಾವಿಂದು ಅನುಭವಿಸುತ್ತಿದ್ದೇವೆ. ಅವರೆಲ್ಲರೂ ಪ್ರಾತಃಸ್ಮರಣೀಯರು.

ಕಲಾವಿದನಾಗಬೇಕೆಂದು ಬಯಸುವವರಿಗೆ ಯಕ್ಷಗಾನದಲ್ಲಿ ಆಯ್ಕೆಗೆ ಅವಕಾಶಗಳಿವೆ. ಭಾಗವತನಾಗಬೇಕೆಂದೂ, ಮದ್ದಳೆಗಾರನಾಗಬೇಕೆಂದೂ, ಸ್ತ್ರೀ ಪಾತ್ರಧಾರಿಯಾಗಬೇಕೆಂದೂ, ಹಾಸ್ಯಗಾರನಾಗಬೇಕೆಂದೂ, ಪುಂಡುವೇಷಧಾರಿಯಾಗಬೇಕೆಂದೂ….. .. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಆಸೆಗಳು. ಆದರೂ ತೆಂಕು ತಿಟ್ಟಿನ ಯಕ್ಷಗಾನದಲ್ಲಿ ಬಾಲಗೋಪಾಲ, ಪೂರ್ವರಂಗದ ಇನ್ನಿತರ ವೇಷಗಳನ್ನು ನಿರ್ವಹಿಸಿ, ಸ್ತ್ರೀ ವೇಷ, ಪುಂಡು ವೇಷ,  ಪೀಠಿಕೆ ವೇಷ, ಎದುರು ವೇಷ, ಬಣ್ಣದ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದವನೇ ಹಾಸ್ಯಗಾರನಾಗುತ್ತಾನೆ ಎಂಬುದನ್ನು ಕೇಳಿ ತಿಳಿದಿರುವೆ.  ಕಲಿಕಾ ಕೇಂದ್ರಗಳಿಲ್ಲದ ಕಾಲ ಅದು. ಮೇಳಕ್ಕೆ ಬಂದೇ ಹಿರಿಯ ಕಲಾವಿದರಿಂದ ಕೇಳಿ, ಅವರ ವೇಷಗಳನ್ನು ನೋಡಿಯೇ ಕಲಿಯಬೇಕಾಗಿತ್ತು. ಸಮರ್ಥ ಹಾಸ್ಯಗಾರನಾಗಲು ಹೊಂದಿರಬೇಕಾದ  ಅರ್ಹತೆಗಳೇನು ಎಂಬುದನ್ನು ನಮಗೆ ಈ ವಿಚಾರಗಳಿಂದ ತಿಳಿಯಬಹುದು. ಅವನಿಗೆ ಯಕ್ಷಗಾನದ ಎಲ್ಲಾ ವಿಚಾರಗಳೂ ತಿಳಿದಿರಬೇಕೆಂಬುದನ್ನು ಇದರಿಂದ ನಾವು ಅರ್ಥಮಾಡಿಕೊಳ್ಳಬಹುದು.

ಹೀಗೆಯೇ ಹಂತ ಹಂತವಾಗಿ ಪ್ರತಿಯೊಂದು ಹಂತವನ್ನು ಅರ್ಹತೆಯನ್ನು ಹೊಂದಿ ಯಶಸ್ವಿಯಾಗಿ ದಾಟಿ ಹಾಸ್ಯಗಾರರಾದವರು ಶ್ರೀ ಪುಳಿಂಚ ರಾಮಯ್ಯ ಶೆಟ್ಟರು. ಉಳಿದ ಎಲ್ಲಾ ತೆರನಾದ ಪಾತ್ರಗಳಲ್ಲೂ ಪಕ್ವರಾಗಿಯೇ ಇವರು ಹಾಸ್ಯಪಾತ್ರಗಳತ್ತ ಮನಮಾಡಿದವರು. ಹಾಸ್ಯಗಾರರಾಗಿ ಸುಲಲಿತವಾಗಿ ಅಭಿನಯಿಸಲು ಪುಳಿಂಚ ರಾಮಯ್ಯ ಶೆಟ್ಟರಿಗೆ ಈ ಅನುಭವಗಳೇ ಅನುಕೂಲತೆಯನ್ನು ಒದಗಿಸಿಕೊಟ್ಟಿತು ಎಂದರೆ ತಪ್ಪಾಗಲಾರದು. ಶ್ರೀ ಪುಳಿಂಚ ರಾಮಯ್ಯ ಶೆಟ್ಟರೊಂದಿಗೆ ವೇಷ ಮಾಡುವ ಭಾಗ್ಯವು ನನಗೆ ಸಿಕ್ಕಿಲ್ಲ. ಆದರೆ ಅವರ ವೇಷಗಳನ್ನು ನೋಡಿದ್ದೇನೆ. ಅವರ ಬಗೆಗೆ ಹಿರಿಯರು ಆಡುವ ಮೆಚ್ಚು ನುಡಿಗಳನ್ನು ಕೇಳಿದ್ದೇನೆ. ಧ್ವನಿಸುರುಳಿಗಳಲ್ಲಿ ಅವರ ಸಂಭಾಷಣೆಗಳನ್ನು ಕೇಳಿದ್ದೇನೆ. ಅವರ ಬಗೆಗೆ ಮಹನೀಯರುಗಳು ಬರೆದ ಲೇಖನಗಳನ್ನೂ ಓದಿರುತ್ತೇನೆ. ಈ ಎಲ್ಲಾ ವಿಚಾರಗಳ ಆಧಾರದಲ್ಲೇ ಬರೆಯಲು ಪ್ರಯತ್ನಿಸುತ್ತೇನೆ ಅಷ್ಟೇ. ಅವರ ಪುಂಡುವೇಷಗಳನ್ನು ನೋಡಲು ಅವಕಾಶವಾಗಿಲ್ಲ. ಆದರೆ ಬಣ್ಣದ ವೇಷ, ಹಾಸ್ಯ ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳನ್ನು ನೋಡಿದ್ದೆ. ಪಾತ್ರವನ್ನು ತನಗೆ ಬೇಕಾದಂತೆ ಬಾಗಿಸದೆ, ತಾನು ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸುತ್ತಿದ್ದರು.

ಪಾತ್ರ ನಿರ್ವಹಣೆಯಲ್ಲಿ ಭಾವನೆಗಳು ತುಂಬಿ ತುಳುಕುತ್ತಿತ್ತು. ಪಾತ್ರದ ಸ್ವಭಾವಕ್ಕೆ ಒಂದಿನಿತೂ ಕೊರತೆಯಾಗದಂತೆ, ಪಾತ್ರೋಚಿತವಾಗಿ ಅಭಿನಯಿಸುವ ಕಲೆಯು ಪುಳಿಂಚ ರಾಮಯ್ಯ ಶೆಟ್ಟರಿಗೆ ಕರಗತವಾಗಿತ್ತು. ಪಾತ್ರಕ್ಕೆ ಬೇಕಾದಂತೆ ತನ್ನ ಸ್ವರದಲ್ಲೂ ವೈವಿಧ್ಯತೆಯನ್ನು ತೋರುತ್ತಿದ್ದರು. ಹಾಸ್ಯದ ಪಾತ್ರಗಳಲ್ಲಿ ಅವರು ಸಂಭಾಷಣೆಯನ್ನು ಹೇಳುವ ಶೈಲಿ, ಅವರ ಸ್ವರ ಕೇಳಿದಾಗಲೇ ನಗು ತನ್ನಿಂದ ತಾನೇ ಸ್ಪುರಿಸುತ್ತಿತ್ತು. ಕೇವಲ ಕ್ಯಾಸೆಟ್ ಕೇಳಿದಾಗಲೇ ಈ ಅನುಭವ. ಅವರ ಅಭಿನಯವನ್ನು ನೋಡಿದರೆ? ಅದೊಂದು ರಸಪಾಕವೇ ಆಗಿಬಿಡುತ್ತಿತ್ತು. ಈ ವಿಚಾರದಲ್ಲಿ ಘನ ಹಾಸ್ಯಗಾರರಾದ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಯಿಸರ ನೆನಪಾಗದೆ ಇರದು ನಮಗೆ. ಯಕ್ಷಗಾನದ ನವರಸ ನಾಯಕ ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ಜನಿಸಿದವರು. ಇವರು ಬೆಜ್ಜದಗುತ್ತು ಮನೆತನದವರು. 1939ರಲ್ಲಿ ಶ್ರೀ ಬಂಟಪ್ಪ ಶೆಟ್ಟಿ ಮತ್ತು ಶ್ರೀಮತಿ ಉಂಞಕ್ಕೆ ದಂಪತಿಗಳ ಮಗನಾಗಿ ಜನನ. ವಿಟ್ಲ ಸಮೀಪದ  ಎರುಂಬು ಶಾಲೆಯಲ್ಲಿ 6ನೇ ತರಗತಿ ವರೆಗೆ ಓದಿದ್ದರು. ಹಿರಿಯರೊಂದಿಗೆ ತೆರಳಿ ಪುಣಚದಲ್ಲಿ (ಪುಳಿಂಚ) ನೆಲೆಸಿದ ಕಾರಣ ಪುಳಿಂಚ ರಾಮಯ್ಯ ಶೆಟ್ಟರೆಂದೇ ಕರೆಸಿಕೊಂಡರು. ಎರುಂಬು ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಧ್ಯಾಪಕರಾದ ಶ್ರೀ ಮರಿಯಯ್ಯ ಬಲ್ಲಾಳರಿಂದ ನಾಟಕ ಅಭಿನಯವನ್ನು ಕಲಿತಿದ್ದರು. ಕೆಲ ಸಮಯ ಕುರಿಯ ಮನೆಯಲ್ಲೇ ಇದ್ದು ಕುರಿಯ ಶಾಸ್ತ್ರಿಗಳಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತಿದ್ದರು.

ಪುಳಿಂಚ ಅವರು ಕಲಿತು ಮೇಳ ಸೇರಿದರು ಅನ್ನುವುದಕ್ಕಿಂತ ಮೇಳಕ್ಕೆ ಸೇರಿ ಕಲಿತರು ಎಂದು ಹೇಳುವುದೇ ಸರಿ. ‘ಕಲಿತು ಮೇಳಕ್ಕೆ ಬರುವುದಕ್ಕಿಂತ ಮೇಳಕ್ಕೆ ಬಂದು ಕಲಿತರೇ ಚಂದ’ ಎಂಬ ನೆಡ್ಲೆ ನರಸಿಂಹ ಭಟ್ಟರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತದೆ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲ ಕಲಾವಿದನಾಗಿ ಸೇರಿದ್ದರು. ಕಲಿಕೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಹೊಂದಿ ಅಲ್ಲಿ ಪುಂಡುವೇಷಗಳನ್ನು ನಿರ್ವಹಿಸುವ ಮಟ್ಟಕ್ಕೆ ತಲುಪಿದ್ದರು. ಅಳಿಕೆ ಶ್ರೀ ಮೋನು ಶೆಟ್ಟರು ಮತ್ತು ಅಳಿಕೆ ರಾಮಯ್ಯ ಶೆಟ್ಟರಿಂದಲೂ ಪುಳಿಂಚ ಅವರು ನಾಟ್ಯ ಕಲಿತಿದ್ದರು. ಶ್ರೀ ಧರ್ಮಸ್ಥಳ ಮೇಳದ ಬಳಿಕ ಬಣ್ಣದ ವೇಷಗಾರಿಕೆಯನ್ನು ಅಭ್ಯಸಿಸಿದ್ದು ಬಣ್ಣದ ಮಹಾಲಿಂಗನವರಿಂದ. ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕೂಡ್ಲು ಮೇಳದಲ್ಲಿ ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ಹೊಳೆದು ಕಾಣಿಸಿಕೊಡ್ಡಿದ್ದರು. ಬಣ್ಣದ ವೇಷಧಾರಿಯಾಗಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಜತೆಗೆ ಹಂತ ಹಂತವಾಗಿ ಮೇಲೇರಿ ಬಂದ ಕಾರಣ  ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಸಿದ್ಧಿಸಿತ್ತು. ಬಳಿಕ ಸುಮಾರು ಇಪ್ಪತ್ತು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ವ್ಯವಸಾಯ. ತುಳು ಪ್ರಸಂಗಗಳಲ್ಲಿ ಇವರ ಅನೇಕ  ಪಾತ್ರಗಳನ್ನೂ ನೋಡಿ ಆನಂದಿಸಲು  ಪ್ರೇಕ್ಷಕರು ಮುಗಿ ಬೀಳುತ್ತಿದ್ದರು.

ಜತೆಗೆ ಪುರಾಣ ಪ್ರಸಂಗಗಳಲ್ಲೂ ಪ್ರೇಕ್ಷಕರನ್ನು ರಂಜಿಸಿದರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಕರ್ನಾಟಕ ಮೇಳದಲ್ಲಿ ಜಯಭೇರಿ ಬಾರಿಸಿದ ಪ್ರಸಂಗ. ಮಿಜಾರು ಅಣ್ಣಪ್ಪನವರ ವಿಕ್ಷಿಪ್ತನ (ಗುರು) ಪಾತ್ರ. ಶಿಷ್ಯನಾಗಿ ಪುಳಿಂಚದವರು ಅಮೋಘ ಅಭಿನಯ, ಮಾತುಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ ಮತ್ತೆ ಚೌಕಿಯಲ್ಲಿ ಬಣ್ಣದ ವೇಷಕ್ಕೆ ಸಿದ್ಧರಾಗುತ್ತಿದ್ದರು! ಬೆಳಗಿನ ಹೊತ್ತು ಲವಣಾಸುರನಾಗಿ ಅಬ್ಬರಿಸುತ್ತಿದ್ದರು. ಅನೇಕ ಪ್ರಸಂಗಗಳಲ್ಲಿ ಮಿಜಾರು-ಪುಳಿಂಚ ಜೊತೆಗಾರಿಕೆಯು ಕರ್ನಾಟಕ ಮೇಳದಲ್ಲಿ ಹಾಸ್ಯದ ಹೊನಲನ್ನೇ ಹರಿಸಿತ್ತು. ಅರುವ ಕೊರಗಪ್ಪ ಶೆಟ್ಟಿ-ಪುಳಿಂಚ ಜೋಡಿಯೂ ಕರ್ನಾಟಕ ಮೇಳದ ಪ್ರದರ್ಶನಗಳ ಗೆಲುವಿಗೆ ಕಾರಣವಾಗಿತ್ತು. ಶ್ರೀ ದಾಮೋದರ ಮಂಡೆಚ್ಚ, ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆ ಮತ್ತು ಖ್ಯಾತ ಕಲಾವಿದರ ತಂಡವಾಗಿ ಕರ್ನಾಟಕ ಮೇಳದ ಟೆಂಟು ದಿನಾ ಹೌಸ್ ಫುಲ್ ಆಗಿರುತ್ತಿತ್ತು. ಎಲ್ಲ ರೀತಿಯ ಪುಂಡುವೇಷ, ಪೀಠಿಕೆ ವೇಷ, ಎದುರು ವೇಷ, ನಾಟಕೀಯ ವೇಷ, ಬಣ್ಣದ ವೇಷಗಳಲ್ಲಿ ವಿಜೃಂಭಿಸಿಯೇ ಇವರು ಹಾಸ್ಯಗಾರರಾದುದು. 1960-1970ರ ದಶಕದಲ್ಲಿ ಮಳೆಗಾಲದಲ್ಲಿ ತಂಡವನ್ನು ಕಟ್ಟಿ ದೇಶದ ನಾನಾ ಕಡೆ ಪ್ರದರ್ಶನಗಳನ್ನು ನಡೆಸಿ ಪುಳಿಂಚ ರಾಮಯ್ಯ ಶೆಟ್ಟರು ಉತ್ತಮ ಸಂಘಟಕರಾಗಿಯೂ ಕಾಣಿಸಿಕೊಂಡರು.

ಹಲವು ಪ್ರಸಂಗಗಳನ್ನೂ ಬರೆದ ಪುಳಿಂಚ ಅವರು ಸಾಹಿತ್ಯಾಸಕ್ತರೂ ಆಗಿದ್ದರು. ಅಲ್ಲದೆ ಅನೇಕ ಹಾಸ್ಯ ಪ್ರಸಂಗಗಳನ್ನೂ ರಚಿಸಿ ಧ್ವನಿಸುರುಳಿಗಳಾಗಿ ಹೊರತಂದಿದ್ದರು. ಯಕ್ಷಗಾನ ಪೂರ್ವರಂಗವನ್ನೂ ಪುಳಿಂಚ ಶ್ರೀ ರಾಮಯ್ಯ ಶೆಟ್ಟರು ಸಂಪೂರ್ಣ ತಿಳಿದಿದ್ದರೆಂದೂ, ಮುಖವರ್ಣಿಕೆಯನ್ನು ಸರಿಯಾಗಿ ಮಾಡಿ ಬಣ್ಣದ ವೇಷಗಳಲ್ಲಿ ರಂಗಪ್ರವೇಶ ಮಾಡುತ್ತಿದ್ದರೆಂದೂ, ಹೆಣ್ಣು ಬಣ್ಣಕ್ಕೆ ಸಂಬಂಧಿಸಿದ ವೇಷಗಳು ಬಲು ಸೊಗಸೆಂದೂ ಹಿರಿಯ ಕಲಾವಿದರೂ ಕಲಾಭಿಮಾನಿಗಳೂ ಹೇಳುತ್ತಾರೆ. ಹಿರಿಯ ಕಲಾವಿದರನ್ನು ಗೌರವಿಸುವ, ಕಿರಿಯ ಕಲಾವಿದರನ್ನು ಅತ್ಯಂತ ಪ್ರೀತಿಸುವ ಸಹೃದಯಿಯಾಗಿ ಅಜಾತಶತ್ರು ಎನಿಸಿಕೊಂಡಿದ್ದರೆಂದೂ ಹಲವರು ಹೇಳುವುದನ್ನು ನಾನು ಕೇಳಿದ್ದೇನೆ.

ಸಮರ್ಥ ಹಿಮ್ಮೇಳ ಅಲ್ಲದೆ ಶ್ರೀ ರಾಮದಾಸ ಸಾಮಗ, ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಮೂಡುಬಿದಿರೆ ಕೃಷ್ಣ ರಾವ್ ಶ್ರೀ ಕೊಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ, ಗುಂಪೆ ರಾಮಯ್ಯ ರೈ , ಅರುವ ಕೊರಗಪ್ಪ ಶೆಟ್ಟಿ, ಅಳಿಕೆ ಲಕ್ಷ್ಮಣ ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯ,ಬೆಳ್ಳಾರೆ ವಿಶ್ವನಾಥ ರೈ , ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ(2 ವರ್ಷಗಳು), ಸಂಜಯ ಕುಮಾರ್ (ಕೆಲವರ ಹೆಸರು ಬಿಟ್ಟು ಹೋಗಿರಲೂ ಬಹುದು) ಮೊದಲಾದ ಶ್ರೇಷ್ಠ ಕಲಾವಿದರಿದ್ದ ತಂಡ ಕರ್ನಾಟಕ ಮೇಳ. ಎಲ್ಲರ ನಡುವೆ ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ಹೊಳೆದು ಕಾಣಿಸಿಕೊಂಡಿದ್ದರು. ಇದು ಇವರ ಸಹಕಲಾವಿದರೆಲ್ಲರಿಗೂ ಹೆಮ್ಮೆ ಪಡುವಂತಹ ವಿಚಾರವು. ಕೆ. ಅನಂತರಾಮ ಬಂಗಾಡಿಯವರು ರಚಿಸಿದ ಕಾಡಮಲ್ಲಿಗೆ ಪ್ರಸಂಗದ ಸಿದ್ದು ಪಾತ್ರ ಪುಳಿಂಚರಿಗೆ ಅಪಾರ ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಬಂಗಾಡಿಯವರ ಪಟ್ಟದ ಪದ್ಮಲೆ ಪ್ರಸಂಗದ ಕೋಡಿಮೂಲೆ ಮಾಚು, ಗೋಣ ತಂಕರೆ ಪ್ರಸಂಗದ ಸಣ್ಣಕ್ಕೆ, ಸಿರಿಕೃಷ್ಣ ಚಂದ ಪಾಲಿಯ ನಕುಲೆ, ಬೊಳ್ಳಿ ಗಿಂಡೆಯ ಡೊಂಬ ಮೊದಲಾದ ಪಾತ್ರಗಳೂ ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಕುಕ್ಕುಮುಡಿ ಸೋಂಪ, ಚಂದಗೋಪ, ಗೋಪಿಕೆ, ಮಲ್ಲಯ್ಯ ಬುದ್ಯಂತ ಮೊದಲಾದ ಪಾತ್ರಗಳಲ್ಲೂ ಮಿಂಚಿದರು. ಶ್ರೀ ರಾಮದಾಸ ಸಾಮಗರೊಂದಿಗೆ ರಂಗದಲ್ಲಿ ಮಿಜಾರು ಮತ್ತು ಪುಳಿಂಚ ರಾಮಯ್ಯ ಶೆಟ್ಟರದು ಪೋಷಕ ಪಾತ್ರಧಾರಿಗಳಾಗಿ ಅಮೋಘ ಅಭಿನಯವೆಂದೂ, ಅರುವ-ಪುಳಿಂಚ ಜತೆಗಾರಿಕೆಯು ಪ್ರೇಕ್ಷಕರಿಗೆ ರಸದೌತಣವನ್ನೇ ನೀಡುತ್ತಿತ್ತೆಂದೂ ಪ್ರತ್ಯಕ್ಷದರ್ಶಿಗಳು ಈಗಲೂ ಹೇಳುತ್ತಾರೆ. ಪುಳಿಂಚ ರಾಮಯ್ಯ ಶೆಟ್ಟರ ಸಾಧನೆಗೆ ಅನೇಕ ಪ್ರಶಸ್ತಿಗಳೂ ಸನ್ಮಾನಗಳೂ ಒಲಿದು ಬಂದಿವೆ.

2000ನೇ ಇಸವಿಯಲ್ಲಿ ಯಕ್ಷಗಾನ ಕ್ಷೇತ್ರದಿಂದ ಅವರು ಸ್ವಯಂ ನಿವೃತ್ತರಾಗಿದ್ದರು. ಕಲ್ಲಡ್ಕದ ಸಮೀಪ ಬಾಳ್ತಿಲ ಎಂಬಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ ಪುಳಿಂಚ ರಾಮಯ್ಯ ಶೆಟ್ಟರು 2002ನೇ ಇಸವಿ ಜುಲೈ ತಿಂಗಳಲ್ಲಿ ನಮ್ಮನ್ನಗಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಪುಳಿಂಚ ಶ್ರೀಧರ ಶೆಟ್ಟರು ಮಂಗಳೂರಿನ ಯುವ, ಖ್ಯಾತ ನ್ಯಾಯವಾದಿಗಳು. ಶ್ರೀಯುತರು ಪುಳಿಂಚ ರಾಮಯ್ಯ ಶೆಟ್ಟರ ಪುತ್ರರು. ತಮ್ಮ ತೀರ್ಥರೂಪರ ಹೆಸರಿನಲ್ಲಿ ‘ಪುಳಿಂಚ ಸೇವಾ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕರ್ಮಪುತ್ರರೆನಿಸಿಕೊಂಡಿದ್ದಾರೆ. 2016ರಲ್ಲಿ ಪುಳಿಂಚ- ಸ್ಮೃತಿ, ಕೃತಿ’ ಯನ್ನು ಈ ಪ್ರತಿಷ್ಠಾನದಡಿ ಹೊರತಂದಿದ್ದರು. 

ಪುಳಿಂಚ- ಸ್ಮೃತಿ, ಕೃತಿ’ ಸಂಸ್ಮರಣಾ ಗ್ರಂಥವು ಪ್ರಕಟವಾಗುವ ಮೊದಲೇ ಮೇಳದಲ್ಲಿ ಪುಳಿಂಚರ ಒಡನಾಡಿಯಾಗಿದ್ದ ಅರುವ ಕೊರಗಪ್ಪ ಶೆಟ್ಟರನ್ನು ಗೌರವಿಸಿ ಸನ್ಮಾನಿಸಿದ್ದರು. ಅಲ್ಲದೆ ಪ್ರತಿ ವರ್ಷವೂ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನೂ, ಸಾಧಕರನ್ನು ಗುರುತಿಸಿ ಗೌರವಿಸುವುದು, ಯಕ್ಷಗಾನ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಪ್ರತಿಷ್ಠಾನದಡಿ ನಡೆಸುತ್ತಿದ್ದಾರೆ. ಪುಳಿಂಚ ಪ್ರಶಸ್ತಿಯನ್ನು ಮೊದಲು ಸ್ವೀಕರಿಸಿದವರು  ಶ್ರೀ ಅರುವ ಕೊರಗಪ್ಪ ಶೆಟ್ಟರು.(2013) ಬಳಿಕ ಮಿಜಾರು ಅಣ್ಣಪ್ಪ ಹಾಸ್ಯಗಾರ, ಕೊಳ್ಯೂರು ರಾಮಚಂದ್ರ ರಾವ್, ಕುಂಬಳೆ ಸುಂದರ ರಾವ್, ಅನಂತರಾಮ ಬಂಗಾಡಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಕೆ.ಎಚ್. ದಾಸಪ್ಪ ರೈ ಪುಳಿಂಚ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಪುಳಿಂಚ ಸೇವಾರತ್ನ ಪುರಸ್ಕಾರವನ್ನು ಪಡೆದವರು ಶ್ರೀ ಕೇಪು ಗೌಡ, ನಿವೃತ್ತ ಪೊಲೀಸ್ ಅಧಿಕಾರಿ, ಮತ್ತು ದೈವನರ್ತಕರಾದ ಪದ್ಮ ಪಂಬದ ಅವರುಗಳು. ಪುಳಿಂಚ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಪುಳಿಂಚ ಶ್ರೀಧರ ಶೆಟ್ಟರಿಂದ ಯಕ್ಷಗಾನ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments